ಪರಿಸರದ ನುಡಿಯಲ್ಲಿ ಕಲಿತ ಬಾರತ ರತ್ನಗಳಿವರು

ರಗುನಂದನ್.

Receiving Bharat Ratna - Abdul Kalam

ಬಾರತ ಸರ‍್ಕಾರ 16/11/2013 ರಂದು ಡಾ || ಸಿ. ಎನ್. ಆರ್‍. ರಾವ್ ಮತ್ತು ಸಚಿನ್ ತೆಂಡುಲ್ಕರ‍್ ಅವರನ್ನು ’ಬಾರತ ರತ್ನ’ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ಹೆಸರುವಾಸಿ ಅರಿಗರಾದ ಡಾ || ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ ಅವರು ಕನ್ನಡಿಗರೆಂಬುದು ಹೆಮ್ಮೆ ಪಡಬೇಕಾದಂತಹ ವಿಚಾರ. ಸರ್‍. ಎಂ. ವಿಶ್ವೇಶ್ವರಯ್ಯ ಮತ್ತು ಪಂಡಿತ ಬೀಮಸೇನ ಜೋಶಿಯವರ ಬಳಿಕ ’ಬಾರತ ರತ್ನ’ ಮೆಚ್ಚುಗೆಯನ್ನು ಪಡೆದ ಮೂರನೇ ಕನ್ನಡಿಗ ಡಾ || ರಾವ್. 79 ವರುಶ ತುಂಬಿರುವ ರಾವ್‍ರವರು ಇದುವರೆಗೂ 1500 ಕ್ಕೂ ಹೆಚ್ಚು ಅರಕೆಹಾಳೆಗಳನ್ನು (Journal Papers) ಬರೆದಿದ್ದಾರೆ. ಗಟ್ಟಿ ಇರವಿನ ಪುರುಳರಿಮೆ(solid state physics) ಮತ್ತು ಅಡಕಗಳ ಎಸರಿನರಿಮೆಯಲ್ಲಿ (materials chemistry) ಇವರು ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿದ್ದಾರೆ. ಇವರು 45 ಕ್ಕೂ ಹೆಚ್ಚು ಹೊತ್ತಗೆಗಳನ್ನು ಬರೆದಿದ್ದಾರೆ. ಅರಕೆಯ ಮಾಳದಲ್ಲಿ ಒಬ್ಬ ಅರಕೆಗಾರನ ಅಳತೆಗೋಲನ್ನು h-index ತಿಳಿಸುತ್ತದೆ. ಡಾ || ರಾವ್ ಅವರ h-index ನೂರಕ್ಕಿಂತ ಮೇಲಿರುವುದು ಇವರೆಂತಹ ಮೇರು ಅರಿಗರೆಂದು ತಿಳಿಸಿಕೊಡುತ್ತದೆ.

ಇವರು ಕನ್ನಡಿಗರೆಂದು ಬರಿ ಹೆಮ್ಮೆ ಪಡುವುದಶ್ಟೆ ಸಾಲದು. ಇಂತಹ ಮೇಲ್ಸಾದನೆಯನ್ನು ಮಾಡಿರುವ ರಾವ್ ಅವರು ತಮ್ಮ ಮೊದಲ ಹಂತದ ಕಲಿಕೆಯನ್ನು ತಮ್ಮ ತಾಯ್ನುಡಿಯಾದ ಕನ್ನಡದಲ್ಲಿ ಮಾಡಿದ್ದರು ಎಂಬುದು ಗಮನಿಸಬೇಕಾದ ವಿಶಯ. ರಾವ್ ಅವರ ತಂದೆ ತಮ್ಮ ಮಗನಿಗೆ ಮೊದಲ ಹಂತದ ಕಲಿಕೆಯನ್ನು ಕನ್ನಡದಲ್ಲಿಯೇ ಮಾಡಲು ಹುರಿದುಂಬಿಸಿದ್ದರು. ’ಬಾರತ ರತ್ನ’ ಪಡೆದವರಲ್ಲಿ ಬರಿ ಡಾ || ರಾವ್ ಮಾತ್ರ ತಮ್ಮ ತಾಯ್ನುಡಿ/ಪರಿಸರದ ನುಡಿಯಲ್ಲಿ ಕಲಿತವರಲ್ಲ. ಕೆಳಗಿನ ಪಟ್ಟಿಯನ್ನು ಒಮ್ಮೆ ನೋಡಿರಿ:

barata-ratna-kalike-nudi

ಮೇಲಿನ ಪಟ್ಟಿಯನ್ನು ನೋಡಿದರೆ ಒಂದು ವಿಶಯ ಗೊತ್ತಾಗುತ್ತದೆ. ಅರಿಮೆಯ ವಿಶಯಕ್ಕಾಗಿ ’ಬಾರತ ರತ್ನ’ ಪಡೆದವರು ತಮ್ಮ ಮೊದಲ ಹಂತದ ಕಲಿಕೆಯನ್ನು ತಮ್ಮ ಪರಿಸರದ ನುಡಿಯಲ್ಲಿಯೇ ಮಾಡಿದ್ದಾರೆಂಬುದು. ಈ ವಿಚಾರವು ಇಂಡಿಯಾಗೆ ಮಾತ್ರ ಸೀಮಿತವಾಗುವುದಿಲ್ಲ. ನೊಬೆಲ್ ಮೆಚ್ಚುಗೆ ಪಡೆಯುವ ಹೆಚ್ಚಿನ ಅರಿಗರೂ ಕೂಡ ಬರಿ ಮೊದಲನೇ ಹಂತವಲ್ಲದೇ ಇಡೀ ಓದನ್ನೇ ತಮ್ಮ ತಾಯ್ನುಡಿಯಲ್ಲಿ ಮಾಡಿರುತ್ತಾರೆ. ಅರಿಮೆ ಮತ್ತು ಚಳಕರಿಮೆಯಲ್ಲಿ ಮೇಲ್ಮಟ್ಟದ ಸಾದನೆ ಮಾಡಬೇಕಾದರೆ ತಾಯ್ನುಡಿ ಮಾದ್ಯಮದ ಕಲಿಕೆಯೇ ಗಟ್ಟಿಯಾದ ಅಡಿಪಾಯವನ್ನು ಹಾಕಿಕೊಡುತ್ತದೆ ಎಂಬುದು ನಾವು ಅರಿಯಬೇಕಾದ ವಿಚಾರ.

ಕನ್ನಡ ಮಾದ್ಯಮದಲ್ಲಿ ಓದಿದರೆ ಮಕ್ಕಳ ಮುಂಬಾಳು ಚೆನ್ನಾಗಿರುವುದಿಲ್ಲ ಮತ್ತು ಇಂಗ್ಲಿಶ್ ಸರಿಯಾಗಿ ಕಲಿಯುವುದಿಲ್ಲ ಎಂಬ ಕಾರಣಕ್ಕಾಗಿ ಇಂದು ಎಶ್ಟೋ ಮಂದಿ ಕನ್ನಡಿಗರು ತಮ್ಮ ಮಕ್ಕಳನ್ನು ಇಂಗ್ಲಿಶ್ ಮಾದ್ಯಮಕ್ಕೆ ಸೇರಿಸುತ್ತಾರೆ. ಈ ತಾಯ್ನುಡಿ ಕಲಿಕೆಯ ಸಾದನೆಗಳನ್ನು ನೋಡಿದ ಮೇಲಾದರೂ ಮಕ್ಕಳಿಗೆ ಇಂಗ್ಲಿಶ್ ಮಾದ್ಯಮದಲ್ಲೇ ಮೊದಲ ಹಂತದ ಕಲಿಕೆ ಕೊಡಿಸಬೇಕೇ ಎಂದು ತಂದೆತಾಯಂದಿರು ಯೋಚಿಸಬೇಕಿದೆ.

(ಚಿತ್ರ ಸೆಲೆ: colorlibrary.blogspot.com)

1 ಅನಿಸಿಕೆ

  1. ಪರಿಸರದ ನುಡಿಯನ್ನೇ ವಿಜ್ಞಾನ, ತಂತ್ರಜ್ಞಾನ ಪದವಿ ಮತ್ತು ಉನ್ನತ ಶಿಕ್ಷಣದಲ್ಲಿ ಬಳಸಿದ ನಾಡುಗಳೆಲ್ಲಾ ಆರ್ಥಿಕವಾಗಿ ಸಬಲವಾಗಿರುವಾಗ ನಮ್ಮ ನಾಡಿನ ಜನರೇಕೆ ಕನ್ನಡ ಮಾಧ್ಯಮವನ್ನು ದೂರ ಮಾಡಲು ಪ್ರಯತ್ನಿಸುತ್ತಾರೆ ಎಂಬುದು ಯಕ್ಷಪ್ರಶ್ನೆ. ಬಹುಶಃ ನಮ್ಮ ನಾಡಿನ ಜನರಿಗೆ ಈ ವಿಷಯದಲ್ಲಿ ಸರಿಯಾದ ಅರಿವಿಲ್ಲದೇ ಇರಬಹುದು. ನಮ್ಮಲ್ಲೂ ವಿಜ್ಞಾನ, ತಂತ್ರಜ್ಞಾನದಂತಹ ವಿಷಯಗಳು ಪದವಿ, ಉನ್ನತ ಶಿಕ್ಷಣ ಮತ್ತು ಸಂಶೋಧನೆಗಳಲ್ಲಿ ಬಳಸಲ್ಪಡುತ್ತಿದ್ದರೆ, ಭಾರತ ರತ್ನ ಪಡೆದವರ ಸಾಲಿನಲ್ಲಷ್ಟೇ ಅಲ್ಲ, ನೊಬೆಲ್ ಪ್ರಶಸ್ತಿ ಪಡೆದವರ ಪಟ್ಟಿಯಲ್ಲೂ ಕನ್ನಡದವರ ಹೆಸರು ಖಂಡಿತ ಇರುತ್ತಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.