ನಮ್ಮ ಆಳ್ವಿಕೆ ನಮ್ಮಿಂದಲೇ ಆಗಲಿ

ಸಂದೀಪ್ ಕಂಬಿ.

baig_kumar

ಮೊನ್ನೆ ಕರ್‍ನಾಟಕದ ಆಳ್ಮೆಬಳಗಕ್ಕೆ (cabinet) ಇನ್ನೂ ಇಬ್ಬರು (ಡಿ. ಕೆ. ಶಿವ ಕುಮಾರ್ ಮತ್ತು ರೋಶನ್ ಬೇಗ್) ಹೊಸಬರ ಸೇರ್‍ಪಡೆಯಾಗಿದೆ. ಈ ಇಬ್ಬರ ಮೇಲೆ ನಡೆಗೇಡಿತನದ (corruption) ಆರೋಪವಿದೆ. ಇದರ ಸಲುವಾಗಿಯೇ ಮೊದಲು ಸರಕಾರ ಕಟ್ಟುವಾಗ ಇವರಿಬ್ಬರನ್ನು ಆಳ್ಮೆಬಳಗದಿಂದ ಕಯ್ ಬಿಡಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಇಂದು ಅವರ ಮೇಲಿರುವ ಆರೋಪಗಳೇನು ತೀರಿಲ್ಲ. ಆದರೂ ಇವರಿಬ್ಬರನ್ನು ಆಡಳಿತದೊಳಕ್ಕೆ ಸೇರಿಸಿಕೊಂಡಿರುವುದರಿಂದ ಈ ನಡೆ ಎಶ್ಟು ಸರಿ ಎಂಬುದರ ಬಗ್ಗೆ ದೊಡ್ಡ ಚರ್‍ಚೆಯೇ ನಡೆಯುತ್ತಿದೆ.

ಈ ನಡೆಗೇಡಿತನದ ಚರ್‍ಚೆಗಳ ಗದ್ದಲದ ನಡುವೆ ಇನ್ನೊಂದು ತೀರಾ ಮುಕ್ಯವಾದ ವಿಚಾರ ಬದಿಗೆ ತಳ್ಳಲ್ಪಟ್ಟಿದೆ. ಅದೇನೆಂದರೆ ಈ ತೀರ್‍ಮಾನವನ್ನು ತೆಗೆದುಕೊಂಡವರು ಯಾರು ಎಂಬುದು. ‘ಅಂಗಯ್ ಹುಣ್ಣಿಗೆ ಕನ್ನಡಿ ಬೇಕೇ’ ಎಂಬ ನಾಣ್ಣುಡಿಯಂತೆ ಇದು ಕಾಂಗ್ರೆಸ್ ಹಯ್ ಕಾಮಾಂಡಿನ ತೀರ್‍ಮಾನ ಎಂಬುದು ಎಲ್ಲರಿಗೂ ತಿಳಿದಿರುವ ವಿಶಯ. ಇದನ್ನು ಕೆ.ಪಿ.ಸಿ.ಸಿ. ಮೇಲುಗರಾಗಿರುವ ಪರಮೇಶ್ವರ್ ಅವರೇ ಒಪ್ಪಿಕೊಂಡಿದ್ದಾರೆ. ಸರಕಾರದಲ್ಲಿಯೇ ಹಲವರಿಗೆ, ಮುಕ್ಯಮಂತ್ರಿಗಳನ್ನೂ ಒಳಗೊಂಡು, ಇದು ಇಶ್ಟವಿರಲಿಲ್ಲ ಎಂಬ ಸುದ್ದಿ ಓಡಾಡುತ್ತಿದೆ.

ಈ ಬಗೆಯಲ್ಲಿ, ಸರಕಾರವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ದೂರದ ದೆಹಲಿಯಲ್ಲೋ ಇನ್ನೆಲ್ಲೋ ಕುಳಿತು, ಕರ್‍ನಾಟಕಕ್ಕೇ ನಂಟೇ ಇರದ ರಾಶ್ಟ್ರೀಯ ಪಕ್ಶಗಳ ಮುಂದಾಳುಗಳು ತೀರ್‍ಮಾನಗಳನ್ನು ತೆಗೆದುಕೊಳ್ಳುವ ಹಯ್ ಕಮಾಂಡ್ ರಾಜಕೀಯ ನಮಗೆ ಹೊಸದೇನಲ್ಲ. ಮೊದಲಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ಇದೇ ಕಾರಣಕ್ಕಾಗಿಯೇ ಮಾದ್ಯಮಗಳಲ್ಲಿ ಈ ವಿಶಯ ಚರ್‍ಚೆಯಾಗುವ ಯೋಗ್ಯತೆಯನ್ನೂ ಪಡೆದುಕೊಳ್ಳಲಿಲ್ಲ.

ಕನ್ನಡಿಗರು ತಮ್ಮನ್ನು ತಾವು ಆಳಿಕೊಳ್ಳುವುದು ಬೇಕಾಗೇ ಇಲ್ಲ ಎಂಬ ತೀರ್‍ಮಾನಕ್ಕೆ ಬಂದಂತಿದೆ. ಕೆಲವರು ದೇಶ ಮೊದಲು ನಮ್ಮ ನಾಡು ಮುಳುಗಿ ಹೋದರೂ ಪರವಾಗಿಲ್ಲ ಎಂದು ತಪ್ಪಾಗಿ ಎಣಿಸುತ್ತಿದ್ದರೆ ಇನ್ನು ಕೆಲವರು ಕೇಂದ್ರದಿಂದ ಆಡಳಿತ ನಡೆಸುವುದೇ ಒಳಿತು ಎಂಬ ನಂಬಿಕೆಯನ್ನು ತಾಳ್ದಂತಿದೆ. ಇದಕ್ಕೆ ನಾವು ನಮ್ಮ ಇತಿಹಾಸವನ್ನು ಮರೆತಿರುವುದು ಒಂದು ಮುಕ್ಯ ಕಾರಣ ಎಂದರೆ ತಪ್ಪಾಗಲಾರದು. ಏಕೆಂದರೆ ಈಗಿರುವ ಕೇಂದ್ರದ ಹಿಡಿತದಲ್ಲಿರುವ ಆಡಳಿತಕ್ಕಿಂತ, ನಮ್ಮವರ ಕಯ್ಯಲ್ಲೇ ಆಡಳಿತ ಇದ್ದಾಗ ಹೆಚ್ಚು ತಕ್ಕುದಾಗಿರುತ್ತದೆ ಎಂಬ ಇತಿಹಾಸದ ಉದಾಹರಣೆಗಳು ನಮ್ಮ ಕಣ್ಣು ಮುಂದೆ ಇದ್ದಿದ್ದರೆ ನಾವು ಹೀಗೆ ಯೋಚಿಸುತ್ತಿರಲಿಲ್ಲ. ಅಂತಹ ಒಂದು ಎತ್ತುಗೆಯನ್ನು ಇಲ್ಲಿ ನೋಡೋಣ.

ಬಾರತ ಬ್ರಿಟೀಶರಿಂದ ಬಿಡುಗಡೆ ಹೊಂದುವ ವರೆಗೂ ತೆಂಕಣ ಕರ್‍ನಾಟಕದಲ್ಲಿ ಮಯ್ಸೂರು ಅರಸರು ಆಳಿದ್ದರೆಂಬುದು ನಮಗೆ ತಿಳಿದೇ ಇದೆ. ಇವರು ನಡೆಸಿದ ಆಳ್ವಿಕೆಯ ಕುರಿತಾಗಿ ಮಾತ್ರ ನಾವು ಕನ್ನಡಿಗರು ಮರೆತಿದ್ದೇವೆ. ಗಾಂದಿಯವರಿಂದ ‘ರಾಮ ರಾಜ್ಯ’ ಎಂದು ಹೊಗಳಿಸಿಕೊಂಡ ಮಯ್ಸೂರು, ಆ ಹೊತ್ತಿನಲ್ಲಿ ಬಾರತದ ಎಲ್ಲ ರಾಜ್ಯಗಳಿಗಿಂತ, ಸಾಮಾಜಿಕವಾಗಿ, ಹಣಕಾಸಿನಲ್ಲಿ, ಕಯ್ಗಾರಿಕೆಗಳಲ್ಲಿ, ಮತ್ತು ಕಲಿಕೆಯಲ್ಲಿ ಮುಂದುವರಿದ ರಾಜ್ಯವಾಗಿತ್ತು. 1947ರಲ್ಲಿ ಇತಿಹಾಸಕಾರನೊಬ್ಬನು ಹೇಳಿದ ಮಾತುಗಳನ್ನು ಇಲ್ಲಿ ನೋಡೋಣ (ಜೋಸ್ಯರ್ ಅವರ History of Mysore and the Yadava Dynasty ಹೊತ್ತಗೆಯಿಂದ, ಇಂಗ್ಲೀಶ್ ಬರಹವನ್ನು ಕನ್ನಡಕ್ಕೆ ನುಡಿಮಾರಿಸಲಾಗಿದೆ):

ಮಯ್ಸೂರು ವಿದಾನ ಸಬೆಯು ಬಾರತದಲ್ಲೇ ಅತೀ ಹಳೆಯ ಮಂದಿಯಾಳ್ವಿಕೆಯ ಮನೆ. ಒಂದು ವಿಶ್ವ ವಿದ್ಯಾಲಯವನ್ನು ಕಟ್ಟಿದ ಬಾರತದ ಮೊದಲ ರಾಜ್ಯ ಮಯ್ಸೂರು. ಬಾರತದಲ್ಲಿ ಮೊದಲು ನೀರ್‍ಮಿಂಚು ನೆಲೆಯನ್ನು(hydro-electric station) ಕಟ್ಟಿದ್ದು ಅಲ್ಲಿಯೇ. ಬಾರತದಿಂದ ಬರುವ ಎಲ್ಲ ಚಿನ್ನವೂ ಮಯ್ಸೂರಿನ ಗಣಿಗಳಿಂದಲೇ ಬರುತ್ತದೆ. ಮಯ್ಸೂರಿನ ಗಂದವು ಎಲ್ಲಕ್ಕೂ ಮೆಲ್ಮಟ್ಟದ್ದಾಗಿದ್ದು ಜಾಗತಿಕ ಮಾರುಕಟ್ಟೆಗೆ ಒದಗಿಸುತ್ತದೆ. ಅದರ ಕಬ್ಬಿಣ ಮತ್ತು ಉಕ್ಕಿನ ಕಯ್ಗಾರಿಕೆಯು ಕಾಮನ್ ವೆಲ್ತ್ ದೇಶಗಳಲ್ಲಿ ಎರಡನೆಯದು, ಮತ್ತು ಇಡೀ ಮೂಡಣದಲ್ಲಿರುವ ಒಂದೇ ಒಂದು ಇದ್ದಿಲ ಕುಲುಮೆ ಅಲ್ಲಿದೆ. ಬಾರತದ ಮೊದಲ ನೂಲುರೇಶ್ಮೆಯ ಮಗ್ಗವನ್ನು ಮಯ್ಸೂರಲ್ಲಿ ಕಟ್ಟಲಾಗಿತ್ತು ಮತ್ತು ಅದರ ರೇಶ್ಮೆಯ ಉತ್ಪಾದನೆ ಬಾರತದಲ್ಲೇ ಎಲ್ಲಕ್ಕೂ ಹೆಚ್ಚು. ಅದರ ಸಕ್ಕರೆ ಕಾರ್‍ಕಾನೆಯು ಬಾರತದಲ್ಲೇ ಎಲ್ಲಕ್ಕೂ ದೊಡ್ಡದು. ಅದರ ಪೋರ್‍ಸೆಲೀನ್ ಕಾರ್‍ಕಾನೆಯಲ್ಲಿರುವ ಮಿಂಚು ಕೊಳವೆ ಆವಿಗೆಯು (electric tunnel kiln) ಮೂಡಣದಲ್ಲಿಯೇ ಅತಿ ದೊಡ್ಡದು. ಅದರ ಬಾನೋಡ ಕಾರ್‍ಕಾನೆಯೂ (aircraft factory), ತನ್ನ ಬಗೆಯಲ್ಲಿ, ಬಾರತದಲ್ಲೇ ಮೊದಲನೆಯದು. ಹೊನಲು ಬೆಳಕಿನಲ್ಲಿ ಕೊಂಗೊಳಿಸುವ ಬ್ರುಂದಾವನ ತೋಟಕ್ಕೆ ಸಮನಾದುದು ಮೂಡಣದಲ್ಲಿಯೇ ಎಲ್ಲೂ ಇಲ್ಲ ಮತ್ತು ಅದನ್ನು ಪ್ರೆಂಚ್ ದೊರೆಗಳ ವರ್‍ಸಾಯ್(Versailles)ಗೆ ಹೋಲಿಸಲಾಗುತ್ತದೆ. ಇತ್ತೀಚಿಗೆ ಹೊಸ ಮುಕ್ಯ ಮಂತ್ರಿಗಳು ಹೇಳಿದಂತೆ – ಜೋದಪುರವಿರಲಿ, ಜಯಪುರವಿರಲಿ, ಕಾಶ್ಮೀರವಿರಲಿ, ಇಲ್ಲವೇ ಯಾವುದೇ ದೊಡ್ಡ ರಾಜ್ಯವಿರಲಿ, ಅವರು ಹೂಡುತ್ತಿರುವ ಕೂಟಗಳು, ಅವರು ತೀರ್‍ಮಾನಿಸುತ್ತಿರುವ ಏರ್‍ಪಾಟುಗಳೆಲ್ಲ, ಮಯ್ಸೂರು ತೋರಿಸಿಕೊಟ್ಟ ದಾರಿಯಲ್ಲೇ ಆಗಿದೆ ಎಂಬುದು ನಲುಮೆಯ ಮತ್ತು ಹೆಮ್ಮೆಯ ವಿಚಾರ.

ಅಂದಿನ ಮಯ್ಸೂರು ಆಳ್ವಿಕೆಯ ಬಗ್ಗೆ ಒಂದೊಂದಾಗಿ ಬಿಡಿಸಿ ಹೇಳ ಹೊರಟರೆ ಬಹುಶಹ ಹಲವಾರು ಪುಟಗಳೇ ಬೇಕಾದೀತು. ಬಿಡುಗಡೆಯ ಬಳಿಕ ಮಂದಿಯಿಂದ ಆಯ್ಕೆಗೊಂಡ ಕೆ. ಸಿ. ರೆಡ್ಡಿಯವರ ಸರಕಾರವೂ ಮಯ್ಸೂರಿನಲ್ಲಿ ಇದೇ ಬಗೆಯ ತಮ್ಮಾಳ್ವಿಕೆಯ ಒಳ್ಳೆಯ ಆಡಳಿತವನ್ನು ಮುಂದುವರಿಸಲು ಬಯಸಿತ್ತು. ಮೊದಲ ಸಬೆಯಲ್ಲಿ ಅವರು ಹೇಳಿದ ಮಾತುಗಳನ್ನು ಗಮನಿಸಿ (ಜೋಸ್ಯರ್‍):

The decision to evolve a new Constitution for Mysore on the basis of Responsible Government was magnanimously taken by His Highness the Maharaja last year and in its pursuance of that we are meeting here today.

ಮಯ್ಸೂರಿಗೆ ಒಂದು ಹೊಸ ಸಂವಿದಾನವನ್ನು ಬರೆಯಬೇಕೆಂಬ ತೀರ್‍ಮಾನವನ್ನು ತೆಗೆದುಕೊಳ್ಳಲಾಗಿತ್ತು ಮತ್ತು ಇದರ ಸಲುವಾಗಿ ಮಂದಿಯಿಂದ ಆಯ್ಕೆಗೊಂಡ ವಿದಾನ ಸಬೆಯು ಕೆಲಸ ಕಯ್ಗೊಂಡಿತ್ತು (ಈ ಮಂದಿಯಾಳ್ವಿಕೆಯ ಏರ್‍ಪಾಟನ್ನು 1881ರಲ್ಲೇ ಮಯ್ಸೂರು ರಾಜ್ಯದಲ್ಲಿ ಏರ್‍ಪಡಿಸಲಾಗಿತ್ತು ಮತ್ತು ಮೊದಲೇ ಹೇಳಿದಂತೆ ಬಾರತದಲ್ಲಿ ಇದು ಮೊದಲನೇ ಮಂದಿಯಾಳ್ವಿಕೆಯ ಹೆಜ್ಜೆಯಾಗಿತ್ತು). ಆದರೆ ಇದಕ್ಕೆ ಬಾರತದ ಒಕ್ಕೂಟ ಸರಕಾರವು ಅಡ್ಡಿ ಮಾಡಿ ಇಡೀ ಬಾರತಕ್ಕೆ ಒಂದೇ ಸಂವಿದಾನವನ್ನು ತಂದಿತು. ಈ ಹೊಸ ಸಂವಿದಾನದಂತೆ 1950ರಲ್ಲಿ ಅಂದಿನ ಮಯ್ಸೂರಿನ ವಿದಾನ ಸಬೆಯನ್ನು ರದ್ದುಗೊಳಿಸಲಾಯಿತು. ಒಕ್ಕೂಟದ ಅಡಿಯಲ್ಲಿ ಬರುವ ಹೊಸ ವಿದಾನ ಸಬೆಯನ್ನು ತರಲಾಯಿತು. ಅಂದಿಗೆ ನೇರವಾಗಿ ನಮ್ಮ ಕಯ್ಯಲ್ಲಿದ್ದ ನಮ್ಮ ಆಡಳಿತದ ದೊಡ್ಡಪಾಲನ್ನು ದೆಹಲಿಗೆ ಒಪ್ಪಿಸಿದೆವು ಎಂದು ಹೇಳಿದರೆ ತಪ್ಪಾಗಲಾರದು.

ಅಂದಿನಿಂದ ಮಯ್ಸೂರು ರಾಜ್ಯವು ಮತ್ತು ಮುಂದೆ ಒಗ್ಗೂಡಿದ ಕರ್‍ನಾಟಕವು ಪಟ್ಟ ಪಾಡು ನಮಗೆಲ್ಲ ತಿಳಿದೇ ಇದೆ. ರಯ್ಲು, ಕಯ್ಗಾರಿಕೆ, ಕಲಿಕೆ, ಹಣಕಾಸು, ವ್ಯಾಪಾರ, ಆರೋಗ್ಯ, ಮುಂತಾದ ಎಲ್ಲ ಹರಹುಗಳಲ್ಲೂ ನಮ್ಮ ನಾಡು ಒಕ್ಕೂಟದ ಮುಂದೆ ಕಯ್ ಚಾಚಿ ಬೇಡುವ ಪರಿಸ್ತಿತಿ ಒದಗಿದೆ. ಈ ಬಗೆಯ ಒಕ್ಕೂಟ-ರಾಜ್ಯಗಳ ನಡುವಿನ ತಿಕ್ಕಾಟದ ರಾಜಕೀಯ ಒಂದೆಡೆಯಾದರೆ, ಮೇಲೆ ನೋಡಿದ ಇತ್ತೀಚಿನ ಬೆಳವಣಿಗೆಯಂತೆ, ರಾಶ್ಟ್ರೀಯ ಪಕ್ಶಗಳ ಹಯ್ ಕಮಾಂಡ್ ರಾಜಕೀಯವೂ ಕನ್ನಡಿಗರ ಏಳ್ಗೆಯನ್ನು ಬಿಡಗೊಡುತ್ತಿಲ್ಲ.

2014ರ ಲೋಕಸಬೆಯ ಚುನಾವಣೆ ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ ಕನ್ನಡಿಗರು ತಮ್ಮ ಏಳ್ಗೆಯನ್ನು ಮರೆತು ಬರೀ ಮೋದಿರಾಹುಲರ ಸೆಳೆತಕ್ಕೆ ಒಳಗಾಗಿರುವುದು ಮರುಕ ಹುಟ್ಟಿಸುತ್ತದೆ. ಈಗ ಈ ಕಾದಾಟದಲ್ಲಿ ಕೇಜ್ರಿವಾಲ್ ಕೂಡ ಕಂಡು ಬರುತ್ತಿರುವುದರಿಂದ, ಈ ಮೂವರ ನಡುವಿನ ಕಚ್ಚಾಟಕ್ಕೆ ಕರ್‍ನಾಟಕವು ಒಂದು ಅಟ್ಟಣಿಗೆಯಾಗಲಿದೆ ಆಶ್ಟೆ. ಮೊದಲಿನಂತೆ ನಮ್ಮನ್ನು ನಾವು ಆಳಿಕೊಳ್ಳುವುದು ದೂರದ ಮಾತು. ಹಾಗಾಗಿ ಎಲ್ಲಕ್ಕೂ ಮಿಗಿಲಾಗಿ ಇಂದು ನಮಗೆ ಈ ಅಡಿಮೆಯಿಂದ, ಗುಲಾಮಗಿರಿಯಿಂದ ಬಿಡುಗಡೆ ಬೇಕಾಗಿದೆ. ಇದರ ಬಗ್ಗೆ ನಾವು ಆಳವಾಗಿ ಯೋಚಿಸಿ, ನಾಡಿನ ಏಳ್ಗೆಯ ಬಗ್ಗೆ ಚಿಂತಿಸಿ, ಯಾವುದೇ ವ್ಯಕ್ತಿಗಳ ಪಕ್ಶಗಳ ಮೋಡಿಗೆ ಒಳಗಾಗದೆ, ರಾಜಕೀಯವಾಗಿ ಎಚ್ಚರಗೊಂಡು ಮುಂದಿನ ಹೆಜ್ಜೆಯನ್ನು ಇಡಬೇಕಾಗಿದೆ.

(ಮಾಹಿತಿ ಸೆಲೆ: en.wikipedia.org
                  Splendors of Royal Mysore: The untold story of the Wodeyars, Vikram Sampath)
(ಚಿತ್ರ ಸೆಲೆ: indianexpress.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: