ಮಕ್ಕಳಿಗೆ ಬೇಕು ಮಕ್ಕಳದ್ದೇ ಕಲಿಯರಿಮೆ

ಅಮರ್.ಬಿ.ಕಾರಂತ್.

our_children_are_the_biggest_strength_of_our_country_Manmohan_Singh_independence_day_speech

ಮಕ್ಕಳಿಗೆ ಬೇಕು ಮಕ್ಕಳದ್ದೇ ಕಲಿಯರಿಮೆ (Science of Education). ಇದು, ನನ್ನೊಂದಿಶ್ಟು ನಾಳುಗಳ ಮಕ್ಕಳ ಒಡನಾಟದಿಂದ ಮೂಡಿದ ಒಣರಿಕೆ.

ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಒರೆಗಳಿಲ್ಲದೆ (exams), ಇದ್ದರೂ ಕಣ್ಕಟ್ಟಿಗೆ ನಡೆಸಿ, ಯಾವ ತಿಳಿವನ್ನೂ ಅಳೆದು ತೂಗದೆ ಮೇಲೇರಿಸುವ (promote) ಏರ‍್ಪಾಡು ಒಂದೆಡೆ ನಮ್ಮ ಮಕ್ಕಳನ್ನು ಹಾಳುಗೆಡವುತ್ತಿದೆ. ಇನ್ನೊಂದೆಡೆ, ಇರುವ ಅರಿವಿನ ಅಳತೆಗೋಲುಗಳು ಮಕ್ಕಳನ್ನು ಒಮ್ಮೊಮ್ಮೆ ಕೆಡುಪೋಟಿಗೆ (Bad competition) ದೂಡುತ್ತವೆ, ಇನ್ನೊಮ್ಮೆ ಕೀಳರಿಮೆಗೆ ನೂಕುತ್ತವೆ, ಮತ್ತೊಮ್ಮೆ ತನ್ನ ಇಡೀ ಕಲಿಬಾಳ್ವೆಯನ್ನು ಕತ್ತಲಲ್ಲಿ, ಬೆಪ್ಪಿನಲ್ಲಿ ಕಳೆಯುತ್ತಿದ್ದೇವೇನೋ ಎಂಬ ಉನ್ನಿಕೆಗೆ ತಳ್ಳುತ್ತವೆ. ಇವುಗಳ ತೊಲಗಿಕೆ ಬರೇ ಒಂದಿಶ್ಟು ಬೆರಳೆಣಿಕೆಯ ಮಾಳಳವುಳ್ಳ (creativity) ಕಲಿಸುಗರ ಕಯ್ಯಲ್ಲಿಲ್ಲ. ಅವರ ಬದಗು (service), ಮುಡಿಪುಗಳ ನಡಿಗೆಗಳನ್ನೇ ಆಂತಬೇಕಾಗಿಲ್ಲ. ಬೇಕಾಗಿರುವುದು, ಕಲಿಯೇರ‍್ಪಾಡಿನ ತಿರುಳು-ಮಾರ‍್ಪುಗೆ (fundamental change).

ಇದರ ಕುರಿತು ಆರಯ್ಯುವ ಮೊದಲು, ಈಗಿನ ಕಲಿಯೇರ‍್ಪಾಡಿನ ತೊಡಕುಗಳ ಸೀಳುನೋಟವನ್ನು ನಿಮಗೆ ಒದಗಿಸುವೆ.

1. ಒರೆಗಳಿಲ್ಲದೆ (exams) ಇಲ್ಲವೇ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ನಡೆಯುವ ಮೇಲೇರಿಸುವಿಕೆಯಿಂದ ಒಂದು ಮಗು, ತಾನು ಏನು ಕಲಿಯದಿದ್ದರೂ ನಡೆಯುತ್ತದೆ ಎಂಬ ಅನ್ನಿಸಿಕೆ ಚಿಕ್ಕ ಹರೆಯದಲ್ಲೇ ಬರುತ್ತದೆ. ಹತ್ತನೇ ತರಗತಿಗೆ ಬರುವಶ್ಟರಲ್ಲಿ ಆ ಅನ್ನಿಸಿಕೆ ಆಳವಾಗಿ ಅದರ ಬಗೆಯಲ್ಲಿ ಬೇರು ಬಿಟ್ಟು ಕೂತಿರುತ್ತದೆ. ಇದನ್ನು ಒಂದು ಏಡಿನಲ್ಲಿ ತಿದ್ದಿ ತೀಡುವುದು ಆಗುವ ಕೆಲಸವಲ್ಲ.

2. ಉರುಹೊಡೆಯುವ ಬಗೆಯನ್ನು ಮೊದಲು ಕಲಿಸಿ, ಆಮೇಲೆ ಕಲಿಕೆಯ ಉಳಿದ ಬಗೆಗಳಾದ ನೋಡಿತಿಳಿ ಕಲಿಕೆ (Observatory learning), ಉನ್ನಿಗಲಿಕೆ (Imaginative learning), ಮಾಳಳವು ಕಲಿಕೆಗಳಿಗೆ (creative learning) ಒತ್ತುಕೊಡಲಾಗುತ್ತದೆ. ಇದು ಕಲಿವಳಿಯಲ್ಲಿನ (path of learning) ತಪ್ಪು ಹೆಜ್ಜೆಯೆಂದೇ ನನ್ನ ಅನ್ನಿಸಿಕೆ.

3. ಕಲಿಮನೆಯ ಹೆಚ್ಚಿನ ಒರೆಗಳು ಉರುಹೊಡೆದು ಒಪ್ಪಿಸುವ ಬಗೆಗೆ ಹೆಚ್ಚು ಹತ್ತಿರವಿರುವುದರಿಂದ, ಮಗು ಬೆಳೆಯುತ್ತ, ಎಲ್ಲಾ ಕಲಿವಳಿಗಳಲ್ಲಿ ಉರುಹೊಡೆಯುವುದೇ ಕಾಪಿನದ್ದು ಎಂದು ಅರಿವಿಲ್ಲದಂತಯೇ ತೀರ‍್ಮಾನಕ್ಕೆ ಬರುತ್ತದೆ. ತನ್ನದೇ ಈ ತೀರ‍್ಪಿನಿಂದ ಆ ಮಗುವಿನ ಮಾಳಳವುತನ ನೆನೆಗುದಿಗೆ ಬಿದ್ದಂತೆ. ಇದಲ್ಲದೇ, ಎಲ್ಲಾ ಮಕ್ಕಳಿಗೂ ಒಂದೇ ಬಗೆಯ ಒರೆಯಿರುವುದರಿಂದ ಎಲ್ಲರನ್ನೂ ಒಂದೇ ತೂಗುಯ್ಯಾಲೆಯಲ್ಲಿ ಅಳೆದು, ಅವರ ಹಲಜಾಣ್ಮೆಗಳನ್ನು ಹೊಸಕಿದಂತಾಗುತ್ತದೆ.

4. ಮಕ್ಕಳಿಗೆ ಹುರುಳುಗಳನ್ನು “ಹೇಳಿಕೊಡು”ವುದೇ ಕಲಿಕೆಯೆಂಬ ನಿಲುವು ಹೆಚ್ಚಿನ ಕಲಿಸುಗರಲ್ಲೂ, ಮಿಗಿಲಾಗಿ ಕಲಿಕೆಯ ಹಮ್ಮುಗೆಯನ್ನು ಅಣಿಗೊಳಿಸುವವರಲ್ಲೂ ಇದೆ.

5. ಎಲ್ಲದಕ್ಕಿಂತ ಅರಿದಾಗಿ, ಮಗುವಿಗೆ ತಾನೇಕೆ ಕಲಿಮನೆಗೆ ಬರುತ್ತಿದ್ದೇನೆ ಎಂಬ ಅರಿವೇ ಇರುವುದಿಲ್ಲ. ಆ ಅರಿವಿನ ಬೇಹ (need), ಏಳು ಇಲ್ಲ ಎಂಟನೇ ತರಗತಿಯವರೆಗೆ ಅಶ್ಟು ಅರಿದಾಗಿ ಕಾಣದಿದ್ದರೂ, ಒಂಬತ್ತು, ಹತ್ತು ತಲುಪುತ್ತಿದ್ದಂತೆ, ನಾನೇಕೆ ಕಲಿಮನೆಗೆ ಬರುತ್ತಿದ್ದೇನೆ ಎಂಬ ಗುರಿನೋಟ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆಡಳಿತದ ಕಲಿಕವಲು (Department of Education) ಹೆಚ್ಚು ಬಗೆಯೊತ್ತು ನೀಡಿದಂತೆ ಕಾಣುತ್ತಿಲ್ಲ.

6. ತಾಯ್ನುಡಿಯಲ್ಲಿ ಸುಳುವಾಗಿ ಕಲಿಯುವ, ಕಲಿತದ್ದನ್ನು ಉಲಿಯುವ ಅವಕಾಶ ಸಿಗದಿರುವುದು, ಕಲಿಕೆಯ ಸೋಲಿನ ಕಾರಣಗಳಲ್ಲಿ ಮೇಲಿನ ಎಲ್ಲಾ ತಿಳಿಯೊಟ್ಟುಗಳಶ್ಟೇ (points) ಅರಿದಾದದ್ದು.

ಇವಿಶ್ಟಲ್ಲದೆ, ಬಲ್ಲಿದ (rich) ಕಲಿಮನೆಗಳ ಎದುರು ಬಡಕಲಿಮನೆಗಳು, ನಾಡಾಡಳಿತಕ್ಕೊಳಪಟ್ಟ ಕಲಿಮನೆಗಳು ತಲೆಬಗ್ಗಿಸಿ ನಿಂತಂತೆ ಕಾಣುತ್ತವೆ. ಈ ಗೊತ್ತುಪಾಡಿಗೆ (situation) ದೂಸರುಗಳಂತೆ (reason) ಎದ್ದುಕಾಣುವವು ಎರಡು. ಮೊದಲನೆಯದಾಗಿ, ಹೆಚ್ಚು ಹಣವಿದ್ದಶ್ಟು ಬೆಲೆಬಾಳುವ ಚಳಕಗಳನ್ನು (technology), ಕಲಿಕೆಯ ಹೊಸಬಗೆಗಳನ್ನು “ಕೊಂಡು” ತಂದು, ಮಕ್ಕಳ ಮೆದುಳೊಳಗೆ ತುರುಕಿದರೂ, ಈ ಊಕ (effort) ಹಲವುಸಲ ಒಳ್ಳೆಯ ದೊರೆತಗಳನ್ನೇ (results) ನೀಡಿವೆ. ಎರಡನೆಯದಾಗಿ, ಹೆಚ್ಚು ಹಣವುಳ್ಳ ಕಲಿಮನೆಗಳಿಗೆ ಹೆಚ್ಚು ಕಲಿಸುಗರನ್ನು ಆರಿಸುವ, ಒಳ್ಳೆಯ ಕಟ್ಟಡಗಳನ್ನು ಕಟ್ಟುವ, ಇಡೀ ಕಲಿಮನೆಯೇರ‍್ಪಾಡನ್ನು ಒಪ್ಪವಾಗಿ ಕಾಪಾಡುವ ಕಸುವಿರುತ್ತದೆ.

ಆದರೆ, ಬಡಕಲಿಮನೆಗಳಲ್ಲಿ ಹಣದ ಕೊರತೆ ಎದ್ದುಕಂಡರೆ, ನಮ್ಮ ನಾಡಾಡಳಿತ ಕಲಿಮನೆಗಳಲ್ಲಿ ಅರಿದುತನದ (seriousness) ಕೊರತೆ ಎದ್ದುಕಾಣುತ್ತದೆ. ಆದರೆ, ಇದು ತೋರ್-ಹೊಳಪಶ್ಟೇ (outside shine), ಇಲ್ಲವೇ ತೋರ್-ಬೇರ‍್ಮೆಯಶ್ಟೇ. ಒಳಗೆ ಹೆಚ್ಚುಕಡಿಮೆಯೆಲ್ಲಾ ಒಂದೇ. ಎತ್ತುಗೆಗಾಗಿ, ಹೆಚ್ಚು ಹಣತೆತ್ತು ಕಲಿತವ “ನೆಲ ನೇಸರನ ಸುತ್ತ ತಿರುಗುತ್ತದೆ” ಎಂದು ಅರಿತಿರುತ್ತಾನೆ. ಬೇರೆ ಕಲಿಮನೆಗಳ ಒಂದಿಶ್ಟು ಕಲಿಗರು ಆ ಪದಗಳನ್ನು ಓದಲೂ ತೊಡರುತ್ತಿರುತ್ತಾರೆ, ಹೇಳಿದ್ದನ್ನು ಕೇಳಿ “ಉರು”ಹೊಡೆಯಲೂ ಸೋಲುತ್ತಿರುತ್ತಾರೆ.

ಆದರೆ, ನೆಲದ ಗುಂಡನ್ನು, ನೇಸರನ ಉದ್ದಗಲವನ್ನು, ನಡುತೆರಪಿನ (inter distance) ಅಳತೆಯನ್ನು, ಬಾನ್ಕಡಲ ಬೊಂಬಾಳದಲ್ಲಿ (vastness) ತನ್ನ ಇರುವಿಕೆಯ ಬೆಲೆಯನ್ನು ಲೆಕ್ಕಿಸದೆ, ಲೆಕ್ಕವಿಲ್ಲದಶ್ಟು ಏಡುಗಳಿಂದ ತಮ್ಮ ಎಂದಿನ ಕೆಲಸಗಳನ್ನು ಬೇಸರವಿಲ್ಲದೆ ಮಾಡುತ್ತಿರುವ ಬಾನೊಡಮೆಗಳನ್ನು (celestial bodies) ಉನ್ನಿಸಲು (imagine) ತಡಕಾಡಿ, ಬೆಕ್ಕಸಬೆರಗಾಗಿ ಸೊಮ್ಮುಗೊಳ್ಳುವುದು, ಈ ಎರಡು ಬಗೆಯ ಕಲಿಗರಲ್ಲೂ ನಡೆದಿರುವುದಿಲ್ಲ. ಹಾಗಾಗಿ, ಹತ್ತನೇ ತರಗತಿಯವರೆಗೆ “ನೆಲ ಗುಂಡಗಿದೆ” ಎಂದು “ಗೊತ್ತಿ”ದ್ದರೂ, “ಮಕ್ಳಾ, ನೆಲ ಗುಂಡಗಿದ್ರೆ ನಾವೆಲ್ಲಾ ತಲೆಕೆಳಗಾಗಿ ಬೀಳ್ಬೇಕಲ್ವಾ?” ಎಂಬ ಕೇಳ್ವಿ ಅವರ ಬಗೆಯಲ್ಲೆಂದೂ ಸುಳಿದಿರುವುದಿಲ್ಲ.

ಕಲಿಕೆ ಏರ‍್ಪಾಡಿನ ಕೊರತೆಯ ಕೊಗೆತದಲ್ಲಿ (description) ನಾವು ಇಶ್ಟೊತ್ತು ಬರೇ ಕಲಿಗ, ಕಲಿಮನೆ, ಕಲಿಸುಗ, ಕಲಿಕೆಯ ಹಲಬುಗಳ (varieties) ಬಗ್ಗೆ ನೋಡಿದ್ದೇವೆ. ಆದರೆ, ಒಮ್ಮೆ ಓರಿನೋಡಿ. ಒಂದು ಮಗು, ತನ್ನ ಎಳೆತನವನ್ನು ಹೆಚ್ಚು ಕಳೆಯುವುದು ಎಲ್ಲಿ? ಕಲಿಮನೆಯಲ್ಲೇ? ಇಲ್ಲ! ಅದರ ಮನೆಯಲ್ಲಿ. ಹೆತ್ತವರ ಇಲ್ಲ ಸಾಕುಗರ ಪೊರೆಯಲ್ಲಿ. ಬಿಟ್ಟರೆ, ತನ್ನ ಮನೆಯ ಸುತ್ತಣದ ಒಡನಾಟದಲ್ಲಿ. ಹೀಗಿರುವಾಗ, ಒಂದು ಮಗುವಿನ ಕಲಿಕೆಯನ್ನು ಬರೀ ಕಲಿಮನೆಗಶ್ಟೇ ಕಟ್ಟಿಹಾಕಲು ಬರುತ್ತದೆಯೇ? ನಿಜವಾಗಿಯೂ ಇಲ್ಲ. ಕಲಿಮನೆಯಲ್ಲಿ ಕಲಿತದ್ದೆಲ್ಲವನ್ನೂ ಆ ಮಗು, ಮನೆಗೆ ತೆರಳಿ ಮರೆತುಹೋಗುವಂತಾದರೆ, ಮರುನಾಳು ಮರಳಿ ಕಲಿಮನೆಗೆ ಬಂದಾಗ ಹಿನ್ನಾಳು ಕಲಿತದ್ದನ್ನೇ ಮತ್ತೆ ಹೊಸದಾಗಿ ಕಲಿಯುವಂತಾದರೆ? ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೂ ಹೀಗೇ ಆದರೆ? ಹತ್ತನೆಯ ತರಗತಿಯಲ್ಲಿದ್ದರೂ ಲೆಕ್ಕದ ಒಂದು ಸರಳ ಬಗೆತನವನ್ನೂ ಮಾಡಲು ಬರದಿದ್ದರೆ? ಕನ್ನಡ, ಇಂಗ್ಲೀಶು ಬರಿಗೆಗಳನ್ನು (letter) ಓದಲೂ ಸರಿಯಾಗಿ ಬರದಿದ್ದರೆ!?

ಇಂತಹ ಸೋಜಿಗವನ್ನೆಲ್ಲಾ ಕಂಡೇ ನಾನು, “ಮಕ್ಕಳಿಗೆ ಬೇಕು ಮಕ್ಕಳದ್ದೇ ಕಲಿಯರಿಮೆ” ಎಂಬ ನಿಲುವಿಗೆ ಬಂದಿದ್ದು. ಮಕ್ಕಳದ್ದೇ ಕಲಿಯರಿಮೆಯೆಂದರೇನು? ನನ್ನ ಮಾರ‍್ನುಡಿಗಳಿವು.

1. ಕಲಿಕೆಯ ಏರ‍್ಪಾಡನ್ನು, ಮಕ್ಕಳ ಬೆಳವಣಿಗೆಯ ಸುತ್ತಣದ ಎಲ್ಲಾ ಆಯಗಳನ್ನು ಬಗೆಯಲ್ಲಿಟ್ಟು ಹೆಣೆಯಬೇಕಾಗುತ್ತದೆ. ಅರಿದಾಗಿ, ಮಕ್ಕಳ ಮನೆಯೊಳಗಿನ ಹಾಗು ಮನೆಯ ಸುತ್ತಮುತ್ತಲಿನ ಗೊತ್ತುಪಾಡುಗಳ (situation) ಅರಿವೂ, ಆ ಏರ‍್ಪಾಡಿನಲ್ಲಿರಬೇಕಾಗುತ್ತದೆ. ಬೇರೆ ಬೇರೆ ಬಗೆಯ ಗೊತ್ತುಪಾಡುಗಳಿಗೆ ತಕ್ಕಂತೆ ಕಲಿಕೆಯ ಬಗೆಗಳನ್ನು ಮಾರ‍್ಪಡಿಸುವ ಹಕ್ಕನ್ನೂ, ಬಿಡುತೆಯನ್ನೂ (freedom) ಕಲಿಸುಗರಿಗೆ ನೀಡಬೇಕಾಗುತ್ತದೆ.  ಆಡಳಿತದ ಕಲಿಕವಲು, ಕಲಿಹಮ್ಮುಗೆಯನ್ನು ಹೆಣೆಯುವಾಗಲೇ ಇವೆಲ್ಲವನ್ನು ಲೆಕ್ಕಕ್ಕೆತೆಗೆದುಕೊಂಡು ಇಟ್ಟಳವನ್ನು (structure) ಕಟ್ಟಬೇಕಾಗುತ್ತದೆ. ಅಲ್ಲದೇ, ಇವೆಲ್ಲಾ ಹಿನ್ನೆಲೆಯನ್ನೊಳಗೊಂಡ ಮಕ್ಕಳ ಏಳಿಗೆ/ಇಳಿಗೆಯಲ್ಲಿ ಬರೀ ಕಲಿಸುಗರನ್ನಶ್ಟೇ ಹೊಣೆಗಾರರನ್ನಾಗಿ ಮಾಡದೆ, ನಾಡಾಡಳಿತವೂ ಹೊಣೆಹೊತ್ತು, ಕಲಿಸುಗರೊಡನೆ ಆರಯ್ದು (discuss), ತೊಡಕುಗಳನ್ನು ಬಗೆಹರಿಸಬೇಕು.

2. ಒಂದನೇ ತರಗತಿಯಿಂದಲೇ, “ಬೇಕಾದ ತಿಳಿವು” (Required Knowledge) ಹಾಗು “ಬೇರಾದ ತಿಳಿವು” (Specialized Knowledge) ಎಂಬ ಎರಡು ಬಗೆಯ ಕಲಿಕೆಯ ಕವಲುಗಳನ್ನು ಅಳವಡಿಸಿಕೊಂಡರೆ ಚಂದ. ಬೇಕಾದ ತಿಳಿವಿನಲ್ಲಿ, ಈ ಹೊತ್ತಿಗೆ ತಕ್ಕಂತೆ, ಬೆಳೆಯುವ ಎಲ್ಲ ಮಕ್ಕಳೂ ತಿಳಿಯಲೇ ಬೇಕಾದ ಕಡುಕಡೆಯ (minimum) ತಿಳಿಮೆಯನ್ನು ಕಲಿಸಬೇಕು. ಎತ್ತುಗೆಗಾಗಿ, ಲೆಕ್ಕದ ಕೂಡು, ಕಳೆ, ಬಗೆತಗಳು; ಅರಿಮೆ ಹಾಗು ಚಳಕದ ಕಿರುನೋಟ; ತಾಯ್ನುಡಿ ಹಾಗು ಇಂಗ್ಲೀಶಿನ ಬರಿಗೆ, ಪದ, ಸೊಲ್ಲುಗಳ ಓದು, ಬರೆಯುವಿಕೆ; ನಮ್ಮ ಕೂಟದ (society) ಏರ‍್ಪಾಡಿನ ಹಳಮೆ, ಇರುಮೆಗಳ ಮುನ್ನೋಟ; ಹೀಗೆ ಹಲವು. ಬೇರಾದ ತಿಳಿವಿನಲ್ಲಿ, ಮಕ್ಕಳ ಕಳಕಳಿಯನ್ನೂ, ಹುಟ್ಟುಜಾಣ್ಮೆಯನ್ನು (talent) ಗುರುತಿಸಿ, ಅದಕ್ಕೆ ತಕ್ಕಂತೆ “ಒಗ್ಗಿಸಿದ ಕಲಿಹಮ್ಮುಗೆ”ಯನ್ನು (Customized Education Program) ಹೆಣೆಯಬೇಕು. ಈ ಕಲಿಕೆಯು, “ಬೇಕಾದ ತಿಳಿವಿ”ನಶ್ಟೇ ತೂಕವನ್ನು ಪಡೆಯಬೇಕು. ಒಟ್ಟಾರೆಯಾಗಿ ಒಂದು ಮಗು, ಏಳೋ ಎಂಟೋ ತರಗತಿಗೆ ಬರುವ ಹೊತ್ತಿಗೆ, ಅದರ ಕಲಿಕೆ ಹಾಗು ಹುಟ್ಟಳವಿನ (talent) ಇಡಿಯಡರ‍್ಪು (complete image) ಕಲಿಸುಗರಲ್ಲಿ, ಸಾಕುಗರಲ್ಲಿ ಇರಲೇಬೇಕು.

3. ಕಲಿಸು ಎಂಬ ಪದಕ್ಕೆ “ಹೇಳಿಕೊಡು” ಎಂದು ಮರುಹೆಸರಿಸದೆ, ಕಲಿಕೆಯ ಬೇರೆ ಬೇರೆ ಕವಲುಗಳಿಗೆ ಅವುಗಳಿಗೇ ಹೊಂದಿಕೊಳ್ಳುವಂತ ಕಲಿಹಮ್ಮುಗೆಗಳನ್ನು ಕಟ್ಟಬೇಕು. ಎತ್ತುಗೆಗಾಗಿ, ಅರಿಮೆ ಕವಲಿನ ಕಲಿಕೆಯಲ್ಲಿ, ಮೊದಲು ಗಮನಿಸು, ಬಳಿಕ ಕೇಳ್ವಿ ಕೇಳು, ಆಮೇಲೆ ಉನ್ನಿಸು, ಕೊನೆಯದಾಗಿ ಗೊತ್ತಿರುವ ಹುರುಳುಗಳನ್ನು (ಓದಿಕೆ ತಿರುಳಿನಲ್ಲಿರುವ (syllabus) ಹುರುಳುಗಳು) ಕಲಿ. ಈ ಕೊನೆಯ ಪಸುಗೆಯಲ್ಲಶ್ಟೇ (section) “ಹೇಳಿಕೊಡು”ವ ಕೆಲಸವನ್ನು ಮಾಡಬಹುದು. ಈ ಎಲ್ಲಾ ಕಲಿಬಗೆಗಳಿಗೆ ನೆರವಾಗುವಂತೆ, ತಕ್ಕ ಚಳಕವನ್ನೂ ಬಳಸಬಹುದು.

4. ಇವೆಲ್ಲವನ್ನು ಸುಳುವಾಗಿ ಮಕ್ಕಳ ತಾಯ್ನುಡಿಯಲ್ಲೇ ಕಲಿಸಬೇಕು. ಆ ಕಲಿಕೆಯ ಸರಕುಗಳು ಸರಿಹೊತ್ತಿಗೆ, ಪರಿಚೆಗೆಡದೆ (quality) ಕಲಿಸುಗರಿಗೆ ಒದಗಬೇಕು. ಹಾಗೆಯೇ, ಕಲಿಸುಗರೂ ನಲಿವಿನಿಂದ ಕಲಿಸಲು, ಅವರ ನೇರ‍್ಪಾದ (necessary) ಬೇಡಿಕೆಗಳನ್ನು ನಾಡಾಡಳಿತ ಈಡೇರಿಸಬೇಕು. ಕಲಿಮನೆಯ ಅಡಿಯಿಟ್ಟಳವೂ (infrastructure) ಚೆನ್ನಾಗಿರಬೇಕು.

ಮೇಲ್ಕಂಡ ಹಲವು ದಾರಿಗಳಿಂದ ಕಲಿಯೇರ‍್ಪಾಡು ನೂರಕ್ಕೆ ನೂರು ಸರಿಯಾಗದಿದ್ದರೂ (ನೂರಕ್ಕೆ ನೂರು ಏನೂ ಆಗದು ಎಂಬುದು ಬೇರೆ ಮಾತು), ಈಗಿನ ಏರ‍್ಪಾಡಿಗಿಂತ ಹೆಚ್ಚಿನ ಮಟ್ಟವನ್ನು ತಲುಪಿ, ಮಕ್ಕಳು ಯಾವ ಪೋಟಿಯೊತ್ತಡಕ್ಕೂ ಗುರಿಯಾಗದೆ, ನೆಮ್ಮದಿಯಿಂದ ಬೆಳೆಯುತ್ತಾರೆ ಎಂಬ ನಂಬಿಕೆ ನನಗಿದೆ. ನಿಮಗೆ?

(ತಿಟ್ಟಸೆಲೆ: http://blog.akshayapatra.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *