“ನನಗೆ ಹಾಗೆ ಕಾಣಿಸುತ್ತಿಲ್ಲ”

– ಪ್ರಕಾಶ ಪರ‍್ವತೀಕರ.

stranger

ಒಮ್ಮೆ ಪರಗ್ರಹದಿಂದ ಓರ‍್ವ ವ್ಯಕ್ತಿ ಬೂಮಿಗೆ ಬಂದಿಳಿದ. ಆತನಿಗೆ ಆಲದ ಮರದ ಕೆಳಗೆ ದ್ಯಾನದಲ್ಲಿ ಮಗ್ನನಾದ ತತ್ವಜ್ನಾನಿಯೋರ‍್ವನ ಬೇಟಿಯಾಯಿತು. ಬೇರೆ ಲೋಕದಿಂದ ಬಂದ ಈ ವ್ಯಕ್ತಿಗೆ ಬೂಲೋಕದಲ್ಲಿರುವ ವಸ್ತುಗಳನ್ನು ಹಾಗೂ ವಾಸಿಸುತ್ತಿರುವ ಜೀವಿಗಳನ್ನು ಪರಿಚಯ ಮಾಡಿಕೊಡಲು, ತತ್ವಜ್ನಾನಿ ಆತನನ್ನುಕರೆದುಕೊಂಡು ಕಾಡಿಗೆ ಹೊರಟ. ಕಾಡಿನ ತುಂಬ ಹರಡಿರುವ ನಾನಾ ನಮೂನೆಯ ಮರಗಳನ್ನು ಕಂಡು ಆ ವ್ಯಕ್ತಿ ಆಶ್ಚರ‍್ಯಚಕಿತನಾಗಿ “ಇವರೆಲ್ಲ ಯಾರು ?ಎಂದು ಪ್ರಶ್ನಿಸಿದ.

“ಇವೆಲ್ಲಾ ಗಿಡ ಮರಗಳು. ಇವುಗಳಲ್ಲಿ ಜೀವವೇನೋ ಉಂಟು.ಆದರೆ ಜಡತ್ವ ತುಂಬಿದ ಇವುಗಳಲ್ಲಿ ಏಕತಾನತೆ ಇದ್ದುದರಿಂದ ಇವುಗಳಲ್ಲಿ ನೀವು ಆಕರ‍್ಶಣೆ ಕಾಣಲಾರರಿ”

“ಅದರ ಬಗ್ಗೆ ನನಗೆ ತಿಳಿಯದು.ಆದರೆ ಅವರು ಸಬ್ಯ ವರ‍್ತನೆಯವರು ಎಂದು ಕಾಣಿಸುತ್ತದೆ.ಇವರು  ಮಾತಾಡಬಲ್ಲರೆ?”

“ಇಲ್ಲ ಸ್ವಾಮಿ ಮಾತನಾಡುವ ಪ್ರಕ್ರಿಯೆಯಿಂದ ಇವರು ವಂಚಿತರಾಗಿದ್ದಾರೆ”

“ ಹೌದೇ? ಆದರೆ ನನಗೆ ಮದುರವಾದ ಸಂಗೀತ ಕೇಳಿ ಬರುತ್ತಿದೆ”

ಆಗ ತತ್ವಜ್ನಾನಿ ನುಡಿದ, “ಹಾಗೇನಿಲ್ಲ. ಎಲೆಗಳ ಮದ್ಯದಿಂದ ಗಾಳಿ ತೂರಿ ಸಂಗೀತವಾದಂತೆ ನಿಮಗೆ ಬಾಸವಾಗುತ್ತದೆ ಅಶ್ಟೆ. ಸಂಗೀತ ವಾದ್ಯಗಳು ಇದೇ ತತ್ವದ ಆದಾರದ ಮೇಲೆ ಹುಟ್ಟಿಕೊಂಡಿವೆ”

“ದಯವಿಟ್ಟು ಕ್ಶಮೆ ಇರಲಿ. ನನಗೆ ಇದರ ಬಗ್ಗೆ ತಿಳಿಯದು.ಈ ಮರಗಳು ಈಗ ಏನು ಯೋಚನೆ ಮಾಡುತ್ತಿರಬಹುದು ಎಂಬುದರ ಬಗ್ಗೆ ಕುತೂಹಲ ನನಗಿದೆ”

“ಆದರೆ ಅವುಗಳಿಗೆ ವಿಚಾರ ಮಾಡುವ ಶಕ್ತಿಯೇ ಇಲ್ಲ?”

“ ಹೌದಾ,ಇದು ಬಲು ವಿಚಿತ್ರವಾಗಿದೆ”. ಹೀಗೆ ನುಡಿಯುತ್ತ ಆ ವ್ಯಕ್ತಿ ಒಂದು ಮರದ ಕೊಂಬೆಯ ಮೇಲೆ ಕೈ ಇಟ್ಟು, “ ಈ ಜನರು ನನಗೆ ತುಂಬಾ ಮೆಚ್ಚುಗೆಯಾಗಿದ್ದಾರೆ”

“ಆದರೆ ಮೂಲತಹ ಇವರು ಮನುಶ್ಯರೇ ಅಲ್ಲ ಸ್ವಾಮಿ” ಎಂದು ನುಡಿಯುತ್ತ ತತ್ವಜ್ನಾನಿ ಬೇರೆ ಲೋಕದ ವ್ಯಕ್ತಿಯನ್ನು, “ಬನ್ನಿ ಸ್ವಾಮಿ ಇನ್ನು ಬೇರೆಕಡೆಗೆ ಹೋಗೊಣ” ಎಂದು ಅವನನ್ನು ಹುಲ್ಲು ಮಾಳಕ್ಕೆ ಕರೆದುಕೊಂಡು ಬಂದ. ಅಲ್ಲಿ ಆಕಳುಗಳು ಹುಲ್ಲನ್ನು ಮೇಯುತ್ತಿದ್ದವು.

“ಈ ಮನುಶ್ಯರು ತುಂಬಾ ಕೊಳಕು”, ಆ ವ್ಯಕ್ತಿ ನುಡಿದ.

“ಇವರು ಮನುಶ್ಯರಲ್ಲ. ಆದರೆ ಸಬ್ಯ ಜೀವಿಗಳು” ತತ್ವಜ್ನಾನಿ ಅವುಗಳ ಬಗ್ಗೆ ವಿವರಣೆ ನೀಡಲು ಯತ್ನಿಸಿದ.

“ಆದರೆ ಆ ಮರಗಳಲ್ಲಿ ಹಾಗು ಈ ಪ್ರಾಣಿಗಳಲ್ಲಿ ನನಗೆ ಯಾವದೇ ಅಂತರ ಕಾಣುತ್ತಿಲ್ಲ. ಅಲ್ಲದೇ, ಈ ಜೀವಿಗಳು ಕತ್ತು ಕೂಡ ಮೇಲಕ್ಕೆತ್ತುವದಿಲ್ಲ. ಕಾರಣವೇನು?”

“ಮುಕ್ಯವಾಗಿ ಈ ಪ್ರಾಣಿಗಳ ಆಹಾರ ಹುಲ್ಲು. ಹುಲ್ಲಿನಲ್ಲಿ ಪೌಶ್ಟಿಕಾಂಶ ಕಡಿಮೆ.ರುಚಿಕಟ್ಟಾದ ಹುಲ್ಲನ್ನು ಹುಡುಕುವುದು ಹಾಗು ಅದನ್ನು ಮೇಯುವದರಲ್ಲಿ ಅವುಗಳ ಕಾಲ ಕಳೆಯುತ್ತವೆ. ಹೀಗಾಗಿ ಕತ್ತೆತ್ತಿ ನೋಡಲಿಕ್ಕೆ, ಸ್ರುಶ್ಟಿ ಸೌಂದರ‍್ಯ ನೋಡಲಿಕ್ಕೆಅವುಗಳಿಗೆ ವೇಳೆಯೇ ಸಾಲದು” ತತ್ವಜ್ನಾನಿ ಸಮಜಾಯಿಶಿ ನೀಡಿದ.

ಆದರೆ ಆ ವ್ಯಕ್ತಿಗೆ ಸಮಾದಾನವಾಗಲಿಲ್ಲ. “ಇವರ ಜೀವನ ಪದ್ದತಿ ಹಾಗಿರಬಹುದು.ಆದರೆ ನನಗೆ ಈ ಮೊದಲು ನೋಡಿದ ಮರಗಳೇ ಮೆಚ್ಚಿಗೆಯಾದವು”

ಹೀಗೆ ಪರಸ್ಪರ ಮಾತಾಡುತ್ತಾ ಅವರು ಒಂದು ಪಟ್ಟಣಕ್ಕೆ ಬಂದರು. ಊರಿನ ಬೀದಿಗಳೆಲ್ಲ ಸ್ತ್ರೀ ಪುರುಶರಿಂದ ತುಂಬಿ ತುಳಕಾಡುತ್ತಿದ್ದವು. “ನನಗೆ ಇವರು ಯಾಕೋ ವಿಲಕ್ಶಣವಾಗಿ ಕಾಣುತ್ತಿದ್ದಾರೆ” ಆ ವ್ಯಕ್ತಿ ನುಡಿದ.

ಆಗ ತತ್ವಜ್ನಾನಿ ಹೆಮ್ಮೆಯಿಂದ, “ಬೂಮಂಡಲದಲ್ಲಿರುವ ಒಂದು ಮಹಾನ್‍ ದೇಶದ ಗೌರವಾನ್ವಿತ ಪ್ರಜೆಗಳು.ಇವರು ಮನುಶ್ಯರು ಸ್ವಾಮಿ”ಎಂದು ನುಡಿದ.

“ನಿಜವಾಗಿಯೂ? ಕ್ಶಮಿಸಬೇಕು, ನನಗೆ ಇವರು ಹಾಗೆ ಕಾಣಿಸುತ್ತಿಲ್ಲ”, ಆ ಪರಗ್ರಹದ ವ್ಯಕ್ತಿ ಶಾಂತಚಿತ್ತನಾಗಿ ನುಡಿದ.

( ಬರಹಗಾರರ ಮಾತು : ಮೂಲ ಬರಹ  – The Distinguished Stranger, ಮೂಲ ಬರಹಗಾರರು – ಆರ್.ಎಲ್. ಸ್ಟೀವನ್ಸನ್ ) 

( ಚಿತ್ರಸೆಲೆ: digicoll.library.wisc.edu

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: