ಇಂಗ್ಲಿಶ್ ನುಡಿಯ ಜೋಡುಪದಗಳು

ಡಿ.ಎನ್.ಶಂಕರ ಬಟ್.

ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-14:

ಇಂಗ್ಲಿಶ್ ನುಡಿಯ ಜೋಡುಪದಗಳು

ಮುನ್ನೋಟ
ಎರಡು ಪದಗಳನ್ನು ಒಟ್ಟು ಸೇರಿಸಿ ಹೊಸದೊಂದು ಪದವನ್ನು ಉಂಟುಮಾಡುವಂತಹ ಹೊಲಬನ್ನು ಇಂಗ್ಲಿಶ್ ಮತ್ತು ಕನ್ನಡಗಳೆರಡೂ ಬಳಸುತ್ತವೆ; ಹೀಗೆ ಉಂಟುಮಾಡಿರುವ ಪದಗಳನ್ನು ಜೋಡುಪದ ಇಲ್ಲವೇ compound ಎಂಬುದಾಗಿ ಕರೆಯಲಾಗುತ್ತದೆ; ಎತ್ತುಗೆಗಾಗಿ, ಹುರಿಗಡಲೆ ಎಂಬುದೊಂದು ಜೋಡುಪದ; ಇದರಲ್ಲಿ ಹುರಿ ಮತ್ತು ಕಡಲೆ ಎಂಬ ಎರಡು ಪದಗಳನ್ನು ಒಟ್ಟುಸೇರಿಸಿ ಒಂದು ಹೊಸ ಪದವನ್ನು ಉಂಟುಮಾಡಲಾಗಿದೆ.

ಇಂಗ್ಲಿಶ್‌ನಲ್ಲಾಗಲಿ, ಕನ್ನಡದಲ್ಲಾಗಲಿ, ಇಂತಹ ಜೋಡುಪದಗಳಲ್ಲಿ ಹೆಚ್ಚಿನೆಡೆಗಳಲ್ಲೂ ಎರಡನೆಯ ಪದ ಅರಿದಾಗಿರುತ್ತದೆ; ಎಂದರೆ, ಅದು ಗುರುತಿಸುವ ಪಾಂಗನ್ನೇ ಜೋಡುಪದವೂ ಗುರುತಿಸುತ್ತದೆ. ಎತ್ತುಗೆಗಾಗಿ, ಹುರಿಗಡಲೆ ಎಂಬುದು ಒಂದು ಬಗೆಯ ಕಡಲೆಯನ್ನು ಗುರುತಿಸುತ್ತದೆ. ಈ ಎರಡನೆಯ ಪದ ಗುರುತಿಸುವ ಪಾಂಗಿನ ಪರಿಚೆಯೊಂದನ್ನು ತಿಳಿಸುವ ಮೂಲಕ ಜೋಡುಪದದ ಮೊದಲನೆಯ ಪದ ಅದರ ಹರವನ್ನು ಕಡಿಮೆ ಮಾಡುತ್ತದೆ.

ಇಂಗ್ಲಿಶ್‌ನ ಜೋಡುಪದಗಳಲ್ಲಿ ಹೆಸರುಪದಗಳು ಮಾತ್ರವಲ್ಲದೆ ಎಸಕಪದಗಳು ಮತ್ತು ಪರಿಚೆಪದಗಳೂ ಅವುಗಳ ಎರಡನೆಯ ಪದವಾಗಿ ಬಳಕೆಯಾಗಬಲ್ಲುವು; ಎಂದರೆ, ಇಂಗ್ಲಿಶ್‌ನ ಜೋಡುಪದಗಳು ಹೆಸರುಪದಗಳಾಗಿ, ಎಸಕಪದಗಳಾಗಿ, ಮತ್ತು ಪರಿಚೆಪದಗಳಾಗಿ ಬಳಕೆಯಾಗಬಲ್ಲುವು. ಎತ್ತುಗೆಗಾಗಿ, sawdust ಎಂಬುದರಲ್ಲಿ ಎರಡನೆಯ ಪದ ಒಂದು ಹೆಸರುಪದವಾಗಿದ್ದು, ಅದೂ ಒಂದು ಹೆಸರುಪದವಾಗಿದೆ; deep-fry ಎಂಬುದರಲ್ಲಿ ಎರಡನೆಯ ಪದ ಎಸಕಪದ, ಮತ್ತು ಅದೂ ಒಂದು ಎಸಕಪದ; sugar-free ಎಂಬುದರಲ್ಲಿ ಎರಡನೆಯ ಪದ ಪರಿಚೆಪದ, ಮತ್ತು ಅದೂ ಒಂದು ಪರಿಚೆಪದ. ಹೀಗಿದ್ದರೂ, ಇಂಗ್ಲಿಶ್‌ನಲ್ಲಿ ಹೆಚ್ಚಿನ ಜೋಡುಪದಗಳೂ ಹೆಸರುಪದಗಳಾಗಿರುತ್ತವೆ.

ಕನ್ನಡದ ಜೋಡುಪದಗಳಲ್ಲಿ ಎರಡನೆಯ ಪದವಾಗಿ ಹೆಸರುಪದಗಳು ಮಾತ್ರ ಬರುತ್ತವಲ್ಲದೆ ಎಸಕಪದ ಇಲ್ಲವೇ ಪರಿಚೆಪದಗಳು ಬರುವುದಿಲ್ಲ; ಹಾಗಾಗಿ, ಅದರ ಜೋಡುಪದಗಳು ಹೆಸರುಪದಗಳಾಗಿ ಮಾತ್ರ ಬಳಕೆಯಾಗಬಲ್ಲುವು. ಹಲವು ಎಸಕಪದಗಳಲ್ಲಿ ಎರಡು ಪದಗಳು ಒಟ್ಟುಸೇರಿರುವುದನ್ನೂ ಕಾಣಬಹುದೇನೋ ನಿಜ; ಆದರೆ, ಅವನ್ನು ಕನ್ನಡದ ಸೊಲ್ಲರಿಮೆಯಲ್ಲಿ ಜೋಡುಪದಗಳೆಂದು ಕರೆಯದೆ, ಕೂಡುಪದವೆಂದು ಕರೆಯಲಾಗುತ್ತದೆ; ಅವು ಹಲವು ವಿಶಯಗಳಲ್ಲಿ ಜೋಡುಪದಗಳಿಗಿಂತ ಬೇರಾಗಿರುವುದು ಇದಕ್ಕೆ ಕಾರಣ. ಇದಲ್ಲದೆ, ಕನ್ನಡದ ಪರಿಚೆಪದಗಳಲ್ಲಿ ಒಂದಕ್ಕಿಂತ ಹೆಚ್ಚು ಪದಗಳು ಸೇರಿರುವುದಿಲ್ಲವೆಂದೇ ಹೇಳಬಹುದು.

ಹಾಗಾಗಿ, ಇಂಗ್ಲಿಶ್‌ನಲ್ಲಿ ಕಾಣಿಸುವ ಹೆಸರುಪದ, ಎಸಕಪದ ಮತ್ತು ಪರಿಚೆಪದ ಎಂಬ ಮೂರು ಬಗೆಯ ಜೋಡುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಉಂಟುಮಾಡುವುದು ಹೇಗೆ ಎಂಬುದನ್ನು ವಿವರಿಸಲು ಅವನ್ನು ಕೆಳಗೆ ಬೇರೆ ಬೇರಾಗಿ ಗಮನಿಸಲಾಗಿದೆ.

ಹೆಸರುಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳು
ಇಂಗ್ಲಿಶ್‌ನಲ್ಲಿ ಹೆಸರುಪದಗಳಾಗಿ ಬರುವ ಜೋಡುಪದಗಳಲ್ಲಿ ಎರಡನೆಯ ಪದ ಒಂದು ಹೆಸರುಪದವಾಗಿರುತ್ತದೆ, ಮತ್ತು ಹೆಚ್ಚಿನೆಡೆಗಳಲ್ಲೂ ಅದೇ ಆ ಜೋಡುಪದದ ಅರಿದು ಪದವಾಗಿರುತ್ತದೆ. ಅವುಗಳ ಮೊದಲನೆಯ ಪದವಾಗಿ ಬೇರೊಂದು ಹೆಸರುಪದ, ಎಸಕಪದ, ಇಲ್ಲವೇ ಪರಿಚೆಪದ ಬರಬಲ್ಲುದು. ಎತ್ತುಗೆಗಾಗಿ, teapot ಎಂಬುದರಲ್ಲಿ tea ಎಂಬ ಮೊದಲನೆಯ ಪದ ಹೆಸರುಪದ; flow chart ಎಂಬುದರಲ್ಲಿ flow ಎಂಬ ಮೊದಲನೆಯ ಪದ ಎಸಕಪದ; ಮತ್ತು blackbird ಎಂಬುದರಲ್ಲಿ black ಎಂಬ ಮೊದಲನೆಯ ಪದ ಪರಿಚೆಪದ. ಈ ಮೂರು ಜೋಡುಪದಗಳಲ್ಲೂ ಎರಡನೆಯ ಪದ (pot, chart, ಮತ್ತು bird) ಹೆಸರುಪದವಾಗಿದೆಯೆಂಬುದನ್ನು ಗಮನಿಸಬಹುದು.

ಇಂಗ್ಲಿಶ್‌ನ ಹಾಗೆ ಕನ್ನಡದಲ್ಲಿಯೂ ಹೆಸರುಪದಗಳಾಗಿ ಬರುವ ಜೋಡುಪದಗಳಲ್ಲಿ ಎರಡನೆಯ ಪದ ಹೆಸರುಪದವೇ ಆಗಿರುತ್ತದೆ, ಮತ್ತು ಮೊದಲನೆಯ ಪದ ಹೆಸರುಪದವಾಗಿರಬಹುದು, ಎಸಕಪದವಾಗಿರಬಹುದು, ಇಲ್ಲವೇ ಪರಿಚೆಪದವಾಗಿಯೂ ಇರಬಹುದು (.. ನೋಡಿ). ಎತ್ತುಗೆಗಾಗಿ, ಜೇನುಹುಳ ಎಂಬುದರಲ್ಲಿ ಜೇನು ಎಂಬ ಮೊದಲನೆಯ ಪದ ಹೆಸರುಪದ, ಹುರಿಗಡಲೆ ಎಂಬುದರಲ್ಲಿ ಹುರಿ ಎಂಬ ಮೊದಲನೆಯ ಪದ ಎಸಕಪದ, ಮತ್ತು ದೊಡ್ಡಕ್ಕ ಎಂಬುದರಲ್ಲಿ ದೊಡ್ಡ ಎಂಬ ಮೊದಲನೆಯ ಪದ ಪರಿಚೆಪದ. ಈ ಮೂರರಲ್ಲೂ ಎರಡನೆಯ ಪದ (ಹುಳ, ಕಡಲೆ, ಮತ್ತು ಅಕ್ಕ) ಹೆಸರುಪದವಾಗಿದೆ.

ಹಾಗಾಗಿ, ಹೆಸರುಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗಬಲ್ಲ ಜೋಡುಪದಗಳನ್ನು ಕನ್ನಡದಲ್ಲಿ ಉಂಟುಮಾಡಬೇಕಾದಾಗ, ಕೆಲವೆಡೆಗಳಲ್ಲಿ ಆ ಪದಗಳಲ್ಲಿ ಬಳಕೆಯಾಗಿರುವ ಎರಡು ಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನೇ ಕನ್ನಡದಲ್ಲೂ ಬಳಸಿ ಜೋಡುಪದಗಳನ್ನು ಉಂಟುಮಾಡಲು ಬರುತ್ತದೆ:

(1) ಮೊದಲನೆಯ ಪದ ಹೆಸರುಪದವಾಗಿರುವ ಜೋಡುಪದಗಳು:

nose-rope ಮೂಗುದಾರ handgun ಕಯ್ಕೋವಿ
rainbow ಮಳೆಬಿಲ್ಲು headache ತಲೆನೋವು
motherland ತಾಯ್ನಾಡು daydream ಹಗಲುಕನಸು
hookworm ಕೊಕ್ಕೆಹುಳು milk-tooth ಹಾಲುಹಲ್ಲು

(2) ಮೊದಲನೆಯ ಪದ ಎಸಕಪದವಾಗಿರುವ ಜೋಡುಪದಗಳು:

punch bag ಚಚ್ಚುಹಸುಬೆ pushbutton ತಳ್ಳುಗುಬ್ಬಿ
pushcart ತಳ್ಳುಗಾಡಿ carry-bag ಒಯ್ಚೀಲ
open neck ತೆರೆಗೊರಳು call-loan ಕರೆಸಾಲ
flyleaf ಹಾರುಹಾಳೆ whetstone ಮಸೆಕಲ್ಲು

(3) ಮೊದಲನೆಯ ಪದ ಪರಿಚೆಪದವಾಗಿರುವ ಜೋಡುಪದಗಳು:

red eye ಕೆಂಗಣ್ಣು greenhouse ಹಸಿರುಮನೆ
hind leg ಹಿಂಗಾಲು microcredit ಕಿರುಸಾಲ
long jump ಉದ್ದನೆಗೆತ black money ಕಪ್ಪುಹಣ
mid life ನಡುಬಾಳು backwater ಹಿನ್ನೀರು

ಆದರೆ, ಎಲ್ಲಾ ಕಡೆಗಳಲ್ಲೂ ಈ ರೀತಿ ಪದಕ್ಕೆ ಪದವನ್ನು ಸಾಟಿಮಾಡಿ ಕನ್ನಡದಲ್ಲಿ ಹೊಸ ಜೋಡುಪದಗಳನ್ನು ಕಟ್ಟಹೋದರೆ, ಅವು ಇಂಗ್ಲಿಶ್ ಪದಗಳ ಹುರುಳನ್ನು ಸರಿಯಾಗಿ ಕೊಡಲಾರವು. ಹಾಗಾಗಿ, ಹೆಚ್ಚಿನೆಡೆಗಳಲ್ಲೂ ಇಂಗ್ಲಿಶ್ ಜೋಡುಪದದ ಹುರುಳೇನೆಂಬುದನ್ನು ಮೊದಲು ಗಮನಿಸಿ, ಅದಕ್ಕೆ ಹೊಂದಿಕೆಯಾಗುವಂತೆ ಕನ್ನಡದಲ್ಲಿ ಜೋಡುಪದವನ್ನು ಕಟ್ಟಬೇಕಾಗುತ್ತದೆ.

ಹೀಗೆ ಕಟ್ಟುವಲ್ಲಿ ಮೊದಲ ಪದವಾಗಿ ಹೆಸರುಪದವನ್ನು ಬಳಸುವುದು, ಎಸಕಪದವನ್ನು ಬಳಸುವುದು, ಇಲ್ಲವೇ ಪರಿಚೆಪದವನ್ನು ಬಳಸುವುದು ಎಂಬ ಮೇಲಿನ ಮೂರು ಬಗೆಯ ಹೊಲಬುಗಳನ್ನು ಕನ್ನಡದಲ್ಲೂ ಬಳಸಲು ಬರುತ್ತದೆ; ಆದರೆ, ಇಂಗ್ಲಿಶ್‌ನಲ್ಲಿ ಬಳಸಿದಂತಹದೇ ಪದವನ್ನು ಕನ್ನಡದಲ್ಲಿ ಬಳಸುವ ಬದಲು, ಜೋಡುಪದದ ಹುರುಳನ್ನವಲಂಬಿಸಿ, ಬೇರೆ ಬಗೆಯ ಪದಗಳನ್ನೂ ಬಳಸಬೇಕಾಗಬಹುದು ಎಂಬುದೇ ಇಲ್ಲಿ ಗಮನಿಸಬೇಕಾಗಿರುವ ವಿಶಯವಾಗಿದೆ.

ಹೊಸಪದಗಳನ್ನು ಕಟ್ಟುವವರು ಈ ರೀತಿ ತಮ್ಮೆದುರಿರುವ ಬೇರೆ ಬೇರೆ ಆಯ್ಕೆಗಳನ್ನು ಗಮನದಲ್ಲಿರಿಸಿಕೊಂಡರೆ ಹೆಚ್ಚು ಹೊಂದಿಕೆಯಾಗುವ ಪದಗಳನ್ನು ಕಟ್ಟಬಲ್ಲರು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಇಂಗ್ಲಿಶ್ ಜೋಡುಪದಗಳಲ್ಲಿ ಮೊದಲನೆಯ ಪದ ಹೆಸರುಪದವಾಗಿದೆಯಾದರೂ ಕನ್ನಡದಲ್ಲಿ ಅಂತಹದೇ ಪದವನ್ನು ಬಳಸದೆ, ಪರಿಚೆಪದವೊಂದನ್ನು ಬಳಸಿದುದರಿಂದ ಆ ಜೋಡುಪದಗಳ ಹುರುಳನ್ನು ಹೆಚ್ಚು ಚನ್ನಾಗಿ ತಿಳಿಸಿಹೇಳಲು ಬಂದಿದೆ:

handbook ಕಿರುಕಡತ note-book ಕೀರೆಣ್ಣುಕ
news flash ಬಿಸಿಸುದ್ದಿ table spoon ದೊಡ್ಡಮಿಳ್ಳಿ

ಮೊದಲನೆಯ ಪದವಾಗಿ ಎಸಕಪದ ಇಲ್ಲವೇ ಪರಿಚೆಪದ ಬಂದಿರುವಲ್ಲಿ ಹೆಸರುಪದವನ್ನು ಬಳಸಿಯೂ ಸಾಟಿಯಾಗಬಲ್ಲ ಜೋಡುಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಬರುತ್ತದೆ ಎಂಬುದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:

antiseptic ಕೊಳೆಯಳಿಕ outskirts ಗಡಿನಾಡು
drain pipe ಬಚ್ಚಲುಕೊಳವೆ paymaster ಹಣಕೊಡುಗ
martial law ಪಡೆಯಾಳ್ವಿಕೆ wet-nurse ಮಲೆತೊತ್ತು
typewriter ಬೆರಳಚ್ಚು turncoat ನಾಡಹಗೆ

ಎಸಕಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳು
ಇಂಗ್ಲಿಶ್‌ನಲ್ಲಿ ಎಸಕಪದಗಳಾಗಿ ಬರಬಲ್ಲ ಜೋಡುಪದಗಳಲ್ಲಿ ಎರಡನೆಯ ಪದ ಎಸಕಪದವಾಗಿರುತ್ತದೆ; ಇವುಗಳಲ್ಲಿ ಮೊದಲನೆಯ ಪದ ಹೆಸರುಪದವಾಗಿರಬಹುದು, ಪರಿಚೆಪದವಾಗಿರಬಹುದು, ಇಲ್ಲವೇ ಬೇರೊಂದು ಎಸಕಪದವಾಗಿಯೂ ಇರಬಹುದು.

ಎತ್ತುಗೆಗಾಗಿ, ghost-write ಎಂಬುದರಲ್ಲಿ ghost ಎಂಬ ಮೊದಲನೆಯ ಪದ ಒಂದು ಪರಿಚೆಪದವಾಗಿದೆ; deep-fry ಎಂಬುದರಲ್ಲಿ deep ಎಂಬ ಮೊದಲನೆಯ ಪದ ಒಂದು ಹೆಸರುಪದವಾಗಿದೆ; ಮತ್ತು stir-fry ಎಂಬುದರಲ್ಲಿ stir ಎಂಬ ಮೊದಲನೆಯ ಪದ ಒಂದು ಎಸಕಪದವಾಗಿದೆ. ಈ ಮೂರು ಜೋಡುಪದಗಳಲ್ಲೂ ಎರಡನೆಯ ಪದ (write ಮತ್ತು fry) ಒಂದು ಎಸಕಪದವಾಗಿದೆ ಎಂಬುದನ್ನು ಗಮನಿಸಬಹುದು.

ಕನ್ನಡದಲ್ಲಿ ಎಸಕಪದಗಳಾಗಿ ಬಳಕೆಯಾಗಬಲ್ಲ ಜೋಡುಪದಗಳಿಲ್ಲ; ಆದರೆ, ಕೂಡುಪದಗಳೆಂಬ ಬೇರೊಂದು ಬಗೆಯ ಪದಗಳಲ್ಲಿ ಎಸಕಪದಗಳೊಂದಿಗೆ ಹೆಸರುಪದ, ಪರಿಚೆಪದ, ಮತ್ತು ಎಸಕಪದಗಳ ಜೋಡಿಸುವ ರೂಪಗಳು ಬರಬಲ್ಲುವು (… ನೋಡಿ); ಇಂತಹ ಕೂಡುಪದಗಳನ್ನು ಇಂಗ್ಲಿಶ್‌ನಲ್ಲಿ ಎಸಕಪದಗಳಾಗಿ ಬರುವ ಜೋಡುಪದಗಳಿಗೆ ಸಾಟಿಯಾಗಿ ಬಳಸಲು ಬರುತ್ತದೆ ಎಂಬುದನ್ನು ಕೆಳಗಿನ ಎತ್ತುಗೆಗಳಲ್ಲಿ ಕಾಣಬಹುದು:

(1) ಮೊದಲನೆಯ ಪದ ಹೆಸರುಪದ:

foretell ಕಣಿಹೇಳು blindfold ಕಣ್ಣುಕಟ್ಟು
handshake ಕಯ್ಕುಲುಕು head-hunt ತಲೆಹುಡುಕು

(2) ಮೊದಲನೆಯ ಪದ ಪರಿಚೆಪದ:

smooth-land ನುಣ್ಣಗಿಳಿಸು soft-land ಮೆತ್ತಗಿಳಿಸು
intersect ಅಡ್ಡತುಂಡಿಸು gainsay ಎದುರಾಡು

(3) ಮೊದಲನೆಯ ಪದ ಎಸಕಪದದ ಜೋಡಿಸುವ ರೂಪ:

highlight ಎತ್ತಿತೋರಿಸು burst-open ಸಿಡಿದುತೆರೆ
kick-start ಒದ್ದುಹೊರಡಿಸು force-feed ಗಿಡಿದುಣಿಸು

ಇಂಗ್ಲಿಶ್‌ನ ಕೆಲವು ಜೋಡುಪದಗಳಲ್ಲಿ ಎರಡನೆಯ ಪದ ತಿಳಿಸುವ ಎಸಕದ ಜಾಗ ಇಲ್ಲವೇ ಮುಟ್ಟನ್ನು (instrument) ಮೊದಲನೆಯ ಹೆಸರುಪದ ತಿಳಿಸುತ್ತದೆ (spoon-feed, oven-cook). ಕನ್ನಡದ ಕೂಡುಪದಗಳಲ್ಲಿ ಇಂತಹ ಪದಗಳ ಬಳಕೆ ತುಂಬಾ ಕಡಿಮೆ; ಹೀಗಿದ್ದರೂ, ಬಲೆಹಿಡಿ, ಸೆರೆಹಿಡಿ ಎಂಬಂತಹ ಕೆಲವು ಪದಗಳಲ್ಲಿ ಈ ಹೊಲಬಿನ ಬಳಕೆಯಾಗಿದ್ದು, ಇದೇ ಹೊಲಬನ್ನು ಮೇಲಿನ ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕಟ್ಟುವಲ್ಲೂ ಬಳಸಲು ಬರುತ್ತದೆ:

oven-cook ಗೂಡೊಲೆಯಡು smoke-dry ಹೊಗೆಯೊಣಗಿಸು
spoon-feed ಮಿಳ್ಳಿಯುಣಿಸು steam-cook ಆವಿಯಡು

ಇಂಗ್ಲಿಶ್‌ನಲ್ಲಿ ಎಸಕಪದಗಳಾಗಿ ಬರಬಲ್ಲ ಜೋಡುಪದಗಳಲ್ಲಿ ಹೆಚ್ಚಿನವೂ ಹೆಸರುಪದಗಳಾಗಿ ಬರುವ ಜೋಡುಪದಗಳಿಂದ ಹಿಂಪಡೆದ (back-formation) ಪದಗಳಾಗಿದ್ದು (proof-readingನಿಂದ proof-read, chain-smokerನಿಂದ chain-smoke), ಅಂತಹ ಪದಗಳನ್ನು ಕಟ್ಟುವ ಹೊಲಬು ಆ ನುಡಿಯಲ್ಲಿ ಹೆಚ್ಚು ಬಳಕೆಯಲ್ಲಿಲ್ಲ. ಆದರೆ, ಕನ್ನಡದಲ್ಲಿ ಕೂಡುಪದಗಳನ್ನು ಕಟ್ಟುವುದು ತುಂಬಾ ಬಳಕೆಯಲ್ಲಿರುವ ಹಮ್ಮುಗೆಯಾಗಿದೆ; ಇಂಗ್ಲಿಶ್‌ನ ಬೇರೆಯೂ ಹಲವು ಬಗೆಯ ಎಸಕಪದಗಳಿಗೆ ಸಾಟಿಯಾಗಿ ಈ ಹಮ್ಮುಗೆಯಿಂದ ಪಡೆದ ಪದಗಳನ್ನು ಬಳಸಲು ಬರುತ್ತದೆ.

(ಈ ಪಸುಗೆ ಇಂಗ್ಲಿಶ್ ಪದಗಳಿಗೆ…-15ರಲ್ಲಿ ಮುಂದುವರಿಯುತ್ತದೆ)

<< ಬಾಗ-13

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 30/07/2014

    […] (ಇಂಗ್ಲಿಶ್ ಪದಗಳಿಗೆ…-14ರಿಂದ ಮುಂದುವರಿದುದು)  […]

ಅನಿಸಿಕೆ ಬರೆಯಿರಿ: