ಇದು ಸೆಲ್ಪೀ ಕೊಳ್ಳುವ ಹೊತ್ತು

 ಪ್ರವೀಣ್  ದೇಶಪಾಂಡೆ.

selfie-shot
ಆ ಕ್ಶಣದ
ಮುಕವಾಡ
ಬಯಲಿಗಿಟ್ಟು
ನೈಜವ ಮುಚ್ಚಿಟ್ಟು
ಮನದ ಮುದ ಸತ್ತು
ಹೋಗುವ ಮುನ್ನ
ಅಂತಹಕರಣದ ಪಕ್ಕ
ನಿಂತೊಮ್ಮೆ….

ತೇಲುವ ತುಮುಲಗಳ
ಹತ್ತಿಕ್ಕಿ ಹಲ್ಕಿರಿ,
ಸಾವಯವದ ಬೆನ್ನು ತಟ್ಟಿ
ಬಿಟಿ ಬದನೆ
ತಿನ್ನುವ ಆಚಾರಿ
ಪಲ್ಲನೆ
ನೆಗೆದ ನಗೆ
ನೈಸರ‍್ಗಿಕವಾ..ಅಂತ
ಒಳಗಣ್ಣ ಪೋಕಸ್ಸಿನಲಿ ಒಮ್ಮೆ…

ಬದುಕಿನ ಒಂದು
ಒಲೆ ಉರಿಗೆ
ಕಾಡ್ಗಿಚ್ಚು ಬೇಕೇ?
ಕಡು ಬೇಸಿಗೆಗೆ
ಹಿಮದಲ್ಲಿ
ಎಡಿಟ್ ಮಾಡಿದ
ಪಟ ಏಕೆ?

ಕೊಳ್ಳಿ ಮೇಲೆ
ಉದುರಿದ ಮಂಜು
ತಾನೂ ಕರಗಿ,
ಕಿಚ್ಚನಾರಿಸಿ ಕತ್ತಲಾಗುವ ಮುಂಚೆ
ದಿಟದ ದೀವಟಿಗೆಯ ಜೊತೆಗೊಮ್ಮೆ

ದೇವರಿಗೂ
ಪಟದ ಹುಚ್ಚಿಲ್ಲ,
ಆಲಯದ ಪ್ರೇಮಿನೊಳು
ಬಯಲ ಪಟ
ತೂರುವುದಿಲ್ಲ.

ಪಟ ಅವನದಾಗಿ,
ಕೇವಲ ಪ್ರೇಮು
ನಿನ್ನದಾಗುವ ಮುನ್ನ
ಸಕಲವ
ಸಮವಾಗಿ ತೋರುವ
ಸಾಕ್ಶಿ ಲೆನ್ಸಿನಲಿ ಒಮ್ಮೆ
ಎಲ್ಲ ಗೊತ್ತು
ಎಂಬ ಗಮ್ಮತ್ತು
ಬಿಚ್ಚಿಟ್ಟು

ಏನೂ ಅರಿಯದ
ಬೆರಗು
ಅರಿವಿನ ಹಸಿವಿನ
ರಹಸ್ಯ ಕ್ಯಾಮರಾದಲಿ ಒಮ್ಮೆ
ನನ್ನ ನಾ ನೋಡುವ ಗುಂಡಿ ಒತ್ತು
ಇದು ಸೆಲ್ಪೀ ಕೊಳ್ಳುವ ಹೊತ್ತು

(ಚಿತ್ರಸೆಲೆ: quotesgram.com )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: