ಹಿಂದಿನವರು ತಪ್ಪು ಮಾಡಿರಬಹುದೆಂದು ಒಪ್ಪಿಕೊಳ್ಳಲು ಹಿಂಜರಿಕೆ ಬೇಡ

ಕಿರಣ್ ಬಾಟ್ನಿ.
Shankaraಈ ಹಿಂದೆ ಆದಿಶಂಕರಾಚಾರ‍್ಯರ ’ನಿರ‍್ವಾಣ ಶಟ್ಕಂ’ ಎಂಬ ಪದ್ಯವನ್ನು ’ಶಿವ ನಾನು, ಶಿವ ನಾನು!’ ಎಂದು ಎಲ್ಲರಕನ್ನಡಕ್ಕೆ ಅನುವಾದಿಸಿ ಬರೆದಿದ್ದೆ. ಅದರ ಟಿಪ್ಪಣಿಯಲ್ಲಿ ’ಸಂಸ್ಕ್ರುತದಲ್ಲಿ ಈಗಾಗಲೇ ಇರುವ ಮತ್ತು ಕನ್ನಡದ ಕೂಡಣವನ್ನು ಒಡೆಯದೆ ಅದನ್ನು ಇಡಿಯಾಗಿ ಆದ್ಯಾತ್ಮಿಕ ಎತ್ತರಕ್ಕೊಯ್ಯುವಂತಹ ಅರಿವನ್ನು ನನ್ನ ಕಯ್ಲಾದಶ್ಟು ಎಲ್ಲರಕನ್ನಡಕ್ಕೆ ತರಬೇಕಾದುದು ನನ್ನ ಕರ‍್ತವ್ಯವೆಂದೇ ತಿಳಿದುಕೊಂಡಿದ್ದೇನೆ’ ಎಂದು ಬರೆದಿದ್ದನ್ನು ನೀವು ಓದಿರಬಹುದು. ಆದರೆ ಆ ಅರಿವನ್ನು ಸಂಸ್ಕ್ರುತದಲ್ಲಿ ಯಾರು ಬರೆದಿಟ್ಟಿರುವರೋ ಅವರು ಹೇಳಿದ್ದನ್ನೆಲ್ಲ ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳಬೇಕೆಂದು ನಾನು ಹೇಳಿರಲಿಲ್ಲ. ಯಾರಿಂದ ಅದ್ಯಾತ್ಮದ ತುತ್ತತುತಿಗೆ ಕರೆದೊಯ್ಯಬಲ್ಲ ಮಾತುಗಳು ಬರಬಲ್ಲವೋ ಅವರಿಂದ ಬೇರೆ ವಿಶಯಗಳಲ್ಲಿ ತಪ್ಪಾಗಬಲ್ಲುದು. ಈ ಮಾತು ಆದಿಶಂಕರರಿಗೂ ಒಪ್ಪುತ್ತದೆ, ಎಲ್ಲರಿಗೂ ಒಪ್ಪುತ್ತದೆ.

ಮೊನ್ನೆ ಪ್ರೊ|| ರಾಜಾರಾಮ ಹೆಗಡೆಯವರು ’ನಿಲುಮೆ’ಯಲ್ಲಿ ಶಂಕರಾಚಾರ‍್ಯರು ತಮ್ಮ ಬ್ರಹ್ಮಸೂತ್ರಬಾಶ್ಯದಲ್ಲಿ ಶೂದ್ರರ ಬಗ್ಗೆ ಏನು ಹೇಳಿದ್ದಾರೆ ಎಂದು ತಿಳಿಸುವ ಒಂದು ಪ್ರಯತ್ನವನ್ನು ಮಾಡಿದ್ದಾರೆ. ಅದರಲ್ಲಿ ವಸಾಹತುಶಾಹಿಯು ನಮ್ಮ ಚಿಂತನೆಯನ್ನು ಮಾರ‍್ಪಡಿಸಿದೆ ಎಂದು ಅವರು ವಾದಿಸಿರುವುದರಲ್ಲಿ ದಿಟವಿದೆ. ಆದರೆ ಆ ಮಾರ‍್ಪಾಟು ಎಂತದ್ದು, ಎಲ್ಲಿಯವರೆಗೆ ಎಂದು ಅವರಾಗಲಿ ಪ್ರೊ|| ಎಸ್. ಎನ್. ಬಾಲಗಂಗಾದರರಾಗಲಿ ಅವರ ಗುಂಪಿನ ಇತರರಾಗಲಿ ಸರಿಯಾಗಿ ಅರಿತುಕೊಳ್ಳಲು ಹೋಗಿಲ್ಲವೆನಿಸುತ್ತದೆ; ಸುಮ್ಮನೆ ನಮ್ಮ ಕೂಡಣದ ಬಗ್ಗೆ ನಾವು ತಿಳಿದಿರುವುದೆಲ್ಲವೂ ತಪ್ಪೆಂದು ಕಯ್ಬೀಸಿ ಹೇಳುತ್ತಿರುವುದು ಅದರ ಗುರುತು. ಹಾಗೆ ಕಯ್ಬೀಸಿ ಹೇಳುವುದು ಹೆಗಡೆಯವರ ಮೊನ್ನೆಯ ಬರಹದಲ್ಲೂ ಕಾಣಿಸಿಕೊಂಡಿದೆ.

ಶೂದ್ರನೆಂದರೆ ಉಪನಯನವಾಗಿಲ್ಲದವನು ಎಂಬ ಒಂದು ಹುರುಳಿದೆಯೆಂದೂ, ಜಾತಿಶೂದ್ರನೆಂಬ ಮತ್ತೊಂದು ಹುರುಳಿದೆಯೆಂದೂ ಹೆಗಡೆಯವರು ತಿಳಿಸುತ್ತ, ಇವೆರಡರಲ್ಲಿ ವಿಶೇಶವಾಗಿ ಜಾತಿಶೂದ್ರನಿಗೇ ವೇದಾದಿಕಾರವಿಲ್ಲವೆಂದು ಶಂಕರರಾಗಲಿ ಮತ್ತೊಬ್ಬರಾಗಲಿ ಎಲ್ಲೂ ಹೇಳಿಲ್ಲವೆನ್ನುತ್ತಾರೆ. ಆದರೆ ಈ ಅನಿಸಿಕೆ ತಪ್ಪು. ಏಕೆ ತಪ್ಪೆಂದು ತಿಳಿದುಕೊಳ್ಳಲು ಹೆಗಡೆಯವರ ಬರಹದ್ದೇ ವಿಶಯವಾಗಿರುವ ’ಅಪಶೂದ್ರಾದಿಕರಣ’ವೆಂಬ ಬ್ರಹ್ಮಸೂತ್ರದ ತುಣುಕೊಂದರ ಬಗ್ಗೆ ಶಂಕರರು ಬರೆದಿರುವ ಬಾಶ್ಯವನ್ನು ಬಿಟ್ಟು ಹೋಗಬೇಕಿಲ್ಲ. ಶಂಕರರು ತಾವೇ ಬಾಯಿಬಿಟ್ಟು ’ಜಾತಿಶೂದ್ರ’ ಎಂಬ ಪದವನ್ನೂ ಬಳಸಿದ್ದಾರೆ, ಮತ್ತು ಅವನಿಗೇ ವೇದಾದಿಕಾರವಿಲ್ಲದಿರುವುದು ಎಂದು ಕೂಡ ಸಾರಿ ಹೇಳಿದ್ದಾರೆ. ಇದನ್ನು ಹೆಗಡೆಯವರು ಕಾಣದೆ ಹೋಗಿರುವುದು ಸೋಜಿಗ.

ಶಂಕರರ ಬಾಶ್ಯದ ತುಣುಕು ಹೀಗಿದೆ (’ಜಾತಿಶೂದ್ರ’ನ ಬಗೆಗಿನ ಮಾತನ್ನು ದಪ್ಪನೆಯ ಬರಿಗೆಯಲ್ಲಿ ಹಾಕಿದ್ದೇನೆ):

शक्यते चायं शूद्रशब्दोsधिकृतविषये योजयितुम्; कथमित्युच्यते — ‘कम्वर एनमेतत्सन्तं सयुग्वानमिव रैक्वमात्थ’ इत्यस्माद्धंसवाक्यादात्मनोsनादरं श्रुतवतो जानश्रुतेः पौत्रायणस्य शुक् उत्पेदे; तामृषी रैक्वः शूद्रशब्देनानेन सूचयां बभूव आत्मनः परोक्षज्ञाताख्यापनायेति गम्यते; जातिशूद्रस्यानधिकारात् | कथं पुनः शूद्रशब्देन शुगुत्पन्ना सूच्यत इति, उच्यते — तदाद्रवणात्; शुचमभिदुद्राव, शुचा वा अभिदुद्रुवे, शुचा वा रैक्वमभिदुद्राव — इति शूद्रः; अवयवार्थसंभवात्, रूढ्यर्थस्य चासंभवात् । दृश्यते चायमर्थोsस्यामाख्यायिकायाम् ।  (1.3.34)

ಇದರ ಹಿನ್ನೆಲೆ ಹೀಗಿದೆ: ರಯ್‍ಕ್ವನೆಂಬಾತನು ಜಾನಶ್ರುತಿ ಪವ್‍ತ್ರಾಯಣನೆಂಬ ಓರ‍್ವನನ್ನು ’ಶೂದ್ರ’ ಎಂಬ ಪದವನ್ನು ಬಳಸಿ ಕರೆದಿರುತ್ತಾನಾದರೂ ಅವನಿಗೆ ವೇದಾದಿಕಾರವಿರುವುದರಿಂದ ಶೂದ್ರರಿಗೆ ವೇದಾದಿಕಾರವುಂಟೆಂಬುದು ಎದುರ‍್ಬದಿಯ ವಾದ. ಆ ವಾದವನ್ನು ತಳ್ಳಿಹಾಕುತ್ತ ಶಂಕರರು ಈ ಮೇಲಿನ ವಾದವನ್ನು ಮುಂದಿಡುತ್ತಾರೆ. ಶಂಕರರ ಮುಂದಿರುವ ಕೇಳ್ವಿ ಈ ಕೆಳಗಿನ ಮೂರು ಸೊಲ್ಲುಗಳಲ್ಲಿರುವ ಬಿಕ್ಕಟ್ಟನ್ನು ಹೇಗೆ ನಿವಾರಿಸಿಕೊಳ್ಳುವುದು ಎಂಬುದು (ಒಂದನ್ನೂ ಇವರು ತಪ್ಪೆನ್ನುವಂತಿಲ್ಲ – ಏಕೆಂದರೆ ಎಲ್ಲವೂ ಶ್ರುತಿಯಲ್ಲಿರುವುದು!) : (ಅ) ಜಾನಶ್ರುತಿಯು ಶೂದ್ರನಾಗಿದ್ದರೆ ಅವನಿಗೆ ವೇದಾದಿಕಾರವಿರಲಾರದು (ಆ) ರಯ್‍ಕ್ವನು ಅವನನ್ನು ’ಶೂದ್ರ’ನೆಂದು ಕರೆದಿದ್ದಾನೆ, ಮತ್ತು (ಇ) ಜಾನಶ್ರುತಿಗೆ ವೇದಾದಿಕಾರವಿದೆ.

ಈ ಬಿಕ್ಕಟ್ಟನ್ನು ಮೂಲ ಬ್ರಹ್ಮಸೂತ್ರದಲ್ಲಿ ಬಾದರಾಯಣರು ಹಾಗೂ ಮೇಲಿನ ಬಾಶ್ಯಬಾಗದಲ್ಲಿ  ಶಂಕರರು ಒಂದು ನುಡಿಮೋಡಿಯಿಂದ ನಿವಾರಿಸಿಕೊಳ್ಳುತ್ತಾರೆ. ಅದೇನೆಂದರೆ ’ಶೂದ್ರ’ನೆಂಬ ಪದಕ್ಕೆ ಹೊಸದೊಂದು ಹುರುಳನ್ನೇ ಅಂಟಿಸುವುದು!

ಅವರ ಚಿಕಿತ್ಸೆ ಹೀಗಿದೆ: ’ಹೀಗಿರುವ ಇವನನ್ನು ಕುರಿತು ಸುಯುಗ್ವಾನನಾದ ರಯ್‍ಕ್ವನೆಂಬಂತೆ ಹೇಗೆ ಮಾತನಾಡಬಲ್ಲೆ?’ ಎಂಬ ಹಂಸವಾಕ್ಯವೊಂದರಿಂದ ಜಾನಶ್ರುತಿಯನ್ನು ತೆಗಳಿದಂತಾಗಿ, ಅದು ಅವನಲ್ಲಿ ಶೋಕವನ್ನುಂಟುಮಾಡಿರುವುದು ಚಾಂದೋಗ್ಯ ಉಪನಿಶತ್ತಿನಲ್ಲಿದೆಯಶ್ಟೆ? ಆ ಶೋಕವನ್ನು ಬೊಟ್ಟುಮಾಡಿ ’ಶೂದ್ರ’ ಎಂಬ ಪದದಿಂದ ಕರೆಯಲಾಗಿದೆ ಎಂಬುದು ಶಂಕರರ ವಾದ. ಶೂದ್ರನಿಗೂ ಶೋಕಕ್ಕೂ ಎಲ್ಲಿಯ ನಂಟು? ಸಂಸ್ಕ್ರುತದ ಮೇಲೆ ಇನ್ನಿಲ್ಲದ ಹಿಡಿತವಿರುವ ಶಂಕರರು ’ಶೂದ್ರ’ ಎಂಬ ಪದವನ್ನು ’शुचं अभिदुद्राव’ ಎಂದು, ’शुचा वा अभिदुद्रुवे’ ಎಂದು, ಇಲ್ಲವೇ ’शुचा वा रैक्वमभिदुद्राव’ ಎಂದು ಬಿಡಿಸಬಹುದೆಂದು ತೋರಿಸಿ, ಆದುದರಿಂದ ’ಶೂದ್ರ’ ಎಂದರೆ ಇಲ್ಲಿ ’ಶೋಕ’ವೆಂಬ ಹುರುಳಿದೆ ಎಂದು ವಾದಿಸುತ್ತಾರೆ. ಕೊನೆಗೆ ’अवयवार्थसंभवात्, रूढ्यर्थस्य चासंभवात्’ ಎಂದರೆ ’ಶೂದ್ರ’ ಪದಕ್ಕೆ ರೂಡಿಯಲ್ಲಿರುವ ಹುರುಳನ್ನು ಇಲ್ಲಿ (ಎಂದರೆ ರಯ್‍ಕ್ವನು ಜಾನಶ್ರುತಿಯನ್ನು ’ಶೂದ್ರ’ನೆಂದು ಕರೆದಿರುವ ಸಂದರ‍್ಬದಲ್ಲಿ) ಕೊಡುವುದಕ್ಕಾಗುವುದಿಲ್ಲ, ಅವಯವಾರ‍್ತವನ್ನು ಮಾತ್ರ ಕೊಡಲಾಗುವುದು ಎಂದು ಕೂಡ ತೀರ‍್ಮಾನಿಸುತ್ತಾರೆ.

ಶಂಕರರ ಪ್ರಕಾರ ಆ ಅವಯವಾರ‍್ತವು ಯಾವುದೆಂದು ತಿಳಿಸಿದ್ದಾಯಿತು: ಶೋಕ. ಉಳಿದಿರುವ ಕೇಳ್ವಿ ’ರೂಡಿಯಲ್ಲಿರುವ ಹುರುಳು’ ಎಂದರೆ ಯಾವುದು ಎಂಬುದು. ಅದನ್ನು ಅವರೇ ಹೇಳುತ್ತಾರೆ: ಹುಟ್ಟಿನಿಂದ ಬಂದಿರುವ ಶೂದ್ರತನವೇ ’ಶೂದ್ರ’ ಪದಕ್ಕೆ ರೂಡಿಯಲ್ಲಿರುವ ಹುರುಳು! ಬಾಶ್ಯದಲ್ಲೇ ಇದೆ: ’जातिशूद्रस्यानधिकारात्’ – ’ಜಾತಿಶೂದ್ರನಿಗೆ, ಎಂದರೆ ಜಾತಿಯಿಂದ ಶೂದ್ರನಾದವನಿಗೆ, ಎಂದರೆ ಹುಟ್ಟಿನಿಂದ ಶೂದ್ರನಾದವನಿಗೆ ವೇದದಲ್ಲಿ ಅದಿಕಾರವು ಇಲ್ಲದೆ ಇರುವುದರಿಂದ’. ಇಲ್ಲದೆ ಇರುವುದರಿಂದ ಏನು? ಇಲ್ಲದೆ ಇರುವುದರಿಂದ ಜಾನಶ್ರುತಿಯನ್ನು ಜಾತಿಶೂದ್ರತನವೆಂಬ ರೂಡಿಯ ಹುರುಳಿನಲ್ಲಿ ’ಶೂದ್ರ’ ಎಂದು ರಯ್‍ಕ್ವನು ಕರೆದಿರಲಾರನು ಎಂಬುದು ಶಂಕರರ ವಾದ. ಇಲ್ಲಿ ರಯ್‍ಕ್ವನು ಜಾನಶ್ರುತಿಯನ್ನು ರೂಡಿಯ ಹುರುಳಿನಲ್ಲಿ ’ಶೂದ್ರ’ನೆಂದು ಕರೆದಿದ್ದಾನೆ ಎಂದು ಶಂಕರರು ಒಪ್ಪಿಕೊಂಡು ಬಿಟ್ಟರೆ ಶ್ರುತಿವಾಕ್ಯಗಳಲ್ಲಿ ತನ್ನೆದುರ‍್ತನ ಬಂದಂತಾಗಿ ವೇದಪರಂಪರೆಗೆ ಕಪ್ಪುಚುಕ್ಕೆ; ಹಾಗಾಗಲು ಬಿಡಬಾರದೆಂದು ಶಂಕರರು ಈ ವಾದವನ್ನು ಮಾಡಿದ್ದಾರೆ ಎಂಬುದು ಸ್ಪಶ್ಟ. ಆ ರೂಡಿಯ ಹುರುಳು ಇನ್ನಾವುದೂ ಅಲ್ಲ, ಜಾತಿಶೂದ್ರತನವೆಂಬುದೂ ಸ್ಪಶ್ಟ.

ಆದ್ದರಿಂದ ಶೂದ್ರರಿಗೆ ವೇದಾದಿಕಾರವಿಲ್ಲವೆಂದು ಸಾರುವ ಕಡೆಯೆಲ್ಲೂ ವಿಶೇಶವಾಗಿ ಜಾತಿಶೂದ್ರರನ್ನು ಕುರಿತು ಯಾರೂ ಮಾತನಾಡಿಲ್ಲವೆಂಬ ಪ್ರೊ|| ರಾಜಾರಾಮ ಹೆಗಡೆಯವರ ವಾದ ನಿಲ್ಲುವುದಿಲ್ಲ. ಹಾಗೆಯೇ, ’ಶೂದ್ರ’ ಎಂಬ ಪದದಿಂದ ಎಲ್ಲ ಕಡೆಯೂ ಉಪನಯನವಾಗಿಲ್ಲದವನು ಎಂಬ ಹುರುಳಿರುತ್ತದೆ ಎಂದು ಅವರು ವಾದಿಸುವುದರಲ್ಲೂ ಅರ‍್ತವಿಲ್ಲ. ಶಂಕರರು ಮತ್ತು ಅವರಂತಹ ಮಿಕ್ಕ ಹಿಂದಿನವರು ಮಾಡಿದ್ದೆಲ್ಲವೂ ಸರಿಯೆಂದು ತೋರಿಸಲು ಹೆಗಡೆಯಂತವರು ಏತಕ್ಕೆ ಹೊರಡುತ್ತಾರೆ ಎಂಬುದೇ ಒಂದು ದೊಡ್ಡ ಕೇಳ್ವಿ. ಅವರೂ ಮನುಶ್ಯರೇ, ಅವರೂ ತಪ್ಪು ಮಾಡಬಲ್ಲರು ಎಂದು ಒಪ್ಪಿಕೊಳ್ಳುವುದಕ್ಕೆ ಅಶ್ಟೊಂದು ಕಶ್ಟವೇ? ಪರಂಪರೆಯನ್ನು ಅಪರಂಜಿ ಚಿನ್ನವೆಂದು ಬಗೆಯುವ ಪ್ರಯತ್ನವಾದರೂ ಏತಕ್ಕೆ? ಬದಲಾಗಿ ಕು.ವೆಂ.ಪುಟ್ಟಪ್ಪನವವರು ಹಾಡಿದಂತೆ ಆ ಪರಂಪರೆಯಲ್ಲಿ ’ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ’ ಎಂದು ಸಮತೋಲನವನ್ನು ಕಾಪಾಡಿಕೊಳ್ಳುವುದೇ ಒಳ್ಳೆಯದು. ಇಲ್ಲದಿದ್ದರೆ ಪಾಪ-ನರಕಗಳು ಪುಣ್ಯ-ನಾಕಗಳೊಳಗೂ ನುಗ್ಗಿ ಎಲ್ಲವನ್ನೂ ಹಾಳುಮಾಡುತ್ತವೆ.

(ಶಂಕರರ ಬ್ರಹ್ಮಸೂತ್ರಬಾಶ್ಯ ಇಲ್ಲಿ ಸಿಗುತ್ತದೆ: http://archive.org/)

ನಿಮಗೆ ಹಿಡಿಸಬಹುದಾದ ಬರಹಗಳು

4 Responses

  1. ಕಿರಣ್ ಅವರ ಮಾತುಗಳು ಸರಿ ಇವೆ.. ಆದರೆ ತಪ್ಪೇ ಆಗಿಲ್ಲ ಎನ್ನುವುದು, ಅದು ಅರ್ಥಮಾಡಿಕೊಳ್ಳುವಲ್ಲಿ ಆಗಿರುವ ತಪ್ಪೆಂದು ಕೆಲವರ ವಾದವಾಗಿದೆ.

  2. ನಿಮ್ಮ ವಿಶೇಷ ಕನ್ನಡ ಬಿಟ್ಟು, ನಮಗೆಲ್ಲಾ ಅರ್ಥವಾಗುವ ಕನ್ನಡದಲ್ಲಿ ಬರೆದಿದ್ದರೆ ಚೆನ್ನಾಗಿರುತ್ತಿತ್ತು..

    • ಹೆರಿಗೆಯ ನೋವಿಲ್ಲದೆ ಕೂಸು ಹುಟ್ಟೀತೇ? ಕೊಂಚ ನೋವು ತಡೆದುಕೊಳ್ಳಿ, ಜಗವನ್ನೇ ಬೆರಗುಗೊಳಿಸುವ ಕೂಸು ಕಯ್ಗೆ ಬರುತ್ತದೆ.

  3. olle baraha. Adre illi shudrarendare yaaru yendu hege tiLiyodu ?
    Adu yelladru barediddara sankararu ?

ಅನಿಸಿಕೆ ಬರೆಯಿರಿ: