ಕೇಡುಗಾಲ – ಸಣ್ಣ ಕತೆ

– ಬರತ್ ಕುಮಾರ್.

{ಬೇರೆ ಬೇರೆಯಾದ ಎರಡು ನಡೆಗಳನ್ನು ಹೊಂದಿರುವ ಎರಡು ಪಾತ್ರಗಳ ತಿಕ್ಕಾಟವೇ ಈ ಕತೆಯ ಹುರುಳು. ಒಂದು ಪಾತ್ರವು ಹೊಸಗಾಲದ ಆಳ್ವಿಕೆಯನ್ನು (nation state) ಪ್ರತಿನಿದಿಸಿದರೆ ಮತ್ತೊಂದು ಕನ್ನಡ ಜನಪದ(region)ವನ್ನು ಪ್ರತಿನಿದಿಸುತ್ತದೆ.  ಇವರೆಡರ ನಡುವೆ ಒಂದು ಕಾಲಗಟ್ಟದಲ್ಲಿ ಏರ್ಪಡುವ ಸಂದರ‍್ಬಗಳನ್ನು ಕತೆಯ ರೂಪದಲ್ಲಿ ಇಲ್ಲಿ ಬಿಡಿಸಲಾಗಿದೆ.}

4162422293_7d6a0ec4c2_z

ಬೇಗೂರಿನಿಂದ ಬಂದ ಬಸ್ಸು ದೊಡ್ಡಕಾಟಿಯ ಗೇಟಿನಲ್ಲೇ ನಿಂತಾಗ ಅದರಿಂದ ನಿಂಗಪ್ಪನೂ ಇಳಿದ. ತುಂಬ ದಿನಗಳಾದ ಮೇಲೆ ಬಂದುದರಿಂದಲೋ ಏನೋ ಕಣ್ಣುಗಳನ್ನು ದೊಡ್ಡದಾಗಿ ಬಿಡುತ್ತಾ ಸುತ್ತಲೂ ನೋಡಿದ. ಗುರುತಿರುವವರು ಯಾರೂ ಕಂಡಂತೆ ಆಗಲಿಲ್ಲ. ಯಾರಾದರು ಇದ್ದರೆ ಗಂಟುಮೂಟೆಗಳನ್ನು ಹೊರೆಸಿಕೊಂಡು ಹೋಗಬಹುದೆಂಬ ನಿಂಗಪ್ಪನ ಹೊಂಚು ಕಯ್ಗೂಡಲಿಲ್ಲ. ನಿಂಗಪ್ಪ ಮೆಲ್ಲ ಮೆಲ್ಲನೆ ತನ್ನ ಊರಾದ ಒಡೆಯರಳ್ಳಿಗೆ ಹೆಜ್ಜೆ ಹಾಕಿದ. ಒಡೆಯರಳ್ಳಿಗೆ ಯಾವ ಬಸ್ಸು ಹೋಗುತ್ತಿರಲಿಲ್ಲ, ದೊಡ್ಡಕಾಟಿಯಲ್ಲಿ ಇಳಿದು ನಡೆದೇ ಹೋಗಬೇಕು ಬೇರೆ ದಾರಿಯಿರಲಿಲ್ಲ.

ನಿಂಗಪ್ಪನಿಗೆ ದಾರಿಗುಂಟ ನಡೆಯುವಾಗ ಹಿಂದಿನದೆಲ್ಲ ನೆನಪಾಯಿತು. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದು, ದೊಡ್ದಪ್ಪನಾದ ಕೂಸಪ್ಪನೇ ಇವನನ್ನು ಸಾಕಿದ್ದು, ನೆಲಗಡಲೆ ಮತ್ತು ಹತ್ತಿ ಹೊಲದಲ್ಲಿ ಆನೆ ಕಾದಿದ್ದು, ಆಮೇಲೆ ಮಯ್ಸೂರಿನಲ್ಲಿ ಪೊಲೀಸ್ ಕೆಲಸಕ್ಕೆ ಸೇರಿದ್ದು. ಹೀಗೆ ಹತ್ತು ಹಲವು ಚಿತ್ತಾರಗಳು ಕಣ್ಣ ಮುಂದೆಲ್ಲ ಬಂದು ಹಾದು ಹೋದವು. ಹೀಗಿರುವಾಗ ಎದುರಾಗಿ ದನಗಳನ್ನು ಅಟ್ಟಿಕೊಂಡು ಬಂದ ಮಾದಪ್ಪನನ್ನು ಅವನು ಗಮನಿಸಲೇ ಇಲ್ಲ.

ಮಾದಪ್ಪ ನಿಂಗಪ್ಪನ ಚಿಕ್ಕಂದಿನ ಗೆಳೆಯ.  ಮಾದಪ್ಪನೇ “ಯಾನುಡ ನಿಂಗ, ಈಗ್ ಊರ್ ನೆಪ್ಪಾಯ್ತ?” ಎಂದು ಮೇಲೆ ಬಿದ್ದು ಮಾತಾಡಿಸಿದ. ಆಗ ನಿಂಗಪ್ಪ “ಇಲ್ಲಕಡ .ಇನ್ ಮ್ಯಾಕ್ ಊರಲ್ಲೇ ಇರಕ್ ಬಂದಿವ್ನಿ…ಆಮ್ಯಾಕ್ ಸಿಗ್ತುನಿ” ಎಂದು ಹೇಳುತ್ತಾ ಬಿರ್ ಬಿರ್‍ರನೆ ಹೆಜ್ಜೆ ಹಾಕಿದ . ಪೊಲೀಸ್ ಕೆಲಸದಲ್ಲಿ ಏನೊ ಎಡವಟ್ಟು ಮಾಡಿಕೊಂಡು ಕೆಲಸದಿಂದ ಅವನನ್ನು ತೆಗೆದುಹಾಕಿದ್ದರ ಬಗ್ಗೆ ನಿಂಗಪ್ಪ ಬಾಯಿ ಬಿಡಲಿಲ್ಲ.

ನಿಂಗಪ್ಪನು ಊರಿಗೆ ಬಂದವನೇ ತನ್ನ ಮನೆಗೆ ಹೋಗುವ ಮೊದಲೇ ಕೂಸಪ್ಪನ ಮೂಲೆಹಟ್ಟಿಗೆ ಬಂದ. ಬಾಗಿಲಲ್ಲೇ ನಿಂತಿದ್ದ ಕೂಸಪ್ಪನ ಮಗನನ್ನು ಕರೆದು ’ಎಲ್ಲುಡ, ನಿಮ್ಮಂಯ್ಯ. ವೊಲ್ ತಪು ಇದ್ದನ? ವಸಿ ಮಾತಾಡ್ಬೇಕಿತ್ತು ಕರ‍್ಕ ಬಾ ವೋಗು’ ಎಂದು ಹೇಳಿ ಕಳಿಸಿದ. ಕೂಸಪ್ಪನ ಗಂಡು ’ವಂಯ್….ಜು..ಜು’ ಅಂತ ಸದ್ದು ಮಾಡುತ್ತ ತನ್ನ ತಂದೆಯನ್ನು ಕರೆತರಲು ಓಡಿತು. ಅಶ್ಟರಲ್ಲಿ ನಿಂಗಪ್ಪ ಕೂಸಪ್ಪನ ಮನೆ ಹೊಕ್ಕಿ ಒಂದು ಕಡೆಯಿಂದ ಎಲ್ಲವನ್ನು ನೋಡುತ್ತಾ ಕಾಲ ಕಳೆದ.

ಕೊಂಚ ಹೊತ್ತಿನಲ್ಲೇ ಬೊಕ್ಕತಲೆಯ ಮತ್ತು ಹೆಡತಲೆಯಲ್ಲಿ ಕೆಲವೇ ಕೆಲವು ನರೆಕೂದಲಿರುವ ಕೂಸಪ್ಪ ’ಅಬ್ಬಬ್ಬ ಯಾನಪ್ಪ ಈ ಬ್ಯಾಸ್ಗ ..’ ಎನ್ನುತ್ತ ಹಣೆಯ ಬೆವರನ್ನು ಒರೆಸುತ್ತಾ ಮನೆಯ ಜಗಲಿಗೆ ಬಂದು ಕೂತುಕೊಂಡ. ಅಶ್ಟೊತ್ತಿಗೆ ನಿಂಗಪ್ಪನೂ ಮನೆಯ ಜಗಲಿಗೆ ಬಂದ. ’ಯಾನ ದೊಡ್ಡಂಯ್ಯ. ಈ ವಯಸ್ನಾಗ ವೊಲ್ದ್ ಗ್ಯಾಮ ನಿಂಗಾದುದಾ?. ನಾ ಬಂದಿವ್ನಲ್ಲ ಈಗ.. ನಾನ್ ನೋಡ್ಕತೀನ್ ಬುಟ್ಬುಡ್’ ಅಂದ. ಆದೆ ಅದಕ್ಕೆ ಕೂಸಪ್ಪ ಒಪ್ಪುವ ಹಾಗಿರಲಿಲ್ಲ. ತನ್ನ ಮೂರು ಹೆಣ್ಣು ಮಕ್ಕಳ ಮದುವೆ ಮಾಡುವ ಹೊಣೆಗಾರಿಕೆ ಅವನ ಮೇಲಿತ್ತು. ನಿಂಗಪ್ಪ ಮಯ್ಸೂರಿನಲ್ಲಿ ಪೊಲೀಸ್ ಕೆಲಸಕ್ಕೆ ಸೇರಿದ ಮೇಲೆ ಕೂಸಪ್ಪನ ಕಡೆಗೆ ತಿರುಗಿಯೂ ನೋಡಿರಲಿಲ್ಲ.

ಆದರೆ ಈಗ ಒಮ್ಮಿಂದೊಮ್ಮೆಲೆ ಅವನು ಬಂದು ಎಲ್ಲ ಹೊಣೆಗಾರಿಕೆಯನ್ನು ಕೇಳುತ್ತಿರುವುದನ್ನು ನೋಡಿ ಕೂಸಪ್ಪನಿಗೆ ಕೊಂಚ ಅನುಮಾನ ಶುರುವಾಯಿತು. ಹಿಂದೊಮ್ಮೆ ಕೂಸಪ್ಪ ಮಯ್ಸೂರಿನ ತಂಕ ಹೋಗಿ ನಿಂಗಪ್ಪನ ಹತ್ತಿರ ಹೊಲದ ಕರ್‍ಚಿಗೆ ದುಡ್ಡು ಕೇಳಿ ಏನೂ ಸಿಗದೆ ಬರಿಗಯ್ಯಲ್ಲಿ ಹಿಂದಿರುಗಿದ್ದ. ಕೂಸಪ್ಪ ಒಳ್ಳೆ ದುಡಿಮೆಗಾರ. ನೆಲಗಡಲೆ ಬೆಳೆಯುವುದು, ಆಡು, ಕುರಿಗಳನ್ನು ಸಾಕುವುದು- ಇವುಗಳಲ್ಲಿ ಎತ್ತಿದಕಯ್, ಆದರೆ ಅವನು ಮಾತಿನಲ್ಲಿ ತೀರ ನುಣುಪು. ಒಬ್ಬರಿಗೆ ಒಂದು ಕೆಟ್ಟ ಮಾತಾಡಿದವನಲ್ಲ. ಅಲ್ಲದೆ ಅವನ ಮೊಗದಲ್ಲಿ ಅರಿಯದಿಕೆ ಎದ್ದು ಕಾಣುತ್ತಿತ್ತು.

’ನೀ. ಯಾನ್ ಮಾಡಿಯಪ್ಪ. ಮಯ್ಸೂರ್‍ನಲ್ಲಿರೋನು ?’ ಎಂದು ಕೂಸಪ್ಪ ತನ್ನ ಎಂದಿನ ಮೆಲ್ಲನೆ ಶಯ್ಲಿಯಲ್ಲಿ ಕೇಳಿದ.

’ ಇಲ್ಲ ಕ ದೊಡ್ಡಂಯ್ಯೊ. ಪೊಲೀಸ್ ಕೆಲ್ಸ ಬುಟ್ಬುಟ್ಟಿ. ಊರ್‍ನಾಗ ಇರಕ್ ಬಂದಿವ್ನಿ’ ಎಂದ. ನಿಂಗಪ್ಪ ತನ್ನ ಹೆಂಡತಿ ಮಕ್ಕಳನ್ನು ಮಯ್ಸೂರಿನಲ್ಲಿಯೇ ಬಿಟ್ಟು ತಾನು ಮಾತ್ರ ಊರಿಗೆ ಬಂದಿದ್ದ. ಊರಿನಲ್ಲಿ ಎಶ್ಟುದಿನ ಇರುತ್ತಾನೊ ಅಶ್ಟು ದಿನದ ವರೆಗೆ ಚೆನ್ನಾಗಿ ದುಡ್ಡು-ಕಾಸು ಇಲ್ಲವೆ ಕಾಳು-ಕಡ್ಡಿ ಮಾಡಿಕೊಳ್ಳಬೇಕೆಂಬ ಹೊಂಚು ನಿಂಗಪ್ಪನದು. ನಿಂಗಪ್ಪ ಎದೆಗಾರ, ಹಿಂದೆಲ್ಲ ಇರುಳೊತ್ತಿನಲ್ಲಿಯೇ ಹೊಲಕ್ಕೆ ಹೋಗಿ ಬೆಳೆಗಳನ್ನು ಆನೆಗಳಿಂದ ಕಾಪಾಡಲು ಕಾವಲು ಕಾಯುತ್ತಿದ್ದ. ಹಾಗಾಗಿ ನಿಂಗಪ್ಪ ಮತ್ತು ಆನೆಗಳ ಬಗ್ಗೆ ಹಲವು ಕತೆಗಳು ಊರಲ್ಲೆಲ್ಲ ಹುಟಿಕೊಂಡಿದ್ದವು. ’ನಮ್ ನಿಂಗಪ್ಪ ಆನ ನೋಡುದ್ನಂತ ಕುಡ’. ’ನಮ್ ನಿಂಗಪ್ಪ ಆನವ ಓಡುಸ್ಬುಟ್ನಂತ ಕುಡೊ’ ಅಂತ ಊರಲ್ಲೆಲ್ಲ ಮಾತಾಗಿತ್ತು.

ಕೂಸಪ್ಪನಿಗೆ ಒಳಗೊಳಗೆ ಅಯ್ಬಿದ್ದರೂ ನಿಂಗಪ್ಪನಿಗೆ ಇಲ್ಲ ಎನ್ನುವಂತಿರಲಿಲ್ಲ. ನಿಂಗಪ್ಪನಿಗೆ ಹಳ್ಳಿಯಲ್ಲಿ ಸರಿಯಾದ ಮನೆಯಿರಲಿಲ್ಲ. ಅವನು ತನ್ನ ಆಸ್ತಿಯನ್ನೆಲ್ಲ ಮಾರಿ ಮಯ್ಸೂರು ಸೇರಿಕೊಂಡಿದ್ದ. ಹಾಗಾಗಿ ಹಳ್ಳಿಯಲ್ಲಿ ನಿಂಗಪ್ಪನಿಗೆ ಕೂಸಪ್ಪನ ಆಸರೆ ಬೇಕಾಗಿತ್ತು. ಮೆಲ್ಲ ಮೆಲ್ಲಗೆ ಕೂಸಪ್ಪನ ಮನೆಯ ಮತ್ತು ಹೊಲದ ಮೇಲಿದ್ದ ಹಿಡಿತವನ್ನು ತನ್ನ ಕಯ್ಗೂಡಿಸಿಕೊಂಡ. ನಿಂಗಪ್ಪ ಇಲ್ಲದೆ ಮನೆಯಲ್ಲಿ ಹುಲುಕಡ್ಡಿಯೂ ಅಲ್ಲಾಡುವಂತಿಲ್ಲ ಅನ್ನುವಂತಾಯಿತು. ಏನೇ ಇದ್ದರೂ ಮನೆಯವರೆಲ್ಲ ’ನಮ್ ನಿಂಗಪ್ಪನ್ ಕ್ಯೋಳ್ಬೇಕು’, ನಮ್ ನಿಂಗಪ್ಪನ್ ಕ್ಯೋಳ್ಬೇಕು’ ಅಂತ ಹೇಳುವಶ್ಟರ ಮಟ್ಟಿಗೆ ನಿಂಗಪ್ಪ ತನ್ನ ಚಾಪನ್ನು ಒತ್ತಿದ್ದ.

ಹೀಗಿರುವಾಗ ಕೂಸಪ್ಪನ ಮೊದಲನೆಯ ಮಗಳ ಮದುವೆ ಗೊತ್ತಾಯಿತು. ನಿಂಗಪ್ಪ ಇಂತಹ ಒಂದು ತೆರಹಿಗೋಸ್ಕರ ಕಾಯುತ್ತಿದ್ದ. ಇದುವರೆಗೂ ಕಾಳು-ಕಡ್ಡಿಗಳನ್ನು ಮಯ್ಸೂರಿಗೆ ಸಾಗಿಸುತ್ತಿದ್ದ ನಿಂಗಪ್ಪ ಮದುವೆಯ ನೆಪದಲ್ಲಿ ಈಗ ದುಡ್ಡು-ಕಾಸು ಚೆನ್ನಾಗಿ ಬಾಚಬಹುದೆಂದು ಹೊಂಚು ಹಾಕಿದ. ಆದರೆ ಕೂಸಪ್ಪ ಎಲ್ಲವನ್ನು ಚೆನ್ನಾಗಿ ಲೆಕ್ಕ ಮಾಡುತ್ತಿದ್ದುದರಿಂದ ಮತ್ತು ಅವನ ನೆನಪಿನಳವು ಚೆನ್ನಾಗಿದ್ದುದರಿಂದ ಅದು ಸಾದ್ಯವಾಗಲಿಲ್ಲ. ಇಶ್ಟರ ನಡುವೆಯೂ ನಿಂಗಪ್ಪ ಮೆಲ್ಲಗೆ ಕಾಳು-ಕಡ್ಡಿ, ದುಡ್ಡು-ಕಾಸು ಎಶ್ಟು ಆಗುತ್ತೊ ಅಶ್ಟನ್ನು ಮಯ್ಸೂರಿಗೆ ಸಾಗಿಸುತ್ತಿದ್ದ. ಎಲ್ಲದರ ಮೇಲೂ ಕೂಸಪ್ಪನಿಗೆ ಕಣ್ಣಿಡುವುದು ಸಾದ್ಯವಾಗುತ್ತಿರಲಿಲ್ಲ.

ಹೀಗಿರುವಾಗ ಒಂದು ದಿನ ಅದೇನು ಕೇಡುಗಾಲ ಕಾದಿತ್ತೊ ನಿಂಗಪ್ಪನಿಗೆ, ಎತ್ತಿನಗಾಡಿಯಲ್ಲಿ ಹೊಲದಿಂದ ಮನೆಗೆ ಬರುತ್ತಿರುವಾಗ ಇದ್ದಕ್ಕಿದ್ದಂತೆ ಎತ್ತುಗಳು ಬೆದರಿ ದಾರಿಯಲ್ಲಿ ಹೋಗುವ ಬದಲು ಹೊಲಕ್ಕೆ ತಿರುಗಿದವು. ಕಕ್ಕಾಬಿಕ್ಕಿಯಾದ ನಿಂಗಪ್ಪ ಗಾಡಿಯಿಂದ ಕೆಳಗೆ ಬಿದ್ದನು. ಅವನ ಕಾಲಿನ ಮೇಲೆ ಎತ್ತಿನ ಗಾಡಿಯ ಗಾಲಿಗಳು ಹರಿದವು.

“ಯಪ್ಪೊ, ಯಾರಾರ ಬರ್‍ರಪ್ಪೊ…..ನನ್ ಕಾಲು, ನನ್ ಕಾಲು ವೊಯ್ತು ಕಪ್ಪೊ.” ಎಂದು ನಿಂಗಪ್ಪ ನೆರವಿಗಾಗಿ ಕೂಗಿಕೊಂಡ. ಸುತ್ತಮ್ಮುತ್ತ ಹೊಲದಲ್ಲಿ ಕೆಲಸ ಮಾಡುವ ಆಳುಗಳು ಬಂದು ಅವನನ್ನು ಕೂಡಲೆ ದೊಡ್ದಕಾಟಿಯ ಆಳ್ವಿಕೆಯ ಮದ್ದುಮನೆಗೆ ಕರೆದೊಯ್ದರು. ಅಲ್ಲಿಯ ಮಾಂಜುಗರು ಅವನ ಕಾಲನ್ನು ನೋಡಿ

“ಮೂಳೆ ಮುರಿದಿದೆ. ಮಯ್ಸೂರಿಗೆ ಕರೆದುಕೊಂಡು ಹೋಗಿ” ಎಂದು ಹೇಳಿದರು.

* * *

ನಿಂಗಪ್ಪ ಮಯ್ಸೂರಿನ ದೊಡ್ಡಾಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದ, ಕಾಲನ್ನು ಎತ್ತಿ ಕಟ್ಟಲಾಗಿತ್ತು. ಕೂಸಪ್ಪ ನಿಂಗಪ್ಪನ ಹತ್ತಿರ ಬಂದು  “ಯಾಕಡ ನಿಂಗ್ ಇಂಗಾಯ್ತು — ಅಯ್ಯೊ ಸಿವನೆ!” ಎಂದು ಮರುಗಿದ.  ಅದನ್ನು ನೋಡಿದ ನಿಂಗಪ್ಪನ ಕಣ್ಣಂಚಿನಲ್ಲಿ ನೀರು ಜಿನುಗಿದವು.

(ಚಿತ್ರ: flickr.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: