ಟೈಚುಂಗ್‍ನಲ್ಲೊಂದು ರಂಗುರಂಗಿನ ರೈನಬೋ ಬಡಾವಣೆ!

– ಕೆ.ವಿ.ಶಶಿದರ.

ಆತನ ಹೆಸರು ಹುವಾನ್ ಯುಂಗ್-ಪು. ಹುಟ್ಟಿದ್ದು 1924ರಲ್ಲಿ. ವಯಸ್ಸು 92. ಇಳಿ ವಯಸ್ಸಿನ ಕಲಾಕಾರ. ತಾನು ಬಾಳಿ ಬದುಕಿದ ಸ್ತಳದಲ್ಲೇ ಉಳಿಯುವ ತವಕದ ಜೊತೆಗೆ ಸಮಯವನ್ನು ಕಳೆಯಲು ಕಂಡುಕೊಂಡ ಮಾರ‍್ಗ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸುವುದು. ನಾಲ್ಕು ಸಹೋದರರಲ್ಲಿ ಹಾಗೂ ಇಬ್ಬರು ಸಹೋದರಿಯರಲ್ಲಿ ಹಿರಿಯವನಾದ ಈತ ಚಿಕ್ಕಂದಿನಿಂದಲೂ ಚಿತ್ರಬಿಡಿಸುವುದರಲ್ಲಿ ಆಸಕ್ತಿ ಹೊಂದಿದ್ದವ.

ಯಾರೀ ಹುವಾನ್ ಯುಂಗ್-ಪು?

ಮೂಲತಹ ಹಾಂಗ್‍ಕಾಂಗ್‍ನವನಾದ ಈತ ರಾಶ್ಟ್ರೀಯ ಸೇನೆಯಾದ ಕೌಮಿನ್‍ಟಾಂಗ್‍ನಲ್ಲಿ 1946ರಲ್ಲಿ ಬರ‍್ತಿಯಾದ. ಈ ಸೇನೆಯ ಮೂಲ ಉದ್ದೇಶ ಚೀನಾದ ಮುಕ್ಯನೆಲದಲ್ಲಿನ ಕಮ್ಯುನಿಸ್ಟ್ ಸೇನೆಯನ್ನು ಎದುರಿಸುವುದಾಗಿತ್ತು. 1949ರ ಅಂತರ್ ಯುದ್ದದಲ್ಲಿ ಈತ ಪಾಲ್ಗೊಂಡಿದ್ದ. ಕೌಮಿನ್‍ಟಾಂಗ್ ರಾಶ್ಟ್ರೀಯ ಸೇನೆಯಲ್ಲಿದ್ದ ಬಹಳಶ್ಟು ಮಂದಿ ಚೀನಾ ಸೇನೆಯನ್ನು ಎದುರಿಸಲಾಗದೆ ಸೋತರು. ಸೋತ ಬಹಳಶ್ಟು ಸೈನಿಕರು ಚಿಯಾಂಗ್ ಕೈ ಶೇಕ್‍ನ ಅನುಯಾಯಿಗಳಾಗಿ ಅಲ್ಲೇ ಉಳಿದರು. ಮತ್ತೆ ಕೆಲವರು ಚಿಯಾಂಗ್ ಕೈ ಶೇಕ್‍ನ ಸೆರೆಯಾಳಾಗುವುದನ್ನು ತಪ್ಪಿಸಿಕೊಳ್ಳಲು ಅಲ್ಲಿಂದ ಓಡಿಹೋಗಿ ತೈವಾನ್ ಸೇರಿದರು. ತೈವಾನ್ ಸೇರಿದವರಲ್ಲಿ ಹುವಾನ್ ಯುಂಗ್-ಪು ಸಹ ಒಬ್ಬ.

ಈ ರೀತಿಯಲ್ಲಿ ಓಡಿಬಂದ ಸೈನಿಕರಿಗಾಗಿಯೇ ನೂರಾರು ಸ್ತಳಗಳಲ್ಲಿ ಸಣ್ಣ ಸಣ್ಣ ಬಡಾವಣೆಗಳನ್ನು ನಿರ‍್ಮಿಸಿ ಅವರುಗಳಿಗೆ ಉಳಿಯಲು ಅವಕಾಶವನ್ನು ತೈವಾನ್ ಸರ‍್ಕಾರ ಮಾಡಿಕೊಟ್ಟಿತು. ಹಲವು ಬಡಾವಣೆಗಳು ದೊಡ್ಡ ದೊಡ್ಡ ಪಟ್ಟಣದ ಬಳಿಯಲ್ಲೇ ಇದ್ದುದು ಅಂದು ಇವರಿಗೆ ವರವಾಗಿತ್ತು. ಹಾಗಾಗಿ ಬಹತೇಕ ಸೈನಿಕರು ತಮ್ಮ ಜೀವಿತದ ಉಳಿದ ಕಾಲಾವದಿಯನ್ನು ಅನಿವಾರ‍್ಯವಾಗಿ ಅಂತಹ ಬಡಾವಣೆಗಳಲ್ಲೇ ಕಳೆಯಬೇಕಾಗಿ ಬಂದಿದ್ದು ವಿಪರ‍್ಯಾಸ.

ನಗರ ಪ್ರದೇಶದ ಬಳಿಯಿದ್ದ ಕೆಲವು ಬಡಾವಣೆಗಳಲ್ಲಿನ ಮಾಜಿ ಸೈನಿಕರನ್ನು ರಿಯಲ್ ಎಸ್ಟೇಟ್‍ನವರು ಒಕ್ಕಲೆಬ್ಬಿಸಿ ಆ ಜಾಗವನ್ನು ಕೊಂಡುಕೊಂಡು ಪುನರಾಬಿವ್ರುದ್ದಿಗಾಗಿ ಬಳಸಲು ಯೋಜನೆಗಳನ್ನು ತಯಾರಿಸಿದರು. ಅದರಂತೆ ಟೈಚುಂಗ್ ನಗರದ ಬಳಿ ಹುವಾನ್ ಯುಂಗ್-ಪು ಇದ್ದ ಸ್ತಳವನ್ನು ಆಬಿವ್ರುದ್ದಿಯ ಹೆಸರಲ್ಲಿ ನೆಲಸಮ ಮಾಡುವ ಯೋಜನೆ ಸಿದ್ದವಾದಂತೆ, ಅಲ್ಲಿದ್ದ ಬಹಳಶ್ಟು ಜನ ವಿದಿಯಿಲ್ಲದೆ ಬೇರೆ ಸ್ತಳಗಳನ್ನು ಅರಸಿ ಹೋಗಬೇಕಾದ ಪರಿಸ್ತಿತಿ ಉದ್ಬವಿಸಿತು. ವರ‍್ಶಾನುಗಟ್ಟಲೆಯಿಂದ ಬದುಕು ಕಟ್ಟಿಕೊಂಡಿದ್ದ ಸ್ತಳವನ್ನು ಬಾರವಾದ ಹ್ರುದಯದಿಂದ ತೊರೆದು ಹೋದರು ಕೂಡ.

ಒಂದು ಕಾಲದಲ್ಲಿ 1200 ಮನೆಗಳು, ಮಕ್ಕಳು-ಮರಿಗಳಿಂದ, ಜನಜಂಗುಳಿಯಿಂದ ಗಿಜಗುಡುತ್ತಿದ್ದ ಈ ಬಡಾವಣೆಯಲ್ಲಿ ರಿಯಲ್ ಎಸ್ಟೇಟ್ ಜನ ಕಾಲಿಟ್ಟ ಕೊಂಚ ಸಮಯದಲ್ಲೇ ಬಣಗುಡಲು ಶುರುವಾಯಿತು. ಕೇವಲ ಹುವಾನ್ ಯುಂಗ್-ಪು ಸೇರಿ ಹನ್ನೊಂದು ಮನೆಯವರು ಮಾತ್ರ ಉಳಿದರು. ಇಡೀ ಬಡಾವಣೆಯಲ್ಲಿ ಸ್ಮಶಾನ ಮೌನ ಆವರಿಸಿತು.

2008ರಲ್ಲಿ 84 ವರ‍್ಶದ ವ್ರುದ್ದ ಹುವಾನ್ ಯುಂಗ್‍-ಪು ಬಡಾವಣೆಯವರು ವಲಸೆ ಹೋಗುವುದನ್ನು ಕಂಡು ಕಣ್ಣೀರಿಟ್ಟ. ಈ ಇಳೀ ವಯಸ್ಸಿನಲ್ಲಿ ಎಲ್ಲೂ ಹೋಗಲಾರದೆ ಅಲ್ಲೇ ಉಳಿದ. ಇಡೀ ಬಡಾವಣೆಯಲ್ಲಿನ ನಿಶ್ಯಬ್ದದ ವಾತಾವರಣ ಅವನ ಮನ ಕರಗಿಸಿತು. ದಿಕ್ಕು ತೋಚದಾಯಿತು ಅವನಿಗೆ.

ಚಿತ್ರಕಲೆ ಪ್ರಾರಂಬಿಸಲು ಕಾರಣವೇನು?

ಮೌನವನ್ನು ಸಹಿಸಲಾಗದೆ ಆತ ತಾನು ಚಿಕ್ಕಂದಿನಲ್ಲಿ ಕಲಿತಿದ್ದ ತನ್ನ ಹಳೆಯ ವಿದ್ಯೆಯಾದ ಚಿತ್ರ ಕಲೆಯಲ್ಲಿ ತೊಡಗಿಸಿಕೊಂಡ. ತನ್ನ ಮನೆಯಲ್ಲೇ ತನಗೆ ತೋಚಿದ ಚಿತ್ರವನ್ನು ಬರೆಯತೊಡಗಿದ. ಹಕ್ಕಿಗಳು, ನಾಯಿ, ಬೆಕ್ಕು, ಪ್ರಾಣಿಗಳ ಚಿತ್ರ ಎಲ್ಲವನ್ನೂ ತನ್ನಿಶ್ಟದಂತೆ ಬಿಡಿಸತೊಡಗಿದ. ಅವನ ಚಿತ್ರಕಲೆಯಲ್ಲಿ ಇತಿಹಾಸ ಪುರುಶರು, ಟಿವಿ ವಾಹಿನಿಯ ನಟರು, ಅಲ್ಲಿನ ಮೂಲ ನಿವಾಸಿಗಳೂ ಸಹ ಚಿತ್ರಿಸಲ್ಪಟ್ಟರು.

ಇದನ್ನು ಕಂಡ ಸ್ತಳೀಯ ವಿಶ್ವವಿದ್ಯಾಲಯದ ವಿದ್ಯಾರ‍್ತಿಗಳು ಹುವಾನ್ ಯುಂಗ್-ಪು ಬಿಡಿಸಿದ ಚಿತ್ರಗಳನ್ನು ಹಾಗೂ ಆ ಪ್ರದೇಶವನ್ನು ರಿಯಲ್ ಎಸ್ಟೇಟ್ ಮಾಪಿಯಾದವರ ಕಪಿಮುಶ್ಟಿಯಿಂದ ಉಳಿಸಲು ಮುಂದಾದರು. ಈ ಬಡಾವಣೆಯ ಶ್ರೇಶ್ಟತೆ ಬಗ್ಗೆ ಸಾಕಶ್ಟು ಪ್ರಚಾರ ಕಾರ‍್ಯ ಕೈಗೊಂಡರು. ಇಲ್ಲಿನ ಚಿತ್ರ ಸಂಪತ್ತನ್ನು ದೇಶದಲ್ಲೆಲ್ಲಾ ಹರಡಿದರು. ಬೂ ಮಾಪಿಯಾದ ಕೈಗೆ ಸಿಕ್ಕು ಈ ಬಡಾವಣೆ ಹಾಳಾಗುವುದನ್ನು ತಡೆಯಲು ಸಾರ‍್ವಜನಿಕರ ಅಬಿಪ್ರಾಯವನ್ನು ಕ್ರೂಡೀಕರಿಸಿ ಜನಾಂದೋಲವನ್ನು ಪ್ರಾರಂಬಿಸಿದರು. ಈ ಸ್ತಳವನ್ನು ಉಳಿಸುವಂತೆ ಸರ‍್ಕಾರದ ಮೇಲೆ ಅತೀವ ಒತ್ತಡ ಹೇರಿದರು.

ವಿದ್ಯಾರ‍್ತಿಗಳ ಒಗ್ಗಟ್ಟಿನ ಬಲ ಹಾಗೂ ಸಾರ‍್ವಜನಿಕರ ಅಬಿಪ್ರಾಯಕ್ಕೆ ಮಣಿದ ಸರ‍್ಕಾರ ಈ ಬಡಾವಣೆಯನ್ನು ಸಾಂಸ್ಕ್ರುತಿಕ ಪ್ರದೇಶವೆಂದು ಗೋಶಿಸಿತು. ಇದರಿಂದ ಉತ್ತೇಜಿತರಾದ ವಿದ್ಯಾರ‍್ತಿಗಳು ಹುವಾನ್ ಯುಂಗ್-ಪುನ ಜೊತೆಗೂಡಿ ಇಡೀ ಬಡಾವಣೆಯನ್ನೇ ಚಿತ್ರಗಳಿಂದ ತುಂಬಿಸಿದರು. ಮನೆಗಳು, ಮನೆಯ ಮೇಲ್ಚಾವಣಿಗಳು, ಗೋಡೆಗಳು, ಬಾಗಿಲುಗಳು, ಗಲ್ಲಿಗಳು, ರಸ್ತೆಗಳು ಎಲ್ಲಾ ಬಣ್ಣ ಬಣ್ಣದ ಚಿತ್ರಮಯ ಜಗತ್ತಾಯಿತು. ರೋಮಾಂಚಕ ಬಣ್ಣಗಳಿಂದ ಹಾಗೂ ವಿಲಕ್ಶಣ ವಿನ್ಯಾಸಗಳಿಂದ ತನ್ನತನವನ್ನು ಕಂಡುಕೊಂಡಿತು. ನೋಡುಗರಿಗೆ ವಿವಿದ ಬಣ್ಣಗಳು ಮೇಳೈಸಿದ ಕಾಮನಬಿಲ್ಲನಂತೆ ಗೋಚರಿಸ ತೊಡಗಿತು.

ವಿಶ್ವವಿದ್ಯಾಲಯದ ಹಲವು ವಿದ್ಯಾರ‍್ತಿಗಳು ಇಲ್ಲಿನ ಸೊಬಗನ್ನು ಮೆಚ್ಚಿ ಅವುಗಳ ಪೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರು. ತಮ್ಮ ನಗರದ ಬಳಿಯಿರುವ ಇಂತಹ ಸುಂದರ ಬಡಾವಣೆಯನ್ನು ನೋಡಲು ಅಲ್ಲಿನ ಜನರೇ ಮುಗಿಬೀಳಲು ಪ್ರಾರಂಬಿಸಿದರು. ಜನರಿಂದ ಜನರಿಗೆ ಹರಡಿ ವಿಕ್ಯಾತವಾದ ಇದರ ವೈವಿದ್ಯತೆ ದೂರದ ಊರುಗಳ ಜನರನ್ನು ಆಕರ‍್ಶಿಸತೊಡಗಿತು.

ನಂತರದ ದಿನಗಳಲ್ಲಿ ಹೊರದೇಶಗಳಿಗೂ ಇದರ ಕ್ಯಾತಿ ಪಸರಿಸಿ ಮಲೇಶಿಯಾ, ಜಪಾನ್, ಕೊರಿಯಾ ಹಾಗೂ ಏಶ್ಶಾದ ವಿವಿದ ದೇಶಗಳಿಂದ ಜನ ಹರಿದು ಬರಲಾರಂಬಿಸಿದರು. ವರ‍್ಶಕ್ಕೆ ಹತ್ತು ಲಕ್ಶಕ್ಕೂ ಹೆಚ್ಚು ಜನ ಪ್ರವಾಸಿಗರು ಇದರಿಂದ ಆಕರ‍್ಶಿಸಲ್ಪಟ್ಟರು. ದಿನಗಳೆದಂತೆ ಟೈಚುಂಗ್ ನಗರದಲ್ಲಿ ಇದು ತಪ್ಪದೇ ನೋಡುವಂತಹ ಸ್ತಳವಾಗಿ ಗುರುತಿಸಲ್ಪಟ್ಟಿತು.

ಕಾಲಕ್ರಮೇಣ ಈ ಬಡಾವಣೆ ‘ರೈನ್ ಬೋ ಬಡಾವಣೆ’ಯಂದೇ ಪ್ರಕ್ಯಾತವಾಯಿತು. ಇದರ ಜನಕ ಹುವಾನ್ ಯುಂಗ್-ಪುನನ್ನು ‘ರೈನ್ ಬೋ ಗ್ರ್ಯಾಂಡ್‍ಪಾ’ ಎಂದೇ ಎಲ್ಲರೂ ಗುರುತಿಸತೊಡಗಿದರು. ತನ್ನ ಕೆಟ್ಟ ಕನಸಿನಲ್ಲೂ ಕಾಣದಶ್ಟು ಕ್ಯಾತಿಯನ್ನು, ಹೊಗಳಿಕೆಯನ್ನು ಹಾಗೂ ತನ್ನ ಚಿತ್ರಕಲೆಗೆ ಸಿಕ್ಕ ಪುರಸ್ಕಾರವನ್ನು ಈ ಇಳೀ ವಯಸ್ಸಿನಲ್ಲಿ ಕಂಡ ಹುವಾನ್ ಯುಂಗ್-ಪು ಉಬ್ಬಿಹೋದ. ಅದರ ಪ್ರಬಾವದಿಂದ ದಿನದಲ್ಲಿ ಇನ್ನೂ ಕೊಂಚ ಹೆಚ್ಚಿನ ಸಮಯವನ್ನು ಚಿತ್ರಕಲೆಗೆ ಮೀಸಲಿಟ್ಟ. ಚಿತ್ರಕಲೆ ಅವನ ಮುಂದಿನ ಜೀವನದ ಪ್ರಮುಕ ದ್ಯೇಯವಾಯಿತು.

(ಚಿತ್ರ ಸೆಲೆ: wiki, ndtv.com, amusingplanet.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: