ಕರಗ: ನಮ್ಮ ಬೆಂಗಳೂರ ದೊಡ್ಡ ಹಬ್ಬ

– ಅನ್ನದಾನೇಶ ಶಿ. ಸಂಕದಾಳ.

05BG-NHTB-KARAGA_1043559f

ಬೆಂಗಳೂರು” ಅಂದ ಕೂಡಲೇ ‘ಅದು ಅಯ್ ಟಿ, ಬಿ ಟಿ’ ಗಳ ನಗರ ಎಂದು ಜಗತ್ತಿನೆಲ್ಲೆಡೆ ಮಾತಾಡಿಕೊಳ್ಳುವಂತೆ ಈ ನಗರ ಹೆಸರು ಮಾಡಿದೆ. ಮಾಹಿತಿ ತಂತ್ರಜ್ನಾನದ ಚಟುವಟಿಕೆಗಳ ಬೀಡಾಗಿರುವ ಈ ಊರಲ್ಲಿ ಇಂದು ದೊಡ್ಡ ದೊಡ್ಡ ಶಾಪಿಂಗ್ ಮಾಲುಗಳನ್ನು, ಮಲ್ಟಿಪ್ಲೆಕ್ಸ್ ಗಳನ್ನು,ಮೆಟ್ರೋ ರಯ್ಲು-ಅಯ್ಶಾರಾಮಿ ವೋಲ್ವೋ ಬಸ್ಸುಗಳನ್ನು ಕಾಣಬಹುದಾಗಿದೆ. ಇದು ಬದಲಾಗುತ್ತಿರುವ ಕಾಲದ ಜೊತೆ ಜೊತೆಗೆ ಬೆಂಗಳೂರು ಹೇಗೆ ಹೆಜ್ಜೆ ಹಾಕುತ್ತಿದೆ ಎಂದು ತೋರಿಸುತ್ತದೆ.

ನಗರವು ದೊಡ್ಡದಾಗಿ ಬೆಳೆಯುತ್ತಾ ಹೊಸತನಕ್ಕೆ ತಕ್ಕಂತೆ ಬದಲಾಗುತ್ತಿದ್ದರೂ, ತನ್ನ ಗುರುತಾದ ಸಾಂಪ್ರದಾಯಿಕ ಆಚರಣೆಗಳನ್ನು ಬಿಟ್ಟು ಕೊಡದಿರುವುದು ಈ ನಗರದ ಹೆಗ್ಗಳಿಕೆ. ನಗರದಲ್ಲಿ ನಡೆಯುವ ಬೆಂಗಳೂರು ಕರಗ, ಕಡಲೇಕಾಯಿ ಪರಿಶೆ, ದೊಡ್ಡಮ್ಮ – ಅಣ್ಣಮ್ಮ ದೇವಿ ಉತ್ಸವಗಳು ನಗರವನ್ನು “ನಮ್ಮ ಬೆಂಗಳೂರು” ಆಗಿಯೇ ಹಿಡಿದಿಟ್ಟಿವೆ. ಈ ಉತ್ಸವಗಳು ಕೇವಲ ನಿನ್ನೆ ಮೊನ್ನೆಯವಲ್ಲ, ಆ ಆಚರಣೆಗಳಿಗೆ ಅವುಗಳದೇ ಆದ ಹಿನ್ನೆಲೆ ಇದೆ. ಮೊನ್ನೆ ಮೊನ್ನೆಯಶ್ಟೆ (ಏಪ್ರಿಲ್ ಏಳರಿಂದ ಏಪ್ರಿಲ್ ಹದಿನೇಳು) ಬೆಂಗಳೂರು ಕರಗ ನಡೆಯಿತು. ಲೋಕಸಬೆ ಚುನಾವಣೆ ಬರಾಟೆಯಲ್ಲಿ ಈ ಬಾರಿ ಕರಗ ಹೆಚ್ಚು ಸದ್ದು ಮಾಡದಿದ್ದರೂ, ಉತ್ಸವ ಚೆನ್ನಾಗಿಯೇ ನೆರವೇರಿತು.

ಏನಿದು ಕರಗ? ಏನದರ ಹಿನ್ನೆಲೆ?
ಕರಗ ಅಂದರೆ ‘ಕಯ್ಯಲ್ಲಿ ಮುಟ್ಟದೆ(ಕ) ರುಂಡದಲ್ಲಿ(ರ) ಮುಡಿದು ಗತಿಸುವುದು(ಗ)’ ಎಂದು ಹೇಳಲಾಗುತ್ತದೆ.ಮಡಿಕೆಯ ಮೇಲೆ ಹೂವಿನ ಮೇರುವೆ(ಪಿರಮಿಡ್) ಇಟ್ಟು ಅದನ್ನೇ ತಲೆಯ ಮೇಲೆ ದರಿಸಲಾಗುವುದು. “ತಿಗಳ” ಸಮುದಾಯದ ಜನರು ಆಚರಿಸುವ ಈ ಹಬ್ಬದ ಆಚರಣೆಗೆ 500 ವರುಶಗಳ ಇತಿಹಾಸವಿದೆ. ಈ ಹಬ್ಬಕ್ಕೆ ಕಾರಣವನ್ನು ಹುಡುಕುತ್ತಾ ಹೋದರೆ, ಅದು ಮಹಾಬಾರತಕ್ಕೆ ಕೊಂಡೊಯ್ಯುತ್ತದೆ. ಮಹಾಬಾರತದ ದ್ರವ್ಪದಿ ಆದಿಶಕ್ತಿಯ ಒಂದು ರೂಪವೆಂದು ಹೇಳಲಾಗುತ್ತದೆ.

ಕುರುಕ್ಶೇತ್ರ ಕಾಳಗ ಮುಗಿದು ಪಾಂಡವರೆಲ್ಲೆರೂ ಕಯ್ಲಾಸಕ್ಕೆ ಮರಳುತ್ತಿರುತ್ತಾರೆ. ಪಾಂಡವರು ಮುಂದೆ ಹೋಗುತ್ತಾ ದ್ರವ್ಪದಿ ಅವರನ್ನು ಹಿಂಬಾಲಿಸಿಕೊಂಡು ಒಬ್ಬಳೇ ಬರುತ್ತಿರುತ್ತಾಳೆ. ಪಾಂಡವರು ಮತ್ತು ದ್ರವ್ಪದಿ ನಡುವೆ ದೂರ ಹೆಚ್ಚಾಗುತ್ತಿದ್ದಾಗ, ತಿಮರಾಸುರನೆಂಬ ರಕ್ಕಸನೊಬ್ಬ ಒಬ್ಬಂಟಿಯಾಗಿದ್ದ ದ್ರವ್ಪದಿಗೆ ಕಾಟ ಕೊಡಲು ಶುರು ಮಾಡುತ್ತಾನೆ. ಆಗ ದ್ರವ್ಪದಿಯು ಆದಿಶಕ್ತಿಯ ರೂಪವನ್ನು ತೋರುತ್ತಾ ತಿಮರಾಸುರನನ್ನು ಸದೆ ಬಡಿಯಲು, ತನ್ನ ತಲೆಯಿಂದ ‘ಯಜಮಾನ’ರನ್ನು, ಹಣೆಯಿಂದ ‘ಗಣಾಚಾರಿ’ಗಳನ್ನು, ಕಿವಿಗಳಿಂದ ‘ಗವ್ಡ’ರನ್ನು, ಬಾಯಿಯಿಂದ ‘ಗಂಟೆಪೂಜಾರಿ’ಗಳನ್ನು ಮತ್ತು ಹೆಗಲಿನಿಂದ ‘ವೀರಕುಮಾರ’ರನ್ನು ಸ್ರುಶ್ಟಿ ಮಾಡುತ್ತಾಳೆ. ಹೀಗೆ ಹುಟ್ಟಿದ ಇವರೆಲ್ಲರೂ ಸೇರಿ ಆ ರಕ್ಕಸನ ಎದಿರು ಹೋರಾಡಿ ಗೆಲ್ಲುತ್ತಾರೆ.

ಹೀಗೆ ಮಕ್ಕಳನ್ನು ಹುಟ್ಟಿಸಿದ ದ್ರವ್ಪದಿ ತಾಯಿ ಆದಿಶಕ್ತಿಯಾಗಿ, ಮತ್ತೆ ಬೂಮಿಗೆ ಮರಳಿ ಬಾರದಂತೆ ಕಯ್ಲಾಸಕ್ಕೆ ಹೋಗುವುದು ಮಕ್ಕಳಿಗೆ ದುಗುಡ ಉಂಟು ಮಾಡುತ್ತದೆ. ಅವಳು ಹೋಗದಂತೆ ಬೇಡಿಕೊಳ್ಳಲು ಕ್ರಿಶ್ಣನು ಅವರಿಗೆ ಹೇಳುವನು. ತಾಯಿಯನ್ನು ಹೋಗದಂತೆ ತಡೆಯಲು ತಮ್ಮ ಕಯ್ಯಲ್ಲಿರುವ ಕತ್ತಿಯಿಂದ ತಮ್ಮ ಎದೆಗೆ ತಿವಿದುಕೊಳ್ಳುತ್ತಾ (ಇದನ್ನು ಕರಗ ಹಬ್ಬದಲ್ಲಿ ‘ಅಲಗುಸೇವೆ’ ಎನ್ನುತ್ತಾರೆ) “ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗದಿರು” ಎಂದು ಅಲವತ್ತು ಕೊಳ್ಳುತ್ತಾರೆ. ಇದನ್ನು ನೋಡಿ ದ್ರವ್ಪದಿಗೆ ಮರುಕವಾಗಿ ಪ್ರತೀ ವರುಶವೂ ಮೂರು ದಿನ ಬೂಮಿಗೆ ಬಂದು ಮಕ್ಕಳೊಂದಿಗೆ ಇರುವ ಮಾತು ನೀಡುತ್ತಾಳೆ. ಆ ಮೂರು ದಿನಗಳೇ ಕರಗ ಹಬ್ಬದ ದಿನಗಳು. “ಅಂದು ದ್ರವ್ಪದಿಯಿಂದ ಹುಟ್ಟಿದ ವೀರಕುಮಾರರೇ ನಾವು” ಎಂದು ತಿಗಳ ಸಮುದಾಯದವರ ನಂಬಿಕೆ.

ಕರಗ ನಡೆಯುವ ಬಗೆ:
ಕರಗ ಹಬ್ಬದ ಆಚರಣೆ ಹಿಂದೂ ತೂಗುತೇದಿಯ(ಕ್ಯಾಲೆಂಡರ್‍) ಮೊದಲ ತಿಂಗಳ ಸಪ್ತಮಿ ಇಂದ ಶುರುವಾಗಿ ಹನ್ನೊಂದು ದಿನಗಳ ಕಾಲ ನಡೆಯುತ್ತದೆ. ಆ 11 ದಿನಗಳ ಗಡುವಿನಲ್ಲಿ, 3 ದಿನಗಳ ಕಾಲ ತಾಯಿ ದ್ರವ್ಪದಿ ತಮ್ಮೊಡನೆ ಇರುತ್ತಾಳೆಂದು ತಿಗಳರ ನಂಬಿಕೆ. ಬೆಂಗಳೂರಿನ ತಿಗಳರ ಪೇಟೆಯಲ್ಲಿರುವ ದರಮರಾಯ ಸ್ವಾಮಿ ಗುಡಿಯಲ್ಲಿ ಹಬ್ಬದ ಚಟುವಟಿಕೆಗಳು ನಡೆಯುತ್ತವೆ. ಹನ್ನೊಂದು ದಿನಗಳ ಸಡಗರದಲ್ಲಿ ಕಾರ‍್ಯಕ್ರಮಗಳು ಹೀಗಿರುತ್ತವೆ:

ಬಾವುಟ ಏರಿಸುವುದು: ಉತ್ಸವದ ಮೊದಲ ದಿನವಾದ ಅಂದು ಹಳದಿ ಬಣ್ಣದ ಬಾವುಟವೊಂದನ್ನು ಗುಡಿಯ ಅಂಗಳದೊಳಗೆ, ಬಿದಿರಿನ ಕಂಬದ ಮೇಲೆ ಹಾರಿಸಲಾಗುತ್ತದೆ. ಅದರಿಂದ ಕರಗ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಗಣಾಚಾರಿಗಳು, ಗಂಟೆಪೂಜಾರಿಗಳು, ವೀರಕುಮಾರರು ಮತ್ತು ಕರಗವನ್ನು ಹೊರುವವರು, ಉತ್ಸವಕ್ಕೆ ಯಾವ ತಡೆಯೂ ಇಲ್ಲದೆ ನಡೆಸಲು ಪಣ ತೊಟ್ಟು ದಾರವೊಂದನ್ನು(ಕಂಕಣ) ತಮ್ಮ ಕಯ್ಯಿಗೆ ಕಟ್ಟಿಕೊಂಡು, ಒಂದು ದಾರವನ್ನು ಬಾವುಟಗಮ್ಬಕ್ಕೂ ಕಟ್ಟುವರು.

ಶುದ್ದಿ ಕಾರ‍್ಯ: ಬಾವುಟ ಹಾರಿಸಿದ ಮರುದಿನದಿಂದ ಈ ಕೆಲಸ ಶುರುವಾಗುತ್ತದೆ. ಆದಿಶಕ್ತಿಯು ಬೂಮಿಗೆ ಬರುತ್ತಿರುವುದರಿಂದ ಕೆಟ್ಟ ಶಕ್ತಿಗಳು ಸುಳಿಯಬಾರದೆಂದು ಪೂಜೆಗಳನ್ನು ನಗರದ ಆರು ಕಡೆಗಳಲ್ಲಿ ಎಂಟು ದಿನ ಮಾಡಲಾಗುತ್ತದೆ. ಪ್ರತಿ ದಿನದ ಪುಣ್ಯ ಜಳಕದ ಬಳಿಕ, ಕೆಟ್ಟ ಶಕ್ತಿಗಳನ್ನು ದೂರವಿಡುವಂತೆ ಕರಗದ ಪೂಜಾರಿಯು ದೇವಿಯನ್ನು ಕೋರುವುದು ಪದ್ದತಿ.

ಆರತಿ ಉತ್ಸವ: ಇದು ಕರಗ ಹಬ್ಬದ ಆರನೇ ದಿನದಂದು ನಡೆಯುತ್ತದೆ. ಮೊದಲ ದಿನದಿಂದ ಆರನೇ ದಿನದವರೆಗೂ ಪೂಜೆಗಳು ನಡೆಯುತ್ತಿರುತ್ತವೆ. ತಿಗಳ ಸಮುದಾಯದ ಹೆಂಗಸರು ಅಂದು ಅವರ ದೇವತೆಯಾದ ದ್ರವ್ಪದಿಗೆ ಆರತಿ ಸೇವೆಯನ್ನು ಮಾಡುವರು. ಯಲಕುಂಗ ಹೂವಿನಿಂದ ಅಂದಗೊಂಡ ಅಕ್ಕಿ ಮತ್ತು ಬೆಲ್ಲ ಇರುವ ಪಾತ್ರೆಗಳಿಗೆ, ಮಲ್ಲಿಗೆ ಮತ್ತು ಕನಕಾಂಬರ ಹೂವುಗಳಿಂದ ಸುತ್ತುವರಿದ ಕೋಲನ್ನು ಸಿಕ್ಕಿಸಲಾಗಿರುತ್ತದೆ. ಪಾತ್ರೆಯ ಒಳಗೆ ದೀವಿಗೆಯನ್ನು ಇಡಲಾಗಿರುತ್ತದೆ. ಈ ಆರತಿಯನ್ನು ಹೆಂಗಸರು ತಲೆ ಮೇಲೆ ಹೊತ್ತು ಗುಡಿಯವರೆಗೂ ಬಂದು ಆಮೇಲೆ ಪೂಜೆ ಮಾಡುತ್ತಾರೆ. ಆಮೇಲೆ ಗರಡಿಮನೆಯಲ್ಲಿ ಕಸರತ್ತು ಮಾಡಿರುವ ಹುಡುಗರು ಕಾಳಗ ಕಲೆಗಳಾದ ಕತ್ತಿ ವರಸೆ, ಕೋಲು ವರಸೆ, ಕೊಂಬು ವರಸೆ ಮುಂತಾದ ಚಳಕಗಳನ್ನು ತೋರಿಸುವರು. ಹಾಗೆಯೇ ಅಂದು ‘ಪೋತರಾಜ’ನ (ಪೋತರಾಜನ ಬಗ್ಗೆ ಮುಂದೆ ತಿಳಿಯುತ್ತದೆ) ಮೂರುತಿ ಮತ್ತು ತ್ರಿಶೂಲವನ್ನು ಮೆರವಣಿಗೆಯಲ್ಲಿ ಒಯ್ಯಲಾಗುತ್ತದೆ. ಮೆರವಣಿಗೆ ಮುಗಿದ ಮೇಲೆ ಗುಡಿಯಲ್ಲಿ ಮಹಾ ಮಂಗಳಾರತಿ ಮಾಡುವರು.

Hase_Karaga ಹಸಿ ಕರಗ: ಹಬ್ಬದ ಏಳನೇ ದಿನ ‘ಹಸಿ ಕರಗ’ ಮಾಡಲಾಗುತ್ತದೆ. ಅಂದು ಶಕ್ತಿಪೀಟ ಇದೆ ಎಂದು ಹೇಳಲಾಗುವ ಸಂಪಂಗಿಕೆರೆಯ ಸುತ್ತಮುತ್ತಲಿನ ಜಾಗವನ್ನು ಚೊಕ್ಕ ಮಾಡಿ ಹೂವುಗಳಿಂದ ಅಂದಗೊಳಿಸುತ್ತಾರೆ. ವೀರಕುಮಾರರು, ಗಣಾಚಾರಿಗಳು, ಗಂಟೆಪೂಜಾರಿಗಳು, ಕುಲಪುರೋಹಿತರು ಶಕ್ತಿಪೀಟಕ್ಕೆ ಪೂಜೆ ಮಾಡುತ್ತಾರೆ. ಆಮೇಲೆ ಕರಗವನ್ನು ಹೊರುವುವವರಿಗೆ ಜಳಕವನ್ನು ಮಾಡಿಸುವರು. ಕೆಂಪು ಬಟ್ಟೆಯನ್ನು ಹೊದಿಸಿ, ಒಡವೆ ಮತ್ತು ಹೂವುಗಳಿಂದ ಸಿಂಗರಿಸಿ ಹಸಿ ಕರಗವನ್ನು ಮಾಡಿ ಅದನ್ನು ಪೀಟದ ಮೇಲೆ ಇಡಲಾಗುತ್ತದೆ. ಅದರ ಮಗ್ಗುಲಲ್ಲಿ ಮಾಟದಕೋಲು ಮತ್ತು ಬಾಕು(ಕತ್ತಿ) ಒಂದನ್ನೂ ಇಡಲಾಗುತ್ತದೆ.

ಕರಗವನ್ನು ಹೊತ್ತು ಕೊಳ್ಳುವವರು ಇವೆಲ್ಲವುದಕ್ಕೂ ಪೂಜೆ ಮಾಡುವರು. ಆಗ ವೀರಕುಮಾರರು ಕರ‍್ಪೂರವನ್ನು ಹಚ್ಚುವರು ಮತ್ತು ಸುತ್ತ ಮುತ್ತ ನೆರೆದ ಬಕ್ತರು ‘ಗೋವಿಂದ’ನ ಹೆಸರು ಹೇಳಲು ಶುರು ಮಾಡುವರು. ಆಗ ವೀರಕುಮಾರರು ‘ಗೋವಿಂದ ದಿಕ್ ದೀ ದಿಕ್ ದೀ’ ಎಂದು ಹೇಳುತ್ತಾ ತಾವು ಹಿಡಿದಿರುವ ಕತ್ತಿಯಿಂದ ತಮ್ಮ ಎದೆಗೆ ತಿವಿದು ಕೊಳ್ಳಲು ಶುರು ಮಾಡುತ್ತಾರೆ ( ಅಲಗುಸೇವೆ ). ಈ ಹೊತ್ತಿನಲ್ಲಿ ಒಂದು ರೀತಿಯ ದಯ್ವೀ ಶಕ್ತಿ ಕರಗವನ್ನು ಹೊತ್ತುಕೊಳ್ಳುವವರ ಮೇಲೆ ಅವರಿಸೊಕೊಂಡನ್ತಾಗಿ, ಅವರು ಎಡಗಯಲ್ಲಿ ಪೀಟದ ಮೇಲಿರುವ ಮಾಟದಕೋಲಿನ ಜೊತೆ ಹಸಿಕರಗವನ್ನೂ ಮತ್ತು ಬಲಗಯಲ್ಲಿ ಬಾಕನ್ನು ಎತ್ತುಕೊಳ್ಳುವವರು. ಇದೆಲ್ಲಾ ನೋಡಲು ಬೆರಗುಗೊಳಿಸುವಂತ ಆಗುಹಗಳು ಎಂದು ಹೇಳಲಾಗುತ್ತದೆ.

ಅಲ್ಲಿಂದ ಅವರು ಹಸಿಕರಗವನ್ನು ಹಿಡಿದುಕೊಂಡು ‘ಶಕ್ತಿಸ್ತಳ’ ಎಂದು ಹೇಳಲಾಗುವ (ಬೆಂಗಳೂರು ಮಹಾನಗರ ಪಾಲಿಕೆ ಬಳಿ ಇರುವ) ಏಳು ಸುತ್ತಿನ ಕೋಟೆಯೆಡೆಗೆ ನಡೆಯುತ್ತಾರೆ ಮತ್ತು ವೀರಕುಮಾರರು ‘ದಿಕ್ ದೀ’ ದಿಕ ದೀ’ ಎಂದು ಅಲಗುಸೇವೆ ಮಾಡುತ್ತಾ ಅವರನ್ನು ಹಿಂಬಾಲಿಸುತ್ತಾರೆ. ಕೋಟೆ ತಲುಪಿದ ಮೇಲೆ ಮತ್ತೊಮ್ಮೆ ಹಸಿಕರಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿಂದ ದರಮರಾಯ ಸ್ವಾಮೀ ಗುಡಿಯ ಕಡೆಗೆ ಮೆರವಣಿಗೆ ಸಾಗುತ್ತದೆ. ಗುಡಿಯು ಸ್ವಲ್ಪ ದೂರವಿರುವಾಗ ಹಸಿ ಕರಗ ಹೊತ್ತಿರುವವರು ಮಂಡಿಯೂರಿ ಕುಳಿತುಕೊಳ್ಳುವವರು ಆಗ ವೀರಕುಮಾರರು ಮತ್ತೊಮ್ಮೆ ಅಲಗುಸೇವೆ ನೀಡಿ ‘ಶಕ್ತಿ’ಯನ್ನು ಗುಡಿಗೆ ಕರೆದು ಕೊಂಡು ಬರುತ್ತಾರೆ. ಆಗ ಗಂಟೆಪೂಜಾರಿಗಳು ಕೊರವಂಜಿ ಹಾಡನ್ನು ಹಾಡುವರು ಮತ್ತು ಕರಗವನ್ನು ಹೊತ್ತಿರುವವರು ಅದಕ್ಕೆ ತಕ್ಕಂತೆ ಕುಣಿಯುವವರು. ಗುಡಿ ತಲುಪಿದ ಮೇಲೆ ಪೂಜೆ ಸಲ್ಲಿಸಿ ಹಸಿ ಕರಗವನ್ನು ಇಳಿಸಲಾಗುವುದು.

ಪೊಂಗಲು ಸೇವೆ: ಇದು ಹಬ್ಬದ ಎಂಟನೆ ದಿನ ನಡೆಯುತ್ತದೆ. ಅಂದು ಹೆಣ್ಣುಮಕ್ಕಳು ಅಕ್ಕಿ ಮತ್ತು ಬೆಲ್ಲವನ್ನು ಗುಡಿಗೆ ಒಯ್ದು ಗುಡಿಯ ಅಂಗಳದಲ್ಲಿ ಪೊಂಗಲನ್ನು ಮಾಡಿ ದೇವಿಗೆ ಎಡೆ ಮಾಡುವರು. ತಮ್ಮ ಸೇವೆಯಿಂದ ತಾಯಿಯು ಸಂತಸಗೊಂಡು ಆಕೆಯು ನಮ್ಮನ್ನು ಹರಸುವಳು ಎಂಬ ನಂಬಿಕೆ ಜನರದ್ದು. ಅಂದಿಡೀ ದಿನ ಅಲ್ಲೇ ಇರುವರು. ಇರುಳಲ್ಲಿ ಗಂಟೆ ಪೂಜಾರಿಗಳು ದ್ರವ್ಪದಿ ಬಗ್ಗೆ ಪುರಾಣ ಕತೆಗಳನ್ನು ಹೇಳುವುದು ಮತ್ತು ಬಕ್ತರು ಅದನ್ನು ಕೇಳುವುದು ವಾಡಿಕೆ.

800px-Yelkunga_aka_Aarthi_Depotsava

ಹೂವಿನ ಕರಗ (ಕರಗ ಶಕ್ತ್ಯೋತ್ಸವ): ಹಬ್ಬದ ಒಂಬತ್ತನೇ ನಡೆಯುವುದು ಹೂವಿನ ಕರಗ. (ಇದರ ಬಗ್ಗೆ ಇನ್ನೊಂದು ಬರಹದಲ್ಲಿ ನೋಡೋಣ.)

ಗಾವು ಸೇವೆ: ಹಬ್ಬದ ಹತ್ತನೇ ಜರಗುವ ಇದು ಪೋತರಾಜನ ಕುರಿತು ಮಾಡುವ ಸೇವೆಯಾಗಿದೆ. ಪೋತರಾಜನ ಬಗ್ಗೆ ಒಂದು ಕತೆಯಿದೆ. ಪೋತರಾಜನು ಬಹಳ ಶೂರನಾಗಿದ್ದವನು ಮತ್ತು “ಏಳು ಸುತ್ತಿನ ಕೋಟೆ” ಎಂಬ ಅರಸುನಾಡನ್ನು ಆಳುತ್ತಿದ್ದನು(ಸಾಮ್ರಾಜ್ಯ). ಆತ ಶಿವನ ಮೊರೆಗ(ಬಕ್ತ)ನಾಗಿದ್ದು, ಬಾಡನ್ನು ತಿನ್ನದವನಾಗಿರುತ್ತಾನೆ. ಇನ್ನೂ ಹೆಚ್ಚು ಶಕ್ತಿಯನ್ನು ಪಡೆಯಲು ನೂರಾವೊಂದು ರಾಜರನ್ನು ಬಲಿ ಕೊಟ್ಟು ಶಿವನನ್ನು ಒಲಿಸಿಕೊಳ್ಳಲು ಪೂಜೆಯೊಂದನ್ನು ಮಾಡಬಯಸಿರುತ್ತಾನೆ. ನೂರು ರಾಜರನ್ನು ಸೆರೆ ಹಿಡಿದಾದಮೇಲೆ ಅವನ ಕೋಟೆಯ ಹತ್ತಿರ ನಿದ್ದೆ ಮಾಡುತ್ತಿದ್ದ ಬೀಮನನ್ನು ನೂರಾ ಒಂದನೇ ರಾಜನಾಗಿ ಸೆರೆ ಹಿಡಿಯುತ್ತಾನೆ.

ಪಾಂಡವರು ಬೀಮನ ಇಲ್ಲದಿರುವಿಕೆ ಬಗ್ಗೆ ಕ್ರಿಶ್ಣನನ್ನು ಕೇಳುತ್ತಾರೆ. ಕ್ರಿಶ್ಣನಿಗೆ ಎಲ್ಲವೂ ಗೊತ್ತಾಗಿ ಬೀಮನನ್ನು ಉಳಿಸಲು ಅರ‍್ಜುನನನ್ನು ಚೆಂದದ ಬಳೆ ಮಾರುವ ಕೊರವಂಜಿ ಹೆಣ್ಣಾಗಿ ಮಾಡಿ ಪೋತರಾಜನ ಕೋಟೆಯ ಹತ್ತಿರ ಕಳಿಸುವನು. ಆಕೆಯನ್ನು ನೋಡಿ ಆಕೆಯ ಚಂದಕ್ಕೆ ಮನಸೋತ ಪೋತರಾಜನು ಆಕೆಯನ್ನು ಮದುವೆಯಾಗಲು ಬಯಸುವನು. ಆಗ ಎಲ್ಲವೂ ತಿಳಿದ ಕ್ರಿಶ್ಣನು ಎರಡು ಬೇಡಿಕೆ ಮುಂದಿಡುತ್ತಾನೆ. ಸೆರೆಹಿಡಿದಿರುವ ಅರಸರನ್ನು ಬಿಡುಗಡೆಗೊಳಿಸುವುದು ಒಂದನೆಯದಾದರೆ, ಕೊರವಂಜಿಗಳು ಹಸಿಬಾಡು(ಹಸಿಮಾಂಸ) ತಿನ್ನುವುದರಿಂದ ಪೋತರಾಜನೂ ತಿನ್ನಬೇಕೆಮ್ಬುವುದು ಎರಡೆಯನೆದು. ಕಡೆಗೆ ಪೋತರಾಜನು ಎರಡೂ ಬೇಡಿಕೆಗೆ ಒಪ್ಪುವನು. ಮೊದಲಿಗೆ ಪೋತರಾಜನಿಗೆ ಕರಿಮೇಕೆಯೊಂದನ್ನ್ನುಕೊಟ್ಟು ಹಸಿಯಾಗಿಯೇ ತಿನ್ನಲು ಹೇಳುವರು. ಪೋತರಾಜನು ಬೀಮನ ಜೊತೆ ನೆತ್ತರು ಸಮೇತ ಹಸಿ ಬಾಡನ್ನು ತಿನ್ನುವನು ಆಗ ಪಾಂಡವರು ತಮ್ಮ ತಂಗಿ ಶಂಕೊದರಿಯನ್ನು ಪೋತರಾಜನಿಗೆ ಕೊಟ್ಟು ಮದುವೆ ಮಾಡುತ್ತಾರೆ ಎಂದು ಆ ಒಂದು ಕತೆ ಹೇಳುತ್ತದೆ.

ಹಬ್ಬದ ಹತ್ತನೇ ದಿನದಂದು ಪೋತರಾಜ, ಅರ‍್ಜುನ ಮತ್ತು ದ್ರವ್ಪದಿ ತೇರಿನ ಮೆರವಣಿಗೆಯನ್ನು ಶಕ್ತಿಸ್ತಳಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಶಾಂತಿಪೂಜೆಯನು ಮಾಡಿ ಪೋತರಾಜನ ಬಗ್ಗೆ ಪುರಾಣಕತೆಗಳನ್ನು ಹೇಳಲಾಗುತ್ತದೆ. ಆಮೇಲೆ ಉತ್ಸವ ಗುಡಿಗೆ ಮರಳುತ್ತದೆ. ಇದಾದಮೇಲೆ ‘ಪೋತರಾಜ’ ಬಣದ ಪೂಜಾರಿಗಳ ಮನೆಗೆ ಹೋಗಿ ಪೂಜೆಯನ್ನು ಮಾಡಲಾಗುತ್ತದೆ. ಆಗ ಆ ಪೂಜಾರಿಗಳ ಮಯ್ ಮೇಲೆ ಪೋತರಾಜನು ಬಂದಂತಾಗಿ ಅವರು ನುಗ್ಗಿ ಬರುವರು. ಅವರನ್ನು ತಿಳಿಗೊಳಿಸಿ ಗುಡಿಗೆ ಕರೆದುಕೊಂಡು ಬರಲು ಕರಿಮೇಕೆಯನ್ನು ಕೊಡಲಾಗುತ್ತದೆ ಮತ್ತು ಮಂತ್ರಗಳನ್ನು ಹೇಳಲಾಗುತ್ತದೆ. ಆಗ ಪೋತರಾಜ ಪೂಜಾರಿಗಳು ಮೇಕೆಯನ್ನು ಬಾಯಿಂದ ಕಡಿದು ಅದರ ನೆತ್ತರನ್ನು ಹೀರಿ ಶಾಂತರಾಗುವರು. ಆಮೇಲೆ ಆರತಿಯೊಂದಿಗೆ ಗಾವುಸೇವೆ ಕೊನೆಗೊಳ್ಳುತ್ತದೆ

ವಸಂತೋತ್ಸವ: ಇದು ಹಬ್ಬದ ಕಡೆಯ ದಿನ ನಡೆಯುವುದು. ಎಲ್ಲರೂ ಗುಡಿಯ ಮುಂದೆ ಸೇರಿ ಕರಗದ ಕೂಡುದಲೆ(ಯಶಸ್ಸು)ಯನ್ನು ಆಚರಿಸುವರು. ಚಿಕ್ಕವರಿಗೆ ದೊಡ್ಡವರಿಗೆ ಅಂದು ನಲಿವಿಗಾಗಿ ಆಟಗಳನ್ನು ಏರ‍್ಪಡಿಸಿರುತ್ತಾರೆ. ಎಲ್ಲರೂ ಪಾಲ್ಗೊಂಡು ಸಂತಸಪಡುತ್ತಾರೆ. ಇರುಳಲ್ಲಿ ಮೊದಲ ದಿನ ಏರಿಸಿದ್ದ ಬಾವುಟವನ್ನು ಇಳಿಸಲಾಗುತ್ತದೆ. ಬಾವುಟಗಂಬಕ್ಕೆ ಪೂಜೆಯನ್ನು ಮಾಡಿ ಕಯ್ಯಿಗೆ ಕಟ್ಟಿಕೊಂಡಿದ್ದ ದಾರವನ್ನು (ಕಂಕಣ) ಗುಡಿಗೆ ಹಿಂದಿರುಗಿಸಲಾಗುತ್ತದೆ.

ಕರಗ ಮತ್ತು ದರಗಾ ನಂಟು:
ಕರಗ ಮೆರವಣಿಗೆಯು, ಸಾಗುತ್ತ ದಾರಿ ನಡುವೆ ಅರಳೆಪೇಟೆ(ಕಾಟನ್ ಪೇಟೆ)ಯಲ್ಲಿರುವ ಒಂದು ದರಗಾದ ಮುಂದೆ ನಿಲ್ಲುತ್ತದೆ. ಕರಗಕ್ಕೂ ದರಗಾಕ್ಕೂ ಏನು ನಂಟು ಎಂದು ಅಚ್ಚರಿ ಆಗಬಹುದು. ಮುಸ್ಲಿಂ ಸಮುದಾಯಕ್ಕೂ ಈ ಹಬ್ಬಕ್ಕೂ ಇರುವ ನಂಟಿನ ಹಿಂದೆ ಒಂದು ಕತೆ ಇದೆ. ಕರಗ ಹೊತ್ತು ನಡೆಯುವವರು ಅದನ್ನು ಬೀಳದ ಹಾಗೆ ಕಾಳಜಿ ವಹಿಸಬೇಕು, ಒಂದೊಮ್ಮೆ ಬೀಳಿಸಿದರೆ ಅದು ಕಡೆಗಣಿಸಲಾಗದ ತಪ್ಪು ಎಂಬ ನಂಬಿಕೆ ಇದೆ. ಹದಿನೆಂಟನೆ ಶತಮಾನದಲ್ಲಿ ಹಜರತ್ ತವಕಲ್ ಮಸ್ತಾನ್ ಶಾ ಎಂಬ ಮುಸ್ಲಿಂ ಸಂತರೊಬ್ಬರಿದ್ದರಂತೆ. ಅವರಿದ್ದ ಕಾಲದಲ್ಲಿ ಒಮ್ಮೆ, ಕರಗವನ್ನು ಹೊತ್ತಿದ್ದವರೊಬ್ಬರು, ಸಂತರಿದ್ದ ಜಾಗದಲ್ಲಿ ನಿಂತು ಕರಗ ಬೀಳದಂತೆ ಹರಸಿ ಎಂದು ಕೇಳಿದರೆಂದೂ, ಅದಕ್ಕೆ ಸಂತರು ಕರಗ ಬೀಳದಂತೆ ಹಾರಯ್ಸಿದರೆಂದೂ ಎನ್ನುವ ಹಿನ್ನೆಲೆಯಿದೆ. ಆ ನಡವಳಿಯೇ(ಸಂಪ್ರಾದಾಯ) ಇಂದಿಗೂ ಉಳಿದುಕೊಂಡಿದೆ. ಕರಗದ ಪೂಜೆಯ 3 ದಿವಸ ಮುಂಚೆ ಮತ್ತು ಕರಗದ ದಿನವೂ ಈ ದರಗಾಕ್ಕೆ ಬೇಟಿ ನೀಡಲಾಗುತ್ತದೆ. ಕರಗವನ್ನು ಹೊತ್ತು ಈ ದರಗಾವನ್ನು 3 ಬಾರಿ ಸುತ್ತು ಹೊಡೆಯಲಾಗುತ್ತದೆ ಎಂದು ಹೇಳಲಾಗುತ್ತದೆ.

(ಮಾಹಿತಿ ಸೆಲೆ: wikipedia, karaga.com, pradeepmgp, belgaurukaraga)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. bhadravathi says:

    “ಕರಗಕ್ಕೂ ದರಗಾಕ್ಕೂ ಏನು ನಂಟು ಎಂದು ಅಚ್ಚರಿ ಆಗಬಹುದು” ಅಚ್ಚರಿ ಆಗೋದು ನವ ಇತಿಹಾಸದ ಅಮಲಿನಲ್ಲಿರೋ ಜನಗಳಿಗೆ ಮಾತ್ರ. ಈ ತೆರನಾದ ಎಷ್ಟೋ ಜಾತ್ರೆಗಳು, ಉತ್ಸವಗಳು ಮುಸ್ಲಿಂ ನಂಟಿ ನೊಂದಿಗೆ ಶ್ರೀಮಂತ ಗೊಂಡಿವೆ; ದಕ್ಷಿಣ ಕನ್ನಡ ದ ಹಲವೆಡೆ, ಪ್ರಖ್ಯಾತ ಅಯ್ಯಪ್ಪ ಸ್ವಾಮೀ ಇತ್ಯಾದಿ ಗಳು

  2. Prasanna says:

    “ಕರಗಕ್ಕೂ ದರಗಾಕ್ಕೂ ಏನು ನಂಟು ಎಂದು ಅಚ್ಚರಿ ಆಗಬಹುದು” nammoorina karadallu hIge daragaake hOguva paddati ide. Urus samayadalli, ella hiMdoogaLu daragakke hOguttaare. baabayyana habba aMta oMdide adaralli hindu muslim ibbaru meravaNigeyalli paalgoLLuttaare.

  1. 06/05/2014

    […] “ಕರಗ: ನಮ್ಮ ಬೆಂಗಳೂರ ದೊಡ್ಡ ಹಬ್ಬ” ಬರಹದಲ್ಲಿ ಕರಗ, ಕರಗದ ಹಿನ್ನೆಲೆ, ನಡೆಯುವ ದಿನಗಳು, ಆಚರಣೆಗಳು – ಇವುಗಳ ಬಗ್ಗೆ ತಿಳಿದುಕೊಂಡೆವು. ಹಬ್ಬದ 9 ನೆ ದಿನದಂದು ನಡೆಯುವ ಹೂವಿನ ಕರಗದ ಬಗ್ಗೆ ಈಗ ತಿಳಿಯೋಣ ಬನ್ನಿ. […]

ಅನಿಸಿಕೆ ಬರೆಯಿರಿ: