ಸುಬ್ರಮಣಿಯನ್ ಚಂದ್ರಶೇಕರ್: ಜಗತ್ತು ಕಂಡ ಅರಿಗರಲ್ಲಿ ಮುಂಚೂಣಿಯವರು
ಸುಬ್ರಮಣಿಯನ್ ಚಂದ್ರಶೇಕರ್ ಅವರು ಬಾರತದಲ್ಲಿ ಆಂಗ್ಲರ ಆಳ್ವಿಕೆ ಇದ್ದಾಗ ಲಾಹೊರ್ ನಲ್ಲಿ ನೆಲೆಸಿದ್ದ ಒಂದು ತಮಿಳು ಅಯ್ಯರ್ ಕುಟುಂಬದಲ್ಲಿ ಅಕ್ಟೋಬರ್ 19, 1910ರಲ್ಲಿ ಹುಟ್ಟಿದರು. ತಂದೆ ಸುಬ್ರಹ್ಮಣ್ಯಂ ಅಯ್ಯರ್ ವಾಯವ್ಯ ರಯ್ಲ್ವೆಯಲ್ಲಿ ‘ಸಹಾಯಕ ಆಡಿಟರ್ ಜನರಲ್’ ಆಗಿದ್ದರು. ತಂದೆಯವರು ಚೆನ್ನಯ್ಗೆ ವರ್‍ಗವಾಗಿ ಬಂದಾಗ, ‘ಟ್ರಿಪ್ಲಿಕೇನ್’ನಲ್ಲಿ ‘ಹಿಂದೂ ಹಯ್ಸ್ಕೂಲ್’ ಸೇರಿದರು. ಗಣಿತದಲ್ಲಿ ಅಪಾರ ಪ್ರತಿಬೆ, ಮತ್ತು ಅದ್ಬುತ ನೆನೆಪಿನ ಶಕ್ತಿಯನ್ನು ಹೊಂದಿದ್ದ ಚಂದ್ರಶೇಕರ್, ಅದಕ್ಕೆ ಪುಟವಿಟ್ಟಂತ ವಿಜ್ನಾನದಲ್ಲಿ ತೀವ್ರವಾದ ಆಸಕ್ತಿ, ಉತ್ಸಾಹ ಉಳ್ಳವರಾಗಿದ್ದರು.
ಅನಿವಾಸಿ ಬಾರತೀಯರಾಗಿದ್ದ ಚಂದ್ರಶೇಕರ್, 1925ರಲ್ಲಿ ಮದ್ರಾಸ್ ನ ಪ್ರಿಸಿಡೆನ್ಸಿ ಪದವಿ ವಿದ್ಯಾಲಯದಲ್ಲಿ ಪುರುಳರಿಮೆಯಲ್ಲಿ ತರಬೇತಿ ಪಡೆದರು. 1930ರ ಮೇನಲ್ಲಿ ಇಂಗ್ಲೆಂಡಿನಲ್ಲಿ ಸಂಶೋದನೆ ಮಾಡಲು ಬಾರತ ಸರಕಾರದ ವಿದ್ಯಾರ‍್ತಿ ವೇತನ ಮಂಜೂರಾಯಿತು. ಮುಂದೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಸಂಶೋದನಾ ವಿದ್ಯಾರ್‍ತಿಯಾದರು. ಅಲ್ಲಿ ಅವರು ಪುರುಳರಿಮೆ ಮತ್ತು ಅರಿಲರಿಮೆ ಎರಡನ್ನು ಮೊಟ್ಟ ಮೊದಲಿಗೆ ಸೇರಿಸಿ, ನಂಟು ಬೆಸೆದರು.
1931ರ ಮೇನಲ್ಲಿ ಲಂಡನ್‌ನ ರಾಯಲ್ ಅಸ್ಟ್ರಾನಾಮಿಕಲ್ ಸೊಸಯ್ಟಿಯ ಸಬೆಗಳಲ್ಲಿ ಬಾಗವಹಿಸಿ, ತಮ್ಮ ಪ್ರಬಂದಗಳನ್ನು ಓದಿದರು. 1931ರ ಜುಲಯಲ್ಲಿ ಜರ್‍ಮನಿಗೆ ತೆರಳಿ ವರ‍್ಗ ಅಡಿಕಟ್ಟಲೆ, ಪೊಟ್ಟಣ ಅಡಿ ಕಟ್ಟಲೆ ಮತ್ತು ಅರಿಲ್ ಗಳ ಕುರಿತು ಅದ್ಯಯನ ಮಾಡಿದರು. ಚಂದ್ರ ಅವರು 1937ರಲ್ಲಿ ಬಾರತದಿಂದ ಸಂಯುಕ್ತ ರಾಶ್ಟ್ರಕ್ಕೆ ವಲಸೆ ಹೋದರು. ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಅವರು ಉಪನ್ಯಾಸಕರಾಗಿ ಬರ್‍ತಿಯಾಗಿ. 1953ರಲ್ಲಿ ಅಮೇರಿಕಾದ ನಾಗರೀಕರಾದರು.
ನಾಸಾ ಹೇಳುವಂತೆ, ಚಂದ್ರ ಅವರು 12ನೇ ಶತಮಾನದ ಅರಿಲ್ಪುರುಳರಿಮೆ ಅರಿಗರಲ್ಲಿ ಮೊಟ್ಟಮೊದಲನೆಯ ಅರಿಗರು. ನಾಸಾದ ಎಕ್ಸ್ -ಕದಿರು ನೋಡುಗೆಗೆ ಚಂದ್ರ ಎಕ್ಸ್- ಕದಿರು ನೋಡುಗೆ(Chandra X-ray Observatory) ಸುಬ್ರಹ್ಮಣಿಯನ್ ಚಂದ್ರಶೇಕರ್ ಅವರ ನೆನಪಿನಲ್ಲಿ ಹೆಸರಿಸಲಾಗಿದೆ. ’ಚಂದ್ರ’ ಎಂದರೆ ಸಂಸ್ಕ್ರುತದಲ್ಲಿ ’ಹೊಳೆಪಿನದು’. ನಾಸಾದ ಈ ನೋಡುಗೆಯನ್ನು ಹೆಸರಿಸಲು ಒಂದು ಸೆಣಸನ್ನು ಏರ‍್ಪಡಿಸಿದ್ದರು. ಈ ಸೆಣಸು 50 ರಾಜ್ಯಗಳಿಂದ ಹಾಗೂ 61 ದೇಶಗಳಿಂದ ಸೇರಿಸಿ 6000 ಜನರು ಹೆಸರಿಡಲು ಸೇರಿದ್ದು ತುಂಬಾ ಆಕರ್‍ಶಿಸಿತ್ತು. ಚಂದ್ರ ಎಕ್ಸ್- ಕದಿರು(Chandra X-ray Observatory) ನೋಡುಗೆಯನ್ನು ಹೊರಬಾನು ನವ್ಕೆ ಕೊಲಂಬಿಯಾ ಜೊತೆ ಜುಲಯ್ 23, 1999ರಂದು ಹೊರಬಾನಿಗೆ ಚಿಮ್ಮಿಸಲಾಯಿತು.
ಕಸುಬಿನ ಮೊದ ಮೊದಲಲ್ಲಿ ಅವರು ಬಿಳಿ ಕುಳ್ಳರಿಲ್‍ಗಳಲ್ಲಿ ( white dwarfs) ’ಮೇಲಿನ ಎಲ್ಲೆ’ (ಅಪ್ಪರ್ ಲಿಮಿಟ್) ಎಂಬುದಿದೆ ಎಂದು ತೋರ‍್ಪಡಿಸಿದರು. ಈಗ ಅದನ್ನು ’ಚಂದ್ರಶೇಕರ್ ಎಲ್ಲೆ’ (Chandrasekhar limit) ಎನ್ನುತ್ತಾರೆ. ಬಿಳಿ ಕುಳ್ಳರಿಲ್ ಎಂಬುದು ಅರಿಲ್ ನ ಬೆಳವಣಿಗೆಯ ಕೊನೆಯ ಹಂತ. ಯಾವಾಗ ಅರಿಲ್ಗಳ (ನಮ್ಮ ನೇಸರನಂತಿರುವ) ಅಣು ಶಕ್ತಿ ಕಡಿಮೆಯಾಗುವುದೊ, ಆಗ ಅರಿಲೊಂದು ಕುಸಿತಕ್ಕೊಳಗಾಗಿ ಬಿಳಿ ಕುಳ್ಳರಿಲ್ ಆಗುತ್ತದೆ. ಈ ಹುಡುಕಾಟ ಎಲ್ಲಾ ಹೊಸ ಪುರುಳರಿಮೆಗೆ ತಳಪಾಯವಾಗಿದೆ. ಪುರುಳರಿಮೆ ಹೇಳುವಂತೆ ಅರಿಲ್ಗಳೇನಾದರು ನೇಸರನಿಗಿಂತ ಹೆಚ್ಚು ದಟ್ಟತೆ ಹೊಂದಿದ್ದರೆ, ಅದು ಸಿಡಿಯಬಹುದು ಇಲ್ಲವೆ ಕಪ್ಪುಕುಳಿಯಾಗಬಹುದು. ಅವರ ಪ್ರಕಾರ ಬಿಳಿ ಕುಳ್ಳರಿಲ್ನ ದಟ್ಟತೆ ಸೂರ‍್ಯನ 1.44 ದಟ್ಟತೆಗಿಂತ ಕೆಳಗಿಳಿಯುವುದಿಲ್ಲವಂತೆ- ಅದೇ ಚಂದ್ರಶೇಕರ್ ಎಲ್ಲೆ.
ಚಂದ್ರ ಅವರು ತಮ್ಮ ಅರಿಮೆ ಹುಡುಕಾಟದಲ್ಲಿ ಅರಿತ ಬೇರೆ ಅರಿಮೆ ವಿಚಾರಗಳು,
- ಅರಿಲ್ಗಳ ಚುರುಕುತನ (stellar dynamics)
- ಸೂಸಿಕೆಯಿಂದಾಗುವ ವರ‍್ಗಾವಣೆ (theory of radiative transfer)
- ಜಲಜನಕದ ಕಳೆದ ಕಣದ ಪೊಟ್ಟಣ ಅಡಿ ಕಟ್ಟಲೆ ( quantum theory of the negative ion of Hydrogen)
- ಹಯ್ಡ್ರೊಡಯ್ನಮಿಕ್ ಮತ್ತು ಹಯ್ಡ್ರೋಮ್ಯಾಗ್ನೆಟಿಕ್ ನೆಲೆಗೊಳ್ಳುವಿಕೆ ( hydrodynamic and hydromagnetic stability)
- ಸರಿನೆಲೆ ಹೊಂದಿದ ಮೊಟ್ಟೆಯಾಕಾರದನೆಲೆ ಹಾಗು ನೆಲೆಗೊಳ್ಳುವಿಕೆ (equilibrium and the stability of ellipsoidal figures of equilibrium)
- ಎಲ್ಲೆಡೆಯ ನಂಟಸ್ತಿಕೆ ( general relativity)
- ಕಪ್ಪುಕುಳಿಯ ಎಣಿಕೆಯರಿಮೆ ಅಡಿ ಕಟ್ಟಲೆ (mathematical theory of black holes)
- ಬಡಿದುಕೊಳ್ಳುವ ಸೆಳೆಕಿನ ಅಲೆಗಳು (theory of colliding gravitational waves)
ಚಂದ್ರಶೇಕರ್ ಅವರಿಗೆ ಪುರಾಣಗಳಲ್ಲಿ, ದೇವರ ನಂಬಿಕೆಗಳಲ್ಲಿ ಆಸಕ್ತಿ ಇರಲಿಲ್ಲ. ಅವರು ನಾಸ್ತಿಕರೆಂದು ಎಶ್ಟೋ ಬಾರಿ ’ಗೀತೆ’ಯ ಬಗ್ಗೆ ಚರ್‍ಚೆಗೆ ಕೂತಾಗ ಹೇಳಿಕೊಂಡಿದ್ದಾರೆ. ಚಂದ್ರ ಅವರು ಒಬ್ಬ ಸುಪ್ರಸಿದ್ದ ಉಪನ್ಯಾಸಕರಾಗಿದ್ದರು. ನಾಸಾ ತಿಳಿಸಿರುವಂತೆ ಚಂದ್ರಶೇಕರ್ ಅವರು 50 ಜನ ಓದುಗರಿಗೆ ಪಿ. ಹೆಚ್.ಡಿ. ಪದವಿಗಾಗಿ ಅರಿವು ಕೊಟ್ಟಿದ್ದಾರೆ. ಅವರ ಹುಡುಕಾಟ ಅರಿಲ್ಪುರುಳರಿಮೆಯ ಎಲ್ಲಾ ಬಾಗಗಳಲ್ಲೂ ಇತ್ತು. ಅವರು ಹತ್ತು ಹೊತ್ತಗೆಗಳನ್ನು ಬರೆದಿದ್ದಾರೆ. ಅವೆಲ್ಲವೂ ಬೇರೆ ಬೇರೆ ವಿಚಾರದವುಗಳು.
1983ರಲ್ಲಿ ಚಂದ್ರ ಅವರಿಗೆ ಅರಿಲ್ ಗಳ ರಚನೆ ಮತ್ತು ಬೆಳವಣಿಗೆಗೆ ಬೇಕಿರುವ ಒಡಲಿನ ಹಂತಗಳ ತಿಳಿವು, ಅರಿವು ನೀಡಿದ್ದಕ್ಕೆ ನೊಬೆಲ್ ಪ್ರಶಸ್ತಿ ದೊರಕಿತು. ಅವರಿಗೆ ದೊರೆತ ಬೇರೆ ಪ್ರಶಸ್ತಿಗಳು ಕೊಪ್ಲೆ ಪಾರಿತೋಶಕ [Copley Medal ] (1984), ರಾಶ್ಟ್ರೀಯ ಅರಿಮೆ ಪಾರಿತೋಶಕ [National Medal of Science] (1966), ಪದ್ಮವಿಬೂಶಣ (1968).
ಚಂದ್ರಶೇಕರ್ ಅವರ ಬಗ್ಗೆ ಜಗತ್ತಿನ ಮುಂಚೂಣಿ ಅರಿಗರು ಆಡಿದ ಕೆಲ ಮಾತುಗಳು ಹೀಗಿವೆ,
ಆರ್. ಜೆ. ಟೆಲರ್, ರಾಯಲ್ ಸೊಸಯ್ಟಿ (ಲಂಡನ್), ಅವರು ಚಂದ್ರಶೇಕರ್ ಅವರ ಜೀವನ ಚರಿತ್ರೆ ಬರವಣಿಗೆಯಲ್ಲಿ,
ಚಂದ್ರಶೇಕರ್ ಅಚ್ಚ ಎಣಿಕೆಯರಿಗ, ಅವರ ಹುಡುಕಾಟದ ಅಡಿ ಕಟ್ಟಲೆಗಳನ್ನು ಅರಿಲರಿಮೆಯಲ್ಲಿ ಈಗಲೂ ಬಳಸಲಾಗುತ್ತಿದೆ ಮತ್ತು ಅವರಂತೆ ಮತ್ತೆ ಯಾರನ್ನು ಕಾಣಲಾಗದೆ ಇರಬಹುದು
ಮಾರ‍್ಟಿನ್ ರೀಸ್, ಬ್ರಿಟನ್ ನ ಅರಿಲ್-ಅರಿಗರು ಹೀಗಂದಿದ್ದಾರೆ,
ಚಂದ್ರ ಅವರು ಬಹುಶಹ ಅಲ್ಬರ‍್ಟ್ ಅಯ್ನಸ್ಟೀನ್ ಬಳಿಕ ಅತಿ ಆಳವಾಗಿ ಬ್ರಹ್ಮಾಂಡವನ್ನು ಅರಿತವರು ಎಂದೆನಿಸುತ್ತದೆ.
ಹೀಗೆ ಜಗತ್ತಿನ ಅರಿಮೆಗಾರರ ಮೆಚ್ಚುಗೆಗೆ ಪಾತ್ರರಾಗಿದ್ದ ಚಂದ್ರಶೇಕರ್ ಅವರು ತಮ್ಮ ಎಂಬತ್ನಾಲ್ಕನೇ ವಯಸ್ಸಿಗೆ ಇದ್ದಕ್ಕಿದ್ದಂತೆ ಎದುರಾದ ಹ್ರುದಯಾಗಾತದಿಂದ ಚಿಕಾಗೊದ ಆಸ್ಪತ್ರೆಯಲ್ಲಿ ಆಗಸ್ಟ್ 21, 1995ರಲ್ಲಿ ನಿದನ ಹೊಂದಿದರು.
ಇತ್ತೀಚಿನ ಅನಿಸಿಕೆಗಳು