ಮಲೇಶಿಯಾದ ಮಕ್ಕಳ ಗೆಲುವು ಸಾರುತ್ತಿರುವ ಸಂದೇಶ
– ವಲ್ಲೀಶ್ ಕುಮಾರ್.ಲಂಡನ್ನಿನಲ್ಲಿ ಜರುಗಿದ 2014ನೇ ಸಾಲಿನ ಬ್ರಿಟಿಶ್ ಇನ್ವೆನ್ಶನ್ ಶೋ (BIS)ನಲ್ಲಿ ಮಲೇಶಿಯಾದ ಕುಲಿಂ ಪ್ರದೇಶದ ಸರ‍್ಕಾರಿ ಶಾಲೆಯ ಮೂರು ಮಕ್ಕಳು ಡಬಲ್ ಗೋಲ್ಡ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಪ್ರೆವೀನ, ರಸ್ಯಿಕಾಶ್ ಮತ್ತು ಸುಶ್ಮೀತ ಅವರುಗಳೇ ಈ ಸಾದನೆ ಮೆರೆದ ಮಕ್ಕಳು. ಜಾಗತಿಕ ಮಟ್ಟದಲ್ಲಿ ನಡೆಯುವ ಅರಿಮೆಯ ಸೆಣೆಸಿನಲ್ಲಿ ಗೆದ್ದು ಬಂದ ಈ ಮಕ್ಕಳು ಓದುತ್ತಿರುವುದು ತಮ್ಮ ತಾಯ್ನುಡಿಯಾದ ತಮಿಳು ಮಾದ್ಯಮ ಶಾಲೆಯಲ್ಲಿ. ಕಲಿಕಾ ಮಾದ್ಯಮದ ಕುರಿತಂತೆ ಮಲೇಶಿಯಾದಲ್ಲಿ ಕಳೆದ ಒಂದುವರೆ ತಿಂಗಳಿಂದ ನಡೆಯುತ್ತಿರುವ ಚರ‍್ಚೆಯ ಹಿನ್ನೆಲೆಯಲ್ಲಿ ಈ ಗೆಲುವನ್ನು ನೋಡಿದಾಗ ನಮಗೆ ಈ ಗೆಲುವಿನ ಬೆಲೆ ಹೆಚ್ಚಾಗಿ ಕಾಣದೆ ಇರದು.
ಮಲೇಶಿಯಾದಲ್ಲಿ ಹೆಚ್ಚಿನ ಮಂದಿ (ಸುಮಾರು 50%) ಮಲಾಯ್ ನುಡಿಯಾಡುವವರಿದ್ದಾರೆ. ಜೊತೆಗೆ ನೂರಾರು ವರುಶಗಳಿಂದ ಇಲ್ಲಿ ನೆಲೆಸಿರುವ ಚೀನಿಯರು (ಸುಮಾರು 22%) ಮತ್ತು ತಮಿಳರು (ಸುಮಾರು 4%) ಇಲ್ಲಿನ ನೆಲೆಸಿಗರಲ್ಲಿ ಅತಿ ದೊಡ್ಡ ನುಡಿ ಸಮುದಾಯಗಳಾಗಿದ್ದಾರೆ. ಮಲೇಶಿಯಾದ ಸಂವಿದಾನ ಅಲ್ಲಿನ ಮಕ್ಕಳಿಗೆ ತಮಗೆ ಬೇಕಾದ ಕಲಿಕೆಯ ಮಾದ್ಯಮವನ್ನು ಆಯ್ಕೆಮಾಡಿಕೊಳ್ಳುವ ಅವಕಾಶ ನೀಡಿರುತ್ತದೆ. ಆದರೆ ಕಳೆದ ತಿಂಗಳ ಮೊದಲಲ್ಲಿ ಅಲ್ಲಿನ ಮಲಯ್ ಮತ್ತು ಇಂಗ್ಲಿಶ್ ಹೊರೆತಾದ ಇತರ ನುಡಿಯ (ಚೀನೀ, ತಮಿಳು ಇತ್ಯಾದಿ) ಶಾಲೆಗಳನ್ನು ಮುಚ್ಚಬೇಕೆಂದು ಆಡಳಿತ ಪಕ್ಶದ ಸದಸ್ಯರೊಬ್ಬರು ಹೇಳಿಕೆ ನೀಡಿರುವುದು ದೊಡ್ಡ ಮಟ್ಟದ ಚರ‍್ಚೆಗೆ ಎಡೆ ಮಾಡಿಕೊಟ್ಟಿತು. ಈ ರೀತಿ ಶಾಲೆಗಳನ್ನು ಮುಚ್ಚುವುದನ್ನು ಬೆಂಬಲಿಸುವವರು “ಎಲ್ಲಾ ನುಡಿಸಮುದಾಯಗಳೂ ಬೇರೆ ಬೇರೆ ನುಡಿಗಳಲ್ಲಿ ಕಲಿಯಲು ಹೊರಟರೆ, ನಮ್ಮ ನಾಡಿನಲ್ಲಿ ಒಡಕು ಬರಬಹುದು” ಎಂಬ ನೆಪವೊಡ್ಡುತ್ತಾರೆ. ಆದರೆ ಈ ವಿಶಯವನ್ನು ಚೀನೀ ಮಂದಿ ತಮ್ಮ ಮೂಲಬೂತ ಹಕ್ಕಿನ ಪ್ರಶ್ನೆಯಾಗಿ ನೋಡುತ್ತಾರೆ. ಬೇರೆ ಬೇರೆ ನುಡಿಯಲ್ಲಿ ಕಲಿತ ಮಾತ್ರಕ್ಕೆ ನಾಡಿನಲ್ಲಿ ಒಡಕು ಮೂಡುವುದಿಲ್ಲ ಎನ್ನುತ್ತಾರೆ.
ಮೊದಲನೆಯದಾಗಿ, ಮಕ್ಕಳ ಕಲಿಕೆಯಲ್ಲಿ ಅವರ ತಾಯ್ನುಡಿಯ ಪಾತ್ರ ಹಿರಿದಾದುದು. ಶಾಲೆಗೆ ಸೇರುವ ಹೊತ್ತಿಗೆ ಬಹುತೇಕ ಮಕ್ಕಳು ತಮ್ಮ ಮನೆಯ ನುಡಿಯನ್ನು ಮಾತ್ರ ಬಲ್ಲವರಾಗಿರುತ್ತಾರೆ. ಅದೇ ನುಡಿಯಲ್ಲಿ ಕಲಿಕೆ ನಡೆಸುವುದು ಅತ್ಯುತ್ತಮ ಎನ್ನುವುದು ಅರಕೆಗಳಿಂದ ಒಪ್ಪಿತವಾಗಿರುವ ಪದ್ದತಿಯಾಗಿದೆ. ಇದರಿಂದ ಹೆಚ್ಚಿನ ಮಂದಿಗೆ ಕಲಿಕೆ ಹತ್ತಿರವಾಗುತ್ತದೆ. ಇದಕ್ಕೆ ಕೈಗನ್ನಡಿಯಂತೆ ಮಲೇಶಿಯಾದಲ್ಲಿ ವಾಸವಿರುವ ಚೀನಿಯರಲ್ಲಿ 90% ಮಕ್ಕಳು ತಮ್ಮ ನುಡಿಯ ಶಾಲೆಗಳಲ್ಲೇ ಕಲಿಯುತ್ತಿದ್ದಾರೆ. ಅಲ್ಲದೆ ಮಲೇಶಿಯಾದಲ್ಲಿ ನಡೆದ ಸಮೀಕ್ಶೆಯೊಂದರಲ್ಲಿ ಕಂಡು ಬಂದಿರುವುದು ಏನೆಂದರೆ, ಮಲಯ್ ಮಾದ್ಯಮ ಶಾಲೆಯಲ್ಲಿ ಓದುತ್ತಿರುವ ತಮಿಳು ತಾಯ್ನುಡಿಯ ಮಕ್ಕಳು ತಮಿಳು ಮಾದ್ಯಮದಲ್ಲಿ ಕಲಿತ ಮಕ್ಕಳಿಗಿಂತ ಕಲಿಕೆಯಲ್ಲಿ ಹಿಂದುಳಿದಿದ್ದಾರೆ.
ಎರಡನೆಯದಾಗಿ “ಬೇರೆ ಬೇರೆ ನುಡಿಗಳಲ್ಲಿ ಕಲಿತರೆ, ನಾಡಿನ ಒಗ್ಗಟ್ಟಿಗೆ ತೊಂದರೆ” ಅನ್ನುವ ಮಾತಿನಲ್ಲಿ ಹುರುಳಿಲ್ಲ. ಮಲೇಶಿಯಾದ ಒಂದು ಪಂಗಡ ವಾದಿಸುತ್ತಿರುವ ಪ್ರಕಾರ “ತಮ್ಮ ತಮ್ಮ ನುಡಿಯಲ್ಲಿ ಕಲಿಯುವ ಮಕ್ಕಳು ಸಮಾಜದ ಇತರರೊಂದಿಗೆ ಬೆರೆಯುವುದಿಲ್ಲ. ಕೇವಲ ತಮ್ಮ ನುಡಿಸಮುದಾಯಕ್ಕೆ ಸೀಮಿತವಾಗುವ ಈ ಮಕ್ಕಳು ಬೇರೆಯೇ ಒಂದು ಗುಂಪನ್ನು ಕಟ್ಟಿಕೊಳ್ಳುತ್ತಾರೆ ಅಲ್ಲದೆ ಬೇರೆ ಗುಂಪಿನೊಂದಿಗೆ ಬೆರೆಯುವುದಿಲ್ಲ” ಎನ್ನುತ್ತಾರೆ. ಒಂದು ಕೂಡಣದಲ್ಲಿ ಇರುವ ಮಂದಿ ಬೆರೆಯಲು ನುಡಿಯೇ ಬೆಸೆಯುವ ಕೊಂಡಿಯಾಗಿರುತ್ತದೆ. ಅಲ್ಲದೆ ಒಂದು ನಾಡಿನಲ್ಲಿ ಅಚ್ಚುಕಟ್ಟಾದ ಆಡಳಿತ ನಡೆಸಲೂ ನುಡಿಯ ಪಾತ್ರ ಬಲು ಹಿರಿದಾದುದು. ಹಾಗಾಗಿ ಸುತ್ತಲ ಸಮಾಜದೊಂದಿಗೆ ಬೆರೆಯಲು ಮಕ್ಕಳಿಗೆ ತಾಯ್ನುಡಿಯಲ್ಲದೆ ಆ ಪರಿಸರದ ಮತ್ತೊಂದು ನುಡಿಯನ್ನು ಒಂದು ವಿಶಯವಾಗಿ ಶಾಲಾ ಹಂತದಿಂದಲೇ ಕಲಿಸಿದರೆ ಆಗ ಸಮಾಜದ ಎಲ್ಲಾ ಗುಂಪುಗಳಲ್ಲಿ ಒಡನಾಟ ಬೆಳೆಸಲು ಆಗುತ್ತದೆ. ಈ ರೀತಿಯ ತಾಯ್ನುಡಿ ಮಾದ್ಯಮದಲ್ಲಿ ಎರಡು-ನುಡಿಗಳ ಕಲಿಕೆ (mother tongue based bilingual education) ನಡೆಸುವುದರಿಂದ ಮಕ್ಕಳು ವಿಶಯಗಳನ್ನು ಚನ್ನಾಗಿ ಕಲಿಯುತ್ತಾರೆ ಅಲ್ಲದೆ ಸುತ್ತಲ ಕೂಡಣದಲ್ಲೂ ಬೆರೆಯಲು ಆಗುತ್ತದೆ. ಹೀಗೆ ಕೂಡಣಗಳು ಒಟ್ಟಾಗಿ ಬಾಳುವುದರಿಂದ ನಾಡಿನ ಒಗ್ಗಟ್ಟು ಹೆಚ್ಚುತ್ತದೆ.
ನಾಡಿನ ಒಗ್ಗಟ್ಟಿನ ನೆಪವೊಡ್ಡಿ ಮಕ್ಕಳಿಗೆ ತಮ್ಮದಲ್ಲದ ನುಡಿಯಲ್ಲಿ ಕಲಿಸುವುದು ತರವಲ್ಲದ ನಡೆ. ಇದರಿಂದ ನಾಡಿನ ಏಳಿಗೆಗೆ ಪೆಟ್ಟು ಬೀಳಬಹುದೆನ್ನುವುದನ್ನು ಸರ‍್ಕಾರ ಅರಿತುಕೊಳ್ಳಬೇಕು. ತಾಯ್ನುಡಿಯಲ್ಲಿ ಕಲಿಸುವುದರಿಂದಲೇ ನಾವು ನಮ್ಮ ನಾಡಿನಲ್ಲಿ ಹೆಚ್ಚಿನ ಪ್ರತಿಬೆಗಳನ್ನು ಬೆಳೆಸಲು ಆಗುವುದು. ಪ್ರೆವೀನ, ರಸ್ಯಿಕಾಶ್ ಮತ್ತು ಸುಶ್ಮೀತರಂತಹ ಮಕ್ಕಳು ತಮ್ಮ ಗೆಲುವಿನ ಮೂಲಕ ಜಗತ್ತಿಗೆ ಈ ದಿಟವನ್ನು ಮತ್ತೊಮ್ಮೆ ಸಾರಿದ್ದಾರೆ.
(ಚಿತ್ರ ಸೆಲೆ: thestar.com)
ಇತ್ತೀಚಿನ ಅನಿಸಿಕೆಗಳು