ಕತೆ – ಪಶ್ಚಾತ್ತಾಪ

– ಗಂಗಾ ನಾಗರಾಜು.

repentance

ಬವ್ಯವಾದ ಬಂಗಲೆಯಲ್ಲಿ ಎಲ್ಲವೂ ರಾರಾಜಿಸುತ್ತಿತು. ಪೀಟೋಪಕರಣಗಳು, ಅಲಂಕ್ರುತ ವಿದ್ಯುತ್ ದೀಪಗಳು, ಆಳುಕಾಳುಗಳು, ಕಾರು, ಒಡವೆಗಳು, ಹಣ ಅಂತಸ್ತು ಎಲ್ಲಾ ಇದ್ದರೂ ಶಾರದಮ್ಮನವರ ಮುಕದಲ್ಲಿ ಕಳೆ ಮಾತ್ರ ಇರಲಿಲ್ಲ. ಮೈ ತುಂಬಾ ಒಡವೆ, ಜರತಾರಿ ಸೀರೆ, ತಲೆ ತುಂಬಾ ಹೂ ಮುಡಿದಿದ್ದರೂ, ಕಣ್ಗಳು ಕಾಂತಿ ಹೀನವಾಗಿದ್ದವು. ಅವರ ಮನಸ್ಸಿನಲ್ಲಿ ಬೆಳಗ್ಗೆ ನಡೆದ ಗಟನೆಯೇ ಕಣ್ಣ ಮುಂದೆ ಗೋಚರಿಸುತಿತ್ತು.

ಅವರ ಬೀದಿಯ ಕೊನೆಯ ಸಣ್ಣ ಮನೆಯಲ್ಲಿ ವಾಸವಿದ್ದ ನಿಂಗಮ್ಮ ಬೆಳಗ್ಗೆ ಮನೆಯ ಬಾಗಿಲಿಗೆ ಬಂದು ‘ಯಜಮಾನ್ರೆ…. ಯಜಮಾನ್ರೆ…. ಯಜಮಾನ್ರೆ….’ ಎಂದು ಕರೆದಾಗ ಕೆಲಸದಾಳು ಕರಿಯ ಹೋಗಿ ಗೇಟನ್ನು ತೆರೆದು ಏನು ಎಂದು ಕೇಳಿದ. ನಿಂಗಮ್ಮ ಅಳುತ್ತಾ ಸೆರಗಿನಿಂದ ಕಣ್ಣು ಮತ್ತು ಮೂಗನ್ನು ಒರೆಸಿಕೊಳ್ಳುತ್ತಾ  ‘ಯಜಮಾನ್ರುನಾ ವಸಿ ನೋಡಬೇಕು’ ಅಂತ ಬೇಡಿಕೊಂಡಳು. ಕರಿಯ, ‘ಯಜಮಾನ್ರು ಸ್ನಾನ ಮಾಡ್ತೌರೆ ತಾಳು ಅಮ್ಮಾವ್ರುನಾ ಕರಿತೀನಿ’ ಎಂದು ತನ್ನ ಕೈಯಲಿದ್ದ ಟವಲನೊಮ್ಮೆ ಕೊಡವಿ ಒಳಹೋದ. ಸ್ವಲ್ಪ ಸಮಯದ ನಂತರ ಶಾರದಮ್ಮನವರು ಹೊರಬಂದು ‘ಯಾರು? ಏನಾಗಬೇಕು?’ ಎಂದು ಕೇಳಿದರು.

ನಿಂಗಮ್ಮನ ಅಳುವಿನ ಕಟ್ಟೆ ಒಡೆದು, ಜೋರಾಗಿ ಅಳುತ್ತಾ… ‘ಅವ್ವಾರೆ ಅವ್ವಾರೆ ಲಕ್ಸ್ಮಿ ಇದ್ದಂಗೆ ಇದ್ದೀರವ್ವ ನೀವೆ ನನಗೆ ಸಾಯ ಮಾಡಬೇಕು‘ ಎಂದು ಶಾರದಮ್ಮನವರ ಎರಡು ಕಾಲುಗಳನ್ನು ಗಟ್ಟಿಯಾಗಿ ತಬ್ಬಿಕೊಂಡಳು. ಗಾಬರಿಯಾದ ಶಾರದಮ್ಮ ‘ಅಯ್ಯೊ ಏಳು ಇದು ಏನು? ನೀನು ಮಾಡತ್ತಾ ಇರೋದು ಏಳು ಏಳು ನನ್ನ ಕಾಲು ಬಿಡು’ ಎನ್ನುತ್ತಾ ಅಕೆಯ ಎರಡು ತೋಳುಗಳನ್ನು ಹಿಡಿದು ಮೇಲಕ್ಕೆ ಎತ್ತುತ್ತಾ ‘ಏನಾಯಿತು? ನೀನು ಯಾರು? ಯಾಕೆ ಅಳುತಿದ್ದಿಯಾ’ ಎಂದು ಸಮಾದಾನದಿಂದ ಕೇಳಿದರು.

‘ನನ್ನ ಎಸರು ನಿಂಗಿ ಕಣ್ರವ್ವ. ನನಗೆ ಆರು ಜನ ಮಕ್ಕಳವ್ರೆ. ಗಂಡ ಕುಡಕ ಕಣವ್ವ. ನನ್ನ, ನನ್ನ ಮಕ್ಳ ಕಡೆ ಅವುನ್ಗೆ ಕೇರೆ ಇಲ್ಲಾ ಕಣವ್ವ. ಕೂಲಿನೊ ನಾಲಿನೊ ಮಾಡಿ ಎಲ್ಡು ಹೊತ್ತು ಗಂಜಿ ಉಯ್ಯ್ತಿದ್ದಿನಿ ಕಣವ್ವ. ಆದರೆ, ಆದರೆ ಈಗ ಅದೆಂತದೋ ಕಾಯ್ಲೆ ಬಂದು ನನ್ ಚಿಕ್ ಮಗೀನಾ ಕಾಡ್ತಾ ಅದೆ ಕಣವ್ವ. ಗೊರ‍್ಮೆಂಟ್ ಆಸ್ಪತ್ರೆಗೆ ಸೇರ‍್ಸಿದ್ದೆ ಕಣವ್ವ. ಅವ್ರು ಇಲ್ಲಾಗಕ್ಕಿಲ್ಲಾ ಯಾವುದಾನ ದೊಡ್ಡಾಸ್ಪತ್ರೆಗೆ ಓಗಿ ಇಲ್ಲಾಂದ್ರೆ ನಿನ್ ಮಗಾ ಸತ್ತೊಯ್ತದೆ ಅಂದ್ರು ಕಾಣವ್ವ. ದೊಡ್ಡಾಸ್ಪತ್ರೇಲಿ ಅಪರೇಸನ್ ಮಾಡಬೇಕು ಇಪ್ಪತ್ತು ಸಾವ್ರ ಅಯ್ತದೆ ಅಂದ್ರು. ನನ್ ತಾವ ಅಶ್ಟು ಕಾಸಿಲ್ಲ ಕಾಣವ್ವ. ಅವ್ರನ್ನ ಇವ್ರುನ್ನ ಕಾಡಿ ಬೇಡಿ ಅರ‍್ದದಶ್ಟು ವೊಂಚಿದೀನಿ. ಇನ್ನರ‍್ದ ಕಾಸು ಬೇಕ್ರವ್ವ. ನೀವು ಸಾಯಮಾಡಿದ್ರೆ ಸಾಯೊತನಕ ನಿಮ್ಮ ರುಣ ಮರಿಯಲ್ಲಾ ಕಾಣ್ರವ್ವ. ಜೀತ ಮಾಡಿ ನಿಮ್ ಸಾಲವ ತೀರುಸ್ತೀನಿ’ ಎಂದು ಒಂದೇ ಸಮನೇ ಅಳುತ್ತಾ ಹೇಳಿದಳು.

ಶಾರದಮ್ಮನವರ ಮನಸ್ಸಿಗೆ ನಿಂಗಮ್ಮನ ಕತೆ ಕೇಳಿ ಅಯ್ಯೊ ಅನಿಸಿದರೂ ಸಹಾಯ ಮಾಡುವ ಸ್ತಿತಿಯಲಿರಲಿಲ್ಲ. ಏಕೆಂದರೆ ಜಗಪತಿರಾಯರು ಯಾರಿಗೂ ಎಂದೂ ಸಹಾಯ ಮಾಡುತ್ತಿರಲಿಲ್ಲ. ಇವತ್ತಿನವರೆಗೂ ತನ್ನ ಪತಿ ಒಂದು ರೂಪಾಯಿ ಕೊಟ್ಟಿದನ್ನು ಸಹ ಅವರು ನೋಡಿರಲಿಲ್ಲ. ಏನು ಮಾಡುವುದು ಎಂದು ಯೋಚಿಸುತ್ತಿರುವಾಗ ಜಗಪತಿರಾಯರು ಸ್ನಾನದ ಮನೆಯಿಂದ ಹೊರಬಂದರು. ಅವರ ಕಣ್ಣುಗಳು ಕೆಂಪಾಗಿ ಕೋಪ ಬಂದಿರುವಂತ್ತಿತ್ತು
‘ನಾನು ಎಲ್ಲವನ್ನೂ ಕೇಳಿಸಿಕೊಂಡೆ. ಇದೇನು ದರ‍್ಮ ಚತ್ರಾನಾ ನಾವು ಹಣ ಕೊಡೋಕೆ? ಹೋಗು ಇಲ್ಲಿಂದ’ ಎಂದು ಗದರಿದರು. ಆದರೆ ನಿಂಗಮ್ಮ

‘ಅಂಗನ್ನ್ ಬೇಡಿ ನನ್ನೊಡೆಯ, ಒಂದೇ ಒಂದು ಸತಿ ನಿಮ್ ಕೈಲಾಗೋಶ್ಟು ಸಾಯ ಮಾಡಿ ನನ್ ಮಗು ಉಳ್ಸಿ ಬುದ್ದಿ’ ಎಂದು ಪರಿಪರಿಯಾಗಿ ಬೇಡಿಕೊಂಡರೂ ರಾಯರ ಮನಸ್ಸು ಕರಗಲಿಲ್ಲ.

‘ನಾನೇನು ದೇವರಾ ನಿನ್ನ ಮಗೂನ ಉಳಿಸೋಕೆ ಹೋಗು’ ಎಂದು ಮತ್ತೊಮ್ಮೆ ಗದರಿದರು.

ಆದರೆ ನಿಂಗಮ್ಮ ಪಟ್ಟು ಬಿಡಲಿಲ್ಲಾ ‘ಅಂಗೆಲ್ಲಾ ಅನ್ನಬೇಡಿ ನೀವು ಸಾಯ ಮಾಡಲೇಬೇಕು ಇಲ್ಲಾ ಅಂದ್ರೆ ನನ್ನ ಮಗ ಸತ್ತೊಯ್ತದೆ’ ಅಂತ ಅವರ ಕಾಲು ಹಿಡಿದು ಗಟ್ಟಿಯಾಗಿ ಅಳತೊಡಗಿದಳು.

‘ಸತ್ತರೆ ಸಾಯಲಿ ಬಿಡು ಒಂದು ಮಗು ಸತ್ತರೆ ಏನು ಇನ್ನು ಎಶ್ಟೊಂದು ಮಕ್ಕಳು ಇದಾವಲ್ಲಾ ಹೋಗು’ ಎಂದು ಕಾಲನ್ನು ಹಿಂತೆಗೆದುಕೊಂಡು ಸರಸರನೆ ರೂಂನೊಳಗೆ ಹೋದರು ರಾಯರು. ನಿಂಗಮ್ಮ ವಿದಿ ಇಲ್ಲದೆ ತನ್ನ ಸೆರಗಿನಿಂದ ಮುಕ ಮುಚ್ಚಿಕೊಂಡು ದುಕ್ಕಿಸುತ್ತಾ ನಿದಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ, ತನಗರಿವಿಲ್ಲದೆ ನಡೆದು ಕೊಂಡು ಹೋಗುತ್ತಾ ಇರುವುದನ್ನು ಕಂಡು ಶಾರದಮ್ಮನವರ ಮನಸ್ಸಿಗೆ ಕಸಿವಿಸಿಯಾಯಿತು. ಬೆಳಗ್ಗೆ ನಡೆದ ಈ ಗಟನೆಯಿಂದ ಸಂಜೆಯಾದರು ಶಾರದಮ್ಮನವರು ಹೊರ ಬಂದಿರಲಿಲ್ಲ.

ತುಂಬು ಕುಟುಂಬದಲ್ಲಿ ಎಶ್ಟೋ ವರ‍್ಶದ ನಂತರ ಹುಟ್ಟಿದ ಶಾರದಳನ್ನ ಕಂಡರೆ ಅಪ್ಪ, ಅಮ್ಮ, ಅಜ್ಜಿ, ತಾತ, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲರಿಗೂ ಬಲು ಪ್ರೀತಿ. ಅಪ್ಪ ಯಾವಾಗಲು ಹೇಳುತ್ತಿದ್ದರು ‘ನಿಮ್ಮ ಅಜ್ಜಿ ತಾತ ಮಾಡಿದ ದಾನ ದರ‍್ಮದಿಂದ ನಿನು ಹುಟ್ಟಿದ್ದು, ಮಕ್ಕಳೇ ಇಲ್ಲದ ನಮಗೆ ಈ ವಯಸ್ಸಿನಲ್ಲಿ ನೀನು ಹುಟ್ಟಿರುವೆ ಎಂದರೆ ಅದು ಅವರ ಪುಣ್ಯದ ಪಲದಿಂದಲೆ’ ಎಂದು. ಸದಾ ಶಾರದೆಯ ಕೈಯಲ್ಲಿ ಬಡವರಿಗೆ, ರೋಗಿಗಳಿಗೆ, ಕೆಲಸದಾಳುಗಳಿಗೆ, ದಿಕ್ಕಿಲ್ಲದವರಿಗೆ ದಾನ ಕೊಡಿಸುತ್ತಲೇ ಇರುತ್ತಿದ್ದರು. ಕೈ ಎತ್ತಿ ಕೊಡುವುದೆಂದರೆ ಶಾರದೆಗೆ ಬಲು ಇಶ್ಟ.

ಒಮ್ಮೆ ಶಾಲೆಯಲ್ಲಿ ಯಾರೋ ಊಟ ತಂದಿಲ್ಲವೆಂಬ ಕಾರಣಕ್ಕೆ ತನ್ನ ಊಟದ ಡಬ್ಬಿಯನ್ನೆ ಕೊಟ್ಟು ತಾನು ಸಂಜೆವರೆಗೂ ಏನೂ ತಿನ್ನದೆ ಸುಸ್ತಾಗಿದ್ದಳು. ಅದನ್ನು ಕಂಡು ಅವರ ಅಪ್ಪ ‘ಮಗಳೇ ನಮಗಿಲ್ಲದಂತೆ ಎಂದೂ ದಾನ ಮಾಡಬಾರದು. ನಮಗೂ ಸ್ವಲ್ಪ ಇಟ್ಟುಕೊಂಡು ಕೊಡಬೇಕು’ ಎಂದು ಪ್ರೀತಿಯಿಂದ ತಲೆ ಸವರಿದ್ದು ಶಾರದಮ್ಮನವರಿಗೆ ಇಂದಿಗೂ ನೆನಪಿದೆ. ಆದರೆ ಈ ರೀತಿ ಬೆಳೆದ ಶಾರದೆಗೆ ಸರಿಯಾದ ಪತಿ ಸಿಕ್ಕಿರಲಿಲ್ಲ.

ಜಗಪತಿರಾಯರಿಗೆ ತನ್ನ ಹೆಂಡತಿಯನ್ನು ಕಂಡರೆ ಬಲು ಪ್ರೀತಿ. ಅವಳಿಗೆ ಬೇಕಿರುವುದನ್ನೆಲ್ಲಾ ಕೊಡಿಸುತ್ತಿದ್ದರು. ಯಾವುದಕ್ಕೂ ಕಡಿಮೆ ಮಾಡಿರಲಿಲ್ಲ. ಶಾರದೆಗೆ ಗಂಡು ಮಗು ಹುಟ್ಟಿದಾಗ ಅತಿ ಸಂಬ್ರಮ ಪಟ್ಟಿದ್ದರು. ಅಂದಿನಿಂದ ತಮ್ಮ ದುಡಿಮೆಯನ್ನೆಲ್ಲಾ ಮಗನಿಗಾಗಿ ಕೂಡಿಡುತ್ತಾ, ಒಳ್ಳೆಯ ವಿದ್ಯಾಬಾಸ ಕೊಡಿಸಿ ಬಲು ಪ್ರೀತಿಯಿಂದ ಬೆಳೆಸಿದ್ದರು. ಮಗ ರಾಹುಲ್ ಹುಟ್ಟಿದ ಮೇಲೆ ಜಗಪತಿರಾಯರು ಬಿಸಿನೆಸ್ ನಲ್ಲಿ ಬಲು ಎತ್ತರಕ್ಕೆ ಬೆಳೆದು ಬಹಳಶ್ಟು ಹೆಸರು, ಕೀರ‍್ತಿ, ಹಣ, ಅಂತಸ್ತು ಸಂಪಾದಿಸಿದ್ದರು. ತನ್ನ ಮಗ ಚೆನ್ನಾಗಿರಬೇಕು, ಯಾರ ಮುಂದೆಯು ಕೈ ಚಾಚಬಾರದೆಂಬುದೇ ರಾಯರ ಉದ್ದೇಶವಾಗಿತ್ತು ಅದ್ದರಿಂದ ಎಂದೂ ಯಾರಿಗೂ ಸಹಾಯವಾಗಲಿ ಹಣಕೊಡುವುದಾಗಲಿ ಮಾಡುತ್ತಿರಲ್ಲಿಲ್ಲ.

ಎರಡು ದಿನದ ನಂತರ ಕರಿಯ ಅಮ್ಮಾವ್ರ ಹತ್ರ ಬಂದು ‘ಅವ್ವಾರೇ ಅವತ್ತು ಒಂದು ಹೆಂಗಸ್ಸು ಬಂದಿದ್ದಳಲ್ಲಾ ಅವಳ ಮಗು ಸತ್ತೋಯ್ತಂತೆ ಕಣ್ರವ್ವಾ’ ಎಂದು ಹೇಳಿದನ್ನು ಕೇಳಿ ಶಾರದಮ್ಮನವರಿಗೆ ಸಿಡಿಲು ಬಡಿದಂತಾಯಿತು. ‘ಅಯ್ಯೋ, ಆ ಮಗುವಿನ ಸಾವಿಗೆ ನಾವೇ ಕಾರಣವಾದೆವಲ್ಲಾ. ಆ ದಿನ ಸ್ವಲ್ಪವಾದರೂ ಸಹಾಯ ಮಾಡಿದ್ದರೆ ಆ ಮಗು ಬದುಕುತಿತ್ತೇನೋ, ದೇವರೇ ನಮ್ಮನ್ನು ಕ್ಶಮಿಸಪ್ಪಾ’ ಎಂದು ಮನಸ್ಸಿನಲ್ಲೆ ಕೊರಗಿದರು.

ಆರು ತಿಂಗಳ ನಂತರ:

ರಾಹುಲ್ ಒಳ್ಳೆಯ ಅಂಕ ಪಡೆದು ಡಿಗ್ರಿ ಮುಗಿಸಿದ್ದ ದಿನ ರಾಯರಿಗೆ ಸಂತೋಶವೋ ಸಂತೋಶ. ಮಗನಿಗೆ ಏನಾದರು ಗಿಪ್ಟ್ ಕೊಡಬೇಕೆಂದು ಮಾರುಕಟ್ಟೆಯಲ್ಲಿ ಅತಿ ಬೇಡಿಕೆ ಇದ್ದಂತ ಒಂದು ಬೈಕನ್ನು ತಂದುಕೊಡುತ್ತಾರೆ. ಆಗ ಶಾರದಮ್ಮನವರು ‘ಅವನಿಗೆ ಏಕೆ ಈಗ ಗಾಡಿ ಮನೆಯಲ್ಲಿ ಕಾರಿಲ್ಲವೆ, ಡ್ರೈವರಿಲ್ಲವೇ ಈ ಟ್ರಾಪಿಕ್‍ನಲ್ಲಿ ಅವನು ಗಾಡಿ ಓಡಿಸುವುದು ಬೇಡ’ ಅಂದರೂ ಸಹ ನಗುತ್ತಾ ಮಗನಿಗೆ ಗಾಡಿಯ ಕೀಯನ್ನು ಕೊಡುತ್ತಾರೆ ರಾಯರು. ರಾಹುಲ್‍ಗೆ ಹೊಸ ಗಾಡಿ ನೋಡಿ ಸಂತೋಶವಾಗಿ ‘ತ್ಯಾಂಕ್ಸ್ ಅಪ್ಪಾ’ ಎಂದು ಕುಣಿಯುತ್ತಾ, ‘ಈಗ ಬರುತ್ತೇನೆ’ ಎಂದು ಹೇಳಿ ಹೋಗುತ್ತಾನೆ. ಬೇಡವೆಂದರೂ ಪತಿ ಕೇಳಲಿಲ್ಲವಲ್ಲಾ ಎಂದು ಒಲ್ಲದ ಮನಸ್ಸಿನಿಂದ ಶಾರದಮ್ಮ ಒಳಗೆ ಹೋಗುತ್ತಾರೆ.

ಸಂಜೆ ಮಗ ಮನೆಗೆ ಬರುವವರೆಗೂ ಅವರಿಗೆ ಸಮಾದಾನವೇ ಇರದೇ, ಅವನು ಬಂದ ನಂತರವೆ ಉಸಿರು ಬಿಡುತ್ತಿರುತ್ತಾರೆ. ‘ಮರುದಿನ ಬೆಳಿಗ್ಗೆ ನಾನು ಮತ್ತು ನನ್ನ ಸ್ನೇಹಿತರೆಲ್ಲಾ ಬೈಕಿನಲ್ಲಿ ಒನ್ ಡೇ ಟ್ರಿಪ್ ಹೋಗುತ್ತೇವೆ’ ಎಂದು ಮಗ ಹೇಳಿದಾಗ ರಾಯರು ‘ಹೋಗಿ ಬಾ’ ಅನ್ನುತ್ತಾರೆ. ಆದರೆ ಶಾರದಮ್ಮನವರು ‘ಬೇಡವೇ ಬೇಡ. ಬೇಕಿದ್ದರೆ ಕಾರು ತೆಗೆದುಕೊಂಡು ಹೋಗಲಿ’ ಅಂದಾಗ ರಾಯರು ‘ಹೋಗಲಿ ಬಿಡು ಮಕ್ಕಳು ಈ ವಯಸ್ಸಿನಲ್ಲಿ ಎಂಜಾಯ್ ಮಾಡದೆ ಇನ್ಯಾವಾಗ ಮಾಡುತ್ತಾರೆ?’ ಎಂದು ‘ನೀನು ಹೋಗಿ ಬಾ ಮಗನೇ’ ಎಂದು ರಾಯರು ಮಗನನ್ನು ಕಳಿಸಿಕೊಡುತ್ತಾರೆ.

ತಂದೆಯ ಒಪ್ಪಿಗೆ ಪಡೆದರೂ, ತಾಯಿಯು ಅರೆ ಮನಸ್ಸಿನಿಂದ ಕಳಿಸಿದರ ಪರಿಣಾಮವೋ ಅತವಾ ವಿದಿಯ ಆಟವೋ, ರಾಹುಲ್ ಬೈಕ್‍ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಲಾರಿಯು ಗುದ್ದಿದ ರಬಸಕ್ಕೆ ಸ್ತಳದಲ್ಲೇ ಸಾವನ್ನಪ್ಪುತ್ತಾನೆ. ರಾಯರು ಮಗನ ಸಾವಿನ ಸುದ್ದಿ ಕೇಳಿ ದಂಗಾಗಿ ಬಿಡುತ್ತಾರೆ. ಶಾರದಮ್ಮನವರು ಆಗಾತ ತಡೆಯಲಾರದೆ ಮೂರ‍್ಚೆ ಹೋಗುತ್ತಾರೆ.

‘ಇದ್ದ ಒಬ್ಬ ಮಗ ಸತ್ತನಲ್ಲಾ’ ಎಂಬ ನೋವು ರಾಯರಿಗೆ ಕಾಡತೊಡಗುತ್ತದೆ. ಮಗ ಸತ್ತು ಕಾರ‍್ಯಗಳೆಲ್ಲಾ ಮುಗಿದ್ದಿದ್ದರೂ ನೆನಪು ಮಾತ್ರ ಅಳಿಸಿರಲ್ಲಿಲ್ಲ. ಮಗನ ಪೋಟೊವನ್ನೆ ನೊಡುತ್ತ ಕುಳಿತ ರಾಯರಿಗೆ, ಆದಿನ ಆ ಹೆಂಗಸಿಗೆ ಅಂದ ಮಾತು ನೆನಪಾಗುತ್ತದೆ. ‘ಸತ್ತರೆ ಸಾಯಲಿ ಇನ್ನು ಎಶ್ಟೊಂದು ಮಕ್ಕಳಿದಾವಲ್ಲಾ’ ಎಂಬ ತಮ್ಮ ಮಾತೇ ಮೇಲಿಂದ ಮೇಲಿಂದ ಕಿವಿಗೆ ಅಪ್ಪಳಿಸಿದ್ದಂತಾಗುತ್ತದೆ.

‘ಅಯ್ಯೋ, ಆ ತಾಯಿ ಕಣ್ಣೀರೆ ಇಂದು ನನ್ನ ಮಗನನ್ನು ಬಲಿ ತೆಗೆದುಕೊಳ್ತೋ ಏನೊ, ನಾನು ಎಂತಾ ಪಾಪಿ ಆ ದಿನ ಆಕೆಗೆ ಸಹಾಯ ಮಾಡಿದ್ದರೆ ಈ ದಿನ ನಮಗೆ ಈ ಗತಿ ಬರುತ್ತಿರಲಿಲ್ಲವೇನೊ. ಆಕೆಗೇನೊ ಹೇಳಿದೆ ದೊಡ್ಡದಾಗಿ, ಒಂದು ಸತ್ತರೆ ಏನು ಇಶ್ಟೊಂದು ಮಕ್ಕಳಿದ್ದಾರೆ ಎಂದು. ಆದರೆ ನನಗೆ… ನನಗೆ… ಅಯ್ಯೋ ಇನ್ನು ಮಕ್ಕಳೆ ಇಲ್ಲವಲ್ಲಾ ಯಾರಿಗಾಗಿ ನಾನು ಇಶ್ಟು ಸಂಪಾದನೆ ಮಾಡಿದೆನೊ ಅವನೇ ಇಲ್ಲವಲ್ಲಾ ಇದೆಲ್ಲಾ ಇನ್ಯಾರಿಗೆ’ ಎಂದು ಕಣ್ಣೀರಿಡುತ್ತಾ ಕೆಲಸದಾಳು ಕರಿಯನ್ನು ಕರೆದು ‘ಹೋಗು ಆ ದಿನ ಬಂದಿದ್ದಳಲ್ಲಾ ಆ ಹೆಂಗಸನ್ನು ಮತ್ತು ಅವಳ ಮಕ್ಕಳನ್ನು ಕರೆದು ಕೊಂಡು ಬಾ’ ಎಂದು ಹೇಳಿ ಕಳುಹಿಸುತ್ತಾರೆ ರಾಯರು.

ಸ್ವಲ್ಪ ಸಮಯದ ನಂತರ ಹಿಂತಿರುಗಿದ ಕರಿಯ ‘ರಾಯರೆ ಆ ಹೆಂಗಸು ಅಂದೇ ಗುಡುಸ್ಲು ಕಾಲಿ ಮಾಡಿಕೊಂಡು ಮಕ್ಕಳನ್ನು ಕರ‍್ಕೊಂಡು ಎಲ್ಲೊ ಹೋದ್ಲಂತೆ, ಅಲ್ಲಿ ಇರೋ ಯಾರ‍್ಗು ಅವಳು ಇರೊ ಜಾಗ ಗೊತ್ತಿಲ್ವಂತೆ’ ಅಂದಾಗ, ರಾಯರು ನಾಚಿಕೆಯಿಂದ ತಲೆ ತಗ್ಗಿಸಿ ‘ನಮ್ಮಂತ ಪಾಪಿಗಳು ಇರುವ ಏರಿಯಾದಲ್ಲಿ ಇರುವುದೇ ಬೇಡವೆಂದು ಹೋಗಿರಬೇಕು’ ಎಂದು ಪಶ್ಚಾತಾಪ ಪಡುತ್ತಾರೆ. ತನಗೂ ತನ್ನ ಹೆಂಡತಿಗೂ ಜೀವನ ಮಾಡಲು ಎಶ್ಟು ಬೇಕೋ ಅಶ್ಟನ್ನು ಇಟ್ಟು ಕೊಂಡು ಉಳಿದಿದ್ದನ್ನೆಲ್ಲಾ ಅನಾತಾಶ್ರಮಕ್ಕೆ ದಾನ ಮಾಡಿ ಉಚಿತ ಆಸ್ಪತ್ರೆಯನ್ನು ಬಡ ರೋಗಿಗಳಿಗಾಗಿ ಮಗನ ಹೆಸರಿನಲ್ಲಿ ಕಟ್ಟಿಸಿಕೊಡುತ್ತಾರೆ.

‘ಇಶ್ಟೆಲ್ಲಾ ಈಗ ಮಾಡಿದರೆ ಏನು ಪ್ರಯೋಜನ? ಅಂದು ಆಕೆಗೆ ಸಹಾಯ ಮಾಡಿದ್ದಿದ್ದರೆ ಅವಳ ಮಗುವು ಉಳಿಯುತಿತ್ತು. ಆ ಪುಣ್ಯದಿಂದ ನನ್ನ ಮಗನೂ ಉಳಿಯುತಿದ್ದ’ ಎಂದು ಶಾರದಮ್ಮನವರು ವಿಶಾದದ ನಗು ನಗುತ್ತಾ ಆ ಕಳೆಗುಂದಿದ ಮುಕದಲ್ಲಿ, ಜೀವನದ ಉತ್ಸಾಹವೆ ಇಲ್ಲದೆ ಪತಿಯ ಜೊತೆ ಸೇರಿ ತಾವು ತಮ್ಮ ಕೈಲಾದ ಸಹಾಯಗಳನ್ನು ಮಾಡುತ್ತಾ ಬರುತ್ತಾರೆ.

(ಚಿತ್ರ ಸೆಲೆ : instonebrewer.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: