ಕದಡಿದೆ ‘ಎಜಿಡಿ’ಗಳ ಬದುಕು

ಅನ್ನದಾನೇಶ ಶಿ. ಸಂಕದಾಳ.

Yajidi

ಇತ್ತೀಚೆಗೆ ಎಲ್ಲಾ ಕಡೆ ಐ ಎಸ್ ಐ ಎಸ್ ಜಿಹಾದಿಗಳ ಬಗ್ಗೆಯೇ ಮಾತಾಗಿದೆ. ‘ಇಸ್ಲಾಮಿಕ್(ಐ) ಸ್ಟೇಟ್(ಎಸ್) ಆಪ್ ಇರಾಕ್(ಐ) ಅಂಡ್ ಸಿರಿಯಾ(ಎಸ್)’ ಎಂದು ಹೆಸರಿಟ್ಟುಕೊಂಡಿರುವ ಈ ಜಿಹಾದಿಗಳು, ಜಗತ್ತಿನಲ್ಲಿರುವ ಎಲ್ಲಾ ಮುಸ್ಲಿಮರ ಮುಂದಾಳ್ತನ ವಹಿಸಿ, ಆ ಮೂಲಕ ಎಲ್ಲಾ ಮುಸ್ಲಿಮರನ್ನು ತಮ್ಮ ಹಿಡಿತಕ್ಕೆ ಒಳಪಡಿಸುವ ಇರಾದೆ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಆ ನಿಟ್ಟಿನಲ್ಲಿ ಇರಾಕ್ ದೇಶದಲ್ಲಿ ದಾರ‍್ಮಿಕವಾಗಿ ಕಡಿಮೆ ಎಣಿಕೆಯಲ್ಲಿರುವವರನ್ನು ಮುಗಿಸುವ, ಇಲ್ಲಾ ಇರಾಕ್ ಬಿಟ್ಟು ಓಡಿಸುವ ಕೆಲಸಕ್ಕೆ ಕೈ ಹಾಕಿರುವ ಸುದ್ದಿ ಎಲ್ಲೆಡೆ ಬಿತ್ತರಗೊಳ್ಳುತ್ತಿದೆ. ಐ ಎಸ್ ಐ ಎಸ್ ನ ಮರುಕವಿಲ್ಲದ, ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಕೆಲಸಗಳಿಗೆ ಬಲಿಯಾಗುತ್ತಾ ಸುದ್ದಿಯಲ್ಲಿರುವರು ಅಂದರೆ ಎಜಿಡಿ ದರ‍್ಮದವರು. ಮೊದ-ಮೊದಲಿಗೆ ‘ಎಜಿಡಿ’ ಎಂದು ಕೇಳಿದಾಗ, ಈ ಹೆಸರಿನ ಹಳೇ ಬೈಕ್ ನೆನಪು ಬಂತು. ಜಿಹಾದಿಗಳಿಗೂ ಎಜಿಡಿ ಬೈಕ್ ಗೂ ಏನಿದು ನಂಟು ಅಂತ ಅನಿಸಿತ್ತು. ಆದರೆ ಆ ಹೆಸರಿನ ದರ‍್ಮವೊಂದಿದೆ ಎಂದು ಗೊತ್ತಾಗಿ ಆ ಬಗ್ಗೆ ಹುಡುಕಾಟ ನಡೆಸಿದಾಗ ಸಿಕ್ಕ ಸಂಗತಿಗಳು ಅಚ್ಚರಿ ಮೂಡಿಸಿದವು!

‘ದರ‍್ಮಗಳ ದರ‍್ಮ ಎಜಿಡಿ’:

‘ಎಜಿಡಿ’ ಎನ್ನುವ ಪದ ಹಳೆ ಇರಾನಿನ ‘ಯಜಾತ’ ಎನ್ನುವ ಪದದಿಂದ ಬಂದಿದ್ದು, ದೇವರು ಎಂಬ ಹುರುಳು ಹೊಂದಿದೆ ಮತ್ತು ಕಡಿಮೆ ಅಂದರೂ ಸಾವಿರ ವರುಶದಶ್ಟು ಹಳೆಯ ದರ‍್ಮ ಎಂದು ಬಲ್ಲವರು ಹೇಳುತ್ತಾರೆ. ಇಸ್ಲಾಂನ ಶಿಯಾ ಪಂಗಡದ ಮತ್ತು ಸೂಪಿ ಪಂತದ ವಿಚಾರಗಳನ್ನು, ಬಹಳ ವರುಶಗಳ ಹಿಂದೆ ಪರ‍್ಶಿಯಾದ ‘ಮಿತ್ರ‘ ಎಂಬ ದೇವರ ಹೆಸರಲ್ಲಿ ಹುಟ್ಟಿದ್ದ ‘ಮಿತ್ರಯಿಸಂ‘ ಎಂಬ ಗುಟ್ಟಿನ(mystery) ದರ‍್ಮದ ಆಚರಣೆಗಳನ್ನು ಮತ್ತು ಕ್ರೈಸ್ತ ದರ‍್ಮದ ವಾಡಿಕೆಗಳನ್ನು ಎಜಿಡಿ ಹೊಂದಿದೆ ಎಂದು ತಿಳಿದು ಬಂದಿದೆ. ಪರ‍್ಶಿಯಾ ದರ‍್ಮಗಳಲ್ಲಿ ತನ್ನ ಬೇರನ್ನು ಹೊಂದಿರುವ ಎಜಿಡಿ, ಒಂದು ದರ‍್ಮದ ಕಟ್ಟುಪಾಡು ಹೊಂದಿರದೆ, ಹಲವಾರು ದರ‍್ಮಗಳ ರೀತಿ-ರಿವಾಜುಗಳನ್ನು ಹೊಂದಿರುವುದಕ್ಕೆ ಜಿಹಾದಿಗಳು ಇವರನ್ನು ತಮ್ಮ ಗುರಿಯಾಗಿಸಿ ಕೊಂಡಿರಲೂಬಹುದು. ‘ಕುರ‍್ಡ್‘ ನುಡಿಯಾಡುವ ಎಜಿಡಿಯನ್ನರು ಸಿರಿಯಾ, ಇರಾಕ್ ಮತ್ತು ಟರ‍್ಕಿಯಲ್ಲಿದ್ದರು. ಸಿರಿಯಾನಲ್ಲಿ ಹಿಂದೊಮ್ಮೆ ಜಿಹಾದಿಗಳ ಕಾಟ ತಡೆಯಲಾರದೆ, ಇರಾಕ್ ನ ಬಡಗಣ ದಿಕ್ಕಿಗೆ ಹೆಚ್ಚಿನ ಎಣಿಕೆಯಲ್ಲಿ ವಲಸೆ ಬಂದು ಅಲ್ಲಿ ನೆಲೆ ಹೊಂದಿದ್ದರು. ಇವರ ಎಣಿಕೆಯ ಬಗ್ಗೆ ಸರಿಯಾದ ಅಂಕಿ ಗೊತ್ತಿಲ್ಲವಾದರೂ, ಒಟ್ಟು 5 ಲಕ್ಶ ಇರಬಹುದೆಂದು ಅಂದಾಜಿಸಲಾಗಿದೆ. ಇರಾಕ್ ನಲ್ಲಿ ದಾರ‍್ಮಿಕವಾಗಿ ಕಡಿಮೆ ಎಣಿಕೆಯಲ್ಲಿರುವವರಲ್ಲಿ ಇವರು ಪ್ರಮುಕರು.

‘ಎಜಿಡಿ’ ದರ‍್ಮದ ಬಗ್ಗೆ ಕುತೂಹಲಕಾರಿ ವಿಶಯಗಳು:

ಎಜಿಡಿಯನ್ನರು ಬೈಬಲನ್ನು ಮತ್ತು ಕುರಾನನ್ನೂ ಓದುವುದಲ್ಲದೆ, ಎರಡನ್ನೂ ಅಶ್ಟೇ ಗೌರವದಿಂದ ಕಾಣುತ್ತಾರೆ. ಅವರ ಪದ್ದತಿ, ಆಚರಣೆಗಳು ಕ್ರೈಸ್ತ ಮತ್ತು ಇಸ್ಲಾಂ ದರ‍್ಮದಲ್ಲಿನ ಆಚರಣೆಗಳನ್ನು ಒಳಗೊಂಡಿವೆ. ಆದರೆ ಕುತೂಹಲದ ವಿಶಯ ಎಂದರೆ, ತಮ್ಮ ಈ ಪದ್ದತಿಗಳನ್ನು, ಏನು ಮಾಡಬೇಕು-ಮಾಡಬಾರದು ಎನ್ನುವುದನ್ನು ಅವರು ಬರಹದಲ್ಲಿ ಮೂಡಿಸಿರದೇ, ಕೇವಲ ಮಾತುಗಳಲ್ಲೇ ಉಳಿಸಿಕೊಂಡಿದ್ದಾರಂತೆ. ಹೀಗೆ ಬಾಯಿ ಮಾತಿನಿಂದ ಒಬ್ಬರಿಂದ ಇನ್ನೊಬ್ಬರಿಗೆ ತಿಳಿಸುತ್ತಾ ತಮ್ಮ ಆಚರಣೆಗಳನ್ನು ಜೀವಂತ ಇಟ್ಟುಕೊಂಡಿದ್ದಾರಂತೆ! ಸ್ವರ‍್ಗ ನರಕದಲ್ಲಿ ನಂಬಿಕೆ ಇಡದ ಈ ಮಂದಿ, ಮನುಶ್ಯ ಸತ್ತಾಗ ಆತನ ಆತ್ಮ ಒಂದು ದೇಹದಿಂದ ಇನ್ನೊಂದು ದೇಹಕ್ಕೆ(ಮನುಶ್ಯ/ಪ್ರಾಣಿ) ಹೋಗುತ್ತಾ ಚೊಕ್ಕವಾಗುತ್ತದೆ ಎಂದು ನಂಬುತ್ತಾರೆ. ಬೇರೆ ದರ‍್ಮದವರು ಎಜಿಡಿ ದರ‍್ಮದವರಾಗಲು ಸಾದ್ಯವೇ ಇಲ್ಲ. ಎಜಿಡಿಯನ್ನಾಗಲು ಎಜಿಡಿಯನ್ನರ ಹೊಟ್ಟೆಯಲ್ಲೇ ಹುಟ್ಟಬೇಕು ಎಂದು ಈ ದರ‍್ಮದವರ ನಂಬಿಕೆ! ಆದರಿಂದಲೇ ಒಬ್ಬ ಎಜಿಡಿಯನ್ನಿಗೆ ಅತೀ ಕೆಟ್ಟ ಪಾಡೆಂದರೆ ಅವನನ್ನು ಆ ದರ‍್ಮದಿಂದ ಹೊರಗೆ ಹಾಕುವುದು ಎಂದು ಈ ದರ‍್ಮದಲ್ಲಿನ ಕಟ್ಟುಪಾಡು ಹೇಳುತ್ತದೆ.

ಎಜಿಡಿಯನ್ನರು ಒಬ್ಬ ದೇವರನ್ನು ನಂಬುವವರಾಗಿದ್ದು, ಆತನೇ ಜಗತ್ತನ್ನು ಉಂಟು ಮಾಡಿದ ಎಂದು ಬಲವಾಗಿ ನಂಬಿದ್ದಾರೆ. ತಮ್ಮ ದೇವರು ಜಗತ್ತನ್ನು ನೋಡಿಕೊಳ್ಳುವ ಹೊಣೆಯನ್ನು ಏಳು ದೇವದೂತರಿಗೆ ವಹಿಸಿದ್ದಾನೆಂಬುದೂ ಕೂಡ ಅವರ ಮತ್ತೊಂದು ನಂಬಿಕೆ. ಆ ಏಳು ದೇವದೂತರಲ್ಲಿ ನವಿಲು ರೂಪದ ‘ಮಾಲಕ್ ತೌಸ್‘ ಮೇಲಿನದು ಎಂದು ಅವರು ತಿಳಿದಿದ್ದಾರೆ. ಹಳೆಯ ಕ್ರೈಸ್ತ ದರ‍್ಮದಲ್ಲಿ ನವಿಲೆಂದರೆ ಅಳಿಯದ ಅತವಾ ಸಾವಿರದ ಕುರುಹು ಎಂದು ನಂಬಿದ್ದರಂತೆ. ಎಜಿಡಿಗಳು ದಿನಕ್ಕೆ ಐದು ಬಾರಿ ಮಾಲಕ್ ತೌಸ್ ನ್ನು ಮೊರೆಯಿಡುತ್ತಾರೆ. ಮಾಲಕ್ ತೌಸ್ ನ ಇನ್ನೊಂದು ಹೆಸರು ‘ಶೈತಾನ್‘. ಇದು ಅರೇಬಿಕ್ ನುಡಿಯಲ್ಲಿ ‘ದೆವ್ವ’ ಎಂಬ ಅರ‍್ತ ನೀಡುತ್ತದೆ. ದೇವರು ಮಾಡಿದ ಕಟ್ಟಲೆಗಳನ್ನು ಮೀರುವವರು ‘ಶೈತಾನರೆಂದು, ಮಾಲಕ್ ತೌಸ್ ಕೂಡ ಆ ಕಟ್ಟಲೆಗಳನ್ನು ಮೀರಿದ್ದು, ಅದನ್ನು ಪೂಜಿಸುವ ಎಜಿಡಿಯನ್ನರು “ದೆವ್ವವನ್ನು ಪೂಜಿಸುವ ಮಂದಿ” ಎಂದು ತಿಳಿದಿರುವ ಮಂದಿಯೇ ಹೆಚ್ಚು. ಆದರೆ ಮಾಲಕ್ ತೌಸ್ ದೇವದೂತನೇ ಆಗಿದ್ದು, ದೇವರು ಆತನ ತಪ್ಪನ್ನು ಮನ್ನಿಸಿದ್ದಾನೆ ಎನ್ನುವುದು ಮಾಲಕ್ ತೌಸನ್ನು ನಂಬುವುದಕ್ಕೆ ಎಜಿಡಿಯನ್ನರು ನೀಡುವ ಕಾರಣವಾಗಿದೆ.

ಎಜಿಡಿಗಳಿಗೆ ದೊರಕಲಿ ರಕ್ಶಣೆ:

ಸದ್ಯಕ್ಕೆ ಜಿಹಾದಿಗಳಿಂದ ತಪ್ಪಿಸಿಕೊಳ್ಳಲು ಇರಾಕ್ ನ ಬಡಗಣ-ಪಡುವಣ ದಿಕ್ಕಿನಲ್ಲಿರುವ ಬೆಟ್ಟಗಳನ್ನು ಏರಿರುವ ಎಜಿಡಿಯನ್ನರಿಗೆ ತಿನ್ನಲು ಮತ್ತು ಕುಡಿಯಲು ಏನೂ ಸಿಗದಂತಾಗಿದೆ. ಹೆಂಗಸರು, ಮಕ್ಕಳು ಎಲ್ಲರೂ ಪ್ರಾಣ ಬಯದಿಂದ ಬೆಟ್ಟವನ್ನೇರಿದ್ದಾರೆ. ಇದೆಲ್ಲಾ ಸಾಲದಂತೆ ಬೆಟ್ಟದ ಮೇಲೆ ಉರಿ ಬಿಸಿಲು ಬೇರೆ. ಎಜೆಡಿಯನ್ನರು ತಮಗೆ ಒದಗಿರುವ ಕುತ್ತಿನಿಂದ ಜಗತ್ತಿನ ಎಲ್ಲರ ಗಮನ ಸೆಳೆದಿರುವುದು ಮನುಶ್ಯಕುಲ ತಲೆ ತಗ್ಗಿಸುವಂತಾಗಿದೆ. ಎಜೆಡಿಯನ್ನರ ಉಳಿಸುವ ಪ್ರಯತ್ನಗಳು ಚಾಲ್ತಿಯಲ್ಲಿದ್ದರೂ ಆಗಬೇಕಾದ ವೇಗದಲ್ಲಿ ಅವರ ರಕ್ಶಣೆ ಕೆಲಸ ಆಗುತ್ತಿಲ್ಲ. ಕಾರಣ, ಉಗ್ರರ ಕಣ್ತಪ್ಪಿಸಿ ಕೆಲಸ ಮಾಡಬೇಕಿರುವುದರಿಂದ. ದರ‍್ಮದ ಅಮಲು ಮನುಶ್ಯನನ್ನು ಈ ಮಟ್ಟಿಗೆ ಕುರುಡನನ್ನಾಗಿ, ಕಲ್ಲೆದೆಯವನನ್ನಾಗಿ ಮಾಡುತ್ತದೆಯೇ ಎಂದು ಅಚ್ಚರಿಯಾಗುತ್ತದೆ!

(ಮಾಹಿತಿ ಮತ್ತು ಚಿತ್ರ ಸೆಲೆ: WikepidaYzidi, WikiIslamic, bbc.com, vox.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ವೈದಿಕ ಸಂಸ್ಕೃತ: ಇಂದ್ರ ,ವರುಣ,”””””ಮಿತ್ರ”””””” ,ಅಗ್ನಿ,ಮಾರುತ !
    ಅವೆಸ್ತಾ : ಇಂದ್ರ ,ವರುಣ,”””””ಮಿತ್ರ””””” ,ಮಾರುತ್ !
    ರೋಮನ್/ಲ್ಯಾಟಿನ್: ಇಗೈಸ್,”””””ಮೈತ್ರಸ್””””” !

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *