ಈಕೆಗೆ ನೋವಿನ ಅರಿವೇ ಇಲ್ಲ!

ವಿವೇಕ್ ಶಂಕರ್

child-with-cast

ನೋವು, ನಮ್ಮ ಬದುಕಿನಲ್ಲಿ ಆಗಾಗ ಕೇಳಿಬರುವ ಪದ. ನಮಗೆ ಏನೇ ಗಟ್ಟಿಯಾಗಿ ತಾಗಿದರು ಇಲ್ಲವೇ ಚೂಪಾದ ವಸ್ತು ಚುಚ್ಚಿದರೂ ನಮಗೆ ಅದರಿಂದಾಗುವ ನೋವು ತಟ್ಟನೆ ತಿಳಿಯುತ್ತದೆ. ಇದು ಸಹಜ ಹಾಗೂ ಎಲ್ಲರಿಗೂ ಗೊತ್ತಿರುವುದು. ಜಗತ್ತಿನಲ್ಲಿ ಮಂದಿ ಮಯ್ ನೋವು, ತಲೆ ನೋವು ಹೀಗೆ ಹಲವು ಬಗೆಯ ನೋವುಗಳಿಂದ ಬಳಲುವುದು ನಮಗೆ ಗೊತ್ತು. ಆದರೆ ಇಲ್ಲೊಬ್ಬ ಹುಡುಗಿಗೆ ನೋವಿನ ಅರಿವೇ ಆಗುವುದಿಲ್ಲ! ಈ ಹುಡುಗಿಯ ಮಯ್ಯಿಗೆ ಚೂಪಾದ ವಸ್ತುವಿನಿಂದ ಚುಚ್ಚಿದರೂ ತನಗೆ ಗೊತ್ತೇ ಆಗುವುದಿಲ್ಲ ಅನ್ನುತ್ತಾಳೆ. ನೋವು ಪಡಬೇಕಾಗ ಪರಿಸ್ತಿತಿಯಲ್ಲೂ ಕಿರುನಗೆ ಬೀರುತ್ತಾಳೆ! ಈ ಬಗೆಯ ಅನುಬವದ ಹಿನ್ನೆಲೆ ಏನಂತ ತಿಳಿದುಕೊಳ್ಳಲು ಹಲವು ಅರಕೆಗಾರರು ಮುಂದಾದರು. ಅರಕೆಯಲ್ಲಿ ದೊರಕಿದ್ದೇನು? ಬನ್ನಿ ತಿಳಿಯೋಣ.

ಇದನ್ನು ತಿಳಿಯಲು ಅರಕೆಗಾರರು ತಳಿಯರಿಮೆಯ (genetics) ನೆರವು ಪಡೆಯಬೇಕಾಗಿತ್ತು. ಯಾಕೆಂದರೆ ಇದಕ್ಕೆ ಕಾರಣವಾದ ಪೀಳಿ (gene) ಬೇರೆಯವರಲ್ಲೂ ಇರುಬಹುದೆಂಬ ಒಂದು ನಂಬಿಕೆಯಿತ್ತು. ಆದರೆ ಅವರಿಗೆ ಬೆರಗು ಕಾದಿತ್ತು, ಹಲವಾರು ಮಂದಿಯಲ್ಲಿ ಹುಡುಕಿದರೂ ಈ ಪೀಳಿ ಸಿಗಲಿಲ್ಲ. ಕೊನೆಗೆ ತಿಳಿದದ್ದು ಈ ಹೊಸ ಪೀಳಿಗೆ ಕಾರಣ ಒಂದೇ ಒಂದು ಪೀಳಿಯ ಮಾರ‍್ಪಾಟು (genetic mutation)

ಈ ಮಾರ‍್ಪಾಟಿಗೆ ಒಳಗಾದ ಪೀಳಿ ಹೆಸರು ಎಸ್.ಸಿ.ಎನ್-11ಎ (SCN11A). ಇದರ ಕೆಲಸವೆಂದರೆ ಒಂದು ಬಗೆಯ ಮುನ್ನು (protein) ಮಾಡುವುದು. ಈ ಪೀಳಿ ಮಾಡುವ ಮುನ್ನು ಮಾನವರ ಸೂಲುಗೂಡುಗಳಿಂದ (cells) ಒಳಗೆ ಹಾಗೂ ಹೊರಗೆ ಹೋಗುವ ನವಿರುಪೊನ್ನಿನ (sodium) ಮಟ್ಟವನ್ನು ಅಂಕೆಯಲ್ಲಿಡುತ್ತದೆ. ನೋವನ್ನು ತಿಳಿಸುವ ನರಗಳಲ್ಲಿ ಈ ನವಿರುಪೊನ್ನಿನ ಕವಲಿರುತ್ತದೆ. ಇದರಿಂದಾಗಿ ನಮ್ಮ ಮಯ್ಯಿಗೆ ಏನೇ ತಟ್ಟಿದರೂ, ತಾಗಿದರೂ, ಚುಚ್ಚಿದರೂ ನೋವಿನ ಅರಿವಾಗುತ್ತದೆ. ಆದರೆ ಈ ಹುಡುಗಿಯ ನರಗಳಲ್ಲಿ ಇದು ಮರೆಯಾಗಿದ್ದರಿಂದ ಆಕೆಯ ಮಯ್ಯಿಗೆ ಏನೇ ಆದರೂ ಅದರಿಂದಾಗುವ ನೋವು ಆಕೆಗೆ ತಿಳಿಯುತ್ತಿರಲಿಲ್ಲ.

ಮುಂದಿನ ಅರಕೆಯಲ್ಲಿ ಕಡಿಮೆಮಟ್ಟದಲ್ಲಿ ನೋವು ಅರಿವಾಗುವ ಅಯ್ವತ್ತೆಂಟು ಮಂದಿ ಗುಂಪಿನಲ್ಲಿ ಅದೇ ಎಸ್.ಸಿ.ಎನ್-11ಎ ಪೀಳಿಯ ಮಾರ‍್ಪಾಟ ಆಗಿರುವುದನ್ನು ಅರಕೆಗಾರರು ಕಂಡುಹಿಡಿದರು. ಅದರಲ್ಲೊಬ್ಬ ಹುಡುಗನಿಗೂ ಮೇಲೆ ತಿಳಿಸಿದ ಹುಡುಗಿಯ ಹಾಗೆ ನೋವಿನ ಅರಿವೇ ಆಗುತ್ತಿರಲಿಲ್ಲ. ಬೆರಗುಗೊಳಿಸಿದ ಇನ್ನೊಂದು ಸಂಗತಿಯೆಂದರೆ ಅವರಿಬ್ಬರ ಮಯ್ಯಲ್ಲಿ ಹಲವು ಗಾಯಗಳು ಮತ್ತು ಗಾಯಗಳು ತಡವಾಗಿ ವಾಸಿಯಾಗುವಂತ ಇನ್ನೂ ಕೆಲವು ಹೋಲಿಕೆಗಳೂ ಇದ್ದವು.

ಇವರಿಬ್ಬರ ಕುರುಹುಗಳಿಗೆ (symptoms) ಅದೇ ಪೀಳಿಯ ಮಾರ‍್ಪಾಟು ಕಾರಣವೇ ಅಂತ ತಿಳಿಯಲು ಆ ಪೀಳಿಯನ್ನು (genes) ಇಲಿಗಳ ಮಯ್ಯೊಳಗೆ ಅರಕೆಗಾರರು ಸೇರಿಸಿದರು. ಈ ಹೊಸ ಪೀಳಿಯನ್ನು ಪಡೆದ ಇಲಿಗಳ ಮತ್ತು ಬೇರೆ ಸಾಮಾನ್ಯ ಇಲಿಗಳ ನಡವಳಿಕೆಯಲ್ಲಿ ತುಂಬಾ ಬೇರ‍್ಮೆ ಕಾಣಿಸಿತು. ಕಾವು ಹೆಚ್ಚಿಸಿದಾಗ ಸಾಮಾನ್ಯ ಇಲಿಗಳು ನೋವಿನ ಗುರುತು ತೋರಿಸಿದರೆ ಹೊಸ ಪೀಳಿ ಹಾಕಿದ ಇಲಿಗಳು ಏನೂ ಆಗಿರದಂತೆ ಸುಮ್ಮನಿದ್ದವು. ಇದರಿಂದಾಗಿ ಹೊಸ ಪೀಳಿ ಪಡೆದುಕೊಂಡ ಇಲಿಗಳಿಗೆ ನೋವು ತಡೆದುಕೊಳ್ಳುವ (ಅರಿವಾಗದ!) ಅಳವು ತುಂಬಾಯಿದೆ ಅಂತ ತಿಳಿಯಿತು. ಎಸ್.ಸಿ.ಎನ್-11ಎ ಪೀಳಿಯ ಮಾರ‍್ಪಾಟೇ ಈ ಬಗೆಯ ನಡವಳಿಕೆಗೆ ದೂಸರು (ಕಾರಣ) ಅಂತ ಆಗ ನಿಕ್ಕಿಯಾಯಿತು.

ಮುಂದಿನ ದಿನಗಳಲ್ಲಿ ಈ ಪೀಳಿಯನ್ನು ನೋವು ಮರೆಸುವ ಮದ್ದುಗಳಲ್ಲಿ ಬಳಸುಬಹುದಂತ ಹಲವು ಮದ್ದರಿಗರಿಗೆ ಈಗ ಮನವರಿಕೆಯಾಗಿದೆ. ’ನೋವು’ ಮರೆಮಾಚುವ ಆ ದಿನಗಳಿಗೆ ನಾವು ಕಾಯೋಣವಲ್ಲವೇ?

 (ಒಸಗೆಯ ಹಾಗೂ ತಿಟ್ಟದ ಸೆಲೆ: popsci)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.