ಸ್ವರ‍್ಗದಿಂದ ಬೂಮಿಗೆ ಬರಲು ಕೇವಲ ಹತ್ತೇ ನಿಮಿಶ!

ಗಿರೀಶ್ ಬಿ. ಕುಮಾರ್.

nandi-hills-bangalore

ಅಂದು ನಾನು ಬೆಳಗಿನ ಜಾವ ಎದ್ದು ಹೊರಡಲು ತಯಾರಾಗಿದ್ದೆ. ಆದರೆ ಅವತ್ತು ಬೆಳ್ಳಂಬೆಳಿಗ್ಗೆ ಸಣ್ಣದಾಗಿ ತುಂತುರು ಮಳೆ ಶುರುವಾಗಿತ್ತು. ಅಶ್ಟರಲ್ಲಿ ವೈಟ್ ಪೀಲ್ಡ್ ನಲ್ಲಿರುವ ನನ್ನ ಗೆಳೆಯರು ನನಗೆ ಪೋನ್ ಮಾಡಿ “ಇತ್ತಕಡೆ ಮಳೆ ಬರ‍್ತಿದೆ. ಅಶ್ಟು ದೂರ ಹೋಗಕಾಗುತ್ತೊ ಇಲ್ವೊ!” ಎಂದು ಗೊಣಗತೊಡಗಿದರು. ಅದಕ್ಕೆ ನಾನು, “ಈ ಮಳೆ ಜೋರಾಗಿ ಬರುವುದಿಲ್ಲ. ಬೇಗ ಹೊರಟು ಹೆಬ್ಬಾಳ ಪ್ಲೈ ಒವರ್ ಹತ್ರ ಬನ್ನಿ” ಎಂದು ಹೇಳಿ ನಾನು ಕೂಡ ಮನೆಯಿಂದ ನನ್ನ ರೆಡ್ ಬ್ಯೂಟಿಯೊಡನೆ ಹೊರಟೆ.

ಬೀದಿ ನಾಯಿ ರಾದ್ದಾಂತ

ಅವತ್ತು ಸೈಕಲ್ ತುಳಿಯುವಾಗ ಅಶ್ಟು ಚಳಿಯಿದ್ದರು ಸಹ ಈ ಬೀದಿ ನಾಯಿಗಳ ದೆಸೆಯಿಂದ ನಾನು ಬೆವರುವಂತಾಗಿತ್ತು. ಬೆಳಗಿನ ಜಾವವಾಗಿದ್ದರಿಂದ ರಸ್ತೆಗಳಲ್ಲಿ ಯಾವುದೇ ವಾಹನಗಳ ಓಡಾಟವಿರಲಿಲ್ಲ ಹಾಗಾಗಿಯೇ ಈ ಬೀದಿ ನಾಯಿಗಳು ನನ್ನ ಸೈಕಲ್ ಹಿಂದೆ ಬಿದ್ದಿದ್ದವು. ಇವುಗಳಿಂದ ತಪ್ಪಿಸಿಕೊಳ್ಳಲು ನಾನು ಜೋರಾಗಿ ಸೈಕಲ್ ತುಳಿದು ಸುಸ್ತಾಗಿ ಬೆವರಿಳಿಸುವಂತಾಗಿತ್ತು. ಕೆಲವು ಕಂತ್ರಿ ನಾಯಿಗಳಂತು ಕಿಲೋ ಮೀಟರ್ ಗಟ್ಟಲೆ ಅಟ್ಟಾಡಿಸಿಕೊಂಡು ಬಂದದ್ದು ಇದೆ!

ನಾನು ಈ ಬೀದಿ ನಾಯಿಗಳ ಜೊತೆ ಹೆಣಗಾಡಿ ಹೆಬ್ಬಾಳ ಪ್ಲೈ ಒವರ್ ತಲುಪುವಶ್ಟರಲ್ಲಿ ಬೆಳಿಗ್ಗೆ ಸುಮಾರು 5.30 ಆಗಿತ್ತು. ವೈಟ್ ಪೀಲ್ಡ್ ಕಡೆಯಿಂದ ಬರಬೇಕಿದ್ದ ನನ್ನ ಮೂವರ ಗೆಳೆಯರಲ್ಲಿ ಒಬ್ಬರೂ ಸಹ ನನಗೆ ಅಲ್ಲಿ ಕಾಣಿಸಲಿಲ್ಲ. ಸಂದೀಪ್ ಮತ್ತು ಅಬಿಶೇಕ್ ಇಬ್ಬರೂ ನನ್ನ ಜೊತೆ ಹಲವು ಬಾರಿ ಸೈಕ್ಲಿಂಗ್ ಬಂದಿದ್ದರಿಂದ ಇವರಿಬ್ಬರು ಸರಾಗವಾಗಿ ಬರುತ್ತಾರೆಂಬುದರಲ್ಲಿ ನನಗೆ ಯಾವುದೇ ಅನುಮಾನವಿರಲಿಲ್ಲ. ಆದರೆ ಮೊದಲ ಬಾರಿಗೆ ಅದುವೇ ಗೇರ್ ಇಲ್ಲದ ಸೈಕಲ್ ತುಳಿದುಕೊಂಡು ಪ್ರವೀಣ್ ನಮ್ಮೊಡನೆ ಹೇಗೆ ಹೆಣಗಾಡುತ್ತಾನೋ ಎಂಬುದು ಚಿಂತೆಯಾಗಿತ್ತು. ನಾನು ಏರ‍್ಪೋರ‍್ಟ್ ರಸ್ತೆಯಲ್ಲಿ ರಾಕೇಟ್ ವೇಗದಲ್ಲಿ ಓಡಾಡುತ್ತಿದ್ದ ವಾಹನಗಳನ್ನ ಸುಮ್ಮನೆ ಲೆಕ್ಕ ಹಾಕುತ್ತಾ ನಿಂತಿದ್ದೆ, ಆ ಸಮಯಕ್ಕೆ ಮೇಲೆ ಹೇಳಿದ ಮೂರು ತಲೆಗಳು ಕಾಣಿಸಿಕೊಂಡವು. ಅಶ್ಟೊತ್ತಿಗಾಗಲೆ ಮಳೆ ನಿಂತಿದ್ದರಿಂದ ನಾವೆಲ್ಲರೂ ನಮ್ಮ ಸೈಕ್ಲಿಂಗ್ ಪಯಣವನ್ನು ಶುರುಮಾಡಿಯೇ ಬಿಟ್ಟೆವು.

ನಾವು ಅಂದು ಸೈಕ್ಲಿಂಗ್ ಹೋಗಬೇಕು ಅಂದುಕೊಂಡಿದ್ದ ಜಾಗ “ನಂದಿ ಬೆಟ್ಟ”. ಒಂದಶ್ಟು ಸಮಯ ತಿರುಗಾಡಿಕೊಂಡು ಬರಲು ಇದು ಒಳ್ಳೆಯ ಜಾಗ. ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿರುವ ಈ ಬೆಟ್ಟಕ್ಕೆ ನಾನು ಒಂದೆರಡು ಬಾರಿ ಸ್ಕೂಟರ್ ನಲ್ಲಿ ಹೋಗಿದ್ದೆನಾದರೂ ಸೈಕಲ್ ನಲ್ಲಿ ಹೋಗುತ್ತಿದ್ದದ್ದು ಇದೇ ಮೊದಲು. ಈ ಮುಂಚೆ ನಮ್ಮ ಸೈಕ್ಲಿಂಗ್ ತಂಡದ ಜೊತೆ ಸೇರಿಕೊಂಡು ಒಂದೇ ದಿನದಲ್ಲಿ ಸುಮಾರು 80 ಕಿ.ಮೀ ವರೆಗೂ ಸೈಕ್ಲಿಂಗ್ ಮಾಡಿದ್ದೆ. ಆದರೆ ಈ ಬಾರಿ ಒಂದೇ ದಿನದಲ್ಲಿ ಬರೋಬ್ಬರಿ ಸುಮಾರು 130 ಕಿ.ಮೀ ಸೈಕ್ಲಿಂಗ್ ಮಾಡಬೇಕು ಅಂದುಕೊಂಡಿದ್ದು ನಮಗೆಲ್ಲರಿಗೂ ಒಂದು ರೀತಿಯ ತ್ರಿಲ್ಲಿಂಗ್ ವಿಶಯವಾಗಿತ್ತು. ಅದಕ್ಕಾಗಿಯೇ ಸುಂದರವಾದ ನಂದಿಬೆಟ್ಟದ ಚಿತ್ರಣವನ್ನ ತಲೆಯಲ್ಲಿ ತುಂಬಿಕೊಂಡ ಅಮಲಿನಲ್ಲಿ ಸಿದ್ದರಾಗಿ ಹೊರಟಿದ್ದೆವು.

ಹೆಬ್ಬಾಳ – ಯಲಹಂಕ – ನಂದಿಕ್ರಾಸ್ ಮೂಲಕ ನಂದಿ ಬೆಟ್ಟ ತಲುಪಲು ಒಳ್ಳೆಯ ದಾರಿ. ಇದು ಏರ‍್ಪೋರ‍್ಟ್ ರಸ್ತೆಯಾಗಿರುವುದರಿಂದ ಹಾಗೂ ಈ ರಸ್ತೆಯಲ್ಲಿ ಜನರು ಬೇಕಾಬಿಟ್ಟಿ ವಾಹನ ಚಲಾವಣೆ ಮಾಡುವುದರಿಂದ ಸೈಕಲ್ ನಲ್ಲಿ ಹೋಗುವುದು ಕಶ್ಟವಾಗಬಹುದೆಂದು ತಿಳಿದು ನಾವು ಹೆಬ್ಬಾಳ – ಯಲಹಂಕ – ದೊಡ್ಡಬಳ್ಳಾಪುರ ರಸ್ತೆ – ಗಂಟಿಗನಹಳ್ಳಿ – ವಾಜರಹಳ್ಳಿ ಮೂಲಕ ನಂದಿ ಬೆಟ್ಟ ಸೇರುವ ರಸ್ತೆಯನ್ನು ಆರಿಸಿಕೊಂಡೆವು. ಈ ರಸ್ತೆಯಲ್ಲಿ ಹಲವಾರು ಸಣ್ಣ ಸಣ್ಣ ಹಳ್ಳಿಗಳು ಇದ್ದದ್ದರಿಂದ ಸಹಜವಾಗಿಯೇ ನಮಗೆ ಹಿಡಿಸಿತು. ಬೆಳಿಗ್ಗೆ 5.45 ರ ಸಮಯಕ್ಕೆ ಹೆಬ್ಬಾಳದಿಂದ ಹೊರಟ ನಾವು ಅಲ್ಲಲ್ಲಿ ಒಂದಶ್ಟು ಪೋಟೋ ತೆಗೆದುಕೊಂಡು, ಟೀ ಕುಡಿದು ಬೆಂಗಳೂರಿನ ಹೊರಬಾಗದ ಹಳ್ಳಿಯೊಂದನ್ನು ತಲುಪುವಶ್ಟರಲ್ಲಿ ಬೆಳಿಗ್ಗೆ 9.30 ಆಗಿತ್ತು. ಅದು ನೋಡುವುದಕ್ಕೆ ಸಣ್ಣ ಹಳ್ಳಿಯ ಹಾಗೆ ಕಂಡರೂ ಅಲ್ಲಿದ್ದ ಒಂದೆರಡು ದೊಡ್ಡ ದೊಡ್ಡ ಕಾನ್ವೆಂಟುಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಅದೊಂದು ಸಣ್ಣ ಪಟ್ಟಣವೆಂದೇ ಹೇಳಬೇಕಾಗುತ್ತದೆ.

ಅದೇ ಹಳ್ಳಿಯ ಒಂದು ಹೋಟೆಲ್ ನಲ್ಲಿ ತಟ್ಟೆ ಇಡ್ಲಿ ಸಿಗದ ಕಾರಣ ಒಂದಶ್ಟು ಚಿತ್ರಾನ್ನ ಮತ್ತು ಬೋಂಡ ತಿಂದು ಹೊರಡೋಣವೆಂದು ತಯಾರಾಗುವಶ್ಟರಲ್ಲಿ ಪ್ರವೀಣ್ ಮತ್ತು ಅಬಿಶೇಕ್ ಯಾಕೋ ಸ್ವಲ್ಪ ಹಿಂದೇಟು ಹಾಕುವುದಕ್ಕೆ ಶುರುಮಾಡಿದರು. ನಿಜವಾಗಿಯೂ ಇವರಿಬ್ಬರು ಬೆಟ್ಟದ ಮೇಲಿನವರೆಗೂ ಬರುತ್ತಾರೆಯೇ ಎಂಬ ಅನುಮಾನ ಕಾಡತೊಡಗಿತು. ನಾನು ಮತ್ತು ಸಂದೀಪ್ ಹಲವಾರು ಕಡೆ ಎಶ್ಟೇ ಕಶ್ಟವಾದರೂ ಬಿಡದೆ ಅಂದುಕೊಂಡಶ್ಟು ದೂರ ಸೈಕ್ಲಿಂಗ್ ಮಾಡಿ ಬಂದಿದ್ದೆವು. ಅದೇ ದೈರ‍್ಯದ ಮೇಲೆ ನಂದಿಬೆಟ್ಟ ಏರುವ ಯೋಜನೆ ಹಾಕಿದ್ದೆವು. ಹಿಂದು ಮುಂದು ನೋಡುತ್ತಿದ್ದ ಇವರಿಬ್ಬರ ದೆಸೆಯಿಂದ ಎಲ್ಲಿ ನಮ್ಮ ಯೋಜನೆಗಳೆಲ್ಲಾ ತಲೆಕೆಳಗಾಗುತ್ತವೋ ಎಂದು ಹೆದರಿ ನಾನು ಸಂದೀಪ್ ಸೇರಿ ಇವರಿಬ್ಬರನ್ನು ಪುಸಲಾಯಿಸಿ ಅಲ್ಲಿಂದ ಹೊರಡಿಸುವಶ್ಟರಲ್ಲಿ ಸಾಕಾಯಿತು.

ಹಳ್ಳಿ, ಹಸಿರು, ಏರುಪೇರು ರಸ್ತೆಗಳು

ಸುತ್ತಲೂ ಹಸಿರು, ಹೆಚ್ಚು ವಾಹನಗಳಿಲ್ಲದ ದಾರಿಗಳು, ಅಲ್ಲೊಂದು ಇಲ್ಲೊಂದು ಹಳ್ಳಿಗಳು ಇಂತಹ ಕಡೆಗಳಲ್ಲಿ ಸೈಕಲ್ ತುಳಿಯಲು ತುಂಬಾ ಕುಶಿಯಾಗುತ್ತದೆ. ಇತ್ತೀಚೆಗೆ ನಾನು ಒಮ್ಮೆ ಇದೇ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಹೋಗಿದ್ದೆ. ನನಗೆ ಸೈಕಲ್ ನಲ್ಲಿ ಹೋಗುವಾಗ ಸಿಗುವ ಕುಶಿ ಸ್ಕೂಟರ್ ನಲ್ಲಿ ಹೋಗುವಾಗ ಸಿಗುವುದಿಲ್ಲ. ಸೈಕಲ್ ನಲ್ಲಿ ನಾವು ಹೋಗುವ ಸಾದಾರಣ ವೇಗಕ್ಕೆ ನಮ್ಮ ಕಣ್ಣಿಗೆ ಕಂಡದ್ದೆಲ್ಲಾ ಕರಗಿ ಮನಸ್ಸಿಗೆ ಇಳಿದು ಬಿಡುತ್ತದೆ.

3kmtonandibetta

ಹೀಗೆ ಹಳ್ಳಿ ಹಳ್ಳಿ ಸುತ್ತಾಡಿಕೊಂಡು ನಂದಿ ಬೆಟ್ಟದ ತಪ್ಪಲಿನಲ್ಲಿರುವ ಸರ‍್ಕಾರಿ ಶಾಲೆ ಹತ್ತಿರ ಬರುವಶ್ಟರಲ್ಲಿ ಸಮಯ ಬೆಳಿಗ್ಗೆ 11.30 ಆಗಿತ್ತು. ಶಾಲೆಯ ಮಕ್ಕಳು ಶನಿವಾರದ ಅರ‍್ದ ದಿನದ ತರಗತಿಗಳನ್ನ ಮುಗಿಸಿಕೊಂಡು ಮನೆಯ ಕಡೆಗೆ ಹೊರಟಿದ್ದರು. ನಾವುಗಳು ಸುಮಾರು 7 ಗಂಟೆಗಳ ಸಮಯ ತೆಗೆದುಕೊಂಡು 53 ಕಿ.ಮೀ ಸೈಕಲ್ ಸವಾರಿ ಮಾಡಿದ್ದೆವು. ಬೆಟ್ಟದ ಬುಡದಿಂದ ತುದಿಗೆ ಹೋಗಲು ಎಶ್ಟು ಸಮಯ ಹಿಡಿಯಬಹುದೆಂದು ನಮಗೆ ಯಾರಿಗೂ ಅಂದಾಜಿರಲಿಲ್ಲ. ಆದರೆ ಈ ದಾರಿ 9 ಕಿ.ಮೀ ಗಳಿದ್ದು ಸಂಪೂರ‍್ಣ ಏರು ರಸ್ತೆ ಎಂಬುದು ಮಾತ್ರ ಗೊತ್ತಿತ್ತು.

ನಾವು ನಾಲ್ಕು ಜನರು ಅಲ್ಲೆ ಒಂದು ಹೋಟೆಲ್ ಪಕ್ಕ ಸೈಕಲ್ ಗಳನ್ನು ನಿಲ್ಲಿಸಿ ಕಾಲಿಯಾಗಿದ್ದ ಬಾಟೆಲ್ ಗಳಿಗೆ ನೀರು ತುಂಬಿಸಿಕೊಂಡೆವು. ಹಾಗೆಯೇ ಒಂದಶ್ಟು ಬಿಸ್ಕೇಟ್ ತಿಂದು ಮುಗಿಸಿದ್ದಾಯಿತು. ಅಂದಿನ ವಾತಾವರಣ ತಂಪಾಗಿದ್ದುದ್ದರಿಂದ ಅಲ್ಲಿಯವರೆಗೂ ನಮಗೆ ಅಶ್ಟೇನು ಆಯಾಸವಾಗಿರಲಿಲ್ಲ. ನಿದಾನವಾಗಿ ಬಂದಿದ್ದರಿಂದ ಹೆಚ್ಚು ಸಮಯ ಹಿಡಿದಿತ್ತು ಅಶ್ಟೆ. ಆದರೆ ಮುಂದಿನ ರಸ್ತೆಯಲ್ಲಾಗುವ ಅನುಬವದ ಬಗ್ಗೆ ನಮಗಾರಿಗೂ ಅರಿವಿಲ್ಲದ್ದರಿಂದ ನಾವೆಲ್ಲರೂ ಬೆಟ್ಟದ ತುದಿಗೆ ಏರಲು ತುಂಬಾ ಉತ್ಸುಕರಾಗಿದ್ದೆವು.

ಆ ಏರು ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ ವರೆಗೂ ಸ್ವಲ್ಪ ಕಶ್ಟ ಪಟ್ಟು ಸೈಕಲ್ ತುಳಿದುಕೊಂದು ಹೋದೆವು ಆದರೆ ಅಲ್ಲಿಂದ ಮುಂದಕ್ಕೆ ನಮ್ಮ ಸವಾರಿ ತುಂಬಾ ಕಶ್ಟವಾಗುತ್ತಾ ಬಂತು. ತೀರ ಏರು ರಸ್ತೆಯಾಗಿದ್ದರಿಂದ ವಾತಾವರಣ ತಂಪಾಗಿದ್ದರು ಸಹ ನಾಲ್ಕು ಸುತ್ತು ಪೆಡಲ್‌ ಮಾಡುವಶ್ಟರಲ್ಲಿ ಬೆವರು ಹರಿದು ಸುಸ್ತಾಗುತ್ತಿತ್ತು. ಕೊನೆಗೆ ಸೈಕಲ್ ತುಳಿಯುವ ಸಾಹಸ ಬಿಟ್ಟು ಹಾಗೆಯೇ ಸೈಕಲ್ ಜೊತೆಗೆ ನಡೆದುಕೊಂಡು ಹೋಗೋಣವೆಂದು ತೀರ‍್ಮಾನಿಸಿ ನಾನು ಮತ್ತು ಸಂದೀಪ್ ಮುಂದೆ ಹೊರಟೆವು. ಸ್ವಲ್ಪ ದೂರ ನಡೆದುಕೊಂಡು ಹೋದಮೇಲೆ ಕೆಲವು ಸೈಕಲ್ ಸವಾರರು ಬೆಟ್ಟದ ಕಡೆಯಿಂದ ಸುಯ್ ಎಂದು ರಾಕೇಟ್ ವೇಗದಲ್ಲಿ ನಮ್ಮ ಮುಂದೆ “ಆಲ್ ದ ಬೆಸ್ಟ್” ಎಂದು ಅರಚುತ್ತಾ ಬರುತ್ತಿದ್ದದ್ದು ಕಾಣಿಸಿತು. ನಾನು ಮತ್ತು ಸಂದೀಪ್ ಅವರ ಕಡೆಗೆ ಕೈ ಬೀಸಿ ಉತ್ತರಿಸುವಶ್ಟರಲ್ಲಿ ಒಂದರ ಹಿಂದೆ ಒಂದರಂತೆ ಎಲ್ಲಾ ಸೈಕಲ್ ಸವಾರರು ಮುಂದೆ ಇದ್ದ ತಿರುವಿನಲ್ಲಿ ಮಾಯವಾದರು. ಆ ಇಳಿಜಾರಿನ ತಿರುವಿನಲ್ಲಿ ಈ ಸವಾರರು ಹೋಗುತ್ತಿದ್ದ ವೇಗ ನೋಡಿಯೇ ನಮಗೆ ಒಂದು ರೀತಿ ಪುಳುಕ ಉಂಟಾಗತೊಡಗಿತ್ತು. ಇತ್ತ ಪ್ರವೀಣ್ ಮತ್ತು ಅಬಿಶೇಕ್ ಇನ್ನೂ ಬರದಿದ್ದ ಕಾರಣ ಅಲ್ಲೇ ಸ್ವಲ್ಪ ವಿಶ್ರಾಂತಿ ಪಡೆದು ಹೋಗೋಣವೆಂದು ತೀರ‍್ಮಾನಿಸಿ ಕುಳಿತೆವು.

ಹೆಬ್ಬಾಗಿಲು ಬಂದೇ ಬುಡ್ತು

ಬೆವರು ಸುರಿಸುತ್ತಾ, ಇದ್ದ ಬದ್ದ ನೀರನ್ನು ಕಾಲಿ ಮಾಡುತ್ತಾ ಹಾವಿನ ಹಾದಿಯಂತಿರುವ ಏರು ರಸ್ತೆಯಲ್ಲಿ ನಡೆದು ಹೋಗಬೇಕಾದರೆ ಸಾಕು ಸಾಕಾಗಿ ಈ ಸೈಕಲ್ ಸಹವಾಸವೇ ಬೇಡ ಅನ್ನಿಸಿಬಿಟ್ಟಿತ್ತು. ಆದರೂ ಮನಸ್ಸಿನ ಆಳದಲ್ಲಿ ಎಲ್ಲೋ ಒಂದು ಕಡೆ ಹೊಸತನದ ಕೂಗು ಕೇಳುತ್ತಿತ್ತು ಎಂದು ಕಾಣುತ್ತದೆ ಅದಕ್ಕಾಗಿಯೇ ದೇಹ ದಣಿದಿದ್ದರೂ ಮನಸ್ಸು ದಣಿಯದೆ ನಮ್ಮ ಕಾಲುಗಳನ್ನು ಬೆಟ್ಟದೆಡೆಗೆ ಎಳೆದೊಯ್ಯುತ್ತಿತ್ತು. ಇಶ್ಟೆಲ್ಲಾ ಸಾಹಸ ಮಾಡಿ ನಾವು ನಂದಿದುರ‍್ಗದ ಹೆಬ್ಬಾಗಿಲಿಗೆ ಬಂದು ನಿಂತಾಗ ಸಮಯ ಮದ್ಯಾಹ್ನ 2.30 ಆಗಿತ್ತು. ನಾನು ಮತ್ತು ಸಂದೀಪ್ ಹೆಬ್ಬಾಗಿಲು ತಲುಪಿದ ಸ್ವಲ್ಪ ಹೊತ್ತಿಗೆ ಪ್ರವೀಣ್ ಮತ್ತು ಅಬಿಶೇಕ್ ಬಂದು ಸೇರಿಕೊಂಡರು. ಈ 9 ಕಿ.ಮೀ ಇರುವ ರಸ್ತೆಯಲ್ಲಿ ನಾವುಗಳು ಸೈಕಲ್ ಜೊತೆಗೆ ನಡೆದುಕೊಂಡು ಬರಲು ತೆಗೆದುಕೊಂಡ ಸಮಯ ಬರೋಬ್ಬರಿ 3 ಗಂಟೆಗಳು.

ಬೆಟ್ಟದ ಬುಡದಲ್ಲಿದ್ದ ವಾತವರಣ ಮತ್ತು ಬೆಟ್ಟದ ಮೇಲಿನ ವಾತಾವರಣಕ್ಕೂ ತುಂಬಾ ವ್ಯತ್ಯಾಸವಿತ್ತು. ಬೆಟ್ಟದ ಮೇಲೆ ಸಣ್ಣದಾಗಿ ಸುರಿಯುತ್ತಿದ್ದ ಮಳೆ, ಮಂಜು, ಸುತ್ತಲೂ ಹಸಿರು, ತಂಪಾದ ಗಾಳಿ ಇವೆಲ್ಲವೂ ಸೇರಿ ಅಲ್ಲಿ ಒಂದು ತೆರನಾದ ಸ್ವರ‍್ಗವೇ ಸ್ರುಶ್ಟಿಯಾಗಿತ್ತು ಎಂದರೆ ತಪ್ಪಾಗಲಾರದು. ನಾವು ಸೈಕಲ್ ಗಳನ್ನು ಅಲ್ಲೆ ಇರುವ ಒಂದು ಸರ‍್ಕಾರಿ ಕಟ್ಟಡದ ಹತ್ತಿರ ನಿಲ್ಲಿಸಿ ಟಿಪ್ಪು ಡ್ರಾಪ್ ಕಡೆಗೆ ಹೊರಟಾಗ ಒಂದು ಹದ ಸರಿಯಾದ ಮಳೆಯಾಯಿತು. ಬೆವರಿ ಬೆಂಡಾಗಿದ್ದ ನಮಗೆ ಈ ಮಳೆ ಮುದ ನೀಡಿದ್ದಲ್ಲದೇ ಸ್ನಾನ ಮಾಡಿಸಿದಂತಾಗಿತ್ತು. ಕೆಳಗೆ ಹೋಗುವಾಗ ನಮಗೆ ಸಿಗುವುದು ಇಳಿಜಾರಿನ ರಸ್ತೆಯಾಗಿದ್ದರಿಂದ ಅಶ್ಟೇನು ಕಶ್ಟ ಪಡಬೇಕಾದ ಅನಿವಾರ‍್ಯತೆ ಇರಲಿಲ್ಲ ಹಾಗಾಗಿ ಇಲ್ಲಿಂದ ಹೊರಡುವುದು ಕೊಂಚ ನಿದಾನವಾದರೂ ಪರವಾಗಿಲ್ಲವೆಂದು ಅಲ್ಲೆಲ್ಲಾ ಸುತ್ತಾಡಿ ಕೆಲವು ಪೋಟೊ ತೆಗೆದುಕೊಂಡು ಹೊರಡೋಣ ಅಂದುಕೊಳ್ಳುವಶ್ಟರಲ್ಲಾಗಲೇ ಸಮಯ ಸಂಜೆ 4.30 ಆಗಿತ್ತು.

ಸ್ವರ‍್ಗದಿಂದ ಬೂಮಿಯ ಕಡೆಗೆ!

ನಾವು ನಾಲ್ಕು ಜನರು ದುರ‍್ಗದ ಹೆಬ್ಬಾಗಿಲ ಬಳಿ ಬಂದು ನಿಂತು ಕೊನೆಯದಾಗಿ ಒಂದು ಪೋಟೋ ತೆಗೆದುಕೊಂಡು ಹೊರಡಲು ಸಿದ್ದರಾದೆವು. “ಎಲ್ಲರು ಹುಶಾರಾಗಿ ಬನ್ನಿ ತುಂಬಾ ತಿರುವು ಇದೆ” ಎಂದು ಎಲ್ಲರಿಗೂ ಹೇಳಿ ನಾನು ಸೈಕಲ್ ಏರಿ ಕುಳಿತು ಒಮ್ಮೆ ಪೆಡಲ್ ಮಾಡಿದೆ ಅಶ್ಟೆ! ಮತ್ತೆ ನಾನು ಆ 9 ಕಿ.ಮೀ ಇರುವ ಇಳಿಜಾರಿನ ರಸ್ತೆಯಲ್ಲಿ ಎಲ್ಲಿಯೂ ಮತ್ತೆ ಪೆಡಲ್ ಮಾಡಲಿಲ್ಲ. ಸಂಜೆ 4.30 ಕ್ಕೆ ಮೇಲಿಂದ ಹೊರಟ‌ ನಾನು ಕೇವಲ ಹತ್ತೇ ಹತ್ತು ನಿಮಿಶಗಳಲ್ಲಿ ಬೆಟ್ಟದ ಬುಡದಲ್ಲಿದ್ದೆ. ಎಂತಹ ಅನುಬವ ಅದು! ನಿಜಕ್ಕೂ ಅದನ್ನು ಅನುಬವಿಸಿಯೇ ಕಾಣಬೇಕು. ಏನೋ ಸಾದಿಸಿಬಿಟ್ಟೆವೆನೋ ಎಂಬಂತಹ ಸಂತೋಶ.

ನಾನು ಬೆಟ್ಟದ ಬುಡ ತಲುಪಿ ಒಂದೆರಡು ನಿಮಿಶಕ್ಕೆ ಸಂದೀಪ್ ಕೂಡ ಬಂದು ಸೇರಿಕೊಂಡ. ಅದಾದ ಸ್ವಲ್ಪ ಹೊತ್ತಿಗೆ ಪ್ರವೀಣ್ ಮತ್ತು ಅಬಿಶೇಕ್ ಬಂದರು. ಬೆಟ್ಟದ ಮೇಲಕ್ಕೆ ಹೋಗುವಾಗ ನಿದಾನ ಮಾಡಿದ ಇವರಿಬ್ಬರೂ ಇಳಿಜಾರಿನಲ್ಲಿ ಸುಮ್ಮನೇ ಸೈಕಲ್ ಮೇಲೆ ಕುಳಿತು ಬರುವುದಕ್ಕೆ ಇವರಿಗೆ ತೊಂದರೆಯೇನು ಎಂದು ಯೋಚಿಸುವಾಗ ತಿಳಿದದ್ದು ಇವರಿಬ್ಬರ ಸೈಕಲ್ ಗಳಲ್ಲಿ ಪವರ್ ಬ್ರೇಕ್ ಇರಲಿಲ್ಲ ಎಂಬುದು‌. ಪವರ್ ಬ್ರೇಕ್ ಇಲ್ಲದಿದ್ದರೆ ತಿರುವುಗಳಲ್ಲಿ ವೇಗ ನಿದಾನಮಾಡುವಾಗ ಅತವಾ ಸೈಕಲ್ ನಿಲ್ಲಿಸುವಾಗ ಕಶ್ಟವಾಗುತ್ತದೆ.

ಹೊಟ್ಟೆ ಚುರ್ ಎಂದಾಗ, ಹಾಗೆ ಗಾಂದಿಯನ್ನು ನೋಡಿದಾಗ?

ಬೆಟ್ಟದ ಮೇಲೆ ಸ್ವರ‍್ಗದಂತಿದ್ದ ಪರಿಸರದಲ್ಲಿ ಮುಳುಗಿಹೋಗಿದ್ದ ನಮಗೆ ಹೊಟ್ಟೆ ಹಸಿವಿನ ಅರಿವೆ ಆಗಿರಲಿಲ್ಲ. ಕೆಳಗೆ ಬಂದು ಹೋಟಲ್ ಗಳನ್ನು ನೋಡಿದ ಮೇಲೆ ಹೊಟ್ಟೆ ನಿದಾನವಾಗಿ ಚುರ್ ಎನ್ನತೊಡಗಿತು. ಬೆಳಿಗ್ಗೆ ಬೆಟ್ಟದ ಮೇಲಕ್ಕೆ ಹೋಗುವಾಗ ನೀರು ತುಂಬಿಸಿಕೊಂಡ ಹೋಟೆಲಿನಲ್ಲಿ ಸ್ವಲ್ಪ ಚಿತ್ರಾನ್ನ, ಅನ್ನ ಸಾರು ತಿಂದು ಮುಗಿಸುವಶ್ಟರಲ್ಲಿ ಸಮಯ ಸಂಜೆ 5.30 ಆಗಿತ್ತು. ನಾವು ಬಂದ ದಾರಿಯಲ್ಲೇ ವಾಪಸ್ಸು ಬೆಂಗಳೂರಿಗೆ ಹೋಗಬೇಕೆಂದು ಮದ್ಯಾಹ್ನ ಮಾತನಾಡಿಕೊಂಡಿದ್ದೆವು ಆದರೆ ಈಗಾಗಲೇ ಸಾಕಶ್ಟು ಸಮಯವಾಗಿತ್ತು ಮತ್ತು ನಮ್ಮ ಸೈಕಲ್ ಗಳಲ್ಲಿ ಲೈಟ್ ಇಲ್ಲದಿದ್ದರಿಂದ ಕತ್ತಲಾದ ಮೇಲೆ ಆ ದಾರಿಯಲ್ಲಿ ಹೋಗುವುದು ನಿಜಕ್ಕೂ ಕಶ್ಟವಾಗಿತ್ತು. ಆದ್ದರಿಂದ ನಂದಿಕ್ರಾಸ್ – ಏರ‍್ಪೋರ‍್ಟ್ ರಸ್ತೆ – ಹೆಬ್ಬಾಳ ಮೂಲಕ ಹೋಗೋಣವೆಂದು ತೀರ‍್ಮಾನಿಸಿದೆವು. ಆ ರಸ್ತೆಯಲ್ಲಿ ಹೆಚ್ಚು ವಾಹನಗಳು ಓಡಾಡುವುದರಿಂದ ಸೈಕಲ್ ತುಳಿಯಲು ಕಶ್ಟವಾಗುತ್ತದಾದರೂ ಅಲ್ಲಿ ವಾಹನಗಳಿಂದ ಹೊಮ್ಮುವ ಬೆಳಕಿನಲ್ಲಿ ನಾವು ಸಲೀಸಾಗಿ ಸಾಗಬಹುದೆಂಬ ನಂಬಿಕೆಯಿತ್ತು. ಹೆಚ್ಚು ಬೆಳಕು ಬೇಕೆಂದ ಮೇಲೆ ಹೆಚ್ಚು ವಾಹನಗಳಿದ್ದಶ್ಟು ಒಳ್ಳೆಯದೇ ಆದರೆ ನಾವು ಹುಶಾರಾಗಿ ಹೋಗಬೇಕು ಎಂಬುದು ನಮ್ಮೆಲ್ಲರ ಅಂದಿನ ದ್ರುಡ ನಿರ‍್ದಾರವಾಗಿತ್ತು.

ಊಟ ಮುಗಿಸಿ ಅಲ್ಲಿಂದ ಹೊರಟ ನಾವು ಆಕಾಶ ನಿದಾನವಾಗಿ ರಂಗೇರುತ್ತಿರುವುದನ್ನು ಗಮನಿಸುತ್ತಾ ಕರಹಳ್ಳಿ ಕ್ರಾಸಿನ ಹತ್ತಿರ ಬಲಕ್ಕೆ ತಿರುಗಿ ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿರುವ ನಂದಿ ಕ್ರಾಸ್ ಕಡೆಗೆ ಹೋಗುತ್ತಿದ್ದೆವು ಆಗ ಅಲ್ಲಿನ ತಿರುವಿನಲ್ಲಿ ಗಾಂದಿ ವೇಶ ದರಿಸಿಕೊಂಡು ನಿಂತಿದ್ದ ಒಬ್ಬ ಮುದುಕ ನಮ್ಮ ಕಡೆಗೆ ಕೈ ಬೀಸಿ ಟಾಟಾ ಮಾಡಿದ ನಾವು ಸಹ ಆ ಕರಹಳ್ಳಿ ಕ್ರಾಸಿನ ಗಾಂದಿಗೆ ಟಾಟಾ ಮಾಡಿ ಹೊರಟೆವು.

ಕರಹಳ್ಳಿ ಕ್ರಾಸಿನಿಂದ ನಂದಿ ಕ್ರಾಸಿನ ವರೆಗೆ 10 ಕಿ.ಮೀ ಇರುವ ಒಂದು ಉದ್ದನೆಯ ದಾರಿಯಿದೆ. ಟಿಪ್ಪು ಡ್ರಾಪ್ ಕಡೆಯಿಂದ ನಿಂತು ನೋಡಿದರೆ ಈ ದಾರಿ ನೇರವಾಗಿರುವುದು ಸ್ಪಶ್ಟವಾಗಿ ಕಾಣುತ್ತದೆ. ಈ ದಾರಿಯಲ್ಲಿ ಹಲವಾರು ಹಳ್ಳಿಗಳಿದ್ದು ಪ್ರತಿ ಹಳ್ಳಿಯ ರಸ್ತೆ ಅಕ್ಕ ಪಕ್ಕ ದ್ರಾಕ್ಶಿ ಹಣ್ಣು ಮಾರುವ ಸಣ್ಣ ಸಣ್ಣ ಅಂಗಡಿಗಳಿವೆ. ನಾವುಗಳು ಒಂದು ಕೆ.ಜಿ ದ್ರಾಕ್ಶಿ ಹಣ್ಣನ್ನು ಗುಳುಮ್ ಮಾಡಿ ನಂದಿ ಕ್ರಾಸ್ ತಲುಪುವಶ್ಟರಲ್ಲಿ ನಾನು ಎಲ್ಲರಿಗಿಂತ ಹಿಂದೆ ಉಳಿದಿದ್ದೆ. ಹೊಟ್ಟೆ ತುಂಬಾ ಊಟ ಮತ್ತು ಅದರೆ ಮೇಲೆ ದ್ರಾಕ್ಶಿ ಹಣ್ಣು ತಿಂದು ಹೊಟ್ಟೆ ಬಾರವಾಗಿ ಸೈಕಲ್ ತುಳಿಯುವುದು ಸ್ವಲ್ಪ ಕಶ್ಟವಾಗಿತ್ತು. ಸೈಕ್ಲಿಂಗ್ ಹೋದಾಗ ಊಟದಲ್ಲಿ ಹಿಡಿತವಿರಬೇಕು ಎಂಬುದು ನನಗೆ ಚೆನ್ನಾಗಿ ತಿಳಿದದ್ದು ಅವಾಗಲೇ.

ಬೆಂಗಳೂರಿನ ಕಡೆಗೆ ನಮ್ಮ ರಾತ್ರಿ ಸವಾರಿ

namma-rathagalu

ನಂದಿ ಕ್ರಾಸಿನಲ್ಲಿ ನಾವು ಸ್ವಲ್ಪ ವಿಶ್ರಾಂತಿಗೆಂದು ನಿಂತಾಗ ಅಬಿಶೇಕ್ ಒಂದರ ಮೇಲೋಂದರಂತೆ ಎರಡು ಎಳನೀರು ಕುಡಿದು ಮುಗಿಸಿದ. ಹೊಟ್ಟೆಯಲ್ಲಿ ಎಳನೀರು ತುಂಬಲು ಜಾಗವಿಲ್ಲದೆ ಸುಮ್ಮನೆ ರಸ್ತೆಯನ್ನು ಗಮನಿಸುತ್ತಿದ್ದ ನನಗೆ ಈ ರಾಕೇಟ್ ವೇಗದ ವಾಹನಗಳು ಹೆದ್ದಾರಿಯಲ್ಲಿ ಓಡಾಡುತ್ತಿದ್ದುದ್ದನ್ನ ನೋಡಿ ಕತ್ತಲಾದ ಮೇಲೆ ಈ ರಸ್ತೆಯಲ್ಲಿ ಹೇಗೆ ಹೋಗುವುದು ಎಂದು ಚಿಂತೆಯಾಗಿತ್ತು.

ಎಳನೀರು ಸೇವೆ ಮುಗಿಸಿ ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ಒಬ್ಬರ ಹಿಂದೆ ಒಬ್ಬರಂತೆ ಹೊರಟ ನಾವು ದೇವನಹಳ್ಳಿ ಹತ್ತಿರ ಏರ‍್ಪೋರ‍್ಟ್ ಕಡೆಗೆ ಹೋಗುವ ಪೈ ಒವರ್ ತಲುಪುವಶ್ಟರಲ್ಲಿ ಸೂರ‍್ಯ ಮುಳುಗಿ ಮರೆಯಾಗಿದ್ದ. ಅಲ್ಲೆ ಹತ್ತಿರವಿರುವ ಟೋಲ್ ಗೇಟ್ ಬಳಿಗೆ ಬಂದಾಗ ಸಂಪೂರ‍್ಣ ಕತ್ತಲಾಗಿತ್ತು. ಎತ್ತ ನೋಡಿದರು ಮಿಣ ಮಿಣ ಮಿಣುಗುವ ಲೈಟುಗಳು, ವಾಹನಗಳ ಕರ‍್ರೋ ಪರ‍್ರೋ ಸದ್ದು, ಇದರ ಜೊತೆಗೆ ಅಲ್ಲಿ ಲ್ಯಾಂಡಿಂಗ್ ಆಗುತ್ತಿದ್ದ ವಿಮಾನಗಳ ಬಯಂಕರ ಶಬ್ದ ಇದೆಲ್ಲಾ ಸೇರಿ ಸೈಕಲ್ ತುಳಿದು ಸುಸ್ತಾಗಿದ್ದ ನಮಗೆ ಒಟ್ಟಿನಲ್ಲಿ ಅಲ್ಲಿನ ಪರಿಸರ ಸಂಪೂರ‍್ಣ ಹಾಳಾಗಿದೆ ಅನ್ನಿಸಿತು. ನಮ್ಮ ಸೈಕಲ್ ಗಳಲ್ಲಿ ಲೈಟ್ ಇಲ್ಲದಿದ್ದರಿಂದ ಅಲ್ಲಿನ ಬೀದಿ ದೀಪ ಮತ್ತು ಓಡಾಡುತ್ತಿದ್ದ ವಾಹನಗಳ ಬೆಳಕೆ ನಮಗೆ ಆದಾರ. ಈ ರೀತಿ ಕತ್ತಲಲ್ಲಿ ಸೈಕಲ್ ತುಳಿಯುವುದು ನಿಜಕ್ಕೂ ಒಂದು ದೊಡ್ಡ ಸಾಹಸವಾಗಿ ನಮಗೆ ಕಂಡಿತು. ಮೊದಲೇ ಇದು ಹೆದ್ದಾರಿ, ಕತ್ತಲು ಬೇರೆ, ರಾಕೇಟ್ ವೇಗದ ವಾಹನಗಳು ಇದೆಲ್ಲದರ ಜೊತೆಗೆ ಸಾಹಸ ಮಾಡಿ ಸೈಕಲ್ ತುಳಿಯುವುದು ಕಶ್ಟವಲ್ಲವೇ?

ಹೆಬ್ಬಾಳಕ್ಕೂ ಸ್ವಲ್ಪ ಮುಂಚೆಯೇ ಅಬಿಶೇಕ್ ತನ್ನ ಸಂಬಂದಿಕರ ಮನೆಗೆ ಹೋಗಿ ಅಲ್ಲೆ ತಂಗಿದ್ದು ಬೆಳಿಗ್ಗೆ ವೈಟ್ ಪೀಲ್ಡ್ ಕಡೆಗೆ ಹೋಗುತ್ತೇನೆಂದು ಹೇಳಿ ಹೊರಟ. ಇನ್ನೂ ಉಳಿದ ನಾವು ಮೂರು ಜನರು ನಿದಾನವಾಗಿ ಸೈಕಲ್ ಸವಾರಿ ಮಾಡುತ್ತಾ ಹೆಬ್ಬಾಳ ಪೈ ಓವರ್ ತಲುಪಿದಾಗ ಸಮಯ ರಾತ್ರಿ 10.30 ಆಗಿತ್ತು. ಸಂದೀಪ್ ಮತ್ತು ಪ್ರವೀಣ್ ಗೆ ಹುಶಾರಾಗಿ ಹೋಗಿ ಎಂದು ಹೇಳಿ ನಾನು ಚಾಮರಾಜಪೇಟೆಯಲ್ಲಿರುವ ನಮ್ಮ ಮನೆ ಕಡೆಗೆ ಹೊರಟು ಮನೆ ತಲುಪಿದಾಗ ರಾತ್ರಿ 11.30 ಆಗಿತ್ತು. ಅವರಿಬ್ಬರು ಸುಮಾರು 11.45 ರ ಸಮಯಕ್ಕೆ ವೈಟ್ ಪೀಲ್ಡ್ ನಲ್ಲಿರುವ ಅವರ ಮನೆ ತಲುಪಿದರೆಂದು ತಿಳಿಸಿದರು.

ಅಂದು 20-06-2015 ಶನಿವಾರ ಬೆಳಗಿನ ಜಾವ 4.30 ಕ್ಕೆ ಮನೆಯಿಂದ ನಂದಿ ಬೆಟ್ಟಕ್ಕೆ ರೆಡ್ ಬ್ಯೂಟಿಯೊಡನೆ ಹೊರಟ ನಾನು ಮತ್ತೆ ಮನೆಗೆ ವಾಪಸ್ಸು ಬಂದದ್ದು ರಾತ್ರಿ 11.30 ಕ್ಕೆ. ಬರೋಬ್ಬರಿ 19 ಗಂಟೆಗಳು, ಸುಮಾರು 130 ಕಿಲೋ ಮೀಟರ್ ದಾರಿಯಲ್ಲಿ ಸಾವಿರಾರು ನೆನಪುಗಳನ್ನು ಹೊತ್ತುಕೊಂಡು ಬಂದಿದ್ದೇವೆ. ಈಗಲೂ ಇದನ್ನು ನೆನೆಸಿಕೊಂಡರೆ ನಾವು ನಂದಿ ಬೆಟ್ಟಕ್ಕೆ ಹೋಗಿ ಬಂದದ್ದು ನಿಜನಾ ಅಂತ ನನಗೆ ಅನುಮಾನವಾಗುತ್ತೆ!

ನಾನು ಈವರೆಗೂ ಮೇಲೆ ತಿಳಿಸಿದ ನಂದಿ ಬೆಟ್ಟದ ಸೈಕ್ಲಿಂಗ್ ಸವಾರಿಯನ್ನು ನಾವು ಮುಗಿಸಿ ಬಂದು ಸುಮಾರು ಒಂದೂವರೆ ವರ‍್ಶಗಳು ಕಳೆಯುತ್ತಿದ್ದರೂ ಈ ಪಯಣದ ಪ್ರತಿಯೊಂದು ಕ್ಶಣವೂ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅಂದು ನಮ್ಮ ಜೊತೆ ಸೈಕ್ಲಿಂಗ್ ಬರಲು ಸಾದ್ಯವಾಗದ ಕೆಲವು ಗೆಳೆಯರು ಮತ್ತೆ ನಂದಿ ಬೆಟ್ಟಕ್ಕೆ ಸೈಕಲ್ ನಲ್ಲೇ ಹೋಗೋಣವೆಂದು ಒತ್ತಾಯ ಮಾಡುತ್ತಿದ್ದಾರೆ. ಆದರೆ ಮತ್ತೆ ಅಲ್ಲಿಗೆ ಹೋಗಲು ಸಾದ್ಯವಾಗುತ್ತದೆಯೋ ಇಲ್ಲವೋ ನೋಡಬೇಕು.

(ಚಿತ್ರ ಸೆಲೆ: hellotravel.com, ಗಿರೀಶ್ ಬಿ. ಕುಮಾರ್.)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: