ಇಂಗ್ಲಿಶ್ ನುಡಿಯ ಜೋಡುಪದಗಳು – 2
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-15
(ಇಂಗ್ಲಿಶ್ ಪದಗಳಿಗೆ…-14ರಿಂದ ಮುಂದುವರಿದುದು)
ಪರಿಚೆಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳು
ಪರಿಚೆಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳಲ್ಲಿ ಎರಡನೆಯ ಪದ ಒಂದು ಪರಿಚೆಪದವಾಗಿರುತ್ತದೆ; ಮೊದಲನೆಯ ಪದ ಹೆಸರುಪದವಾಗಿರಬಹುದು (sugar-free, blood-red), ಇಲ್ಲವೇ ಪರಿಚೆಪದವಾಗಿರಬಹುದು (icy cold, bluish-green). ಎರಡನೆಯದಾಗಿ ಬರುವ ಪರಿಚೆಪದವನ್ನು ಹೆಸರುಪದಕ್ಕೆ ಇಲ್ಲವೇ ಎಸಕಪದಕ್ಕೆ ಒಟ್ಟನ್ನು ಸೇರಿಸಿ ಪಡೆದಿರಲೂ ಬರುತ್ತದೆ (blue-eyed, clear-sighted).
ಇಂತಹ ಇಂಗ್ಲಿಶ್ ಜೋಡುಪದಗಳಲ್ಲಿ ಮೊದಲನೆಯ ಪದವಾಗಿ ಹೆಸರುಪದ ಬಂದಿರುವವೇ ಹೆಚ್ಚು ಬಳಕೆಯಲ್ಲಿವೆ. ಈ ಹೆಸರುಪದಕ್ಕೆ ಪರಿಚೆಪದದ ಒಂದು ಪಾಂಗನ್ನು ತಿಳಿಸುವ ಕೆಲಸ ಇರಬಲ್ಲುದು; ಎತ್ತುಗೆಗಾಗಿ, sugar-free ಎಂಬುದರಲ್ಲಿ ಬಂದಿರುವ sugar ಎಂಬ ಹೆಸರುಪದ free ಎಂಬುದರ ಒಂದು ಪಾಂಗಾಗಿದೆ (free of sugar).
ಮೊದಲನೆಯ ಪದಕ್ಕೆ ಎರಡನೆಯ ಪದ ತಿಳಿಸುವ ಪರಿಚೆಯನ್ನು ಕಡುಮೆಗೊಳಿಸುವ (intensifying) ಕೆಲಸವೂ ಇರಬಲ್ಲುದು; ಎತ್ತುಗೆಗಾಗಿ, dog-tired ಎಂಬುದರಲ್ಲಿ ಬಂದಿರುವ dog ಎಂಬ ಹೆಸರುಪದಕ್ಕೆ tired ಎಂಬ ಪರಿಚೆಪದ ತಿಳಿಸುವ ಪರಿಚೆಯನ್ನು ಕಡುಮೆಗೊಳಿಸುವ ಕೆಲಸ ಇದೆ; ಯಾಕೆಂದರೆ, ಈ ಜೋಡುಪದಕ್ಕೆ very tired ಎಂಬ ಹುರುಳಿದೆ.
ಇಂತಹ ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಎರಡು ಬಗೆಯ ಹೊಲಬುಗಳನ್ನು ಬಳಸಲು ಬರುತ್ತದೆ: ಹೆಸರುಪದಗಳಾಗಿ ಬರುವ ಜೋಡುಪದಗಳ ಪತ್ತುಗೆರೂಪವನ್ನು ಬಳಸುವುದು ಒಂದು ಹೊಲಬು, ಮತ್ತು ಎಸಕಪದಗಳಾಗಿ ಬರುವ ಕೂಡುಪದಗಳ ಪರಿಚೆರೂಪವನ್ನು ಬಳಸುವುದು ಇನ್ನೊಂದು ಹೊಲಬು:
(1) ಜೋಡುಪದಗಳ ಪತ್ತುಗೆರೂಪದ ಬಳಕೆ:
ಹೆಸರುಪದಗಳಾಗಿ ಬರುವ ಜೋಡುಪದಗಳ ಪತ್ತುಗೆರೂಪವನ್ನು ಕನ್ನಡದಲ್ಲಿ ಪರಿಚೆಪದಗಳ ಜಾಗದಲ್ಲಿ ಬಳಸಲು ಬರುತ್ತದೆ; ಎತ್ತುಗೆಗಾಗಿ, ನೋವಳಿಕ ಎಂಬ ಜೋಡುಪದದ ಪತ್ತುಗೆರೂಪವನ್ನು ನೋವಳಿಕದ ತೊಡಕುಗಳು ಎಂಬಲ್ಲಿ ಒಂದು ಪರಿಚೆಪದದ ಜಾಗದಲ್ಲಿ ಬಳಸಲಾಗಿದೆ. ಇಂಗ್ಲಿಶ್‌ನಲ್ಲಿ ಪರಿಚೆಪದಗಳಾಗಿ ಬರುವ ಹಲವು ಜೋಡುಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಇಂತಹ ಪತ್ತುಗೆರೂಪಗಳನ್ನು ಬಳಸಲು ಬರುತ್ತದೆ:
near-sighted | ಸಾರೆನೋಟದ | out-spoken | ಬಿಚ್ಚುಮಾತಿನ | |
open-hearted | ಬಿಚ್ಚೆದೆಯ | photo-electric | ಬೆಳಕುಮಿಂಚಿನ | |
quadrilateral | ನಾಲ್ಬದಿಯ | girl-crazy | ಹುಡುಗಿಹುಚ್ಚಿನ | |
equi-distant | ಸರಿದೂರದ | multilingual | ಹಲನುಡಿಯ | |
new-born | ಹೊಸಹುಟ್ಟಿನ | clear-sighted | ತಿಳಿಕಾಣ್ಮೆಯ | |
self-imposed | ತನ್ಪೇರ‍್ಕೆಯ | self-addressed | ತನ್ನೊಕ್ಕಣಿಕೆಯ | |
green-eyed | ಹಸುರುಕಣ್ಣಿನ | home-made | ಮನೆಮಾಳ್ಕೆಯ |
(2) ಕೂಡುಪದದ ಪರಿಚೆರೂಪಗಳ ಬಳಕೆ:
ಎಸಕಪದಗಳಾಗಿ ಬರುವ ಕೂಡುಪದಗಳ ಪರಿಚೆರೂಪಗಳನ್ನೂ ಕನ್ನಡದಲ್ಲಿ ಪರಿಚೆಪದಗಳ ಜಾಗದಲ್ಲಿ ಬಳಸಲು ಬರುತ್ತದೆ; ಕೂಡುಪದಗಳಿಗೆ ಹಿಂಬೊತ್ತಿನ ರೂಪ (ಹೊರಬಿದ್ದ), ಮುಂಬೊತ್ತಿನ ರೂಪ (ಹೊರಬೀಳುವ), ಮತ್ತು ಅಲ್ಲಗಳೆಯುವ ರೂಪ (ಹೊರಬೀಳದ) ಎಂಬುದಾಗಿ ಮೂರು ಬಗೆಯ ಪರಿಚೆರೂಪಗಳಿವೆ.
ಇವುಗಳಲ್ಲಿ ಹಿಂಬೊತ್ತಿನ ರೂಪ ಒಂದು ಎಸಕ ನಡೆದುದರಿಂದಾಗಿ ಉಂಟಾದ ಪರಿಚೆಯನ್ನು ತಿಳಿಸುತ್ತದೆ; ಮುಂಬೊತ್ತಿನ ರೂಪ ಬಳಕೆಯಲ್ಲಿರುವ ಒಂದು ಎಸಕದಿಂದ ದೊರೆಯುವ ಪರಿಚೆಯನ್ನು ತಿಳಿಸುತ್ತದೆ; ಮತ್ತು ಅಲ್ಲಗಳೆಯುವ ರೂಪ ಒಂದು ಎಸಕ ನಡೆಯದುದರಿಂದಾಗಿ ಉಂಟಾಗುವ ಪರಿಚೆಯನ್ನು ತಿಳಿಸುತ್ತದೆ. ಈ ಮೂರನ್ನೂ ಪರಿಚೆಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗುವ ಹಾಗೆ ಬಳಸಲು ಬರುತ್ತದೆ:
(1) ಹಿಂಬೊತ್ತಿನ ಪರಿಚೆರೂಪದ ಬಳಕೆ:
misguided | ಹಾದಿತಪ್ಪಿದ | man-made | ಆಳುಮಾಡಿದ | |
handicapped | ಬಳಕೆಗುಂದಿದ | tongue-tied | ಮಾತುಕಟ್ಟಿದ | |
well-known | ಹೆಸರಾದ | ultrasonic | ಕೇಳ್ಮೆಮೀರಿದ |
(2) ಮುಂಬೊತ್ತಿನ ಪರಿಚೆರೂಪದ ಬಳಕೆ:
air-tight | ಗಾಳಿತಡೆವ | long-lasting | ನಿಡುಬಾಳುವ | |
outgoing | ಹೊರಹೋಗುವ | hair-raising | ನವಿರೇಳಿಸುವ | |
rain-proof | ಮಳೆತಡೆವ | man-eating | ಆಳ್ತಿನ್ನುವ | |
mouth-watering | ನೀರೂರಿಸುವ | time-saving | ಹೊತ್ತುಳಿಸುವ |
(3) ಅಲ್ಲಗಳೆಯುವ ಪರಿಚೆರೂಪದ ಬಳಕೆ:
outstanding | ತೀರುವೆಯಾಗದ | sugar-free | ಸಕ್ಕರೆಹಾಕದ | |
stiff-necked | ಬಿಟ್ಟುಕೊಡದ | tight-fisted | ಕಾಸುಬಿಚ್ಚದ | |
smoke-free | ಹೊಗೆಯಿಲ್ಲದ | everlasting | ಕೊನೆಯಿಲ್ಲದ |
ಇಂಗ್ಲಿಶ್‌ನಲ್ಲಿ ಬಳಕೆಯಲ್ಲಿರುವ ಇಂತಹ ಹಲವು ಪರಿಚೆಪದಗಳಾಗಿ ಬರುವ ಜೋಡುಪದಗಳಿಗೆ ಹೆಸರುಪದಗಳಾಗಿ ಇಲ್ಲವೇ ಎಸಕಪದಗಳಾಗಿ ಬರಬಲ್ಲ ರೂಪಗಳಿಲ್ಲ. ಆದರೆ ಇವಕ್ಕೆ, ಇಲ್ಲವೇ ಬೇರೆ ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗಬಲ್ಲ ಕನ್ನಡದ ಪರಿಚೆರೂಪಗಳಿಗೆ ಹೆಸರುಪದಗಳಾಗಿ ಇಲ್ಲವೇ ಎಸಕಪದಗಳಾಗಿ ಬರಬಲ್ಲ ರೂಪಗಳೂ ಇವೆ; ಕನ್ನಡದಲ್ಲಿ ಇವು ಬೇರೆ ಪದಗಳಾಗಿರದೆ ಪದರೂಪಗಳಾಗಿರುವುದೇ ಇದಕ್ಕೆ ಕಾರಣ.
ಎರವಲು ಪದಗಳಿರುವ ಇಂಗ್ಲಿಶ್ ಜೋಡುಪದಗಳು
ಗ್ರೀಕ್ ಇಲ್ಲವೇ ಲ್ಯಾಟಿನ್‌ನಿಂದ ಎರವಲು ಪಡೆದ ಕೆಲವು ಬೇರುಗಳನ್ನು ಬಳಸಿ ಇಂಗ್ಲಿಶ್‌ನಲ್ಲಿ ಹಲವು ಜೋಡುಪದಗಳನ್ನು ಹೊಸದಾಗಿ ಉಂಟುಮಾಡಲಾಗಿದೆ; ಇವನ್ನು neo-classical ಜೋಡುಪದಗಳೆಂದು ಕರೆಯಲಾಗುತ್ತದೆ; ಇವಕ್ಕೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಪಡೆಯಲು ಅಂತಹ ಹುರುಳುಗಳನ್ನು ಕೊಡಬಲ್ಲ ಪದಗಳನ್ನು ಇಲ್ಲವೇ ಬೇರುಗಳನ್ನು ಕನ್ನಡದಲ್ಲಿಯೂ ಬಳಸಲು ಬರುತ್ತದೆ. ಇಂತಹ ಪದ ಇಲ್ಲವೇ ಬೇರುಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಕೊಡಲಾಗಿದೆ.
(ಕ) ಜೋಡುಪದಗಳಲ್ಲಿ ಮೊದಲಿಗೆ ಬರುವ ಎರವಲು ಪದಗಳು ಇಲ್ಲವೇ ಬೇರುಗಳು:
(1) astro ಬಾನ್
astronomy | ಬಾನರಿಮೆ | astrophysics | ಬಾನ್ಪುರುಳರಿಮೆ | |
astronaut | ಬಾನ್ದಾರಿಗ | astrobiology | ಬಾನುಸಿರರಿಮೆ | |
astrolaw | ಬಾನ್ಕಟ್ಟಳೆ | astroscope | ಬಾನ್ತೋರ‍್ಪುಕ | |
astroblast | ಬಾನ್ಸಿಡಿತ | astrography | ಬಾನರಿಮೆ |
(2) bio ಉಸಿರು
biomass | ಉಸಿರಿಟ್ಟಣ | biomimatics | ಉಸಿರಿಯಣಕ | |
biobattery | ಉಸಿರಿಮಿನ್ನೆರಕ | biochip | ಉಸಿರಿಕೆತ್ತೆ | |
biodevice | ಉಸಿರಿಚೂಟಿ | biodigest | ಉಸಿರಿಯರಗುಕ | |
biofilter | ಉಸಿರಿಸೋಸುಕ | biofabric | ಉಸಿರಿಬಟ್ಟೆ |
(3) electro ಮಿನ್
electromagnetic | ಮಿನ್ಸೆಳೆತದ | electrocute | ಮಿನ್ಸಾಯಿಸು | |
electrolysis | ಮಿನ್ತೆಗೆತ | electrolyte | ಮಿನ್ನೀರು | |
electroplate | ಮಿನ್ಬಳಿ | electroscope | ಮಿನ್ತೋರ‍್ಪುಕ |
(4) geo ಮಣ್ಣು, ನೆಲ, ಗೆರೆ
geology | ಮಣ್ಣರಿಮೆ | geography | ನೆಲದರಿಮೆ | |
geodesy | ನೆಲಪರಿಜರಿಮೆ | geometry | ಗೆರೆಯರಿಮೆ | |
geophysics | ನೆಲಪುರುಳರಿಮೆ | geopolitical | ನೆಲಾಳ್ವಿಕೆಯ |
(5) hydro ನೀರ್
hydrophobia | ನೀರಂಜಿಕೆ | hydrology | ನೀರರಿಮೆ | |
hydrography | ನೀರ‍್ತಿಟ್ಟದರಿಮೆ | hydrolysis | ನೀರೊಡೆತ | |
hydrometer | ನೀರಳಕ | hydropathy | ನೀರ‍್ಮಾಂಜುಗೆ |
(6) retro ಹಿನ್
retrogression | ಹಿನ್ನಡೆತ | retrograde | ಹಿಮ್ಮೆಟ್ಟುವ | |
retrospect | ಹಿನ್ನೋಟ | retrovirus | ಹಿನ್ನಂಜುತುಣುಕು | |
retrovert | ಹಿನ್ನೋಡು | retrorse | ಹಿಂಬಾಗಿದ |
(7) tele ಗೆಂಟು
telescope | ಗೆಂಟುತೋರ‍್ಪುಕ | telephone | ಗೆಂಟುಮಾತು | |
television | ಗೆಂಟುಕಾಣ್ಕೆ | televise | ಗೆಂಟುಕಾಣಿಸು | |
telekinesis | ಗೆಂಟುಕದಲಿಕೆ | teleprinter | ಗೆಂಟಚ್ಚುಕ |
(ಚ) ಜೋಡುಪದಗಳಲ್ಲಿ ಕೊನೆಗೆ (ಎರಡನೆಯ ಪದವಾಗಿ) ಬರುವ ಎರವಲು ಪದ ಇಲ್ಲವೇ ಬೇರುಗಳು:
(1) cide ಕೊಲೆ, ಅಳಿಕ
regicide | ಅರಸುಕೊಲೆ | patricide | ತಂದೆಕೊಲೆ | |
matricide | ತಾಯಿಕೊಲೆ | infenticide | ಹಸುಳೆಕೊಲೆ | |
insecticide | ಪೂಚಿಯಳಿಕ | pesticide | ಕೇಡಳಿಕ |
(2) cracy ಆಳ್ವಿಕೆ
meritocracy | ಸಯ್ಪಾಳ್ವಿಕೆ | democracy | ಮಂದಿಯಾಳ್ವಿಕೆ | |
aristocracy | ಅರಸಾಳ್ವಿಕೆ | stratocracy | ಪಡೆಯಾಳ್ವಿಕೆ | |
androcracy | ಗಂಡಾಳ್ವಿಕೆ | gynocracy | ಹೆಣ್ಣಾಳ್ವಿಕೆ | |
kleptocracy | ಕಳ್ಳಾಳ್ವಿಕೆ | dulocracy | ತೊತ್ತಾಳ್ವಿಕೆ | |
argentocracy | ಹಣದಾಳ್ವಿಕೆ | foolocracy | ಹೆಡ್ಡಾಳ್ವಿಕೆ |
(3) graphy ಬರಹ, ಅರಿಮೆ
stenography | ಬಿರುಸುಬರಹ | sonography | ಉಲಿಬರಹ | |
geography | ನೆಲದರಿಮೆ | orthography | ಬರಿಗೆಯರಿಮೆ | |
oceanography | ಕಡಲರಿಮೆ | paleography | ಹಳೆಬರಹದರಿಮೆ | |
metallography | ಪೊನ್ನರಿಮೆ | lexicography | ಪದನೆರಕೆಯರಿಮೆ |
(4) itis ಕುತ್ತ
meningitis | ಮಿದುಳುಪರೆಕುತ್ತ | laryngitis | ಗಂಟಲಗೂಡುಕುತ್ತ | |
appendicitis | ಕರುಳುಬಾಲಕುತ್ತ | placentitis | ಮಾಸುಕುತ್ತ |
(5) logy ಅರಿಮೆ
physiology | ಉಸಿರಿಯರಿಮೆ | ethnology | ನಾಡರಿಮೆ | |
gynecology | ಹೆಣ್ಣೊಡಲರಿಮೆ | musicology | ಹಾಡಿಕೆಯರಿಮೆ | |
oncology | ಬಾವರಿಮೆ | mycology | ಕಸವುಸಿರಿಯರಿಮೆ | |
geology | ಮಣ್ಣರಿಮೆ | archeology | ಪಳಮೆಯರಿಮೆ | |
pathology | ಕುತ್ತದರಿಮೆ | psephology | ಆಯ್ಕಳಿಯರಿಮೆ | |
entomology | ಪೂಚಿಯರಿಮೆ | hematology | ನೆತ್ತರರಿಮೆ |
(6) morph ಪರಿಜು
allomorph | ಒಳಪರಿಜು | bimorph | ಇಪ್ಪರಿಜು | |
endomorph | ಕೊನೆಪರಿಜು | isomorph | ಒಂಟಿಪರಿಜು | |
polymorph | ಹಲಪರಿಜು | trymorph | ಮೂಪರಿಜು |
(7) phile ಒಲವಿಗ
oenophile | ಈಡೊಲವಿಗ | acidophile | ಹುಳಿಯೊಲವಿಗ | |
Anglophile | ಇಂಗ್ಲಿಶೊಲವಿಗ | Sinophile | ಚೀನಿಯೊಲವಿಗ | |
dogophile | ನಾಯಿಯೊಲವಿಗ | foodophile | ತಿನಿಸೊಲವಿಗ |
(8) scope ತೋರ‍್ಪುಕ
microscope | ಸೀರುತೋರ‍್ಪುಕ | periscope | ಮೇಲೆತೋರ‍್ಪುಕ | |
telescope | ಗೆಂಟುತೋರ‍್ಪುಕ | nightscope | ಇರುಳುತೋರ‍್ಪುಕ | |
electroscope | ಮಿನ್ತೋರ‍್ಪುಕ | thermoscope | ಬಿಸಿತೋರ‍್ಪುಕ |
ತಿರುಳು
ಇಂಗ್ಲಿಶ್‌ನ ಹಾಗೆ ಕನ್ನಡದಲ್ಲೂ ಹೆಸರುಪದಗಳಾಗಿ ಬರುವ ಜೋಡುಪದಗಳ ಮೊದಲನೆಯ ಪದವಾಗಿ ಹೆಸರುಪದ, ಎಸಕಪದ ಮತ್ತು ಪರಿಚೆಪದಗಳು ಬರಬಲ್ಲುವು; ಹಾಗಾಗಿ, ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಸುಳುವಾಗಿ ಕಟ್ಟಲು ಬರುತ್ತದೆ.
ಎಸಕಪದಗಳಾಗಿ ಬರಬಲ್ಲ ಜೋಡುಪದಗಳು ಕನ್ನಡದಲ್ಲಿಲ್ಲವಾದರೂ ಕೂಡುಪದಗಳೆಂಬ ಬೇರೊಂದು ಬಗೆಯ ಪದಗಳನ್ನು ಅವಕ್ಕೆ ಸಾಟಿಯಾಗಿ ಕನ್ನಡದಲ್ಲಿ ಕಟ್ಟಲು ಬರುತ್ತದೆ.
ಇದೇ ರೀತಿಯಲ್ಲಿ, ಪರಿಚೆಪದಗಳಾಗಿ ಬರಬಲ್ಲ ಜೋಡುಪದಗಳು ಕನ್ನಡದಲ್ಲಿಲ್ಲವಾದರು, ಅಂತಹ ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಹೆಸರುಪದಗಳಾಗಿ ಬರುವ ಜೋಡುಪದಗಳ ಪತ್ತುಗೆ ರೂಪವನ್ನು ಇಲ್ಲವೇ ಎಸಕಪದಗಳಾಗಿ ಬರುವ ಕೂಡುಪದಗಳ ಪರಿಚೆರೂಪಗಳಲ್ಲೊಂದನ್ನು ಬಳಸಲು ಬರುತ್ತದೆ.
ಈ ಎಲ್ಲಾ ಕಡೆಗಳಲ್ಲೂ ಇಂಗ್ಲಿಶ್ ಜೋಡುಪದಗಳ ಹುರುಳನ್ನವಲಂಬಿಸಿ ನಾವು ಬಳಸುವ ಹೊಲಬು ಇಂಗ್ಲಿಶ್ ಬಳಸುವ ಹೊಲಬಿಗಿಂತ ಬೇರಾಗಬೇಕಾಗಬಹುದು.
ಲ್ಯಾಟಿನ್ ಇಲ್ಲವೇ ಗ್ರೀಕ್ ಮೂಲದ ಬೇರುಗಳನ್ನು ಬಳಸಿರುವ ಹಲವು ಹೊಸ ಕಟ್ಟಣೆಗಳೂ ಇಂಗ್ಲಿಶ್‌ನಲ್ಲಿ (ಮುಕ್ಯವಾಗಿ ಅರಿಮೆಯ ಬರಹಗಳಲ್ಲಿ) ಬಳಕೆಯಾಗುತ್ತವೆ; ಇವುಗಳ ಹುರುಳನ್ನು ತಿಳಿಸುವಂತಹ ಕನ್ನಡ ಪದಗಳನ್ನು ಇಲ್ಲವೇ ಬೇರುಗಳನ್ನು ಬಳಸಿ ಇಂತಹ ಪದಗಳಿಗೆ ಸಾಟಿಯಾಗಬಲ್ಲ ಹೊಸ ಪದಗಳನ್ನು ಕನ್ನಡದಲ್ಲಿ ಕಟ್ಟಲು ಬರುತ್ತದೆ.
1 Response
[…] << ಬಾಗ-15 […]