ಕನ್ನಡ ಬರಹಗಾರರ ಕೀಳರಿಮೆ

– ಡಿ.ಎನ್.ಶಂಕರ ಬಟ್.

dnsಹಿಂದಿನ ಕಾಲದಲ್ಲಿ ಕನ್ನಡದ ಬರಹಗಾರರ ಮಟ್ಟಿಗೆ ಸಂಸ್ಕ್ರುತ ಬರಹವು ತಿಳಿವಿನ ಕಣಜವಾಗಿತ್ತು ಮತ್ತು ಹೊಸ ಹೊಸ ತಿಳಿವುಗಳ ಚಿಲುಮೆಯಾಗಿತ್ತು. ಹಾಗಾಗಿ, ಅವರು ಸಂಸ್ಕ್ರುತ ಬರಹವನ್ನು ತುಂಬಾ ತಕ್ಕುಮೆಯಿಂದ ಕಂಡರು ಮತ್ತು ಕನ್ನಡದ ಕುರಿತಾಗಿ ಕೀಳರಿಮೆಯನ್ನು ಬೆಳಿಸಿಕೊಂಡರು. ಸಂಸ್ಕ್ರುತ ಬರಹಗಳಲ್ಲಿದ್ದ ತಿಳಿವುಗಳನ್ನು ಕನ್ನಡ ಬರಹಕ್ಕಿಳಿಸುವಾಗ ಅವುಗಳೊಂದಿಗೆ ಸಾವಿರಾರು ಸಂಸ್ಕ್ರುತ ಪದಗಳನ್ನೂ ಎಗ್ಗಿಲ್ಲದೆ ಎರವಲು ಪಡೆದುಕೊಂಡರು. ಈ ಸಂದರ‍್ಬದಲ್ಲಿ ಕನ್ನಡ ಬರಹ ಮುಕ್ಯವಾಗಿ ಮೂರು ಬಗೆಯ ತೊಡಕುಗಳಿಗೆ ಒಳಗಾಯಿತು.

ಮೊದಲನೆಯದಾಗಿ, ಸಂಸ್ಕ್ರುತ ಎರವಲು ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಕನ್ನಡದಲ್ಲೂ ಬರೆಯಬೇಕೆಂಬ ಕಟ್ಟಲೆಯೊಂದನ್ನು ಹಾಕಿಕೊಂಡರು ಮತ್ತು ಇದಕ್ಕಾಗಿ ಕನ್ನಡ ಬರಹದಲ್ಲಿ ಮಹಾಪ್ರಾಣ, ’ಷ’ಕಾರ, ’ಋ’ಕಾರ ಮೊದಲಾದ ಹತ್ತಿಪ್ಪತ್ತು ಹೆಚ್ಚಿನ ಬರಿಗೆಗಳನ್ನು ಬಳಸತೊಡಗಿದರು. ಹಿಂದಿನ ಕಾಲದ ತಿಳಿವಿಗರಿಗೆ ಸಂಸ್ಕ್ರುತದ ಮೇಲಿದ್ದ ಹೆಚ್ಚಿನ ತಕ್ಕುಮೆಯೇ ಅವರು ಇಂತಹದೊಂದು ಕಟ್ಟಲೆಯನ್ನು ಹಾಕಿಕೊಳ್ಳಲು ಮುಕ್ಯ ಕಾರಣವಾಗಿತ್ತು. ಕನ್ನಡಿಗರ ಉಲಿಪಿನಲ್ಲಿ ಈ ಹೆಚ್ಚಿನ ಬರಿಗೆಗಳು ಉಳಿದ ಬರಿಗೆಗಳಿಂದ ಬೇರಾಗಿರಲಿಲ್ಲವಾದುದರಿಂದ, ನಿಜಕ್ಕೂ ಕನ್ನಡದ ಮಟ್ಟಿಗೆ ಅನವಶ್ಯಕವಾಗಿದ್ದ ಈ ಕಟ್ಟಲೆ ಕನ್ನಡ ಬರಹವನ್ನು ಕಲಿಯುವಲ್ಲಿ ಮತ್ತು ಬಳಸುವಲ್ಲಿ ಇವತ್ತು ಒಂದು ದೊಡ್ಡ ತೊಡಕಾಗಿದೆ.

ಎರಡನೆಯದಾಗಿ, ಕನ್ನಡ ನುಡಿಯಲ್ಲಿಲ್ಲದಂತಹ ಹಲವಾರು ಸಂಸ್ಕ್ರುತ ಎರವಲುಗಳು ಕನ್ನಡ ಬರಹಗಳಲ್ಲಿ ಬಳಕೆಯಾಗತೊಡಗಿದುದರಿಂದಾಗಿ ಈ ಬರಹಗಳು ಹೆಚ್ಚಿನ ಕನ್ನಡಿಗರೂ ಆಡುತ್ತಿದ್ದ ನುಡಿಯಿಂದ ತೀರಾ ಬೇರಾಗಿ ಕಾಣಿಸತೊಡಗಿತು. ಅವನ್ನು ಕಲಿಯುವ ಮತ್ತು ಬಳಸುವ ಕೆಲಸದಲ್ಲಿ ಇದು ಇನ್ನೊಂದು ಬಗೆಯ ತೊಡಕನ್ನು ತಂದೊಡ್ಡಿತು. ಇದನ್ನು ಎದುರಿಸಲಾಗದ ಕೆಳವರ‍್ಗದ ಮಂದಿ ಬರಹದಿಂದ ದೂರವೇ ಉಳಿಯಬೇಕಾಯಿತು.

ಮೂರನೆಯದಾಗಿ, ಕೋರಯ್ಸುವಂತಿದ್ದ ಸಂಸ್ಕ್ರುತ ವ್ಯಾಕರಣದಿಂದ ಕುರುಡಾಗಿದ್ದ ಕನ್ನಡ ವಯ್ಯಾಕರಣಿಗಳು ಅದರಲ್ಲಿದ್ದ ಕಟ್ಟಲೆಗಳನ್ನೆಲ್ಲ ಹಾಗೆಯೇ ಕನ್ನಡಕ್ಕೆ ಅಳವಡಿಸಿರುವಂತಹ ವ್ಯಾಕರಣವೊಂದನ್ನು ಕನ್ನಡದ ತಲೆಗೆ ಕಟ್ಟಿದರು. ಈ ’ಕನ್ನಡ ವ್ಯಾಕರಣ’ ದಲ್ಲಿ ಹೆಚ್ಚಿನ ಕಟ್ಟಲೆಗಳೂ ಸಂಸ್ಕ್ರುತದವೇ ಆಗಿದ್ದುವು. ಕನ್ನಡದ ಪದ ಮತ್ತು ಸೊಲ್ಲುಗಳನ್ನು ಉಂಟುಮಾಡುವಲ್ಲಿ ಇವಕ್ಕಿಂತ ತೀರಾ ಬೇರಾಗಿರುವ ಕಟ್ಟಲೆಗಳು ಬಳಕೆಯಾಗುತ್ತಿದ್ದುದರಿಂದ, ಈ ಸಂಸ್ಕ್ರುತದ ಕಟ್ಟಲೆಗಳನ್ನು ಕನ್ನಡದವೆಂದು ತಪ್ಪಾಗಿ ಹೇಳಿಕೊಡುವ ಕನ್ನಡ ವ್ಯಾಕರಣಗಳು ಕನ್ನಡಿಗರ ಮಟ್ಟಿಗಂತೂ ಕಬ್ಬಿಣದ ಕಡಲೆಯಾಗಿಯೇ ಉಳಿದುವು.

ಕನ್ನಡ ಬರಹವನ್ನು ಎಲ್ಲ ಕನ್ನಡಿಗರೂ ಬಳಸುವ ಹಾಗೆ ಮಾಡುವುದಕ್ಕಾಗಿ ನಾವು ಇವತ್ತು ಈ ಮೂರು ಬಗೆಯ ತೊಡಕುಗಳನ್ನೂ ನೀಗಬೇಕಾಗಿದೆ; ಕನ್ನಡಕ್ಕೆ ಬೇಡದಿದ್ದ ಮಹಾಪ್ರಾಣ, ’ಷ’ಕಾರ ಮೊದಲಾದ ಬರಿಗೆಗಳನ್ನು ಬಿಟ್ಟುಕೊಡಬೇಕಾಗಿದೆ ಮತ್ತು ಪದಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆಯೇ ಬರೆಯುವಂತಾಗಬೇಕಾಗಿದೆ; ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳ ಎಣಿಕೆಯನ್ನು ಆದಶ್ಟು ಕಡಿಮೆ ಮಾಡಬೇಕಾಗಿದೆ ಮತ್ತು ಕನ್ನಡದ್ದೇ ಆದ ವ್ಯಾಕರಣದ ಕಟ್ಟಲೆಗಳು ಎಂತಹವು ಎಂಬುದನ್ನು ಕಂಡುಹಿಡಿದು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸದಲ್ಲಿ ಅವನ್ನು ಬಳಸಿಕೊಳ್ಳುವಂತಾಗಬೇಕಾಗಿದೆ.

ಇವುಗಳಲ್ಲಿ ಎರಡನೆಯ ಕೆಲಸ ಮುಕ್ಯವೆಂದು ಮನಗಂಡಿದ್ದ ಸೂಳ್ನುಡಿಗರು (ವಚನಕಾರರು) ತಮ್ಮ ಸೂಳ್ನುಡಿಗಳಲ್ಲಿ ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸಿ ಅವು ಎಲ್ಲ ಜನರನ್ನೂ ತಲಪುವ ಹಾಗೆ ಮಾಡಿದ್ದರು ಮತ್ತು ಇವತ್ತು ತಮ್ಮ ಬರಹಗಳು ಹೆಚ್ಚಿನ ಓದುಗರನ್ನೂ ತಲಪಬೇಕೆಂಬ ತುಡಿತವಿರುವ ಕತೆ, ಕಾದಂಬರಿಗಳ ಬರಹಗಾರರೂ ತುಂಬಾ ಕಡಿಮೆ ಸಂಸ್ಕ್ರುತ ಎರವಲುಗಳನ್ನು ಬಳಸುವ ಮೂಲಕ ತಮ್ಮ ಗುರಿಯನ್ನು ತಲಪುತ್ತಿದ್ದಾರೆ.

ಇವತ್ತು ಸಂಸ್ಕ್ರುತ ಬರಹ ತನ್ನ ಹೆಚ್ಚುಗಾರಿಕೆಯನ್ನು ಕಳೆದುಕೊಂಡಿದೆ. ಅದರಲ್ಲಿ ಇವತ್ತು ಯಾವ ಬಗೆಯ ಹೊಸ ತಿಳಿವುಗಳನ್ನೂ ಉಂಟುಮಾಡುತ್ತಾ ಇಲ್ಲ ಮತ್ತು ಅದರಲ್ಲಿದ್ದ ಹಳೆಯ ತಿಳಿವುಗಳಲ್ಲಿ ಹೆಚ್ಚಿನವೂ ಈಗಾಗಲೇ ಕನ್ನಡಕ್ಕೆ ಹರಿದುಬಂದಿವೆ. ಹಾಗಾಗಿ, ಇವತ್ತು ಕನ್ನಡ ಬರಹ ಸಂಸ್ಕ್ರುತದಿಂದ ಪಡೆಯುವಂತಹದು ಹೆಚ್ಚಿನದೇನೂ ಇಲ್ಲವೆಂದೇ ಹೇಳಬಹುದು. ಇವತ್ತು ನಮಗೆ ಬೇಕಾಗಿರುವ ಹೆಚ್ಚಿನ ತಿಳಿವುಗಳೂ ಇಂಗ್ಲಿಶ್ ಬರಹದಲ್ಲಿವೆ ಮತ್ತು ಹೊಸ ಹೊಸ ತಿಳಿವುಗಳು ಇವತ್ತು ಆ ಬರಹದಲ್ಲೇ ಮೂಡಿಬರುತ್ತಿವೆ.

ಆದರೆ, ಈ ಕಾರಣಕ್ಕಾಗಿ ಇಂಗ್ಲಿಶ್ ನುಡಿಗೆ ಹಿಂದೆ ಸಂಸ್ಕ್ರುತಕ್ಕೆ ಕೊಡುತ್ತಿದ್ದಂತಹ ತಕ್ಕುಮೆಯನ್ನು ಕೊಡುವ ಮೊದಲು ಕನ್ನಡ ಬರಹ ಇನ್ನೊಮ್ಮೆ ಹಿಂದಿನಂತಹವೇ ತೊಡಕುಗಳಿಗೆ ಒಳಗಾಗದ ಹಾಗೆ ನೋಡಿಕೊಳ್ಳಬೇಕಾಗಿದೆ. ಎತ್ತುಗೆಗಾಗಿ, ಇವತ್ತು ಇಂಗ್ಲಿಶ್ ಕಲಿಕೆಗೆ ಒತ್ತುಕೊಡುವ ಆತುರದಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ಆದರೆ, ಇದು ಸರಿಯಲ್ಲ. ಯಾಕೆಂದರೆ, ಕನ್ನಡ ಬರಹದಲ್ಲಿ ಸರಿಯಾದ ಅಡಿಗಟ್ಟನ್ನು ಪಡೆಯದವರು ಇಂಗ್ಲಿಶ್ ಬರಹದ ಕಲಿಕೆಯಲ್ಲೂ ಸರಿಯಾಗಿ ಮುಂದುವರಿಯಲಾರರು.

ಇವತ್ತಿನ ಪರಿಸ್ತಿತಿ ಹೀಗಿದ್ದರೂ, ಸಂಸ್ಕ್ರುತಕ್ಕೆ ಹಿಂದಿದ್ದ ಹೆಚ್ಚುಗಾರಿಕೆಯನ್ನು ಮುಂದೆಯೂ ಉಳಿಸಿಕೊಂಡು ಹೋಗಬೇಕೆಂಬ ಹಟದಲ್ಲಿ ಕೆಲವು ಮಂದಿ ಕನ್ನಡಿಗರು ತಪ್ಪು ಕಲ್ಪನೆಗಳನ್ನು ಹರಿಯಬಿಟ್ಟು ಕನ್ನಡಿಗರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಇತ್ತೀಚೆಗೆ ಎಸ್.ಎಲ್. ಬಯ್ರಪ್ಪನವರು ಕೊಟ್ಟ ಕೆಲವು ಹೇಳಿಕೆಗಳು ಇಂತಹವೇ ಆಗಿವೆ.

”ಸಂಸ್ಕ್ರುತ ಪದಗಳನ್ನು ’ಸರಿಯಾಗಿ’ ಉಲಿದಲ್ಲಿ ಬುದ್ದಿಶಕ್ತಿ ಹೆಚ್ಚುತ್ತದೆ,” ಎಂಬುದು ಇಂತಹ ಒಂದು ತಪ್ಪು ಹೇಳಿಕೆ. ಯಾಕೆಂದರೆ, ಪದಗಳ ಉಲಿಪಿಗೂ, ಬುದ್ದಿಶಕ್ತಿಗೂ ಯಾವ ಸಂಬಂದವೂ ಇಲ್ಲ. ಇದಲ್ಲದೆ, ಉಲಿಯರಿಗರು ಸಾವಿರಕ್ಕೂ ಹೆಚ್ಚು ಉಲಿಗಳನ್ನು ಸರಿಯಾಗಿ ಉಲಿಯಬಲ್ಲರು; ಆದರೆ, ಇದರಿಂದಾಗಿ ಅವರ ಬುದ್ದಿಶಕ್ತಿಯಲ್ಲಿ ಹೆಚ್ಚಳವಾಗಿದೆಯೆಂದೇನೂ ಹೇಳಲು ಬರುವುದಿಲ್ಲ.

”ಕನ್ನಡ ನುಡಿಯಲ್ಲಿ ನೂರಕ್ಕೆ ಎಂಬತ್ತರಶ್ಟು ಪದಗಳು ಸಂಸ್ಕ್ರುತದವು” ಎಂಬುದು ಅವರ ಇನ್ನೊಂದು ತಪ್ಪು ಹೇಳಿಕೆ; ಯಾಕೆಂದರೆ, ಅಶ್ಟೊಂದು ಸಂಸ್ಕ್ರುತ ಪದಗಳ ಬಳಕೆಯಾಗಿರುವುದು ಕಾವ್ಯ, ವಿಮರ‍್ಶೆ ಮತ್ತು ಅರಿಮೆಯ (ವಿಜ್ನಾನದ) ಬರಹದಂತಹ ಕೆಲವು ಬಗೆಯ ಬರಹಗಳಲ್ಲಿ ಮಾತ್ರ; ಕತೆ, ಕಾದಂಬರಿ, ದಿನಪತ್ರಿಕೆ ಮೊದಲಾದ ಬೇರೆ ಹಲವು ಬಗೆಯ ಬರಹಗಳಲ್ಲಿ ಇದಕ್ಕಿಂತ ತುಂಬಾ ಕಡಿಮೆ ಸಂಸ್ಕ್ರುತ ಪದಗಳು ಕಾಣಿಸಿಕೊಳ್ಳುತ್ತವೆ. ಕನ್ನಡಿಗರ ನುಡಿಯಲ್ಲಂತೂ ಇನ್ನಶ್ಟು ಕಡಿಮೆ (ಹೆಚ್ಚೆಂದರೆ ನೂರಕ್ಕೆ ಅಯ್ದರಶ್ಟು) ಸಂಸ್ಕ್ರುತ ಪದಗಳು ಬಳಕೆಯಾಗುತ್ತವೆ ಮತ್ತು ಈ ಎರವಲು ಪದಗಳು ಕನ್ನಡದ ಸೊಗಡನ್ನು ಉಳಿಸಿಕೊಳ್ಳುವಂತೆ ಹಲವು ಬಗೆಗಳಲ್ಲಿ ಮಾರ‍್ಪಟ್ಟಿರುತ್ತವೆ.

”ಕನ್ನಡ ವ್ಯಾಕರಣದಲ್ಲಿ ನೂರಕ್ಕೆ ತೊಂಬತ್ತರಶ್ಟು ಸಂಸ್ಕ್ರುತವಿದೆ,” ಎಂಬ ಅವರ ಇನ್ನೊಂದು ಹೇಳಿಕೆ ಕನ್ನಡದ ಮೇಲೆ ಹಿಂದಿನ ವಯ್ಯಾಕರಣಿಗಳು ಬರೆದಿರುವ ’ವ್ಯಾಕರ ಣ’ದ ಕುರಿತಾಗಿದೆಯಾದರೆ ಸರಿ; ಆದರೆ, ಕನ್ನಡದ ಪದ ಮತ್ತು ಸೊಲ್ಲುಗಳ ರಚನೆಯ ಹಿಂದಿರುವ ವ್ಯಾಕರಣದ ಕುರಿತಾಗಿದೆಯಾದರೆ ಅದು ಸರಿಯಲ್ಲ. ಯಾಕೆಂದರೆ, ಇವತ್ತಿನ ಹೊಸಗನ್ನಡದಲ್ಲಾಗಲಿ, ಇಲ್ಲವೇ ಹಿಂದಿನ ಹಳೆಗನ್ನಡದಲ್ಲಾಗಲಿ ಬಳಕೆಯಾಗುವ ಪದ ಮತ್ತು ಸೊಲ್ಲುಗಳ ರಚನೆಯ ಹಿಂದಿರುವ ಕಟ್ಟಲೆಗಳು ಈ ವಯ್ಯಾಕರಣಿಗಳು ಬರೆದ ವ್ಯಾಕರಣಗಳಲ್ಲಿ ಬಂದಿರುವ ಕಟ್ಟಲೆಗಳಿಂದ ತೀರಾ ಬೇರಾಗಿವೆ.

”ಕನ್ನಡವನ್ನು ಕಲಿಸುವವರಿಗೆ ಕನ್ನಡ ನುಡಿಯ ಅರಿವಿಲ್ಲದಿರುವುದಕ್ಕೆ ಅವರು ಸಂಸ್ಕ್ರುತವನ್ನು ಕಲಿಯದಿರುವುದೇ ಕಾರಣ,” ಎಂಬ ಬಯ್ರಪ್ಪನವರ ಇನ್ನೊಂದು ಹೇಳಿಕೆಯೂ ಸರಿಯಲ್ಲ. ಇದು ತಪ್ಪು-ಯಾಕೆಂದರೆ, ಕನ್ನಡವನ್ನು ಸರಿಯಾಗಿ ತಿಳಿಯಲು ಕನ್ನಡವನ್ನೇ ಸರಿಯಾಗಿ ಕಲಿತುಕೊಳ್ಳಬೇಕಲ್ಲದೆ ಸಂಸ್ಕ್ರುತವನ್ನಲ್ಲ;

ಕನ್ನಡ ನುಡಿ ಸಂಸ್ಕ್ರುತಕ್ಕಿಂತ ತೀರಾ ಬೇರಾಗಿರುವ ಕಾರಣ, ಅದರ ತಿಳಿವನ್ನು ಪಡೆಯುವಲ್ಲಿ ಸಂಸ್ಕ್ರುತದ ಕಲಿಕೆ ಯಾವ ನೆರವನ್ನೂ ನೀಡಲಾರದು. ಕೆಲವು ಬಗೆಯ ಕನ್ನಡ ಬರಹಗಳಲ್ಲಿ ತುಂಬಾ ಸಂಸ್ಕ್ರುತ ಎರವಲು ಬರುತ್ತಿರುವುದರಿಂದ ಅವರು ಈ ಹೇಳಿಕೆಯನ್ನು ಕೊಟ್ಟಿರಬಹುದು; ಆದರೆ, ಅಂತಹ ಎರವಲುಗಳನ್ನು ಕಡಿಮೆ ಮಾಡುವತ್ತ ಮತ್ತು ಅವಕ್ಕೆ ಬದಲಾಗಿ ಕನ್ನಡದವೇ ಆದ ಪದಗಳನ್ನು ಬಳಸುವತ್ತ ನಮ್ಮ ಗಮನ ಹರಿಯಬೇಕಲ್ಲದೆ, ಸಂಸ್ಕ್ರುತದ ಕಲಿಕೆಯ ಕಡೆಗಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: