ಒಂದು ಮುಸ್ಸಂಜೆಯ ಕಡಲತೀರ

– ರತೀಶ ರತ್ನಾಕರ.

maxresdefault
ಒಂದು ಮುಸ್ಸಂಜೆಯ ಕಡಲತೀರ
ನಿನ್ನ ನೆನಪುಗಳ ಜೊತೆ ನನಗೆ!
ಮರಳ ಮೇಲಿವೆ ಹೆಜ್ಜೆಗಳ ಸಾಲು
ನಿನ್ನ ಕಾಲ್ಗುರುತು ಕಾಣದು ಕಣ್ಣಿಗೆ

ಕಿರುಬೆರಳು ಬಾಗಿ ಹುಡುಕುತಿದೆ
ಜೊತೆ ಹಿಡಿದು ನಡೆಸಿದ ಕೈಗಳ
ಸುಳಿಗಾಳಿ ಬೀಸಿ ಅರಸುತಿದೆ
ಓಲಾಡಿಸಿದ ಆ ಮುಂಗುರುಳ

ನೀನಿಲ್ಲದ ಸಂಜೆ ಕಪ್ಪಾಗಿದೆ
ಪಡುವಣವು ನಾಚಿ ಕೆಂಪೇರಿಲ್ಲ
ತಾ ನೆನೆಸಿದ ಕಾಲ್ಗೆಜ್ಜೆಯ ಕಾಣದೆ
ದಡಗುಡಿಸುವ ತೆರೆಗೆ ಹುರುಪಿಲ್ಲ

ಮುತ್ತುದುರಿಸುವ ಪಿಸುಮಾತಿರದೆ
ಕಿವಿ ಕೇಳಿದ್ದೆಲ್ಲವು ಹಳಸು
ಮೌನವೇ ಮಬ್ಬಾಗುತಿದೆ
ಈ ತಡಿಯಲ್ಲಡಗಿತೆ ಸೊಗಸು?

ಅಲೆ ನಿಲ್ಲದು ಸೆಲೆ ಆರದು
ಈ ನೆಲ ತಿರುಗುತಿರುವವರೆಗು
ಬಂದಪ್ಪಳಿಸುವವು ನಿನ ನೆನಪುಗಳು
ನನ್ನುಸಿರಲಿ ನೀ ಇರುವರೆಗು

(ಚಿತ್ರ ಸೆಲೆ: youtube.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks