ಇಡ್ಲಿಯ ಹಳಮೆ

ಪ್ರೇಮ ಯಶವಂತ.

idli_titta

ಇಡ್ಲಿ, ವಡೆ, ಸಾಂಬಾರ್ ಅಂದ ಕೂಡಲೇ ಯಾರಿಗಾದರೂ ಬಾಯಲ್ಲಿ ನೀರೂರದೆ ಇರುವುದಿಲ್ಲ. ಇದು ನಮ್ಮ, ಅಂದರೆ ತೆಂಕಣ (south) ಬಾರತದವರ ಮುಕ್ಯ ತಿನಿಸುಗಳಲ್ಲೊಂದು. ಬಿಡುವಿಲ್ಲದ ಇಂದಿನ ಜೀವನ ಶಯ್ಲಿಯಲ್ಲಿ, ಮುಂಜಾನೆ ಎದ್ದು ಕೆಲಸಕ್ಕೆ ಹೋಗುವ ಬಹಳಶ್ಟು ಮಂದಿಯ ದಿನ ಆರಂಬವಾಗುವುದು ಊಟದ ಮನೆಗಳಲ್ಲಿ ಒಂದು ತಟ್ಟೆ ಇಡ್ಲಿ ತಿನ್ನುವುದರಿಂದ.

ಎಶ್ಟೋ ಮಂದಿಗೆ ಸಣ್ಣ ಸಣ್ಣ ಗಾಡಿಗಳಲ್ಲಿ ಮಾಡಲ್ಪಡುವ ಇಡ್ಲಿಗಳೇ ರುಚಿ. ನಮ್ಮ ಬೆಂಗಳೂರಿನಲ್ಲಿರುವ ವಿದ್ಯಾರ್‍ತಿ ಬವನ, ಮಾವಳ್ಳಿ ಟಿಪಿನ್ ರೂಮ್ಸ್ (ಎಮ್. ಟಿ. ಆರ್‍) ಗಳಂತಹ ಊಟದ ಮನೆಗಳಲ್ಲಿ ತಯಾರಾಗುವ ಇಡ್ಲಿಗಳಂತೂ ಜನಗಳಿಗೆ ಅಚ್ಚು-ಮೆಚ್ಚು. ಹಲವಾರು ಮಂದಿಯ ನೆಚ್ಚಿನ ತಿಂಡಿಯಾದ ಇಡ್ಲಿಯ ಹಿಂದಿನರಿಮೆಯನ್ನು (ಇತಿಹಾಸ) ಸ್ವಲ್ಪ ತಿಳಿಯೋಣ ಬನ್ನಿ.

ಮೊಟ್ಟಮೊದಲ ಬಾರಿಗೆ ಇಡ್ಲಿಯನ್ನು ಮರುಯೇಸು (AD) 920ರಲ್ಲಿ  ಶಿವಕೋಟ್ಯಾಚಾರ್‍ಯರು ಬರೆದಿರುವ ಕನ್ನಡದ ಬರಹವಾದ “ವಡ್ಡಾರಾದನೆ”ಯಲ್ಲಿ ಉಲ್ಲೇಕಿಸಲಾಗಿದೆ. ಆದರೆ, ಇಡ್ಲಿ ಮಾಡುವ ಬಗೆ ಸರಿಸುಮಾರು ಮರುಯೇಸು 700ರ ಹಿಂದೆಯೇ ತಿಳಿದಿತ್ತು. ವಡ್ಡಾರಾದನೆಯಲ್ಲಿ ಹೇಳಿರುವ ಪ್ರಕಾರ, ಅಂದಿನ ದಿನಗಳಲ್ಲಿ ಇಡ್ಲಿಯನ್ನು ಹುದುಗೆಬ್ಬಿಸಿದ ಉದ್ದಿನ ಹಿಟ್ಟಿನಿಂದ ಮಾಡಲಾಗುತಿತ್ತು.

ಕನ್ನಡದ ಅರಿವುಕಲೆತ (encyclopedia) ಬರೆದ ಎರಡನೇ ಚಾವುಂಡರಾಯರು ತಮ್ಮ “ಲೋಕೊಪಕಾರ”ದಲ್ಲಿ ಮಜ್ಜಿಗೆಯಲ್ಲಿ ನೆನೆಸಿದ ಉದ್ದಿನ ಬೇಳೆಯನ್ನು ರುಬ್ಬಿ, ಮೆಣಸು, ಕೊತ್ತಂಬರಿ, ಇಂಗು ಸೇರಿಸಿ ಇಡ್ಲಿ ಹಿಟ್ಟನ್ನು ಮಾಡುತಿದ್ದುದಾಗಿ ತಿಳಿಸಲಾಗಿದೆ. ಮೂರನೆಯ ಸೋಮೇಶ್ವರ ತಮ್ಮ ಸಕ್ಕದ ಹೊತ್ತಿಗೆ “ಮನಸೋಲ್ಲಾಸ”ದಲ್ಲಿ (1130ನೇ ಇಸ್ವಿ) ಇಡ್ಲಿ ಮಾಡುವ ಬಗೆಯನ್ನು ವಿವರಿಸಿದ್ದಾರೆ. ಸುಮಾರು 17ನೇ ನೂರೇಡರವರೆಗೂ (century) ಇಡ್ಲಿ ಮಾಡಲು ಅಕ್ಕಿಯನ್ನು ಬಳಸಿರುವ ಯಾವ ದಾಕಲೆಯು ಇಲ್ಲದಿರುವುದು ಕುತೂಹಲದ ಸಂಗತಿಯಾಗಿದೆ.

ನಮಗೆಲ್ಲ ತಿಳಿದಿರುವಂತೆ ಸಾಮಾನ್ಯವಾಗಿ ಇಡ್ಲಿಯನ್ನು ಮಾಡಲು ಅಕ್ಕಿಯನ್ನು ಬಳಸಲಾಗುತ್ತದೆ. ಆದರೆ, ಇಂದಿನ ದಿನಗಳಲ್ಲಿ ಹತ್ತು ಹಲವು ಬಗೆಯ ಪದಾರ್‍ತಗಳಿಂದ ಇಡ್ಲಿಯನ್ನು ಮಾಡಲಾಗುತ್ತಿದೆ. ಇನ್ನು ರವೆ ಇಡ್ಲಿ ಪರಿಚಯವಾದ ರೀತಿಯಂತೂ ಗಮನ ಸೆಳೆಯುವಂತದ್ದು. ಎರಡನೇ ಮಹಾಯುದ್ದದ ಸಮಯದಲ್ಲಿ ಹೆಚ್ಚು ಬಳಕೆಯಲ್ಲಿದ್ದ ಅಕ್ಕಿಯ ಪೂರಯ್ಕೆ ಕಡಿಮೆಯಾಗಿತ್ತು. ಈ ತೊಡಕನ್ನು ನೀಗಿಸಲು ಎಮ್. ಟಿ. ಆರ್ ಊಟದ ಮನೆಯವರು ರವೆಯನ್ನು ಬಳಸಿ ಇಡ್ಲಿಯನ್ನು ಮಾಡಲು ಮುಂದಾದರು. ಆಗ ಹುಟ್ಟಿದ್ದೇ ಇಂದಿನ ಮಂದಿ ಮೆಚ್ಚುವ “ರವೆ ಇಡ್ಲಿ”.

ಇತ್ತೀಚಿನ ದಿನಗಳಲ್ಲಿ ರವೆ ಇಡ್ಲಿ, ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ ಹೀಗೆ ತರಾವರಿ ಇಡ್ಲಿಗಳು ತಯಾರಾಗುವುದನ್ನು ನೋಡಿದ್ದೇವೆ. ಈ ಇಡ್ಲಿಗಳನ್ನು ಇನ್ನಶ್ಟು ರುಚಿಯಾಗಿಸಲು ಬಾಳೆಯ ಎಲೆ, ಅರಿಶಿನದ ಎಲೆ , ಹಲಸಿನ ಎಲೆಗಳನ್ನು ಬಳಸುವುದುಂಟು . ನಿಮಗೆ ವಿಶಿಶ್ಟ ರೀತಿಯಲ್ಲಿ ಇಡ್ಲಿಯನ್ನು ಮಾಡುವ ಬಗೆ ತಿಳಿದಿದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

(ಮಾಹಿತಿ ಸೆಲೆ: en.wikipedia.org)
(ಚಿತ್ರ ಸೆಲೆ: manjulaskitchen.commadcookingfusions.com)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. smhamaha says:

    ಯೆಶ್ವಂತ ಅಣ್ಣ .. ಇಡ್ಡಲಿ ನ ಅತವ ಇಡ್ಲಿ ನಾ ??? ಈ ಕೆಳ್ವಿ ಯಾಕೆ ಅಂದರೆ ನನ್ನ ಉಲಿಪು ತಪ್ಪು ಸರಿ ನೋ ಅಂತ ತಿಳಿದುಕೊಳುವ ಹಂಬಲ .. ಇಡ್ಲಿ angliscized ಹೆಸರು ಅಂತ ನನ್ನ ಅನಿಸಿಕೆ … ಯಾಕಂದರೆ ಎಲ್ಲಿ ಇಡ್ಲಿ ಇಡ್ಡಲಿ ತಟ್ಟೆ ನಾ? ಅಂದರೆ where to keep the iDli plate ಆಗುತ್ತೆ ನಮ್ಮ ಮನೆನಲ್ಲಿ… ಇದರಲ್ಲಿ ತಪ್ಪು ಯಾವುದು ಸರಿ ಯಾವುದು ?

    “ಮಜ್ಜಿಗೆಯಲ್ಲಿ ನೆನೆಸಿದ ಉದ್ದಿನ ಬೇಳೆಯನ್ನು ರುಬ್ಬಿ, ಮೆಣಸು, ಕೊತ್ತಂಬರಿ, ಇಂಗು ಸೇರಿಸಿ ಇಡ್ಲಿ ಹಿಟ್ಟನ್ನು ಮಾಡುತಿದ್ದುದಾಗಿ ತಿಳಿಸಲಾಗಿದೆ” ಇದನ್ನು ಇಡ್ಡಲಿಯ ಸಂಪಣ ಅಂತ ತಾನೇ ಹೇಳೋದು ?

    ಕನ್ನಡ ತಿಳಿದುಕೊಳುವ ಆಸೆ .. ಮೇಲಿನ ಕೆಳ್ವಿಗಳನ್ನು ಕಂಡು ಇವನೊಬ್ಬ ತಿಕಲ ಅತವ ತಿಮಿರು ಇರುವವ ಅಂತ ತಿಳಿದಿಕೊಳಬಾರದು

  2. ಪ್ರೇಮಾ ಅವರೇ, ಬರಹ ಚೆನ್ನಾಗಿ ಮೂಡಿಬಂದಿದೆ.
    ಇಡ್ಲಿ ಮತ್ತು ಕರುನಾಡಿನ ನಡೆನುಡಿಗೆ ತುಂಬಾ ನಂಟಿರುವಂತಿದೆ.
    ಇಡ್ಲಿ ಎಂಬ ಪದ ’ಇಟ್ಟು’/’ಇಡು’ ಮತ್ತು ’ಆವಿ’ ಎಂಬ ಪದಗಳಿಂದ ಹುಟ್ಟಿದ್ದು ಎಂದು ವಿಕಿಪೀಡಿಯಾದಲ್ಲಿ ಓದಿದ ನೆನಪು.

  3. ಇಲ್ಲಿಯೂ ಈ ಕುರಿತು ಮಾಹಿತಿ ಇದೆ…
    Dravidian etymological dictionary :
    Ka. iḍḍali, iḍḍalige, iḍḍaḷige a kind of sour pudding made of rice flour, black gram, cummin seed, ginger, salt, pepper, etc., and boiled in steam.

ಪ್ರಶಾಂತ ಸೊರಟೂರ ಗೆ ಅನಿಸಿಕೆ ನೀಡಿ Cancel reply

%d bloggers like this: