ನೀರಿನ ಏರ‍್ಪಾಡು ಮತ್ತು ಹಿರಿಯರ ಅರಿವು

ಸುನಿತಾ ಹಿರೇಮಟ.img_6538ಬಾರತದಲ್ಲಿನ ಹಳೆಯ ನೀರಿನ ಏರ‍್ಪಾಡುಗಳನ್ನು ನಾವು ನೆನೆಸಿದಲ್ಲಿ, ಅವುಗಳಿರುವ ನೆಲದ ಮತ್ತು ಅಲ್ಲಿನ ಹವಾಗುಣದ ಬಗ್ಗೆ ತಿಳಿದರೆ ಸಾಕು, ಅವುಗಳನ್ನು ಕಟ್ಟುವಲ್ಲಿ ನಮ್ಮ ಹಿರಿಯರಿಗಿದ್ದ ಅಗಾದ ಅನುಬವದ ಬಗ್ಗೆ ತಿಳಿಯುತ್ತದೆ. ಈ ಎಲ್ಲಾ ನೀರಿನ ಏರ‍್ಪಾಡುಗಳನ್ನು ಕಟ್ಟುವಲ್ಲಿ ನಮ್ಮ ಹಿರಿಯರು ಅಳವಡಿಸಿಕೊಂಡಿರಬಹುದಾದ ಹಲವು ಪದ್ದತಿಗಳನ್ನು ಒಮ್ಮೆಯಾದರು ಓದುವ ಕುತೂಹಲ ನನ್ನಲ್ಲಿ. ಅದಕ್ಕೆ ನನ್ನೂರು ಬಳ್ಳಾರಿ ಒಂದು ಒಳ್ಳೆ ಉದಾಹರಣೆ ಎನ್ನಿಸಿದ್ದು ತಪ್ಪಲ್ಲ.

ಬಳ್ಳಾರಿಯ ಕುರಿತು ಒಂದು ಸಣ್ಣ ವಿವರ ಈ ಕೆಳಗೆ ನೀಡಿದ್ದೇನೆ. ಇಲ್ಲಿ ಗಮನಿಸಬೇಕಾದ ಮುಕ್ಯ ಅಂಶಗಳು: ನೆಲ, ಗಾಳಿ, ಬಿಸಿಲು ಮತ್ತು ಮಳೆ.

  • ನೆಲವು ಹೆಚ್ಚಾಗಿ ಬಯಲು ಸೀಮೆಯಾಗಿದೆ
  • ಬಿಸಿಯಾದ ಒಣ ಹವಾಗುಣ
  • ಜಿಲ್ಲೆಯ ತಾಪಮಾನ 22 ಡಿಗ್ರಿ. ಸೆ. ಇಂದ 43 ಡಿಗ್ರಿ. ಸೆ. ಗಳ ನಡುವೆ
  • ಮರಳು ಮಣ್ಣು, ಕಲಸುಮಣ್ಣು, ಕೆಂಪು ಮಣ್ಣು, ಕಪ್ಪು ಮಣ್ಣು ಮತ್ತು ಮೆಕ್ಕಲು ಮಣ್ಣಿನ ಬಗೆಗಳನ್ನು ಕಾಣಬಹುದು
  • ಸ್ವಲ್ಪ ಮಳೆ ಬೀಳುವ ವಾತಾವರಣ, ಜಿಲ್ಲೆಯಲ್ಲಿ ಹೆಚ್ಚು ಮಳೆ ಬೀಳುವುದು ಸಂಡೂರಿನ ರಾಮದುರ‍್ಗ (39 ಇಂಚು)
  • ಗ್ರಾನೈಟ್ ಕಲ್ಲುಬಂಡೆಗಳ ರಚನೆಗಳು
  • ನಲ್ಲಮಲೈ ಕಾಡಿನ ಸ್ವಲ್ಪ ಬಾಗ ಬಳ್ಳಾರಿ ಪ್ರದೇಶದಲ್ಲಿದೆ
  • ನೀರಿನ ಆಸರೆ – ಮಳೆ, ತುಂಗಬದ್ರಾನದಿ ಮತ್ತು ಆಣೆಕಟ್ಟು

ಈ ಮೇಲೆ ನೀಡಿರುವ ವಾತಾವರಣವಿದ್ದರೂ ಇಂದಿಗೂ ಬಳಕೆಯಲ್ಲಿರುವ ವಿಜಯನಗರದ ಅರಸರು ಕಟ್ಟಿದ ದೊಡ್ಡ ಕೆರೆಗಳು, ಬಸವಣ್ಣ ಮತ್ತು ರಾಯರ ಕಾಲುವೆಗಳನ್ನು ನೋಡಿದರೆ ಈ ನೀರಿನ ಸೆಲೆಗಳನ್ನು ಕಟ್ಟುವಲ್ಲಿ ಹಿರಿಯರಿಗಿದ್ದ ಚಳಕದ ಹಿರಿಮೆ ಅರಿವಿಗೆ ಬರುತ್ತದೆ.

ಬದುಕು ರೂಪಿಸಲು ಮನುಶ್ಯನ ಅರಿವು ಮತ್ತು ಅದನ್ನು ಕಲ್ಯಾಣಿಯ ರೂಪದಲ್ಲಿ ಕಾರ‍್ಯರೂಪಕ್ಕಿಳಿಸಿದ ಆ ಕೆಲಸಗಳು ಇಂದಿಗೂ ನಮ್ಮ ಕಣ್ಣ ಮುಂದಿವೆ, ಅಲ್ಲದೆ ಎಂತಹ ಕಶ್ಟ ಕಾಲದಲ್ಲೂ ನೀರುಣಿಸುವ ಜೀವಸೆಲೆಯಾಗಿವೆ. ಸರಿ ಹಾಗಾದರೆ ಆ ಜೀವಸೆಲೆ ಎಂದರೇನು ಎನ್ನುವ ಪ್ರಶ್ನೆಗೆ ಉತ್ತರ ತಕ್ಶಣಕ್ಕೆ ಹೊಳೆಯುವುದು ನೀರು. ನೆಲದ ಮೇಲಿನ ಎಲ್ಲ ಜೀವಿಗಳಿಗೂ ಅಗತ್ಯವಾದ ಜೀವಜಲ ಎಂದು. ಇದು ಸಾಮಾನ್ಯ ಅನಿಸಿಕೆಯಾದರೆ ಅರಿಮೆಯ ಮಾತಲ್ಲಿ ಇದು ಒಂದು ರಾಸಾಯನಿಕ ಅಣು. ರಾಸಾಯನಿಕ ಸೂತ್ರದಲ್ಲಿ ಬರೆಯುವ H2O, ಇದು ನೀರಿನ ಅಣುಬರಹ. ಒಂದು ನೀರಿನ ಕಣದಲ್ಲಿ ಎರಡು ಜಲಜನಕ ಮತ್ತು ಒಂದು ಆಮ್ಲಜನಕದ ಅಣು ಇರುತ್ತವೆ. ಅಲ್ಲದೇ ನೀರು – ಗಾಳಿ, ಮಂಜು ಗಡ್ಡೆ, ಆವಿಯ ರೂಪದಲ್ಲಿಯೂ ಇರುತ್ತದೆ.

ನೀರಿನ ಚಕ್ರವನ್ನು ತಿಳಿಯುವುದು ಬಹಳ ಸುಲಬ:
ನೀರಿನ ಚಕ್ರದ ಮುಕ್ಯ ಅಂಗ ಸೂರ‍್ಯ. ಸೂರ‍್ಯನ ತಾಪಮಾನದಿಂದ ಬಿಸಿಯಾದ ನೆಲದ ಮೇಲಿನ ನೀರು ಆವಿಯಾಗಿ ಗಾಳಿಯಲ್ಲಿ ಸೇರುತ್ತದೆ. ಈ ಆವಿ ಕಡಿಮೆ ತಾಪಮಾನದ ಪ್ರದೇಶಕ್ಕೆ ಸೇರಿ ಮೋಡಗಳಾಗಿ ಆಕಾಶದಿಂದ ಮಳೆಯಾಗಿ ಮತ್ತೆ ನೆಲಕ್ಕೆ ಬೀಳುತ್ತದೆ. ಬಿದ್ದ ಜಾಗದ ತಾಪಮಾನಕ್ಕನುಗುಣವಾಗಿ ಮಂಜು ಇಲ್ಲವೇ ನೀರಾಗಿ ಮಾರ‍್ಪಾಟಾಗುತ್ತದೆ.

ನಮ್ಮ ದೇಶದ ನೀರಿನ ಬಗ್ಗೆ ಮಾತಾನಾಡಬೇಕಾದರೆ ನಾವು ಗಮನಿಸಬೇಕಾದದ್ದು ನಮ್ಮ ನೆಲದ ರಚನೆ ಮತ್ತು ಅಲ್ಲಿ ಇರುವ ಇತರ ಪ್ರಾಕ್ರುತಿಕ ರಚನೆಗಳನ್ನು. ದಕ್ಶಿಣ ಬಾರತಕ್ಕೆ ನೀರಿನ ಸೆಲೆಗಳು ನಮ್ಮ ಪಶ್ಚಿಮ ಗಟ್ಟಗಳು, ಸಹ್ಯಾದ್ರಿ ಶ್ರೇಣಿಯಲ್ಲಿರುವ ಪರ‍್ವತ ಸಾಲುಗಳು. ಉತ್ತರ ಬಾರತಕ್ಕೆ ಹಿಮಾಲಯದಲ್ಲಿರುವ ಮಂಜಿನ ಬಂಡೆಗಳು. ನೀರನ್ನು ಒಂದೆಡೆ, ಒಮ್ಮೆಗೆ ಉತ್ಪತ್ತಿಗೊಳಿಸಲು ಹೇಗೆ ಸಾದ್ಯವಿಲ್ಲವೋ ಹಾಗೆಯೇ ಅದನ್ನು ನಾಶ ಮಾಡಲು ಸಾದ್ಯವಿಲ್ಲ. ಅದನ್ನು ನಾಶ ಮಾಡುವುದೆಂದರೆ ಅದರ ಮೂಲ ಗುಣವನ್ನು ನಾಶ ಮಾಡುವುದೆಂದನಿಸುತ್ತದೆ, ಹಾಗಾಗಿ ನೀರನ್ನು ನಾವೆಂದು ಕಳೆದುಕೊಳ್ಳಲಾರೆವು. ಹಾಗಾಗಿ ಇದನ್ನು ಹಲವು ರೂಪಗಳಲ್ಲಿ ಸಂಗ್ರಹಿಸಬಹುದಾಗಿದೆ. ನೈಸರ‍್ಗಿಕವಾಗಿ ನಿರ‍್ಮಾಣಗೊಂಡ ತೆಗ್ಗಿನ ಪ್ರದೇಶಗಳಲ್ಲಿ ನೀರು ತನ್ನಿಂತಾನೆ ಕೂಡುತ್ತದೆ. ಇನ್ನು ಮಾನವ ನಿರ‍್ಮಿತ ನೀರು ಕೂಡಿಡುವ ಏರ‍್ಪಾಟಿನಲ್ಲಿ, ನೀರನ್ನು ಸಂಗ್ರಹಿಸಿ ಜೀವಸಂಕುಲಕ್ಕೆ ಉಪಯೋಗುವಂತೆ ಮಾಡುವ ಕಾರ‍್ಯ ಶುರುವಾಗಿದ್ದು ಬಹು ಪುರಾತನ ಕಾಲದಿಂದ. ಇಂದಿನವರೆಗೂ ಹಲಾವಾರು ರೂಪಗಳಲ್ಲಿ ನೀರನ್ನು ನಾವು ಕೂಡಿಡುತ್ತಲೇ ಇದ್ದೇವೆ.

ನೀರು ಇರುವ ಕೆಲವು ಜಾಗಗಳು ಮತ್ತು ಅವುಗಳ ಹೊತ್ತನ್ನು ನಾವು ಈ ಕೆಳಗೆ ಕಾಣಬಹುದು:Neeruನೀರು ಇದ್ದೆಡೆ ನಾಗರೀಕತೆ ಬೆಳೆಯಿತೆಂದು ಇತಿಹಾಸ ಹೇಳುತ್ತದೆ. ಹಾಗೆ ಬೆಳೆದ ನಾಗರಿಕತೆ ನೀರನ್ನು ಉಳಿಸಿ ಬೆಳೆಸಿತೆಂದು ಇಂದಿಗೂ ಕಾಣಸಿಗುವ ಅನೇಕ ನೀರು ಕೂಡಿಡುವ ಏರ‍್ಪಾಡುಗಳು ಹೇಳುತ್ತವೆ. ನಾಗರೀಕತೆ ಬೆಳೆದಂತೆಲ್ಲ ಜನಸಂಕ್ಯೆ ಬೆಳೆಯುತ್ತಾ ಹೋಯಿತು, ಆಗ ನೈಸರ‍್ಗಿಕ ನೀರಿನ ಮೂಲಗಳಿಂದ ಮಂದಿಯು ದೂರ ನೆಲೆಸುವುದು ಅನಿವಾರ‍್ಯವಾಯಿತು. ಆಗ ಬೆಳೆದದ್ದೇ, ಕಲ್ಯಾಣಿ, ಪುಶ್ಕರಣಿ, ಕೊಳ, ಮೆಟ್ಟಿಲ ಬಾವಿ, ನೀರಿನ ಮಡು ಹೀಗೆ ಹತ್ತು ಹಲವು ಹೆಸರಿರುವ ಈ ನೀರಿನ ಏರ‍್ಪಾಡುಗಳು. ಇನ್ನು ಯಾವುದೇ ನೀರಿನ ಮೂಲಗಳನ್ನು ಕಟ್ಟಲು ಬೇಕಾದ ಅಗತ್ಯ ಪರಿಣಿತಿಯನ್ನು ನಮ್ಮ ಹಿರಿಯರು ಹೊಂದಿದ್ದರು ಎನ್ನುವುದನ್ನು ಇವುಗಳ ಬಾಳಿಕೆ ಸಾರುತ್ತದೆ. ಹಾಗಾಗಿ ನೀರಿನ ಈ ಏರ‍್ಪಾಡುಗಳನ್ನು ಹೇಗೆ ಕಟ್ಟಿರಬಹುದು ಎನ್ನುವ ಕೌತುಕ ಯಾವಾಗಲು ಕಾಡುತ್ತದೆ. ನಮ್ಮ ಹಿರಿಯರಿಗೆ ಪಂಚಬೂತಗಳು ಎನ್ನುವ ನೀರು, ಗಾಳಿ, ಬೆಂಕಿ (ಇಲ್ಲಿ ತಾಪಮಾನ ಎನ್ನಬಹುದು ), ನೆಲ ಮತ್ತು ಆಕಾಶ ಇವುಗಳ ಆಳ ಅರಿವು ಬಹಳ ಅಗಾದವಾಗಿತ್ತು. ಹಾಗಾಗಿ ಈ ಎಲ್ಲ ಮೂಲ ಅಂಶಗಳ ಆದಾರದ ಮೇಲೆ ನೀರಿನ ಸೆಲೆಗಳನ್ನು ಕಟ್ಟುವಲ್ಲಿ ಅವರು ಸಮರ‍್ತರಾಗಿದ್ದರು.

ಈ ನೀರಿನ ಸೆಲೆಗಳ ಬಗ್ಗೆ ಅರಿಯುವ ಮೊದಲು ನಮ್ಮ ಮಣ್ಣು ಮತ್ತು ಹವಾಮಾನದ ಕುರಿತು ಕೆಲವು ವಿಶಯಗಳನ್ನು ಅರಿಯಬೇಕಿದೆ:

ಮಣ್ಣು ನಿಸರ‍್ಗದ ಒಂದು ಸಂಕೀರ‍್ಣ ರಚನೆ. ನೆಲದ ಮೇಲಿನ ಎಲ್ಲಾ ಜೀವಿಗಳ ಪಾತ್ರ, ಹವಾಮಾನ, ಬಗೆ ಬಗೆಯ ಜೈವಿಕ ಕ್ರಿಯೆ ಮತ್ತು ಸಮಯದ ಪ್ರಬಾವ ಮಣ್ಣಿನ ರಚನೆಗೆ ಮತ್ತು ಅದರ ಗುಣಕ್ಕೆ ಕಾರಣವಾಗುತ್ತದೆ. ಇಂಡಿಯನ್ ಕೌನ್ಸಿಲ್ ಆಪ್ ಅಗ್ರಿಕಲ್ಚರಲ್ ರಿಸರ‍್ಚ್ (Indian Council of Agricultural Research (ICAR)) ನೀಡಿರುವ ಮಾಹಿತಿಯಂತೆ ಇಂಡಿಯಾದಲ್ಲಿ ಮುಕ್ಯವಾಗಿ ಬೇರೆಡೆಯಿಂದ ಕೊಚ್ಚಿ ಬಂದು ಒಂದೆಡೆ ಕೂಡಿದ ಮೆಕ್ಕಲು ಮಣ್ಣು, ಮರುಬೂಮಿಯ ಮರಳು ಅತವ ಉಸುಕು, ಕಪ್ಪು ಮಣ್ಣು, ಕೆಂಪು ಮಣ್ಣು, ಕಲ್ಲಿನ ಗರ‍್ಶಣೆಯಿಂದಾದ ಮಣ್ಣು, ಜೇಡಿಮಣ್ಣು ಅತವಾ ಜಂಬು ಮಣ್ಣು, ಉಪ್ಪಿನ ಗುಣವಿರುವ ಕ್ಶಾರ ಮಣ್ಣು, ಸಮುದ್ರದ ನೀರಿನ ಸುತ್ತಮುತ್ತ ಇರುವ ಜವುಗು ಮಣ್ಣು ಎಂಬ ಹಲವು ಬಗೆಗಳಿವೆ.

ಮಣ್ಣಿನ ಗುಣ ಹೀಗೆ ಎಂದು ಹೇಳಬೇಕಾದರೆ ನಾವು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಹಲವು. ಅವುಗಳ ಬಣ್ಣ, ಅಳತೆ, ರೂಪ, ರಚನೆ ಮತ್ತು ತನ್ನಲ್ಲಿ ಎಶ್ಟು ಸಮಯ ಮತ್ತು ಪ್ರಮಾಣದಲ್ಲಿ ನೀರನ್ನು ಹಿಡಿದಿಡುತ್ತದೆ ಅನ್ನುವ ಮಾಹಿತಿ, ಕನಿಜದ ಪ್ರಮಾಣ ಹೀಗೆ ಹಲವು ಗುಣಗಳನ್ನ ಗಮನಿಸಿ, ಮಣ್ಣು ಇಂತಹುದೆ ಎಂದು ಪರಿಣಿತರು ಸುಲಬವಾಗಿ ಗುರುತಿಸಬಲ್ಲರು. ಇನ್ನು ಮಣ್ಣಿನ ಎಲ್ಲ ಪದರಗಳು ಉದ್ದ ಅಗಲಗಳಲ್ಲಿ ಒಂದೇ ರೀತಿಯಾಗಿರುವುದಿಲ್ಲ. ಮಳೆಯ ರೂಪದಲ್ಲಿ ನೆಲವನ್ನು ತಲುಪಿದ ನೀರಿನ ಸ್ವಲ್ಪ ಪ್ರಮಾಣ ನೆಲದೊಳಗೆ ಸೇರಿ ತಗ್ಗಾದ ಪ್ರದೇಶದಲ್ಲಿ ಮತ್ತೆ ಮೇಲೆ ಬರುತ್ತದೆ. ಹೆಚ್ಚು ಮಣ್ಣಿನ ಆಳಕ್ಕೆ ಹೋಗುವ ಅವಕಾಶವಿದ್ದೆಡೆ ಅದು ನೆಲದಲ್ಲಿ ಬಸಿದು ಒರತೆಯಾಗಿರುತ್ತದೆ. ಇನ್ನು ನೆಲದ ಮೇಲೆ ಉಳಿದ ನೀರು ಹಲವು ಸಮಯಗಳಲ್ಲಿ ತಾಪಮಾನಕ್ಕನುಗುಣವಾಗಿ ಆವಿಯಾಗಿ ಮತ್ತೆ ಆಕಾಶವನ್ನು ಸೇರುತ್ತದೆ. ಮಣ್ಣಿನ ರಚನೆ, ಮಣ್ಣಿನಲ್ಲಿರುವ ಸಾವಯವದ ಬಗೆ ಮತ್ತು ಪ್ರಮಾಣ, ಈಗಾಗಲೆ ಮಣ್ಣಿನಲ್ಲಿರುವ ನೀರಿನ ಪ್ರಮಾಣ ಮತ್ತು ಮಣ್ಣಿನ ತಾಪಮಾನ ಇವುಗಳ ಆದಾರದ ಮೇಲೆ ಮಣ್ಣಿನಲ್ಲಿ ನೀರಿನ ಒಳಹರಿವು ಒಂದೊಂದು ಮಣ್ಣಿನಲ್ಲೂ ಒಂದೊಂದು ಬಗೆಯಾಗಿರುತ್ತದೆ. ಹಾಗೆಯೇ ಮಣ್ಣಿನಲ್ಲಿರುವ ನೀರು ಹೊರಹೋಗುವ ಅಂದರೆ ಆವಿಯಾಗುವ ಪ್ರಮಾಣವು ಸಹ ಈ ಹಿಂದೆ ಹೇಳಿದ ಎಲ್ಲ ಗುಣಗಳನ್ನು ಅವಲಂಬಿಸಿರುತ್ತದೆ.

ಇಂಡಿಯಾದಲ್ಲಿ ಚಳಿಗಾಲ, ಮಳೆಗಾಲ ಮತ್ತು ಬೇಸಿಗೆಕಾಲಕ್ಕೆ ಅನುಗುಣವಾಗ ತಾಪಮಾನ, ಮಳೆ ಮತ್ತು ಚಳಿಯ ಏರುಪೇರುಗಳು ಇರುತ್ತವೆ. ಅಲ್ಲದೇ ನೆಲದ ಏರಿಳಿತಗಳು, ಹವಾಮಾನ ಮತ್ತು ಕಾಡುಗಳಿರುವ ಅದಾರದ ಮೇಲೆ ಮಳೆಯ ಪ್ರಮಾಣ ಮತ್ತು ಮಳೆಯಾಗುವ ಸಮಯಗಳಲ್ಲಿ ವ್ಯತ್ಯಾಸವಾಗುತ್ತದೆ. ಈ ಎಲ್ಲ ಅದಾರಗಳನ್ನು ಅರಿತು ನಮ್ಮ ಹಿರಿಯರು ಈ ನೀರಿನ ಮೂಲಗಳ ರೂಪುರೇಶೆಗಳನ್ನ ಸಿದ್ದಪಡಿಸುತ್ತಿದ್ದರು.

ಇನ್ನು ಬಾರತದ ನೆಲದ ವ್ಯೆವಿದ್ಯ ಗಮನಿಸಿ, ಒಂದೆಡೆ ಮೈ ಕೊರೆಯುವ ಚಳಿ ಇದ್ದರೆ ಅದಕ್ಕೆ ವಿರುದ್ದವಾಗಿ ಮೈ ಸುಡುವ ಮರಳುಗಾಡಿನ ಬಿಸಿ ಇನ್ನೊಂದೆಡೆ. ಒಂದೆಡೆ ಹಚ್ಚಹಸಿರಿನ ಕಾಡು ಉಸಿರಾಡುತ್ತಿದ್ದರೆ ಮತ್ತೊಂದೆಡೆ ಬಟ್ಟ ಬಯಲು. ಹೀಗೆ ಎಲ್ಲ ತರಹದ ಏರುಪೇರುಗಳು ಕಾಣಸಿಗುತ್ತವೆ. ಮಳೆ ಬೀಳುವ ಪ್ರಮಾಣದಲ್ಲಿಯೂ ಕೂಡ ಏರುಪೇರುಗಳಿವೆ. ತಾರ್ ನ ಮರುಬೂಮಿಯಲ್ಲಿ 100 ಮಿ.ಮಿ. ನಶ್ಟು ಮಳೆಯಾದರೆ, 15000 ಮಿ.ಮಿ. ನಶ್ಟು ಮಳೆ ಬಾರತದ ಅಸ್ಸಾಂ ಕಡೆಯ ಪ್ರದೇಶಗಳಲ್ಲಿ ಆಗುತ್ತದೆ. ಬಾರತದ ಸರಾಸರಿ ಮಳೆಯ ಪ್ರಮಾಣ 1083 ಮಿ.ಮಿ. ನಶ್ಟು. ಅತೀ ಹೆಚ್ಚಿನ ಮಳೆ ದೇಶದ ಈಶಾನ್ಯ ರಾಜ್ಯಗಳಲ್ಲಾದರೆ, ಅತೀ ಕಡಿಮೆ ಮಳೆ ವಾಯುವ್ಯ ಬಾಗದ ಮರಳುಗಾಡಿನ ರಾಜಸ್ತಾನದಲ್ಲಾಗುತ್ತದೆ.

ಇತರೆ ಅರಿಮೆಗಳಂತೆ ನೀರಿನ ಅರಿಮೆಯು ಸಹ ಪ್ರಾಚೀನ ಬಾರತದಲ್ಲಿ ಬಹು ಮುಂದುವರಿದಿತ್ತು. ಹಿಂದಿನ ಕಾಲದಲ್ಲಿ, ಬಾರತೀಯರು ಸೂರ‍್ಯನ ಕಿರಣಗಳು ಮತ್ತು ಗಾಳಿಯ ಪರಿಣಾಮದಿಂದ ನೀರಿನ ಕಣಗಳಾಗುತ್ತವೆ ಎಂಬ ಪರಿಕಲ್ಪನೆಯನ್ನು ಹೊಂದಿದ್ದರು. ನೀರಿನ ಇಂಗುವಿಕೆ, ನೀರಿನ ಆವಿಯಾಗುವಿಕೆ, ಮೋಡದ ರಚನೆ, ಮಳೆ ಮತ್ತು ಅದರ ಮಾಪನದ ಬಗ್ಗೆ ನಮ್ಮ ಹಿರಿಯರಿಗೆ ಆಳವಾದ ಅರಿವಿತ್ತು ಎನ್ನುವ ಬಗ್ಗೆ ಹಳೆಯ ಹೊತ್ತಗೆಗಳು ಹೇಳುತ್ತವೆ. ಮಳೆಗೆ ಸಂಬಂದ ಪಟ್ಟಂತೆ ಮೋಡಗಳ ವರ‍್ಗೀಕರಣ, ಅವುಗಳ ಬಣ್ಣ, ಮಳೆಯ ಪ್ರಮಾಣ, ಆಕಾಶ, ಮೋಡಗಳು ಮತ್ತು ಗಾಳಿಯ ದಿಕ್ಕು ಹೀಗೆ ಇವುಗಳ ಬಗ್ಗೆಯೂ ಕೂಡ ಹಿರಿಯರಿಗೆ ಅರಿವಿತ್ತು. ನಾವು ಈಗ ಬರೆಯುವ ನಮ್ಮ ದೇಶದ ಈ ಎಲ್ಲ ಗುಣ ಲಕ್ಶಣಗಳನ್ನು ನಮ್ಮ ಹಿರಿಯರು ಅರಿತಿದ್ದರು. ಅದಕ್ಕೆ ಸಾಕ್ಶಿ ಎನ್ನುವಂತೆ ಈಗಲೂ ಬಳಕೆಯಲ್ಲಿರುವ ಹಿಂದಿನವರು ಕಟ್ಟಿ ಬೆಳೆಸಿದ ಈ ನೀರಿನ ಸೆಲೆಗಳು.

ಕಲ್ಲಿನಲ್ಲಿ ಕಡೆದ ತೆಗ್ಗಿನಲ್ಲಿ ನೀರು ಕೂಡಿಡುವ ಪರಿ, ಸಹಜವಾಗಿ ಪ್ರಕ್ರುತಿಯಲ್ಲಿ ದೊರೆಯುವ ಹಲವು ಮೂಲಗಳನ್ನು ಬಳಸಿ ಕಟ್ಟಿದ ನೀರಿನ ಏರ‍್ಪಾಡುಗಳು ಹೀಗೆ ಬಾರತದಾದ್ಯಂತ ಅಲ್ಲಲ್ಲಿನ ವಾತಾವರಣಕ್ಕನುಗುಣವಾಗಿ ಹಲವು ರೂಪದ ನೀರಿನ ಏರ‍್ಪಾಡುಗಳು ಜೀವ ಪಡೆದಿವೆ. ಬನ್ನಿ, ಮುಂದಿನ ಬರಹಗಳಲ್ಲಿ ಈ ನೀರಿನ ಸೆಲೆಗಳ ಹಿರಿಮೆ ಮತ್ತು ಅರಿಮೆಯನ್ನು ಅರಿಯೋಣ.

(ಮಾಹಿತಿ ಸೆಲೆ: fao.org, metdweather, wikipedia)

(ಚಿತ್ರ ಸೆಲೆ: highwayonlyway.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: