ಕಲಿಕೆಗೂ-ದುಡಿಮೆಗೂ ಬಿಡದ ನಂಟಿದೆ!

ವಲ್ಲೀಶ್ ಕುಮಾರ್.

A chain with an oustanding golden link - rendered in 3d

ಒಂದು ನಾಡಿನ ಮಂದಿಯ ಬಾಳ್ವೆಯ ಮಟ್ಟ ಆ ನಾಡಿನ ದುಡಿಮೆಯ ಮೇಲೆಯೇ ನಿಂತಿರುತ್ತದೆ. ಹೆಚ್ಚಿನ ದುಡಿಮೆ ಮಾಡಬಲ್ಲ ನಾಡುಗಳಲ್ಲಿ ಬಾಳ್ವೆಯ ಮಟ್ಟ ಉತ್ತಮವಾಗಿರುತ್ತದೆ. ಒಂದು ನಾಡಿನ “ಒಟ್ಟು ಮಾಡುಗೆಯ ಬೆಲೆ (ಒ. ಮಾ. ಬೆ)” (GDP – Gross Domestic Product) ಆ ನಾಡಿನ ಹಣಕಾಸಿನ ಗತಿಯನ್ನು ಬಿಂಬಿಸುತ್ತದೆ. ಇದು ಆ ನಾಡಿನ ಮಂದಿ ತಯಾರಿಸಿದ ಎಲ್ಲಾ ಸರಕುಗಳ ಮತ್ತು ನೀಡಿದ ಎಲ್ಲಾ ಸೇವೆಗಳ ಒಟ್ಟು ಬೆಲೆ ಆಗಿರುತ್ತದೆ. ಈ ಒಟ್ಟು ಬೆಲೆಯನ್ನು ಆ ನಾಡಿನ ಮಂದಿಯೆಣಿಕೆಯಿಂದ ಬಗೆದಾಗ ಸಿಗುವ ಮೊತ್ತವೇ “ತನ್ನ ಮಾಡುಗೆಯ ಬೆಲೆ” (GDP Per Capita). ಎತ್ತುಗೆಗೆ – ಕರ‍್ನಾಟಕದ ಒಟ್ಟು ಮಾಡುಗೆಯ ಬೆಲೆ 12000 ಕೋಟಿ ರೂಪಾಯಿಯಶ್ಟು ಇದ್ದು, ಇಲ್ಲಿ 6 ಕೋಟಿ ಮಂದಿ ಎಣಿಕೆ ಇರುವುದರಿಂದ ಅದನ್ನು 6 ಕೋಟಿಯಿಂದ ಬಗೆದರೆ ಸಿಗುವ ಮೊತ್ತ 2000 ರೂಪಾಯಿಗಳು. ಅಂದರೆ, ಸರಾಸರಿ ನೋಡಿದಾಗ ಒಟ್ಟು ಮಾಡುಗೆಯ ಬೆಲೆಗೆ ಒಬ್ಬೊಬ್ಬರ ಕೊಡುಗೆ 2000 ರೂಪಾಯಿಗಳು. ಯಾವ ನಾಡುಗಳಲ್ಲಿ ಮಂದಿಯ “ತನ್ನ ಮಾಡುಗೆಯ ಬೆಲೆ” ಹೆಚ್ಚಿರುತ್ತದೆಯೋ ಅಂತಹ ನಾಡುಗಳಲ್ಲಿ ಒಬ್ಬೊಬ್ಬ ನಾಡಿಗರೂ ಹೆಚ್ಚಿನ ಮಟ್ಟದಲ್ಲಿ ನಾಡಿನ ಮಾಡುಗೆಯ ಬೆಲೆಗೆ ಕೊಡುಗೆ ನೀಡುತ್ತಿದ್ದಾರೆ ಅನ್ನಬಹುದು.

ಈಗ ವಿಶಯಕ್ಕೆ ಬರೋಣ… ಮುಂದುವರೆದ ನಾಡುಗಳಲ್ಲಿ ಇರುವ ಕಲಿಕೆಯ ಏರ‍್ಪಾಡಿಗೂ, ನಾಡಿಗರ ಹೆಚ್ಚಿನ ಮಾಡುಗೆಯ ಬೆಲೆಗೂ ಏನಾದರೂ ನಂಟಿದೆಯೇ ಎಂಬ ಕುತೂಹಲ ಹುಟ್ಟಿ ಅದನ್ನು ಹಿಂಬಾಲಿಸಿದೆ. ಆಗ ಕಂಡ ದಿಟ ಏನೆಂದರೆ ಹೆಚ್ಚಿನ “ತನ್ನ ಮಾಡುಗೆಯ ಬೆಲೆ” ಹೊಂದಿರುವ ನಾಡುಗಳೆಲ್ಲಾ ಕಲಿಕೆಯನ್ನು ತಮ್ಮ ನುಡಿಯಲ್ಲೇ ಕಟ್ಟಿಕೊಂಡಿರುವುದು !

ಈ ಕೆಳಗಿನ ಪಟ್ಟಿಯನ್ನು ಗಮನಿಸಿ:

ತ. ಮಾ. ಬೆ. ನಾಡು ತನ್ನ ಮಾಡುಗೆಯ ಬೆಲೆ ಒಟ್ಟು ಮಾಡುಗೆಯ ಬೆಲೆ ಕಲಿಕಾ ಮಾದ್ಯಮ
ಜಾಗತಿಕ ಮಟ್ಟ
 (ಅಂತರರಾಶ್ಟ್ರೀಯ ಡಾಲರ್) (ಮಿಲಿಯನ್ ಅಮೇರಿಕನ್ ಡಾಲರ್)
15 ಜರ‍್ಮನಿ 40007 3,635,959 ಜರ‍್ಮನ್
22 ಜಪಾನ್ 36899 4,901,532 ಜಪಾನಿ
23 ಪ್ರಾನ್ಸ್ 35784 2,737,361 ಪ್ರೆಂಚ್
27 ತೆಂಕಣ ಕೊರಿಯಾ 33189 1,221,801 ಕೊರಿಯನ್
31 ಇಟಲಿ 30289 2,071,955 ಇಟಾಲಿಯನ್
33 ಸ್ಪೇನ್ 29851 1,358,687 ಸ್ಪ್ಯಾನಿಶ್
133 ಬಾರತ 4077.00 1,870,002 (ಆಯಾ ನುಡಿವಾರು ರಾಜ್ಯಗಳಲ್ಲಿ ಅಲ್ಲಿನ ನುಡಿಯಲ್ಲಿ ಮೊದಲ ಮತ್ತು ಎರಡನೇ ಹಂತದ ಕಲಿಕೆ ನಡೆಯುತ್ತದೆ. ಮೇಲ್ಮಟ್ಟದ ಕಲಿಕೆ ಇಂಗ್ಲೀಶಿನಲ್ಲಿದೆ)

ದಯವಿಟ್ಟು ಗಮನಿಸಿ :

  • ಇಂಗ್ಲಿಶ್ ನುಡಿಯಲ್ಲಿ ಕಲಿಯುವುದನ್ನೇ ಉತ್ತಮ ಎಂದು ನಮ್ಮ ನಾಡಲ್ಲಿ ಹಲವರು ನಂಬಿದ್ದಾರೆ. ಇದನ್ನು ತಪ್ಪು-ನಂಬಿಕೆ ಎಂದು ತೋರಿಸಲು ಇಲ್ಲಿ ಇಂಗ್ಲಿಶೇತರ ನಾಡುಗಳನ್ನು ಮಾತ್ರ ಎಣಿಸಲಾಗಿದೆ.
  • ಮೇಲಿನ ಪಟ್ಟಿಯಲ್ಲಿ ಮಂದಿಯೆಣಿಕೆ 4 ಕೋಟಿಗಿಂತ ಹೆಚ್ಚಿರುವ ನಾಡುಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ.
  • ಜಗತ್ತಿನ ತ.ಮಾ.ಬೆ. ಯ ಪಟ್ಟಿಯಲ್ಲಿ ಜರ‍್ಮನಿ 15 ನೇ ಮಟ್ಟದಲ್ಲಿದೆ. ಮೊದಲ 14 ಮಟ್ಟಗಳಲ್ಲಿ ಇರುವ ನಾಡುಗಳಲ್ಲಿ ಅಮೆರಿಕಾದ ಒಕ್ಕೂಟ, ಆಸ್ಟ್ರೇಲಿಯಾ ಮತ್ತು ಕೆನಡಾ ಹೊರತುಪಡಿಸಿ ಇನ್ನಾವುದೇ ನಾಡಿನಲ್ಲೂ ಒಂದು ಕೊಟಿಯಶ್ಟೂ ಮಂದಿಯೆಣಿಕೆ ಇಲ್ಲ.

ಮೇಲೆ ಹೆಸರಿಸಿರುವ ಎಲ್ಲಾ ನಾಡುಗಳಲ್ಲೂ (ಬಾರತ ಹೊರತುಪಡಿಸಿ) ಎಲ್ಲಾ ಹಂತದ ಕಲಿಕೆಯೂ ಅಲ್ಲಿಯ ಮಂದಿಯ ನುಡಿಯಲ್ಲೇ ಕಲಿಕೆ ಇರುವುದರಿಂದ ಹೆಚ್ಚು ಹೆಚ್ಚು ಮಂದಿ ಕಲಿಕೆಯಲ್ಲಿ ಪಾಲ್ಗೊಳ್ಳಲು ಆಗುತ್ತದೆ. ಕಲಿಕೆಯ ಏರ‍್ಪಾಡು ಚೆನ್ನಾಗಿರುವ ಈ ನಾಡುಗಳಲ್ಲಿ ಹೆಚ್ಚಿನ ಮಂದಿಯನ್ನು ದುಡಿಮೆಗೆ ಅಣಿ ಮಾಡಲಾಗುತ್ತದೆ. ಹಾಗಾಗಿ ಅಲ್ಲಿನ ಮಾಡುಗೆಯ ಬೆಲೆ ಹೆಚ್ಚಿದೆ ಎಂದು ತಿಳಿಯಬಹುದು.

ನಮ್ಮ ನಾಡಿನಲ್ಲಿ ಸದ್ಯಕ್ಕೆ ಮೊದಲ ಮತ್ತು ಎರಡನೇ ಹಂತದ ಕಲಿಕೆ ಮಾತ್ರ ಕನ್ನಡದಲ್ಲಿದೆ. ನೂರಕ್ಕೆ ಸುಮಾರು 75 ಮಕ್ಕಳು ಇಂದಿಗೂ ಕನ್ನಡದಲ್ಲೇ ಮೊದಲ ಮತ್ತು ಎರಡನೇ ಹಂತದ ಕಲಿಕೆ ಪಡೆಯುತ್ತಿದ್ದಾರೆ. ಆದರೆ ಹೆಚ್ಚಿನ ಅರಿಮೆಯ, ಮೇಲ್ಮಟ್ಟದ ಕಲಿಕೆಗೆ ಇಂಗ್ಲಿಶ್ ನುಡಿಯ ಮೊರೆ ಹೋಗಬೇಕಿದೆ.

18ರ ಹರೆಯದ ನಂತರ ಓದು ಮುಂದುವರೆಸುವವರ ಸರಾಸರಿ ಜಗತ್ತಿನಾದ್ಯಂತ ನೂರಕ್ಕೆ 29 ರಶ್ಟು ಇದೆ. ಸ್ಪೇನ್ ನಲ್ಲಿ ಈ ಸರಾಸರಿ 83, ಇಟಲಿ ಮತ್ತು ಜಪಾನಿನಲ್ಲಿ 60 ರಶ್ಟು ಇದ್ದರೆ, ಜರ‍್ಮನಿಯಲ್ಲಿ ಸುಮಾರು 42ರಶ್ಟು ಇದೆ. ಬಾರತದಲ್ಲಿ ಈ ಎಣಿಕೆ ಕೇವಲ 19, ಕರ‍್ನಾಟಕದ ಸರಾಸರಿ ಎಣಿಕೆ 25! ಅಂದರೆ 18ರ ಹರೆಯದ ನಂತರ ಕರ‍್ನಾಟಕದಲ್ಲಿ ಓದು ಮುಂದುವರೆಸುವವರ ಎಣಿಕೆ ನೂರಕ್ಕೆ ಕೇವಲ 25! ಅಲ್ಲಿಗೆ ನಮ್ಮ ನಾಡಿನ ಬಹುತೇಕ ಯುವಕರು ಮೇಲ್ಮಟ್ಟದ ಕಲಿಕೆಯಿಂದ ದೂರ ಉಳಿದಿರುವುದು ಕಾಣುತ್ತದೆ. ತಮ್ಮ ನುಡಿಯಲ್ಲಿ ಎಲ್ಲ ಹಂತದ ಕಲಿಕೆ ಕಟ್ಟಿಕೊಳ್ಳದೇ, ಮೇಲ್ಮಟ್ಟದ ಕಲಿಕೆಗೆ ಇಂಗ್ಲಿಶ್ ನುಡಿಯನ್ನು ನೆಚ್ಚಿರುವ ಆಪ್ರಿಕಾದ ನಾಡುಗಳೂ ಇದೆ ಗತಿಯಲ್ಲಿರುವುದನ್ನು ಕಾಣಬಹುದು.

ಈ ಏರ‍್ಪಾಡು ಸರಿಹೋಗಬೇಕು. ನಮ್ಮ ನಾಡಿನಲ್ಲೂ ಒಳ್ಳೆಯ ಗುಣಮಟ್ಟದ ಕನ್ನಡ ಮಾದ್ಯಮ ಕಲಿಕೆ ಎಲ್ಲಾ ಹಂತಗಳಲ್ಲೂ ಸಿಗುವಂತಾಗಬೇಕು. ಮೊದಲ ಹಂತದ ಕಲಿಕೆಯಿಂದ ಮೇಲ್ಮಟ್ಟದ ಕಲಿಕೆಯವರೆಗೂ ಎಲ್ಲಾ ಕಲಿಕೆಯೂ ನಮ್ಮ ನುಡಿಯಲ್ಲೇ ಸಿಗುವಂತಾದರೆ ನಮ್ಮ ನಾಡಿನ ಹೆಚ್ಚು ಹೆಚ್ಚು ಮಂದಿ ಮೇಲ್ಮಟ್ಟದ ಕಲಿಕೆಯಲ್ಲಿ ಪಾಲ್ಗೊಂಡು ಹೆಚ್ಚಿನ ದುಡಿಮೆಗೆ ಅಣಿಯಾಗುತ್ತಾರೆ. ಅದರಿಂದ ನಮ್ಮ ಹಣಕಾಸಿನ ಏಳ್ಗೆ ಆಗುತ್ತದೆ, ಮತ್ತು ನಮ್ಮ ಬಾಳ್ವೆಯ ಮಟ್ಟ ಏರುತ್ತದೆ.

(ಮಾಹಿತಿ ಸೆಲೆ : ವಿಶ್ವ ಬ್ಯಾಂಕ್ ಮತ್ತು ಇಂಟರ್ ನ್ಯಾಶನಲ್ ಮಾನಿಟರಿ ಪಂಡ್ (IMF) ಕಲೆಹಾಕಿರುವ ಮಾಹಿತಿ

List of GDP(wikipedia), List of GDP per capita(wikipedia), worldbank.org)

(ಚಿತ್ರ ಸೆಲೆ: contentcustoms)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: