ಮಲೆನಾಡಿನ ಹೆಸರುವಾಸಿ ಅಡುಗೆ ‘ಅಕ್ಕಿ ಕಡುಬು’
– ಸಿಂದು ನಾಗೇಶ್.
ಮಲೆನಾಡಿನ ಮನೆಮಾತಾಗಿರುವ ಬೆಳಗಿನ ತಿಂಡಿ ಅಂದರೆ ಅಕ್ಕಿ ಕಡುಬು. ಚಟ್ನಿ, ಕೆಸುವಿನೆಲೆ ಸಾರು, ಏಡಿ ಸಾರು, ಇಲ್ಲವೇ ಯಾವುದೇ ಬಾಡೂಟದ ಜೊತೆಗೆ ಇದನ್ನು ತಿನ್ನಲು ಚೆನ್ನಾಗಿರುತ್ತದೆ. ಕೇವಲ ಅಕ್ಕಿ ರವೆಯನ್ನು ಬಳಸಿ ಕಡುಬನ್ನು ಮಾಡುವುದರಿಂದ ಇದರ ಅಡುಗೆಗೆ ಹೆಚ್ಚಿನ ಸಾಮಾಗ್ರಿಗಳು ಬೇಡ.
ಬೇಕಾಗುವ ಸಾಮಗ್ರಿಗಳು:
ಅಕ್ಕಿ ರವೆ 1 ಲೋಟ
ಉಪ್ಪು
ಮಾಡುವ ಬಗೆ
ಮೊದಲು ಪಾತ್ರೆಗೆ 2 ಲೋಟ ನೀರು ಸ್ವಲ್ಪ ಉಪ್ಪು ಹಾಕಿ ಕುದಿಯುತ್ತಿರುವಾಗ 1 ಲೋಟ ಅಕ್ಕಿರವೆ (ತರಿತರಿಯಾಗಿ ಅಕ್ಕಿಯನ್ನು ರವೆ ಮಾಡಿಕೊಂಡಿರಬೇಕು) ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಹಿಟ್ಟು ಚೆನ್ನಾಗಿ ಬೆಂದು ನೀರು ಆರಿರುತ್ತದೆ.
ನಂತರ ಪಾತ್ರೆಯನ್ನು ಕೆಳಗಳಿಸಿಕೊಂಡು ಬಿಸಿ ಆರಿದ ಮೇಲೆ ಸ್ವಲ್ಪ ನೀರು ಹಾಕಿಕೊಂಡು, ಚೆನ್ನಾಗಿ ಮ್ರುದು ಆಗುವವರೆಗೂ ಗಂಟು ಇಲ್ಲದಂತೆ ಮಿಲಿದುಕೊಳ್ಳಿ. ನಂತರ ಹಿಟ್ಟನ್ನು ಕೈಗೆ ನೀರು ತಾಗಿಸಿಕೊಂಡು ನಿಮಗೆ ಬೇಕಾದ ಗಾತ್ರಕ್ಕೆ ಉಂಡೆ ಮಾಡಿಕೊಳ್ಳಿ.
ಇನ್ನೊಂದು ಕಡೆ ಕಡಬಿನ ಪಾತ್ರೆಯ ತಳಕ್ಕೆ ನೀರು ಹಾಕಿ ಒಲೆಯ ಮೇಲಿಟ್ಟು ಕಾಯಿಸಿ. ಮಲೆನಾಡಿನ ಕಡೆ ಕಡುಬು ಮಾಡಲೆಂದೇ ಒಂದು ಬಗೆಯ ಕಡುಬಿನ ಪಾತ್ರೆಯಿರುತ್ತದೆ. ಅದಿಲ್ಲದೇ ಹೋದರೆ ಇಡ್ಲಿ ಮಾಡುವ ಪಾತ್ರೆಯಲ್ಲೂ ಕಡುಬನ್ನು ಮಾಡಬಹುದು.
ಕಡುಬಿನ ಪಾತ್ರೆಯ ನೀರು ಕಾದ ಮೇಲೆ ಅಟ್ಟಣಿಗೆ ಇಟ್ಟು ಉಂಡೆಗಳನ್ನು ಹಾಕಿ, ಮುಚ್ಚಳವನ್ನು ಮುಚ್ಚಿ. ನೀರು ಕಾದ ಹಬೆಯಲ್ಲಿ ಅರ‍್ದ ಗಂಟೆ ಬೇಯಿಸಿದರೆ ಕಡಬು ಸವಿಯಲು ಸಿದ್ದ. ಕಡಬು ಬೆಂದಿದೆ ಎಂದು ತಿಳಿಯಲು ಉಂಡೆಯನ್ನು ಕೈಯಲ್ಲಿ ಒಡೆದರೆ ಅಂಟದೆ ಇರುತ್ತದೆ.
(ಚಿತ್ರ ಸೆಲೆ: ರತೀಶ ರತ್ನಾಕರ)
ಇತ್ತೀಚಿನ ಅನಿಸಿಕೆಗಳು