ನೀರು ಉಳಿತಾಯ ಮಾಡಲಿದೆ ಈ ಚಿಮ್ಮುಕ

ಜಯತೀರ‍್ತ ನಾಡಗವ್ಡ.

altered-nozzle

ಕುಡಿಯುವ ನೀರು ನಮ್ಮೆಲ್ಲರ ಜೀವನದಲ್ಲಿ ಬಲು ಮುಕ್ಯವಾದದ್ದು. ಚೊಕ್ಕಟವಾದ ಕುಡಿಯುವ ನೀರು ಒದಗಿಸಲು ಹಲವಾರು ಚಳಕಗಳು ಬರುತ್ತಲೇ ಇವೆ. ನೀರು ಸಿಗದಂತ ಬರಡು ಬೂಮಿಗಳಿಂದಲೂ ನೀರು ಹೊರತೆಗೆದು ಮಂದಿಯ ನೀರಿನ ಬವಣೆ ನೀಗಿಸುವ ಕೆಲಸದಲ್ಲಿ ಸಾಕಶ್ಟು ಜನರು ತೊಡಗಿಸಿಕೊಂಡಿದ್ದಾರೆ. ಒಂದೆಡೆ ನೀರನ್ನು ನೆಲದಾಳದಿಂದ ತೆಗೆಯುವ ಕೆಲಸಗಳು ನಡೆದಿದ್ದರೆ ಇನ್ನೊಂದೆಡೆ ನಮ್ಮಲ್ಲಿರುವ ನೀರನ್ನು ಹೇಗೆ ಬಳಸಿಕೊಂಡು ಹೋಗಬೇಕೆಂಬ ಮಾತುಕತೆಗಳು ನಡೆಯುತ್ತಿವೆ. ವಾತಾವರಣದಲ್ಲಿ ಇಂದಿನ ದಿನಗಳಲ್ಲಾಗುತ್ತಿರುವ ಏರುಪೇರಿನಿಂದ ಮುಂಬರುವ ದಿನಗಳಲ್ಲಿ ನೀರು ಸಿಗುವುದೇ ಕಶ್ಟವಾಗಬಹುದು. ಅದಕ್ಕೆ ನಮ್ಮಲ್ಲಿರುವ ನೀರನ್ನು ಬೇಕಿದ್ದಶ್ಟೇ ಬಳಸಿ, ಆದಶ್ಟು ಉಳಿಸುವ ಅಗತ್ಯವಿದೆ. ನೀರಿನ ಬಳಕೆ ಕಡಿತಗೊಳಿಸಿ ಪಾತ್ರೆ ತೊಳೆಯುವ, ಬಟ್ಟೆ ಒಗೆತ ಮತ್ತು ಮುಂತಾದ ದಿನದ ಕೆಲಸಗಳನ್ನು ಸಲೀಸಾಗಿ ಮಾಡಬಲ್ಲ ಹೊಸ ಚಳಕಗಳನ್ನು, ಎಣಿಗಳನ್ನು(Device) ಕಂಡುಹಿಡಿಯುವ ಸಾಕಶ್ಟು ಯತ್ನಗಳು ನಡೆಯುತ್ತಿವೆ. ಇಂತ ಒಂದು ಪ್ರಯತ್ನಕ್ಕೆ ಕೈ ಹಾಕಿದ್ದ ಕೂಟಗಳಲ್ಲಿ ಆಲ್ಟರ್‍ಡ್ ಕಂಪನಿ ಕೂಡ ಒಂದು. ಕಡಿಮೆ ನೀರು ಬಳಕೆ ಮಾಡಿ ಪಾತ್ರೆ ತೊಳೆಯುವ, ಬಟ್ಟೆ ಒಗೆತದ ಕೆಲಸಗಳನ್ನು ಮಾಡಬಲ್ಲ “ಆಲ್ಟರ್‍ಡ್ ನಾಜಲ್” (Altered Nozzle) ಹೆಸರಿನ ಎಣಿಯೊಂದನ್ನು(Device) ಹೊರತಂದಿದ್ದಾರೆ. ಹೆಸರೇ ಹೇಳುವಂತೆ ಇದೊಂದು ಹೊಸ ಬಗೆಯ ನೀರು ಚಿಮ್ಮುಕ(Nozzle).

“ಆಲ್ಟರ್‍ಡ್ ಕಂಪನಿ” ಯವರು ಕೂಡಿ ಹಾಕಿದ ಕೆಲವು ಮಾಹಿತಿಗಳ ಪ್ರಕಾರ, ಮನೆಗಳಲ್ಲಿ ಬಳಸಲ್ಪಡುವ ನೀರಿನಲ್ಲಿ ಸುಮಾರು 18%ರಶ್ಟು ನಲ್ಲಿಗಳ ಮೂಲಕ ಹರಿದು ಪೋಲಾಗುತ್ತಿದೆ. ಅಂದರೆ ಸುಮಾರು 121 ಲೀಟರ‍್ಗಳಶ್ಟು ನೀರು ಪ್ರತಿ ಮನೆಯ ನಲ್ಲಿ ಮೂಲಕ ಸರಬರಾಜುಗೊಂಡು ಪೋಲಾಗುತ್ತಿದೆ. ಇದರ ಆಳವನ್ನು ನೋಡಿದಾಗ, ಜಪಾನಿನ ನೆಲೆವೀಡು ಟೋಕಿಯೊ ಊರಿನಲ್ಲಿ ಸುಮಾರು 83 ಕೋಟಿ ಲೀಟರ‍್ಗೂ ಹೆಚ್ಚು, ಚೀನಾದ ಶಾಂಗೈ ಊರಿನಲ್ಲಿ 91 ಕೋಟಿ ಲೀಟರ‍್ನಶ್ಟು, ಅಮೇರಿಕಾದ ಲಾಸ್ ಏಂಜಲೀಸ್ ಊರಿನಲ್ಲಿ 15 ಕೋಟಿ ಲೀಟರ‍್ಗೂ ಮೀರಿ ಮತ್ತು ಬ್ರೆಜಿಲ್ನ ನೆಲೆವೀಡು ರಿಯೋ ಡಿ ಜನೈರೊದಲ್ಲಿ 19 ಕೋಟಿ ಲೀಟರ್ ಮೀರಿದ ನೀರು ನಲ್ಲಿಗಳ ಮೂಲಕ ಪೋಲಾಗುತ್ತಿದೆ. ಇದೆಲ್ಲವೂ ಪ್ರತಿದಿನದ ಲೆಕ್ಕ. ಇಶ್ಟೊಂದು ಪ್ರಮಾಣದ ನೀರು ಲಕ್ಶಾಂತರ ಹೊಲಗದ್ದೆಗಳಿಗೆ ಒದಗಿಸಿ ಲಕ್ಶಗಟ್ಟಲೆ ಮಂದಿಗೆ ಬೆಳೆ ನೀಡಬಲ್ಲದು, ಕುಡಿಯುವ ನೀರಿಲ್ಲದೇ ಬಳಲುತ್ತಿರುವ ಕೋಟಿಗಟ್ಟಲೆ ಮಂದಿಗೆ ಆಸರೆಯಾಗಬಲ್ಲದು. ನಾವು ಕೈ ತೊಳೆಯುವಾಗ ನಲ್ಲಿಯಿಂದ ಹರಿದು ಬರುವ ನೀರು ನಮ್ಮ ಕೈಗಳ ಮೇಲೆ ಬಿದ್ದು ಮಿಕ್ಕಿದ್ದೆಲ್ಲ ಪೋಲಾಗುತ್ತದಂತೆ. ಕೈ ತೊಳೆಯುವಾಗ ಇಲ್ಲವೇ ಪಾತ್ರೆ ತೊಳೆಯುವಾಗ ನಲ್ಲಿಯಿಂದ ಹರಿದು ಬರುವ ನೀರಿನ ಶೇಕಡಾ 2 ರಶ್ಟು ಮಾತ್ರ ನಮ್ಮ ಕೈಗೋ ಇಲ್ಲಾ ಪಾತ್ರೆಗೋ ತಗಲುತ್ತದೆ. ಮಿಕ್ಕಿದ್ದೆಲ್ಲಾ ಹರಿದು, ಕೈಗಳ ಮೇಲೆ ಪುಟಿದು ಪೋಲಾಗುತ್ತದೆ.

ಈ ಎಲ್ಲ ಅರಿವಿನ ಮಾಹಿತಿಗಳನ್ನು ಕೂಡಿಟ್ಟು “ಆಲ್ಟರ್‍ಡ್ ನಾಜಲ್” ಚಿಮ್ಮುಕವನ್ನು ತಯಾರಿಸಲಾಗಿದೆ. ಈ ಚಿಮ್ಮುಕವನ್ನು ಬಳಸಿ ನಲ್ಲಿಯಿಂದ ಹರಿದು ಬರುವ ಶೇಕಡಾ 2ರಶ್ಟು ನೀರನ್ನಶ್ಟೇ ಬಳಸಿ ನಮ್ಮ ದಿನದ ಕೆಲಸಗಳನ್ನು ಮುಗಿಸಬಹುದಾಗಿದೆ. ನಮ್ಮ ಮೈ, ಕೈ, ಪಾತ್ರೆ ತೊಳೆಯುವಾಗ ಮೇಲ್ಮೈ ಮೇಲೆ ಬಿದ್ದು ಪೋಲಾಗುತ್ತಿದ್ದ ನೀರನ್ನು ತಡೆದು, ಶೇಕಡಾ 98ರಶ್ಟು ನೀರನ್ನು ಉಳಿತಾಯ ಮಾಡಬಹುದು. ನೀರಿನ ಹನಿಗಳನ್ನು ತುಂತುರಾಗಿಸುವಿಕೆಯೇ(Atomization) ಈ ಚಳಕದ ಹಿಂದಿರುವ ಅರಿಮೆ. ಡೀಸೆಲ್, ಪೆಟ್ರೋಲ್ ಮುಂತಾದ ಬಿಣಿಗೆಗಳಲ್ಲೂ(Engine) ಉರುವಲನ್ನು ತುಂತುರಾಗಿಸಿ(Fuel Atomization) ಆಡುಬೆಣೆಯಲ್ಲಿ(Piston) ಚಿಮ್ಮುವ ಮೂಲಕ ಉರಿಸಲಾಗುತ್ತದೆ. ಅದೇ ರೀತಿ ನಲ್ಲಿಯಿಂದ ಹೊರಬರುವ ನೀರಿನ ಹನಿಗಳನ್ನು ತುಂತುರಾಗಿಸಿ ನೊರೆಯಂತೆ(Mist) ಹೊರ ಚಿಮ್ಮುತ್ತದೆ ಈ ಆಲ್ಟರ್‍ಡ್ ನಾಜಲ್. ಈ ಮೂಲಕ ನಲ್ಲಿಯಿಂದ ಹೊರ ಬರುವ ನೀರಿನ ಸಂಪೂರ‍್ಣ ಬಳಕೆಯಾಗುತ್ತದೆ ಮತ್ತು ಕೆಲಸಗಳು ಎಂದಿನಂತೆ ಮುಗಿಸಬಹುದಾಗಿರುತ್ತದೆ. ನಮ್ಮ ಮನೆಯ ನಲ್ಲಿಗಳಿಗೆ ಈ ಚಿಮ್ಮುಕವನ್ನು ಅಳವಡಿಸಿ ಸುಲಬವಾಗಿ ಬಳಸಬಹುದು ಎಂಬುದಾಗಿ ಕೂಟದವರು ಹೇಳಿಕೊಂಡಿದ್ದಾರೆ. ಕೆಲವೊಮ್ಮೆ ಹೆಚ್ಚು ನೀರಿನೊತ್ತಡ, ಇಲ್ಲವೇ ನೀರಿನ ನೊರೆ ಹೆಚ್ಚು ಬೇಕಿನಿಸಿದಾಗ ಚಿಮ್ಮುಕವನ್ನು ತಿರುಗಿಸಿ ಅದರ ನೀರಿನ ಹರಿವು ಚೂರು ಹೆಚ್ಚಿಸಬಹುದು. ಹೀಗಿದ್ದಾಗಲೂ ಕೂಡ ಶೇಕಡಾ 85 ರಶ್ಟು ನೀರನ್ನು ಉಳಿತಾಯ ಮಾಡುಬಹುದಂತೆ.

ಮೈಕಲ್ ಅಬ್ಬ್ಹಾಗೆನ್(Mikael Abbhagen), ಪ್ರೊಪೆಸರ್ ಕಾಜ್ ಮೈಕೊಸ್(Prof. Kaj Mickos) ಮತ್ತು ಜೊಹಾನ್ ನಿಹ್ಲೆನ್(Johan Nihlén) – ಈ ಮೂವರು ಸೇರಿ ಸ್ವೀಡನ್ ನಾಡಿನ ಸ್ಟಾಕ್ಹೋಮ್ ನಲ್ಲಿ ಆಲ್ಟರ್‍ಡ್ ಕಂಪನಿಯನ್ನು ಹುಟ್ಟು ಹಾಕಿದ್ದಾರೆ. ಅರಕೆ ವಿಬಾಗದ ಹೊಣೆ ಹೊತ್ತಿರುವ ಪ್ರೊಪೆಸರ್ ಮೈಕೊಸ್(Mickos) ಈ ಹೊಸ ಬಗೆಯ ಚಿಮ್ಮುಕಕ್ಕಾಗಿ ಹಕ್ಕೋಲೆಯೊಂದನ್ನು(Patent) ಸಲ್ಲಿಸಿದ್ದಾರೆ. ಮೈಕಲ್ ಅಬ್ಬ್ಹಾಗೆನ್ ಈಡುಗಾರಿಕೆಯ(Design) ವಿಬಾಗವನ್ನು ನೋಡಿಕೊಂಡರೆ, ಮಾರಾಟದಲ್ಲಿ ಹಲವಾರು ವರುಶ ಅನುಬವ ಹೊಂದಿರುವ ಜೊಹಾನ್ ನಿಹ್ಲೆನ್ ಮಾರುಕಟ್ಟೆ ಮತ್ತು ಮಾರಾಟದ ಮುಕ್ಯಸ್ತರಾಗಿದ್ದಾರೆ.

ಈ ಚಿಮ್ಮುಕದ ಪರಿಚೆಗಳು ಇಂತಿವೆ:
ನೀರಿನೊತ್ತಡ: 2-8 ಬಾರ‍್ಗಳು.
ನೀರಿನ ಹರಿವು: 180 ಮಿಲೀ ಲೀಟರ್ ಪ್ರತಿ ನಿಮಿಶಕ್ಕೆ.
ತೂಕ: 135 ಗ್ರಾಮ್ಗಳು.
ನಂಬುತನ/ದಿಟತನ (Warranty): 2 ವರುಶಗಳು.

ಈ ಚಿಮ್ಮುಕ ಕಳೆದ ಡಿಸೆಂಬರ್ 2016 ರಿಂದ ಮಾರಾಟಕ್ಕೆ ಅಣಿಗೊಂಡಿದೆ. ಮಾರಾಳಿಗರು(Sellers) ಮತ್ತು ಹಂಚಿಕೆದಾರರ ಹುಡುಕಾಟದಲ್ಲಿ ಆಲ್ಟರ್‍ಡ್ ಕಂಪನಿ ತೊಡಗಿಕೊಂಡಿದೆ. ಇದರ ಬೆಲೆಯ ವಿವರಗಳಿಗೆ ನೇರವಾಗಿ ಆಲ್ಟರ್‍ಡ್ ಕಂಪನಿಯವರನ್ನು ಸಂಪರ‍್ಕಿಸಬಹುದಾಗಿದೆ.

(ಮಾಹಿತಿ ಸೆಲೆ: alteredcompany.com)Categories: ಅರಿಮೆ

ಟ್ಯಾಗ್ ಗಳು:, , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s