ಕನ್ನಡವನ್ನು ಸರಿಯಾಗಿ ಕಲಿಯಲು ಸಂಸ್ಕ್ರುತ ಅಗತ್ಯವೇ?

ಸಂದೀಪ್ ಕಂಬಿ.

byrappa_pv

ಹುಬ್ಬಳ್ಳಿಯಲ್ಲಿ ಮೊನ್ನೆ ನಡೆದ ಸಬೆಯೊಂದರಲ್ಲಿ ಶ್ರೀ ಎಸ್. ಎಲ್. ಬಯ್ರಪ್ಪನವರು ‘ಸಂಸ್ಕ್ರುತವಿಲ್ಲದೆ ಕನ್ನಡವನ್ನು ಸರಿಯಾಗಿ ಕಲಿಯಲು ಸಾದ್ಯವಿಲ್ಲ’, ‘ಕನ್ನಡವು ಸಂಸ್ಕ್ರುತದಿಂದ ಸತ್ವಯುತವಾಗಿದೆ’ ಎಂಬಂತಹ ಕೆಲವು ಮಾತುಗಳನ್ನಾಡಿದ್ದಾರೆ ಎಂಬ ವರದಿ ಬಂದಿದೆ. ಕನ್ನಡದ ವಿಶಯದಲ್ಲಿ ಸಂಸ್ಕ್ರುತವನ್ನು ಕುರಿತಾದ ಬಯ್ರಪ್ಪನವರ ಈ ನಿಲುವು ಹೊಸತೇನಲ್ಲ. ಹಿಂದೆಯೂ ಅವರು ಇಂತಹುದೇ ಕೆಲವು ಮಾತುಗಳನ್ನಾಡಿದ್ದರು. ಇರಲಿ, ಆದರೆ ಅವರ ಈ ಅನಿಸಿಕೆಗಳು ಎಶ್ಟು ಸರಿ ಎಂಬುದನ್ನು ಒರೆಗೆ ಹಚ್ಚೋಣ. ಮುಕ್ಯವಾಗಿ ನುಡಿಯ ಎರಡು ರೂಪಗಳಾದ ಮಾತು ಮತ್ತು ಬರಹಗಳೆರಡನ್ನೂ ಗಮನಿಸೋಣ.

ಎಳೆಯ ವಯಸ್ಸಿನಲ್ಲೇ ತಾಯ್ನುಡಿಯಲ್ಲಿ ಮಾತನಾಡಲು ಕಲಿಯುವ ನಾವು, ಮುಂದೆ ಮನೆಯವರ ಜೊತೆ ಮತ್ತು ಕೂಡಣದ ಇತರೆ ಮಂದಿಯ ಜೊತೆಗಿನ ಒಡನಾಟದಿಂದ ನುಡಿಯನ್ನು ಮತ್ತು ಅದರ ಬಳಕೆಯನ್ನು ಹೆಚ್ಚಾಗಿ ಕಲಿಯುತ್ತ ಹೋಗುತ್ತೇವೆ. ನಮ್ಮ ನಾಡಿನ ಉದ್ದಗಲಕ್ಕೂ ಸಣ್ಣ ವಯಸ್ಸಿನ ಮಕ್ಕಳಿಂದ ಹಿಡಿದು, ಮುದಿಯರ ವರೆಗೂ ಎಲ್ಲ ವರ‍್ಗದ ಕನ್ನಡಿಗರೂ ಕನ್ನಡವನ್ನು ಹೀಗೇ ಕಲಿತು ಮಾತಲ್ಲಿ ಬಳಸುತ್ತ ಬಂದಿರುತ್ತಾರೆ. ಇದಕ್ಕಾಗಿ ಅವರಾರಿಗೂ ಸಂಸ್ಕ್ರುತವನ್ನು ಕಲಿಯುವ ಅಗತ್ಯ ಬರುವುದಿಲ್ಲ. ನಿಜವಾಗಿಯೂ, ಇಂದು ಬೆರೆಳೆಣಿಕೆಯಶ್ಟು ಮಂದಿಗೆ ಮಾತ್ರ ಸಂಸ್ಕ್ರುತದ ತಿಳಿವಿದೆ. ಆದರೆ ಇವರನ್ನು ಬಿಟ್ಟು ಸುಮಾರು ಅಯ್ದಾರು ಕೋಟಿಯ ಎಣಿಕೆಯಲ್ಲಿರುವ ಕನ್ನಡಿಗರಿಗೆ ಕನ್ನಡ ಮಾತನ್ನು ಸರಿಯಾಗಿ ಕಲಿತು ಬಳಸಲು ಸಂಸ್ಕ್ರುತದ ಅರಿವು ಬೇಕಾಗಿಲ್ಲ, ಹಿಂದೆಯೆಂದೂ ಕೂಡ ಬೇಕಿರಲಿಲ್ಲ.

ಮಾತಲ್ಲಿ, ಸಂಸ್ಕ್ರುತ ಸೇರಿದಂತೆ ಮರಾಟಿ, ಹಿಂದೂಸ್ತಾನಿ, ಸ್ಪ್ಯಾನಿಶ್, ಇಂಗ್ಲಿಶ್ ಮುಂತಾದ ಹಲವು ನುಡಿಗಳಿಂದ ಕನ್ನಡಕ್ಕೆ ಪದಗಳು ಬಂದಿವೆ, ಇಂದಿಗೂ ಬರುತ್ತಲೇ ಇವೆ. ಕನ್ನಡಿಗರ ನಾಲಿಗೆಗೆ ಹೊಂದಿಕೊಂಡ, ಅಂದರೆ ಕನ್ನಡ ಉಲಿಕೆಗೆ ತಕ್ಕಂತೆ ಮಾರ‍್ಪಾಟು ಹೊಂದಿ ಬಳಕೆಯಾಗುತ್ತಿರುವ ಈ ಪದಗಳು ಕನ್ನಡದ ಪದಗಳಂತೆಯೇ ಬಳಸಲಾಗುತ್ತಿವೆ. ಇವುಗಳನ್ನು ಬಳಸಲು ಕನ್ನಡಿಗರಿಗೆ ಆಯಾ ನುಡಿಗಳನ್ನು ಕಲಿಯುವ ಅಗತ್ಯವಿಲ್ಲ. ಉದಾಹರಣೆಗೆ, ಇಂದು ಇಂಗ್ಲಿಶ್ ನುಡಿಯಿಂದ ಕನ್ನಡಕ್ಕೆ ಬರುತ್ತಿರುವ ಎರವಲುಗಳ ಎಣಿಕೆ ತೀರಾ ಹೆಚ್ಚಿದೆ. ಹಾಗೆಂದ ಮಾತ್ರಕ್ಕೆ ಕನ್ನಡವನ್ನು ಸರಿಯಾಗಿ ಕಲಿಯಲು ಇಂಗ್ಲಿಶ್ ಅಗತ್ಯ ಎಂದು ಹೇಳಲು ಬರುವುದಿಲ್ಲ.

ಮಾತಿನಂತೆ ನುಡಿಯ ಇನ್ನೊಂದು ರೂಪ ಬರಹ. ಈ ರೂಪದಲ್ಲಿಯೂ, ಒಬ್ಬ ಬರಹಗಾರನಿಗೆ ತನ್ನ ಅನಿಸಿಕೆಗಳನ್ನು ತಿಳಿಹೇಳಲು ಕನ್ನಡವನ್ನು ಚೆನ್ನಾಗಿ ತಿಳಿದಿರಬೇಕಾಗುತ್ತದೆಯೇ ಹೊರತು ಸಂಸ್ಕ್ರುತವನ್ನಲ್ಲ. ಮಾತಿಗೆ ಹೋಲಿಸಿಕೊಂಡರೆ ಕನ್ನಡ ಬರಹದಲ್ಲಿ ಸಂಸ್ಕ್ರುತದ ಎರವಲುಗಳು ಹೆಚ್ಚಿವೆ ನಿಜ. ಆದರೆ ಹೀಗೆ ಹೆಚ್ಚು ಸಂಸ್ಕ್ರುತದಿಂದ ತುಂಬಿದ ಕನ್ನಡ ಬರಹವು ಕನ್ನಡಿಗರಿಗೆ ತೊಡಕಿನದ್ದಾಗಿದ್ದು, ಬರಹಗಾರನ ಆಶಯವನ್ನು ಸರಿಯಾಗಿ ತಿಳಿಸಲು ಅಡ್ಡಿಯುಂಟು ಮಾಡುತ್ತದೆ ಮತ್ತು ಹೆಚ್ಚು ಮಂದಿಯನ್ನು ತಲುಪುವುದಿಲ್ಲ. ಹೀಗೆ ಬರಹವು ಹೆಚ್ಚು ಮಂದಿಗೆ ತಲುಪದಿದ್ದರೆ ಬರಹಗಾರನಿಗೆ ಮಂದಿ ಮೆಚ್ಚುಗೆಯೂ ದೊರೆಯುವುದಿಲ್ಲ.

ಈ ಮಾತು ಅರಿಮೆಯ ಬರಹಗಳ ವಿಶಯದಲ್ಲೂ ನಿಜ, ಇತರೆ ಬರಹಗಳ ವಿಶಯದಲ್ಲೂ ನಿಜ. ಇಲ್ಲಿ ಅರಿಮೆಯ ಮಾತೆತ್ತಿರುವುದಕ್ಕೆ ಕಾರಣ, ಬೇರೆ ಯಾವುದೇ ಬಗೆಯ ಬರಹಕ್ಕಿಂತ ಅರಿಮೆಯ ಬರಹಗಳಲ್ಲಿ ಹೆಚ್ಚು ಸಂಸ್ಕ್ರುತದ ಬಳಕೆಯಿಂದ ಉಂಟಾಗುತ್ತಿರುವ ತೊಂದರೆಗಳನ್ನು ನಾವು ತಿಳಿಯಾಗಿ ಗಮನಿಸಬಹುದು. ಉದಾಹರಣೆಗೆ ಅಯ್ದನೇತರಗತಿಯ ಅರಿಮೆಯ ಪುಸ್ತಕದಲ್ಲಿನ ಈ ಕೆಲವು ಪದಗಳನ್ನು ಗಮನಿಸಿ:

ಪುನರಾವರ‍್ತಿತ ವ್ಯವಕಲನ“, “ಆಂದೋಲನ ಚಲನೆ“, “ಘರ್ಷಣ ಬಲ

ನಿಜವಾಗಿಯೂ ಹೆಚ್ಚಿನ ಕಲಿಸುಗರಿಗೂ, ಕಲಿಯುವ ಮಕ್ಕಳಿಗೂ ಇದೇನೆಂದು ತಿಳಿದುಕೊಳ್ಳುವುದು ತೀರಾ ತೊಡಕಿನ ಕೆಲಸ. ಇದನ್ನೇ ಹೀಗೆ ಕನ್ನಡದ ಪದಗಳನ್ನು ಬಳಸಿ ಸರಳವಾದ ಬಗೆಯಲ್ಲಿ ತಿಳಿಸಬಹುದು:

ಮತ್ತೆ ಮತ್ತೆ ಕಳೆಯುವುದು“, “ತೂಗಾಡುವಿಕೆ/ ತೂಗಾಟ“, “ಉಜ್ಜುವಿಕೆಯ ಬಲ

ಹಾಗಾಗಿ ಅಗತ್ಯಕ್ಕೆ ಮೀರಿದ ಸಂಸ್ಕ್ರುತದ ಬಳಕೆಯಿಂದ ತೊಡಕುಗಳೇ ಹೆಚ್ಚು ಎಂಬುದು ಇದರಿಂದ ತಿಳಿಯಾಗುತ್ತದೆ.

ಮಾತಲ್ಲಿ ಮಂದಿಯು ತಮಗೆ ತಿಳಿಯದಂತೆಯೇ ವ್ಯಾಕರಣದ ನಿಯಮಗಳನ್ನು ಬಳಸುತ್ತಾರೆ, ಹಾಗಾಗಿ ವ್ಯಾಕರಣದ ಅರಿವು ಅವರಿಗೆ ಹೆಚ್ಚಾಗಿ ಬೇಕಾಗುವುದಿಲ್ಲ. ಆದರೆ ಕನ್ನಡ ಪದಗಳ ಕಟ್ಟಣೆ, ಮತ್ತು ವಾಕ್ಯಗಳ ಕಟ್ಟಣೆಯ ಗುಟ್ಟು ಮತ್ತು ಹಿನ್ನೆಲೆ, ಹಾಗೂ ಕನ್ನಡ ವ್ಯಾಕರಣದ ಇತರೆ ನಿಯಮಗಳನ್ನು ಅರಿತ ಬರಹಗಾರನು ಅವುಗಳನ್ನು ಬಳಸಿಕೊಂಡು ಓದುಗರಿಗೆ ತನ್ನ ಅನಿಸಿಕೆಗಳು ಹೆಚ್ಚು ಸರಿಯಾಗಿ ತಟ್ಟುವಂತೆ ಬರೆಯಬಹುದು. ಆದುದರಿಂದ ಕನ್ನಡ ವ್ಯಾಕರಣದ ಕಲಿಕೆ ಒಂದು ಬಗೆಯಲ್ಲಿ ಬರಹಗಾರರಿಗೆ ನೆರವಾಗಬಲ್ಲುದು.

ಆದರೆ ಕನ್ನಡ ವ್ಯಾಕರಣದಲ್ಲಿ ಸುಮಾರು ನೂರಕ್ಕೆ 70-80ರಶ್ಟು ಸಂಸ್ಕ್ರುತವಿದೆ ಎಂಬ ಮಾತನ್ನು ಬಯ್ರಪ್ಪನವರೇ ಈ ಮೊದಲು ಹೇಳಿದ್ದಾರೆ. ಅವರಂತೆಯೇ ಹಲವು ಮಂದಿ ಇಂತಹ ನಂಬಿಕೆಗಳನ್ನಿಟ್ಟುಕೊಂಡಿದ್ದಾರೆ. ಇಂತಹ ಮಾತುಗಳು ಇಂದು ಶಾಲೆಗಳಲ್ಲಿ ‘ಕನ್ನಡ ವ್ಯಾಕರಣ’ ಎಂದು ಕಲಿಸಲಾಗುವ ವ್ಯಾಕರಣವನ್ನು ಗಮನಿಸಿದರೆ ನಿಜ ಎನಿಸಬಹುದು. ಆದರೆ ನಿಜಕ್ಕೂ ಈ ವ್ಯಾಕರಣಗಳಾವುವೂ ಕನ್ನಡದ ವ್ಯಾಕರಣಗಳಲ್ಲ. ಬದಲಾಗಿ ಸಂಸ್ಕ್ರುತ ವ್ಯಾಕರಣದ ಕನ್ನಡ ಅಳವಡಿಕೆಗಳು ಮಾತ್ರ. ದ್ರಾವಿಡ ನುಡಿಕುಟುಂಬಕ್ಕೆ ಸೇರಿದ ಕನ್ನಡ ನುಡಿಯ ವ್ಯಾಕರಣವು ಸಂಸ್ಕ್ರುತದಿಂದ ಹಲವು ಬಗೆಯಲ್ಲಿ ಬೇರೆಯಾಗಿದೆ. ಈ ಕಾರಣದಿಂದಾಗಿ ಸಂಸ್ಕ್ರುತ ನುಡಿಯನ್ನಾಗಲಿ, ಅದರ ವ್ಯಾಕರಣವನ್ನಾಗಲಿ ಕಲಿತವರಿಗೆ ಕನ್ನಡ ವ್ಯಾಕರಣವನ್ನು ಅರಿತುಕೊಳ್ಳುವಂತಹ ವಿಶೇಶ ಪ್ರಯೋಜನವೇನೂ ಆಗುವುದಿಲ್ಲ.

ಸಂಸ್ಕ್ರುತದ ಬಳಕೆಯಿಂದ ಕನ್ನಡವು ಸತ್ವಯುತವಾಗುತ್ತದೆ ಎಂಬ ಮಾತನ್ನೂ ಬಯ್ರಪ್ಪನವರು ಹೇಳಿದ್ದಾರೆ. ಆದರೆ ಈ ಸತ್ವ ಎಂಬುದು ಪ್ರತಿ ವ್ಯಕ್ತಿಯ ಅನಿಸಿಕೆ, ಹುರುಳುಸಿಕೆಗೆ ಬಿಟ್ಟಿದ್ದು. ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸಿದರೆ ಬರಹವು ಹೆಚ್ಚು ಸತ್ವಯುತವಾದುದಾಗುತ್ತದೆ ಎಂಬ ನಂಬಿಕೆಯು ಹಲವರಲ್ಲಿದೆ. ಆ ಪದಗಳು ತಿಳಿಯಲು ಹೆಚ್ಚು ತೊಡಕಾದಶ್ಟೂ ಆ ಬರಹದ ಸತ್ವ ಹೆಚ್ಚಾಗುತ್ತದೆ ಎಂಬುದೂ ಒಂದು ಕುರುಡು ನಂಬಿಕೆ. ಆದರೆ ಮೇಲೆ ಹೇಳಿದಂತೆ ಇಂತಹ ಬರಹಗಳು ಹೆಚ್ಚು ಮಂದಿಯನ್ನು ತಲುಪುವುದಿಲ್ಲ. ಒಂದು ಮಾತು ಇಲ್ಲವೇ ಬರಹ ಎಶ್ಟು ಸತ್ವಯುತವಾದದ್ದು ಎಂದು ಅಳೆಯಲು ನಿಕ್ಕಿಯಾದ ಅಳತೆಗೋಲುಗಳಿಲ್ಲ. ಆದರೆ ತಿಳಿಸಬೇಕಾದ ವಿಶಯವನ್ನು ಅಚ್ಚುಕಟ್ಟಾಗಿ, ಸರಳವಾಗಿ, ಗೊಂದಲಗಳಿಲ್ಲದ ಬಗೆಯಲ್ಲಿ ಹೇಳಿ ಹೆಚ್ಚು ಮಂದಿಯನ್ನು ತಲುಪಬಲ್ಲ  ಮಾತು ಇಲ್ಲವೇ ಬರಹ ಸತ್ವಯುತವಾದುದು ಎನಿಸಿಕೊಳ್ಳಬಹುದೇನೋ. ಈ ಬಗೆಯಲ್ಲಿ ಕನ್ನಡದಲ್ಲಿ ಹೇಳುವುದಕ್ಕೆ ಸಂಸ್ಕ್ರುತ ಪದಗಳು ಇಲ್ಲವೇ ವ್ಯಾಕರಣದಿಂದ ಯಾವುದೇ ವಿಶೇಶವಾದ ಪ್ರಯೋಜನವಾಗುವುದಿಲ್ಲ ಎಂಬುದನ್ನು ನಾವೀಗಲೇ ನೋಡಿದ್ದೇವೆ.

ಹಾಗಿದ್ದರೆ ಸಂಸ್ಕ್ರುತ ಕಲಿಯುವುದರಿಂದ ಕನ್ನಡ ಕಲಿಯಲು ಯಾವುದೇ ಪ್ರಯೋಜನವಿಲ್ಲವೇ ಎಂಬ ಕೇಳ್ವಿ ಏಳುತ್ತದೆ. ಇನ್ನುಡಿಗತನ(bilingualism)ದಿಂದ ಇಲ್ಲವೇ ಹಲನುಡಿಗತನ(multilingualism)ದಿಂದ ಹಲವು ಪ್ರಯೋಜನಗಳಿವೆ. ಒಬ್ಬ ವ್ಯಕ್ತಿಯ ಮನಸ್ಸಿಗೆ ನುಡಿಯು ಪ್ರಪಂಚವನ್ನು ನೋಡಿ ಬಗೆಯುವ ಕಣ್ಣುಗಳಿದ್ದಂತೆ. ಬೇರೊಂದು ನುಡಿಯನ್ನು ಕಲಿಯುವುದರಿಂದ ಪ್ರಪಂಚದ ಇನ್ನೊಂದು ಬಗೆಯ ನೋಟ ನಮ್ಮದಾಗುತ್ತದೆ. ಆ ನುಡಿಯಲ್ಲಿ ಬಳಸುವ ಕೆಲವು ಹೇಳಿಕೊಳ್ಳುವ ಬಗೆಗಳನ್ನು, ಸಾದನಗಳನ್ನು ಕಲಿಯುವುದರಿಂದ ನಮ್ಮ ಹೇಳಿಕೊಳ್ಳುವ ಅಳವು, ಮತ್ತು ಪ್ರಪಂಚವನ್ನು ತಿಳಿದುಕೊಳ್ಳುವ ಅಳವು ಹೆಚ್ಚುತ್ತದೆ. ಇದರಿಂದಾಗಿ ನಮ್ಮ ತಾಯ್ನುಡಿಯಲ್ಲೂ ನಮ್ಮ ಹೇಳಿಕೊಳ್ಳುವ, ತಿಳಿಹೇಳುವ ಚಳಕವು ಬೆಳವಣಿಗೆಯನ್ನು ಕಾಣಬಹುದು. ಆದರೆ ಈ ಬಗೆಯ ಪ್ರಯೋಜನಗಳು ಸಂಸ್ಕ್ರುತವೊಂದನ್ನು ಕಲಿಯುವುದರಿಂದಲೇ ಹೆಚ್ಚುತ್ತದೆ ಎಂದು ಹೇಳಲು ಬರುವುದಿಲ್ಲ.

ವಾಡಿಕೆಯಿಂದ, ನುಡಿಯ ವಿಚಾರವಾಗಿ ಹಲವು ತಪ್ಪು ನಂಬಿಕೆಗಳು, ವಿಚಾರಗಳು ನಮ್ಮ ಸಮಾಜದ ಹಲವರಲ್ಲಿ ಬೇರೂರಿವೆ. ನಾಡಿನ ಮೇಲು ಮತ್ತು ಹಿರಿಯ ನಲ್ಬರಹಗಾರರಾದ ಬಯ್ರಪ್ಪನವರೂ ಇದಕ್ಕೆ ಹೊರತಲ್ಲ. ಇಂತಹ ನಂಬಿಕೆಗಳನ್ನು ಇಂದು ಅರಿಮೆಯ ನೆಲೆಯಲ್ಲಿ ನಿಂತು, ಬಗೆದು ಸತ್ಯವನ್ನು ತೋರಿಸಿಕೊಡಬೇಕಿದೆ. ತಿಳಿವಿಗೆ ಎಂದೂ ಇಲ್ಲದ ಹೆಚ್ಚುಗಾರಿಕೆ ಬಂದಿರುವ ಈ ಹೊತ್ತಲ್ಲಿ ನುಡಿಯ ಪಾತ್ರ ಹಿರಿಯದು. ನುಡಿಯನ್ನು ಬೆಳೆಸುವಲ್ಲಿ ತಪ್ಪು ಹೆಜ್ಜೆಗಳನ್ನಿಡುವುದು ನಮ್ಮ ಇಡೀ ಕನ್ನಡ ಸಮಾಜದ ಹಿನ್ನಡೆಗೆ ಕಾರಣವಾಗಬಹುದು. ಸಂಸ್ಕ್ರುತವೇ ಇರಲಿ ಬೇರೆ ಯಾವ ನುಡಿಯೇ ಇರಲಿ, ಅವುಗಳಲ್ಲಿ ನಮಗೆ ಪ್ರಯೋಜನವಾಗುವಂತಹವುಗಳನ್ನು ಯಾವುದೇ ಹಿಂಜರಿರಿಕೆಯಿಲ್ಲದೆ ಬಳಸೋಣ. ಆದರೆ ನಂಬಿಕೆಗಳಿಗೆ ಕಟ್ಟುಬಿದ್ದು ಅಗತ್ಯಕ್ಕೂ ಮೀರಿ ಒಂದು ನುಡಿಯನ್ನು ನಮ್ಮ ನುಡಿಯಲ್ಲಿ ಬೆರೆಸುವುದು ನಮ್ಮ ತಲೆಯ ಮೇಲೆ ನಾವೇ ಕಲ್ಲೆಳೆದುಕೊಂಡಂತೆ.

(ಚಿತ್ರ ಸೆಲೆ: ಪ್ರಜಾವಾಣಿ)

ನಿಮಗೆ ಹಿಡಿಸಬಹುದಾದ ಬರಹಗಳು

5 Responses

 1. ” ನುಡಿಯನ್ನು ಬೆಳೆಸುವಲ್ಲಿ ತಪ್ಪು ಹೆಜ್ಜೆಗಳನ್ನಿಡುವುದು ನಮ್ಮ ಇಡೀ ಕನ್ನಡ ಸಮಾಜದ ಹಿನ್ನಡೆಗೆ ಕಾರಣವಾಗಬಹುದು. ಸಂಸ್ಕ್ರುತವೇ ಇರಲಿ ಬೇರೆ ಯಾವ ನುಡಿಯೇ ಇರಲಿ, ಅವುಗಳಲ್ಲಿ ನಮಗೆ ಪ್ರಯೋಜನವಾಗುವಂತಹವುಗಳನ್ನು ಯಾವುದೇ ಹಿಂಜರಿರಿಕೆಯಿಲ್ಲದೆ ಬಳಸೋಣ. ಆದರೆ ನಂಬಿಕೆಗಳಿಗೆ ಕಟ್ಟುಬಿದ್ದು ಅಗತ್ಯಕ್ಕೂ ಮೀರಿ ಒಂದು ನುಡಿಯನ್ನು ನಮ್ಮ ನುಡಿಯಲ್ಲಿ ಬೆರೆಸುವುದು ನಮ್ಮ ತಲೆಯ ಮೇಲೆ ನಾವೇ ಕಲ್ಲೆಳೆದುಕೊಂಡಂತೆ ” –

  ಸಂದೀಪ್ ಕಂಬಿ ಅವರೇ , ನಿಮ್ಮ ಅನಿಸಿಕೆ ಹಾಗೂ ವಿಚಾರಗಳು ತುಂಬಾ ಚೆನ್ನಾಗಿವೆ . ಕನ್ನಡವನ್ನು ಚೆನ್ನಾಗಿ ಕಲಿಯಬೇಕಾದರೆ ಸಂಸ್ಕ್ರುತದ ಅಗತ್ಯವಿದೆ ಎಂಬ ಬಯ್ರಪ್ಪನವರ ನಿಲುವು ಸರಿಯಲ್ಲ .
  ಸಿ ಪಿ ನಾಗರಾಜ

 2. Sandeep Kn says:

  ನಿಮ್ಮ ಮೆಚ್ಚುಗೆಗೆ ನನ್ನಿ!

 3. ಹಿನ್ನಡುವಳಿ(ಇತಿಹಾಸ/history), ಮಿಂಬಾಗಿಲು (website), ಮಾಡುಗತನ (ಕೃತಿಶೀಲತೆ)…. ಹೊಸತೆನಿಸಿದರೂ ಸುಂದರವೆನಿಸುವಂತದ್ದು. ಸಾಮಾನ್ಯವಾಗಿ ಎಲ್ಲರೂ ಹೊರಭಾಷೆಗಳಿಂದ ಎರವಲು ಪಡೆದೇ ಉಪಯೋಗಿಸುವಂತ ಪದಗಳಿಗೆ ಸಮಾನವಾದ ಕನ್ನಡದ್ದೇ ಆದ ಪದಗಳಪ್ರಯೋಗ, ಮೆಚ್ಚುವಂತದ್ದೇ. ಆದರೆ; ಅದ್ಯಾತ್ಮ (ಅಧ್ಯಾತ್ಮ), ದರ‍್ಮ (ಧರ್ಮ) ಇನ್ನಿತರ ಪದಗಳನ್ನು ಬಲವಂತವಾಗಿ ತತ್ಸಮದಿಂದ (ಸಂಸ್ಕೃತ) ತದ್ಭವಗೊಳಿಸಿ (ಕನ್ನಡೀಕರಣ) ಪ್ರಚಾರಗೊಳಿಸುವುದು, ನವಿಲು ನೋಡಿ ಕೆಂಬೂತ ಪುಕ್ಕ ತರಕ್ಕೊಂಡಷ್ಟೇ ಸುಂದರ. ಮಹಾಪ್ರಾಣಗಳು ಅಚ್ಚಕನ್ನಡದಲ್ಲಿಲ್ಲದಿದ್ದರೆ ಏನಾಯ್ತು? ಸಂಸ್ಕೃತದಿಂದ ಎರವಲು ಪಡೆದ ಪದಗಳನ್ನು ಅವುಗಳ ಮೂಲರೂಪದಲ್ಲೇ ಬಳಸಲು ಇರುವ ಅಡ್ಡಿಯಾದರೂ ಏನು? ನಮ್ಮ ಹಿಂದಿನವರು ಅಂಥ ಉದಾರ ಮನೋಭಾವ ಹೊಂದಿದ್ದರಿಂದಲೇ ನಮ್ಮ ಅಕ್ಷರಕೋಶ ಇಷ್ಟು ಸಮೃದ್ಧವಾಗಿರುವುದು. ಜಗತ್ತಿನ ಯಾವ ಭಾಷೆಯ ಪದವೇ ಆದರೂ, ಅದನ್ನು ಕನ್ನಡದಲ್ಲಿ ಉಚ್ಚಾರ ಮಾಡಲಾಗದಿರುವ ಸಂಭವವೇ ಇಲ್ಲ. ಇಂಗ್ಲಿಷ್’ನ f, z ಪದಗಳನ್ನು ಉಚ್ಚರಿಸಲೂ ಕೂಡ ನಮಗೆ ಅಕ್ಷರಗಳ ಬರವಿಲ್ಲ. ಮಹಾಪ್ರಾಣಗಳನ್ನು ಬಿಟ್ಟು ಸಂಸ್ಕೃತ ಪದಗಳನ್ನು ಉಪಯೋಗಿಸುವ ಪ್ರಯತ್ನ, ಆ ಭಾಷೆಗೆ ನಾವು ತೋರುತ್ತಿರುವ ಅಗೌರವವಷ್ಟೇ ಅಲ್ಲ, ನಮ್ಮ ಧ್ವನಿಕೋಶದ ಸಂಪೂರ್ಣ ಅಭಿವ್ಯಕ್ತಿಗೆ ನಮಗೆ ನಾವೇ ಎಳ್ಳು ನೀರು ಬಿಟ್ಟಂತೆ. ಒಂದೊಮ್ಮೆ ಎರವಲು ಪಡೆದು ಉಪಯೋಗಿಸುತ್ತಿರುವ ಪದಗಳಿಗೆ ಸಮಾನವಾಗಿ ಕನ್ನಡ ಪದಗಳಿದ್ದೂ ನಾವು ಅವುಗಳನ್ನು ಬಳಸದೇ ಇರುವುದು ತಪ್ಪೇ. ಅದರಿಂದ ಜಗತ್ತಿನಲ್ಲಿ ಏಕರೂಪತೆ ಬೆಳೆದೀತು, ವಿವಿಧತೆಯ ಸೊಬಗು ಹಾಳಾದೀತು. ಸಂಸ್ಕೃತ ಭಾರತವನ್ನು ಜೋಡಿಸುವ ಸೂತ್ರ. ಅದನ್ನೊಂದು ಆರ್ಯರ ಭಾಷೆ ಎಂಬುದಾಗಿ ಬಿಂಬಿಸಿ, ನಮ್ಮ ದೇಶವನ್ನು ಆರ್ಯದ್ರಾವಿಡ ಎಂದು ಸುಳ್ಳೇಸುಳ್ಳಾಗಿ ವಿಭಜಿಸಿ ಆಳಿದಂತಹ ಬ್ರಿಟಿಷರ ಕುತಂತ್ರಕ್ಕೆ ಬಲಿಯಾಗುವುದನ್ನು ಈಗಲಾದರೂ ಬಿಡದಿದ್ದರೆ, ಎಂಥ ಮೂರ್ಖರು ನಾವು. ಹಾಗೆ ನೋಡಿದರೆ, ಮಲಯಾಳಂ, ಕನ್ನಡ, ಮರಾಠಿ ಭಾಷೆಗಳಲ್ಲಿಯೇ ಅತಿ ಹೆಚ್ಚು ಸಂಸ್ಕೃತ ಪದಗಳಿರುವುದು. ಜನಪದದ ಸೊಡರನ್ನು ಉಳಿಸಿಕೊಂಡೇ ಪ್ರಕಾಂಡ ಪಾಂಡಿತ್ಯಪೂರ್ಣ ಸಾಹಿತ್ಯಿಕ ಅಭಿವ್ಯಕ್ತಿಯನ್ನು ಜಗತ್ತಿನೆದುರು ಯಾವ ಭಾಷೆಗೂ ಕಡಿಮೆ ಇಲ್ಲದಂತೆ ಸಾಬೀತುಪಡಿಸುವುದು ಕನ್ನಡದಲ್ಲಿ ಸಾಧ್ಯವಾಗಿರುವುದು ಸಂಸ್ಕೃತದ ನೆರವಿನಿಂದಲೇ ಎಂಬುದನ್ನು ಮರೆಯದಿರಿ. ಕನ್ನಡವನ್ನು ಸಂಸ್ಕೃತ ಮುಕ್ತಗೊಳಿಸುವ ಭರದಲ್ಲಿ, ಇಂಗ್ಲಿಷ್, ತಮಿಳು ಭಾಷೆಗಳು ಬಂದು ತೂರಿಕೊಂಡಾವು ಎಚ್ಚರ. ಕುವೆಂಪು, ಬೇಂದ್ರೆ ಬರಹಗಳನ್ನೊಮ್ಮೆ ನೋಡಿ. ಅದೆಷ್ಟು ಅಚ್ಚಗನ್ನಡ ಪದಗಳು! ಜೊತೆ ಜೊತೆಗೇ “ಕರ್ಮಣಿ ಸರದೊಳ್ ಚೆಂಬವಳಮಂ ಕೋದಂತೆ” ಸಂಸ್ಕೃತ ಪದಗಳು. ಯಾವುದನ್ನೂ ಅತಿರೇಕಕ್ಕೆ ಕೊಂಡೊಯ್ಯಬೇಡಿ. ಜಗತ್ತಿನಲ್ಲಿ ತಲೆ ಕೆಡಿಸಕೊಳ್ಳಲಿಕ್ಕೆ / ಕೆಡಿಸಿಕೊಳ್ಳಲೇಬೇಕಾದಂಥ ಅನೇಕ ಸಂಗತಿಗಳಿವೆ.

  __
  ಶಶಾಂಕ

 4. ಶಶಾಂಕ ಅವರೇ, ನಿಮ್ಮ ಅನಿಸಿಕೆಗಾಗಿ ನನ್ನಿ. ನೀವು ಇಲ್ಲಿ ನಿಮಗೆ ಇಶ್ಟವೆನಿಸಿದ ರೀತಿಯ ಪದಗಳನ್ನು ಕಟ್ಟಲು ಮುಂದೆ ಬನ್ನಿ. ಅವುಗಳನ್ನು ಇಲ್ಲಿಯವರೆಗೆ ನಾವು ಕಟ್ಟುತ್ತಿರುವಶ್ಟು ವೇಗದಲ್ಲಿ ಏಕೆ ಕಟ್ಟಲಾಗಿಲ್ಲ ಎಂದು ಯೋಚಿಸಿಕೊಳ್ಳಿ. ಸಂಸ್ಕ್ರುತದ ಬಗ್ಗೆ ನಿಮ್ಮ ವಾದಗಳಿಗೆ ನಮ್ಮ ಉತ್ತರಗಳನ್ನು ಇಲ್ಲಿ ಮೊದಲೇ ಕೊಟ್ಟಾಗಿದೆ. ಅವುಗಳನ್ನು ಓದಿಕೊಳ್ಳಿ. ಹಿಡಿಸಿದರೆ ಒಳ್ಳೆಯದು, ಇಲ್ಲವಾದರೆ ಬಿಟ್ಟುಬಿಡಿ; ಪದ ಕಟ್ಟುವ ಕೆಲಸವನ್ನು ಮುಂದುವರೆಸಿ: ಅದು ಒಳ್ಳೆಯದೆಂದೇ ನಿಮ್ಮ ಅನಿಸಿಕೆಯಲ್ಲವೇ? ಇದಕ್ಕಿಂತ ದೊಡ್ಡ ಉತ್ತರವನ್ನು ಬರೆಯಲು ಪುರಸೊತ್ತಿಲ್ಲ, ದಯವಿಟ್ಟು ಮನ್ನಿಸಿ.

 5. bkrs setty says:

  ಕನ್ನಡ ಭಾಷೆಯನ್ನು ಆದಷ್ಟೂ ಸರಳ,ಸುಲಭ, ಸುಲಲಿತವಾಗಿ ಮಾಡಿ ಹೆಚ್ಚು ಹೆಚ್ಚು ಜನಪ್ರಿಯವಾಗುಂತೆ ಮಾಡಬೇಕಾದ ಅನಿವಾರ್ಯತೆ ಇದೆ. ನಮ್ಮೆಲ್ಲರ ಕರ್ತವ್ಯ, ಆಗಬೇಕು.

ಅನಿಸಿಕೆ ಬರೆಯಿರಿ:

%d bloggers like this: