ಪತ್ತೇದಾರಿ ಕತೆ: ಪಾರ‍್ಕಿನಲ್ಲಿ ಕೊಲೆ(ಕಂತು-2)
– ಬಸವರಾಜ್ ಕಂಟಿ.
ಕಂತು-1 ಕಂತು-2
ಮಾರನೆಯ ದಿನ ಬೆಳ್ಳಂಬೆಳಗ್ಗೆ ತುಮಕೂರಿಗೆ ಹೊರಟೆವು. ತಲುಪಿದಾಗ ಸಮಯ ಎಂಟಾಗಿತ್ತು. ಅಲ್ಲಿನ ಮನೆ, ಬೆಂಗಳೂರಿನ ಮನೆಗಿಂತ ತುಸು ದೊಡ್ಡದಾಗಿದ್ದು, ಇನ್ನೊಂದು ಮಲಗುವ ಕೋಣೆ ಇತ್ತು. ಮನೆಯಲ್ಲಿ ಗುರುರಾಜ್ ಅವರ ತಾಯಿ, ಪುಟ್ಟ ಮಗು ಇತ್ತು. ಅವರ ಮೊದಲನೆಯ ಹೆಂಡತಿ, ಮಂಜುಳಾ ಇರಲಿಲ್ಲ. ಅವಳಿಗೆ ಕರೆ ಮಾಡಿ, ನಾವು ಬರುವುದು ಹೇಳುತ್ತೇನೆ ಎಂದು ರಾಜೇಂದ್ರ ಹೇಳಿದ್ದಾಗ, ನಾನೇ ಬೇಡ ಎಂದಿದ್ದೆ. ಇಂತಹ ಕೇಸಿನಲ್ಲಿ ಹೇಳದೆ ಕೇಳದೆ ಹೋದಾಗಲೇ ಹೆಚ್ಚು ವಿವರ ಸಿಗುತ್ತವೆ ಎಂದು. ಗುರುರಾಜ್ ಅವರ ತಾಯಿಗೆ, ಮಂಜುಳಾ ಎಲ್ಲಿ ಎಂದು ಕೇಳಿದಾಗ,
“ಇಲ್ಲೇ ಕೆಲಸಕ್ ಹೋಗಿದಾಳೆ”, ಎಂದರು. ಸುಮಾರು ಅಯ್ವತ್ತರ ವಯಸ್ಸು. ಕರಿಬಿಳಿ ತಲೆ, ಮುಕ, ಮಯ್ ಎಲ್ಲವೂ ಗುಂಡು ಗುಂಡಾಗಿತ್ತು. ಅವರ ಮುಕ, ಕಣ್ಣುಗಳಲ್ಲಿ ಯಾವ ಹೊಳಪೂ ಇರಲಿಲ್ಲ. ಮನೆ ದೊಡ್ಡದಾಗಿದ್ದರೂ ಜೀವಂತಿಕೆಯ ಸುಳಿವು ಮರೆಯಾಗಿತ್ತು.
“ಯಾವ್ ಕೆಲಸ?” ನಾನು ಕೇಳಿದೆ.
“ಮನೆ ಕೆಲಸ. ನೀವ್ ಬಂದ್ರಲ್ಲಾ… ಆ ದಾರಿಲೇ ಒಂದ್ ದೊಡ್ ಮನೆ ಇದೆ ನೋಡಿ, ಅದೇ”
ರಾಜೇಂದ್ರ ಕರೆ ಮಾಡಿ, ಮಂಜುಳಾಗೆ ತುರ‍್ತಾಗಿ ಬರುವಂತೆ ಹೇಳಿದ. ಹತ್ತು ನಿಮಿಶದಲ್ಲಿ ಅವಳು ಬಂದಳು. ದುಂಡಗಿನ ಮುಕ, ಅಯ್ದುವರೆಗೂ ಮೀರಿ ಎತ್ತರ. ಬಹುಶ ಗುರುರಾಜನಿಗಿಂತಲೂ ಇವಳೇ ಎತ್ತರ ಇದ್ದಿರಬಹುದು. ಮಯ್ ಕಯ್ ತುಸು ದಪ್ಪದಿದ್ದವು. ಅನಿತಾಗೆ ಹೋಲಿಸಿದರೆ ಮಂಕು ಎಂದುಕೊಂಡೆ. ಅವಳು ಉಟ್ಟಿದ್ದ ಬಿಳಿ ಸೀರೆ ನೋಡಿ ಯಾಕೋ ಮನಸ್ಸಿಗೆ ನೋವಾಯಿತು.
ರಾಜೇಂದ್ರನಿಗೆ ಮತ್ತೆ ಹೊಟ್ಟೆ ತೊಳಸಿ, ಇದ್ದ ವಿಶ್ಯ ಕಾರಿಕೊಂಡ. “ಅಯ್ಯೋ ಶಿವನೇ… ಏನ್ ಪಾಪ ಮಾಡಿದ್ನೋ ನಾನು” ಎನ್ನುತ್ತಾ ತಾಯಿ ಅಳಲು ಮೊದಲುಮಾಡಿದರೆ, ಇವಳು ಗೋಡೆಗೆ ಆತು ಕುಳಿತು, ಕಣ್ಣಲ್ಲಿ ನೀರು ತುಂಬಿಕೊಂಡಳು. ಅವಳ ಅಳು ಅಸಹಜ ಅನ್ನಿಸದಿದ್ದರೂ ಆ ಒತ್ತಡ ಇರಲಿಲ್ಲ. ರಾಜೇಂದ್ರ ಎದ್ದು ತಾಯಿಗೆ ಸಮಾದಾನ ಮಾಡಿದ. ಒಂದಯ್ದು ನಿಮಿಶದಲ್ಲಿ ಮತ್ತೆ ಅಕ್ಕ-ಪಕ್ಕ ಮನೆಯವರು ಸೇರಿದರು. ಅವರಿಗೆ ನಾನು ಒಂದೆರಡು ಕೇಳ್ವಿಗಳನ್ನು ಕೇಳಿದೆ. ಅರ‍್ದ ಗಂಟೆಯಶ್ಟೊತ್ತಿಗೆ ಅವರನ್ನು ಹೇಗೋ ಸಮಾದಾನಪಡಿಸಿ, ಆಸ್ಪತ್ರೆಗೆ ಕರೆದುಕೊಂಡು ಹೊರಟೆವು. ಅಲ್ಲಿ ದೇಹ ಗುರುತು ಮುಗಿದಮೇಲೆ ಅವರಿಗೆ ಅದನ್ನು ಕೊಡುವ ಪ್ರಕ್ರಿಯೆ ಮುಗಿಸಿ, ಮಾರನೆಯ ದಿನ ಸ್ಟೇಶನ್ನಿಗೆ ಬರುವಂತೆ ರಾಜೇಂದ್ರ ಸೂಚಿಸಿದ.
ಮರುದಿನ ಬೆಳಗ್ಗೆ ಹನ್ನೊಂದರ ಸುಮಾರಿಗೆ ತಾಯಿ ಮತ್ತು ಮಂಜುಳಾ ಒಂದಿಬ್ಬರು ನೆಂಟರೊಂದಿಗೆ ಸ್ಟೇಶನ್ನಿಗೆ ಬಂದರು. ಅವರಿಬ್ಬರನ್ನೇ ಒಂದು ಕಡೆ ಕೂರಿಸಿ, ನಾನು ಮತ್ತು ರಾಜೇಂದ್ರ ಕೇಳ್ವಿಗಳನ್ನು ಶುರುಹಚ್ಚಿಕೊಂಡೆವು.
“ನಿಮ್ಮ ಮತ್ತು ಗುರುರಾಜರ ಸಂಬಂದ ಹೇಗಿತ್ತು?”
ಅರೆಕ್ಶಣ ಯೋಚಿಸಿ, “ಚೆನ್ನಾಗೇ ಇತ್ತು ಸರ್. ಯಾ…ಕೆ ಹೀಗೆ ಕೇಳ್ತೀರಾ?” ಹಿಂಜರಿಕೆಯಿಂದ ಉತ್ತರಿಸಿದಳು.
“ಯಾಕೆ… ಅವರಿಗೆ ಬೆಂಗ್ಳೂರಲ್ಲಿ ಇನ್ನೊಬ್ಬ ಹೆಂಡತಿ ಇದ್ದದ್ದು ನಿಮಗೆ ಗೊತ್ತಿಲ್ವಾ?”
“ಏನು? ಇನ್ನೊಬ್ಬ ಹೆಂಡ್ತಿನಾ?” ಅಚ್ಚರಿಯಿಂದ ಕೇಳಿದಳು ಮಂಜುಳಾ. ತಾಯಿಗೆ ಕೂಡ ಅಚ್ಚರಿಯಾಯಿತು. ನಾನು ಅವಳ ಮುಕದಲ್ಲಿ ಸುಳ್ಳಿನ ಎಳೆ ಹಿಡಿಯಲು ಹವಣಿಸುತ್ತಿದ್ದೆ.
“ಹೂಂ… ಗೊತ್ತಿಲ್ಲಾ ಅಂತಾ ನಾಟಕಾ ಆಡ್ತಾಯಿದೀರಾ?”
“ಇಲ್ಲಾ ಸರ್. ದೇವರಾಣೆ ನಂಗೊತ್ತಿರಲಿಲ್ಲ, ನನ್ ಮಗು ಮೇಲಾಣೆ ಬೇಕಿದ್ರೆ”
“ಏನ್ ಅಮ್ಮಾ, ನಿಮಗೂ ಗೊತ್ತಿರಲಿಲ್ವಾ?”
“ಇಲ್ಲಪ್ಪಾ… ನಿಜವಾಗ್ಲೂ ನಮಗೆ ಗೊತ್ತಿಲ್ಲ” ಎಂದರು ತಾಯಿ.
“ನಿಮಗೆ ಹೇಗೋ ಈ ವಿಶ್ಯ ಗೊತ್ತಾಗಿ, ಸಿಟ್ಟೆದ್ದು ನೀವೇ ಈ ಕೊಲೆ ಮಾಡಿದ್ದೀರಾ ಅಂದ್ರೆ?”
“ಅಯ್ಯೋ ಕಂಡಿತವಾಗ್ಲೂ ಇಲ್ಲಾ ಸರ್. ನನಗೇನೂ ಗೊತ್ತಿಲ್ಲ. ನಿನ್ನೆ ನಾನ್ ತುಮಕೂರಲ್ಲೇ ಇದ್ದೆ ಸರ್, ಬೇಕಿದ್ರೆ ಯಾರಿಗಾದ್ರೂ ಕೇಳಿ”
ನಾನು ಬಾಯಿ ಹಾಕಿದೆ, “ಅವರನ್ನಾ ಕೊನೆ ಸಾರಿ ಯಾವಾಗ್ ನೋಡಿದ್ದು?”
“ಹೋದ್ ಬಾನುವಾರ ಬಂದಿದ್ರು. ಸೋಮವಾರ ಬೆಳಗ್ಗೆ ಎದ್ದು ಹೋದ್ರು. ಅದೇ ಕೊನೆ”
ನಾನು ಕೇಳಿದೆ “ನೀವು ಮೊನ್ನೆ ಬೆಳಗ್ಗೆ, ಅಂದ್ರೆ ಕೊಲೆಯಾದ ದಿನ, ಎಲ್ಲಿದ್ರಿ?”
“ನಾನು ಬೆಳಗ್ಗೆ ಬೇಗ ಎದ್ದು ಕೆಲಸಕ್ಕೆ ಹೋಗ್ತೀನಿ ಸರ‍್”
“ಬೇಗ ಅಂದ್ರೆ?”
“ನಾ…ಲಕ್ ಗಂಟೆಗೆ ಸರ‍್”, ಅಶ್ಟೊತ್ತು ನನ್ನೆಡೆಗೆ ನೆಟ್ಟಿದ್ದ ಅವಳ ನೋಟ ಪಟಪಟನೆ ಬೆರೆಡೆ ಹೋಗಿ, ಮತ್ತೆ ನನ್ನತ್ತ ಬಂದು ಕೆಳಗಿಳಿಯಿತು.
“ಅಶ್ಟ್ ಬೇಗಾನಾ?”
“ಹೌ…ದು ಸರ‍್”, ಸೆರಗಿನ ತುದಿಯನ್ನು ಎಡ ತೋರುಬೆರಳಿಗೆ ಸುತ್ತಿಕೊಳ್ಳುತ್ತಾ, “ದೊಡ್ ಮನೆ ಅಲ್ವಾ… ತುಂಬಾ ಕೆಲಸ ಇರುತ್ತೆ. ಗುಡಿಸಿ, ಒರಸಿ, ತಾತನಿಗೆ ತಿಂಡಿ ಮಾಡಿಟ್ಟು, ಏಳು ಗಂಟೆಯಶ್ಟೊತ್ತಿಗೆ ಮನೆಗೆ ಬರಬೇಕು. ಮನೆಗೆ ಬಂದು ಪುಟ್ಟಿಗೆ ಸ್ನಾನ ಮಾಡ್ಸಿ, ತಿಂಡಿ ಮಾಡಿಕೊಡಬೇಕು”
“ಹಮ್…” ಎಂದು ಸುಮ್ಮನಾದೆ. ನನಗೆ ಸುಳ್ಳಿನ ಎಳೆ ಸಿಗಲೇ ಇಲ್ಲ. ಅವರು ಹೊರಟು ಹೋದರು.
ರಾಜೇಂದ್ರ ನನ್ನೆಡೆಗೆ ತಿರುಗಿ, “ನಾಲಕ್ ಗಂಟೆ ಅಂದ್ರೂ, ಅಲ್ಲಿಂದ ಇಲ್ಲಿ ಬಂದು ಕೊಲೆ ಮಾಡಿ ಹೋಗಿರ ಬಹುದಾದ ಎಲ್ಲ ಸಾದ್ಯತೆನೂ ಇದೆ, ಅಲ್ವಾ?” ಎಂದ.
“ಅಪ್ ಕೋರ‍್ಸ್. ಅವಳು ಅಲ್ಲೇ ಇದ್ಳು ಅಂತಾ ಪ್ರೂಪ್ ಸಿಕ್ಕರೆ ಮಾತ್ರ ಆ ಡೌಟು ಕ್ಲಿಯರ್ ಆಗೋದು”
*************************
ಅಂದು ಸಂಜೆ ರಾಜೇಂದ್ರನ ಜೊತೆ ಸ್ಟೇಶನ್ನಿನಲ್ಲಿ ಟೀ ಕುಡಿಯುತ್ತಾ, ಕೇಸಿನ ಅಂಶಗಳನ್ನು ಮೆಲುಕುಹಾಕಿದೆವು. ಸತ್ತದ್ದು ಒಬ್ಬ ಮಾಮೂಲಿ ಮನುಶ್ಯ, ಹಾಗಾಗಿ ದುಡ್ಡಿನ ಅತವಾ ಆಸ್ತಿಯ ಕಾರಣ ಇರಲು ಸಾದ್ಯವಿರಲಿಲ್ಲ. ಸತ್ತ ರೀತಿ, ಜಾಗ ನೋಡಿದರೆ ಆತ್ಮಹತ್ಯೆಯಂತೂ ಅಲ್ಲ. ಇನ್ನು ಪೋಸ್ಟಮಾರ‍್ಟಮ್ ರಿಪೋರ‍್ಟ್ ಪ್ರಕಾರ ಸತ್ತದ್ದು ಬೆಳಗ್ಗೆ ಅಯ್ದೂವರೆ. ಹೊಟ್ಟೆಯಲ್ಲಿ ಅಪಾರ ಪ್ರಮಾಣದ ಸೋಮರಸ, ರಾಮರಸ, ಇನ್ನೂ ಅನೇಕ ರಸಗಳ ಜೊತೆ ನಿದ್ದೆ ಬರುವ ಔಶದಿನೂ ಸಿಕ್ಕವಂತೆ. ಅವನನ್ನು ಮಲಗಿಸಲು ಇರಬೇಕು ಎಂದುಕೊಂಡೆ. ಅವನು ಮಲಗಿದ ಮೇಲೆ ಅಲ್ಲಿ ತಂದು ಹಾಕಿ, ಕೊಲೆ ಮಾಡಿರಬಹುದು ಅತವಾ ಏನಾದರೂ ಸಬೂಬು ಹೇಳಿ ಆ ಜಾಗಕ್ಕೆ ಕರೆದುಕೊಂಡು ಹೋಗಿ, ನಿದ್ದೆ ಬರಿಸಿ ಆಮೇಲೆ ಕೊಂದಿರಬಹುದು. ಕೊಲೆಯನ್ನು ಮೊದಲಬಾರಿ ಕಂಡ ಹುಡುಗಿಗೂ ಇವನಿಗೂ ಯಾವುದೇ ಸಂಬಂದವಿಲ್ಲ ಅಂತಾ ನಾವಿನ್ನೂ ನಿರ‍್ದರಿಸಿರಲಿಲ್ಲ. ಆ ನಿಟ್ಟಿನಲ್ಲೂ ತನಿಕೆ ನಡೆಸಬೇಕಿತ್ತು.
ಇನ್ನು ಅವನ ಮೊದಲನೇ ಹೆಂಡತಿಗೆ ತನ್ನ ಸವತಿಯ ಬಗ್ಗೆ ಗೊತ್ತಿರಲಿಲ್ಲ ಎಂಬುದಂತೂ ನಿಜ. ಹಾಗಾಗಿ ಅವಳು ಕೊಲೆ ಮಾಡಿದ್ದರೆ, ಬೇರೆ ಏನಾದರೂ ಕಾರಣವಿರಬಹುದು. ಎರಡನೇ ಹೆಂಡತಿ ಕೊಲೆ ಮಾಡಿರುವ ಸಾದ್ಯತೆ ಕಮ್ಮಿ, ಆದರೂ ಬಿಡುವಂತಿಲ್ಲ. ಅಕ್ಕ-ಪಕ್ಕದ ಮನೆಯವರ ಪ್ರಕಾರ ಅವನಿಗೆ ಕುಡಿತ ಹೆಚ್ಚಾಗಿ, ಮನೆಯಲ್ಲಿ ಜಗಳ ಶುರುವಾಗಿತ್ತು. ಯಾಕೋ ಆ ಜಿಮ್ ಬಾಡಿ ಮೇಲೆ ನನಗೆ ಅನುಮಾನ. ಅಕ್ಕ-ತಮ್ಮ ಸೇರಿ ಕಂಡಿತವಾಗಿ ಏನನ್ನೋ ಮುಚ್ಚಿಡುತ್ತಿದ್ದಾರೆ. ಈ ಪೋನಿನ ಕರೆಗಳ ವಿವರಗಳು ಸಾಕಶ್ಟು ಸಹಾಯ ಮಾಡುತ್ತವೆ. ಅವನು ಸತ್ತಮೇಲೂ ಇಬ್ಬರೂ ಹೆಂಡಿರು ಅವನಿಗೆ ಕರೆ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಕೊಲೆಯಾದ ಹಿಂದಿನ ರಾತ್ರಿ ಅನಿತಾ ತನ್ನ ತಮ್ಮನಿಗೂ ಅನೇಕ ಬಾರಿ ಕರೆ ಮಾಡಿದ್ದಳು. ಇನ್ನು ಮಂಜುಳಾ ಮತ್ತು ಗುರುರಾಜನ ಸ್ನೇಹ ಹೇಳಿಕೊಳ್ಳುವಶ್ಟು ಸರಿಯಿರಲಿಲ್ಲ ಎಂದು ಅಕ್ಕ-ಪಕ್ಕದವರು ಹೇಳಿದ್ದರು. ಬಂದ್ರೆ ಬಂದ, ಬಿಟ್ರೆ ಬಿಟ್ಟ. ಗುರುರಾಜ ಕಳೆದ ಹದಿನಯ್ದು ದಿನಗಳಿಂದ ನಿಯಮಿತವಾಗಿ ಒಂದು ನಂಬರ್ ರಿಗೆ ಕರೆ ಮಾಡಿದ್ದ, ಮತ್ತು ಅದೇ ನಂಬರ‍್ ನಿಂದ ಕರೆಗಳು ಅವನಿಗೂ ಬಂದಿದ್ದವು. ಈಗ ಆ ನಂಬರ್ ನಾಟ್ ರೀಚಬಲ್ ಆಗಿತ್ತು. ಅದು ಬಿಹಾರಿನಲ್ಲಿ ಯಾರೋ ಸುರೇಂದ್ರನಾತ್ ಎನ್ನುವವನ ಹೆಸರಿನಲ್ಲಿತ್ತಂತೆ. ಸುಳ್ಳು ಮಾಹಿತಿ ಕೊಟ್ಟು ಪಡೆದ ನಂಬರ್ ಎಂದು ಗೊತ್ತು ಮಾಡಲು ಹೆಚ್ಚು ಸಮಯ ಬೇಕಾಗಲಿಲ್ಲ.
ಮರುದಿನ ರಾಜೇಂದ್ರನಿಗೆ ಬೇರೆ ಕೆಲಸವಿದ್ದುದರಿಂದ ನಾನೊಬ್ಬನೇ ತನಿಕೆ ಮುಂದುವರೆಸಲು ಮನೆಯಿಂದ ಹೊರಬಿದ್ದೆ. ನನಗೆ ಗೊತ್ತಾಗಬೇಕಿದ್ದು ಆ ಜಿಮ್ ಬಾಡಿ ಬಗ್ಗೆ. ನೇರ ಅವರ ಮನೆಗೆ ಹೋದೆ. ಮನೆಯಲ್ಲಿ ಅನಿತಾ ಮಾತ್ರ ಇದ್ದಳು. ಅವನನ್ನು ಕರೆಸಲು ಹೇಳಿದ ಹದಿನಯ್ದು ನಿಮಿಶಗಳಲ್ಲಿ ಅವನು ಬಂದ.
ಅವನನ್ನು ನನ್ನ ಎದುರಿಗೆ ಕೂರಿಸಿಕೊಂಡು, ಕಣ್ಣುಗಳನ್ನೇ ದಿಟ್ಟಿಸುತ್ತ, “ಅವತ್ತು ಬೆಳಗ್ಗೆ ನೀನು ಏನ್ ಮಾಡ್ತಾಯಿದ್ದೆ ಅಂತಾ ನಿಜಾ ಹೇಳಿದ್ರೆ ನಿನಗೇ ಒಳ್ಳೇದು… ನಾನಾಗೇ ಗೊತ್ತು ಮಾಡ್ಕೊಂಡ್ರೆ ನೀನ್ ಉಳಿಯೊಲ್ಲಾ” ಅಂದೆ. ಅವನಿಗೆ ಮಯ್ಯೆಲ್ಲಾ ಬೆವರಿ ಅಕ್ಕನೆಡೆಗೆ ಮತ್ತೆ ಮತ್ತೆ ನೋಡಿದ. ನಾನು ಕಣ್ಣುಗಳನ್ನು ಸರಿಸಲಿಲ್ಲ, ನಿನಗಿನ್ನು ಉಳಿಗಾಲವಿಲ್ಲ ಎಂದು ಹೇಳುವಂತೆ. ಅವನು ಕಯ್ಗಳನ್ನು ಉಜ್ಜುತ್ತಾ ಮಾತಾಡಿದ,
“ಸಾರ್ ನಾನು ನಿಜಾ ಹೇಳ್ತೀನಿ… ಆದ್ರೆ ನೀವು ನಂಬಬೇಕು ಪ್ಲೀಸ್”
“ಆಯ್ತಪ್ಪಾ ನಂಬ್ತೀನಿ. ನಾನ್ ಒಂದ್ ಸಾರಿ ಮಾತ್ ಕೊಟ್ ಮೇಲೆ ಮುಗೀತು. ಈಗ ಹೇಳು” ಎಂದೆ.
“ಅವತ್ತು ರಾತ್ರಿ ಅಕ್ಕಂಗೂ ಬಾವಂಗೂ ಜಗಳ ಆಗಿ, ಅಕ್ಕಂಗೆ ಹೊಡದಿದ್ದಾ ಸರ್. ನಾನು ರಾತ್ರಿ ಮನೆಗೆ ಬಂದಮೇಲೆ ವಿಶಯ ಗೊತ್ತಾಗಿ, ಸಿಟ್ಟು ಬಂದು, ನನ್ನ ಬೈಕ್ ತೊಗೊಂಡು ಅವ್ನನ್ನಾ ಎಲ್ಲಾ ಬಾರ್ ನಲ್ಲಿ ಹುಡುಕ್ದೆ. ಬಾರ್ ಗಳು ಮುಚ್ಚಿದಮೇಲೂ ಸುತ್ತಾಮುತ್ತಾ ಹುಡುಕ್ತಾನೇ ಇದ್ದೆ”
“ಆಮೇಲೆ?”
“ಒಂದ್ ಕಡೆ ಬೀದಿಲಿ ಅವ್ನು, ಅವನ ಜೊತೆ ಇನ್ನೊಬ್ಬ ಕುಡಿತಾ ಕುಂತಿದ್ರು. ನಾನು ಯಾಕೆ ಹೊಡ್ದೆ ಅಂತಾ ಕೇಳಿದ್ದಕ್ಕೆ, ಇಬ್ರೂ ಸೇರ‍್ಕೊಂಡು ನನ್ನೇ ಹೊಡದ್ರು ಸಾರ್. ನಾನು ಸುದಾರಿಸ್ಕೊಳ್ಳೊಶ್ಟರಲ್ಲಿ ಓಡ್ ಹೋಗ್ಬಿಟ್ರು” ಎಂದು ಸುಮ್ಮನಾದ. ಹಾಗಾದ್ರೆ ಇವನದು ಮಾತ್ರೆ ತಿಂದು ಬೆಳೆಸಿರೋ ಬಾಡಿ ಅಂದುಕೊಂಡೆ. “ಅವನ ಜೊತೆ ಯಾವ ಪ್ರೆಂಡೂ ಇರಲಿಲ್ಲಾ… ನೀನೇ ಅವ್ನನ್ನಾ ಹುಡುಕಿ, ಕೊಲೆ ಮಾಡಿದೀಯಾ” ಅಂತ ದಬಾಯಿಸಿದೆ.
“ಇಲ್ಲಾ ಸರ್. ದೇವರಾಣೆ ಇಲ್ಲಾ”
“ಹೋಗಲಿ… ಆ ನಿಮ್ಮ ಬಾವನ ಪ್ರೆಂಡ್ ಹೇಗಿದ್ದ?”
ನೆನಪಿಸಿಕೊಳ್ಳುತ್ತಾ ಹೇಳಿದ, “ನನ್ನಶ್ಟೇ ಎತ್ತರ ಸಾರ್… ಕಪ್ಪಗೆ, ತೆಳ್ಳಗಿದ್ದ… ಮೀಸೆ ಬಿಟ್ಟಿದ್ದ. ನೋಡೋಕೆ ಬಾವನಿಗಿಂತಾ ಚಿಕ್ಕವನ ಹಾಗೆ ಕಾಣ್ತಾಯಿದ್ದ”
“ಇದೆಲ್ಲಾ ನಡೆದಿದ್ದು ಎಶ್ಟೊತ್ತಿಗೆ? ಎಲ್ಲಿ?”
“ಎಚ್. ಎಮ್. ಟಿ. ಪ್ಯಾಕ್ಟರಿ ಹತ್ರ ಸರ್. ಬೆಳಗ್ಗೆ ಮೂರಾಗಿತ್ತು”
“ಬೇರೆ ಯಾರಾದ್ರೂ ನಿನ್ನನ್ನಾ ಅಲ್ಲಿ ನೋಡಿರೋರು ಇದಾರಾ?”
“ಇಲ್ಲಾ ಸರ್. ಅಲ್ಲಿ ಯಾರೂ ಇರಲಿಲ್ಲಾ”
“ವಾಹ್. ಎಶ್ಟ್ ಚೆನ್ನಾಗ್ ಕತೆ ಕಟ್ತೀಯಾ”
“ಇಲ್ಲಾ ಸರ್… ಪ್ಲೀಸ್ ನನ್ನನ್ ನಂಬಿ” ಅವನ ಕಣ್ಣು ತುಂಬಿದ್ದವು.
“ಜಗಳ ಯಾಕಾಯ್ತು?” ಅನಿತಾಳನ್ನು ಕೇಳಿದೆ.
“ಅವ್ರು ಕುಡಿಯೋದು ಜಾಸ್ತಿ ಮಾಡಿದ್ರು… ನಾನು ರಾತ್ರಿ ಹೊರಗ್ ಹೋಗೋದು ಬೇಡ ಅಂತ ಅಂದೆ, ಅದು ಅವರಿಗೆ ಇಶ್ಟ ಆಗ್ಲಿಲ್ಲಾ… ನಾನೂ ಬಿಡಲಿಲ್ಲ. ಅವರಿಗೆ ಸಿಟ್ ಬಂದು ಹೊಡದ್ರು”
“ಹಮ್”, ಎನ್ನುತ್ತಾ ಎದ್ದು ನಿಂತೆ. ವಿಕ್ಕಿಯೂ ನಿಂತ. ಅವನಿಗೆ, “ನಿನ್ ಪೋನು ಸ್ವಿಚ್ ಆಪ್ ಆಗೋ ಹಾಗಿಲ್ಲ. ನಾನು ಕಾಲ್ ಮಾಡಿದ್ರೆ ಎತ್ತಿ ಮಾತಾಡಬೇಕು ಅಶ್ಟೇ. ಇಲ್ದಿದ್ರೆ ಏರೋಪ್ಲೇನು, ಹೆಲಿಕಾಪ್ಟರ‍್ರು ಎಲ್ಲಾ ನೋಡ್ತೀಯಾ” ಎಂದೆ.
“ಇಲ್ಲಾ ಸರ್. ನೀವು ಅರ‍್ದ ರಾತ್ರೀಲಿ ಕಾಲ್ ಮಾಡಿದ್ರೂ ರಿಸೀವ್ ಮಾಡ್ತೀನಿ”
“ಗುಡ್” ಎನ್ನುತ್ತಾ ಹೊರಬಂದೆ.
*********************************
ಕೇಸಿಗೆ ಯಾವ ತಿರುವು ಸಿಕ್ಕದಿದ್ದರೂ ಒಂದು ಮಹತ್ವದ ವಿಶಯ ತಿಳಿದಿತ್ತು. ಅವನು ಹೇಳಿದ್ದು ನಿಜವೋ ಸುಳ್ಳೋ ಇನ್ನೂ ನಿಕ್ಕಿಮಾಡಿಕೊಳ್ಳಬೇಕು. ತುಮಕೂರಿಗೆ ಹೋಗಿ ಮಂಜುಳಾ ಬಗ್ಗೆ ಇನ್ನಶ್ಟು ಕೆದಕಬೇಕು ಎಂದುಕೊಂಡು ಹೊರಟೆ. ಅಲ್ಲಿ ತಲುಪಿದಾಗ ಗಂಟೆ ಮದ್ಯಾಹ್ನ ಎರಡಾಗಿತ್ತು. ನೇರವಾಗಿ ಮಂಜುಳಾ ಕೆಲಸ ಮಾಡುತ್ತಿದ್ದ ದೊಡ್ಡ ಮನೆಗೆ ಹೋದೆ. ಎಂಬತ್ತು ಅರವತ್ತು ಅಡಿಗಳ ಜಾಗದಲ್ಲಿ ಕಟ್ಟಲಾಗಿದ್ದ ನೆಲ ಅಂತಸ್ತಿನ ದೊಡ್ಡ ಮನೆ. ಹೂವಿನ ಗಿಡಗಳು, ಕೈದೋಟವಿದ್ದ ವಿಸ್ತಾರವಾದ ಹೊರಾಂಗಣ. ತೆರೆದೇ ಇದ್ದ ಅಗಲವಾದ ತಲಬಾಗಿಲು ನೋಡಿ ಒಳಹೊಕ್ಕೆ. ದೊಡ್ಡದಾಗಿ, ಅಚ್ಚುಕಟ್ಟಾಗಿದ್ದ ನಡುಮನೆ, ತೇಗದ ದೊಡ್ಡ ಸೋಪಾ, ಮಾಳಿಗೆಯಿಂದ ಜೋತುಬಿಟ್ಟಿದ್ದ ಗಾಜಿನ ಲಾಂದ್ರ, ಮೂಲೆಯಲ್ಲಿ ಕುಸುರಿ ಕೆಲಸವಿದ್ದ ತಾಮ್ರದ ಹೂದಾನಿ ಎಲ್ಲವೂ ಇದು ದುಡ್ಡಿರುವವರ ಮನೆಯೆಂದು ಚೀರಿ ಹೇಳುತ್ತಿದ್ದವು.
“ಯಾರು?” ಎನ್ನುತ್ತ ಮಂಜುಳಾ ಅಡುಗೆಮನೆಯಿಂದ ಹೊರಗೆ ಬಂದಳು.
ನನ್ನನ್ನು ನೋಡಿ ಅಚ್ಚರಿಯಾದರೂ, ಸುದಾರಿಸಿಕೊಂಡು, “ಬನ್ನಿ… ಬನ್ನಿ… ಕೂತ್ಕೊಳ್ಳಿ” ಎಂದು ಸೋಪಾ ಕಡೆಗೆ ಕಯ್ ಮಾಡಿದಳು.
“ಒಂದೇ ನಿಮಿಶ, ಬಂದ್ಬಿಟ್ಟೆ”, ಎಂದು ಅಡುಗೆ ಮನೆಗೆ ಹೋದಳು. ಗಂಡಸಿನ ದನಿಯೊಂದು ಕೇಳುತ್ತಿತ್ತು. ಎರಡು ನಿಮಿಶದ ನಂತರ ಕೋಲನ್ನು ಹಿಡಿದು ಒಬ್ಬ ಮುದುಕ ಹೊರಬಂದ. ಬಿಳಿ ಲುಂಗಿ, ಜುಬ್ಬಾ ದರಿಸಿದ್ದ ಅವನು ಅಯ್ದು ಅಡಿ ಎತ್ತರವಿದ್ದಿರಬೇಕು. ಜೋತು ಬಿದ್ದಿದ್ದ ಗಲ್ಲ, ಬಿಳಿ ತಲೆ ನೋಡಿ, ಕನಿಶ್ಟ ಎಂಬತ್ತು ಎಂದುಕೊಂಡೆ. ಉದ್ದ, ಬಿಳಿ ಮುಕ, ಅಗಲ ಹೊಳ್ಳೆಯ ದುಂಡ ಮೂಗು, ತುಸು ದಾಡಸಿ ಮಯ್. ನಿದಾನವಾಗಿ ನಡೆದು ಬಂದು ಸೋಪಾದ ಮೇಲೆ ಕುಳಿತುಕೊಂಡನು. ಅವನ ಹಿಂದಿಂದೆ, ಒಂದು ಕಯ್ಯಲ್ಲಿ ಮಾತ್ರೆ, ಇನೊಂದರಲ್ಲಿ ನೀರಿನ ಗ್ಲಾಸು ಹಿಡಿದು ಮಂಜುಳಾ ಬಂದಳು. ಅವನು ಮಾತ್ರೆ ನುಂಗಿದ. ಮಂಜುಳಾ ಪರಿಚಯ ಮಾಡಿಕೊಟ್ಟಳು.
“ಗುರುರಾಜ್ ತೀರಿದ ದಿನ, ಬೆಳಗ್ಗೆ ನೀವು ಇಲ್ಲೆ ಇದ್ರಿ ಅಲ್ವಾ?” ಎಂದು ಮಂಜುಳಾಗೆ ಇನ್ನೊಮ್ಮೆ ಕೇಳಿದೆ.
“ಹೌದು… ಆದ್ರೆ”, ಎಂದು ಎನೋ ಹೇಳಲು ಹೊರಟಿದ್ದವಳನ್ನು ತಡೆದು, “ನಾನು ತಾತನ ಜೊತೆ ಸ್ವಲ್ಪ ಮಾತಾಡಬಹುದಾ?” ಎಂದೆ.
“ಓಹ್! ಅದಕ್ಕೇನು… ನಿಮಗ್ ಏನ್ ಬೇಕೋ ಕೇಳಿ. ನನಗೊತ್ತಿರೊದ್ದನ್ನಾ ಹೇಳ್ತೀನಿ”, ಎಂದು ಮೆದುವಾಗಿ ನಕ್ಕನು ತಾತ.
“ನೀವು ನಿಮ್ಮ ಮನೇಲಿರಿ. ನಾನು ಮಾತಾಡಿ ಮುಗಿದ ಮೇಲೆ ಕಾಲ್ ಮಾಡ್ತೀನಿ” ಎಂದು ಅವಳಿಗೆ ಆರ‍್ಡರ್ ಮಾಡಿದೆ. ಆಯಿತು ಮಾತಾಡ್ಕೊಳ್ಳಿ ಎನ್ನುವ ರೀತಿಯಲ್ಲಿ ಒಂದೂ ಮಾತಾಡದೆ ಹೊರಟು ಹೋದಳು. ಅವಳು ಹೋದದ್ದು ಕಾತ್ರಿ ಮಾಡಿಕೊಂಡು ಬಂದು ನಾನೂ ಸೋಪಾದ ಮೇಲೆ ತಾತನ ಎದುರಿಗೆ ಕೂತುಕೊಂಡೆ.
“ನೀರ್ ಕುಡಿತೀರಾ?” ಎಂದು ಕೇಳಿದನು ತಾತ.
ನಂಗೂ ಬಾಯಾರಿಕೆ ಆಗಿತ್ತು. “ಹೂಂ ಸ್ವಲ್ಪಾ” ಅಂದೆ.
“ಅಲ್ಲಿ ಅಡುಗೆ ಮನೆಯಲ್ಲಿ ಡೈನಿಂಗ್ ಟೇಬಲ್ ಮೇಲೆ ಜಗ್ ಇದೆ… ನೀವೇ ಹೋಗ್ಬೇಕು. ವಯಸ್ಸಾಯ್ತು ನೋಡಿ… ಬೇಗ ಎದ್ದೇಳಕ್ಕೆ ಆಗೊಲ್ಲ”
ನಾನು ಹೋಗಿ ಕುಡಿದು ಬಂದು ಮಾತಿಗೆ ಶುರುಹಚ್ಚಿಕೊಂಡೆ. ತಾತ ಕಾಲೇಜಿನ ಪ್ರೊಪೆಸರ್ ಆಗಿದ್ದವರು. ಹೆಂಡತಿ ತೀರಿಹೋಗಿ, ಇಬ್ಬರು ಮಕ್ಕಳೂ ಅಮೇರಿಕದಲ್ಲಿದ್ದಾರೆ. ಅವರಿಗೆ ಡಯಾಬಿಟೀಸ್, ಎರಡು ಕಿಡ್ನಿನೂ ಪೇಲ್ ಆಗಿವೆಯಂತೆ. ತಾತ ತುಂಬಾ ವಾಚಾಳಿ. ಇಶ್ಟೇ ಹೇಳೊದಕ್ಕೆ ಅರ‍್ದ ಗಂಟೆ ತೆಗೆದುಕೊಂಡನು. ನಾನು ನಡುವೆ ಬ್ರೇಕ್ ಹಾಕಿದೆ.
“ಸರ್, ನಾಲಕ್ ದಿನದ ಹಿಂದೆ, ಅಂದ್ರೆ ಮಂಗಳವಾರ, ಮಂಜುಳಾ ಬೆಳಗ್ಗೆ ಆರು ಗಂಟೆ ಸುಮಾರಿಗೆ ನಿಮ್ಮ ಮನೇಲೆ ಇದ್ಳಾ?”
“ಅಯ್ಯೋ ನಾನು ಎದ್ದೆಳೋದೇ ಬೆಳಗ್ಗೆ ಒಂಬತ್ತಕ್ಕೆ. ರಾತ್ರಿ ಒಂದ್ ಗಂಟೆವರೆಗೂ ಎಚ್ಚರ ಇರ‍್ತೀನಿ… ಈ ಪುಸ್ತಕ ಎಲ್ಲಾ ಒದ್ತೀನಿ ನೋಡಿ… ಸ್ವಾತಂತ್ಯ ಬಾರತ ಇತಿಹಾಸ, ಅಮೇರಿಕದ ಇತಿಹಾಸ… ಎಲ್ಲಾ ಒಳ್ಳೇ ಪುಸ್ತಕಗಳು. ನೀವು ಓದ್ಬೇಕು…”
ನಾನು ಮತ್ತೆ ಬ್ರೇಕ್ ಹಾಕಿ, ಸ್ಟೇರಿಂಗ್ ತಿರುಗಿಸಿದೆ. ಅವನು ಮತ್ತೆ ಹಾದಿಗೆ ಬಂದ, “ಮಲಕೊಂಡ ಮೇಲೂ ನಿದ್ದೆ ಸರಿಯಾಗ್ ಬರೊಲ್ಲಾ ಅಂತಾ ಚೂರು ನಿದ್ದೆ ಮಾತ್ರೆ ತೊಗೊತೀನಿ. ಹಾಗಾಗಿ ಬೆಳಗ್ಗೆ ಎಚ್ಚರಾನೇ ಆಗೊಲ್ಲ”
“ಅಂದ್ರೆ ದಿನಾ ಬೆಳಗ್ಗೆ ಮಂಜುಳಾ ಎಶ್ಟೊತ್ತಿಗೆ ಬರ‍್ತಾಳೆ ಅಂತಾ ನಿಮಗೆ ಗೊತ್ತೆ ಆಗೊದಿಲ್ವಾ?”
“ಇಲ್ಲಾ”. ಎಂದು ಉಗುಳು ನುಂಗಿ, “ಕೀ ಅವಳ ಹತ್ರಾನೇ ಇರುತ್ತೆ. ಅವಳೆ ಬಂದು ಎಲ್ಲಾ ಕೆಲಸಾನೂ ಮಾಡ್ತಾಳೆ. ಪಾಪ ಒಳ್ಳೇ ಹುಡುಗಿ, ಚೆನ್ನಾಗಿ ನೋಡ್ಕೋತಾಳೆ… ಹೀಗಾಗಬಾರದಿತ್ತು”
“ಅವಳಿಗೆ ಬೆಂಗ್ಳೂರಲ್ಲಿ ಸವತಿ ಇರೋದು ನಿಮಗೆ ಗೊತ್ತಿತ್ತಾ?”
“ಏನು? ಸವತಿನಾ?” ತಾತನಿಗೆ ಅಚ್ಚರಿಯಾಯಿತು. ಒಂದೆರಡು ಕ್ಶಣ ಬಿಟ್ಟು, “ಆದ್ರೂ ಆಶ್ಚರ‍್ಯ ಏನ್ ಇಲ್ಲಾ ಬಿಡಿ” ಅಂದರು.
“ಯಾಕೆ?” ಅಚ್ಚರಿಯಾಗುವ ಸರದಿ ನನ್ನದಾಗಿತ್ತು.
“ಮುದುಕಾ ಹೀಗೆಲ್ಲ ಮಾತಾಡ್ತಾನೆ ಅನ್ಕೊಬೇಡಿ, ಆದ್ರೆ ಅವನಿಗೆ ತೀಟೆ ಜಾಸ್ತಿ ಅನ್ಸುತ್ತೆ. ಒಂದ್ಸಾರಿ ಈ ಮಂಜುಳಾ ಕೆನ್ನೆ ಮೇಲೆ ಗಾಯ ಆಗಿತ್ತು. ಏನಾಯ್ತು ಅಂತಾ ಕೇಳಿದ್ದಕ್ಕೆ, ಗಂಡ ಕಚ್ಚಿದ್ದು ಅಂತಾ ನಾಚ್ಕೊಂಡ್ ಹೇಳಿದ್ಳು”
“ಆಮೇಲೆ?” ಕುರ‍್ಚಿಯ ತುದಿಗೆ ಬಂದೆ.
“ಆಗಾಗ ಹೀಗೆ ಚಿಕ್ಕ ಚಿಕ್ಕ ಗಾಯ ಅವಳ ಮುಕದ ಮೇಲೆ ಕಾಣ್ತಾನೇ ಇತ್ತು. ಇವಳೊಬ್ಬಳೇ ಸಾಕಾಗ್ದೆ ಇನ್ನೊಂದ್ ಮದ್ವೆ ಮಾಡ್ಕೊಂಡ್ನೋ ಏನೋ”
“ಹೀಗೆ ಗಾಯ ಆಗಿದ್ದು, ನೀವು ಕೊನೆ ಸಾರಿ ಯಾವಾಗ್ ನೋಡಿದ್ರಿ?” ಅವಳ ಮುಕದ ಮೇಲೆ ಈಗ ಯಾವ ಗಾಯವೂ ಇರಲಿಲ್ಲ.
“ಆಂ…” ಎಂದು ನೆನಪಿಸಿಕೊಂಡು, “ಹೋದ್ ವಾರನೇ ನೋಡಿದ್ದೆ… ತುಟಿ ಹತ್ರ” ಎಂದು ನಕ್ಕನು.
“ಅಂದ್ರೆ, ಗಂಡ ಹೆಂಡತಿ ಸಂಬಂದ ಚೆನ್ನಾಗಿತ್ತು ಅಂತೀರಾ?”
“ಹೂಂ… ಚೆನ್ನಾಗೇ ಇತ್ತು. ಅವ್ನು ಇವಳ್ಗೆ ದಿನಕ್ಕೆ ಎರಡ್ ಸಾರಿನಾದ್ರೂ ಕಾಲ್ ಮಾಡೋವ್ನು. ನಾನೇ ನೋಡಿದೀನಿ”, ಎಂದು ಸ್ಪಶ್ಟವಾಗಿ ನುಡಿದನು ತಾತ.
ಅಶ್ಟರಲ್ಲಿ ಯಾರೋ ಬಂದಂಗಾಯಿತು. ಜೀನ್ಸ್ ಪ್ಯಾಂಟು, ಟೀ-ಶರ‍್ಟ್ ತೊಟ್ಟಿದ್ದ ಮೂವತ್ತರ ಒಳಗಿನ ಹುಡುಗ. ಅಯ್ದಡಿ ಎತ್ತರ, ತೆಳ್ಳಗಿನ ಮಯ್, ಕಪ್ಪಗಿನ ಬಣ್ಣ, ಕುರುಚಲು ಗಡ್ಡ, ಮೀಸೆ. ಹಲ್ಲು ತೋರಿಸುತ್ತಾ ಒಳಗೆ ಬಂದನು.
“ಬಾರಪ್ಪಾ ಮಹೇಶ. ಬೇಗ ಬಂದಿಯಲ್ಲಾ… ಇನ್ನೂ ಒಂದ್ ಗಂಟೆ ಟಾಯಿಮ್ ಇದೆ ಅಲ್ವಾ?”, ಎಂದನು ತಾತ, ಗಡಿಯಾರ ನೋಡುತ್ತಾ.
ಅವನು ನನ್ನೆಡೆಗೆ ಇವನ್ಯಾರು ಎನ್ನುವಂತೆ ನೋಡಿದ. ನಾನೂ ಅದನ್ನೇ ಮರಳಿಸಿದೆ. ಇಬ್ಬರನ್ನೂ ಕಂಡ ತಾತ ಹೇಳಿದ, “ಇವನು ಮಹೇಶಾ ಅಂತಾ… ಇವತ್ತು ಡಯಾಲಿಸಿಸ್ ಮಾಡಿಸ್ಕೊಳ್ಳೋಕೆ ಹೋಗ್ಬೇಕಿತ್ತಲ್ಲಾ, ಕರಕೊಂಡು ಹೋಗೊಕೆ ಬಂದಿದ್ದಾನೆ”
ಅವನೂ ಸೋಪಾದ ಮೇಲೆ ಕೂತ್ಕೊಂಡ. “ಏನಪ್ಪಾ ಮಹೇಶ, ನಿನ್ನೆ ಪೋನ್ ಮಾಡಿದ್ದೆ, ನಾಟ್ ರೀಚಬಲ್ ಅಂತಾ ಬಂತು”. ತಾತನಿಗೆ ಮಾತಿಗೆ ಮತ್ತೊಬ್ಬರು ಸಿಕ್ಕಂತಾಯಿತು. ನಾನು ಬಂದ ಕೆಲಸ ಮುಗಿದಿತ್ತು. ಮಂಜುಳಾ ಅಂದು ಈ ಮನೇಲಿ ಇದ್ದಳು ಎನ್ನುವುದಕ್ಕೆ ಯಾವ ಪುರಾವೆಯೂ ಇರಲಿಲ್ಲ. ಕೇಸು ಇದ್ದಲ್ಲೇ ಇತ್ತು.
ಮಹೇಶ ಮಾತಾಡಿದ, “ಈ ಪೋನು ಕೆಟ್ಟೋಗಿದೆ ತಾತ. ಒಂದೊಂದ್ಸಾರಿ ಹಂಗ್ ಬರುತ್ತೆ. ಹೊಸದು ತೊಗೊಬೇಕು”
“ನೀವ್ ಎಲ್ಲಿರೋದು?” ನಾನು ಸಹಜವಾಗಿ ಕೇಳಿದೆ.
“ಇಲ್ಲೇ ಪಕ್ಕದ ಬೀದಿಯಲ್ಲಿ. ತಾತನಿಗೆ ವಾರಕ್ಕೊಂದ್ಸಾರಿ ನಾನೇ ಕರಕೊಂಡ್ ಹೋಗಿ ಬರೋದು”
“ಏನ್ ಮಾಡ್ಕೊಂಡ್ ಇದೀರಾ?”
“ಬಾಡಿಗೆ ಕಾರ್ ಓಡುಸ್ತೀನಿ ಸಾರ‍್”.
ಮುಚ್ಚದ ಬಾಯಿಯಲ್ಲಿ ತಾತ ಮಾತಾಡಿದ, “ಕಾರ್ ಓಡ್ಸೋದು, ಮದುವೆಗೆ ಹುಡುಗಿ ಹುಡ್ಕೋದು, ಎರಡೇ ಅವನ್ ಕೆಲಸ”
“ಹುಡಗಿಯೇನೋ ಇದಾಳೆ ತಾತ. ಆದ್ರೆ ಮದುವೆಗೆ ಒಪ್ತಾಯಿಲ್ಲ”
“ಹೌದಾ? ಯಾಕೆ?” ಕೇಳಿದನು ತಾತ.
“ಅವಳ ಗಂಡ ಬೇಜಾರ್ ಮಾಡ್ಕೋತಾನಂತೆ!” ಜೋರಾಗಿ ನಕ್ಕನು. ನಾವೂ ನಕ್ಕೆವು. ತಾತ ಮತ್ತು ಮಹೇಶನಿಗೆ ನನ್ನ ಕೆಲಸ ಮುಗಿಯಿತೆಂದು ಹೇಳಿ, ಮನೆಯಿಂದ ಹೊರಬಂದೆ. ಮಂಜುಳಾಗೆ ಕರೆ ಮಾಡಿ ಕಾಯುತ್ತಾ ನಿಂತೆ.
ಅವಳು ಬಂದೆಮೇಲೆ ಕೇಳಿದೆ, “ನೀನು ಅವತ್ತು ಬೆಳಗ್ಗೆ ಇಲ್ಲಿ ಇರೋದನ್ನಾ ತಾತನೂ ನೋಡಿಲ್ಲಾ. ಇನ್ಯಾರಾದ್ರು ಇದಾರಾ ನಿನ್ನ ನೋಡಿರೋರು?”
ಅವಳು ಮುಕ ಕೆಳಗೆ ಹಾಕಿ “ಇಲ್ಲಾ” ಅಂದಳು. ಸ್ವಲ್ಪ ತಡೆದು, “ಸಾರ್ ನಾನು ಅವರನ್ನಾ ಸಾಯಿಸಿಲ್ಲಾ.” ಎಂದಳು.
“ಮಂಜುಳಾ ಅವರೇ, ಗಂಡ ಸತ್ತಿರೋ ದುಕ್ಕ ನಿಮ್ ಮುಕದ ಮೇಲೆ ಕಾಣ್ತಾನೇ ಇಲ್ಲಾ?” ನೇರವಾಗಿ ಕೇಳಿದೆ.
ಅವಳು ತಾತ್ಸಾರದ ನಗು ನಕ್ಕು, “ಅವ್ರು ಇದ್ದಾಗಲೂ ಅವ್ರು ಇದಾರೆ ಅಂತಾ ನನಗೆ ಅನಿಸ್ತಿರಲಿಲ್ಲಾ ಸರ‍್”
“ಬೇರೆ ಮದುವೆ ಆಗ್ಬಹುದಿತ್ತಲ್ಲಾ?” ಕೇಳಿದೆ.
“ಅವರು ಇರೋ ತನಕ ಅದು ಸಾದ್ಯ ಇರಲಿಲ್ಲ ಸರ‍್”.
“ಅಂದ್ರೆ ಈಗ ಆಗ್ಬಹುದು, ಅಲ್ವಾ?”. ಅವಳು ತಲೆ ಕೆಳಗೆ ಹಾಕಿ ಸುಮ್ಮನಾದಳು. ನಾನು ಹೊರಟು ಬಂದೆ.
*********************************
(ಮುಂದುವರೆಯುವುದು : ಕೊನೆಯ ಕಂತು ನಾಳೆಗೆ)
( ಚಿತ್ರ ಸೆಲೆ: clipartpanda.com )
1 Response
[…] ಕಂತು-1 ಕಂತು-2 ಕಂತು-3 […]