ಪತ್ತೇದಾರಿ ಕತೆ: “ನಿನ್ನಾತ್ಮಕ್ಕೆ ಶಾಂತಿ ಸಿಗಲಿ”
– ಬಸವರಾಜ್ ಕಂಟಿ.
ಕಂತು – 1
ಇತ್ತೀಚೆಗೆ ಕೋರಮಂಗಲದ “ಪಾರಿನ್ ಹೆಂಡದ ಅಡ್ಡ”, ಎಂಬ ಪಬ್ಬಿಗೆ ದಿನಾ ಸಂಜೆ ಹೋಗುವ ಚಾಳಿ ಮಯ್ಗೂಡಿಸಿಕೊಂಡಿದ್ದೆ. ಯಾಕೆ ಎಂದು ಗೊತ್ತಿಲ್ಲ. ಬಹುಶ ಅಲ್ಲಿನ ವಾತಾವರಣವಿರಬಹುದು. ಎಶ್ಟು ಜನ ಸೇರಿದರೂ ಗದ್ದಲ ಎನಿಸುವುದಿಲ್ಲ, ಜೊತೆಗೆ ಎಲ್ಲ ರೀತಿಯ ಜನರೂ ಅಲ್ಲಿ ಬರುವುದನ್ನು ನಾನು ಗಮನಿಸಿದ್ದೆ. ಸಿನಿಮಾ ನಟರು, ಬರಹಗಾರರು, ಕಲಾವಿದರು, ಕಾಲೇಜಿನ ಹುಡುಗರು, ದೊಡ್ಡ ದೊಡ್ಡ ಕಂಪನಿಯ ಮಾಲೀಕರು, ಹೀಗೆ ಅನೇಕ ಬಗೆಯ ಜನರ ನಡವಳಿಕೆಗಳ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತಿತ್ತು. ಅಂದು ಸಂಜೆ ಕೂಡ, ನನ್ನ ಹೊತ್ತಗೆಯಂಗಡಿಯ ಬಾಗಿಲು ಮುಚ್ಚಿ, ಏಳರ ಸುಮಾರಿಗೆ ಹೊರಬಿದ್ದೆ. ಮನೆಗೆ ಹತ್ತಿರವಿದ್ದುದರಿಂದ, ನಡಿಗೆಯಲ್ಲೇ ಹೊರಟೆ. ತುಸು ದೂರ ಹೋದಾಗ ಯಾರೋ ಹಿಂಬಾಲಿಸುತ್ತಿದ್ದಾರೆಂದು ಅನಿಸಿ ತಟ್ ಅಂತ ತಿರುಗಿ ನೋಡಿದೆ. ನನ್ನ ಹಿಂದೆ ಮಯ್ತುಂಬ ಶಾಲು ಹೊದ್ದಿದ್ದ ಒಬ್ಬ ಮನುಶ್ಯನಿದ್ದ. ಸುಮಾರು ಆರಡಿ ಎತ್ತರ, ತೆಳ್ಳಗಿನ ಮಯ್ಕಟ್ಟು. ಮಂಕಿಟೋಪಿ ಹಾಕಿದ್ದ ಮುಕದಲ್ಲಿ ಕಣ್ಣುಗಳು ಮಾತ್ರ ಕಾಣುತ್ತಿದ್ದವು. ನಾನು ನಿಂತದ್ದು ನೋಡಿ ಅವನೂ ನಿಂತುಬಿಟ್ಟ. ಒಂದೆರಡು ಕ್ಶಣ ತಡೆದು, ಹಿಂದೆ ಮುಂದೆ ನೋಡಿ, ನಡೆದುಕೊಂಡು ನನ್ನನ್ನು ದಾಟಿ ಮುಂದೆ ಹೋಗಿಬಿಟ್ಟ. ನಿಜವಾಗಿಯೂ ನನ್ನನ್ನು ಹಿಂಬಾಲಿಸುತ್ತಿದ್ದಾನೆಯೇ ಎಂದು ನಿಕ್ಕಿಯಾಗಲಿಲ್ಲ. ಶಾಲಿನ ಕೆಳಗೆ ಜೀನ್ಸ್ ಪ್ಯಾಂಟು, ನೈಕಿ ಬೂಟು ಕಾಣಿಸಿದವು. ನಾನು ಪಬ್ಬಿಗೆ ಹೋಗಿ, ಎಂದಿನಂತೆ ಸ್ಕಾಚ್ ಕುಡಿದು ರಾತ್ರಿ ಮನೆಗೆ ಬಂದೆ.
ಮರುದಿನ ಸಂಜೆ ಪಬ್ಬಿನ ಕೌಂಟರ್ ನಲ್ಲಿ, ನನ್ನ ಪಾಡಿಗೆ ನಾನು ಸ್ಕಾಚ್ ಹೀರುತ್ತಿದ್ದಾಗ, ಇಪ್ಪತ್ತಯ್ದರ ಹುಡುಗ ಒಬ್ಬ ನನ್ನ ಪಕ್ಕದಲ್ಲಿ ಬಂದು ಕುಳಿತ. ಗುಂಗುರು ಕೂದಲು, ಕುರುಚಲು ಗಡ್ಡ ಮೀಸೆ, ಕನ್ನಡಕ ತೊಟ್ಟಿದ್ದ. ಅವನ ಕಣ್ಣುಗಳಲ್ಲಿ ಒಂದು ಬಗೆಯ ಸ್ತಿರತೆ ಇತ್ತು. ಹೆಚ್ಚಾಗಿ ಈ ಐಐಟಿ ಅತವಾ ಐಐಎಮ್ ಗಳಲ್ಲಿ ಓದಿರುವ, ಜಾಣ ಹುಡುಗರ ಕಣ್ಣುಗಳಲ್ಲಿ ಕಾಣುವಂತಾ, “ಸಾದಿಸುವುದು ಹೇಗೆ ಎಂದು ನನಗೆ ಗೊತ್ತು” ಎನ್ನುವಂತಹ ಸ್ತಿರತೆ. ಎಲ್ಲವನ್ನೂ ಅಳೆದು ತೂಗುವ ಜಾಣ್ಮೆ. ವಿಸ್ಕಿ ಆರ‍್ಡರ್ ಮಾಡಿ, ಎಡಗಯ್ ತೋರು ಬೆರಳಿನಿಂದ ಕನ್ನಡಕ ಹಣೆಗೆ ಒತ್ತಿಕೊಂಡ. ಅವನ ವ್ಯಕ್ತಿತ್ವವನ್ನು ಸೀಳಿ ನೋಡುವ ನನ್ನ ನೋಟದೆಡೆಗೆ ಅವನ ಗಮನ ಹರಿಯಿತು. ನಾನು ನೋಟ ಸರಿಸಿದೆ. ಆದರೆ ಅವನೇ ಮಾತಾಡಿಸಿದ.
“ಹಾಯ್!”, ನಗೆ ಬೀರುತ್ತಾ.
ನಾನೂ “ಹಾಯ್” ಎಂದೆ.
“ಸುನೀಲ್” ಎಂದು ಕಯ್ ಮುಂದೆ ತಂದ. ನಾನೂ ಕಯ್ ಮಿಲಾಯಿಸಿ, “ಪುಲಕೇಶಿ” ಎಂದೆ.
“ಒಳ್ಳೆ ಹೆಸರು” ಎಂದ.
ನಾನು ಔಪಚಾರಿಕ ನಗೆ ನಕ್ಕೆ. ಅವನ ವಿಸ್ಕಿ ಬಂದಿತು. ಕಣ್ಣಂಚಿನಲ್ಲೇ ಅವನನ್ನು ಮೇಲಿನಿಂದ ಕೆಳಗೆ ನೋಡಿದೆ. ಕಾಲಿಗೆ ನೈಕಿ ಬೂಟು ಹಾಕಿದ್ದ. ಎತ್ತರು ಸುಮಾರು ಆರು ಅಡಿ ಇರಬಹುದು. ನನ್ನ ತಲೆಯೊಳಗೆ ಇನ್ನೇನು ಯೋಚನೆಗಳು ಶುರುವಾಗಬೇಕು ಎನ್ನುವಶ್ಟರಲ್ಲಿ ಅವನು ಮತ್ತೆ ಮಾತನಾಡಿಸಿದ,
“ಏನ್ ಮಾಡ್ಕೊಂಡಿದೀರಿ ಪುಲಕೇಶಿ?”
“ನಾನೊಬ್ಬ ಕಾಸಗಿ ಪತ್ತೇದಾರ”
“ಓಹ್! ಸೂಪರ‍್” ಎಂದ. ನಾನು ಮತ್ತೆ ಔಪಚಾರಿಕ ನಕ್ಕೆ. ಅವನು ಮುಂದುವರಿಸಿದ,
“ಯಾವುದಾದ್ರು ಕೇಸ್ ಮೇಲೆ ಬಂದಿದಿರಾ?”
“ಯಾವ ಕೇಸೂ ಇಲ್ಲಾ ಅಂತಾ ಬಂದಿರೋದು”, ಎಂದು ನಕ್ಕೆ. ಅವನೂ ನಕ್ಕ. ಒಂದು ಗುಟುಕು ಹೀರಿ, ನಾನು ಕೇಳಿದೆ. “ನೀವು?”
ಸಪ್ಪೆ ಮುಕ ಮಾಡಿ, “ಮದುವೆಯಾಯ್ತು. ಅದಕ್ಕೇ ಬಂದೆ” ಎಂದ. ಇಬ್ಬರೂ ನಕ್ಕೆವು. ಇಬ್ಬರೂ ಗುಟುಕು ಹೀರಿದ ಮೇಲೆ, “ನೀವು ಇತ್ತೀಚಿಗೆ ಈ ಪಬ್ಬಿಗೆ ಬರ‍್ತಾಯಿದೀರಾ?” ಕೇಳಿದ.
“ಇಲ್ಲಾ… ಎರಡು ವರ‍್ಶ ಆಯ್ತು. ನಾನು ಈ ಪಬ್ಬಿಗೆ ರೆಗುಲರ್ ವಿಸಿಟರ‍್” ಎಂದೆ.
ಅವನು ಯೋಚಿಸುತ್ತಾ, “ಹೌದಾ? ನಾನೂ ಕಾಲೇಜಿನಲ್ಲಿದ್ದಾಗಲೇ ಇಲ್ಲಿಗೆ ಬರ‍್ತಾ ಇದ್ದೆ. ನಿಮ್ಮನ್ನಾ ನೋಡೇ ಇಲ್ವಲ್ಲಾ?” ಎಂದ. ನಾನು ಹೆಗಲುಹಾರಿಸಿದೆ.
“ನೀವೇನ್ ಮಾಡ್ಕೊಂಡಿದಿರಾ?” ಕೇಳಿದೆ.
“ಸಾಪ್ಟವೇರ್ ಇಂಜೀನಿಯರ‍್” ಎಂದ. ಅಶ್ಟರಲ್ಲಿ ನನ್ನ ಸ್ಕಾಚ್ ಕಾಲಿಯಾಯಿತು. ನಾನು ಹೊರಡಲು ಸಿದ್ದನಾದೆ.
“ಹೊರಟ್ರಾ?” ಕೇಳಿದ.
“ಹೌದು. ನನ್ ಕೋಟಾ ಮುಗೀತು”
“ಎಲ್ಲಿ ಮನೆ?”
“ಇಲ್ಲೇ ಹತ್ರದಲ್ಲಿ. ಹನ್ನೊಂದನೇ ಕ್ರಾಸು”
“ಸರಿ. ನಾಳೆ ಸಿಗೋಣ. ಬರ‍್ತೀರಲ್ಲಾ?”
“ಯಾವ ಕೇಸೂ ಸಿಗದಿದ್ರೆ ಕಂಡಿತಾ ಬರ‍್ತೀನಿ”, ನಕ್ಕೆ. “ನೀವು ಹೊರಡೋದು ಲೇಟಾ?” ಕೇಳಿದೆ.
“ನಾನೂ ಇನ್ನೇನು ಹೊರಡ್ತೀನಿ. ಮನೆ ಸ್ವಲ್ಪ ದೂರ”
“ಎಲ್ಲಿ?”
“ಸರ‍್ಜಾಪುರ” ಎಂದ. ನಾನು ಅಲ್ಲಿಂದ ಹೊರಬಂದು ಮರೆಯಲ್ಲಿ ಅವನಿಗಾಗಿ ಕಾದೆ.
*********************************************************
ಮಾರನೆಯ ದಿನ ಪಬ್ಬಿನಲ್ಲಿ ಮತ್ತೆ ನನ್ನ ಪಕ್ಕದಲ್ಲಿ ಬಂದು ಕೂತ. ಮುಕ ಬಾಡಿತ್ತು ಅತವಾ ಬಾಡಿದ ಹಾಗೆ ಅವನು ನಟಿಸುತ್ತಿದ್ದ. ಸಣ್ಣ ದನಿಯಲ್ಲಿ, “ಹಾಯ್” ಎಂದ. ನಾನೂ “ಹಾಯ್” ಎಂದೆ, ನೋಡೋಣ ಎಲ್ಲಿಯವರೆಗೆ ಹೋಗುತ್ತೋ ಎಂದು. “ಏನಾಯ್ತು?”, ನಾನು ಕೇಳಿದೆ.ಅವನ ಕಣ್ಣುಗಳಲ್ಲಿ ನೀರು ತುಂಬಿದವು, ತುಟಿ ಬಿಗಿ ಹಿಡಿದಿದ್ದ, ಅತವಾ ಹಿಡಿದ ಹಾಗೆ ನಟಿಸುತ್ತಿದ್ದ. ಅವನನ್ನು ಮೂಲೆಯೊಂದರ ಟೇಬಲ್ಲಿಗೆ ಕರೆದುಕೊಂಡು ಹೋಗಿ, ಅವನ ಎದುರಿಗೆ ಕೂತು ಮತ್ತೆ “ಏನಾಯ್ತು?” ಅಂತ ಕೇಳಿದೆ.
ಸ್ವಲ್ಪ ಸುದಾರಿಸಿಕೊಂಡು, “ನನಗೆ ನನ್ನ ಹೆಂಡತಿಯಿಂದ ಡಿವೋರ‍್ಸ್ ಬೇಕು” ಎಂದ.
“ಯಾಕೆ?”
“ಅವ್ಳು ನನಗೆ ಮೋಸ ಮಾಡ್ತಿದಾಳೆ”
“ಹ್ಯಾಗ್ ಹೇಳ್ತೀರಿ?”
“ನಾನೇ ನನ್ ಕಣ್ಣಾರೆ ನೋಡ್ದೆ… ಇನ್ನೊಬ್ಬನ ಜೊತೆ ಹೋಗೋದನ್ನಾ”
“ಯಾವಾಗ?”
“ನನಗೆ ಮೊದಲಿಂದ್ಲೂ ಅನುಮಾನ ಇತ್ತು. ಅದಕ್ಕೇ ಇವತ್ತು ಆಪೀಸಿಗೆ ರಜೆ ಹಾಕಿ ಅವಳ ಆಪೀಸ್ ಹತ್ರ ಕಾಯ್ತಾ ಇದ್ದೆ. ಅವ್ಳು ಅಯ್ದು ಗಂಟೆಗೆ ಒಬ್ಬನ ಜೊತೆ ಹೊರಗ್ ಬಂದು ಆಟೋ ನಲ್ಲಿ ಹೋದ್ಳು”
“ಆಮೇಲೆ?”
“ನಾನೂ ನನ್ನ ಬೈಕ್ ನಲ್ಲಿ ಪಾಲೋ ಮಾಡ್ದೆ. ಒಂದು ಅಪಾರ‍್ಟಮೆಂಟ್ ಒಳಗೆ ಹೋದ್ರು. ಅವನ ಮನೆ ಅನ್ಸುತ್ತೆ. ಹೊರಗ್ ಬಂದದ್ದು ಏಳ್ ಗಂಟೆಗೆ. ನಾನು ಕಾಲ್ ಮಾಡಿ ಕೇಳಿದ್ರೆ, ಇನ್ನೂ ಆಪೀಸ್ ನಲ್ಲಿ ಇದೀನಿ ಅಂತ ಹೇಳಿದ್ಳು”
“ಹಮ್… ಹಾಗಿದ್ರೆ ನೀವು ಪಾಲೋ ಮಾಡೋದ್ರಲ್ಲಿ ಎಕ್ಸಪರ‍್ಟು” ಎಂದೆ.
ಅವನು ಹೌಹಾರಿದ. ಏನು ಮಾತಾಡಬೇಕು ತೋಚದೆ ನನ್ನನ್ನೇ ನೋಡಿದ. ನಾನು ಮುಂದುವರೆಸಿದೆ, “ಯಾಕೆ? ನೆನ್ನೆ ನನ್ನ ಪಾಲೋ ಮಾಡಿದ್ದು ಮರತೋಯ್ತಾ?” ಅಂದೆ. ಬೆವರಿದ. ಎಶ್ಟು ತಡೆಹಿಡಿಯುವ ಪ್ರಯತ್ನ ಮಾಡಿದರೂ ಅವನಿಂದ ಆಗಲಿಲ್ಲ. ಕಯ್ ನಡುಗುತ್ತಿತ್ತು. ಕಯ್ ವಸ್ತ್ರದಿಂದ ಮುಕ ವರೆಸಿಕೊಂಡ. “ಮಾತಾಡು”, ಎನ್ನುವಂತೆ ಅವನನ್ನೇ ದಿಟ್ಟಿಸಿದೆ.
“ಸಾರ್, ನಿಮಗ್ ಹೇಗೆ…?” ಕೇಳಿದ, ಶರಣಾಗತನಾಗಿ.
“ನಿನ್ನೆ ನನ್ನನ್ನಾ ಪಾಲೋ ಮಾಡುತ್ತಿದ್ದಿದ್ದು ನೀನೇ ಎಂದು ನಂಗೆ ಅನುಮಾನ ಬಂದಾಗ, ನಿನ್ನ ಬಗ್ಗೆ ಹೆಚ್ಚು ತಿಳ್ಕೊಳ್ಳೋಕೆ ಸುಳ್ಳು ಹೇಳ್ದೆ”. ಅವನ ಹುಬ್ಬೇರಿ, ಕಣ್ಣುಗಳಲ್ಲಿ ಅಚ್ಚರಿ ಮೂಡಿತು. ನಾನು ಹೇಳಿದೆ, “ನಾನು ಎರಡು ವರ‍್ಶದಿಂದಾ ಈ ಪಬ್ಬಿಗೆ ಬರ‍್ತಾಯಿದೀನಿ ಅಂತಾ ಹೇಳಿದ್ರೆ, ನೀನು ಕಾಲೇಜಿನಲ್ಲಿದ್ದಾಗ್ಲೂ ಇಲ್ಲೇ ಬರ‍್ತಿದ್ದೆ ಅಂತಾ ಹೇಳ್ತಿಯಲ್ಲಾ?”
ಅವನು “ಹೌದು ಸರ್. ಅದ್ ನಿಜಾ” ಎಂದ.
ನಾನು ನಗುತ್ತಾ ಹೇಳಿದೆ, “ಈ ಪಬ್ಬು ಶುರುವಾಗಿ ಆರ್ ತಿಂಗ್ಲಾಯ್ತು ಅಶ್ಟೇ”. ಅವನು ಮುಕ ಹಿಂಡಿದ. “ನಿನ್ ಮನೆ ಇರೋದು ಸರ‍್ಜಾಪುರ ಅಲ್ಲಾ. ಜಕ್ಕಸಂದ್ರದ ಒಂದು ಅಪಾರ‍್ಟಮೆಂಟ್ ನಲ್ಲಿ” ಅಂದೆ.
ಹುಬ್ಬು ಗಂಟಾಕುತ್ತಾ, “ನಿಮಗ್ ಹೇಗೆ ಗೊತ್ತಾಯ್ತು?”, ಎಂದ.
“ನಿನ್ನೆ ನಿನ್ನನ್ನಾ ಪಾಲೋ ಮಾಡ್ದೆ” ಎಂದೆ ಸಿಗರೇಟು ಹೊತ್ತಿಸುತ್ತಾ.
“ಯಾವಾಗಾ? ನಂಗ್ ಗೊತ್ತೇ ಆಗ್ಲಿಲ್ಲಾ?” ಅಂದ.
“ಮರೀ… ಅದಕ್ಕೆ ಟ್ರೇನಿಂಗ್ ಬೇಕು. ಸುಮ್ನೆ ಮುಕ ಮುಚ್ಕೊಂಡು, ಶಾಲ್ ಹೊದ್ಕೊಂಡು ಹಿಂದಿಂದೆ ಹೋಗೋದ್ ಅಲ್ಲಾ”. ಅವನು ಕನ್ನಡಕ ಹಣೆಗೆ ಒತ್ತಿಕೊಂಡು, ಎದುರಿಗೆ ನನ್ನ ಗ್ಲಾಸಿನಲ್ಲಿದ್ದ ವಿಸ್ಕಿ ಗಟಗಟನೆ ಇಳಿಸಿ, ಮುಕ ವರೆಸಿಕೊಂಡ.
“ಈಗ್ ಹೇಳು ನಿನ್ ಕತೆ. ಸುಳ್ ಹೇಳಿದ್ರೆ ಅಶ್ಟೇ” ಎಂದೆ.
“ಹೇಳ್ತೀನಿ… ಅದಕ್ಕಿಂತಾ ಮುಂಚೆ ಒಂದ್ ಪೆಗ್ ತೊಗೋಬೌದಾ?”
“ಸರಿ”, ಎಂದೆ. ವೇಟರ್ ಕರೆದು ವಿಸ್ಕಿ ಆರ‍್ಡರ್ ಮಾಡಿದ. ನಾನೂ ಮಾಡಿದೆ. ಅದು ಬಂದ ಮೇಲೆ, ಒಂದು ಗುಟುಕು ಏರಿಸಿ, ಮಾತಾಡಿದ. ಅವನ ಕಣ್ಣುಗಳು ನಿನ್ನೆಯ ಹದಕ್ಕೆ ಮರಳಿದ್ದವು, “ಎಲ್ಲವೂ ನನ್ನ ಹಿಡಿತದಲ್ಲಿದೆ” ಎನ್ನುವಂತೆ.
“ನಾನು ನಿಮ್ಮನ್ನಾ ಪಾಲೋ ಮಾಡಿದ್ದು, ನಿಮ್ಮ ಬಗ್ಗೆ ಸ್ವಲ್ಪ ತಿಳ್ಕೊಳ್ಳೋಕೆ ಅಶ್ಟೇ. ನನ್ ಹೆಂಡ್ತಿ ನನಗೆ ಮೋಸ ಮಾಡ್ತಾ ಇದಾಳೆ ಅನ್ನೋ ವಿಶ್ಯ ನನಗೆ ಮುಂಚೆನೇ ಗೊತ್ತಿತ್ತು. ನಾವಿಬ್ರೂ ಜಗಳಾಡಿ ಈಗ ಬೇರೆ ಬೇರೆ ಇದೀವಿ. ಅವ್ಳು ನಡತೆಗೆಟ್ಟವ್ಳು ಅಂತಾ ಪ್ರೂವ್ ಮಾಡೋದಕ್ಕೆ ನೀವು ನನಗೆ ಸಹಾಯ ಮಾಡ್ಬೇಕು” ಎಂದ.
“ಹೇಗೆ?”
“ಅವಳ ಬಗ್ಗೆ ಸಾದ್ಯವಾದಶ್ಟು ಡೀಟೇಲ್ಸ್ ನನಗೆ ಹುಡುಕಿ ಕೊಡ್ಬೇಕು. ಎಲ್ಲಿ ಹೋಗ್ತಾಳೆ, ಏನ್ ಮಾಡ್ತಾಳೆ… ಪೋಟೋ, ವಿಡಿಯೋ ಎಲ್ಲಾ ಬೇಕಾಗುತ್ತೆ ಡಿವೋರ‍್ಸ್ ಗೆ”
ಮತ್ತೆ ಏನಾದರೂ ಸುಳ್ಳು ಹೇಳಿತ್ತಿದ್ದಾನಾ ಎಂದು ಯೋಚಿಸಿದೆ. ಅಶ್ಟರಲ್ಲಿ ಅವನ ಮೊಬೈಲಿಗೆ ಕರೆಯೊಂದು ಬಂತು. ನಾನು “ಎತ್ತು” ಎಂದೆ. ಅವನು ಮಾತಾಡಿದ,
“ಹಲೋ… ಇಲ್ಲೇ ಪುಲಕೇಶಿ ಅವರ ಹತ್ರಾನೇ ಇದೀನಿ. ಕೇಸಿನ ಬಗ್ಗೆನೇ ಮಾತಾಡ್ತಾ ಇದೀನಿ… ಆಮೇಲೆ ಕಾಲ್ ಮಾಡ್ತೀನಿ” ಎಂದು ಕರೆ ಮುಗಿಸಿ, “ನನ್ ತಂಗಿ ಸರ್. ಅವ್ಳಿಗೂ ಎಲ್ಲ ವಿಶ್ಯಾ ಗೊತ್ತು” ಎಂದ.
ನಾನು ಹೇಗಿದ್ರೂ ಇಂತಾ ಕೇಸನ್ನಾ ಹಿಡಿಯೊಲ್ಲ, ಹಾಗಾಗಿ ಹೆಚ್ಚು ತಲೆ ಕೆಡಿಸಿಕೊಳ್ದೆ ಹೇಳಿದೆ,
“ಇಂತಾ ಕೇಸು ನಾನ್ ಹಾಂಡಲ್ ಮಾಡೊಲ್ಲ. ಒಂದ್ ನಂಬರ್ ಬರ‍್ಕೊಳ್ಳಿ, ಅವರು ಸಹಾಯ ಮಾಡ್ತಾರೆ”
ಅವನು ಬರೆದುಕೊಂಡ. “ಸರ್, ನಿಮ್ ಕಾಂಟಾಕ್ಟ್ ಕಾರ‍್ಡ್ ಕೊಟ್ರೆ ಚೆನ್ನಾಗಿರುತ್ತೆ. ಯಾವದಕ್ಕಾದ್ರೂ ಬೇಕಾದ್ರೆ ಕಾಲ್ ಮಾಡ್ತೀನಿ” ಎಂದ. ನಾನು ನನ್ನ ಕಾರ‍್ಡ್ ಕೊಟ್ಟೆ.
“ಇನ್ನೊಮ್ಮೆ ನನ್ ಕಣ್ಣಿಗೆ ಬೀಳಬೇಡ” ಎಂದು ಅಲ್ಲಿಂದ ಎದ್ದು ಹೊರಬಂದೆ. ಅವನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದ.
*********************************************************
ಮೂರು ದಿನ ಕಳೆದಿತ್ತು. ನಾನು ಮದ್ಯಾಹ್ನದ ಊಟ ಮುಗಿಸಿ, ಹೊತ್ತಗೆಯಂಗಡಿಯಲ್ಲಿ ಕೂತಿದ್ದಾಗ ನನ್ನ ಮೊಬೈಲಿಗೆ ಕರೆ ಬಂದಿತು. ಕರೆ ಮಾಡಿದ್ದವರು ಕೋರಮಂಗಲ ಪೊಲೀಸ್ ಸ್ಟೇಶನ್ನಿನ ಎಸ್.ಆಯ್ ಗಿರೀಶ್. ನನಗೆ ತುರ‍್ತಾಗಿ ಸ್ಟೇಶನ್ ಬರಲು ಹೇಳಿದರು. ನಾನು ಹನುಮನಿಗೆ ಅಂಗಡಿ ವಹಿಸಿ, ಬಟ್ಟೆ ಬದಲಿಸಿ ಸ್ಟೇಶನ್ನಿಗೆ ಹೊರಟೆ. ಎಸ್. ಆಯ್ ಗಿರೀಶ್ ನನ್ನ ಎದುರಿಗೆ, ಮೇಜಿನ ಇನ್ನೊಂದು ಬದಿಗೆ ಕೂತಿದ್ದನು. ಮೂವತ್ತಯ್ದರ ವಯಸ್ಸು. ಕೆಂಪೇಗೌಡ ಸಿನಿಮಾದ ಸುದೀಪ್ ನಂತೆ ದಾಡಿ ಮೀಸೆ ಬಿಟ್ಟಿದ್ದ. ಗಟ್ಟಿಮುಟ್ಟಾದ ಮಯ್, ಕಡಕ್ ದನಿ. ಸಣ್ಣ ವಯಸ್ಸಾದರೂ ಬುದ್ದಿಯಲ್ಲಿ ನೆರೆತ ಕಳೆ ಮುಕದಲ್ಲಿ ಕಾಣುತಿತ್ತು. ಒಂದು ವಿಸಿಟಿಂಗ್ ಕಾರ‍್ಡ್ ತೋರಿಸುತ್ತಾ,
“ಇದು ನಿಮ್ಮದೇನಾ?”
ನಾನು ನೋಡಿದೆ. ಅದು ನಂದೇ ಆಗಿತ್ತು. “ಹೌದು”, ಎಂದೆ.
“ಇದು ಈ ಮನುಶ್ಯನ ಜೇಬಿನಲ್ಲಿ ಸಿಕ್ತು” ಎಂದು ಮೇಜಿನ ಮೇಲಿದ್ದ ತಿಟ್ಟವನ್ನು ತೋರಿಸಿದ. ಅದು ಮೂರು ದಿನಗಳ ಹಿಂದೆ ನನಗೆ ಪಬ್ಬಿನಲ್ಲಿ ಸಿಕ್ಕಿದ್ದ ಸುನೀಲ್ ನದ್ದಾಗಿತ್ತು. ಅವನ ಜೇಬಿನಲ್ಲಿ ಸಿಕ್ಕಿದೆಯೆಂದರೆ ಅವನಿಗೆನೋ ಆಗಿರಬಹುದೆಂದು ಊಹಿಸಿದೆ.
“ಯಾವಾಗ್ ಸತ್ತಾ?” ಕೇಳಿದೆ.
“ಅವ್ನು ಸತ್ತಿದಾನೆ ಅಂತಾ ನಿಮಗ್ ಹೇಗ್ ಗೊತ್ತಾಯ್ತು?”
“ನೀವೇ ಹೇಳೀದ್ರಲ್ಲಾ” ಎಂದೆ.
“ನಾನ್ ಯಾವಾಗ್ ಹೇಳ್ದೆ?” ಮುಗುಳ್ನಗೆ ಬೀರುತ್ತಾ ಕೇಳಿದ.
“ಅವನ ಜೇಬಿನಲ್ಲಿ ನನ್ ಕಾರ‍್ಡ್ ಸಿಕ್ಕು, ಅದು ಅವನ ಜೇಬಿನಲ್ಲಿ ಯಾಕಿತ್ತು ಅಂತಾ ಹೇಳೋ ಸ್ತಿತಿಯಲ್ಲಿ ಅವ್ನು ಇಲ್ಲಾ ಅಂದ್ರೆ ಇನ್ನೇನ್ ಅರ‍್ತಾ?” ಎಂದೆ.
“ಪರವಾಗಿಲ್ಲ. ನಿಮ್ಮ ಬುದ್ದಿ ತುಂಬಾ ಚುರುಕಾಗಿದೆ. ಒಬ್ಬ ಪತ್ತೇದಾರನಿಗೆ ಅದು ಬೇಕು. ಆದ್ರೆ ಅವನಿಗೆ ಆಕ್ಸಿಡೆಂಟೋ ಇನ್ನೊಂದೊ ಆಗಿ ಆಸ್ಪತ್ರೆಯಲ್ಲಿದ್ರೆ?”
“ಇರಬಹುದು. ಆದ್ರೆ ಆಕ್ಸಿಡೆಂಟ್ ಆಗೋಕ್ಕಿಂತಾ ಅವನ ಮರ‍್ಡರ್ ಆಗೋ ಚಾನ್ಸು ಜಾಸ್ತಿ ಇತ್ತು” ನಕ್ಕೆ.
“ನೀವು ತುಂಬಾ ಇಂಟೆರಿಸ್ಟಿಂಗ್ ಆಗಿ ಮಾತಾಡ್ತೀರಾ. ನೀವು ಹೇಳೋದು ನೋಡಿದ್ರೆ, ನಿಮಗೆ ಯಾರು ಮರ‍್ಡರ್ ಮಾಡಿದಾರೆ ಎಂದು ಗೊತ್ತಿದೆ ಅನ್ಸುತ್ತೆ?”
“ಬಹುಶ, ಅವನ ಹೆಂಡ್ತಿ, ಅತವಾ ಅವಳ ಲವರ‍್” ಎಂದೆ.
“ಹೆಂಡ್ತಿನಾ?” ಅಚ್ಚರಿಯಲ್ಲಿ ಕೇಳಿದ.
“ಹೌದು ಹೆಂಡ್ತಿ. ಯಾಕೆ?”
“ಅವ್ನಿಗೆ ಮದುವೆನೇ ಆಗಿರಲಿಲ್ಲಾ” ಎಂದ.
ಅಚ್ಚರಿ ಪಡುವ ಸರದಿ ನನ್ನದಾಗಿತ್ತು. ನಾನು ನನ್ನ ಪಾಲಿನ ಕತೆಯಲ್ಲಾ ಹೇಳಿದೆ. ಗಿರೀಶ್ ಅದನ್ನು ಕೇಳಿದರೂ, ನಾನು ಸುಳ್ಳು ಹೇಳುತ್ತಿರಬಹುದಾ ಎಂದು ಆಗಾಗ ಯೋಚಿಸುತ್ತಿದ್ದುದು ನನ್ನ ಗಮನಕ್ಕೆ ಬಂದಿತು. ಅವನು ಯಾಕೆ ನನಗೆ ಸುಳ್ಳು ಹೇಳಿದ ಎಂದು ನಮ್ಮಿಬ್ಬರಿಗೂ ಗೊಂದಲವಾಯ್ತು. ನನ್ನ ಮಾತು ಮುಗಿದಾಗ ಅವನು ತನ್ನ ಪಾಲಿನ ಕತೆ ಹೇಳಿದ,
“ನೀವು ಅಶೋಕ್ ಅರಸ್ ಹೆಸರು ಕೇಳಿರಬೇಕಲ್ಲಾ? ದೊಡ್ಡ ಬ್ಯುಸಿನೆಸ್ ಮ್ಯಾನ್?”
“ಕೇಳಿದೀನಿ” ಅಂದೆ.
“ಅವನ ಒಬ್ಬಳೇ ಮಗಳು ಸುದಾ, ಇವನನ್ನಾ ಲವ್ ಮಾಡ್ತಾ ಇದ್ಳು. ಇಬ್ರೂ ಇಶ್ಟರಲ್ಲೇ ಮದುವೆ ಆಗ್ಬೇಕು ಅಂತಾಯಿದ್ರು, ಆದ್ರೆ ಅಶ್ಟರಲ್ಲಿ ಇವನ ಕೊಲೆಯಾಗಿದೆ. ಇವರಿಬ್ಬರ ಮದುವೆ ಅಶೋಕ್ ಅರಸ್ ಗೆ ಇಶ್ಟ ಇರಲಿಲ್ವಂತೆ”
“ಯಾಕೆ?”
“ಅವನ ಕ್ಲೋಸ್ ಪ್ರೆಂಡ್ ಮಗನ ಜೊತೆ ಮದುವೆ ಮಾಡ್ಬೇಕು ಅಂತಾ ಅವನಾಸೆ. ಇವ್ಳು ತನ್ನ ಮದುವೆ ಇವನ ಜೊತೆನೇ ಆಗ್ಬೇಕು ಅಂದಾಗ ಮನೆಯಲ್ಲಿ ಅಪ್ಪ ಮಗಳ ನಡುವೆ ದೊಡ್ಡ ಜಗಳವಾಗಿ, ಅವ್ಳೇನಾದ್ರು ಅವ್ನನ್ನಾ ಮದುವೆಯಾದ್ರೆ ಮನೆಯಿಂದ ಹೊರಹಾಕಿ ಪುಡಿಗಾಸೂ ಕೊಡೋದಿಲ್ಲ ಅಂದಿದ್ನಂತೆ, ಮಿಸ್ಟರ್ ಅರಸ್”
“ಇದೆಲ್ಲಾ ನಿಮಗ್ ಹೇಗೆ ಗೊತ್ತಾಯ್ತು?”
“ಅವ್ನ ಮನೆಗೆಲಸದವ್ರು ಬಾಯಿ ಬಿಟ್ರು”
“ಕೊಲೆ ಬಗ್ಗೆ ಹೇಳ್ತಿರಾ? ನಿಮಗೇನೂ ಅಬ್ಯಂತರ ಇಲ್ದಿದ್ರೆ?”
“ಹೇಳ್ತೀನಿ… ನಿಮ್ಮಿಂದ ನನಗೂ ಸಹಾಯ ಆಗ್ಬಹುದು” ಎಂದ. ಅಶ್ಟರಲ್ಲಿ ಚಹಾ ಬಂದಿತು. ಹೀರುತ್ತಾ ಮಾತು ಮುಂದುವರೆಸಿದ,
“ಕೊಲೆ ನಡೆದಿದ್ದು ಜಕ್ಕಸಂದ್ರದಲ್ಲಿರೋ ಒಂದು ಅಪಾರ‍್ಟಮೆಂಟಿನ ಬಾಡಿಗೆ ಮನೆಯಲ್ಲಿ. ಅಲ್ಲಿ ಅವನೊಬ್ಬನೇ ಇರ‍್ತಾಯಿದ್ದ. ಸುತ್ತಮುತ್ತಲಿನವರ ಪ್ರಕಾರ ಅಲ್ಲಿಗೆ ಸುದಾ ಆಗಾಗ ಬಂದು ಹೋಗ್ತಿದ್ಳಂತೆ. ನಿನ್ನೆ, ಅಂದ್ರೆ ಮಂಗಳವಾರ ಬೆಳಗ್ಗೆ ಸುದಾ ಅವರು ಆ ಮನೆಗೆ ಹೋಗಿ ಅವನಿಗೆ ಕಾಲ್ ಮಾಡಿದ್ದಾರೆ. ಒಳಗಿನಿಂದ ಅವನ ಮೊಬೈಲು ರಿಂಗ್ ಆಗುತ್ತಿದ್ದುದು ಕೇಳ್ಸಿದೆ, ಆದ್ರೆ ಅವನು ಪಿಕ್ ಮಾಡಿಲ್ಲ. ಸುದಾ ಪ್ರಕಾರ ಹಿಂದಿನ ದಿನದ ಸಂಜೆಯಿಂದ ಅವ್ನು ಕಾಲ್ ಎತ್ತಿಲ್ಲ. ಹಾಗಾಗಿ ಮನೆಯ ಓನರ್ ಹತ್ರ ಇನ್ನೊಂದು ಬೀಗದ ಕಯ್ ತೊಗೊಂಡು ಬಾಗಿಲು ತೆಗೆದಿದ್ದಾಳೆ. ಅಲ್ಲಿ ಅವನ ಹೆಣ ನೋಡಿ, ಗಾಬರಿಯಾಗಿ ಅವನ ಗೆಳೆಯರಿಗೆ ಕಾಲ್ ಮಾಡಿದ್ದಾಳೆ. ಅವ್ರು ಬಂದು, ಅವನ ಸ್ತಿತಿ ನೋಡಿ ಪೊಲೀಸ್ ಗೆ ಕಾಲ್ ಮಾಡಿದ್ದಾರೆ”
“ಹೇಗ್ ಸತ್ತಾ?”
“ತಲೆಗೆ ಯಾವ್ದೋ ಗಟ್ಟಿ ವಸ್ತುನಿಂದಾ ಹೊಡೆದಿದ್ದಾರೆ. ಪೋಸ್ಟ್ ಮಾರ‍್ಟೆಮ್ ಪ್ರಕಾರ ತಲೆಗೆ ಎರಡು ಪೆಟ್ಟು ಬಿದ್ದಿವೆ. ಒಂದು ಪೆಟ್ಟು ತುಂಬಾ ಬಲವಾಗಿ ಬಿದ್ದಿದೆ. ಜಾಸ್ತಿ ಬ್ಲೀಡಿಂಗ್ ನಿಂದ ಮಿದುಳಿಗೆ ಆಕ್ಸಿಜೆನ್ ಕಮ್ಮಿಯಾಗಿ ಸತ್ತಿದ್ದಾನೆ”
ನಾನು ತುಸು ಯೋಚಿಸಿ ಮಾತಾಡಿದೆ, “ಅಂದ್ರೆ, ಪೆಟ್ ಬಿದ್ ತಕ್ಶಣ ಸತ್ತಿಲ್ಲ?”
“ಇಲ್ಲಾ. ಡಾಕ್ಟರ್ ಪ್ರಕಾರ ಪೆಟ್ ಬಿದ್ದು ಮೂರು ಗಂಟೆ ನಂತರ ಕರಕೊಂಡು ಬಂದ್ರೂ ಉಳಿಸಬಹುದಾಗಿತ್ತಂತೆ”
“ಸತ್ತ ಸಮಯ?”
“ಸೋಮವಾರ ರಾತ್ರಿ ಸುಮಾರು ಎರಡರಿಂದ ನಾಲ್ಕುಗಂಟೆ ನಡುವೆ”
“ಅಂದ್ರೆ ಪೆಟ್ ಬಿದ್ದಿದ್ದು ಸೋಮವಾರ ಸಂಜೆ”
“ಹೌದು… ಸಂಜೆ ಆರರಿಂದ ಒಂಬತ್ತು ಗಂಟೆ ನಡುವೆ”
“ಮರ‍್ಡರ್ ವೆಪನ್ ಸಿಕ್ತಾ?” ನಾನು ಕೇಳಿದೆ.
“ಇಲ್ಲಾ. ಗಾಯದ ಗುರುತು ನೋಡಿದ್ರೆ ಮಚ್ಚಿನ ತರಾ ಚೂಪಾದ ವೆಪನ್ ಇರಬಹುದು ಅನ್ಸುತ್ತೆ”
“ಹಮ್…” ಎಂದು ನಿಟ್ಟುಸಿರು ಬಿಟ್ಟೆ. ಒಂದೆರಡು ಕ್ಶಣ ತಡೆದು, “ನಿಮ್ ಇನ್ವೆಸ್ಟಿಗೇಶನ್ ಎಲ್ಲಿವರೆಗು ಬಂದಿದೆ?” ಕೇಳಿದೆ.
“ಅವ್ನು ಸತ್ತ ಶಾಕ್ ನಲ್ಲಿ ಸುದಾಗೆ ಸ್ವಲ್ಪ ಹೆಲ್ತ್ ಅಪ್ಸೆಟ್ ಆಗಿದೆ. ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದಾಳೆ. ಅವ್ಳನ್ನಾ ಇನ್ನೂ ಮಾತಾಡಿಸಿಲ್ಲ. ಅಶೋಕ್ ಅರಸ್ ಅವರನ್ನಾ ಒಂದೆರಡು ಪ್ರಶ್ನೆ ಕೇಳಿದೆ. ಆಸಾಮಿ ನೇರವಾಗಿ ಉತ್ತರ ಕೊಡ್ಲಿಲ್ಲ. ಹೆಚ್ಚು ಪ್ರೆಶರ್ ಹಾಕಿದ್ರೆ ಮೇಲಿಂದ ಪೋನ್ ಬರುತ್ತೆ, ಅದಕ್ಕೇ ನಾನೂ ಸುಮ್ಮನಾದೆ. ಆದ್ರೆ ಕೊಲೆ ನಡೆದ ಸಮಯದಲ್ಲಿ ಅವ್ನು ತನ್ನ ಮನೆಯಲ್ಲಿ ಇದ್ದ ಅಂತ ನಿಕ್ಕಿ ಮಾಡಿಕೊಂಡೆ. ಇನ್ನು ಅವರ ಮನೆ ಆಳುಗಳಿಂದ ಸ್ವಲ್ಪ ಮಾಹಿತಿ ಸಿಕ್ತು”
“ಈ ಸತ್ತ ವ್ಯಕ್ತಿ ಬಗ್ಗೆ ಸ್ವಲ್ಪಾ ಹೇಳ್ತೀರಾ? ಅವ್ನು ನನಗೆ ಎಶ್ಟು ಸುಳ್ಳು ಹೇಳಿದ್ದಾನೋ ಗೊತ್ತಿಲ್ಲ”
“ಅವ್ನ ಹೆಸರು ಸಂಜಯ್ ಮಿಶ್ರಾ, ಬಿಹಾರಿ. ಬೆಂಗ್ಳೂರಿನ ಯುವಿಸಿಇ ನಲ್ಲಿ ಬಿ.ಇ. ಮುಗಿಸಿ, ಇಲ್ಲೇ ಐಐಎಮ್ ನಲ್ಲಿ ಓದಿ, ಸಾಪ್ಟ್ ನೆಟ್ ಕಂಪನಿಯಲ್ಲಿ ಮಾರ‍್ಕೆಟಿಂಗ್ ಕೆಲ್ಸ ಮಾಡ್ತಿದ್ದಾ”
“ಸಂಜಯ್ ಮಿಶ್ರಾ? ಆದ್ರೂ ಕನ್ನಡ ಎಶ್ಟ್ ಚೆನ್ನಾಗ್ ಮಾತಾಡ್ತಿದ್ದಾ ಬಡ್ಡಿ ಮಗ” ಎಂದೆ. ಗಿರೀಶ್ ನಕ್ಕ.
“ಬಿ.ಇ. ಓದುವಾಗಲೇ ಇವರಿಬ್ಬರ ಅಪೇರ್ ಶುರುವಾಗಿತ್ತಂತೆ… ಅವನ ಗೆಳೆಯರು ಹೇಳಿದ್ರು”. ನಾನು ಚಹಾ ಹೀರುತ್ತಾ ಎಲ್ಲವನ್ನೂ ಅರಗಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡೆ. ಅವನೂ ಸುಮ್ಮನಾದ. ಒಂದೆರಡು ನಿಮಿಶವಾದ ಮೇಲೆ ನಾನು ಕೇಳಿದೆ,
“ಅವನ ಮನೆ ನೋಡ್ಬಹುದಾ?”
“ಕಂಡಿತ. ಆದ್ರೆ ಈಗ ನನಗೆ ಸ್ವಲ್ಪ ಕೆಲ್ಸ ಇದೆ. ಸಂಜೆ ಹೋಗೋಣ”, ಎಂದ.
*********************************************************
(ಮುಂದುವರೆಯುವುದು : ಎರಡನೆ ಕಂತು ನಾಳೆಗೆ)
( ಚಿತ್ರ ಸೆಲೆ: api.paigeeworld.com )
ಇತ್ತೀಚಿನ ಅನಿಸಿಕೆಗಳು