ಎದುರಾಗಬಹುದಾದ ಗಂಡಾಂತರವನ್ನು ಎದುರಿಸುವುದು ಹೇಗೆ?
ಕಳೆದ ಬಾರಿಯ ಔಟ್ಲುಕ್ ಮ್ಯಾಗಜೀನಿನಲ್ಲಿ, ಕಮ್ಯುನಿಸ್ಟ್ ಪಾರ್ಟಿಯ ಶ್ರೀ ಅಶೋಕ್ ಮಿತ್ರ ಅವರ ಮಾತುಗಳು ಮೂಡಿಬಂದಿದೆ. ಇಂಡಿಯಾದ ಹಣಕಾಸು ಸ್ತಿತಿಯ ಬಗ್ಗೆ ಮಾತನಾಡುತ್ತಾ ಅಶೋಕ್ ಮಿತ್ರ ಅವರು, ಮುಂದಿನ ದಿನಗಳಲ್ಲಿ ಎರಗಬಹುದಾದ ಗಂಡಾಂತರವನ್ನು ಎತ್ತಿ ತೋರಿಸಿದ್ದಾರೆ. ಮಿತ್ರ ಅವರು ಪಶ್ಚಿಮ ಬಂಗಾಳದ ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿದವರಾದ್ದರಿಂದ, ಇವರ ಎಚ್ಚರಿಕೆಯ ಮಾತುಗಳಿಗೂ ಕಿವಿ ಕೊಡಬೇಕಾಗಿದೆ.
ಗಟ್ಟಿಯಿಲ್ಲದ ಹಣಕಾಸು ಸ್ತಿತಿ
ಇಂಡಿಯಾದ ಹಣಕಾಸು ಸ್ತಿತಿ ಹೆಚ್ಚಾಗಿ ಮುಂದುವರೆದ ನಾಡುಗಳ ಮೇಲೆ ನಿಂತಿದ್ದು, ಅಮೇರಿಕಾ, ಯುರೋಪಿನ ನಾಡುಗಳಿಗೆ ಅದಿರು ಮಾರಾಟ, ಕಚ್ಚಾ ವಸ್ತುಗಳ ಮಾರಾಟ ಅತವಾ ಅರೆ-ಬರೆ ತಯಾರಿಸಿದ ವಸ್ತುಗಳ ಮಾರಾಟದಿಂದಲೇ ಹೆಚ್ಚಿನ ಹಣ ಹರಿದುಬರುತ್ತಿದೆ. ಈ ಮುಂದುವರೆದ ನಾಡುಗಳಲ್ಲಿ ಹಣಕಾಸು ಸ್ತಿತಿ ಏರು-ಪೇರಾದರೆ, ಇಲ್ಲಿಂದ ಹೊರಕಳಿಸಲಾಗುವ ಅದಿರು, ಕಚ್ಚಾ ವಸ್ತುಗಳಿಗೆ ಬೇಡಿಕೆ ಕುಸಿಯುತ್ತದೆ. ಹಾಗೊಮ್ಮೆ ಬೇಡಿಕೆ ಕುಸಿದಿದ್ದೇ ಆದರೆ, ಇಂಡಿಯಾದ ಹಣಕಾಸು ಸ್ತಿತಿಗೆ ದೊಡ್ಡ ಹೊಡೆತ ಬೀಳುತ್ತದೆ, ಮತ್ತು, ಇಲ್ಲಿನ ಕೆಲಸಗಳಲ್ಲಿ ಹಲವು ಆವಿಯಾಗುತ್ತವೆ. ಇಂತಹ ಹಣಕಾಸು ಏರು-ಪೇರುಗಳು ಜಗತ್ತಿನಲ್ಲಿ ಆಗಾಗ ಉಂಟಾಗುತ್ತಿರುವುದರಿಂದ, ಇದರ ಸಾದ್ಯತೆಗಳನ್ನು ತಳ್ಳಿ-ಹಾಕುವಂತಿಲ್ಲ.
ಹಾಗಿದ್ದರೆ, ಇಂತಹ ಗಂಡಾಂತರದ ಸ್ತಿತಿಯನ್ನು ಎದುರಿಸಲು ಮಾಡಬೇಕಾದುದೇನು?
ಅಶೋಕ್ ಮಿತ್ರ ಅವರು ಗಂಡಾಂತರ ಸ್ತಿತಿ ಎದುರಾಗಬಹುದು ಎಂದು ಎಚ್ಚರಿಸಿದ್ದಾರಶ್ಟೇ ಹೊರತು, ಅದನ್ನು ಎದುರಿಸಲು ಏನು ಮಾಡಬೇಕು ಎಂದು ಹೇಳಿಲ್ಲ. ಕಮ್ಯುನಿಸ್ಟ್ ಪಾರ್ಟಿಯವರಾದ್ದರಿಂದಲೋ ಏನೋ, ಅವರಿಗೆ ಹಣಕಾಸು ಸ್ತಿತಿ ಗಟ್ಟಿಗೊಳಿಸಲು ಮಾಡಬೇಕಾದುದೇನು ಎಂಬುದರ ಬಗ್ಗೆ ತಿಳಿಯಾದ ಚಿತ್ರಣ ಇದ್ದಂತಿಲ್ಲ.
ಮುಂದುವರೆದ ನಾಡುಗಳೆಲ್ಲವೂ ತಮ್ಮ ತಮ್ಮ ಹಣಕಾಸು ಸ್ತಿತಿಯನ್ನು ಗಟ್ಟಿಗೊಳಿಸಿಕೊಳ್ಳಲು ಏನು ಮಾಡಿವೆ ಎಂದು ನೋಡಿದರೆ, ಅವೆಲ್ಲವೂ ತಮ್ಮ ಜನರಿಗೆ ಒಳ್ಳೆಯ ಕಲಿಕೆ ನೀಡಿವೆ ಎಂಬುದು ಕಾಣುತ್ತದೆ. ಒಳ್ಳೆಯ ಕಲಿಕೆ ಏರ್ಪಾಡು ಕಟ್ಟದ ಯಾವ ನಾಡೂ ಮುಂದುವರೆದ ನಾಡುಗಳ ಸಾಲಿನಲ್ಲಿ ಇವತ್ತು ನಿಂತಿಲ್ಲ.
ಇಂಡಿಯಾದಲ್ಲಿ ಒಳ್ಳೆಯ ಕಲಿಕೆ ಏರ್ಪಾಡು ಇದೆಯೇ?
ಇಲ್ಲ. ಎದ್ದು ನಿಂತು ಹೇಳಬಹುದು, “ಇಂಡಿಯಾದಲ್ಲಿ ಒಳ್ಳೆಯ ಕಲಿಕೆ ಏರ್ಪಾಡು ಇಲ್ಲ” ಎಂದು. ಮುಂದುವರೆದ ನಾಡುಗಳೆಲ್ಲವೂ ತಮ್ಮ ತಮ್ಮ ಜನರ ನುಡಿಯಲ್ಲಿ ಎಲ್ಲಾ ಹಂತದ ಕಲಿಕೆ ನೀಡುವಂತಹ ಏರ್ಪಾಡು ಕಟ್ಟಿಕೊಂಡಿವೆ. ಇಂಡಿಯಾದ ಯಾವ ನುಡಿಯಲ್ಲೂ ಇಂದು ಎಲ್ಲಾ ಹಂತದ ಕಲಿಕೆ ಪಡೆದುಕೊಳ್ಳುವಂತಹ ಏರ್ಪಾಡು ಕಟ್ಟಲಾಗಿಲ್ಲ. ಇಂಗ್ಲೀಶ್ ಮಾದ್ಯಮದಲ್ಲಿ ಕಲಿತು ಗೆಲ್ಲಬಲ್ಲ ಜನರ ಎಣಿಕೆ ಯಾವತ್ತಿದ್ದರೂ ಕಮ್ಮಿಯೇ ಆಗಿರುತ್ತದೆ. ಹಾಗಿರುವಾಗ, ಇಂಡಿಯಾದ ಎಲ್ಲಾ ರಾಜ್ಯಗಳಲ್ಲೂ ಕೆಲವೇ ಕೆಲವು ಜನರು ಒಳ್ಳೆಯ ಕಲಿಕೆ ಪಡೆದುಕೊಳ್ಳುತ್ತಿರುತ್ತಾರೆ. ಇಂಗ್ಲೀಶ್ ಮಾದ್ಯಮದಲ್ಲಿ ಕಲಿಯಲಾಗದ ಪ್ರತಿಬೆಗಳು ಹಿಂದೆಯೇ ಉಳಿದುಬಿಡುತ್ತವೆ. ಹಲವಾರು ಮಂದಿ ಹಿಂದೆಯೇ ಉಳಿದು, ಕೆಲವರು ಮಾತ್ರ ತಮ್ಮ ಪ್ರತಿಬೆಯ ಸರಿಯಾದ ಬಳಕೆ ಮಾಡಿಕೊಳ್ಳುತ್ತಿದ್ದರೆ, ನಾಡು ಮುಂದುವರೆಯದೇ ಉಳಿಯುತ್ತದೆ. ಅಂತಹ ನಾಡು ಹಣಕಾಸು ಗಂಡಾಂತರಕ್ಕೆ ಒಳಗಾದಾಗ, ಅಲ್ಲಿ ಸಾಮಾಜಿಕ ಗಂಡಾಂತರಗಳೂ ತಲೆದೋರುತ್ತವೆ. ಸಾಮಾಜಿಕ ಗಂಡಾಂತರಗಳು ಎದುರಾದಾಗ, ಗಳಿಸಲಾದ ಅರೆ-ಬರೆ ಹಣಕಾಸು ಸ್ತಿತಿಯನ್ನೂ ಬಲಿಕೊಡಬೇಕಾಗುತ್ತದೆ.
ಅಶೋಕ್ ಮಿತ್ರ ಅವರು ಹೇಳುತ್ತಿರುವ ಗಂಡಾಂತರ ಬಂದರೂ ಎದುರಿಸಲು ಸಾದ್ಯವಾಗುವುದು, ಜನರ ನುಡಿಗಳಲ್ಲಿ ಒಳ್ಳೆಯ ಕಲಿಕೆ ಏರ್ಪಾಡು ಕಟ್ಟುವುದರಿಂದ ಮಾತ್ರ. ತುಂಬಾ ತಾಳ್ಮೆ ಮತ್ತು ಬೆವರು ಬೇಡುವ ಕೆಲಸ ಇದಾಗಿದ್ದರೂ, ಇದನ್ನು ಮಾಡದೆಯೇ ಬೇರೆ ಹಾದಿಯಿಲ್ಲ.
ಇತ್ತೀಚಿನ ಅನಿಸಿಕೆಗಳು