ಹರಕೆ ಹೊರಬೇಕಿದೆ ಕನ್ನಡ ದೇವರಿಗೆ

– ರತೀಶ ರತ್ನಾಕರ.

ಹಲವು ತಲೆಮಾರುಗಳನ್ನು ದಾಟಿ ಬಂದಿರುವ ನಮ್ಮ ನಡೆನುಡಿಯು ಹಲವಾರು ಬದಲಾವಣೆಗಳನ್ನು ಕಾಣುತ್ತಾ ಬಂದಿದೆ. ಕಾಡುಮೇಡುಗಳಲ್ಲಿ ಅಲೆದಾಡುತ್ತಾ ಬದುಕಿದ್ದವರು ಕಲ್ಲಿನ ಗುಹೆಗಳಲ್ಲಿ ಬಿಡಾರ ಹೂಡಲು ಶುರುಮಾಡಿದರು. ತಾವು ವಾಸವಾಗಿದ್ದ ಕಾಡನ್ನೇ ದೇವರು ಎಂದು ನಂಬಿ ಅದನ್ನು ಪೂಜಿಸತೊಡಗಿದರು. ಬುಡಕಟ್ಟು ತಲೆಮಾರುಗಳು ಬೆಳದಂತೆ, ನಮ್ಮ ಹಿರಿಯರುಗಳನ್ನೂ ಪೂಜಿಸುವ ಪರಿಪಾಟ ಬಂದಿತು. ಹೀಗೆ ಕಾಲದಿಂದ ಕಾಲಕ್ಕೆ ನಮ್ಮ ನಡೆನುಡಿಯಲ್ಲಿ ಹಲವು ದೇವರುಗಳು ಸೇರಿಕೊಂಡವು, ಅದಕ್ಕೆ ತಕ್ಕಂತೆ ಅಲ್ಲಲ್ಲಿ ನಮ್ಮ ಬದುಕಿನ ಶೈಲಿಯೂ ಬದಲಾಗುತ್ತಾ ಹೋಯಿತು.

ಊರ ದೇವರ ಹೇಸರಿನಲ್ಲಿ ಸುಗ್ಗಿ, ಜಾತ್ರೆಗಳ ಆಚರಣೆ, ಅದಕ್ಕೆ ತಕ್ಕಂತೆ ನೇಮ-ನೀತಿಗಳೂ ಆಚರಣೆಗೆ ಬಂದಿತು. ಹಬ್ಬ, ವ್ರತ, ಊಟ, ಉಡುಪು ಹೀಗೆ ಹಲವು ನಡೆನುಡಿಗಳ ಬಗೆಯು ನಾವು ನಂಬಿರುವ ದೇವರ ಮೇಲೆ ಅವಲಂಬಿತವಾಗುತ್ತಾ ಬಂದಿತು. ಒಬ್ಬನು ಯಾವುದನ್ನು ಹೆಚ್ಚಾಗಿ ಪ್ರೀತಿಸುತ್ತಾನೋ ಅದನ್ನೇ ದೇವರೆಂದು ನಂಬಿ ಅದಕ್ಕೆ ತಕ್ಕ ನೇಮ-ನೀತಿಗಳನ್ನು ನಡೆಸಿಕೊಂಡು ಹೋಗುವುದನ್ನೂ ಕಾಣಬಹುದು. ಅಪ್ಪ-ಅಮ್ಮ, ಮಕ್ಕಳು, ಹಿರಿಯರು, ಕಲ್ಲು, ಗಿಡ, ಊರು, ನದಿ, ತಮಗೆ ಉಪಕಾರ ಮಾಡಿದವರು, ಪುರಾಣದ ಪ್ರಸಿದ್ದರು ಹೀಗೆ ತಮಗೆ ಒಂದಲ್ಲಾ ಒಂದು ರೀತಿಯಲ್ಲಿ ಒಳಿತನ್ನು ಮಾಡಿರುವ ಎಲ್ಲವಕ್ಕೆ ದೇವರ ಸ್ತಾನವನ್ನು ನೀಡುತ್ತೇವೆ. ಮಾನವನ ಅತ್ಯಂತ ಹಳೆಯ ಗುರುತಾದ ನುಡಿಯು ಕೂಡ ಇದರಿಂದ ಹೊರತಾಗಿಲ್ಲ!

ತಮ್ಮ ತಾಯ್ನುಡಿಯನ್ನು ಕೂಡ ದೇವರೆಂದು ಪೂಜಿಸುವ ಪರಿಪಾಟವು ನಮ್ಮಲ್ಲಿದೆ. ಕನ್ನಡ ನುಡಿಗೂ ಕೂಡ ಕನ್ನಡಾಂಬೆಯ ರೂಪವನ್ನು ಕೊಟ್ಟು ಅದನ್ನು ದೇವರೆಂದು ಪೂಜಿಸುವುದನ್ನು ನೋಡಿದ್ದೇವೆ. ಇತ್ತೀಚೆಗೆ ಗೆಳೆಯರೊಬ್ಬರ ಮನೆಗೆ ಹೋದಾಗ ಅವರ ಮನೆಯಲ್ಲಿ ಕನ್ನಡಾಂಬೆಯನ್ನು ಮಾತ್ರ ಪೂಜಿಸುತ್ತಿರುವುದನ್ನು ಕೂಡ ನೋಡಿದೆ. ಕನ್ನಡಾಂಬೆಯೇ ನಮ್ಮ ಮನೆ ದೇವರು ಎಂದು ನಂಬಿ ಅದರ ಮೂರ‍್ತಿ ಒಂದನ್ನು ಮನೆಯಲ್ಲಿಟ್ಟು ಪೂಜಿಸುತ್ತಿದ್ದಾರೆ ಅವರು.

ಸರಿ, ಕನ್ನಡವೇ ದೇವರು ಎಂದು ನಂಬಿ ಅದನ್ನು ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡಿದರೆ ಸಾಕೇ? ಆ ನಂಬಿಕೆಗೆ ತಕ್ಕ ನೇಮ-ನೀತಿಗಳೇನು ಎಂಬುದು ನನ್ನ ಕೇಳ್ವಿಯಾಗಿತ್ತು. ಅದಕ್ಕೆ ಬೇಕಾದ ಉತ್ತರ ನನಗೇ ಸಿಗುತ್ತಾ ಹೋಯಿತು, ಕನ್ನಡವೇ ದೇವರು ಎಂದು ನಂಬಿರುವವರು ಕನ್ನಡ ವ್ರತವನ್ನು ಮಾಡಬೇಕಿದೆ, ಅಂದರೆ ಕನ್ನಡದ ಕೂಡಣದಲ್ಲಿ ಕನ್ನಡದ ಇರುವಿಕೆಯನ್ನು ಗಟ್ಟಿಗೊಳಿಸಬೇಕಿದೆ. ಕಲಿಕೆ, ದುಡಿಮೆ ಮತ್ತು ಆಳ್ವಿಕೆಯಲ್ಲಿ ಕನ್ನಡವು ಇತರೆ ಗಟ್ಟಿಯಾದ ನುಡಿಗಳಿಗೆ ಸರಿಸಮನಾಗಿ ಇರುವಂತೆ ನೋಡಿಕೊಳ್ಳುವ ಹರಕೆ ಹೊರಬೇಕಿದೆ.

ಕೆಲವು ಹಳ್ಳಿಯ ಕಡೆ ಒಂದು ನಂಬಿಕೆಯಿದೆ; ಕೆಲವೊಮ್ಮೆ ಯಾವುದಾದರು ಕುಟುಂಬಕ್ಕೆ ಕಶ್ಟಗಳು ಬಂದರೆ, ತಮ್ಮ ಮನೆದೇವರು ತಮಗೆ ಒಳ್ಳೆಯದನ್ನು ಮಾಡದಂತೆ ಯಾರೋ ಹೊರಗಿನವರು ಬೇರೆ ದೇವರು/ದಯ್ಯದಿಂದ ತಡೆ ಕಟ್ಟಿಸಿದ್ದಾರೆ ಎಂದು ತಿಳಿಯುತ್ತಾರೆ. ಕೂಡಲೇ ಹರಕೆ ಕೊಡುವುದರ ಮೂಲಕ ‘ತಡೆಯನ್ನು ಒಡೆಸಿ’ ತಮ್ಮ ದೇವರ ಇರುವಿಕೆಯನ್ನು ಗಟ್ಟಿ ಮಾಡಿಕೊಳ್ಳುತ್ತಾರೆ. ಆ ಬಳಿಕ ಅವರ ಮನೆದೇವರು ಅವರಿಗೆ ಬೇಕಾದ ಒಳಿತನ್ನು ಮಾಡುತ್ತದೆ ಎಂದು ನಂಬುತ್ತಾರೆ.

ಈ ತಡೆಯನ್ನು ಒಡೆಯುವ ಕೆಲಸ ಕನ್ನಡಕ್ಕೂ ಆಗಬೇಕಿದೆ. ಹೊರಗಿನ ನುಡಿಗಳಿಂದ ಕನ್ನಡದ ಏಳಿಗೆಗೆ ತಡೆಯಾಗುತ್ತಿದೆ ಎಂದಾಗ ಅದನ್ನು ಒಡೆದು ಕನ್ನಡದ ಏಳಿಗೆಗೆ ದಾರಿ ಮಾಡಿಕೊಳ್ಳಬೇಕು. ತಾನಿರುವ ಕನ್ನಡದ ಕೂಡಣದಲ್ಲಿ ತನಗೆ ಸಿಗಬೇಕಾದ ಸೇವೆಗಳು, ತನ್ನ ಎಂದಿನ ವ್ಯವಹಾರಗಳು, ಮನರಂಜನೆ, ಮಾಹಿತಿ, ಕೆಲಸ ಹೀಗೆ ತನ್ನ ಬದುಕಿನ ಎಲ್ಲಾ ಹಂತಗಳಲ್ಲಿ ಕನ್ನಡವೇ ಇರುವಂತೆ ನೋಡಿಕೊಳ್ಳಬೇಕಿದೆ. ಮತ್ತು ಇವು ಕನ್ನಡದಲ್ಲಿ ಸಿಗದಿದ್ದಾಗ ದನಿಯೆತ್ತುವುದು ನಮ್ಮ ನಡೆನುಡಿಯ ಬಾಗವಾಗಬೇಕಿದೆ. ಆಗ ಕನ್ನಡ ದೇವರು ಕನ್ನಡಿಗರಿಗೆ ಒಳಿತನ್ನು ಮಾಡುವುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.