ನೆನಪಿನಂಗಳ
ಒಂದು ಎರಡು ಬಾಳೆಲೆ ಹರಡು ಎಂದು ಶಾಲೆ ಮೆಟ್ಟಿಲು ಹತ್ತಿದವಳಿಗೆ ಕಾಲೇಜು ವಿದ್ಯಾಬ್ಯಾಸ ಮುಗಿಸಿ ಕೆಲಸ, ಮದುವೆ, ಮನೆ, ಮಕ್ಕಳು ಎನ್ನುವ ಪ್ರಪಂಚದಲ್ಲಿ ಮುಳುಗಿದವಳಿಗೆ ಮತ್ತೆ ಶಾಲೆ ನೆನಪಾದದ್ದು ಮಗಳು ಶಾಲೆ ಸೇರುವಾಗಲೇ. ಅಬ್ಬಾ ಇಂದಿನ ಶಾಲೆಗು ಅಂದಿನ ನನ್ನ ಹೆಂಚಿನ ಶಾಲೆಗೂ ಇರುವ ಅಂತರ ……….. ಬಹಳ.
ಕಾಲ ತರುವ ಬದಲಾವಣೆಗಳಲ್ಲಿ ಕಳೆದು ಹೋಗಿರುವ ಆ ದಿನಗಳನ್ನು, ಕೊಂಡಿಗಳನ್ನು ಮತ್ತೆ ಕೂಡಿಸಲಾಗದೆ ಕಳೆಯಲು ಆಗದೆ, ಹಾಗೆಯೇ ಗುಣಿಸಿ ಮನಸ್ಸು ಚಡಪಡಿಸಿ ಆ ಸಮಯಕ್ಕೆ ಹಣಕ್ಕಿದ್ದಂತೂ ನಿಜ, ಬದುಕಿನ ಆ ದಿನಗಳನ್ನ ಮೆಲುಕು ಹಾಕಿಕೊಂಡಾಗ ಅಚ್ಚಳಿಯದೇ ನೆನಪಿನಲ್ಲಿ ಉಳಿಯುವ ನನ್ನ ಆ ಶಾಲಾ ದಿನಗಳು.
ಎಂತಹ ಕುಶಿ ಇತ್ತು ಆ ದಿನಗಳಲ್ಲಿ. ಕಾಕಿ ಬಣ್ಣದ ದಪ್ಪ ನೂಲಿನ ಆ ಚೀಲದಲ್ಲಿ ಒಂದು ಸ್ಲೇಟು ಬಳಪ ಇಟ್ಟು ಹೊರಟರೆ ಬೇರೆ ಯಾವ ನೆನಪು ಇರತ್ತಿರಲಿಲ್ಲ. ಬೇರೆ ಮಕ್ಕಳು ಅಳುವುದನ್ನ ಕಂಡಾಗ ‘ಯಾಕ್ ಅಳ್ತಾರಪ್ಪ ಇವ್ರು?’ ಅನ್ನೋ ಪಶ್ನೆಗೆ ಉತ್ತರ ‘ಆಟ ಆಡಾಕೆ ಆಗಲ್ಲ ಮಾಸ್ತರ ಪಾಟ ಬರಿಯಾಕ ಹೇಳ್ತಾರಲ್ಲ’ ಅನ್ನೋ ಮಾತು. ಆದ್ರೆ ಅದನ್ನೆಲ್ಲಾ ಕೆಲವೇ ದಿನಗಳಲ್ಲಿ ಮರೆತು ಎಲ್ಲರು ಕುಣಿಯುತ್ತ ಶಾಲೆಗೆ ಹೋಗುವ ಆ ಹೊತ್ತು ಈಗಲೂ ನೆನಪಿದೆ.
ಸಮಯ ಸರಿಯುತ್ತಿದ್ದಂತೆ ನಾವು ಯಂತ್ರದಂತೆ ಕೆಲಸ ಮಾಡುತ್ತಿದ್ದೇವೆ ಅನ್ನುವ ಮನಸ್ತಿತಿ. ನಡುನಡುವೆ ಏನೋ ಒಂದನ್ನು ಕಳೆದುಕೊಂಡಂತೆ ಅನ್ನಿಸುವ ಆ ಕ್ಶಣ. ಅದೇ ನಮ್ಮ ಶಾಲೆಯ ಆ ದಿನಗಳು, ನೀಲಿ ಬಣ್ಣದ ಲಂಗ, ಬಿಳಿ ಅಂಗಿ, ಹೆಗಲ ಮೇಲೊಂದು ಉದ್ದನೆ ಓಲಾಡುವ ಆ ಚೀಲ, ಅದರಲ್ಲೊಂದು ಮತ್ತೆ ಮತ್ತೆ ಮರೆತು ಹೋಗುವ ಮತ್ತು ಕದ್ದು ತಿನ್ನುತ್ತಿದ್ದ ಆ ಬಳಪ, ಸ್ಲೇಟು, ಇಶ್ಟೇ.
ನಾನು 1 ನೇ ತರಗತಿಗೆ ಸೇರಿದ ದಿನ ಈಗಲು ನೆನಪಿದೆ …
ನಿಜ ಹೇಳಬೇಕು ಎಂದರೆ ನನಗೆ ಶಾಲೆಗೆ ಸೇರುವ ವಯಸ್ಸೇನು ಆಗಿರಲಿಲ್ಲ. ನಾನು ಜಾಣೆ ಅನ್ನುವ ಎಲ್ಲರ ಮಾತಿಗೆ ಉಬ್ಬಿ ನನ್ನಪ್ಪ ಶಾಲೆಗೆ ಬಿಟ್ಟು ಬಂದ ದಿನವದು. ಮೊದಲ ದಿನದ ತರಗತಿಯ ನೆನಪು ಇನ್ನು ಅಶ್ಪಶ್ಟವಾಗಿ ನನ್ನ ಕಣ್ಣ ಮುಂದೆ ಇದೆ. ಶಾಲೆಗೆ ಅಪ್ಪ ಕರೆದುಕೊಂಡು ಬಂದು ಬಿಟ್ಟಿದ್ದರು. ಹಿಂದಿನ ಸಾಲಿನಲ್ಲಿ ನೆಲದ ಮೇಲೆ ನಾನು ಮುದುಡಿ ಕುಳಿತಿದ್ದೆ. ಅವರು ಏನು ಹೇಳಿದರೋ ನಾನು ಏನು ಬರೆದೆನೋ ನೆನೆಪಿಲ್ಲ.
ಮೂಲಬೂತ ಸೌಕರ‍್ಯ – ಆ ಶಾಲೆ ಕಂಡು ಕೇಳರಿಯದ ವ್ಯವಸ್ತೆ, ನಾಲ್ಕು ಗೋಡೆಗಳ ಮೇಲೆ ಹೆಂಚು ಹೊದಿಸಿದ ಗೂಡು. ಕಲ್ಲು ಹಾಸಿದ ನೆಲ ಟೀಚರ್ ಕುಳಿತುಕೊಳ್ಳಲು ಒಂದು ಮರದ ಕುರ‍್ಚಿ ಕೈಯಲ್ಲಿ ಒಂದು ಕಟ್ಟಿಗೆ. ಕರಿ ಬಣ್ಣದ ಬೋರ‍್ಡ್, ಚಾಕ್ ಪೀಸ್, ಇಶ್ಟೇ ತರಗತಿಯಲ್ಲಿ ಕಾಣುವ ಸಾಮಾನುಗಳು. ಶಾಲೆಯಲ್ಲಿ ಕಸ ಗುಡಿಸುವುದು, ಟೀಚರ್ ಊಟದ ಡಬ್ಬಿ ತೊಳೆಯುವುದು ದಿನಕ್ಕೊಬ್ಬರ ಸರದಿ, ಬೇಗ ಬಂದು ಶಾಲೆಯ ಬೀಗ ತೆಗೆಯುವವರು ನಮ್ಮಗಿಂತಲೂ ದೊಡ್ಡ ವಿದ್ಯಾರ‍್ತಿಗಳು, ಸಮಯಕ್ಕೆ ಸರಿಯಾಗಿ ಬೆಲ್ ಹೊಡೆಯುವುದೂ ಅವರೇ. ಅದೆಲ್ಲ ಹುಡುಗರು ನಾ ಮುಂದು ತಾ ಮುಂದು ಎಂದು ಮಾಡುತ್ತಿದ್ದ ಕೆಲಸಗಳು. ಅದು ಒಂದು ರೀತಿಯ ಹಿರೋಯಿಸಂ.
ಇನ್ನು ಶಾಲೆ ಬಿಡುವ ಆ ಸಮಯಕ್ಕಾಗಿ ಕಾಯುತ್ತಿದ್ದ ನಮಗೆ ಕಿವಿಗಳಲ್ಲೆವೂ ಆ ಗಂಟೆಯ ಸದ್ದಿಗೆ ಕಾತರಿಸುತ್ತಿದ್ದವು. ಗಂಟೆ ಹೊಡೆದಾಕ್ಶಣ ಹೊರಗೆ ಓಡಿ ಹೋಗುತ್ತಿದ್ದ ಆ ಕ್ಶಣ ಯಾವುದೋ ಪದಕ ಗೆದ್ದ ಸಂತಸ, ಪಂಜರದಿಂದ ಹಾರಿ ಹೋಗುವ ಆ ಹಕ್ಕಿಯ ಹಾಗೆ, ಸಂಜೆ ಗೂಡು ಸೇರಲು ಗುಂಪಾಗಿ ಹಾರುವ ಹಕ್ಕಿಯ ಹಾಗೆ ಹಾರಾಡುತ್ತ ಮನೆ ಸೇರುವ ತವಕ. ದಾರಿಯಲ್ಲಿ ಸಿಗುವ ಪೇರಲ ಹಣ್ಣಿನ ಆಸೆ, ಮಲ್ಲಿಗೆ ಮೊಗ್ಗು ಕಿತ್ತಿ ಉಡಿಯಲ್ಲಿ ತುಂಬಿಕೊಳ್ಳುವ ಹಂಬಲ ಇನ್ನು ಏನೇನೋ. ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಇದೇ ಹಾದಿಯಲ್ಲಿ ಸಾಗುತ್ತಿದ್ದ ಸಮಯ.
ಎಂತಹ ಹುರುಪಿತ್ತು ಅಂದಿನ ದಿನಗಳಲ್ಲಿ
ಈಗಿನ ದಿನಗಳು ಸಪ್ಪೆ ಅನ್ನಿಸುವ ಹಾಗೆ. ಅಂದಿನ ದಿನಗಳಲ್ಲಿ ಶಿಕ್ಶಕರು ಇದ್ದದ್ದೇ ಕಡಿಮೆ. ಇದ್ದಶ್ಟು ಮಂದಿ ತಾವು ಪಡೆಯುತ್ತಿದ್ದ ಸಂಬಳಕ್ಕೆ ಪ್ರಾಮಾಣಿಕರಾಗಿರಲು ಪ್ರಯತ್ನಿಸುತ್ತಿದ್ದರು, ಅಂತಾ ಕೆಲವರಿಂದಲೇ ನಾವು ಈ ಮಟ್ಟದಲ್ಲಿ ಇದ್ದೇವೆ ಎನ್ನುವುದು ವಾಸ್ತವ. ಇಂದು ವಿಪರೀತವಾಗಿರುವ ವಿದ್ಯಾಬ್ಯಾಸದ ವಾಣಿಜ್ಯೀಕರಣದ ನಡುವೆ ತಟ್ಟನೇ ನೆನಪಿಗೆ ಬಂದ ನನ್ನ ಶಾಲೆಯ ಆ ನೆನಪು ಮನ ಕಲಕಿತು, ಇಂದಿಗೂ ಅಂದಿಗೂ ಇರುವ ವ್ಯವಸ್ತೆಯ ಅಂತರದ ಆಳ ಬಹಳ. ಇಂದಿನ ಅಂತರರಾಶ್ಟ್ರೀಯ ಮಟ್ಟದ ಶಾಲೆಗಳು ಅನ್ನುವ ಈ ವ್ಯವಸ್ತಯಲ್ಲಿ ಸಂಕೀರ‍್ಣವಾದ ವಿದ್ಯಾಬ್ಯಾಸದ ಜೊತೆಗೆ ಇತರ ಸ್ಪರ‍್ದೆಗಳು ಆಟೋಟಗಳನ್ನು ಕಲಿಸಿಕೊಟ್ಟರೆ ನಮ್ಮ ಶಾಲೆ ನಮಗೆ ಬದುಕಿನ ಮೌಲ್ಯಗಳನ್ನ, ಕುಶಲತೆಗಳನ್ನ ಕಲಿಸಿತೇನೋ ಅನ್ನಿಸುತ್ತಿದೆ.
ಬಾಲ್ಯದ ಜೀವನ ಅದ್ಯಾಕೋ ಈಗೀಗ ಮತ್ತೆ ಮತ್ತೆ ನೆನಪಾಗುತ್ತಿದೆ. ಸೀದಾ ನಾ ಓದುತ್ತಿದ್ದ ಶಾಲೆಗೆ ಹೋಗಿ ಮುಕ್ಯೋಪಾದ್ಯಾಯರಿಗೆ, ಉಪಾದ್ಯಾಯರಿಗೆ, ವಂದಿಸಿ ಅವರ ಜೊತೆ ಮಾತುಕತೆ ನಡೆಸಿ, ಶಾಲೆಯ ಸುತ್ತ ನಾವಾಟವಾಡುತ್ತಿದ್ದ ಮೈದಾನಕ್ಕೆ ಒಂದು ಸುತ್ತುಹಾಕಿ ಕುಣಿದಾಡಿ ಬರುವ ಆಸೆ ಚಿಗುರೊಡೆಯತೊಡಗಿದೆ.
ಕಣ್ಣಾ ಮುಚ್ಚೆ, ಕಾಡೇ ಗೂಡೇ
ಉದ್ದಿನ ಮೂಟೆ, ಉರುಳೇ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ…
(ಚಿತ್ರಸೆಲೆ: mustbethistalltoride.com, newindianexpress.com, sidlaghatta.com)
Adbhutavaada Baravanige.. Haage nanna baalya nenapige bandu onderedu nimisha summane kootubitte…
ಬಹಳ ಚೆಂದದ ಬರಹ. ನಿಮ್ಮಂತೆ ನನಗೂ ನನ್ನ ಬಾಲ್ಯದ ಶಾಲಾ ದಿನಗಳು ನೆನಪಿಗೆ ಬಂದವು
ತುಂಬಾ ಸೊಗಸಾಗಿ ಬಂದಿದೆ, ನನ್ನನ್ನು ಹಿಂದಕ್ಕೆ ಕರೆದು ಕೊಂಡು ಹೋಯಿತು….ಅಷ್ಟು ಹೇಳಬಹುದು… So it’s impressive which can take you down the memory lane