ಹುಲಿಯ ಮೈಬಣ್ಣದ ಡಿಗ್ಗರ್

ರೇಕಾ ಗೌಡ.

ಕಾದು ಕೂತಿತ್ತು
ಕರುಣೆ ತೊರೆದ ಕಟುಕನಂತೆ,
ಒಡೆಯನ
ಒಂದೇ ಕರೆಗೆ ಎರಗಲು.

ನೆನ್ನೆ ಹಿಂದಿನ ರೋಡು
ಇಂದು ನಮ್ಮದು ನೋಡು

ನಿನ್ನೆಯ ಅಗೆತವು
ಕಂಪನವಾಗಿ
ಮೈಯ ತಾಗಿ,
ಮೇಜಿನ ಮೇಲಿಂದ ಇಳಿಬಿದ್ದ
ಇಯರ್ ಪೋನ್ ತೂಗಾಡಿಸಿ
ನಾಳೆ ನನ್ನೆದೆಯಲಿ ಮೂಡುವ
ಕಂಪನದ ಮುನ್ಸೂಚನೆಗೆ
ಮುನ್ನುಡಿಯಾಯ್ತು

ಶೂನ್ಯ ಬಾವ
ನಿಶ್ಚಲವಾಗಿ ನಿಂತಿತ್ತು
ಕಟುಕನ
ಎದುರುಗೊಳ್ಳಲಾಗದೆ, ಎದುರುನೋಡುತಾ

ಸರಕ್ಕೆಂದು ನೆನಪಾಗಿ,
ಕೋಣೆಗೆ ತೂರಿಕೊಂಡು
ದೂಳಿನ ದೂಮಕ್ಕೆ
ಕಿಟಕಿಯ ಕದವಿಕ್ಕ ಹೊರಟರೆ
ನನ್ನ ಕರ‍್ಮಕೆ,
ನನ್ನ ಗಿಡಗಳು,
ಕಟುಕನಿಗೆ ಕಡುವಾಗಿ
ತುತ್ತಾದ ನೋಟವೇ
ಮೊದಲ್ಕಾಣಬೇಕೇ?

ಕಣ್ಣು ಕಿವುಚಿ
ಕಣ್ಕೊಳವೆಗಳಿಂದ
ನೀರ್ ನುಗ್ಗಿ
ಕಣ್ಣಕೊಡ
ತುಳುಕಿತು

ವ್ಯಾಗ್ರ ಗರ‍್ಜನೆಯ
ಡಿಗ್ಗರ್
ದಡ್ ದಡ್ ಸದ್ದಿನಲಿ
ನೆಲವ ಸಮ ಮಾಡಿದಾಗ
ಎದೆಯ ಮೇಲೇ
ಕುಟ್ಟಿದಂತಾಗಿ
ಅತ್ತ ನೋಡಲಾಗದೆ,
ಬೆನ್ನ ತಿರುಗಿಸಿ
ಗೋಡೆಗೆದುರಾಗಿ
ಶೂನ್ಯವ ದಿಟ್ಟಿಸುತಾ
ನಿಂತೆ

ಎದೆಯ ಕಲಕುವ
ಮೊರೆವ ಸದ್ದ
ಕಿವಿಯನಿರಿಯಲು
ಅಡಗಲು
ಹೊರಟುನಿಂತೆ

ಅದರ ದನಿಯ
ಮೀರುವ ತಾಣ
ಸಿಗದೆ ಸೋತು,
ರಿಂಗಣಿಸುತ್ತಿದ್ದ
ಶೋಕ ಕವಿತೆಗೆ
ಕಿವಿ ಹಚ್ಚಿ ಕೂತೆ

ಅಕ್ಕಿ ತೊಳೆದ ನೀರು
ಕಾಯಿಪಲ್ಲೆ, ಸೊಪ್ಪು
ಕೆದಕಿದ ನೀರ ಹೊರತು
ಕೆಲಸದವಳು ಸೋಪು ಬಿಟ್ಟ
ಪಾತ್ರೆಯ ನೀರನ್ನೂ
ನನ್ನ ಗಿಡಕೆ ಹಾಕಿದವಳಲ್ಲ
ಎಂದೆಲ್ಲಾ ಮುಂದಾಗಿ,
ಇತ್ಯಾದಿ ಇತ್ಯಾದಿ..

ಸೂತಕದ ಪರಿ ನೋಡಲು
ಮೇಲ್ಮಹಡಿ ಹತ್ತಿ
ನೋಡಿದರೆ
ಕತ್ತರಿಸಿಕೊಂಡು ಬಿದ್ದಿವೆ
ಗಿಡಗಳು
ಅಲೋವೆರ
ತನ್ನೊಳಗ ರಕ್ತ ತೋರಿಕೊಂಡು
ಹದ್ದು ಕಚ್ಚೆಸೆದ
ಮಾಂಸದಂತೆ ಚಿದ್ರಚಿದ್ರವಾಗಿ

ನೆರೆಮನೆಯ
ಅಜ್ಜ ಅಜ್ಜಿಯ ಪಾಲಿಗೆ
ಜೀವವಿದ್ದವರ‍್ಯಾರಾದರೂ ಇದ್ದರೆ
ಅವೂ,
ಗಿಡಮರಗಳೇ

ಹುಡುಕಿದೆ ಆ ಹಿರಿಯರ
ಕಂಗಳಲಿ
ಅವಿತಿಟ್ಟ ನೋವಿಗೆ
ನಲುಗಿಸುವ ನಿರಾಶೆಗೆ
ಕಂಬನಿಯ ಗುರುತಿಗೆ

ಎಶ್ಟು ಜನರ
ಬಾವಬಳ್ಳಿಯ
ಕತ್ತರಿಸ ಹೊರಟಿದೆಯೋ
ಈ ಡಿಗ್ಗರ್

ಗಿಡಗಳ ನೆಡದವರ
ಪಾಲಿಗಿಲ್ಲ
ಈ ಯಾವ ಶೋಕ,
ತಾಪವೂ!

(ಚಿತ್ರ ಸೆಲೆ: elmbridgeminidiggers.com)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: