
ಬೆಂಕಿಗೂ ಬಗ್ಗದ ಹೊಸ ಗಟ್ಟಿನೆಪ್ಪು
ಹಾಡು, ಓಡುತಿಟ್ಟಗಳು (videos) ಇಲ್ಲವೇ ನೆರಳುತಿಟ್ಟಗಳನ್ನು (photos) ನಮ್ಮ ಎಣಿಕದ ಗಟ್ಟಿನೆಪ್ಪಿನಲ್ಲಿ (hard-drive) ಉಳಿಸಿಕೊಂಡಿರುತ್ತೇವೆ. ಆದರೆ ಗಟ್ಟಿನೆಪ್ಪುಗಳು ಒಂಚೂರು ತೊಂದರೆಗೆ ಒಳಗಾದರೂ ಸಾಕು, ಕೂಡಿಟ್ಟುಕೊಂಡಿದ್ದ ಎಲ್ಲ ತಿಳಿಹಗಳೂ ಹಾಳಗುತ್ತವೆ. ಆದರೆ ಈ ಹೊಸ ಗಟ್ಟಿನೆಪ್ಪು ಹಾಗಲ್ಲ, ಏನೇ ಕೇಡು ಆಗಲಿ ಇದು ಗಟ್ಟಿ. Iosafe’s N2 ಎಂದು ಕರೆಯಲಾಗುವ ಈ ಗಟ್ಟಿನೆಪ್ಪಿನ ಬಗ್ಗೆ ಈಗ ತಿಳಿದುಕೊಳ್ಳೋಣ.
ಕೂಡಿಡುವ ಬಗೆ: ಈ ಗಟ್ಟಿನೆಪ್ಪಿನಲ್ಲಿ ಎರಡು ನೆಪ್ಪುಗಳಿದ್ದು (drives), ಒಂದು ಇನ್ನೊಂದರ ಕನ್ನಡಿಯಾಗಿರುತ್ತದೆ. ಅಂದರೆ ಒಂದು ನೆಪ್ಪಿನಲ್ಲಿ ಕೊರತೆ ಕಂಡು ಬಂದರೆ ಬಳಕೆದಾರರಿಗೆ ಎಟಕುವಂತೆ ಇನ್ನೊಂದು ನೆಪ್ಪಿನಲ್ಲಿ ಎಲ್ಲಾ ತಿಳಿಹಗಳಿರುತ್ತವೆ.
ಬೀಳುವಿಕೆ ಮತ್ತು ಕಳ್ಳತನ: ಗಟ್ಟಿನೆಪ್ಪಿನ ಸುತ್ತಲ್ಲೂ 0.05 ಇಂಚ್ ಉಕ್ಕಿನ ಚಿಪ್ಪು ಮಾಡಲಾಗಿದೆ. ಕೆಳಗೆ ಬಿದ್ದಾಗ ಹಾನಿಯಾಗದಂತೆ ಗಟ್ಟಿನೆಪ್ಪನ್ನು ಈ ಚಿಪ್ಪು ಕಾಪಾಡುತ್ತದೆ. ಬಾಗಿಲಿಗೆ ಬೀಗ ಹಾಕಬಹುದಾದ ಏರ‍್ಪಾಟನ್ನೂ ಇದು ಹೊಂದಿದೆ.
ಕಾವು: ಈ ಗಟ್ಟಿನೆಪ್ಪಿನ ಸುತ್ತಲ್ಲೂ ತಡೆ ಹೊದಿಕೆ ಇರುವುದರಿಂದ 843 ಸೆಲಿಸಿಯಸ್ ಕಾವಳತೆಯ (temperature) ತನಕ ಇದಕ್ಕೆ ಏನೂ ತೊಂದರೆಯಾಗುವುದಿಲ್ಲ. ಇದರ ಹೊದಿಕೆಯಲ್ಲಿ ನೀರಿನ ಸಣ್ಣ ಹನಿಗಳನ್ನು ಕೂಡಿಡಲಾಗಿದ್ದು, ಕಾವಳತೆಯು ಎಪ್ಪತ್ತು ಸೆಲಿಸಿಯಸಗಿಂತ ಹೆಚ್ಚಾದರೆ, ಕೂಡಲೇ ನೀರಿನ ಹನಿಗಳು ಇಂಗಿ ಕಾವು ಇಳಿಯುವಂತೆ ಮಾಡುತ್ತವೆ.
ಬೆಂಕಿ: ಇದರ ಗಾಳಿಯಾಟದ ಏರ‍್ಪಾಟು (ventilation system) ಗಾಳಿಯನ್ನು ಸುತ್ತಾಡುವುದಕ್ಕೆ ಅನುವು ಮಾಡಿಕೊಟ್ಟರೂ, ಬೆಂಕಿ ತಾಗಿದಾಗ ಏಳುವ ಹೊಗೆ ಒಳಗೆ ಹೋಗದಂತೆ ತಡೆಯುತ್ತದೆ. ಇದಕ್ಕಾಗಿ ಗಾಳಿ ಒಳಗೆ ಹೋಗುವ ತೂತಿನ ಕೋನವನ್ನು ವಿಶೇಶ ರೀತಿಯಲ್ಲಿ ಮಾಡಲಾಗಿದೆ.
ನೀರು: ಈ ಗಟ್ಟಿನೆಪ್ಪುಗಳನ್ನು 0.07 ಇಂಚ್ ನೀರುತಡೆ ಅಲುಮೀನಿಯಂ ಇಂದ ಸುತ್ತಲಾಗುತ್ತದೆ. ಈ ಗಟ್ಟಿನೆಪ್ಪನ್ನು ಹತ್ತು ಅಡಿಯ ಉಪ್ಪಿನ ನೀರಿನಲ್ಲಿ ಹತ್ತು ನಾಳುಗಳ (days) ಹೊತ್ತು ಇಟ್ಟರೂ ಎಲ್ಲಾ ತಿಳಿಹಗಳನ್ನು ಉಳಿಸಿಕೊಳ್ಳಬಲ್ಲದು.
ಗಟ್ಟಿನೆಪ್ಪು ಹಾಳಾಗಿ ಅದರಲ್ಲಿದ್ದ ಸಿಹಿ ನೆನಪುಗಳ ತಿಳಿಹ, ತಿಟ್ಟಗಳು ಕಾಣಿಯಾಗುವಂತ ಪರಿಸ್ತಿತಿಯನ್ನು Iosafe N2 ದೂರಮಾಡಿದೆ.
ಒಸಗೆಯ ಸೆಲೆ :- http://www.popsci.com