ಹಲನುಡಿಗಳಲ್ಲಿ ಪೇಸ್‍ಬುಕ್ – ಜನರನ್ನು ತಲುಪುವತ್ತ ಸರಿಯಾದ ಹೆಜ್ಜೆ

ರತೀಶ ರತ್ನಾಕರ.

facebook-hacking-1040cs051612

ಜನಮೆಚ್ಚಿದ ಕೂಡಣ ಕಟ್ಟೆ ಪೇಸ್‍ಬುಕ್ಕಿಗೆ ಹತ್ತು ವರುಶ ತುಂಬಿದೆ. ಕಳೆದ ಹತ್ತು ವರುಶದಲ್ಲಿ ಇದು ಬೆಳೆದುಬಂದ ಬಗೆ ಹಾಗು ಗಳಿಸಿದ ಜನಮೆಚ್ಚುಗೆ ಬೆರಗು ತರಿಸುವಂತಹದು. ಬಳಕೆದಾರರ ಬೇಡಿಕೆಗಳನ್ನು ಚೆನ್ನಾಗಿ ತಿಳಿದುಕೊಂಡು ಅದಕ್ಕೆ ತಕ್ಕಂತೆ ತನ್ನ ಸಾದ್ಯತೆಗಳನ್ನು ಹೆಚ್ಚಿಸುತ್ತಾ, ತನ್ನ ಬಳಕೆದಾರರ ಬಳಗವನ್ನು ಪೇಸ್‍ಬುಕ್ ಕಟ್ಟಿಕೊಂಡು ಬಂದಿದೆ. ಇಂದು ಕೂಡಣ ಕಟ್ಟೆಗಳಲ್ಲಿಯೇ ಮೊದಲನೆಯ ಸ್ತಾನವನ್ನು ಗಳಿಸಿರುವುದು ಹೀಗೆ ಬಳಕೆದಾರರ ಬೇಡಿಕೆಗೆ ಬೆಲೆ ಕೊಟ್ಟಿದ್ದರಿಂದಲೇ.

ಈಗ ಇಂಡಿಯಾದಲ್ಲಿರುವ ಪೇಸ್‍ಬುಕ್ ಬಳೆಕೆದಾರರ ಎಣಿಕೆ 9.3 ಕೋಟಿ. ಇದರಲ್ಲಿ ಸುಮಾರು 7.5 ಕೋಟಿ ತಮ್ಮ ಅಲೆಯುಲಿಯ ಮೂಲಕ ಪೇಸ್‍ಬುಕ್ಕನ್ನು ಬಳಸುತ್ತಿದ್ದಾರೆ. ಅಮೇರಿಕಾ ಮತ್ತು ಕೆನಡಾ ಆದ ಬಳಿಕ ಇಂಡಿಯಾವು ಪೇಸ್‍ಬುಕ್ಕಿಗೆ ಎರಡನೆಯ ದೊಡ್ಡ ಮಾರುಕಟ್ಟೆಯಾಗಿದೆ. ಹೀಗೆ ಬೆಳೆಯುತ್ತಿರುವ ಪೇಸ್‍ಬುಕ್ ಇಂಡಿಯಾದಲ್ಲಿ ತನ್ನ ಮಾರುಕಟ್ಟೆಯನ್ನು ಚೆನ್ನಾಗಿ ಬೆಳೆಸಲು ಮತ್ತಶ್ಟು ಯೋಜನೆಗಳನ್ನು ಹಾಕಿಕೊಂಡಿದೆ.

ಪೇಸ್‍ಬುಕ್ ಕಂಪನಿಯ ಬಿಸಿನೆಸ್ ಡೆವಲೆಪ್‍ಮೆಂಟ್‍ನ ಉಪಾದ್ಯಾಕ್ಶರಾಗಿರುವ ಕ್ರಿಸ್ ಡೇನಿಯಲ್ ಅವರು, ಇಂಡಿಯಾದಲ್ಲಿ ಮಾರುಕಟ್ಟೆಯನ್ನು ಬೆಳಸಲು ಹಾಕಿಕೊಂಡಿರುವ ಯೋಜನೆಗಳನ್ನು ಮಾತುಕತೆಯೊಂದರಲ್ಲಿ ತಿಳಿಸಿದ್ದಾರೆ. ಅಲೆಯುಲಿಯ ಮೂಲಕ ಪೇಸ್‍ಬುಕ್ಕಿನ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದನ್ನು ಮತ್ತಶ್ಟು ಹೆಚ್ಚಿಸಲು ಅಲೆಯುಲಿ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಮಂದಿಗೆ ಕಯ್ಗೆಟುಕುವ ಬೆಲೆಯಲ್ಲಿ ಮಿಂಬಲೆ ಸೇವೆ ಮತ್ತು ಅಲೆಯುಲಿ ದರಗಳನ್ನು ನೀಡುವಂತೆ ಮಾತುಕತೆ ಮಾಡುತ್ತಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಪೇಸ್‍ಬುಕ್ ತಾಣವನ್ನು ಇಂಡಿಯಾದ ಹೆಚ್ಚಿನ ನುಡಿಗಳಲ್ಲಿ ನೀಡುವತ್ತ ಕೆಲಸ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕ್ರಿಸ್ ಡೇನಿಯಲ್ ಅವರು ಹೀಗೆನ್ನುತ್ತಾರೆ;

“ಕಂಪನಿಯು ಇಂಡಿಯಾದಲ್ಲಿ ಬೆಳೆಯಬೇಕೆಂದರೆ ಜನರ ನುಡಿಯಲ್ಲಿ ಪೇಸ್‍ಬುಕ್ ಸೇವೆಯನ್ನು ನೀಡುವುದು ಅಗತ್ಯವಾಗಿದೆ. ಹಲವಾರು ನುಡಿಗಳಿರುವ ಇಂಡಿಯಾದಲ್ಲಿ ಒಂದೇ ನುಡಿಯಲ್ಲಿ ಪೇಸ್‍ಬುಕ್ಕನ್ನು ನೀಡುವುದು ಬೇರೊಂದು ನುಡಿಯಾಡುವ ಜನರಿಗೆ ಪೇಸ್‍ಬುಕ್ಕನ್ನು ಬಳಸದಂತೆ ಅಡ್ಡಗೋಡೆಯಾಗುತ್ತದೆ. ನಾವು ಬೆಳೆಯಬೇಕೆಂದರೆ ಇಂತಹ ಅಡ್ಡಗೋಡೆಗಳನ್ನು ತೆಗೆಯ ಬೇಕಾಗುತ್ತದೆ. ಅದಕ್ಕಾಗಿ ಸ್ಯಾಮ್‍ಸಂಗ್, ನೋಕಿಯಾ ಹಾಗು ಇನ್ನಿತರ ಕಂಪನಿಗಳೊಂದಿಗೆ ಮಾತುಕತೆ ನಡೆಸಿ, ಅವರ ಅಲೆಯುಲಿ ಹಾಗು ಚೂಟಿಯುಲಿಗಳಲ್ಲಿ ಪೇಸ್‍ಬುಕ್ ಮತ್ತು ಪೇಸ್‍ಬುಕ್ ಮೆಸೆಂಜರನ್ನು ಇಂಡಿಯಾದ ಹಲವು ನುಡಿಗಳಲ್ಲಿ ನೀಡುವಂತೆ ಕೇಳಲಾಗುತ್ತಿದೆ. ಸದ್ಯಕ್ಕೆ ಪೇಸ್‍ಬುಕ್ ಈಗ ಕನ್ನಡ, ತಮಿಳು, ಮಲಯಾಳಂ, ಗುಜರಾತಿ, ಹಿಂದಿ, ಪಂಜಾಬಿ, ಬೆಂಗಾಳಿ ಮತ್ತು ಮರಾಟಿ ನುಡಿಗಳಲ್ಲಿ ಸಿಗುತ್ತಿದೆ. ಜಗತ್ತಿನಾದ್ಯಂತ ಒಟ್ಟು ೧೦೦ ನುಡಿಗಳಲ್ಲಿ ಈಗ ಪೇಸ್‍ಬುಕ್‍ ಸಿಗುತ್ತಿದೆ. ಏ‍ರ್‍ಟೆಲ್, ಅಯ್ಡಿಯಾ, ಏರ್‍ಸೆಲ್ ಮತ್ತು ರಿಲೆಯನ್ಸ್ ಕಂಪನಿಗಳೊಡನೆ ಮಾತನಾಡಿ ಅವರ ಸೇವೆಗಳನ್ನು ಮಂದಿಗೆ ಕಯ್ಗೆಟುಕುವ ಬಗೆಯಲ್ಲಿ ನೀಡುವಂತೆ ಕೇಳಲಾಗುತ್ತಿದೆ. ಹೀಗೆ ಮುಂದುವರಿಸುತ್ತಾ, ಬೇರೆ ಬೇರೆ ನುಡಿಯಾಡುಗರನ್ನು ಪೇಸ್‍ಬುಕ್ ಬಳಸುವಂತೆ ಸೆಳೆಯುತ್ತಾ ಮತ್ತು ಬಳಕೆದಾರರ ಸಾದ್ಯತೆಗಳನ್ನು ಹೆಚ್ಚಿಸುವತ್ತಾ ಕೆಲಸಗಳನ್ನು ಮಾಡಲಾಗುತ್ತದೆ.”

ಕ್ರಿಸ್ ಡೇನಿಯಲ್ ಅವರ ಮಾತು ನೂರಕ್ಕೆ ನೂರರಶ್ಟು ದಿಟ. ಹಲವಾರು ನುಡಿಯಾಡುವ ನಾಡಿನಲ್ಲಿ ಒಂದೇ ನುಡಿಯಲ್ಲಿ ಯಾವುದೇ ಒಂದು ಸೇವೆಯನ್ನು ನೀಡಿದರೆ ಉಳಿದ ನುಡಿಯಾಡುವ ಜನರು ಆ ಸೇವೆಯನ್ನು ಬಳಸಲು ಹಿಂಜರಿಯುತ್ತಾರೆ. ಅಂತಹ ಸೇವೆಯನ್ನು ಬಳಸಬೇಕೆಂದರೆ ಜನರು ಬೇರೊಂದು ನುಡಿಯನ್ನು ಕಲಿಯಬೇಕಾಗುತ್ತದೆ. ಹಾಗಾಗಿ ಒಂದು ನುಡಿಯ ಸೇವೆಯು ಅಡ್ಡಗೊಡೆಯಾಗಿಯೇ ನಿಲ್ಲುತ್ತದೆ ಮತ್ತು ಆ ಸೇವೆ ನೀಡುತ್ತಿರುವ ಕಂಪನಿಯ ಬೆಳವಣಿಗೆಗೂ ಪೆಟ್ಟು ಬೀಳುತ್ತದೆ.

ಮುಂದಿನ ಕೆಲವು ವರುಶಗಳಲ್ಲಿ ಸಾಕಶ್ಟು ಜನರನ್ನು ತಲುಪುವುದು ಪೇಸ್‍ಬುಕ್ಕಿನ ಗುರಿಯಾಗಿದೆ. ಜನರನ್ನು ತಲುಪಬೇಕೆಂದರೆ ಅದು ಅವರಾಡುವ ನುಡಿಯಿಂದ ಮಾತ್ರ ಸಾದ್ಯ ಎಂದು ಇವರು ಅರಿತಿದ್ದಾರೆ. ಜನರ ನುಡಿಯಲ್ಲಿ ತಮ್ಮ ಸೇವೆಯನ್ನು ಹೆಚ್ಚಿಸುವತ್ತ ಕೆಲಸ ಮಾಡುತ್ತಿರುವುದು, ತಮ್ಮ ಗುರಿಯನ್ನು ತಲುಪಲು ಇಟ್ಟಿರುವ ಸರಿಯಾದ ಹೆಜ್ಜೆಯಾಗಿದೆ.

(ಮಾಹಿತಿ ಸೆಲೆ: business-standard)

(ಚಿತ್ರ ಸೆಲೆ:anonsweden)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: