ಮಹಾಪ್ರಾಣವೆಂಬ ಕಗ್ಗಂಟು

maha

ಅವಿರತ ಗುಂಪಿನವರು ಏರ‍್ಪಡಿಸಿದ್ದ ಮಾತುಕತೆಯೊಂದರ ಬಗ್ಗೆ ಈಗಾಗಲೇ ಮೂಡಿ ಬಂದಿರುವ ಎರಡು ಬರಹಗಳನ್ನು ತಾವು ಓದಿರಬಹುದು. ಡಾ|| ಡಿ. ಎನ್. ಶಂಕರ ಬಟ್ಟರ ವಿಚಾರಗಳು ಮತ್ತು ಮಹಾಪ್ರಾಣಗಳ ಬಗೆಗೆ ನಡೆಸಲಾಗಿದ್ದ ಮಾತುಕತೆಯಲ್ಲಿ ಕೇಳಿ ಬಂದ ಪ್ರಶ್ನೆಗಳಿಗೆ ನಾಡಿನ ಹೆಸರಾಂತ ನುಡಿಯರಿಗರಾದ ಡಾ|| ಕೆ. ವಿ. ನಾರಾಯಣ ಅವರು ಚೆನ್ನಾಗಿ ಉತ್ತರಿಸಿದ್ದರು. ಮಾತುಕತೆಯಲ್ಲಿ ತೇಲಿಬಂದ ಕೆಲವು ಕೇಳ್ವಿಗಳಿಗೆ ನನ್ನ ತಿಳಿವಿನ ಮಟ್ಟದಲ್ಲಿ ಉತ್ತರಿಸುವ ಸರಣಿ ಬರಹಗಳಲ್ಲಿ ಮೂರನೆಯದು ಈ ಬರಹ.

ಇವತ್ತಿನ ದಿನ ಕನ್ನಡ ಮಾದ್ಯಮದಲ್ಲಿ ಓದುವವರೇ ಕಡಿಮೆಯಿದ್ದಾರೆ. ನಮ್ಮ ಸುತ್ತಮುತ್ತಲಿನ ಮಕ್ಕಳೂ ಇಂಗ್ಲೀಶ್ ಮಾದ್ಯಮದಲ್ಲಿ ಓದುತ್ತಿದ್ದು, ಕನ್ನಡದಲ್ಲಿ 35 ತೆಗೆದು ಪಾಸಾದರೆ ಸಾಕು ಎಂಬಂತಹ ಮನಸ್ತಿತಿ ಇಟ್ಟುಕೊಂಡಿದ್ದಾರೆ. ಹಾಗಿರುವಾಗ, ನಮ್ಮೆದುರಿಗಿರುವ ತೊಂದರೆ ಕನ್ನಡ ಬಳಕೆಯದ್ದೇ ಹೊರತು ಮಹಾಪ್ರಾಣಗಳದ್ದಲ್ಲ. ನಮ್ಮ ಗುರಿ ಕನ್ನಡ ಬಳಕೆ ಹೆಚ್ಚಿಸುವ ಕಡೆಗಿರಬೇಕಲ್ಲವೇ? ಮಹಾಪ್ರಾಣ ಮತ್ತು ಅಲ್ಪಪ್ರಾಣಗಳ ಗುದ್ದಾಟವೇಕೆ?

ಕಳೆದ ಹತ್ತು ವರುಶಗಳಲ್ಲಿ ಇಂಗ್ಲೀಶ್ ಮಾದ್ಯಮ ಶಾಲೆಗಳು ಹಲವೆಡೆ ತಲೆಯೆತ್ತುತ್ತಿರುವುದನ್ನು ನೋಡಿದಾಗ, “ಎಲ್ಲರೂ ಇಂಗ್ಲೀಶ್ ಮಾದ್ಯಮಕ್ಕೇ ಸೇರಿಬಿಡುತ್ತಿದ್ದಾರೆ” ಎಂಬ ಅನಿಸಿಕೆ ಮೂಡುವುದು ಸಹಜ. ಆದರೆ, ಸರಿಯಾದ ಅಂಕಿ-ಅಂಶಗಳನ್ನು ತೆರೆದು ನೋಡಿದಾಗ ಇವತ್ತಿಗೂ 78%ನಶ್ಟು ಕರ‍್ನಾಟಕದ ಮಕ್ಕಳು ತಮ್ಮ ತಾಯ್ನುಡಿಯಲ್ಲಿಯೇ ಮೊದಲ ಹಂತದ ಕಲಿಕೆ ನಡೆಸುತ್ತಿರುವುದು ಕಾಣಿಸುತ್ತದೆ. ಸರಿ ಸುಮಾರು 56,000 ಮೊದಲ ಹಂತದ ಸರ‍್ಕಾರೀ ಶಾಲೆಗಳೆಲ್ಲವೂ ಜನರ ತಾಯ್ನುಡಿಯಲ್ಲಿಯೇ ಅದರಲ್ಲೂ ಹೆಚ್ಚಾಗಿ ಕನ್ನಡ ಮಾದ್ಯಮದಲ್ಲಿಯೇ ಪಾಟ ಮಾಡುತ್ತಿರುವುದು. ಹಾಗಾಗಿ, “ಎಲ್ಲ ಮಕ್ಕಳೂ ಇಂಗ್ಲೀಶ್ ಮಾದ್ಯಮ ಸೇರಿಬಿಡುತ್ತಿದ್ದಾರೆ” ಎಂಬುದು ಒಂದು ಅನಿಸಿಕೆಯಾದರೂ ದಿಟವಲ್ಲ.

ಕನ್ನಡ ಮಾದ್ಯಮದಲ್ಲಿ ಓದುತ್ತಿರುವ ಲಕ್ಶಗಟ್ಟಲೆ ಮಕ್ಕಳು ಇವತ್ತಿಗೂ ಮಹಾಪ್ರಾಣಗಳ ಗೊಂದಲಕ್ಕೀಡಾಗುತ್ತಿದ್ದಾರೆ. ಅವರುಗಳಲ್ಲಿ ಕನ್ನಡ ಬರವಣಿಗೆಯನ್ನು ನೆನಪಿಟ್ಟುಕೊಳ್ಳಬಲ್ಲ ಕೆಲವರು ಮಾತ್ರ ಬುದ್ದಿವಂತರೆಂದು ಕರೆಯಿಸಿಕೊಂಡು ಕಲಿಕೆಯಲ್ಲಿ ಮುಂದಿರುತ್ತಿದ್ದಾರೆ. ಮಿಕ್ಕ ಸಾಕಶ್ಟು ಮಂದಿ, ಎಲ್ಲಿ ’ಶ’ ಬರೆಯಬೇಕು ಎಲ್ಲಿ ’ಷ’ ಬರೆಯಬೇಕು ಎಂಬ ಗೊಂದಲದಲ್ಲಿ ಸಿಕ್ಕಿಕೊಳ್ಳುತ್ತಿದ್ದಾರೆ. ಯಾವ ಬರಿಗೆಗೆ ಎಲ್ಲಿ ಹೊಟ್ಟೆ ಸೀಳಬೇಕು ಎಂಬುದು ತಿಳಿಯದೆಯೇ ತಮ್ಮ ಒಳಗಣದಿಂದ ಮೂಡಿಬಂದ ಬರವಣಿಗೆಯನ್ನೇ ಬರೆದು, “ತಪ್ಪು” ಎಂದು ಕರೆಯಿಸಿಕೊಳ್ಳುತ್ತಿದ್ದಾರೆ. ಕನ್ನಡಿಗರಾದ ನಮ್ಮ ಮಾತಿನಲ್ಲಿ ಮಹಾಪ್ರಾಣಗಳ ಉಲಿಕೆ ಇರುತ್ತಿದ್ದರೆ, ಕನ್ನಡದ ಮಕ್ಕಳಿಗೆ ಸದ್ದು ಮತ್ತು ಬರಿಗೆಯ (ಅಕ್ಶರ) ನಡುವಣ ನಂಟನ್ನು ಮನಸಿನಲ್ಲಿ ಬೆಸೆದುಕೊಳ್ಳುವುದು ಸುಲಬವಾಗುತ್ತಿತ್ತು. ನಮ್ಮ ಮಾತಿನಲ್ಲಿ ಮಹಾಪ್ರಾಣಗಳ ಉಲಿಕೆ ಇಲ್ಲದುದರಿಂದ, ಬರವಣಿಗೆಯಲ್ಲಿ ಮಾತ್ರ ಅದನ್ನು ಮೂಡಿಸಬೇಕು ಎಂತಾದಾಗ ಅಂತಹ ಉಲಿಕೆಯನ್ನು ಎಂದಿಗೂ ಕೇಳದಿದ್ದ ಮಕ್ಕಳು ಗೊಂದಲಕ್ಕೀಡಾಗುವುದು ಸಹಜ.

ಎತ್ತುಗೆಗೆ, ’ಸಕಲ’ ಎಂಬುದನ್ನು ಕೇಳಿದಾಗ ಆ ಪದದಲ್ಲಿನ ಸದ್ದುಗಳಂತೆಯೇ ಬರೆದರೆ ಅದು ಸರಿಯೆನಿಸಕೊಳ್ಳುತ್ತದೆ. ಆದರೆ, ’ಅಕಿಲ’ ಎಂದು ಕಿವಿ ಮೇಲೆ ಬಿದ್ದ ಸದ್ದನ್ನು ಬರವಣಿಗೆಗೆ ಹಾಗೆಯೇ ತಂದ ಮಗುವು, ಮಹಾಪ್ರಾಣ ಬಳಸದೆಯೇ ತಪ್ಪು ಬರವಣಿಗೆ ಮಾಡಿದೆ ಎಂದು ಕರೆಯಿಸಿಕೊಳ್ಳುತ್ತದೆ. ಹಾಗೆ ಕರೆಯಿಸಿಕೊಳ್ಳದೇ ಇರಲು ಮಗುವಿಗೆ ಇರುವುದು ಒಂದೇ ದಾರಿ. ’ಅಕಿಲ’ ಪದದ ಇವತ್ತಿನ ಬರವಣಿಗೆ ರೂಪವಾದ ’ಅಖಿಲ’ ಎಂದೇ ಉರು ಹೊಡೆಯುವುದು. ಒಂದೆರಡು ಪದಗಳನ್ನು ಈ ರೀತಿ ಉರು ಹೊಡೆಯಬೇಕೆಂದರೆ ಹೆಚ್ಚಿನವರು ಮಾಡಬಲ್ಲರು. ಇಂತಹ ಹಲವಾರು ಪದಗಳು ಇವತ್ತಿನ ಪಟ್ಯಪುಸ್ತಕಗಳಲ್ಲಿ ಕಾಣಸಿಗುತ್ತಿರುವಾಗ, ಎಶ್ಟು ಪದಗಳ ಬರಹ ರೂಪವನ್ನು ಮಕ್ಕಳು ಉರುಹೊಡೆಯಬಲ್ಲರು? ಇಂತಹ ಹೊರೆ ನಿಜಕ್ಕೂ ಬೇಕೇ?

ಮಕ್ಕಳು ಕನ್ನಡ ಬಳಸುವಂತೆ ಮಾಡುವ ಕಡೆಗೆ ನಮ್ಮ ಗಮನವಿರಬೇಕಲ್ಲವೇ, ಅಲ್ಪಪ್ರಾಣ ಮಹಾಪ್ರಾಣಗಳೆಂಬ ಚರ‍್ಚೆಗಳಲ್ಲಿ ನಾವು ಯಾಕೆ ಕಳೆದುಹೋಗಬೇಕು ಎಂಬ ಕೇಳ್ವಿ ಹಲವರಲ್ಲಿ ಮನೆಮಾಡಿದೆ. ಲಕ್ಶಗಟ್ಟಲೆ ಮಕ್ಕಳು ಬರವಣಿಗೆಯಲ್ಲಿ ತೊಡಗಿಕೊಳ್ಳಲು ಮತ್ತು ಓದು/ಕಲಿಕೆಯಲ್ಲಿ ಮುಂದುವರೆಯಲು ಈ ಕಗ್ಗಂಟನ್ನು ಬಿಡಿಸಲೇಬೇಕಿದೆ. ಇಶ್ಟು ದಿನ ಈ ಕಗ್ಗಂಟನ್ನು ಬಿಡಿಸದೇ ಇದ್ದುದರಿಂದಲೇ, ಇವತ್ತಿಗೂ ಹಲವಾರು ಕನ್ನಡಿಗರು ಶಾಲೆಯಲ್ಲಿ ಹಲವು ವರುಶಗಳನ್ನು ಕಳೆದಿದ್ದರೂ ಬರವಣಿಗೆಯನ್ನು ತಮ್ಮದಾಗಿಸಿಕೊಂಡಿಲ್ಲ. ಈ ಕಗ್ಗಂಟನ್ನು ನಾವು ಬಿಡಿಸಿದ್ದೇ ಆದಲ್ಲಿ, ಓದು ಮತ್ತು ಬರಹ ಸಲೀಸೆನಿಸಿ ಹಲವಾರು ಮಕ್ಕಳು ಕಲಿಕೆಯಲ್ಲಿ ಮುಂಬರಲು ತೊಡಗುತ್ತಾರೆ. ಮುಂದಿನ ದಿನಗಳಲ್ಲಿ ಈ ಮಕ್ಕಳೇ ಕನ್ನಡವನ್ನು ಹಲವೆಡೆಗಳಲ್ಲಿ ಬಳಸಲು ತೊಡಗುತ್ತಾರೆ. ಇಂತಹ ಕಗ್ಗಂಟು ಬಿಡಿಸುವ ಕೆಲಸವನ್ನು ಇತರೆ ನಾಡುಗಳೂ ಮಾಡಿವೆ ಮತ್ತದರ ಒಳ್ಳೆ ಪಸಲನ್ನು ಉಂಡಿವೆ, ನಾವು ಕಣ್ತೆರೆದು ನೋಡಬೇಕಶ್ಟೇ.

(ಚಿತ್ರ ಸೆಲೆ: 123rf.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: