ಪದಗಳ ಹಿನ್ನಡವಳಿಯನ್ನು ಅರಿಯುವ ಬಗೆ
ನುಡಿಯರಿಮೆಯ ಇಣುಕುನೋಟ – 29
ಕನ್ನಡದ ಯಾವ ಪದವನ್ನು ಬೇಕಿದ್ದರೂ ಸಂಸ್ಕ್ರುತದ ಪದಗಳಿಂದ ಬಂದುವೆಂಬುದಾಗಿ ತೋರಿಸಿಕೊಡಬಲ್ಲೆವು ಎಂಬ ನಂಬಿಕೆ ಕೆಲವರಲ್ಲಿದೆ; ಹೀಗೆ ತೋರಿಸಿಕೊಡುವುದಕ್ಕಾಗಿ ಅವರು ಪದಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ ಕಾಣಿಸುವ ಹೋಲಿಕೆಗಳನ್ನು ಮಾತ್ರವಲ್ಲದೆ ಹಲವಾರು ಬಗೆಯ ಕಯ್ಚಳಕಗಳನ್ನೂ ಬಳಸುತ್ತಾರೆ.
ಈ ಕಯ್ಚಳಕಗಳ ಮೂಲಕ ಅವರು ಉಲಿ ಇಲ್ಲವೇ ಹುರುಳುಗಳಲ್ಲಿ ಹೋಲಿಕೆಗಳು ಕಾಣಿಸದಿದ್ದರೂ ಸಂಬಂದವನ್ನು ಕಾಣಬಲ್ಲರು; ಎತ್ತುಗೆಗಾಗಿ, ಕನ್ನಡದ ‘ನೆತ್ತರು’ ಪದವನ್ನು ಸಂಸ್ಕ್ರುತದ ‘ರುಧಿರ’ ಪದದಿಂದ ಪಡೆಯಬಲ್ಲರು; ಇಲ್ಲಿ ಹುರುಳಿನ ಹೋಲಿಕೆಯಿದ್ದರೂ ಉಲಿಯ ಹೋಲಿಕೆ ತುಂಬಾ ಕಡಿಮೆ; ಕನ್ನಡದ ‘ಕಟ್ಟೆ’ ಪದವನ್ನು ಸಂಸ್ಕ್ರುತದ ‘ಕಕ್ಷಾ’ (ಕಂಕುಳು) ಪದದಿಂದ ಪಡೆಯಬಲ್ಲರು; ಇಲ್ಲಿ ಹುರುಳಿನ ಹೋಲಿಕೆಯೂ ತುಂಬಾ ಕಡಿಮೆ. ಹೀಗಿದ್ದರೂ, ಕಯ್ಚಳಕಗಳ ಮೂಲಕ ಅವರು ಇವನ್ನು ಒಂದಕ್ಕೊಂದು ಜೋಡಿಸಿ ಬಿಡುತ್ತಾರೆ. ಇಂತಹ ಕಯ್ಚಳಕಗಳು ಅವರಿಗೆ ತಮ್ಮ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ನೆರವಾಗುತ್ತವೆಯಾದರೂ, ನಿಜಕ್ಕೂ ಆ ಪದಗಳ ಹಿನ್ನಡವಳಿ (ಚರಿತ್ರೆ) ಎಂತಹದು ಎಂಬುದನ್ನು ತಿಳಿದುಕೊಳ್ಳುವಲ್ಲಿ ಅವು ಯಾವ ನೆರವನ್ನೂ ನೀಡುವುದಿಲ್ಲ.
ಕನ್ನಡದ ಪದಗಳು ಎರಡು ಬಗೆಗಳಲ್ಲಿ ಸಂಸ್ಕ್ರುತ ಪದಗಳೊಂದಿಗೆ ಸಂಬಂದಿಸಿರಬಲ್ಲುವು: ಅವೆರಡೂ ಒಂದೇ ನುಡಿಕುಟುಂಬದ ನುಡಿಗಳೆಂಬುದೊಂದು ಬಗೆ, ಮತ್ತು ಅವುಗಳಲ್ಲಿ ಒಂದು ಇನ್ನೊಂದರಿಂದ ಪದಗಳನ್ನು ಎರವಲು ಪಡೆದಿದೆಯೆಂಬುದಿನ್ನೊಂದು ಬಗೆ. ಹಾಗಾಗಿ, ಯಾವ ಬಗೆಯ ಸಂಬಂದವನ್ನು ಅವುಗಳ ಪದಗಳ ನಡುವೆ ಕಾಣಲಾಗುತ್ತದೆ ಎಂಬುದನ್ನು ಮೊದಲು ತಿಳಿಸಬೇಕಾಗುತ್ತದೆ.
ನುಡಿಗಳಲ್ಲಿ ಕಾಲದಿಂದ ಕಾಲಕ್ಕೆ ಹಲವು ಬಗೆಯ ಮಾರ್ಪಾಡುಗಳು ನಡೆಯುತ್ತಲೇ ಇರುತ್ತವೆ; ಇವು ಉಲಿಗಳನ್ನು ಮಾರ್ಪಡಿಸಬಹುದು, ಪದಗಳನ್ನು ಇಲ್ಲವೇ ಅವುಗಳ ಹುರುಳುಗಳನ್ನು ಮಾರ್ಪಡಿಸಬಹುದು, ಮತ್ತು ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳನ್ನು ಮಾರ್ಪಡಿಸಬಹುದು. ಇಂತಹ ಹಲವು ಬಗೆಯ ಮಾರ್ಪಾಡುಗಳು ನಡೆದುದರಿಂದಾಗಿ ಹಳೆಗನ್ನಡವಿದ್ದುದು ನಡುಗನ್ನಡವಾಗಿ ಇವತ್ತು ಹೊಸಗನ್ನಡವಾಗಿದೆ, ಮತ್ತು ಹೊಸಗನ್ನಡವೂ ಹಲವು ಬಗೆಯ ಆಡುನುಡಿಗಳಾಗಿ ಒಡೆದುಕೊಂಡಿದೆ.
ಕಾಲದಿಂದ ಕಾಲಕ್ಕೆ ನಡೆಯುವ ಇಂತಹ ಮಾರ್ಪಾಡುಗಳಲ್ಲಿ ನುಡಿಯ ಉಲಿಗಳಲ್ಲಿ ನಡೆಯುವ ಮಾರ್ಪಾಡುಗಳೇ ತುಂಬಾ ಮುಕ್ಯವಾದವುಗಳು; ಯಾಕೆಂದರೆ, ಅವುಗಳಿಂದಾಗಿ ಪದಗಳ ಮತ್ತು ಒಟ್ಟು(ಪ್ರತ್ಯಯ)ಗಳ ರೂಪದಲ್ಲಿ ಮಾತ್ರವಲ್ಲದೆ, ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳಲ್ಲೂ ಮಾರ್ಪಾಡುಗಳು ನಡೆಯುತ್ತವೆ. ಕನ್ನಡದ ಹಿನ್ನಡವಳಿಯಲ್ಲಿ ಇಂತಹ ಹಲವು ಬಗೆಯ ಉಲಿಗಳ ಮಾರ್ಪಾಡುಗಳು ನಡೆದಿವೆ.
ಹಳೆಗನ್ನಡದ ಪಕಾರ ಹಕಾರವಾಗಿರುವುದು (ಪಾಲು>ಹಾಲು, ಪಳೆ>ಹಳೆ, ಪೋಗು>ಹೋಗು); ರ-ಱ, ಳ-ೞಗಳ ನಡುವಿನ ವ್ಯತ್ಯಾಸ ಇಲ್ಲವಾಗಿರುವುದು, ಉದ್ದ ತೆರೆಯುಲಿ (ಸ್ವರ) ಮತ್ತು ತಡೆಯುಲಿ(ಸ್ಪರ್ಶ)ಗಳ ನಡುವಿನ ಮೂಗುಲಿ (ಅನುನಾಸಿಕ) ಬಿದ್ದುಹೋಗಿರುವುದು (ನೂಂಕು>ನೂಕು, ದಾಂಟು>ದಾಟು) ಮೊದಲಾದುವು ಇಂತಹ ಉಲಿಗಳ ಮಾರ್ಪಾಡುಗಳು.
ಇವು ಉಲಿಗಳ ಮಾರ್ಪಾಡುಗಳಲ್ಲದೆ ಪದಗಳ ಮಾರ್ಪಾಡುಗಳಲ್ಲ ಎಂಬುದನ್ನು ಗಮನಿಸುವುದು ಅವಶ್ಯ; ಪಕಾರ ಹಕಾರವಾಗುವಂತಹ ಒಂದು ಮಾರ್ಪಾಡು ನಡೆದಾಗ, ಪಕಾರವಿದ್ದ ಎಲ್ಲಾ (ಸಾವಿರಕ್ಕಿಂತಲೂ ಹೆಚ್ಚು) ಪದಗಳೂ ಅದಕ್ಕೆ ಒಳಗಾಗಿರುತ್ತವೆ. ಇಂತಹ ಮಾರ್ಪಾಡುಗಳು ಒಂದು ಉಲಿಯನ್ನು ಎಲ್ಲೆಡೆಗಳಲ್ಲೂ ತಾಗಬಹುದು, ಇಲ್ಲವೇ ಕೆಲವೆಡೆಗಳಲ್ಲಿ ಮಾತ್ರ ತಾಗಬಹುದು; ಪಕಾರ ಹಕಾರವಾಗುವ ಮಾರ್ಪಾಡು ಪಕಾರವನ್ನು ಎಲ್ಲೆಡೆಗಳಲ್ಲೂ ತಾಗಿದೆ; ಆದರೆ, ಎಕಾರ ಇಕಾರವಾಗುವ ಇನ್ನೊಂದು ಮಾರ್ಪಾಡು ಎಕಾರದ ಬಳಿಕ ಒತ್ತೆ ಮುಚ್ಚುಲಿ (ವ್ಯಂಜನ) ಮತ್ತು ಇಕಾರ ಇಲ್ಲವೇ ಉಕಾರ ಬಂದಿರುವಲ್ಲಿ ಮಾತ್ರ ನಡೆದಿದೆ, ಬೇರೆಡೆಗಳಲ್ಲಿ ಎಕಾರ ಮಾರ್ಪಡದೆ ಉಳಿದಿದೆ (ಬಿಳಿ, ಬಿಸಿ, ನಿಡು ಎಂಬಂತಹ ಪದಗಳಲ್ಲಿ ಈ ಮಾರ್ಪಾಡು ನಡೆದಿದೆ. ಆದರೆ ಬೆಳ್ಳಗೆ, ಬೆಚ್ಚಗೆ, ನೆಟ್ಟಗೆ ಎಂಬಂತಹ ಪದಗಳಲ್ಲಿ ನಡೆದಿಲ್ಲ). ಇದಲ್ಲದೆ, ಇಂತಹ ಮಾರ್ಪಾಡುಗಳಿಗೆಲ್ಲ ಒಂದು ಗಡುವಿರುತ್ತದೆ; ಈ ಗಡುವು ಮುಗಿದ ಮೇಲೆ ಹಿಂದಿನ ಬರಹಗಳಿಂದ (ಪಾಲು, ಪುಟ್ಟ, ಪೆಟ್ಟು) ಇಲ್ಲವೇ ಬೇರೆ ನುಡಿಗಳಿಂದ (ಪಾಪ, ಪುಣ್ಯ, ಪೂಜೆ) ಪದಗಳು ಎರವಲಾಗಿ ಬಂದು ಈ ಮಾರ್ಪಾಡಿಗೆ ಹೊರಪಡಿಕೆಗಳಾಗಿ ಕಾಣಿಸಬಲ್ಲುವು.
ಎರಡು ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ತೀರ್ಮಾನಿಸುವಲ್ಲೆಲ್ಲ ಇಂತಹ ಉಲಿಗಳ ಮಾರ್ಪಾಡುಗಳನ್ನೇ ಮುಕ್ಯವಾದ ನೆಲೆಯಾಗಿ ಬಳಸಿಕೊಳ್ಳಲಾಗುತ್ತದೆ. ಯಾಕೆಂದರೆ, ನುಡಿಗಳಲ್ಲಿ ನಡೆಯುವ ಹಲವು ಬಗೆಯ ಮಾರ್ಪಾಡುಗಳಲ್ಲಿ ಉಲಿಗಳ ಮಾರ್ಪಾಡುಗಳ ಮೇಲೆ ಮಾತ್ರ ಪದಗಳ ಹುರುಳುಗಳು ಯಾವ ಪ್ರಬಾವವನ್ನೂ ಬೀರುವುದಿಲ್ಲ; ನೇರವಾಗಿ ಪದಗಳಲ್ಲಿ ಇಲ್ಲವೇ ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳಲ್ಲಿ ನಡೆಯುವ ಮಾರ್ಪಾಡುಗಳ ಮೇಲೆ ಅವು ಹಲವು ಬಗೆಗಳಲ್ಲಿ ಪ್ರಬಾವವನ್ನು ಬೀರುತ್ತವೆ, ಮತ್ತು ಈ ರೀತಿ ಹುರುಳುಗಳಿಂದ ಪ್ರಬಾವಿತವಾಗಿರುವ ಮಾರ್ಪಾಡುಗಳನ್ನು ಕಚಿತವಾದ ಕಟ್ಟಲೆಗಳಲ್ಲಿ ಸೆರೆಹಿಡಿಯಲು ಬರುವುದಿಲ್ಲ; ಯಾಕೆಂದರೆ, ಹುರುಳುಗಳಿಂದ ಪ್ರಬಾವಿತವಾದ ಮಾರ್ಪಾಡುಗಳಿಗೆ ಹಲವಾರು ಬಗೆಯ ಹೊರಪಡಿಕೆಗಳಿರುತ್ತವೆ.
ಹಾಗಾಗಿ, ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂಬ ತೀರ್ಮಾನಕ್ಕೆ ಬರಬೇಕಿದ್ದಲ್ಲಿ ಕನ್ನಡದ ಹಿನ್ನಡವಳಿಯಲ್ಲಿ ನಡೆದ ಉಲಿಗಳ ಮಾರ್ಪಾಡುಗಳನ್ನೇ ಮುಕ್ಯ ನೆಲೆಯಾಗಿ ಬಳಸಿಕೊಳ್ಳಬೇಕಾಗುತ್ತದೆ. ಎಂದರೆ, ಕನ್ನಡ ಮತ್ತು ಸಂಸ್ಕ್ರುತ ಪದಗಳ ನಡುವೆ ಕಾಣಿಸುವ ವ್ಯತ್ಯಾಸಗಳು ಕನ್ನಡದ ಹಿನ್ನಡವಳಿಯಲ್ಲಿ ನಡೆದಿದ್ದ ಹಲವು ಬಗೆಯ ಉಲಿಗಳ ಮಾರ್ಪಾಡುಗಳಿಂದಾಗಿ ಮೂಡಿಬಂದಿವೆ ಎಂಬುದಾಗಿ ತೋರಿಸಿಕೊಡಲು ಸಾದ್ಯವಾದಾಗ ಮಾತ್ರ ಕನ್ನಡ ಸಂಸ್ಕ್ರುತದಿಂದ ಬೆಳೆದುಬಂದಿದೆ ಎಂಬುದನ್ನು ಒಪ್ಪಿಕೊಳ್ಳಲು ಬರುತ್ತದೆ. ಆದರೆ, ಇದುವರೆಗೆ ಯಾರಿಗೂ ಆ ರೀತಿ ತೋರಿಸಿಕೊಡಲು ಸಾದ್ಯವಾಗಿಲ್ಲ.
ಹಾಗಾಗಿ, ಸದ್ಯಕ್ಕಂತೂ ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿಲ್ಲವೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ, ಮತ್ತು ಕನ್ನಡದಲ್ಲಿ ಮೂಲದ್ರಾವಿಡ ನುಡಿಯಿಂದ ಬಂದ ಕನ್ನಡದವೇ ಆದ ಪದಗಳು, ಮತ್ತು ಸಂಸ್ಕ್ರುತವೇ ಮೊದಲಾದ ಬೇರೆ ನುಡಿಗಳಿಂದ ಎರವಲಾಗಿ ಬಂದ ಪದಗಳು ಎಂಬುದಾಗಿ ಎರಡು ಬಗೆಯ ಪದಗಳು ಇವೆಯೆಂಬುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ.
ಕನ್ನಡದ ಪದಗಳಿಗೂ ಸಂಸ್ಕ್ರುತದ ಪದಗಳಿಗೂ ನಡುವೆ ಅವುಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ ಹೋಲಿಕೆಯಿದೆಯಾದರೆ, ಅದಕ್ಕೆ ಹಲವು ಕಾರಣಗಳಿರಬಲ್ಲುವು. ಎತ್ತುಗೆಗಾಗಿ, ಈ ಎಲ್ಲಾ ಪದಗಳನ್ನೂ ಉಂಟುಮಾಡಿದವರು ಮಾನವರೇ ಎಂಬುದೊಂದು ಕಾರಣ; ಹೋಲಿಕೆ ಬರಿಯ ಆಕಸ್ಮಿಕವಾಗಿರಬಹುದೆಂಬುದಿನ್ನೊಂದು ಕಾರಣ. ಹಾಗಾಗಿ, ಒಂದು ನುಡಿ ಇನ್ನೊಂದರಿಂದ ಎರವಲು ಪಡೆದಿದೆಯೆಂಬುದು ಪದಗಳ ನಡುವಿರುವ ಹೋಲಿಕೆಗಳಿಗಿರುವ ಹಲವು ಕಾರಣಗಳಲ್ಲಿ ಒಂದು ಮಾತ್ರ. ಇದಲ್ಲದೆ, ಇಲ್ಲಿಯೂ ಒಂದು ಪದವನ್ನು ಯಾವ ನುಡಿ ಯಾವ ನುಡಿಯಿಂದ ಎರವಲಾಗಿ ಪಡೆದಿದೆ ಎಂಬುದನ್ನು ತೀರ್ಮಾನಿಸುವಲ್ಲಿ ಅರಕೆಗೆ ನೆಲೆಯಿದೆ.
ಸಾಮಾನ್ಯವಾಗಿ, ಒಂದು ಪದದ ಹರಹು ಎಂತಹದು ಎಂಬುದರ ಮೇಲೆ ಅದರ ಹಿನ್ನಡವಳಿಯೆಂತಹದು ಎಂಬುದನ್ನು ತೀರ್ಮಾನಿಸಲಾಗುತ್ತದೆ; ಎತ್ತುಗೆಗಾಗಿ, ಕನ್ನಡದ ಒಂದು ಪದಕ್ಕೆ ಸಮಾನವಾದ ಪದಗಳು ತಮಿಳು, ತೆಲುಗು, ಗೋಂಡಿ, ಕುಡುಕ್ ಮೊದಲಾದ ಬೇರೆ ಹಲವು ದ್ರಾವಿಡ ನುಡಿಗಳಲ್ಲೂ ಕಾಣಿಸಿಕೊಳ್ಳುತ್ತಿವೆಯಾದರೆ, ಮತ್ತು ಸಂಸ್ಕ್ರುತವನ್ನು ಹೊರತುಪಡಿಸಿ ಉಳಿದ ಲ್ಯಾಟಿನ್, ಗ್ರೀಕ್, ಪರ್ಶಿಯನ್ ಮೊದಲಾದ ಇಂಡೋ-ಯುರೋಪಿಯನ್ ನುಡಿಗಳಲ್ಲಿ ಕಾಣಿಸುವುದಿಲ್ಲವಾದರೆ, ಅದು ಕನ್ನಡದ್ದೇ ಆದ ಪದ, ಮತ್ತು ಸಂಸ್ಕ್ರುತಕ್ಕೇನೇ ಅದು ದ್ರಾವಿಡ ನುಡಿಗಳಿಂದ ಎರವಲಾಗಿ ಬಂದಿದೆ ಎಂದು ಹೇಳಬೇಕಾಗುತ್ತದೆ.
ಇಂತಹ ಅರಕೆಗಳನ್ನು ನಡೆಸದೆ ಬರಿಯ ಹೋಲಿಕೆಯ ಮೇಲೆ ಎಲ್ಲವೂ ಸಂಸ್ಕ್ರುತದಿಂದ ಬಂದಿವೆಯೆಂದು ಹೇಳುವುದನ್ನು ಒಂದು ಅರಿಮೆಯ ಹೇಳಿಕೆಯೆಂದು ತಿಳಿಯಲು ಬರುವುದಿಲ್ಲ.
(ಈ ಬರಹ ವಿಜಯ ಕರ್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
1 Response
[…] << ನುಡಿಯರಿಮೆಯ ಇಣುಕುನೋಟ – 29 […]