ಹೊನೊಲುಲು – ಜಗತ್ತಿನ ನೆಚ್ಚಿನ ಪ್ರವಾಸಿ ತಾಣಗಳಲ್ಲೊಂದು!

– ಸುಜಯೀಂದ್ರ ವೆಂ.ರಾ.

 

honolulu (1)

ಹೊನೊಲುಲು‘, ಇದೇನು ಹೊಸಪದ ಬಳಕೆ ಎನ್ನಿಸಬಹುದು. ಇಲ್ಲವೆ ಹೊನಲನ್ನು ತಪ್ಪಾಗಿ ಬರೆದಿದೆ ಎನ್ನಿಸಬಹುದು. ಆದರೆ ಹಾಗಾಗಲು ಸಾದ್ಯವೇ ಇಲ್ಲ. ಹೊನಲೆಂದರೆ ನದಿ(river), ನೀರಿನ ಸೆಳವು(torrent) ಇಲ್ಲವೇ ಪ್ರವಾಹ(stream) ಎಂದು. ಆದರೆ ಇದೇನು ಹೊನೊಲುಲು ಅಂದರೆ? ಹೊನೊಲುಲು ಎಂದರೆ “ಕಾಪಾಡಲ್ಪಟ್ಟ ಬಂದರು”/ “ಸದ್ದಿಲ್ಲದ ಬಂದರು” ಎಂದು. ಹವಾಯ್ ನುಡಿಯಲ್ಲಿ ಹೀಗೆ ಕರೆಯುವುದುಂಟು. ಮಿಂದಾಣದ ಹುಡುಕಾಟದಲ್ಲಿ ನಮಗೆ ಮೊದಲು ಹೊನಲು ಮಿಂದಾಣ ಸಿಕ್ಕರೆ ಅದರ ಜೊತೆ ಹೊನೊಲುಲು(Honolulu) ಕೂಡ ಸಿಗುತ್ತದೆ. ಹೀಗೆ ನಮ್ಮ ಜನಕ್ಕೆ ಹೊನಲು ಪರಿಚಿತವಾದರೂ ಹೊರನಾಡಿನ ಜನಗಳಿಗೆ (foreigners) ಇದು ಅಚ್ಚರಿಯ(surprise) ಪದವಾಗುವುದರಲ್ಲಿ ಅನುಮಾನವೇ ಇಲ್ಲ.

ಹೊನೊಲುಲು ಹೆಸರುವಾಸಿಯಾದ ಸಂಯುಕ್ತ ಅಮೇರಿಕದ ಹವಾಯ್ ರಾಜ್ಯದ ಒಂದು ಪಟ್ಟಣ. ಹೊನೊಲುಲು ಅಮೇರಿಕದ ಪಡುವಣದ ಮತ್ತು ತೆಂಕಣದ ಮುಕ್ಯವಾದ ನಗರ. ಹವಾಯ್ ಕೂಡ ಪ್ರವಾಸಿಗರ ನೆಚ್ಚಿನ ತಾಣ. ಇದರಲ್ಲಿ ಹೊನೊಲುಲು ಒಅಹು ದ್ವೀಪದಲ್ಲಿರುವ ಪಟ್ಟಣ. ಹವಾಯ್ ಮತ್ತು ಸಂಯುಕ್ತ ಅಮೇರಿಕದ ಮುಂಬಾಗಿಲು ಕೂಡ. ಹೊನೊಲುಲು ಪಟ್ಟಣ ಅಂತರ್ ರಾಶ್ಟ್ರೀಯ ವ್ಯಾಪಾರ ತಾಣ. ಅಮೇರಿಕಾದ ಯುದ್ದ ಸಯ್ನಿಕರ ತಂಗುದಾಣವಾಗಿದ್ದು, ಮೂಡಣ-ಪಡುವಣ ಹಾಗೂ ಪೆಸಿಪಿಕ್ ಸಂಸ್ಕ್ರುತಿಯ, ತಿನಿಸುಗಳ, ನಂಬಿಕೆಗಳ ಪ್ರತಿರೂಪವೂ ಹೌದು. ಇದರ ಹಳೇ ಹೆಸರು ಕೊವ್ ಎಂದು. ಎರಡನೇ ವಿಶ್ವ ಯುದ್ದದ ಹೊತ್ತಿನಲ್ಲಿ, ಜಪಾನ್ ನವರು ಡಿಸೆಂಬರ್ 7, 1941ರಲ್ಲಿ ಪರ‍್ಲ್ ಹಾರ‍್ಬರ್ ಮೇಲೆ ಆಕ್ರಮಣ ಮಾಡಿದರು. ಇದರ ಪಕ್ಕದಲ್ಲೇ ಇದ್ದ ಹೊನೊಲುಲು ಪಟ್ಟಣದ ಹೆಸರು ಆಗ ಹೆಚ್ಚು ಸುದ್ದಿ ಮಾಡಿತ್ತು. ಈಗ ಹೊನೊಲುಲು ಪ್ರಪಂಚದ ಹೆಚ್ಚು ವಾಸ ಯೋಗ್ಯ ಹಾಗೂ 2ನೇ ತೊಂದರೆ ಇಲ್ಲದ ಪಟ್ಟಣಗಳ ಸಾಲಿಗೆ ಸೇರಿದೆ. ಹೊನೊಲುಲು ಹೆಚ್ಚು ಜನಸಂಕ್ಯೆಯುಳ್ಳ ಪಾಲಿನೇಶಿಯಾ(Polynesia)ದ ಕಡಲತೀರದ ನಗರಗಳಲ್ಲೊಂದಾಗಿದೆ.

ನೆಲದರಿಮೆ
ಊರಿನ ಒಟ್ಟು ಸುತ್ತಳತೆ 177.2 ಕಿ.ಮೀ. ಇದ್ದರೆ ಇದರಲ್ಲಿ 156.7ಕಿ.ಮೀ. ನೆಲವಿದ್ದು, ಉಳಿದ 20.5 ಕಿ.ಮೀ. ನಲ್ಲಿ ನೀರಿದೆ. ಹೊನೊಲುಲುವಿನ ಹತ್ತಿರದ ದೀಪಸ್ತಂಬ ವೆಂದರೆ 3,787ಕಿ.ಮೀ. ದೂರದಲ್ಲಿನ ಕ್ಯಾಲಿಪೋರ‍್ನಿಯಾದ ಪಾಯಿಂಟ್ ಅರೆನ ಲಯ್ಟ್ ಹಾವ್ಸ್.

ಇತಿಹಾಸ
ಇಲ್ಲಿನ ಮೂಲನಿವಾಸಿಗಳು ಪಾಲಿನೇಶಿಯಾನ್ನರು(Polonesian) ಅಂದರೆ ತೆಂಕಣ ಪೆಸಿಪಿಕ್ ಸಾಗರದ ಆರ‍್ಕಿಪೆಲಗೊ(archipelago) ದ್ವೀಪದಿಂದ ಇಲ್ಲಿ ಬಂದು ನೆಲೆಸಿದವರು ಎಂದು ದಂತಕತೆಗಳಿಂದ ತಿಳಿದಿದೆ. 11 ನೇ ಶತಮಾನದಲ್ಲಿಯೇ ಇಲ್ಲಿ ಮಂದಿ ನೆಲೆಸಿದ್ದರು ಎಂದು ತಿಳಿದುಬಂದಿದೆ. ಬ್ರಿಟನ್ ದೊರೆ ವಿಲಿಯಮ್ ಬ್ರವ್ನ್ ಕೂಡ 1794ರಲ್ಲಿ ಹೊನೊಲುಲು ಬಂದರಿಗೆ ಬಂದಿಳಿದ. ಇದರ ನಂತರ ಅನೇಕ ಪರನಾಡಿನ ಹಡಗುಗಳು ಹಿಂಬಾಲಿಸಿ ಬಂದವು. ಒಂದನೇ ಕಮೆಹಮೆಹ ಎಂಬ ದೊರೆ ಒಅಹು ದ್ವಿಪವನ್ನು ಗೆದ್ದು ಆಳುತ್ತಿದ್ದ, ಆತ ಹವಾಯ ದ್ವೀಪಗಳನ್ನು ರಾಜ ದರ‍್ಬಾರ್ ಮಾಡಿಕೊಂಡಿದ್ದ. 1804ರಲ್ಲಿ ವಯ್ಕಿಕಿಗೆ ತನ್ನ ರಾಜ ದರ‍್ಬಾರನ್ನು ಬದಲಿಸಿಕೊಂಡ. ಆಗ ಹೊನೊಲುಲು ನಗರದ ಬೆಳವಣಿಗೆ ಶುರುವಾಯಿತು.

1845ರಲ್ಲಿ ಮೂರನೇ ಕಮೆಹಮೆಹ ಹೊನೊಲುಲುವನ್ನು ಶಾಶ್ವತವಾಗಿ ಹವಾಯ್ ರಾಜ್ಯದ ರಾಜದಾನಿಯನ್ನಾಗಿ ಮಾಡಿದನು. ಇವನು ಮತ್ತು ಇವನ ಹಿಂಬಾಲಕರು ಹೊನೊಲುಲುವನ್ನು ಹೊಸತನದ ರಾಜದಾನಿಯನ್ನಾಗಿ ಮಾಡಿದರು. ಬಳಿಕ 1893ರಲ್ಲಿ ಹವಾಯ್ ರಾಜರ ಆಳ್ವಿಕೆ ಕೊನೆಗೊಳ್ಳುತ್ತದೆ. ಬಳಿಕ 1898 ರಲ್ಲಿ ಸಂಯುಕ್ತ ಅಮೇರಿಕದ ಆಳ್ವಿಕೆಗೆ ಒಳಪಡುತ್ತದೆ. ಆದರೂ ಹೊನೊಲುಲು ಒಂದು ವ್ಯಾಪಾರಿ ಪಟ್ಟಣವಾಗಿ ಬೆಳೆಯುವುದಕ್ಕೆ ಯಾವುದೇ ಅಡೆತಡೆಗಳಾಗಲಿಲ್ಲ. ಇಂದಿಗೆ ಈ ಊರು ಹವಾಯ್ ದ್ವೀಪದ ದೊಡ್ಡ ವ್ಯಾಪಾರದ ಪಟ್ಟಣ. ಜಗತ್ತಿನ ನೆಚ್ಚಿನ ಪ್ರವಾಸಿ ತಾಣಗಳಲ್ಲೊಂದು!

ವಾತಾವರಣ
ಇಲ್ಲಿನ ಗಾಳಿ, ಮಳೆ, ಬಿಸಿಲನ್ನು ಗಮನಿಸಿದರೆ ಎಲ್ಲಾ ತಿಂಗಳಲ್ಲು ಒಂದೇ ತೆರೆನಾದ ಬಿಸಿಯಿರುವುದು ಕಂಡುಬರುತ್ತದೆ. ಅಂದರೆ 18-24 ಡಿಗ್ರಿ ಬಿಸಿಯ ವಾತಾವರಣ. ಬೇಸಿಗೆಯಲ್ಲಿ ಆಗಾಗ ಮಳೆಯಾದರೆ ಚಳಿಗಾಲದಲ್ಲಿ ಹೆಚ್ಚು ಮಳೆಯಾಗುವ ಜಾಗವಾಗಿದೆ.

ವಾಣಿಜ್ಯ
ದೊಡ್ಡ ಪಟ್ಟಣ, ವಿಮಾನ ನಿಲ್ದಾಣ ಹೊಂದಿರುವ ಹವಾಯ್ ದ್ವೀಪ ಹೊನೊಲುಲುವಿನ ಪ್ರವಾಸೋದ್ಯಮಕ್ಕೆ ನೆರವಾಗಿದೆ ಎಂದೇ ಹೇಳಬಹುದು. ಪ್ರತಿ ವರುಶ ಹಲವು ಉರುನೋಡುಗರಿಂದ 10 ಕೋಟಿ ಡಾಲರನ್ನು ಈ ಊರು ಸಂಪಾದಿಸುತ್ತದೆ. ಮೂಡಣ ಮತ್ತು ಪಡುವಣ ಪೆಸಿಪಿಕ್ ಪ್ರದೇಶಗಳು ಹೆಚ್ಚಾಗಿ ವ್ಯಾಪಾರ ವಹಿವಾಟು ನಡೆಸುವ ಕೇಂದ್ರಗಳಾಗಿವೆ.

honolulu

ಸಾಂಸ್ಕ್ರುತಿಕ ಕೇಂದ್ರಗಳು
ಬಿಶಪ್ ಪ್ರಾಚೀನ ವಸ್ತು ಸಂಗ್ರಹಾಲಯ ಹೊನೊಲುಲುವಿನ ದೊಡ್ಡ ಸಂಗ್ರಹಾಲಯ. ಹೊನೊಲುಲು ಪ್ರಾಣಿಗಳ ಮ್ರುಗಾಲಯ, ವಯ್ಕಿಕಿಯ ಮೀನಿನ ಸಂಗ್ರಹಾಲಯ ಕಡಲಿನ ದೊಡ್ಡ ಅರಕೆ ಮನೆಯಾಗಿದೆ. ವಯ್ಕಿಕಿ ಮೀನು ಸಂಗ್ರಹಾಲಯ ಹವಾಯ್ನ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡು ಹೆಚ್ಚಿನ ಅರಕೆ(Research)ಗೆ ನೆರವು ನೀಡುತ್ತಿದೆ. ಇಲ್ಲಿ ಹಲವು ಉದ್ಯಾನವನಗಳು ಕಂಡು ಬರುತ್ತವೆ ಅವುಗಳೆಂದರೆ ಪೊಸ್ಟರ್ ಬಟಾನಿಕಲ್ ಗಾರ‍್ಡೆನ್, ಲಿಲಿಯೊಕಲನಿ ಬಟಾನಿಕಲ್ ಗಾರ‍್ಡೆನ್ ಮತ್ತು ವಾಲ್ಕರ್ ಎಸ್ಟೇಟ್.

ಕಲೆ
1900ರಲ್ಲಿ ಸ್ತಾಪಿತವಾದ ಹೊನೊಲುಲುವಿನ ನಾಟಕ ಮತ್ತು ಸಂಗೀತ ವೇದಿಕೆ ಎರಡನೇ ದೊಡ್ಡ ವೇದಿಕೆ ಎನಿಸಿದೆ. ಹವಾಯ್ ಸಂಗೀತ ಇಲ್ಲಿ ಹೆಸರುವಾಸಿ. ಇಲ್ಲಿನ ಸಂಗೀತದ ಮುಕ್ಯ ವೇದಿಕೆಗಳು ಹವಾಯ್ ತಿಯೆಟರ್, ನೀಲ್ ಬ್ಲಯಿಸ್ಡೆಲ್ ಸೆಂಟರ್ ವೇದಿಕೆ ಮತ್ತು ವಯ್ಕಿಕಿ ಶೆಲ್ ಆಗಿದೆ.

ಆಟಗಳು
ಇಡೀ ವರುಶ ಆಟಗಳ ಚಟುವಟಿಕೆಯಿಂದ ಕೂಡುವಂತೆ ಮಾಡಿದೆ ಹೊನೊಲುಲು ನಗರ. ಸಂಯುಕ್ತ ಅಮೇರಿಕದ ಯೋಗ್ಯತೆ ಪಡೆದ ಆಟಗಳ ನಗರ ಹೊನೊಲುಲು. ಹೊನೊಲುಲುವಿನಲ್ಲಿ ಮೂರು ದೊಡ್ಡ ಮ್ಯಾರಾತಾನ್ ಓಟದ ಸ್ಪರ‍್ದೆಗಳಿವೆ. ಅವೆಂದರೆ: ಗ್ರೇಟ್ ಅಲೊಹ ರನ್ – ಅದ್ಯಕ್ಶರ ದಿನ ನಡೆಯುತ್ತದೆ. ಹೊನೊಲುಲು ಮ್ಯಾರತಾನ್ ಡಿಸೆಂಬರ್ ಎರಡನೇ ಬಾನುವಾರ ನಡೆಯುತ್ತದೆ. ಇದು 20,000 ಸ್ಪರ‍್ದಿಗಳನ್ನು ಸೆಳೆಯುತ್ತದೆ. ಹೊನೊಲುಲು ಟ್ರಯೆತಲಾನ್ ಒಲಂಪಿಕ್ ಆಟದ ಹಬ್ಬ ಇದನ್ನು ಯುಎಸ್ಎ ಟ್ರಯೆತಲಾನ್ ನೋಡಿಕೊಳ್ಳುತ್ತೆ. ನೊಲುಲುವಿನ ಒಲಂಪಿಕ್ ಆಟಗಳೆಂದರೆ ಪುಟ್ಬಾಲ್, ವಾಲಿಬಾಲ್, ರಗ್ಬಿ, ಬೇಸ್ಬಾಲ್.

ಸರ‍್ಕಾರ
ಇಲ್ಲಿನ ಸರ‍್ಕಾರ ಸಂಯುಕ್ತ ಅಮೇರಿಕದ್ದು. ಇಲ್ಲಿನ ಅಂಚೆ ಸೇವೆಗಳು, ಸಾರ‍್ವಜನಿಕ ಸೇವೆಗಳು ಎಲ್ಲವನ್ನು ಅಮೇರಿಕ ನೋಡಿಕೊಳ್ಳುತ್ತದೆ. ಮಹಾನಗರಾದ್ಯಕ್ಶರೇ(mayor) ನಗರದ ಆಗು-ಹೋಗುಗಳನ್ನು ನೋಡಿಕೊಳ್ಳುವುದು.

ಕಲಿಕಾ ಕೇಂದ್ರ
ಹೊನೊಲುಲು ಸಮುದಾಯ ಪದವಿ ವಿದ್ಯಾಲಯ, ಕಪಿಒಲನಿ ಸಮುದಾಯ ಪದವಿ ವಿದ್ಯಾಲಯ, ಮನೊವದ ಹವಾಯ್ ವಿಶ್ವವಿದ್ಯಾಲಯ, ಚಮಿನಡೆ ವಿಶ್ವವಿದ್ಯಾಲಯ, ಹವಾಯ್ ಪೆಸಿಪಿಕ್ ವಿಶ್ವವಿದ್ಯಾಲಯಗಳು ಆಗಿವೆ.

ಸಂಚಾರ ಸಾಗಣೆ
ಇಲ್ಲಿನ ಪ್ರಮುಕ ಸಂಚಾರ ಸಾಗಣೆ ವಿಮಾನ, ರಯ್ಲು – ಹಯ್ ಕೆಪಾಸಿಟಿ ಟ್ರಾನ್ಸಿಟ್ ಕಾರಿಡಾರ್ ಪ್ರಾಜೆಕ್ಟ್, ಬಸ್ಸು- ದ ಬಸ್.

ಸೋದರಿ ಪಟ್ಟಣಗಳು
ಪರನಾಡಿನಿಂದ ಬಂದು ನೆಲೆಸಿದ ಜನರು ಇಲ್ಲಿ ಹೆಚ್ಚು. ಹೊನೊಲುಲುವಿಗೆ 27 ಸೋದರಿ ಪಟ್ಟಣಗಳಿವೆ. ಅವೆಂದರೆ ಬಗುಯೊ – ಪಿಲಿಪಯ್ನ್ಸ್, ಬಕು – ಅಜರ‍್ಬಯ್ಜನ್, ಮುಂಬಯಿ – ಬಾರತ, ಬ್ರುಯೆರೆಸ್ – ಪ್ರಾನ್ಸ್, ಕ್ಯಾನ್ಡನ್ – ಪಿಲಿಪಯ್ನ್ಸ್, ಕ್ಯರಕ್ಯಾಸ್ – ವೆನೆಜುಲ, ಸೆಬು ಸಿಟಿ – ಪಿಲಿಪಯ್ನ್ಸ್, ಪನ್ಚಲ್ – ಪೋರ‍್ಚುಗಲ್, ಹಯ್ನನ್- ಪೀಪಲ್ಸ್ ರಿಪಬ್ಲಿಕ್ ಚಯ್ನ, ಹಿರೋಶಿಮ – ಜಪಾನ್, ಹ್ಯುಯಿ – ವಿಯೆಟ್ನಂ, ಇನ್ಚಿಯೊನ್ – ಸವ್ತ್ ಕೊರಿಯ, ಕವೊಸಿಯಂಗ್ – ತಯ್ವಾನ್, ಲಒಗ್ – ಪಿಲಿಪಯ್ನ್ಸ್,ಮಜರೊ – ಮಾರ‍್ಶಲ್ ಅಯ್ಲ್ಯಾಂಡ್, ಮನಿಲ – ಪಿಲಿಪಯ್ನ್ಸ್, ಮಾಂಬಸ – ಕೆನ್ಯ, ನಹ – ಜಪಾನ್, ರಬಟ್ – ಮೊರೊಕೊ, ಸ್ಯಾನ್ ಜುಅನ್ – ಪೀರ‍್ಟೊ ರಿಕೊ, ಸಿಒಲ್ – ಸವ್ತ್ ಕೊರಿಯ, ಸಿನ್ತ್ರ – ಪೋರ‍್ಚುಗಲ್, ಟೊಕಿಯೊ – ಜಪಾನ್, ಕ್ವಿನ್ಹುಅನ್ಗಡವೊ – ಪೀಪಲ್ಸ್ ರಿಪಬ್ಲಿಕ್ ಚಯ್ನ, ಉವಜಿಮ – ಜಪಾನ್, ವಗನ್ – ಪಿಲಿಪಯ್ನ್ಸ್, ಜೊಂಗ್ಶಾನ್ – ಪೀಪಲ್ಸ್ ರಿಪಬ್ಲಿಕ್ ಚಯ್ನ.

ಕೊನೆಯಾದಾಗಿ ಹೇಳುವುದಾದರೆ ಹೊನೊಲುಲು ಒಂದು ಎಲ್ಲ ನಾಡಿನ ಜನಗಳ, ಎಲ್ಲ ನಾಡಿನ ಸಂಸ್ಕ್ರುತಿಯ, ಹೆಚ್ಚು ಪ್ರವಾಸಿಗರು ಉಳ್ಳ, ಒಂದೇ ತೆರೆನಾದ ವಾತಾವರಣ ಉಳ್ಳ, ಉಳಿಯಬಲ್ಲ ಪಟ್ಟಣ. ಹೀಗೊಂದು ಕನ್ನಡ ಪದದಂತೆ ಹೆಸರುಳ್ಳ ಪಟ್ಟಣದ ಬಗ್ಗೆ ತಿಳಿಸಿದ್ದು ಚುಟುಕಾದ ಈ ಓದಿನ ಪಯಣ. ಇದನ್ನು ನೀವು ನಿಮ್ಮ ಗೆಳೆಯರೊಂದಿಗೂ ಹಂಚಿಕೊಳ್ಳಿ.

(ಮಾಹಿತಿ ಮತ್ತು ಚಿತ್ರಸೆಲೆ: ವೀಕಿಪೀಡಿಯಾ, tripadvisor.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: