ಕನ್ನಡಕ್ಕೆ ಕಸುವಿರುವಾಗ ಎರವಲೇಕೆ, ಕೀಳರಿಮೆಯ ಗೀಳೇಕೆ?

ವಿವೇಕ್ ಶಂಕರ್.

ನುಡಿಯೆನ್ನುವುದು ಒಂದು ಹರಿಯುವ ತೊರೆಯ ಹಾಗೆ, ಎಂದಿಗೂ ನಿಂತ ನೀರಾಗುವುದಿಲ್ಲ. ಒಂದು ನುಡಿಗೆ ಪದಗಳು ತುಂಬಾ ಅರಿದು. ಹೊತ್ತು ಹೊತ್ತಿಗೂ ಒಂದು ನುಡಿಗೆ ಹೊಸ ಹೊಸ ಪದಗಳು ಸೇರುತ್ತವೆ. ಇದಕ್ಕೆ ಹಲವು ದೂಸರುಗಳಿವೆ, ಹೊಸ ಬೆಳವಣಿಗೆಗಳು, ಹೊಸ ಕಂಡುಕೊಳ್ಳಿಕೆಗಳು (discoveries), ಕಂಡುಹಿಡಿಕೆಗಳು (inventions) ಇತ್ಯಾದಿ.

ನಮ್ಮ ನುಡಿ ಕನ್ನಡ ಕೂಡ ಹೀಗೆಯೇ ಹಿಂದಿನಿಂದಲೂ ಬೆಳೆದು ಬಂದಿದೆ. ಜಗತ್ತಿನ ಎಲ್ಲಾ ನುಡಿಗಳಿಗೂ ಹೊಸ ಪದಗಳು ಸೇರುವುದು ನಿಲ್ಲದ ಕೆಲಸವಾಗಿದೆಯೆಂಬುದನ್ನು ನಾವು ಗಮನಿಸಬಹುದು. ಯಾವುದೇ ನುಡಿಯಲ್ಲಿ ಹೊಸ ಪದವನ್ನು ಕಟ್ಟುವಾಗ, ಆ ನುಡಿಯಲ್ಲಿರುವ ಪದಗಳನ್ನು ಇಲ್ಲವೇ ಒಟ್ಟುಗಳನ್ನು ಬಳಸಿ ಕಟ್ಟಬಹುದು ಇಲ್ಲವೇ ಬೇರೆ ನುಡಿಗಳಿಂದ ಎರವಲು ಕೂಡ ಪಡೆಯಬಹುದು. ನುಡಿಗಳ ನಡುವೆ ಹೀಗೆ ಕೊಡುವ-ಪಡೆಯುವ ಕೆಲಸ ನಡೆಯುತ್ತಿರುತ್ತದೆ. ಆದರೆ ಕನ್ನಡದಲ್ಲಿ ಹೊಸ ಪದಗಳನ್ನು ಕಟ್ಟುವಾಗ ಹೆಚ್ಚು ಕಡಿಮೆ ಕನ್ನಡೇತರ ನುಡಿಗಳನ್ನು, ಅದರಲ್ಲೂ ಸಂಸ್ಕ್ರುತದಿಂದ ಎರವಲು ಪಡೆಯುವುದು ಒಂದು ವಾಡಿಕೆಯಾಗಿದೆ.

ನಮ್ಮ ಸುತ್ತಮುತ್ತಲೂ ಕಣ್ಣಾಡಿಸಿದರೆ ಇದನ್ನು ನಾವು ಕಾಣಬಹುದು. ಕನ್ನಡದ್ದೇ ಪದಗಳಿದ್ದರೂ, ಅವುಗಳ ಬದಲಾಗಿ ಎರವಲು ಪದಗಳ ಬಳಕೆಯು ಹೆಚ್ಚಾಗಿ ಬರಹದಲ್ಲಿ, ಅರಿಮೆಯ ಬರಹಗಳಲ್ಲಿ ಹಾಗೂ ಆಡಳಿತದ ಕಡತಗಳಲ್ಲಿ ಕಾಣುತ್ತವೆ. ಎತ್ತುಗೆ: ಕನ್ನಡ ಮಾದ್ಯಮ ಶಾಲೆಗಳಲ್ಲಿ ಬಳಸಲಾಗುವ ಕನ್ನಡ ನೋಡಿದರೆ ಇದು ಎದ್ದು ಕಾಣುತ್ತದೆ.

ಕನ್ನಡಿಗರ ನಡುವೆ ಆಡುನುಡಿಯಲ್ಲಿ ಬಳಕೆಯಾಗುವ “ಕೂಡುವುದು”, “ಕಳೆಯುವುದು”, ಎಲ್ಲ ಕನ್ನಡಿಗರಿಗೂ ತಿಳಿದಿರುವ ಪದಗಳು. ಹಾಗಿದ್ದರೂ ಕನ್ನಡದ್ದೇ ಪದಗಳನ್ನು ಬಿಟ್ಟು ಶಾಲೆಗಳಲ್ಲಿ “ಸಂಕಲನ” ಮತ್ತು “ವ್ಯವಕಲನ”ವೆಂದು ಹೇಳಿಕೊಡುತ್ತಾರೆ. ಕನ್ನಡದ್ದೇ ಪದಗಳಿದ್ದರೂ ಯಾಕೆ ಎರವಲು ಪದಗಳನ್ನು ಬಳಸುವಂತಹ ಈ ಚಟ? ಇಂತಹ ಕಲಿಕೆ ಮಕ್ಕಳಿಗೆ ನಿಜವಾಗಲೂ ತೊಡಕೆನಿಸುತ್ತದೆಯೇ ಹೊರತು ಅವರಿಗೆ ಒಂದು ಚೂರೂ ಒಳಿತು ಮಾಡುವುದಿಲ್ಲ. ಇದೊಂದು ಎತ್ತುಗೆ ಮಾತ್ರ, ಈ ಬಗೆಯಲ್ಲಿ ಹಲವು ಎತ್ತುಗೆಗಳನ್ನು ನೀಡಬಹುದು.

ಇತ್ತೀಚೆಗೆ ಕನ್ನಡ ನುಡಿಗೆ ಹೊಸ ಪದಗಳನ್ನು ಕಟ್ಟುವ ಸಲುವಾಗಿ ವಿಜಯ ಕರ‍್ನಾಟಕ ಸುದ್ದಿಹಾಳೆಯು “ವಿಕಪದ ಲೋಕ”ವೆಂಬ ಹೆಸರಿನ ಹಮ್ಮುಗೆ ನಡೆಸುತ್ತಿದೆ. ಇದೊಂದು ಒಳ್ಳೆಯ ಬೆಳವಣಿಗೆಯೇ. ಇದರಲ್ಲಿ ಹಲವಾರು ಅಚ್ಚಕನ್ನಡದ ಪದಗಳು ಮೂಡಿಬಂದಿವೆ ಕೂಡಾ. ಆದರೆ ಮೊನ್ನೆಯ ಸುದ್ದಿಹಾಳೆಯಲ್ಲಿ, ಇಂಗ್ಲಿಶಿನ ‘Drone’ ಎಂಬ ಪದಕ್ಕೆ ಕನ್ನಡದ ಆಯ್ಕೆಗಳನ್ನು ನೋಡಿದಾಗ ತುಂಬಾ ಬೆರಗು ಉಂಟಾಯಿತು.

Drone_030214

ಮೊದಲ ಪದ “ಬ್ರುಂಗಾಸ್ತ್ರ” ಹಾಗೂ ಎರಡನೆಯ ಪದ “ಬೇಹುಕಾಯ”. ಈ ಪದಗಳನ್ನು ನೋಡಿದರೆ ಅವು ಏನೆಂದು ತಿಳಿಯಲಿಲ್ಲ. ಇಂಗ್ಲಿಶಿನಲ್ಲಿ drone ಗೆ ಹುರುಳು ಹೀಗಿದೆ,

drone (noun) – A remotely controlled aircraft, an unmanned aerial vehicle

( https://en.wiktionary.org/wiki/drone )

ಈ ಪದದ ಹಿನ್ನೆಲೆ ತಿಳಿದ ಮೇಲೆ ಇಂಗ್ಲಿಶ್ನಲ್ಲಿ ಗಂಡು ದುಂಬಿಯನ್ನು ಅಡಿಯಾಗಿ ಇಟ್ಟಿಕೊಂಡು “ಡ್ರೋಣ್” ಇಂಗ್ಲಿಶ್ನಲ್ಲಿ ಕಟ್ಟಿರುವ ಪದವೆಂದು ತಿಳಿಯಿತು. ಹಾಗಿದ್ದರೆ ಮೇಲಿನ “ಬ್ರುಂಗಾಸ್ತ್ರ” ಪದದಲ್ಲಿ ಇದೇ ಹೊಲಬು ಬಳಸಿರಬೇಕೆಂದು ಊಹೆ ಮಾಡಿ, ಕೊಂಚ ಹೊತ್ತಾದ ಮೇಲೆ ತಿಳಿಯಿತು “ಬ್ರುಂಗ” ಅಂದರೆ ಸಂಸ್ಕ್ರುತದಲ್ಲಿ “ದುಂಬಿ” ಎಂದು. ದುಂಬಿ ಪದ ಕನ್ನಡದ್ದೇ ಪದ ಹಾಗು ಕನ್ನಡ ಕೂಡಣದಲ್ಲಿ ಹೆಚ್ಚು ಬಳಕೆಯಾಗಿರುವ ಪದವೂ ಕೂಡ, ಹೀಗಿದ್ದರೂ ಕನ್ನಡೇತರರ ಪದದ ಮೊರೆ ಹೋಗುವುದು ಸರಿಯೇ?

ಇವತ್ತು ಬ್ರುಂಗ ನಾಳೆ ಇನ್ನೊಂದು ನುಡಿಯ ಮೊರೆ ಹೋಗಿ ಕನ್ನಡಕ್ಕೆ ಪದಗಳನ್ನು ಸೇರಿಸಬಹುದು. ಸ್ಪಾನೀಶ್ ನಲ್ಲಿ ದುಂಬಿಗೆ ಅಬೆಜ (“abeja”) ಪದವಿದೆ, ಅದನ್ನು ಬಳಸಿ ಅಬೆಜಸ್ತ್ರ ಎಂಬ ಪದ ಕೂಡ ಕನ್ನಡಕ್ಕೆ ಸೇರಿಸಿದರೆ ಯಾರಿಗೆ ಏನು ತಿಳಿಯುತ್ತದೆ? ಹೀಗೆ ಮಾಡುವುದರಿಂದ ಉಪಯೋಗವೇನು? ಕನ್ನಡದಲ್ಲಿ ಪದಗಳಿದ್ದರೂ ಬೇರೆ ನುಡಿಯ ಮೊರೆ ಹೋಗುವುದು ಸರಿಯೇ?

Drone ಪದಕ್ಕೆ ಸಂಸ್ಕ್ರುತದಲ್ಲಿ ಪದಕಟ್ಟುವಾಗ, ಸಂಸ್ಕ್ರುತದಲ್ಲಿರುವ ’ಬ್ರುಂಗ’ ಪದವನ್ನು ಬಿಟ್ಟು ಕನ್ನಡದ ’ದುಂಬಿ’ ಪದ ಬಳಸುತ್ತಾರೆಯೇ? ಕೆಲವೊಮ್ಮೆ ಬೇರೆ ನುಡಿಗಳಿಂದ ಎರವಲು ಮಾಡುವ ಕುಳ್ಳಿಹ(ಸಂದರ‍್ಬ) ಬರುತ್ತದೆ, ಆಗ ಎರವಲು ಮಾಡುವುದರಲ್ಲಿ ಹುರುಳಿದೆ, ಎತ್ತುಗೆ: “ಅನ್ನ”, “ಟೀ”, “ಕಾರು”, “ಮೇಜು” ಮುಂತಾದ ಹಲವು ಪದಗಳು ಕನ್ನಡಕ್ಕೆ ಎರವಲು ಮಾಡಲಾಗಿದೆ.

ಎರವಲು ತಪ್ಪಲ್ಲ ಆದರೆ ಅದಕ್ಕೆ ಒಂದು ಮಿತಿ ಇರಬೇಕು, ಬಳಕೆಯಲ್ಲಿರುವ ಪದಗಳನ್ನೂ ಬಿಟ್ಟು ಎರವಲು ತರುವುದೊಂದೇ ದಾರಿ ಆಗಬಾರದು. ಎರವಲು ಮಾಡಿದರೂ ಎಲ್ಲರಿಗೂ ತಿಳಿಯುವ ಪದಗಳನ್ನು ಎರವಲು ಮಾಡುವುದರಲ್ಲಿ ಹುರುಳಿದೆ. ಎಲ್ಲರಿಗೂ ಗೊತ್ತಿರುವ ಪದಗಳನ್ನು ಬಿಟ್ಟು, ಯಾರಿಗೂ ತಿಳಿಯದ ಪದಗಳನ್ನು ಎರವಲು ತರುವುದರಲ್ಲಿ ಏನಿದೆ ಒಳಿತು?

(ತಿಟ್ಟಸೆಲೆ: ವಿಜಯ ಕರ‍್ನಾಟಕ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: