ಕೊರಿಯಾದಲ್ಲಿ ನಡೆದ ಲಿಪಿ ಬದಲಾವಣೆ

ಪ್ರಿಯಾಂಕ್ ಕತ್ತಲಗಿರಿ.

RENAULT_SAMSUNG_MOTORS-ko-dot-wikipedia-dot-org

ಇವತ್ತು ನಮಗೆ ಕೊರಿಯಾ ಎಂದರೆ ಸ್ಯಾಮ್‍ಸಂಗ್, ಹ್ಯುಂಡಾಯ್ ಕಂಪನಿಗಳು ನೆನಪಾಗುತ್ತವೆ, ಗಂಗ್ನಮ್ ಸ್ಟಯ್ಲ್ ಎಂಬ ಕುಣಿತ ನೆನಪಾಗುತ್ತದೆ ಮತ್ತು ಬಡಗಣ ಕೊರಿಯಾದ ಅಣು ಬಾಂಬ್ ಬೆದರಿಕೆಗಳು ನೆನಪಾಗುತ್ತವೆ. ಕೊರಿಯಾದ ಹಳಮೆಯಲ್ಲಿ (history) ಹಲವಾರು ಆಗು-ಹೋಗುಗಳು ನಡೆದಿವೆ, ಮತ್ತು ಆಯಾ ಆಗು-ಹೋಗುಗಳಲ್ಲಿ ಹಲವು ಕೊರಿಯಾದ ಲಿಪಿಯ ಮೇಲೂ ಪರಿಣಾಮ ಮಾಡಿವೆ.

1443ರಲ್ಲಿ ಹುಟ್ಟು ಕಂಡ ಹಂಗುಲ್

ಇವತ್ತಿನ ದಿನ ತೆಂಕಣ ಮತ್ತು ಬಡಗಣ ಕೊರಿಯಾದಲ್ಲಿ ಬಳಕೆಯಾಗುವ ಲಿಪಿಯನ್ನು ಹಂಗುಲ್ ಎಂದು ಕರೆಯಲಾಗುತ್ತದೆ. ಈ ಲಿಪಿಯ ಹುಟ್ಟು 1443-1444ರಲ್ಲಿ ಆಗಿದೆಯೆಂದು ಇತ್ತೀಚಿನ ಅರಕೆಯೊಂದು ತಿಳಿಸುತ್ತದೆ. ಈ ಲಿಪಿಯನ್ನು ಹನ್ಮಿನ್‍ಜಿಯೋಂಗೆಯಮ್ ಎಂಬ ಹೆಸರಿನ ಹೊತ್ತಗೆಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಹನ್ಮಿನ್‍ಜಿಯೋಂಗೆಯಮ್ ಎಂಬ ಪದದ ಅರ‍್ತ ’ಮಂದಿಯ ಕಲಿಕೆಗಾಗಿ ಸರಿಯಾದ ಸದ್ದು’ ಎಂದಿದೆ. 1443ರವರೆಗೂ ಕೊರಿಯನ್ ನುಡಿಯನ್ನು ಬರೆಯಲು ಹಂಜ ಎಂದು ಕರೆಯಲಾಗುತ್ತಿದ್ದ ಚಯ್ನೀಸ್ ನುಡಿಗೆ ಹತ್ತಿರವಿರುವ ಲಿಪಿಯೊಂದನ್ನು ಬಳಸಲಾಗುತ್ತಿತ್ತು. ಹಂಗುಲ್ ಲಿಪಿಗೆ ಹುಟ್ಟು ನೀಡಿದ ಸೆಜೋಂಗ್ ಎಂಬಾತ ರಾಜನಾಗಿದ್ದ ಎಂದೂ ಹೇಳಲಾಗುತ್ತದೆ. ಹಂಗುಲ್ ಲಿಪಿಯನ್ನು ಕೊರಿಯನ್ ನುಡಿಗೆ ಅಳವಡಿಸಿಕೊಳ್ಳಬೇಕು ಎನ್ನಲು ಹನ್ಮಿನ್‍ಜಿಯೋಂಗೆಯಮ್ ಹೊತ್ತಗೆಯಲ್ಲಿ ರಾಜ ಸೆಜೋಂಗ್ ಈ ಕೆಲವು ವಿಶಯಗಳನ್ನು ಮುಂದಿಟ್ಟಿದ್ದನು:

  • ಕೊರಿಯನ್ ನುಡಿಯು ಚಯ್ನೀಸ್ ನುಡಿಗಿಂತ ತೀರಾ ಬೇರೆಯದ್ದಾಗಿದೆ.
  • ಸಾಮಾನ್ಯ ಮಂದಿಗೆ ಚಯ್ನೀಸ್ ಲಿಪಿಯನ್ನು (ಹಂಜ) ಬಳಸಿ ಕೊರಿಯನ್ ನುಡಿಯನ್ನು ಬರೆಯುವುದು ತುಂಬಾ ಕಶ್ಟವೆನಿಸುತ್ತದೆ.
  • ಕೆಲವೇ ಕೆಲವು ಜನರು ಹಂಜ ಲಿಪಿಯನ್ನು ಸಲೀಸಾಗಿ ಓದಬಲ್ಲವರು ಮತ್ತು ಬರೆಯಬಲ್ಲವರಾಗಿದ್ದಾರೆ. ಉಳಿದವರೆಲ್ಲರೂ ಓದುವ/ಬರೆಯುವ ಕೆಲಸದಿಂದ ದೂರವೇ ಉಳಿದಿದ್ದಾರೆ.

ಹಂಗುಲ್ ಅಳವಡಿಕೆಗೆ ಬಂದ ವಿರೋದ

ಕೂಡಣದಲ್ಲಿ ಪ್ರತಿಯೊಂದು ಬದಲಾವಣೆಗೂ ವಿರೋದ ಬರುವಂತೆಯೇ ಹಂಗುಲ್ ಲಿಪಿಯ ಅಳವಡಿಕೆಗೂ ವಿರೋದ ಕಂಡು ಬಂದಿತ್ತು. 1400ರಲ್ಲಿ ಕೊರಿಯಾದಲ್ಲಿ ಕನ್ಪೂಶಿಯನ್ (Confucian) ದರ‍್ಮವನ್ನು ಹಿಂಬಾಲಿಸಲಾಗುತ್ತಿತ್ತು. ಕನ್ಪೂಶಿಯನ್ ದರ‍್ಮದ ಬಗ್ಗೆ ಆಳವಾಗಿ ತಿಳಿದುಕೊಂಡಿದ್ದವರು, ಹಂಜ ಲಿಪಿಯನ್ನೇ ಮುಂದುವರಿಸಬೇಕೆಂದು ಪಟ್ಟು ಹಿಡಿದರು. ಕನ್ಪೂಶಿಯನ್ ದರ‍್ಮದ ಪಂಡಿತರು ಹಂಗುಲ್ ಲಿಪಿಯನ್ನು ಕೂಡಣದ ಮೇಲಿನ ತಮ್ಮ ಹಿಡಿತವನ್ನು ಸಡಿಲಗೊಳಿಸುವ ಸಲಕರಣೆ ಎಂದೂ ಬಗೆದರು. ಆದರೆ, ಇದೆಲ್ಲಾ ವಿರೋದದ ನಡುವೆ ಹಂಗುಲ್ ಲಿಪಿಯು ಮಂದಿಮೆಚ್ಚುಗೆ ಗಳಿಸತೊಡಗಿತು. ಹೆಂಗಸರು ಮತ್ತು ಕತೆ ಬರೆಯುವವರು ಹೆಚ್ಚಾಗಿ ಹಂಗುಲ್ ಲಿಪಿಯನ್ನೇ ಬಳಸತೊಡಗಿದರು. ಆದರೂ ಕನ್ಪೂಶಿಯನ್ ದರ‍್ಮದ ಪಂಡಿತರ ಒತ್ತಡ ನಿಲ್ಲಲಿಲ್ಲ. 1500ರಲ್ಲಿ ರಾಜನಾಗಿದ್ದ ಜುಂಗ್‍ಜೋಂಗ್, ಹಂಗುಲ್ ಲಿಪಿಯನ್ನು ಎಲ್ಲೂ ಬಳಸಕೂಡದು ಎಂದು ಕಟ್ಟಲೆ ಹೊರಡಿಸಿದ್ದ. ಹಾಗಾಗಿ, ಹಂಗುಲ್ ಲಿಪಿಯ ಬಳಕೆ ಹಿನ್ನೆಲೆಗೆ ಸರಿದಿತ್ತು. 1600ನೇ ಇಸವಿಯ ಕೊನೆಯ ಹೊತ್ತಿಗೆ ಹಂಗುಲ್ ಲಿಪಿಯ ಬಳಕೆ ಮತ್ತೆ ಮುನ್ನೆಲೆಗೆ ಬಂತು.

ಅವತ್ತಿನಿಂದ ಇವತ್ತಿನವರೆಗೆ ಕೊರಿಯಾದಲ್ಲಿ ಹಂಜ (ಚಯ್ನೀಸ್) ಲಿಪಿಯ ಬಳಕೆ ಕಮ್ಮಿಯಾಗುತ್ತಾ ಬಂದಿದ್ದು, ಹಂಗುಲ್ ಲಿಪಿಯ ಬಳಕೆ ಹೆಚ್ಚುತ್ತಾ ಸಾಗಿದೆ. ತೆಂಕಣ ಕೊರಿಯಾದಲ್ಲಿ ಇವತ್ತಿಗೂ ಹಂಜ ಲಿಪಿಯನ್ನು ಬಳಸಬೇಕೇ, ಎಶ್ಟು ಬಳಸಬೇಕು, ಯಾವುದನ್ನು ಬಿಡಬೇಕು ಎಂಬ ಚರ‍್ಚೆ ಉಸಿರಾಡುತ್ತಿದೆ. ಬಡಗಣ ಕೊರಿಯಾದಲ್ಲಿ ಹಂಗುಲ್ ಬಳಕೆಯನ್ನೇ ಇಡಿಯಾಗಿ ಅಳವಡಿಸಿಕೊಳ್ಳಲಾಗಿದ್ದು, ಹಂಜ ಲಿಪಿಯ ಬಳಕೆಯನ್ನು ತೆಗೆದು ಹಾಕಲಾಗಿದೆ. ತೆಂಕಣ ಕೊರಿಯಾದಲ್ಲಿ ಚಳಕ ಕಂಪನಿಗಳ ಬೆಳವಣಿಗೆ ಹೆಚ್ಚಿದ್ದು, ಅದರಿಂದಾಗಿ ಹಂಗುಲ್ ಲಿಪಿಯು ಅಲೆಯುಲಿಗಳಲ್ಲಿ (mobile phone) ಟ್ಯಾಬ್ಲೆಟ್ಟುಗಳಲ್ಲಿ ಬಳಕೆಯಾಗುತ್ತಿದೆ. ಕೊರಿಯಾದ ವಿಶ್ವವಿದ್ಯಾಲಯದಲ್ಲಿ ಕಲಿಕೆಯು ಕೊರಿಯನ್ ನುಡಿಯಲ್ಲೇ ನಡೆಯುವುದರಿಂದ, ಹಂಗುಲ್ ಲಿಪಿಯು ಚಳಕದರಿಮೆಯ (technology) ಹೊತ್ತಗೆಗಳಲ್ಲೂ ಬಳಕೆಯಾಗುತ್ತಿದೆ.

(ಮಾಹಿತಿ ಸೆಲೆ: wikipedia.org)
(ಚಿತ್ರ ಸೆಲೆ: ko.wikipedia.org)Categories: ನಾಡು

ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s