ದಾರಿಯಾವುದಯ್ಯ ಕನ್ನಡ ಚಿಂತನೆಗೆ?

– ಮೇಟಿ ಮಲ್ಲಿಕಾರ್‍ಜುನ.

Kannada1

ಒಂದೊಂದು ವರುಶವೂ ಕೂಡ ನವಂಬರ್ ತಿಂಗಳು ಕನ್ನಡ ನುಡಿ ಕುರಿತು ಚಿಂತಿಸುವ, ಯೋಚಿಸುವ ಹೆಚ್ಚುಗಾರಿಕೆಯನ್ನು ಪಡೆದಿದೆ. ದಿಟ, ಇಡೀ ಲೋಕದಲ್ಲಿಯೇ ಹೀಗೆ ನುಡಿ ಇಲ್ಲವೇ ಯಾವುದೇ ಸಾಮಾಜಿಕ-ಸಾಂಸ್ಕ್ರುತಿಕ ಸಂಗತಿಗಳನ್ನು ಕೊಂಡಾಡುವುದಕ್ಕಾಗಿಯೇ ಒಂದೊಂದು ದಿನವನ್ನು ಗೊತ್ತುಪಡಿಸಿರುತ್ತಾರೆ.

ಯಾವುದು ಗತದ ನೆನಪಿನ ಸಂಕೇತವಾಗಿರುತ್ತದಿಯೋ? ಅದು ಯಾವಾಗಲೂ ಆಚರಣೆಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಇಂತಹ ಆಚರಣೆಗಳು ಚರಿತ್ರೆಯ ಯಾವುದೇ ಬಗೆಯ ಚಾರಿತ್ರಿಕ ತಿಳಿವು ಇಲ್ಲವೇ ನಂಟಸ್ತಿಕೆಯ ಹಿರಿಮೆಯನ್ನು ಹೆಚ್ಚಿಸುವ ಇರಾದೆಯನ್ನು ಹೊಂದಿರಲಾವು. ಮತ್ತು  ಆ ಮೂಲಕ ಈ ಹೊತ್ತಿನ  ಬದುಕಿನ ಏಳ್ಗೆಯ ಬಗೆಗಿನ ಚಿಂತನೆಗಳಾಗಿ ಮಯ್ಪಡೆಯುವುದಿಲ್ಲ. ಯಾವಾಗಲೋ ಕಂಡ ಕನಸನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಆನಂದಿಸುವ ಇಲ್ಲವೇ ಆತಂಕಪಡುವ ರೀತಿಯಲ್ಲಿ ಇಂತಹ ಕನಸುಗಳು ನೆರವಾಗುತ್ತವೆ ಹಾಗೂ ಅಂತಹ ಉದ್ದೇಶಕ್ಕಾಗಿಯೇ ಅವು ಮುಂದುವರೆಯುತ್ತವೆ.

ಈಗ ಕನ್ನಡಕ್ಕೆ ಬೇಕಿರುವುದು ಕೇವಲ ಈ ಹಳೆ ಕನುಸುಗಳ ಹಳಹಳಿಕೆಯಲ್ಲ. ಬದಲಾಗಿ ಹೊಸ ಕನುಸುಗಳನ್ನು ಕಾಣುವ ಮತ್ತು ಅವುಗಳನ್ನು ಈಡೇರಿಸಿಕೊಳ್ಳುವ ತುಡಿತವನ್ನುಂಟು ಮಾಡುವ ಅಗತ್ಯವಿದೆ. ಈ ತುಡಿತಗಳೇ ಆಯಾ ಜನರ ನುಡಿಗಳ ಮೂಲಕ ಅವರ ಬದುಕಿನ ಅಗತ್ಯಗಳನ್ನು ಪೂರಯ್ಸಿಕೊಳ್ಳುವುದಕ್ಕೆ ಕಾರಣವಾಗುತ್ತವೆ. ತಮ್ಮ ನುಡಿಗಳ ಮೂಲಕವೇ ತಮ್ಮ ಬದುಕಿನ ದಾರಿಗಳನ್ನು ಸಜ್ಜುಗೊಳಿಸಲು ಸಾದ್ಯವಾಗುತ್ತದೆ. ಕರ್‍ನಾಟಕ ಸಮುದಾಯಗಳ ಬದುಕಿನ ಕನಸುಗಳನ್ನು ನನಸಾಗಿಸುವ ದಾರಿಗಳು ಹೀಗೆ ರೂಪುಗೊಳ್ಳುತ್ತವೆ. ಅಂದರೆ ಕನ್ನಡ ನುಡಿಯೂ ಜನರ ಆಶೋತ್ತರಗಳನ್ನು ಈಡೇರಿಸಲು ಸಜ್ಜುಗೊಳ್ಳಬೇಕು ಎಂಬುದೇ ಈ ಮಾತಿನ ತಿರುಳು.

ನುಡಿಗಳನ್ನು ಸಜ್ಜುಗೊಳಿಸುವುದು ಎಂದರೇನು? ಹಾಗೂ ಅವುಗಳನ್ನು ಹೇಗೆ ಸಜ್ಜುಗೊಳಿಸಬೇಕು? ಈ ಎರಡೂ ಕೇಳ್ವಿಗಳು ಇಲ್ಲಿ ಕೇವಲ ರೆಟರಿಕ್‍ ಆಗಿ ಕೇಳಿಸಬಹುದು, ಆದರೆ ಅವು ಹಾಗಿಲ್ಲ. ಅಂದರೆ ನುಡಿಗಳ ಬೆಳವಣಿಗೆಯೇ ಜನರ ಬೆಳವಣಿಗೆಯೂ ಆಗಿರಬೇಕು ಅನ್ನುವ ನೆಲೆಯೇ ನುಡಿಗಳನ್ನು ಸಜ್ಜುಗೊಳಿಸುವ ಬಗೆಯಾಗಿರುತ್ತದೆ. ಬಹುತೇಕವಾಗಿ ನುಡಿಗಳ ಬೆಳವಣಿಗೆ ಎಂಬುದು ಆಯಾ ದೇಶದ ನುಡಿ ನೀತಿ ಹಾಗೂ ನುಡಿ ಯೋಜನೆಗಳೊಂದಿಗೆ ತಳುಕು ಹಾಕಿಕೊಂಡಿರುತ್ತವೆ. ಹಾಗಾಗಿಯೇ ಕನ್ನಡದಂತಹ ನುಡಿಗಳಿಗೆ ಸಂವಿದಾನದ ಮೂಲಕ ಸವಲತ್ತು ಮತ್ತು ಅವಕಾಶಗಳು ತಾತ್ವಿಕವಾಗಿ ಸಿಕ್ಕಿರುತ್ತವೆ.

ಆಚರಣೆಯ ನೆಲೆಗೆ ಬಂದಾಗ ಸಂವಿದಾನದಿಂದ ಸವಲತ್ತು, ಹಕ್ಕು ಹಾಗೂ ಅವಕಾಶಗಳನ್ನು ಪಡೆದಿರುವ ಕನ್ನಡದಂತಹ ನುಡಿಗೂ ಹಾಗೂ ಇಂತಹ ಎಲ್ಲ ಸವಲತ್ತುಗಳಿಂದ ವಂಚಿತವಾಗಿರುವ ಬೇರೆಯ ನುಡಿಗಳಿಗೂ ಬಹುತೇಕವಾಗಿ ಏನು ವ್ಯತ್ಯಾಸಗಳು ಇರುವುದಿಲ್ಲ. ಅಂದರೆ ಸಮೂಹಗಳ ಏಳ್ಗೆಯನ್ನು ಗಮನದಲ್ಲಿಟ್ಟಕೊಂಡು ಈ ಮಾತನ್ನು ಹೇಳಲಾಗಿದೆ. ಆದರೆ ನುಡಿಗಳ ಚಹರೆಗಳನ್ನು ಕಟ್ಟಿಕೊಡುವ ಬಗೆಗಳಲ್ಲಿ ಮಾತ್ರ ಅಂತರಗಳು ಇದ್ದೇ ಇರುತ್ತವೆ. ಸಂವಿದಾನದಲ್ಲಿ ಗುರುತಿಸಿದ ನುಡಿ ಹಾಗೂ ಆಯಾ ಗುರುತನ್ನು ಪಡೆಯದಿರುವ ನುಡಿಗಳು ಎನ್ನುವ ವಿಂಗಡಣೆಯೇ ಈ ಅಂತರಗಳಿಗೆ ಕಾರಣವಾಗುತ್ತದೆ.

ಕನ್ನಡವು ಇಂತಹ ಮಿತಿಗಳನ್ನು ಮೀರಿ, ತನ್ನ ತಿಳಿವಿನ ಸಂಪನ್ಮೂಲಗಳನ್ನು ಉತ್ಪಾದಿಸುವ, ಮತ್ತು ಅವುಗಳನ್ನು ಹಂಚುವ ಬಗೆಗಳನ್ನು ರೂಪಿಸುವ ಅಗತ್ಯಕ್ಕೆ ಅನುಗುಣವಾಗಿ ಇದು ಸಜ್ಜುಗೊಳ್ಳಬೇಕಿದೆ. ಜನರಿಗೆ ಅವರ ನುಡಿಗಳಲ್ಲಿಯೇ ಚಿಂತನೆಗಳನ್ನು ಬೆಳಸಲು ಅನುವಾಗಬೇಕು. ಮತ್ತು ಈ ಚಿಂತನೆಗಳು ಕರ್‍ನಾಟಕದ ಸಮೂಹಗಳ ಏಳ್ಗೆಯನ್ನೇ ಗುರಿಯಾಗಿಸಿಕೊಂಡಿರಬೇಕು. ನುಡಿಯೊಂದು ಬೇರೊಂದು ನುಡಿಗೆ ತನ್ನನ್ನು ಹೋಲಿಸಿಕೊಂಡು ಕೀಳು ಹಿರಿಮೆಗೆ ಒಳಗಾಗಬಾರದು. ಈ ಬಗೆಯ ಸವಾಲು ಹಾಗೂ ಇಕ್ಕಟ್ಟುಗಳಿಂದ ನುಡಿಯನ್ನು ಪಾರು ಮಾಡುವ ನೆಲೆಗಳೂ ಕೂಡ ನುಡಿಯೊಂದನ್ನು ಸಜ್ಜುಗೊಳಿಸುವ ಬಗೆಯಾಗಿರುತ್ತವೆ.

ಕನ್ನಡದ ಚಿಂತನೆಯನ್ನು ಕಟ್ಟುವ ಬಗೆಯಲ್ಲಿಯೇ ಸಾಕಶ್ಟು ತೊಡಕುಗಳು ಎದುರಾಗಿವೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಕರ್‍ನಾಟಕ-ಕನ್ನಡ ಚಿಂತಕರು ಇಂತಹ ತೊಡಕಿನ ದಾರಿಗಳನ್ನೇ ಇಲ್ಲಿಯ ಸಮೂಹಗಳ ಬದುಕಿನ ದಾರಿಗಳೆಂದು ನೆಮ್ಮಿದ್ದರು ಹಾಗೂ ಎಲ್ಲರನ್ನೂ ಕೂಡ ನೆಮ್ಮಿಸಿದರು. ಹೇಗೆಂದರೆ ಜನತೆಯ ಬದುಕುಗಳ ಒಳಗಿರುವ ತಿಳಿವಿನ ಒಳಕಸುವನ್ನು ಹೊರತರುವ ಬದಲಾಗಿ ಕೇವಲ ಪರನುಡಿಗಳಿಂದಲೇ ತಿಳಿವನ್ನು ಕಡತಂದು ಕನ್ನಡವನ್ನು ಬೆಳೆಸಿದರು.

ಬೆಳವಣಿಗೆ ಎಂಬುದು ಗಾತ್ರವನ್ನು ಕುರಿತಾದದ್ದಲ್ಲ. ಅದು ತಿಳಿವಿನ ಮಾದರಿ ಹಾಗೂ ಬಗೆಗಳನ್ನು ಕಟ್ಟುವ ಕ್ರಮವಾಗಿರುತ್ತದೆ. ಅಂದರೆ ಕನ್ನಡವನ್ನೂ ಕೂಡ ಒಂದು ತಿಳಿವು ಕೊಡುವ ನುಡಿಯನ್ನಾಗಿ ಬೆಳಸಬೇಕಿದ್ದವರು ಹಾಗೆ ಬೆಳಸಲಿಲ್ಲ. ಪರಿಣಾಮವಾಗಿ ಕನ್ನಡ ನುಡಿ ಬೇರೆ ನುಡಿಗಳಿಂದ ಮಾತ್ರ ತಿಳಿವನ್ನು ಪಡೆಯುವ ನೆಲೆಗೆ ಸೀಮಿತಗೊಳಿಸಿದರು. ತಿಳಿವು ಎಂಬುದು ಸಮೂಹಗಳ ಒಡಲಲ್ಲಿಯೇ ಹುಟ್ಟಬಹುದಾದ ಸಂಗತಿಯೆ ಹೊರತು, ಅದೇನು ಯಾವುದೇ ದಯ್ವಿಕ ಇಲ್ಲವೇ ಮಾಂತ್ರಿಕ ಲೀಲೆಯಿಂದ ರೂಪುಗೊಳ್ಳುವಂತಹದಲ್ಲ ಎಂಬ ಸಾಮನ್ಯ ವಿವೇಕವು ಇಲ್ಲಿ ಕಣ್ಮರೆಯಾಗಿದೆ.

ಹಾಗಾಗಿ ಸಮೂಹಗಳಿಗೆ ಕಸುವು ದಕ್ಕುವುದು ಹಾಗೂ ಅವರ ಬಯಕೆ-ಬೇಡಿಕೆಗಳು ಈಡೇರುವುದು ಅವರಾಡುವ ನುಡಿಗಳ ಮೂಲಕ ಮಾತ್ರ. ನುಡಿಗಳ ನಡುವೆ ಕೀಳುಹಿರಿಮೆ ಇಲ್ಲವೇ ಮೇಲುಹಿರಿಮೆ ಎಂಬ ತಿಕ್ಕಾಟವು ವಾಸ್ತವವಾಗಿ ಇರುವುದಿಲ್ಲ. ಇವು ಸಾಮಾಜಿಕವಾಗಿ ಉಂಟಾಗುವ ನಿಲುವುಗಳೇ ಹೊರತು ನುಡಿಯೊಂದರ ಒಡಲಲ್ಲೇ ಉಂಟಾಗುವಂತಹ ಗುಣಗಳಲ್ಲ. ಸಮೂಹಗಳ ಬದುಕಿನ ದಾರಿಗಳನ್ನು ಗುರುತಿಸುವ ತಿಳಿವು ಅವರವರ ನುಡಿಗಳಲ್ಲಿಯೇ ಅಡಕವಾಗಿರುತ್ತದೆ ಎಂಬ ದಿಟವನ್ನು ಅರಿಯಬೇಕಿದೆ.

ಜನರ ಪರವಾಗಿ ಮಾತಾಡುತ್ತೇವೆ ಎನ್ನುವ ಕನ್ನಡದ ಚಿಂತಕರು ಯಾವಾಗಲೂ ಜನರಿಗೆ  ಬೆನ್ನುಮಾಡಿ ಮಾತಾಡುತ್ತಾರೆ. ಜನರಿಗೆ ಮುಕಮಾಡಿ ಮಾತಾಡಿದರೆ ಮಾತ್ರ ಕನ್ನಡದ ಬಿಕ್ಕಟ್ಟುಗಳು ಎಂತಹವು ಎಂಬ ದಿಟ ನಮಗೆ ಗೊತ್ತಾಗುತ್ತದೆ. ಅಂದರೆ ತೊಡಕುಗಳು ಇರುವುದು ಜನರಲ್ಲಿ ಇಲ್ಲವೇ ನುಡಿಯಲ್ಲಿ ಅಲ್ಲ. ಜನ ಮತ್ತು ನುಡಿಗಳ ನಡುವಿನ ನಂಟಸ್ತಿಕೆಯ ವಿನ್ಯಾಸಗಳನ್ನು ಕುರಿತು ಯೋಚಿಸುವ ತಿಳುವಳಿಕೆಯಲ್ಲಿವೆ. ಇಂತಹ ತೊಡಕುಗಳನ್ನು ಪರಿಹರಿಸಿಕೊಳ್ಳಲೂ ಕೂಡ ನಾವು ಮತ್ತೆ ನಮ್ಮದೇ ನುಡಿಗಳನ್ನು ನಂಬಿ ನಡೆಯಬೇಕು.

ಈ ಕಾರಣಕ್ಕಾಗಿಯೇ ಬ್ರಿಟಿಶರು ತಮ್ಮ ತಿಳಿವು, ಆಚರಣೆ ಹಾಗೂ ತಾತ್ವಿಕ ಸಂಗತಿಗಳನ್ನು ನಮ್ಮ ಮೇಲೆ ಹೇರಲು, ಅವರು ಇಂಗ್ಲೀಶ್ ನುಡಿಯನ್ನೇ ನೆಮ್ಮಿಕೊಂಡಿದ್ದರು.  ಒಂದೊಂದು ನುಡಿಯೂ ಕೂಡ ಅದನ್ನಾಡುವ ಜನರ ಸಾಮಾಜಿಕ ಬದುಕುಗಳ ವಿನ್ಯಾಸಗಳನ್ನು ಮಂಡಿಸುತ್ತದೆ. ಆದ್ದರಿಂದ ಕನ್ನಡದ ಮಾದ್ಯಮದಲ್ಲಿ ಕಲಿಸುವುದು ಎಂದರೆ, ಅದು ಕೇವಲ ಕನ್ನಡ ನುಡಿ ರಚನೆ, ಅಕ್ಶರಗಳಲ್ಲಿ ಮಂಡಿತವಾಗುವ ತಿಳಿವನ್ನು ಮಾತ್ರ ಕನ್ನಡ ಮಾದ್ಯಮದ ಶಿಕ್ಶಣವೆಂದು ಹೇಳಲು ಆಗುವುದಿಲ್ಲ. ಆಯಾ ಜನರ ಬದುಕಿನ ಚವ್ಕಟ್ಟುಗಳ ಒಳಗೆಯೇ ಹುದುಗಿರುವ ಲೋಕತಿಳಿವು ಮತ್ತು ತಾತ್ವಿಕ ವಿನ್ಯಾಸಗಳನ್ನು ಮಂಡಿಸುವ ಬಗೆಯನ್ನು ಶಿಕ್ಶಣ ಮಾದ್ಯಮವೆಂದು ನಿರ್‍ವಚಿಸಬಹುದಾಗಿದೆ.

ಹಾಗಾಗಿ ಒಂದೊಂದು ನುಡಿಯೂ ತನ್ನ ಸಮುದಾಯಗಳಲ್ಲಿ ಅಡಕವಾಗಿರುವ ತಿಳಿವು ಹಾಗೂ ಲೋಕನೋಟಗಳನ್ನು ತಾತ್ವಿಕಗೊಳಿಸುವ ಸವಾಲುಗಳನ್ನು ಯಾವಾಗಲೂ ಎದುರಿಸುತ್ತಲೇ ಇರುತ್ತದೆ. ಪರಿಣಾಮವಾಗಿ ಶಿಕ್ಶಣದಲ್ಲಿ ಏನನ್ನು? ಹೇಗೆ? ಯಾರಿಗೆ? ಎಲ್ಲಿ? ಯಾವಾಗ? ಕಲಿಸಬೇಕು ಎಂಬ ಗುರಿಗಳನ್ನು ನಿಚ್ಚಳಗೊಳಿಸುವ ಸವಾಲುಗಳು ಮತ್ತೆ ಮತ್ತೆ ಎದುರಾಗುತ್ತವೆ. ಏಕೆಂದರೆ ನುಡಿಗಳಲ್ಲಿ ತಮ್ಮದೆಯಾದ ತಿಳಿವಿನ ಬಗೆಗಳು ಅಂತಸ್ತವಾಗಿರುತ್ತವೆ ಅನ್ನುವ ದಿಟವನ್ನು ಮರೆಮಾಚಲಾಗುತ್ತದೆ.

ನಮಗೆ ಬೇಕಾದ ತಿಳಿವು ಯಾವುದು? ಅದನ್ನು ತೀರ್‍ಮಾನಿಸುವವರು ಯಾರು? ಮತ್ತು ಈ ತಿಳಿವು ಯಾವ ಬಗೆಯ ನುಡಿಯಲ್ಲಿ ಸಿಗುತ್ತದೆ? ಎಂಬ ಕೇಳ್ವಿಗಳೂ ಇಲ್ಲಿ ಹುಟ್ಟುತ್ತವೆ. ನಮ್ಮ ಬದುಕಿನ ಎಲ್ಲ ಬಗೆಯ ಬೇಡಿಕೆಗಳನ್ನು ಯಾವ ತಿಳಿವು ಈಡೇರಿಸುವುದೋ, ಅದುವೇ ನಮಗೆ ಬೇಕಾದ ತಿಳಿವೂ ಆಗಿರುತ್ತದೆ. ತಮಗೆ ಬೇಕಾದ ತಿಳಿವನ್ನು ಆಯಾ ನುಡಿಗರೇ ತೀರ್‍ಮಾನಿಸುತ್ತಾರೆ. ಜನರಾಡುವ ಎಲ್ಲ ನುಡಿಗಳಲ್ಲಿಯೂ ಇಂತಹ ತಿಳಿವು ನೆಲೆಗೊಂಡಿರುತ್ತದೆ. ತಿಳಿವು ಆಯಾ ನುಡಿಗರ ಸಂಪನ್ಮೂಲವು ಹವ್ದು ಮತ್ತು ಅದು ಅವರ ಹಕ್ಕು ಕೂಡ.

ಆದರೆ ತಿಳಿವು ಎಂಬ ಸಂಪನ್ಮೂಲವು ನಮ್ಮ ಬದುಕಿನ ಹಕ್ಕಾಗದೇ ಅದು ಕೇವಲ ಕಾಸಗಿ ಒಡೆತನದ ಸ್ವತ್ತಾಗಿದೆ. ಈ ಒಡೆತನದ ಮಾದರಿಗಳನ್ನು ನಾಶಪಡಿಸುವ ದಾರಿಗಳನ್ನು ನಾವು ಮತ್ತೆ ನಮ್ಮದೇ ನುಡಿಗಳ ಮೂಲಕ ಕಟ್ಟಿಕೊಳ್ಳುವ ಜರೂರಿದೆ. ಇಲ್ಲವಾದರೆ ತಿಳಿವು ತನ್ನತನದ ನೆಲೆಯಾಗದೆ, ಪರಕೀಯತೆಯನ್ನು ಹುಟ್ಟಿಸುವ ಬಗೆಯಾಗುತ್ತದೆ. ಈ ಕಾರಣಕ್ಕಾಗಿಯೇ, ಲೋಕದಲ್ಲಿ ಮಂಡಿತವಾಗುವ ಯಾವುದೇ ಚಿಂತನೆಗಳು ನಮ್ಮ ಸಾಮಾಜಿಕ ಅರಿವಿನ ಬಾಗವಾಗುವುದು ಎಂದರೆ,  ನಮ್ಮ ನುಡಿಗಳು ಕಟ್ಟಿಕೊಡುವ ಅರಿವಿನ ವಿನ್ಯಾಸಕ್ಕೆ ಅವುಗಳು ಹೊಂದಿಕೆಯಾಗಬೇಕಾಗುತ್ತದೆ. ಇಲ್ಲವಾದರೆ ಸಮೂಹಗಳಿಗೆ ಯಾವುದೇ ಬಗೆಯ ಸಾಮಾಜಿಕ ಏಳ್ಗೆಯನ್ನು ಕಾಣಲು ಆಗುವುದಿಲ್ಲ.

ಕಾನೂನು, ವಾಣಿಜ್ಯ, ವಿಜ್ನಾನ, ತಂತ್ರಜ್ನಾನ, ಆರ್‍ತಿಕ ನೀತಿಗಳು, ಸಾಮಾಜಿಕ, ಸಾಂಸ್ಕ್ರುತಿಕ, ರಾಜಕೀಯ ಹಾಗೂ ಇತರೆ ಯಾವುದೆ ತಿಳಿವಿನ ಸಂಕತನಗಳು ಜನರ ಹಕ್ಕು ಮತ್ತು ಅವರಿಗೆ ಸೇರಿದ ಸಂಪನ್ಮೂಲವಾಗಬೇಕೆಂದರೆ, ಈ ತಿಳಿವು ಆಯಾ ಸಮೂಹಗಳ ಸಾಮಾಜಿಕ ಅರಿವಿನ ಮೂಲಕ ಮಂಡಿತವಾಗಬೇಕು. ಆಯಾ ಸಮೂಹಗಳು ನಂಬಿರುವ ನುಡಿಗಳಲ್ಲಿ ಮಾತ್ರ ಈ ಸಾಮಾಜಿಕ ಅರಿವು ನೆಲೆಗೊಂಡಿರುತ್ತದೆ.

(ಚಿತ್ರ ಸೆಲೆ: wordpress.aimkara.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks