ದುಮ್ಮಿಕ್ಕುವ ವಯ್ಯಾರಿ ವಿಕ್ಟೋರಿಯಾ

ಕಿರಣ್ ಮಲೆನಾಡು.

Image1

ಆಪ್ರಿಕಾ ಪೆರ‍್ನೆಲದ ತೆಂಕಣದ ಬಾಗದಲ್ಲಿನ ಜಿಂಬಾಬ್ವೆ ಮತ್ತು ಜಾಂಬಿಯಾ ನಾಡುಗಳ ಗಡಿಯಲ್ಲಿ ಜಾಂಬೆಸಿ ನದಿಯಿಂದ (Zambezi) ಉಂಟಾದ ಒಂದು ದೊಡ್ಡದಾದ ನೀರಿನ ಅಬ್ಬಿಯೇ ಈ ವಿಕ್ಟೋರಿಯಾ ಅಬ್ಬಿ (Victoria waterfalls). ವಿಕ್ಟೋರಿಯಾ ಅಬ್ಬಿ ನೆಲದ ಮೇಲಿನ ಅಗಲವಾದ ದುಮ್ಮಿಕ್ಕುವ ಅಬ್ಬಿಗಳಲ್ಲೊಂದು.

ಹೆಸರಿನ ಹಿನ್ನೆಲೆ:

ಸ್ಕಾಟ್ಲೆಂಡ್‌ನ ನೆಲದರಕೆಗಾರ ಡೇವಿಡ್ ಲಿವಿಂಗ್‌ಸ್ಟನ್ ( David Livingstone) ಯುರೋಪಿಯನ್ನರಲ್ಲಿ ಮೊದಲಿಗನಾಗಿ ಈ ಅಬ್ಬಿಯನ್ನು 1855ರಲ್ಲಿ ಗುರುತಿಸಿದನು. ಲಿವಿಂಗ್‌ಸ್ಟನ್ ತನ್ನ ನಾಡಿನ ಅರಸಿಯಾದ ವಿಕ್ಟೋರಿಯಾಳ(Queen Victoria) ಮೇಲಿನ ಗೌರವಕ್ಕೆ ಈ ಅಬ್ಬಿಗೆ ವಿಕ್ಟೋರಿಯಾ ಎಂದು ಹೆಸರನ್ನಿಟ್ಟನು. ಜಿಂಬಾಬ್ವೆ ನಾಡು ಅವನ ಈ ಅರಕೆಗೆ ಮನ್ನಣೆ ಕೊಡಲು ಈ ಅಬ್ಬಿಯ ಹತ್ತಿರದ ನಡುಗಡ್ಡೆಗೆ ಡೇವಿಡ್ ಲಿವಿಂಗ್‌ಸ್ಟನ್ ನಡುಗಡ್ಡೆಯೆಂದು (David Livingstone Island) ಹೆಸರಿಟ್ಟಿತು. ಜಾಂಬಿಯಾ ನಾಡಿನಲ್ಲಿ ಇದರ ದಿಟವಾದ ಹೆಸರು ಮೋಸಿ-ಓ-ಟುನ್ಯಾ (Mosi-oa-Tunya) , ಅಲ್ಲಿಯ ನುಡಿಯಲ್ಲಿ ಈ ಹೆಸರಿನ ಹುರುಳು ಗುಡುಗುವ ಹೊಗೆ ಎಂದು. ಈ ಅಬ್ಬಿಯ ಸ್ವಲ್ಪ ಬಾಗವು  ಜಿಂಬಾಬ್ವೆ ನಾಡಿನಲ್ಲಿಯೂ ಇರುವುದರಿಂದ 2013 ರಲ್ಲಿ ಜಿಂಬಾಬ್ವೆ ಕೂಡ ಈ ಅಬ್ಬಿಗೆ ಮೋಸಿ-ಓ-ಟುನ್ಯಾ ಎಂದು ಮರು ಹೆಸರನ್ನಿಟ್ಟಿತು. ಯುನೆಸ್ಕೋ ತಾಣಗಳ ಪಟ್ಟಿಯಲ್ಲಿ ಈ ಅಬ್ಬಿಗೆ ವಿಕ್ಟೋರಿಯ ಮತ್ತು ಮೋಸಿ-ಓ-ಟುನ್ಯಾ ಎಂಬ ಎರಡು ಹೆಸರುಗಳಿಂದ ಕರೆಯುತ್ತಾರೆ.

ಅಗಲವಾದ ನೀರಿನ ಹಾಸಿಗೆಯಂತೆ ದುಮ್ಮಿಕ್ಕುವ ನೀರು ನೆಲವನ್ನು ತಲುಪುವುದರೊಳಗೆ ತುಂತುರು ಹನಿಗಳಾಗಿ ಬೆಳ್ಳಗೆ ಮೇಲೇಳುತ್ತದೆ ಮತ್ತು ನೆಲಕ್ಕೆ ಬೀಳುವ ನೀರು ದೊಡ್ಡದಾಗಿ ಗುಡುಗಿನಂತಹ ಸದ್ದು ಮಾಡುವುದರಿಂದ ಈ ಅಬ್ಬಿಗೆ ಗುಡುಗುವ ಹೊಗೆ (The smoke that thunders) ಎಂಬ ಹೆಸರು ಬಂದಿದೆ. ವಿಕ್ಟೋರಿಯಾ ಅಬ್ಬಿಯ ಜಿಂಬಾಬ್ವೆ ಬದಿಯಲ್ಲಿ ಡೇವಿಡ್ ಲಿವಿಂಗ್‌ಸ್ಟನ್ ಕೆತ್ತನೆಯನ್ನು ನಿಲ್ಲಿಸಲಾಗಿದೆ.

Image2

Image_Victoria

ವಿಕ್ಟೋರಿಯಾ ಅಬ್ಬಿಯ ಹರವು:

ವಿಕ್ಟೋರಿಯಾ ಅಬ್ಬಿಯು ನೆಲದ ಮೇಲಿನ ಅಗಲವಾದ ಒಂದು ಅಬ್ಬಿಯಾಗಿದೆ ಮತ್ತು ಇದು ಅಮೇರಿಕಾದ ನಯಾಗಾರ ಅಬ್ಬಿಯ ಎರಡು ಪಟ್ಟು ಎತ್ತರವಾಗಿದೆ. ವಿಕ್ಟೋರಿಯಾ ಅಬ್ಬಿಯ ಅಗಲ 1708ಮೀ ಮತ್ತು ಎತ್ತರ 108ಮೀ ಉದ್ದಗಲದ ಅಳತೆಯಲ್ಲಿ  ವಿಕ್ಟೋರಿಯಾ ಅಬ್ಬಿಯನ್ನು ತೆಂಕಣ ಅಮೆರಿಕಾದ ಇಗುವಾಜು ಅಬ್ಬಿಗೆ ಹೋಲಿಸಬಹುದು. ಅಬ್ಬಿಯಿಂದ ದುಮ್ಮಿಕ್ಕುವ ಜಾಂಬೆಸಿ ನದಿಯು ಆಳವಿಲ್ಲದೆಡೆ ಗಟ್ಟಿಯಾದ ಕಪ್ಪುಗಲ್ಲುಗಳ (Basalts) ಮೇಲೆ ಅಬ್ಬರಿಸುತ್ತಾ ಮುಂದೆ ಸಾಗುತ್ತದೆ. ಜಾಂಬೆಸಿ ನದಿಯು ಅಬ್ಬಿಗೆ ಹತ್ತಿರವಾದಂತೆ ಅದರ ನದಿಹಾದಿಯಲ್ಲಿ (River Course) ಹಲವಾರು ಮರಗಳಿಂದ ಕೂಡಿದ ನಡುಗಡ್ಡೆಗಳು ಕಾಣಸಿಗುತ್ತವೆ. ಅಬ್ಬಿಯ ಕಣಿವೆಯೊಂದನ್ನು ಬಿಟ್ಟರೆ ನದಿಯ ನೂರಾರು ಕಿಲೋಮೀಟರ್ ಸುತ್ತಮುತ್ತಲು ಯಾವುದೇ ಬೆಟ್ಟಗುಡ್ಡಗಳಿರದ ಬಯಲು. ವಿಕ್ಟೋರಿಯಾ ಅಬ್ಬಿಯು ಹೇಗೆ ಮಾರ‍್ಪಟ್ಟಿದೆಯೆಂದರೆ, ಒಂದೇ ಸಲಕ್ಕೆ 1708ಮೀ ಅಗಲದ ಜಾಂಬೆಸಿ ನದಿಯು ಎದಿರಾಗಿರುವ ಆಳವಾದ ಕಣಿವೆಗೆ ದುಮುಕುತ್ತದೆ! ಹೀಗೆ ಬೀಳುವ ನದಿಯ ನೀರು ಕಣಿವೆಯ ಕರಿಗಲ್ಲಿನ ಕುರುಂಬನ್ನು (Basalt plateau) ಹಲವಾರು ಕೊರಕಲುಗಳನ್ನಾಗಿ (Gorges) ಮಾಡಿದೆ. ಇದರ ಆಳವಾದ ಕಣಿವೆಯನ್ನು ಮೊದಲ-ಕೊರಕು (First-Gorge) ಎಂದು ಕರೆಯುತಾರೆ, ಈ ಕೊರಕು 80ಮೀ. ನಿಂದ 108ಮೀ.ನಶ್ಟು ಆಳವಾಗಿದೆ. ಮೊದಲ-ಕೊರಕಿನಲ್ಲಿ ಬೀಳುವ ನೀರಿನ ಹೊರದಾರಿ 110 ಮೀ ಅಗಲವಾಗಿದೆ ಮತ್ತು ವಿಕ್ಟೋರಿಯಾ ಅಬ್ಬಿಯಲ್ಲಿ ಬೀಳುವ ಹೆಚ್ಚಿನ ನೀರು ಈ ಹೊರದಾರಿಯ (Outlet) ಮೂಲಕವೇ ಹೋಗುತ್ತದೆ.

Image3

ನೆಲದರಿಮೆ ಮತ್ತು ವಿಕ್ಟೋರಿಯಾ:

ಜಾಂಬೆಸಿ ನದಿಯಿಂದ ಉಂಟಾದ ವಿಕ್ಟೋರಿಯಾ ಅಬ್ಬಿಯ ನೀರಿನ ಕೆಳಗಡೆಯಿರುವ ಕರಿಗಲ್ಲಿನ ಹಾಸಿಗೆಯು (Basalt bedrock) ಉರಿಯಡಕಗಳ ಚಟುವಟಿಕೆಗಳಿಂದ (Volcanic Activities) 1.8 ಕೋಟಿ ವರುಶಗಳ ಹಿಂದೆ ಮಾರ‍್ಪಟ್ಟಿತು. ಈ ಕರಿಗಲ್ಲಿನ ಹಾಸಿಗೆಯು ಸುಮಾರು 300ಮೀ ಅಶ್ಟು ದಪ್ಪಗಿದೆ. ತೆಂಕಣ ಆಪ್ರಿಕಾದಲ್ಲಿ 1.5 ಕೋಟಿ ವರುಶಗಳ ಹಿಂದೆ ನೆಲದ ಮೇಲಿನ ಉರುಬು ಮಾರ‍್ಪಾಡು (Geological upheaval) ಹೊಂದುತ್ತಾ ಬಂದಿತು ಮತ್ತು  ಇದರಿಂದಾಗಿ ಜಾಂಬೆಸಿ ನದಿಯು ತನ್ನ ಹರಿವನ್ನು ಬದಲಿಸಿಕೊಂಡಿತು. ಈ ಉರುಬಿನ ಮಾರ‍್ಪಾಟು ಹೊಂದುವ ಮೊದಲು ಹಲವಾರು ಬೇರೆ ನದಿಗಳ ಹರಿವಿತ್ತೆಂದು ಮತ್ತು ಆಗ ವಿಕ್ಟೋರಿಯಾ ಅಬ್ಬಿಯು ಮಾರ‍್ಪಟ್ಟಿರಲಿಲ್ಲವೆಂದು ನೆಲದರಿಗರ ಅನ್ನಿಸಿಕೆ. 1.5 ಕೋಟಿಯಿಂದ 1 ಕೋಟಿ ವರುಶಗಳ ಹಿಂದಿನ ಮಯೋಸೀನ್ ಹೊತ್ತಿನಲ್ಲಿ (Miocene era) ವಿಕ್ಟೋರಿಯಾ ಅಬ್ಬಿಯ ಮೇಲ್ಗಡೆ ಹರಿಯುವ ನದಿಯ ಮಾರ‍್ಪಾಡುಗಳು ಮತ್ತು ಕೆಳಗೆ ಹರಿಯುವ ಮಾರ‍್ಪಾಡುಗಳು ಬದುವನ್ನು (Ridge) ಹುಟ್ಟುಹಾಕಿತು ಇದನ್ನು ಜಿಂಬಾಬ್ವೆ- ಕಲಹರಿ ನಡುಗೆರೆ (Zimbabwe-Kalahari Axis) ಎಂದು ಕರೆಯುತ್ತಾರೆ. ನೆಲದರಿಮೆಯಂತೆ ವಿಕ್ಟೋರಿಯಾ ಅಬ್ಬಿಯು ಕೊರಕಲುಗಳಿಂದ ಮಾರ‍್ಪಟ್ಟಿದೆ.  ಅಬ್ಬಿಯ ಮೇಲ್ಬಾಗದಲ್ಲಿ ಹರಿಯುವ ಜಾಂಬೆಸಿ ನದಿಯು ಕೊರಕಲಿನಿಂದಾದ ಕರಿಗಲ್ಲಿನ ಕುರುಂಬನ್ನು (Basalt plateau ) ಹುಟ್ಟುಹಾಕಿದೆ, ಅಬ್ಬಿಯು ಹುಟ್ಟುವುದಕ್ಕಿಂತ ಮುಂಚೆ ಈ ಕೊರಕಲುಗಳು ಮರಳುಗಲ್ಲಿನಿಂದ (Sand stone) ತುಂಬಿತ್ತು. ದೊಡ್ದದಾದ ಕೊರಕಲುಗಳು ಮೂಡಣ ಬಾಗದಿಂದ ಪಡುವಣ ಬಾಗದವರೆಗೆ ಹಬ್ಬಿವೆ ಮತ್ತು ಚಿಕ್ಕ ಚಿಕ್ಕ ಕೊರಕಲುಗಲು ಬಡಗಣ ದಿಕ್ಕಿನಿಂದ ತೆಂಕಣ ದಿಕ್ಕಿನವರೆಗೆ ಹರಡಿವೆ.  ನದಿಯ ನೀರು ವಿಕ್ಟೋರಿಯಾ ಅಬ್ಬಿಯ ಕೊರಕಲಿಗೆ ಒಂದು ಲಕ್ಶ ವರುಶಗಳಿಂದ ಬೀಳುತ್ತಿದೆಯೆಂದು ನೆಲದರಿಗರ ಅನ್ನಿಸಿಕೆ. ಕಲ್ಲಿನ ಪದರಗಳೆಲ್ಲ ಸಡಿಲವಾದಂತೆ ನೀರಿನ ಹರವು ಹೆಚ್ಚುತ್ತಾ ಹೋಯಿತು ಮತ್ತು ಇನ್ನಶ್ಟು ಕೊರಕಲುಗಳನ್ನು ಹುಟ್ಟುಹಾಕಿತು, ಹೀಗೆ ಜಾಂಬೆಸಿ ನದಿಯ ಮೇಲಿನ ಹರಿವು ಅಗಲವಾಗುತ್ತಾ ಹೋಗಿ ತಾನೇ ಹುಟ್ಟುಹಾಕಿದ ಕೊರಕಲಿಗೆ ಬೀಳತೊಡಗಿ ವಿಕ್ಟೋರಿಯಾ ಅಬ್ಬಿಯು ಮಾರ‍್ಪಟ್ಟಿತು.

ವಿಕ್ಟೋರಿಯಾ ಅಬ್ಬಿಯ ನೆತ್ತಿಯ ಹತ್ತಿರ ಎರಡು ನಡುಗಡ್ಡೆಗಳಿವೆ, ಈ ನಡುಗಡ್ಡೆಗಳು ನೆರೆಯ ನೀರಿನ ಹರಿವನ್ನು ಇಬ್ಬಾಗಿಸುತ್ತವೆ. ಬೋರುಕ ನಡುಗಡ್ಡೆಯು ಪಡುವಣ ಬಾಗದಲ್ಲಿದ್ದರೆ ಲಿವಿಂಗ್‌ಸ್ಟನ್ ನಡುಗಡ್ಡೆಯು ನದಿಯ ನಡುಬಾಗದಲ್ಲಿದೆ. ಜಿಂಬಾಬ್ವೆಯಿಂದ ಜಾಂಬಿಯಾ ಡಿಕ್ಕಿನೆಡೆಗೆ ಹರಿಯುವ ನೀರಿನ ಹರಿವುಗಳನ್ನು ಡೆವಿಲ್ಸ್ ಕಾಂಟ್ರ್ಯಾಕ್ಟ್, ಮೈನ್ ಪಾಲ್ಸ್, ರೈನ್ಬೊ ಪಾಲ್ಸ್ ಮತ್ತು ಈಸ್ಟರ‍್ನ್ ಕಾಂಟ್ರ್ಯಾಕ್ಟ್ ಎಂಬ ಹೆಸರುಗಳಿಂದ ಕರೆಯುತ್ತಾರೆ. ನವೆಂಬರ್ ನಿಂದ ಏಪ್ರಿಲ್ ವರೆಗೆ ಮಳೆ ಬೀಳುವಿಕೆ ಹೆಚ್ಚಿರುವುದರಿಂದ ಜಾಂಬೆಸಿ ನದಿಯು ತುಂಬಿ ಹರಿಯುತ್ತದೆ. ತುಂಬಿ ಹರಿಯುವ ನೀರು ಅಬ್ಬಿಗೆ ಬೀಳುವ ಹೊತ್ತಿನಲ್ಲಿ ಏಳುವ ನೀರಾವಿ 400ಮೀ ಗಳಶ್ಟು ಎತ್ತರಕ್ಕೆ ಹೋಗುತ್ತವೆ ಮತ್ತು 48ಕಿ.ಮೀ.ದೂರದಿಂದ ನೀರಾವಿಯ ದಟ್ಟಣೆಯನ್ನು ಕಾಣಬಹುದಂತೆ. ವಿಕ್ಟೋರಿಯಾ ಅಬ್ಬಿಯಿಂದ ಚಿಮ್ಮುವ ನೀರಾವಿಯಲ್ಲಿ ಕಣ್ಸೆಳೆವ ಕಾಮನಬಿಲ್ಲು ಮೂಡುತ್ತದೆ. ವಿಕ್ಟೋರಿಯಾ ಅಬ್ಬಿಗೆ ಬೀಳುವ ಹೆಚ್ಚಿನ ನೀರು 110ಮೀ ಅಗಲದ ಮೊದಲ ಕೊರಕಲಿಗೆ ಬೀಳುತ್ತದೆ, ನಂತರ ಅಂಕುಡೊಂಕಾಗಿರುವ ಕೊರಕಲು ಸಾಲಿನಲ್ಲಿ ನೀರು ಮುಂದೆ ಸಾಗಿ ಹರಿಯುತ್ತದೆ. ಎರಡನೇ ಕೊರಕಲಿನಲ್ಲಿ ಬೀಳುವ ನೀರು ತಟ್ಟನೆ ಬಲಬದಿಗೆ ತಿರುಗುತ್ತದೆ ಮತ್ತು ಇದು ಒಂದು ಆಳವಾದ ಹೊಂಡವನ್ನು ಹುಟ್ಟುಹಾಕಿದೆ ಇದನ್ನು ಬಾಯ್ಲಿಂಗ್ ಪಾಟ್ (Boiling pot) ಎಂದು ಕರೆಯುತ್ತಾರೆ. ಈ ರೀತಿಯಾಗಿ ವಿಕ್ಟೋರಿಯಾ ನದಿಯು 6 ದೊಡ್ಡ ಕೊರಕಲುಗಳನ್ನು ಹೊಂದಿದೆ. ಆರನೇ ಕೊರಕಲಿಗೆ ಬಡಗಣ-ಮೂಡಣ ಬಾಗದಿಂದ ಚಿಕ್ಕದಾದ ಸೊಂಗ್ವೆ ನದಿಯು ಬಂದು ಸೇರುತ್ತದೆ, ಇದನ್ನು ಸೊಂಗ್ವೆ ಕೊರಕಲು (Songwe Gorge) ಎಂದು ಹೆಸರಿಡಲಾಗಿದೆ.

Image4

ಪ್ರಾಣಿ, ಹಕ್ಕಿಗಳು ಮತ್ತು ಗಿಡಮರಗಳು:

ವಿಕ್ಟೋರಿಯಾ ಅಬ್ಬಿಯ ಸುತ್ತಮುತ್ತಲಿನಲ್ಲಿ ಜಾಂಬಿಯಾ ಮತ್ತು ಜಿಂಬಾಬ್ವೆ ನಾಡುಗಳು ನಾಡ ಕಾಪುಗಾಡುಗಳನ್ನು (National Parks) ಮಾಡಿದ್ದರಿಂದ ಈ ಕಾಪುಗಾಡುಗಳು ದೊಡ್ಡ ಪ್ರಮಾಣದ ಪ್ರಾಣಿ,  ಹಕ್ಕಿ ಮತ್ತು ಗಿಡಮರಗಳ ನೆಲೆಗಳಾಗಿವೆ.

ಜಾಂಬಿಯಾದ ಮೋಸಿ-ಓ-ಟುನ್ಯಾ ಕಾಪುಗಾಡು (Mosi-oa-Tunya National Park) 66 ಚ.ಕಿ.ಮೀ.ಮತ್ತು ಜಿಂಬಾಬ್ವೆಯ  ವಿಕ್ಟೋರಿಯಾ ಕಾಪುಗಾಡು (Victoria National Park) 23 ಚ.ಕಿ.ಮೀ.ಯಶ್ಟು ಹರವಿಕೊಂಡಿವೆ. ಜಿಂಬಾಬ್ವೆಯ ವಿಕ್ಟೋರಿಯಾ ಕಾಪುಗಾಡಿನ ಮುಂದುವರೆದ ಬಾಗವೇ ಜಾಂಬೆಸಿ ಕಾಪುಗಾಡು (Zambezi National Park), ಇದು ಪಡುವಣ ಬಾಗದಲ್ಲಿ 40 ಕಿ.ಮೀ.ಯಶ್ಟು ಉದ್ದವಿದೆ.

ಇಲ್ಲಿನ ಕುರುಚಲು ಗಿಡಗಂಟಿಗಳು ಆಪ್ರಿಕಾದ ಸವನ್ನಾ ಹುಲ್ಲುಗಾವಲಿನ (Savanna Grassland) ಗಿಡಗಂಟಿಗಳಾಗಿವೆ. ವಿಕ್ಟೋರಿಯಾ ಅಬ್ಬಿಯ ಸುತ್ತಮುತ್ತ ದೇವದಾರು ರೀತಿಯ ಮೊಪೇನ್ ಮರ, ರೊಡೆಶಿಯನ್ ತೇಗ ಮತ್ತು ಕುರುಚಲು ಪೊದೆಗಳು ಕಂಡು ಬರುತ್ತವೆ. ವಿಕ್ಟೋರಿಯಾ ಅಬ್ಬಿ ಮೇಲ್ಗಡೆಯ ನದಿತೀರದಲ್ಲಿ ಹಲವು ಬಗೆಯ ತಾಳೆಮರಗಳ ಸಾಲು ಕಂಡುಬರುತ್ತದೆ ಜೊತೆಗೆ ಮಹಾಗನಿ (Mahogany), ಬೀಟೆ (Ebony), ಹಂಬುಗಿಡಗಳು (Creepers) ಮತ್ತು  ಬೀಳ್ಗಿಡಗಳು (Lianas) ಕಂಡು ಬರುತ್ತವೆ.

ವಿಕ್ಟೋರಿಯಾ ಅಬ್ಬಿಯ ಸುತ್ತಮುತ್ತಲಿನಲ್ಲಿ ನೆಲದ ಬೇರಾವ ಅಬ್ಬಿಯ ಹರವಿನಲ್ಲಿ ಕಂಡುಬರದ ಪ್ರಾಣಿ ಮತ್ತು ಹಕ್ಕಿಗಳ ಬೇರ‍್ಮೆಯಿದೆ.  ಜಾಂಬಿಯಾದ ಮೋಸಿ-ಓ-ಟುನ್ಯಾ ನಾಡ ಕಾಪುಗಾಡಲ್ಲಿ ಬಿಳಿ ಗೇಂಡಾಗಳು ಕಂಡುಬರುತ್ತವೆ. ಆಪ್ರಿಕಾದ ಆನೆಗಳ ದೊಡ್ಡ ಗುಂಪುಗಳು ಇಲ್ಲಿ ನೆಲೆಸಿವೆ. ಕಾಡುಕೋಣ, ಜಿರಾಪೆ, ಗ್ರಾಂಟ್ಸ್ ಜೀಬ್ರಾ (Grant’s Zebra) ಮತ್ತು ಜಿಂಕೆಗಳ ಹಲವು ತಳಿಗಳನ್ನು ಇಲ್ಲಿ ಕಾಣಬಹುದು, ಕೆಲವೊಮ್ಮೆ ಸಿಂಹ ಮತ್ತು ಚಿರತೆಗಳು ಕೂಡ ಕಂಡುಬರುತ್ತವೆ. ಬಬೂನ್ ಮತ್ತು ವೆರ‍್ವೆಟ್ ಕೋತಿಗಳು (Vervet monkeys) ಇಲ್ಲಿ ಹೇರಳವಾಗಿ ಕಂಡುಬರುತ್ತವೆ. ಅಬ್ಬಿಯ ಮೇಲ್ಬಾಗದ ನದಿಯಲ್ಲಿ ನೀರಾನೆಗಳ ದೊಡ್ಡ ಹಿಂಡುಗಳು ನೆಲೆಸಿವೆ ಜೊತೆಗೆ ಮೊಸಳೆಗಳು ಕೂಡ ಈ ಜಾಗದಲ್ಲಿ ಕಂಡುಬರುತ್ತವೆ.

ರಾಟೆಲ್ (Ratel) ಎಂಬ ಮಂಗೂಸಿ ರೀತಿಯ ಪ್ರಾಣಿ, ಹಲ್ಲಿ ಮತ್ತು ಉಗುರಿಲ್ಲದ ನೀರ‍್ನಾಯಿಗಳು (Clawless Otters) ಅಬ್ಬಿಯ ಕಣಿವೆಯಲ್ಲಿ ಕಂಡುಬರುತ್ತವೆ. ಟೈಟಾ ಗಿಡುಗ (Taita Falcon), ಕರಿ ಹದ್ದು, ಪೆರೆಗ್ರಿನ್ ಗಿಡುಗ (Peregrine Falcon), ಅವ್ಗರ್ ರಣಹದ್ದು (Augur buzzard), ನೀರುಕೊಕ್ಕರೆ (Herons), ಮೀನ್ ಹದ್ದು (Fish eagle)  ಮತ್ತು ಹಲವು ಬಗೆಯ ನೀರ‍್ಕೊಳಿಗಳು (Waterfowls) ಅಬ್ಬಿಯ ಸುತ್ತಮುತ್ತ ಕಂಡುಬರುತ್ತವೆ.

ಅಬ್ಬಿಯ ಕೆಳಬಾಗದ ನದಿಯು 39 ಬಗೆಯ ಮೀನುಗಳಿಗೆ ನೆಲೆಯಾಗಿದೆ ಮತ್ತು ಮೇಲ್ಬಾಗದ ನದಿಯು 89 ಬಗೆಯ ಮೀನುಗಳಿಗೆ ನೆಲೆಯಾಗಿದೆ.

Image5

ಸುತ್ತಾಡುಗೆ:

ವಿಕ್ಟೋರಿಯಾ ಅಬ್ಬಿಯ ಸುತ್ತಮುತ್ತ  1900ರಲ್ಲಿ ಬೆಲೆಬಾಳುವ ಅದಿರು ವ್ಯವಹಾರ ಮಾಡಲು ಯುರೋಪಿಯನ್ ವಸಹಾತುಗಳು ತಳವೂರಿದವು.  ಬ್ರಿಟೀಶರು 1905 ರಲ್ಲಿ  ಜಾಂಬೆಸಿ ನದಿಯನ್ನು ದಾಟಲು ವಿಕ್ಟೋರಿಯಾ ಅಬ್ಬಿಯ ಎರಡನೆಯ ಕೊರಕಲಿನಲ್ಲಿ ಒಂದು ಸೇತುವೆಯನ್ನು ಕಟ್ಟಿಸಿದರು, ಇದು ಜಿಂಬಾಬ್ವೆ ಮತ್ತು ಜಾಂಬಿಯಾ ನಾಡುಗಳ ನಡುವೆ ಒಂದು ಕೊಂಡಿಯಾಗಿದೆ. 1964 ರಲ್ಲಿ ಬಡಗಣ ರೊಡೇಶಿಯಾವು (North Rhodesia) ಬ್ರಿಟಿಶರಿಂದ ಬಿಡುಗಡೆ ಹೊಂದಿ ಜಾಂಬಿಯಾ ನಾಡಾಯಿತು ಮತ್ತು ತೆಂಕಣ ರೊಡೇಶಿಯಾವು ಜಿಂಬಾಬ್ವೆ ನಾಡಾಯಿತು. ನಂತರದಲ್ಲಿ ಈ ಎರಡು ನಾಡುಗಳು ಹಲವಾರು ನಾಡ ಕಾಪುಗಾಡುಗಳನ್ನೂ ಮಾಡಿದ್ದರಿಂದ ಸುತ್ತಾಡುಗೆ ಬೆಳೆಯುತ್ತಾ ಬಂತು.  ವರುಶವೂ ಲಕ್ಶಗಟ್ಟಲೆ ಸುತ್ತಾಡುಗರು ಕಣ್ಸೆಳೆಯುವ ವಿಕ್ಟೋರಿಯಾ ಅಬ್ಬಿಯನ್ನು ನೋಡಲು ಬರುತ್ತಾರೆ. ವಿಕ್ಟೋರಿಯಾ ಅಬ್ಬಿಯು ಎರಡು ನಾಡುಗಳ ನಡುವೆ ಹರವಿಕೊಂಡಿದ್ದರಿಂದ ಸುತ್ತಾಡುಗರು  ಜಾಂಬಿಯಾ ಮತ್ತು ಜಿಂಬಾಬ್ವೆ ನಾಡುಗಳ ವೀಸಾ ಪರವಾನಿಗೆಯನ್ನು ಪಡೆದುಕೊಳ್ಳಬೇಕು. ಎರಡು ನಾಡುಗಳ ನಡುವೆ ಇರುವ ಕಾಪುಗಾಡುಗಳನ್ನು ನೋಡಲು ಬರುವವರು ಕೂಡ ಆಯಾ ನಾಡುಗಳ ವೀಸಾ ಪರವಾನಿಗೆಯನ್ನು ತೆಗೆದುಕೊಳ್ಳಬೇಕು.

ವಿಕ್ಟೋರಿಯಾ ಅಬ್ಬಿಯ ಮೇಲ್ಬಾಗದ ಅಂಚು ಕಲ್ಲಿನಿಂದಾದ ಕಟ್ಟೆಯ ರೀತಿಯಲ್ಲಿದೆ ಮತ್ತು ಈಜಾಡುವವರನ್ನು ಈ ಕಟ್ಟೆಯು ಅಬ್ಬಿಯ ಕೆಳಗೆ ಬೀಳದಂತೆ ತಡೆಯುತ್ತದೆ, ಆದ್ದರಿಂದ ಸುತ್ತಾಡುಗರು ಇಲ್ಲಿ ಮೋಜಿನಿಂದ ಈಜಾಡುತ್ತಾರೆ. ಈ ಕಟ್ಟೆಗೆ ಒದ್ದು ನಿಂತ ನೀರು ಒಂದು ಮೀಯುವ ಕೊಳವನ್ನು ಹುಟ್ಟುಹಾಕಿದೆ, ಈ ಕೊಳಕ್ಕೆ ಡೆವಿಲ್ಸ್ ಪೂಲ್ (Devils pool) ಎಂಬ ಅಡ್ಡ ಹೆಸರಿದೆ ಕೂಡ. ಸುತ್ತಾಡುಗರಿಗೆ ಹೆಚ್ಚಿನ ಎಡೆ ಮಾಡಿಕೊಟ್ಟಿದ್ದರಿಂದ ಜಾಂಬಿಯಾ ಬದಿಗಿಂತ ಜಿಂಬಾಬ್ವೆ ಬದಿಯಲ್ಲಿ ಹೆಚ್ಚಿನ ಸುತ್ತಾಡುಗರು ಕಂಡುಬರುತ್ತಾರೆ. ಈ ಎರಡು ನಾಡುಗಳು ಹಲವಾರು ತಂಗುದಾಣಗಳನ್ನು ಮಾಡಿದ್ದರಿಂದ ಸುತ್ತಾಡುಗರಿಗೆ ಅನುಕೂಲವಾಗಿದೆ. ವಿಕ್ಟೋರಿಯಾ ಅಬ್ಬಿ ಮತ್ತು ಕಾಪುಗಾಡುಗಳನ್ನು ನೋಡಲು ಬರುವವರಿಂದ ಸುತ್ತಾಡುಗೆಯು ಈ ನಾಡುಗಳಿಗೆ ಹಲವು ಮಿಲಿಯನ್ ಡಾಲರುಗಳ ವಹಿವಾಟನ್ನು ಹುಟ್ಟುಹಾಕಿದೆ. ನೀವು ಒಂದ್ಸಲ ವಿಕ್ಟೊರಿಯಾಳ ಚೆಲುವನ್ನು ನೋಡಿ ಬನ್ನಿ !

Image7

 (ಮಾಹಿತಿ ಮತ್ತು ತಿಟ್ಟ ಸೆಲೆ: en.wikipedia.orgsiyabona.comtothevictoriafallsvictoriafalls-guide.neti.ytimg.comtopographic-map.comsoutherndestinations.comturner.comcloudfront.netnamibia-tours-safaris.com)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: