ಹಂಗುಲ್ ಲಿಪಿ – ನುಡಿಯರಿಮೆಯ ತಳಹದಿಯ ಮೇಲೆ ಸಾಮಾಜಿಕ ಕ್ರಾಂತಿ

ಸಂದೀಪ್ ಕಂಬಿ.

Picture 246

ಕೊರಿಯಾ ನಾಡನ್ನು ಸೆಜೋಂಗ್ ಎಂಬ ದೊರೆ 1418ರಿಂದ 1450ರ ವರೆಗೂ ಆಳಿದನು. ನಮ್ಮ ನಾಲ್ವಡಿ ಕ್ರಿಶ್ಣರಾಜ ಒಡೆಯರ ಹಾಗೆಯೇ ಅವನೂ ಒಬ್ಬ ಜನಪ್ರೇಮಿ ದೊರೆ. ತನ್ನ ಮಂದಿಯ ತೊಡಕು ತೊಂದರೆಗಳನ್ನು ಅರಿತು, ಅವುಗಳನ್ನು ಬಗೆಹರಿಸಿ, ಅವರ ಬದುಕುಗಳನ್ನು ಮೇಲೆತ್ತಬೇಕೆಂಬ ಹೆಬ್ಬಯಕೆ ಅವನಲ್ಲಿತ್ತು. ಅದಕ್ಕಾಗಿಯೇ ತನ್ನ ಓಲಗದಲ್ಲಿರುವ ಅರಿತರು, ಅರಿಗರೊಡನೆ ಚರ್‍ಚಿಸಿ, ಚಿಂತಿಸಿ, ತನ್ನ ನಾಡಿನ ಉದ್ದಗಲಕ್ಕೂ ಹಲವು ಹಮ್ಮುಗೆಗಳನ್ನು ತೊಡಗಿಸಿದನು. ಹೊಸ ಅರಿಮೆ-ಚಳಕಗಳನ್ನು ಬಳಸಿಕೊಳ್ಳಲು ಕೂಡ ಮುಂದಾದನು. ಎತ್ತುಗೆಗೆ, ತನ್ನ ನಾಡಿನ ಸಾಮಾನ್ಯ ರಯ್ತರಿಗೆ ನೆರವಾಗಲೆಂದು ಕೊರಿಯಾದ ಬೇರೆ ಬೇರೆ ಕಡೆಗಳಲ್ಲಿ ಬಳಕೆಯಲ್ಲಿದ್ದ ಬೇಸಾಯದ ಬಗೆಗಳ, ವ್ಯವಸ್ತೆಗಳ ಬಗ್ಗೆ ಆರಯ್ಕೆ ನಡೆಯಿಸಿ, ಆರಂಬದ ಚಳಕಗಳ ಬಗ್ಗೆ ಒಂದು ಕಯ್ಪಿಡಿಯನ್ನು ಹೊರ ತಂದನು. ಇದೇ ಬಗೆಯಲ್ಲಿ ಅವನು ಕಯ್ಗೊಂಡ ಇನ್ನೊಂದು ಹಮ್ಮುಗೆ ಎಂದರೆ ‘ಹಂಗುಲ್‘ ಎಂಬ ಹೊಸ ಲಿಪಿ ಕಟ್ಟಣೆಯದು.

ಅಂದು ಕೊರಿಯಾದಲ್ಲಿ ಓದು ಬರಹ ಬರಿಯ ಮೇಲ್ವರ್‍ಗದವರ ಸೊತ್ತಾಗಿತ್ತು. ಕೊರಿಯನ್ ಬರೆಯಲು ಹಂಜ ಎಂಬ ಚಯ್ನೀಸ್ ಲಿಪಿಯನ್ನು ಬಳಸಲಾಗುತ್ತಿತ್ತು. ಕೊರಿಯನ್ ನುಡಿಗೆ ಹೊಂದಿಸುವ ಸಲುವಾಗಿ ಈ ಲಿಪಿಗೆ ಮಾರ್‍ಪಾಡುಗಳನ್ನು ಮಾಡಿದ್ದರೂ, ಇದರಲ್ಲಿ ಕೊರಿಯನ್ ಬರೆಯಲು ಹಲವು ತೊಡಕುಗಳಿದ್ದವು. ಇದಕ್ಕೆ ಕಾರಣ, ಚಯ್ನೀಸ್ ನುಡಿಗೂ ಕೊರಿಯನ್ ನುಡಿಗೂ ಇದ್ದ ವ್ಯಾಕರಣ ಮತ್ತು ವಾಕ್ಯ ಕಟ್ಟುವಿಕೆಗಳಲ್ಲಿ ಇದ್ದ ಬೇರೆತನ. ಜೊತೆಗೆ ಹಂಜ ಲಿಪಿಯಲ್ಲಿ ಸಾವಿರಾರು ಬರಿಗೆಗಳಿದ್ದುದರಿಂದ, ಅದನ್ನು ಸರಿಯಾಗಿ ಓದಲು ಕಲಿಯಲು ಹಲವಾರು ವರುಶಗಳೇ ಬೇಕಾಗಿತ್ತು. ಈ ಕಾರಣಗಳಿಂದಾಗಿ ಸಾಮಾನ್ಯ ಕೊರಿಯನ್ನನಿಗೆ ಓದು-ಬರಹವೆಂಬುದು ಕಯ್ಗೆಟುಕದ ಹಣ್ಣಾಗಿತ್ತು.

ಇವೆಲ್ಲವನ್ನೂ ಅರಿತ ಅರಸ ಸೆಜೋಂಗ್ ತನ್ನ ಮಂದಿಗೆ ಓದಲು ಬರೆಯಲು ಸುಳುವಾಗಲೆಂದು ಹೊಸ ಲಿಪಿಯೊಂದನ್ನು ಕಟ್ಟಲು ಹೊರಟನು. ಈ ಕಟ್ಟಣೆಯಲ್ಲಿ ಚಿತ್ರಲಿಪಿಯನ್ನು (logographic script) ತೊರೆದು ಉಲಿಬರಿಗೆಯ (phonetic writing) ಏರ್‍ಪಾಟನ್ನು ಅನುಸರಿಸಲಾಯಿತು. ಹೀಗೆ ಕಟ್ಟಿದ ಹಂಗುಲ್ ಲಿಪಿಯಲ್ಲಿ ಕೊರಿಯನ್ ನುಡಿಯಲ್ಲಿ ಇದ್ದ ಉಲಿಗಳಿಗೆ ಗುರುತುಗಳನ್ನು ಕೊಡಲಾಗಿದೆಯಲ್ಲದೇ, ನಮ್ಮ ಬ್ರಾಹ್ಮಿ ಲಿಪಿಗಳಲ್ಲಿ ಇರುವಂತೆ, ವ್ಯಂಜನಗಳನ್ನು ಅವು ಬಾಯಲ್ಲಿ ಹೇಗೆ ಹುಟ್ಟುತ್ತವೆಂಬುದರ ಮೇಲೆ ಗುಂಪಿಸಿಲಾಗಿದೆ. ಆದರೆ, ಈ ಗುಂಪಿಸುವಿಕೆಯೂ ಕೊರಿಯನ್ ಉಲಿಕೆಗೆ ತಕ್ಕಂತೆ ಇದೆಯೇ ಹೊರತು ಬ್ರಾಹ್ಮಿ ಲಿಪಿಗಳಿಂದ ಕುರುಡಾಗಿ ಎತ್ತಿಕೊಂಡಂತೆ ಕಾಣುವುದಿಲ್ಲ. ಇಶ್ಟಕ್ಕೇ ನಿಲ್ಲದೆ ಹಂಗುಲ್ ಇನ್ನೂ ಒಂದು ಹೆಜ್ಜೆ ಮುಂದುವರಿದು ಉಲಿಗಳನ್ನು ಹೇಳುವಾಗ ಬಾಯಿನ ಒಳ ಅಂಗಗಳು ಯಾವ ಆಕಾರದಲ್ಲಿ ಬಾಗುತ್ತವೋ ಆ ಆಕಾರಗಳನ್ನು ಹೋಲುವ ಗುರುತುಗಳನ್ನೇ ಅಕ್ಶರಗಳನ್ನಾಗಿ ಬಳಸುತ್ತದೆ. ಎತ್ತುಗೆಗೆ ‘ㄱ’ ಎಂಬ ಗುರುತು ಕೊರಿಯನ್ನಿನ ‘ಕ/ಗ’ ಸದ್ದನ್ನು ಸೂಚಿಸುವ ಅಕ್ಶರ. ಸೂಕ್ಶ್ಮವಾಗಿ ಗಮನಿಸಿದರೆ ಇದು ‘ಕ’ ಹೇಳುವಾಗ ನಾಲಿಗೆಯ ಹಿಂಬಾಗವು ಕೊಂಚ ಮೇಲಕ್ಕೆದ್ದು ಗಾಳಿಗೆ ತಡೆಯೊಡ್ಡುವ ಆಕಾರದಲ್ಲಿದೆ. ಜೊತೆಗೆ ಈ ವರ್‍ಗದ ಎಲ್ಲ ಅಕ್ಶರಗಳನ್ನೂ ಈ ಮೂಲ ಆಕಾರದ ಮೇಲೇ ಕಟ್ಟಲಾಗಿದೆ. ಇದರಿಂದ ಒಂದೇ ವರ್‍ಗದ ಎಲ್ಲ ಅಕ್ಶರಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ಗುರುತಿಸುವುದು ಸುಲಬವಾಗಿದೆ.

ಹಂಗುಲ್‍ನಲ್ಲಿ 7 ಮೂಲ ಸ್ವರಗಳನ್ನು ಗುರುತಿಸಿರುವುದಲ್ಲದೆ ಅವುಗಳನ್ನು ಕೊರಿಯನ್ ನುಡಿಯ ಉಲಿಯುವಿಕೆಗೆ ತಕ್ಕಂತೆ ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಸ್ವರಗಳನ್ನು ಸೂಚಿಸುವ ಅಕ್ಶರಗಳು ಬರಿಯ ಗೀಟು ಮತ್ತು ಚುಕ್ಕೆಗಳಿಂದ ಕಟ್ಟಲಾಗಿದೆ, ಆದ ಕಾರಣ ವ್ಯಂಜನಗಳಿಂದ ಅವು ಬೇರೆಯಾಗಿ ಎದ್ದು ಕಾಣುತ್ತವೆ ಮತ್ತು ಬರಹದಲ್ಲಿ ಗುರುತು ಹಿಡಿಯಲು ಸುಳುವಾಗುತ್ತದೆ. ಹೀಗೆ ತಮ್ಮ ನುಡಿಯ ನುಡಿಯರಿಮೆ ಮತ್ತು ಉಲಿಯರಿಮೆಗಳನ್ನು ಚೆನ್ನಾಗಿ ಅರಿತು ಅದಕ್ಕೆ ತಕ್ಕಂತೆ ತೀರಾ ವಯ್‍ಗ್ನಾನಿಕವಾಗಿ ಕಟ್ಟಿರುವ ಲಿಪಿ ಜಗತ್ತಿನಲ್ಲಿ ಬಹುಶ ಮತ್ತೊಂದು ಇಲ್ಲ. ಇದೇ ಕಾರಣಕ್ಕೆ ಇದನ್ನು ಯಾರು ಬೇಕಾದರೂ ಕಲಿಯಬಹುದು ಎಂಬ ಹೊಗಳಿಕೆಗೆ ಹಂಗುಲ್ ಪಾತ್ರವಾಯಿತು.

ಸಂಪ್ರದಾಯವಾದಿಗಳು ಇಂತಹ ಒಂದು ಬದಲಾವಣೆಗೆ ಅಡ್ಡಿ ಮಾಡುವರೆಂಬ ವಿಶಯ ಸೆಜೋಂಗ್‍ಗೆ ಗೊತ್ತಿತ್ತು. ಆದ್ದರಿಂದ ಅವನು ಇದನ್ನು ಗುಟ್ಟಾಗಿ, ತನ್ನ ಆಪ್ತ ಅರಿಗರಿಂದ ಮಾಡಿಸಿದನೆಂದು ಹೇಳಲಾಗುತ್ತದೆ. ಇನ್ನೂ ಕೆಲವರು, ಸೆಜೋಂಗ್ ತನ್ನ ಈ ಆಪ್ತ ಅರಿಗರಿಗೂ ತಿಳಿಸದೆ ತಾನೇ ಗುಟ್ಟಾಗಿ ಇದನ್ನು ಕಟ್ಟಿದನೆಂದು ಹೇಳುತ್ತಾರೆ. ಅದೇನೇ ಇರಲಿ, ಈ ಲಿಪಿ ಸಾಮಾನ್ಯ ಕೊರಿಯನ್ನರ ಕಯ್ ತಲುಪಿದ ಮೇಲೆ, ಸೆಜೋಂಗ್ ಎಣಿಸಿದಂತೆಯೇ, ಮಂದಿ ಮೆಚ್ಚುಗೆಯನ್ನು ಪಡೆಯಿತು. ಮೇಲ್ವರ್‍ಗದ ಮಂದಿ ಹಂಜವನ್ನು ಬಳಸವುದನ್ನು ಮುಂದುವರಿಸಿದರೂ, ಸಾಮನ್ಯ ರಯ್ತರು ಮತ್ತು ಹೆಂಗಸರೂ ಹಂಗುಲ್ ಲಿಪಿಯನ್ನು ಬಳಸಲು ತೊಡಗಿದರು. ಹಲವು ಶತಮಾನಗಳ ಕಾಲ ಇದು ಸಾಮನ್ಯರ ಲಿಪಿಯಾಗಿಯೇ ಉಳಿದುಕೊಂಡಿತು. ಹಂಗುಲ್ ಇಲ್ಲದೇ ಹೋಗಿದ್ದರೆ ಆ ಕಾಲದಲ್ಲಿ ಸಾಮನ್ಯ ಕೊರಿಯನ್ನರು ಓದು-ಬರಹ ಕಲಿಯಲು ಆಗುತ್ತಲೇ ಇರಲಿಲ್ಲವೇನೋ. ಹಾಗಾಗಿ, ಹಂಗುಲ್ ತರುವುದರ ಹಿಂದೆ ನುಡಿಯರಿಮೆಯ ಕಾರಣಗಳು, ಸಾಮಾಜಿಕ ಕಳಕಳಿಗಳ ಜೊತೆಗೆ ಚಯ್ನೀಸ್ ಹಿಡಿತದಿಂದ, ಅದರ ಗುರುತಿನಿಂದ ಹೊರಬಂದು ಕೊರಿಯನ್ನರ ಬೇರ್‍ಮೆಯನ್ನು ಎತ್ತಿ ಹಿಡಿಯುವ ಬಯಕೆಯೂ ಕಾಣುತ್ತದೆ. ಹಂಗುಲ್ ಮೂಲಕ ಕೊರಿಯನ್ ಹೆಮ್ಮೆಯನ್ನು, ಬೇರ್‍ಮೆಯನ್ನು ಗುರುತಿಸಿಕೊಳ್ಳುವ ಹಂಬಲ ಇಪ್ಪತನೆಯ ಶತಮಾನದಿಂದ ಕೊರಿಯನ್ನರಲ್ಲಿ ಹೆಚ್ಚು ಕಾಣುತ್ತದೆ.

ಹಂಜ ಲಿಪಿಯನ್ನು ಇರಿಸಿಕೊಳ್ಳಬೇಕೇ, ಮತ್ತು ಅದನ್ನು ಮಕ್ಕಳಿಗೆ ಕಲಿಸಬೇಕೇ ಎಂಬ ಪ್ರಶ್ನೆಗಳು ತೆಂಕಣ ಕೊರಿಯಾದಲ್ಲಿ ಇನ್ನೂ ಜೀವಂತವಾಗಿದ್ದರೂ ಹಂಗುಲ್ ಲಿಪಿಯನ್ನೇ ಸಾಮಾನ್ಯವಾಗಿ ಎಲ್ಲೆಡೆ ಬಳಸಲಾಗುತ್ತಿದೆ. ಮೊದಮೊದಲು ಚಯ್ನೀಸ್ ಮೂಲದ ಪದಗಳನ್ನು ಬರೆಯುವಾಗ ಹಂಜವನ್ನು ಹಂಗುಲ್ ನಡುವೆ ಹೇರಳವಾಗಿ ಬಳಸಲಾಗುತ್ತಿತ್ತಾದರೂ ಇಂದು ಅದರ ಬಳಕೆ ಇಲ್ಲವೇ ಇಲ್ಲವೆನ್ನುವಶ್ಟು ಕಡಿಮೆಯಾಗಿದೆ. ನಡುಬಲೆಯಲ್ಲೂ ಹಂಗುಲ್ ಬಳಕೆಗೆ ಹೆಚ್ಚು ಒತ್ತು ಕೊಡಲಾಗಿದೆ. ಕೊರಿಯನ್ ವಿಕಿಪೀಡಿಯಾದಂತಹ ನಡುಬಲೆಯ ನೆಲೆಗಳೂ ಇಡಿಯಾಗಿ ಹಂಗುಲ್ ಲಿಪಿಯಲ್ಲೇ ಇವೆ. ಬರೀ 24 ಬರಿಗೆಗಳಿರುವ ಈ ಲಿಪಿಯಲ್ಲಿ ಕೀಲಿಮಣೆಗಳನ್ನೂ ಕಟ್ಟಲಾಗಿದೆ, ಮತ್ತು ಅವನ್ನು ಎಲ್ಲೆಡೆ ಬಳಸಲಾಗುತ್ತಿದೆ. ಕೊರಿಯನ್ ನುಡಿ ಮತ್ತು ಜನಾಂಗ ಡಿಜಿಟಲ್ ಜಗತ್ತಲ್ಲಿ ಮುಂದುವರಿಯಲು ಇದು ಕೂಡ ಸಹಕಾರಿಯಾಗಿದೆ.

ಹೀಗೆ ವಿಗ್ನಾನದ ಅಡಿಪಾಯವನ್ನು ಬಳಸಿಕೊಂಡು ಬರಹದ ಮೂಲಕ ವರ್‍ಗ ತಾರತಮ್ಯವನ್ನು ತೊಲಗಿಸಿ ಸಾಮಾಜಿಕ ಕ್ರಾಂತಿಯನ್ನು ತರುವ ಕನಸು ಕಂಡ ತಮ್ಮ ದೊರೆ ಸೆಜೋಂಗ್‍ನನ್ನು ಇಂದು ಕೊರಿಯನ್ನರು ಗವ್ರವದಿಂದ ನೆನೆಸುತ್ತಾರೆ, ”ಸೆಜೋಂಗ್ ದ ಗ್ರೇಟ್” ಎಂಬ ಬಿರುದನ್ನೂ ಕೊಟ್ಟಿದ್ದಾರೆ. ಅವನು ಕಟ್ಟಿ (ಕಟ್ಟಿಸಿ) ಹೊರತಂದ ಹಂಗುಲ್ ಲಿಪಿಯನ್ನು ತಮ್ಮ ನಾಡಿನ ಹೆಮ್ಮೆಯೆಂದು ಕಾಣುತ್ತಾರೆ. ಪ್ರತಿ ವರುಶ ಅಕ್ಟೋಬರ್ 9ರಂದು (ಇದೇ ದಿನ 1446ರಲ್ಲಿ ‘ಹನ್ಮಿನ್‍ಜಿಯೋಂಗೆಯಮ್’ ಎಂಬ ಹೊತ್ತಗೆಯ ಮೂಲಕ ಸೆಜೋಂಗ್ ಹಂಗುಲ್ ಲಿಪಿಯನ್ನು ಬಳಸುವುದಾಗಿ ಪ್ರಸ್ತಾಪಿಸಿದನಂತೆ) ‘ಹಂಗುಲ್ ದಿನ’ ಆಚರಿಸಲಾಗುತ್ತದೆ. ಇದು ಹಂಗುಲ್ ಲಿಪಿಯ ಹಿಂದಿನ ಅರಿಮೆಯನ್ನು ಮತ್ತು ಕೊರಿಯನ್ನರ ಬೇರ್‍ಮೆಯನ್ನು, ಜಗತ್ತಿಗೇ ಸಾರಿ ತಿಳಿಸುವ ನಾಡ ಹೆಮ್ಮೆಯ ದಿನವಾಗಿ ಹೊಮ್ಮಿದೆ.

(ಮಾಹಿತಿ ಸೆಲೆ: http://en.wikipedia.org/wiki/Sejong_the_Great
                        http://en.wikipedia.org/wiki/Origin_of_hangul)
(ಚಿತ್ರ ಸೆಲೆ: mymariamargareta.blogspot.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: