ಮುಗಿಲಿಗೆ ಮುತ್ತಿಡುವ ಕಟ್ಟಡ – ಟೋಕಿಯೋ ಸ್ಕಯ್‍ಟ್ರೀ

– ರತೀಶ ರತ್ನಾಕರ.

Sky_Tree

ಪ್ರಾನ್ಸ್ ಎಂದಕೂಡಲೆ ನಮಗೆ ನೆನಪಾಗುವುದು ಅಯ್ಪೆಲ್ ಟವರ್‍. ಜಗತ್ತಿನಲ್ಲೆಲ್ಲಾ ಮಂದಿಯ ಗಮನ ಸೆಳೆದ ಟವರ್‍‍ಗಳಲ್ಲಿ ಇದು ಒಂದು, ಈಗ ಇದಕ್ಕೆ ಮತ್ತೊಂದರ ಸೇರ್‍ಪಡೆಯಾಗಿದೆ ಅದೇ ಜಪಾನಿನ ಟೋಕಿಯೋ ಸ್ಕಯ್‍ಟ್ರೀ. ಬನ್ನಿ, ಇದರ ಹೆಚ್ಚುಗಾರಿಕೆ ಏನು ಎಂದು ತಿಳಿಯೋಣ.

ಜಪಾನಿನ ಟೊಕಿಯೋ ನಗರದ ಸುಮಿಡಾ ಎಂಬಾ ಜಾಗದಲ್ಲಿ ಈ ಕಟ್ಟಡವನ್ನು ಕಟ್ಟಲಾಗಿದೆ, ಟಿವಿ ಹಾಗು ಬಾನುಲಿ ಚಾನೆಲ್‍ಗಳ ಹರಡುವಿಕೆಗೆ ಇದನ್ನು ಬಳಸಲಾಗುತ್ತಿದೆ. 2010 ರಲ್ಲಿ ಇದರ ಮೊದಲ ಹಂತವನ್ನು ಕಟ್ಟಲಾಯಿತು, 2011 ಮಾರ್‍ಚಿನ ಹೊತ್ತಿಗೆ 2080 ಅಡಿಗಳಶ್ಟು ಎತ್ತರಕ್ಕೆ ಕಟ್ಟಿ ಮುಗಿಸಲಾಯಿತು. ಈಗ ದುಬಯ್‍ನ ಬುರ್‍ಜ್ ಕಲಿಪಾ ಬಿಟ್ಟರೆ ಜಗತ್ತಿನ ಅತಿ ಎತ್ತರದ ಕಟ್ಟಡ ಇದಾಗಿದೆ. 2012 ಪೆಬ್ರವರಿಯಿಂದ ಇದನ್ನು ಟಿವಿ ಹಾಗು ಬಾನುಲಿ ಚಾನೆಲ್‍ಗಳ ಹರಡುವಿಕೆಗೆ ಬಳಸಲು ಅರಂಬಿಸಿದರು.

ಕಟ್ಟು-ಬಗೆ:
ಆಗಾಗ ನೆಲನಡುಗುವಿಕೆಗೆ ತುತ್ತಾಗುವ ಜಪಾನಿನಲ್ಲಿ ಈ ಎತ್ತರದ ಕಟ್ಟಡವನ್ನು ಕಟ್ಟಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕಯ್ಗೊಳ್ಳಲಾಯಿತು. ಮುಕ್ಯವಾಗಿ ಕೆಳಗಿನ ಮೂರು ಗುರಿಗಳನ್ನು ಇಟ್ಟುಕೊಂಡು ಇದರ ಕಟ್ಟು-ಬಗೆಯನ್ನು ಸಿದ್ದಪಡಿಸಲಾಯಿತು.

1. ಜಪಾನಿನ ಪಾರಂಪರಿಕ ಚೆಲುವು ಮತ್ತು ಆದುನಿಕತೆ ಮೇಳಯ್ಸಿರಬೇಕು.

2. ನಗರದ ಬೆಳವಣಿಗೆ ಮತ್ತು ಹೊಸತನಕ್ಕೆ ನೆರವಾಗುವಂತಿರಬೇಕು.

3. ನೆಲನಡುಗುವಿಕೆ ಇಲ್ಲವೇ ಇನ್ನ್ಯಾವುದೇ ಕೇಡಿನಿಂದ ಪಾರಾಗುವಂತಿರಬೇಕು ಮತ್ತು ಕಣ್ಗಾವಲಿಗೆ ಪೂರಕವಾಗಿರಬೇಕು.

ಈ ಮೂರು ಗುರಿಗಳನ್ನು ಹೊತ್ತ ಕಟ್ಟು ಬಗೆಯು ಬುಡದಿಂದ 1150 ಅಡಿಗಳವರೆಗೆ ಮುಕ್ಕಾಲಿನ ಆಕಾರದಲ್ಲಿದ್ದು, ನೆಲನಡುಗುವಿಕೆಯಲ್ಲಿ ಹೆಚ್ಚಿನ ತೊಂದರೆಯನ್ನು ತಪ್ಪಿಸುತ್ತದೆ. 1150 ಅಡಿಯಿಂದ ಮೇಲಕ್ಕೆ ಇದು ಉರುಳಿನ ಆಕಾರದಲ್ಲಿ ಇದೆ. 1150 ಅಡಿ ಎತ್ತರದಲ್ಲಿ ಸುಮಾರು 2000ದಶ್ಟು ಮಂದಿ ನಿಂತು ನೋಡಬಹುದಾಂತಹ ಚಾವಣಿಯನ್ನು ಕಟ್ಟಲಾಗಿದೆ. ಹಾಗೆಯೇ, 1480 ಅಡಿ ಎತ್ತರದ ಜಾಗಗಳಲ್ಲಿ ಸುಮಾರು 900 ಮಂದಿ ನಿಂತು ನೋಡಬಹುದಾಂತಹ ಚಾವಣಿಯನ್ನು ಕಟ್ಟಲಾಗಿದೆ.

150px-Tokyo_Skytree_Silhouette.svg

ನೆಲನಡುಗುವಿಕೆಯ ಕೇಡನ್ನು ತಪ್ಪಿಸಲು ಕಟ್ಟಡದ ನಡುವಿನ ಕಂಬವನ್ನು ಗಟ್ಟಿಯಾದ ಜಲ್ಲಿಗಾರೆಯಿಂದ ಕಟ್ಟಲಾಗಿದೆ. ಈ ನಡುಗಂಬಕ್ಕೆ ಸುತ್ತಾಗಿ ಕಟ್ಟಡದ ಬಾಗಗಳನ್ನು ಕಟ್ಟಲಾಗಿದೆ. ನೆಲದಿಂದ ಸುಮಾರು 410 ಅಡಿಯವರೆಗು ಕಟ್ಟಡದ ಹೊರಗಿನ ಬಾಗ ಈ ನಡುಗಂಬಕ್ಕೆ ತಾಗುವುದಿಲ್ಲ. 410 ಅಡಿಯಿಂದ 1230 ಅಡಿಗಳವರೆಗೆ ಕಟ್ಟಡದ ಹೊರಗಿನ ಬಾಗ ತಾಗಿಕೊಂಡಿರುತ್ತದೆ ಈ ಹೊರಗಿನ ಬಾಗವು ನಡುಗಂಬಕ್ಕೆ ಮೆತ್ತನೆಯ ಹೀರುಕದಂತಹ (oil dampers) ವಸ್ತುವಿನೊಂದಿಗೆ ಅಂಟಿಕೊಂಡಿರುತ್ತದೆ.

ಒಂದು ವೇಳೆ ನೆಲ ನಡುಗಿದರೆ ಈ ಮೆತ್ತನೆಯ ಹೀರುಕಗಳು ಅಲುಗುವಿಕೆಯ ಹುರುಪನ್ನು ಎಳೆದುಕೊಳ್ಳುತ್ತವೆ ಹಾಗಾಗಿ ಅಪಾಯ ತಪ್ಪುತ್ತದೆ. ಅರಿಗರ ಪ್ರಕಾರ ಈ ಹೀರುಕಗಳು ಸುಮಾರು 50% ನಶ್ಟು ನೆಲನಡುಗುವಿಕೆಯ ಹುರುಪನ್ನು ಎಳೆದುಕೊಳ್ಳಬಲ್ಲವು. ಕಟ್ಟಡದ ಮೇಲ್ಬಾಗವನ್ನು ಗಾಜಿನ ವಸ್ತುಗಳಿಂದ ಮಾಡಿದ್ದು ಅಂದದ ಜೊತೆ ಕಣ್ಗಾವಲಿಗೂ ನೆರವಾಗಿವೆ.

ಈ ಕಟ್ಟಡಕ್ಕೆ ತೆಳು ನೀಲಿ ಸೇರಿದ ಬಿಳಿ ಬಣ್ಣವನ್ನು ಹಚ್ಚಲಾಗಿದೆ ಇದು ಜಪಾನಿನ ಪಾರಂಪರಿಕ ಬಣ್ಣವಾಗಿದ್ದು ಕಟ್ಟಡವನ್ನು ನೋಡಿದ ಕೂಡಲೇ ಜಪಾನಿನ ಸೊಗಡನ್ನು ಎತ್ತಿಹಿಡಿದಂತನಿಸುತ್ತದೆ. ಅತಿ ಎತ್ತರದ ಜಾಗದಿಂದ ಟಿವಿ ಹಾಗು ಬಾನುಲಿ ಚಾನೆಲ್‍ಗಳ ಹರಡುವಿಕೆ ಮಾಡುತ್ತಿರುವುದರಿಂದ ಇವುಗಳ ಮಿಂಚಿನ ಅಲೆಗಳು ಹೆಚ್ಚಿನ ದೂರಕ್ಕೆ ತಲುಪುತ್ತವೆ ಮತ್ತು ಅಲೆಗಳ ಹುರುಪು ಚೆನ್ನಾಗಿರುತ್ತದೆ ಹೀಗಾಗಿ ಇದು ನಗರದ ಬೆಳವಣಿಗೆಗೂ ನೆರವಾಗಿದೆ.

ಹೀಗೆ ಮೂರು ಗುರಿಗಳನ್ನು ಹೊತ್ತು ಕಟ್ಟಲಾಗಿರುವ ಈ ಕಟ್ಟಡವು ಜಗತ್ತಿನ ಎರಡನೇ ಎತ್ತರದ ಕಟ್ಟಡ ಎಂಬ ಹೆಮ್ಮೆಯ ಜೊತೆ ನೆಲನಡುಗುವಿಕೆಯನ್ನು ಎದುರಿಸುವ ಕಸುವನ್ನು ಹೊಂದಿರುವ ಕಟ್ಟಡ ಎಂದು ಹೆಸರಾಗಿದೆ.

(ಮಾಹಿತಿ ಮತ್ತು ತಿಟ್ಟ ಸೆಲೆ :  en.wikipedia.org)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.