ಅಲ್ಲಮನ ವಚನಗಳ ಓದು – 4ನೆಯ ಕಂತು

– ಸಿ.ಪಿ.ನಾಗರಾಜ.

 

ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿದ್ದರೆ
ಆ ಬೆವಸಾಯದ ಘೋರವೇತಕಯ್ಯ
ಕ್ರಯವಿಕ್ರಯವ ಮಾಡಿ ಮನೆಯ ಸಂಚು ನಡೆಯದನ್ನಕ್ಕ
ಆ ಕ್ರಯವಿಕ್ರಯದ ಘೋರವೇತಕಯ್ಯ
ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿದ್ದರೆ
ಆ ಓಲಗದ ಘೋರವೇತಕಯ್ಯ
ಭಕ್ತನಾಗಿ ಭವಂನಾಸ್ತಿಯಾಗದಿದ್ದರೆ ಆ ಉಪದೇಶವ ಕೊಟ್ಟ ಗುರು
ಕೊಂಡ ಶಿಷ್ಯ ಇವರಿಬ್ಬರ ಮನೆಯಲ್ಲಿ ಮಾರಿ ಹೊಗಲಿ
ಗುಹೇಶ್ವರಲಿಂಗವತ್ತಲೆ ಹೋಗಲಿ.

ಈ ವಚನದಲ್ಲಿ ಅಲ್ಲಮನು ಎರಡು ಸಂಗತಿಗಳನ್ನು ಹೇಳಿದ್ದಾನೆ.

1) ಯಾವುದೇ ವ್ಯಕ್ತಿಯು ತಾನು ಮಾಡಿದ ಕೆಲಸದಿಂದ ತನ್ನ ಜೀವನಕ್ಕೆ ಬೇಕಾದುದನ್ನು/ತಾನು ಬಯಸಿದ್ದನ್ನು ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಆ ಕೆಲಸಕ್ಕಾಗಿ ಮಾಡಿದ ಮಯ್-ಮನಗಳ ದುಡಿಮೆ, ತೊಡಗಿಸಿದ ಹಣ ಮತ್ತು ಬಳಸಿದ ಸಮಯವೆಲ್ಲವೂ ಹಾಳಾಗುವುದಲ್ಲದೇ, ವ್ಯಕ್ತಿಗೆ ಹೆಚ್ಚಿನ ಆತಂಕ/ನಿರಾಶೆ/ಸಂಕಟವನ್ನು ನೀಡಿ ಬದುಕನ್ನು ಹಿಂಡುತ್ತವೆ. ಆದುದರಿಂದ ಯಾವುದೇ ಒಂದು ಕೆಲಸವನ್ನು ಕಯ್ಗೊಳ್ಳುವ ಮುನ್ನ, ಅದರ ಆಗುಹೋಗುಗಳ ಬಗ್ಗೆ ಮುನ್ನೆಚ್ಚರಿಕೆಯನ್ನು ಹೊಂದಿರಬೇಕೆಂಬುದನ್ನು ಅಲ್ಲಮನು ಮೂರು ಪ್ರಸಂಗಗಳ ಮೂಲಕ ಹೇಳಿದ್ದಾನೆ.

ಬೂಮಿಯನ್ನು ಉಳುಮೆ ಮಾಡಿ ಹದಗೊಳಿಸಿ , ಬೀಜವನ್ನು ಬಿತ್ತಿ ಒಟ್ಟಿಲನ್ನು ಹಾಕಿ , ಮೊಳಕೆಯೊಡೆದು ಬೆಳೆದ ಬತ್ತದ ಸಸಿಗಳನ್ನು/ಪಯಿರುಗಳನ್ನು ಕಿತ್ತು , ಮತ್ತೆ ನಾಟಿ ಮಾಡಿ, ಹಗಲಿರುಳೆನ್ನದೆ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿ ಬೆಳೆದ ಬತ್ತದ ಬೆಳೆಯಿಂದ ಬೇಸಾಯಗಾರರ ಕುಟುಂಬದವರಿಗೆ ವರುಶಕ್ಕೆ ಬೇಕಾಗುವಶ್ಟು ಕೂಳು ದೊರೆಯದಿದ್ದರೆ, ಒಕ್ಕಲು ಮಕ್ಕಳು ಹಸಿವಿನ ಸಂಕಟದ ಜತೆಗೆ, ಸಾಲಸೋಲ ಮಾಡಿ ಬೇಸಾಯಕ್ಕೆಂದು ಸುರಿದಿದ್ದ ಹಣವನ್ನು ಕಳೆದುಕೊಂಡು ಬಡತನದ ಬೇಗೆಯಲ್ಲಿ ಬೇಯುತ್ತಾರೆ.

ತಮ್ಮಲ್ಲಿ ಇರುವ ಒಡವೆವಸ್ತುಗಳನ್ನು ಮಾರಾಟ ಮಾಡಿ ಬಂದ ಹಣದಿಂದ ತಮಗೆ ಬೇಕಾದುದನ್ನು ತೆಗೆದುಕೊಂಡು ಜೀವನದಲ್ಲಿ ನಲಿವು ನೆಮ್ಮದಿಯನ್ನು ಪಡೆಯದಿದ್ದರೆ , ಅಂತಹ ವಹಿವಾಟಿನಿಂದ ಮನೆಮಂದಿಯೆಲ್ಲಾ ಇನ್ನೂ ಹೆಚ್ಚಿನ ಆತಂಕ/ದುಗುಡ/ಸಂಕಟಗಳಿಗೆ ಒಳಗಾಗಿ ಪರಿತಪಿಸಬೇಕಾಗುತ್ತದೆ.

“ಒಡೆಯನನೋಲೈಸಿ ತನುವಿಂಗೆ ಅಶ್ಟಭೋಗವ ಪಡೆಯದಿದ್ದರೆ ; ಆ ಓಲಗದ ಘೋರವೇತಕಯ್ಯ” ಎಂಬ ಈ ಮಾತುಗಳು ಎರಡು ಬಗೆಯ ತಿರುಳನ್ನು ನೀಡುತ್ತವೆ.

ಅ) ಸಿರಿಸಂಪದವುಳ್ಳ ಒಡೆಯನಿಗೆ ಎಲ್ಲಾ ರೀತಿಯಿಂದಲೂ ಒಳಿತಾಗುವಂತೆ ಊಳಿಗವನ್ನು ಮಾಡಿದ ಆಳು , ಅದಕ್ಕೆ ಬದಲಾಗಿ ಒಡೆಯನಿಂದ ತನ್ನ ಬದುಕಿನ ಒಲವುನಲಿವಿಗೆ ಬೇಕಾದ ಒಡವೆ ವಸ್ತುಗಳನ್ನು ಪಡೆಯದಿದ್ದರೆ, ದುಡಿಮೆ ಮಾಡಿ ಬಸವಳಿದ ಆಳಿನ ಬಾಳು ಸಂಕಟಕ್ಕೆ ಗುರಿಯಾಗುತ್ತದೆ.

ಆ) ಗದ್ದುಗೆಯಲ್ಲಿ ಕುಳಿತಿರುವ ಅರಸನನ್ನು ಒಡ್ಡೋಲಗದಲ್ಲಿ ಇನ್ನಿಲ್ಲದ ರೀತಿಯಲ್ಲಿ ಹೊಗಳಿ ಕೊಂಡಾಡಿ, ಅವನಿಂದ ಬೆಲೆಬಾಳುವ ಒಡವೆವಸ್ತುಗಳನ್ನು ಉಡುಗೊರೆಯಾಗಿ ಪಡೆಯದಿದ್ದರೆ, ಒಡ್ಡೋಲಗದಿಂದ ಬರಿಗಯ್ಯಲ್ಲಿ ಹೊರಬರುವ ಸಂಕಟದಿಂದ ನರಳಬೇಕಾಗುತ್ತದೆ.

2) ಬದುಕಿನಲ್ಲಿ ಒಳ್ಳೆಯ ನಡೆನುಡಿಗಳ ಹಾದಿಯಲ್ಲಿ ನಡೆಯಬೇಕೆಂಬ ಉದ್ದೇಶದಿಂದ ಗುರುವಿನ ಬಳಿಯಲ್ಲಿ ಮಾರ‍್ಗದರ‍್ಶನವನ್ನು ಪಡೆದ ಶಿಶ್ಯನು ಅದರಂತೆ ನಡೆದುಕೊಳ್ಳದಿದ್ದರೆ , ಆಗ ಗುರು ಮತ್ತು ಶಿಶ್ಯ- ಇಬ್ಬರ ವ್ಯಕ್ತಿತ್ವಕ್ಕೆ ಯಾವ ಬೆಲೆಯೂ ಇಲ್ಲವಾಗುತ್ತದೆ ಎಂಬ ಎಚ್ಚರಿಕೆಯನ್ನು ಅಲ್ಲಮನು ನೀಡಿದ್ದಾನೆ. ಹನ್ನೆರಡನೆಯ ಶತಮಾನದ ಶಿವಶರಣಶರಣೆಯರ ನಿಲುವಿನಲ್ಲಿ-

” ಭಕ್ತ ” ಎಂದರೆ “ಒಳ್ಳೆಯ ನಡೆನುಡಿಗಳಿಂದ ತನ್ನ ಬದುಕನ್ನು ರೂಪಿಸಿಕೊಂಡು , ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವನು”.

” ಭವಿ ” ಎಂದರೆ ” ದುರಾಶೆ, ನೀಚತನ, ವಂಚನೆ ಮತ್ತು ಕ್ರೂರತನದ ನಡೆನುಡಿಗಳಿಂದ ಸಹ ಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುವವನು”.

” ಭವ ” ಎಂದರೆ ” ತನ್ನ ಆಸೆಗಳ ಈಡೇರಿಕೆಗಾಗಿ ಇತರರನ್ನು ವಂಚಿಸುವ/ಇತರರಿಗೆ ಕೇಡನ್ನು ಬಗೆಯುವ ಕೆಟ್ಟ ನಡೆನುಡಿಗಳು “.

ಈ ಹಿನ್ನೆಲೆಯಲ್ಲಿ ಅಲ್ಲಮನು ಕೆಟ್ಟ ನಡೆನುಡಿಗಳನ್ನು ಹೊಂದಿರುವ ಶಿಶ್ಯ ಮತ್ತು ಅಂತಹವನಿಗೆ ವಿದ್ಯೆಯನ್ನು ಹೇಳಿಕೊಟ್ಟ ಗುರು- ಈ ಇಬ್ಬರ ಬಗೆಗೂ ತನ್ನ ಕೋಪದ ಒಳಮಿಡಿತವನ್ನು ಕಾರುತ್ತಾ “ಅವರಿಬ್ಬರ ಮನೆಗೆ ಮಾರಿ ನುಗ್ಗಲಿ ” ಎಂಬ ಶಾಪದ ನುಡಿಯನ್ನು ಬಳಸಿದ್ದಾನೆ.

( ಬೆವಸಾಯ=ವ್ಯವಸಾಯ/ಬೇಸಾಯ/ಆರಂಬ ; ಬೆವಸಾಯವ ಮಾಡಿ=ಬೂಮಿಯನ್ನು ಉತ್ತು ಮಣ್ಣನ್ನು ಹದಗೊಳಿಸಿ, ಬೀಜವನ್ನು ಬಿತ್ತಿ/ಸಸಿಯನ್ನು ನೆಟ್ಟು ಬೆಳೆಯನ್ನು ತೆಗೆಯುವುದು ; ಬೀಯ=ವ್ಯಯ/ವೆಚ್ಚ/ಕರ‍್ಚು ; ಮನೆಯ ಬೀಯಕ್ಕೆ=ಮನೆಯ ದಿನನಿತ್ಯದ ವ್ಯವಹಾರಗಳಿಗೆ/ಆಗುಹೋಗುಗಳಿಗೆ ; ಬತ್ತ+ಇಲ್ಲದೆ+ಇದ್ದರೆ ; ಘೋರ+ಏತಕೆ+ಅಯ್ಯ ; ಘೋರ=ಆತಂಕ/ನಿರಾಶೆ/ನೋವು/ಬಡತನದ ಬೇಗೆ/ಹಸಿವಿನ ಸಂಕಟ/ಸಾಲದ ಹೊಡೆತ/ಸರೀಕರ ಮುಂದೆ ಆಗುವ ಅಪಮಾನಗಳೆಲ್ಲವನ್ನೂ ಒಳಗೊಂಡ ನೆಲೆ ; ಏತಕೆ=ಯಾವುದಕ್ಕಾಗಿ ; ಏತಕೆ ಅಯ್ಯ= ಇಂತಹ ದುಡಿಮೆಯ ಅಗತ್ಯವಾದರೂ ಏನು? ; ಕ್ರಯ=ನಮಗೆ ಬೇಕಾಗಿರುವುದನ್ನು ಬೆಲೆ ಕೊಟ್ಟು ಕೊಳ್ಳುವುದು ; ವಿಕ್ರಯ=ಮಾರಾಟ/ಬಿಕರಿ/ನಮ್ಮಲ್ಲಿರುವ ಒಡವೆವಸ್ತುಬೂಮಿಯನ್ನು ಮಾರುವುದು ; ಕ್ರಯವಿಕ್ರಯ ಮಾಡಿ=ಕೊಳ್ಳುವ-ಕೊಡುವ ವ್ಯವಹಾರವನ್ನು ಮಾಡಿ ; ಸಂಚು=ಉದ್ದೇಶಪಟ್ಟಿದ್ದ ಕೆಲಸ/ಆಗಬೇಕಾಗಿದ್ದ ಅನುಕೂಲ ; ಮನೆಯ ಸಂಚು=ಮನೆಗೆ ಒಳಿತನ್ನು ಉಂಟುಮಾಡುವ ವ್ಯವಹಾರ/ಮನೆಯ ಜನರ ನೋವುಬವಣೆಗಳ ನಿವಾರಣೆ ; ನಡೆಯದ+ಅನ್ನಕ್ಕ ; ನಡೆಯದ=ಈಡೇರದ/ನೆರವೇರದ; ಅನ್ನಕ್ಕ=ವರೆಗೆ/ತನಕ ; ನಡೆಯದನ್ನಕ=ಆಗದಿದ್ದರೆ/ನೆರವೇರದಿದ್ದರೆ; ಒಡೆಯನ್+ಅನ್+ಓಲೈಸಿ ; ಒಡೆಯ=ಯಜಮಾನ/ಅರಸು/ದಣಿ ; ಓಲೈಸಿ=ಸೇವೆಯನ್ನು ಮಾಡಿ/ಉಪಚರಿಸಿ/ಹೊಗಳಿಕೊಂಡಾಡಿ ; ತನು+ಗೆ=ತನುವಿಂಗೆ ; ತನು=ಮಯ್/ಶರೀರ/ದೇಹ ; ಅಷ್ಟ=ಎಂಟು ; ಭೋಗ=ಒಲವು ನಲಿವನ್ನು ಹೊಂದಿ ಆನಂದಪಡುವುದು ; ಅಷ್ಟಭೋಗ=ಮಯ್ ಮನಕ್ಕೆ ಮುದ ನೀಡುವ ” ಮನೆ-ಹಾಸುಗೆ-ಬಟ್ಟೆ-ಒಡವೆ-ಹೆಣ್ಣು-ಹೂವು-ಚಂದನ-ತಾಂಬೂಲ” / ” ಕೂಳು-ನೀರು-ತಾಂಬೂಲ-ಹೂವು-ಚಂದನ-ಬಟ್ಟೆ-ಹಾಸುಗೆ-ಅಲಂಕಾರ ” ಎಂಬ ಎಂಟು ಬಗೆಯ ಒಡವೆವಸ್ತುಗಳು ;

ಪಡೆಯದೆ+ಇದ್ದರೆ ; ಪಡೆ=ಹೊಂದು/ಸ್ವೀಕರಿಸು/ದೊರಕಿಸಿಕೊಳ್ಳು; ಭಕ್ತ+ಆಗಿ ; ಭಕ್ತ=ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿ ; ಭವಂ+ನಾಸ್ತಿ+ಆಗದೆ+ಇದ್ದರೆ ; ಭವ=ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುವ ನಡೆನುಡಿಗಳು ; ನಾಸ್ತಿ=ಇಲ್ಲವಾಗುವುದು/ಲಯವಾಗುವುದು/ಬಿಟ್ಟುಹೋಗುವುದು; ಭವಂನಾಸ್ತಿ=ಕೆಟ್ಟ ನಡೆನುಡಿಗಳನ್ನು ಬಿಡುವುದು ; ಉಪದೇಶ=ಅರಿವನ್ನು ನೀಡುವುದು/ತಿಳುವಳಿಕೆಯನ್ನು ಹೇಳುವುದು ; ಕೊಟ್ಟ=ಹೇಳಿದ/ನೀಡಿದ ; ಕೊಂಡ=ಪಡೆದ/ಕೇಳಿ ತಿಳಿದ/ಸ್ವೀಕರಿಸಿದ ; ಮಾರಿ=ಜನಪದರ ದೇವತೆ ; ಹೊಗಲಿ=ಒಳಕ್ಕೆ ಬರಲಿ/ಪ್ರವೇಶಿಸಲಿ/ಒಳನುಗ್ಗಲಿ ; ಮನೆಯಲ್ಲಿ ಮಾರಿ ಹೊಗಲಿ=” ನಿನ್ ಮನೆಗೆ ಮಾರಿ ನುಗ್ಗ ” ಎಂಬ ಶಾಪದ ನುಡಿಯು ಜನಪದರ ಮಾತುಕತೆಯಲ್ಲಿ ಬಳಕೆಯಲ್ಲಿದೆ. ಅಂದರೆ ಮಾರಿದೇವತೆಯ ಕ್ರೂರನೋಟಕ್ಕೆ ಗುರಿಯಾಗಿ ಮನೆಮಂದಿಗೆಲ್ಲಾ ಸಾವುನೋವು ಉಂಟಾಗಲಿ ಎಂಬ ತಿರುಳನ್ನು ಈ ಶಾಪದ ನುಡಿಗಳು ಹೊಂದಿವೆ ; ಗುಹೇಶ್ವರ+ಲಿಂಗ+ಅತ್ತಲೆ ; ಗುಹಾ+ಈಶ್ವರ=ಗುಹೇಶ್ವರ ; ಗುಹಾ=ಗುಹೆ/ಬೆಟ್ಟಗುಡ್ಡಗಳಲ್ಲಿರುವ ಕಲ್ಲಿನ ಪೊಟರೆ ; ಈಶ್ವರ=ಶಿವ ; ಗುಹೇಶ್ವರ=ಶಿವನ ಮತ್ತೊಂದು ಹೆಸರು/ಅಲ್ಲಮನ ಮೆಚ್ಚಿನ ದೇವರು/ಅಲ್ಲಮನ ವಚನಗಳಲ್ಲಿ ಕಂಡುಬರುವ ಅಂಕಿತನಾಮ ; ಅತ್ತಲೆ=ಆ ಕಡೆ/ದೂರ ; ಹೋಗಲಿ=ಹೋಗುವಂತಾಗಲಿ ; ಗುಹೇಶ್ವರಲಿಂಗವತ್ತಲೆ ಹೋಗಲಿ= ಕೆಟ್ಟ ನಡೆನುಡಿಗಳುಳ್ಳ ವ್ಯಕ್ತಿಗಳಿಂದ ಗುಹೇಶ್ವರನು ದೂರ ಹೋಗುವಂತಾಗಲಿ )

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *