ತಲೆಬಾಗಿದೆ ನಾ ಅವಳೊಲವಿಗೆ

– ಹರ‍್ಶಿತ್ ಮಂಜುನಾತ್.

 

ಮುಂಜಾನೆಯ ನಸುಕಲಿ ಬಣ್ಣ ಕಟ್ಟಿ ಮಳೆಬಿಲ್ಲಿಗೆ
ಮೊದಲಪ್ಪುಗೆಯ ಮುದ ನೀಡಿದೆ ಈ ತೋಳಿಗೆ
ಅವಳಿರಲು ನವಿಲೊಂದು ಗರಿ ಅರಳಿಸಿ ಲಾವಣ್ಯಕೆ ಶರಣಾಗಿ
ನೀನೆ ಚೆಲುವೆಂದಿತು ಚೆಲುವಿಗೆ ನೀ ಗರಿಯೆಂದಿತು

ಹುರುಪಿನಲಿ ಹುಣ್ಣಿಮೆ ನಾಚಿ ಎರೆದ ಕೆನೆ ಹಾಲಲ್ಲಿ ಕಡೆದ
ಮನುಕುಲವೆ ಸೊಗಸೆನ್ನೊ ಬೂಲೋಕ ಚಿರಯವ್ವನೆಗೆ
ಕಣ್ಗಳ ಆಡಿಸಿದೊಡೆ ಒಪ್ಪಿಗೆ ಮೊಗ್ಗರಳಲು
ರೆಪ್ಪೆಗಳ ಬಡಿದೊಡೆ ವಸಂತಕೆ ನಲಿವಾಗಮನ

ಅದರವದು ಜೇನು ಕಾಡಿ ಬೇಡಿದ ಸವಿ ಸವಿಯಡುಗೆ
ಕಿರುನಗೆಯು ಮದಿರೆಗೆ ಅಮಲೇರಿಸಿದ ಮದುಲೋಕ
ಅಳುಕಳುಕಿ ಕೆನ್ನೆಯ ನೀವರಿಸಲೆ ಮೆಲ್ಲಗೆ ಮುತ್ತಲೇ
ಎಲ್ಲೆಯ ಮೀರಿ ಸವಿಯೂಟವಿತ್ತ ತುಟಿಯಲೇ

ಬಾವಲೋಕದ ಸೊಗಡು ಕಟ್ಟಿದೆ ಕವಿ ಕಲ್ಪನೆ
ಬಣ್ಣಿಸಿ ಬಸವಳಿದ ಮನ ಸೋತು ಇನ್ನಾಗದೆನೆ
ತಲೆಬಾಗಿದೆ ನಾ ಅವಳೊಲವಿಗೆ ಆ ಚೆಲುವಿಗೆ
ಅಳುಕೇತಕೆ ?

ಕಣ್ ಸನ್ನೆಯ ಸೆಳೆತಕೆ ಪರಶಿವನೂ ಸೋತವನೆ
ಮನದನ್ನೆಯ ಸಂಗವಿರೆ ಕೈಲಾಸವೂ ಯಾಕೆಲೇ?

(ಚಿತ್ರ ಸೆಲೆ: wallarthd.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: