ಜಿರಳೆಗಳ ಕುರಿತು ಕೆಲವು ಕುತೂಹಲಕಾರಿ ಸಂಗತಿಗಳು

– ನಾಗರಾಜ್ ಬದ್ರಾ.

ಜಿರಳೆಗಳ ಪರಿಚಯ ಯಾರಿಗಿಲ್ಲ ಹೇಳಿ. ಜಿರಳೆಗಳನ್ನು ನೋಡಿಲ್ಲ ಎನ್ನುವರಿಲ್ಲ. ಮನೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಹುಳವಿದು. ಇಂತಹ ಜಿರಳೆಗಳು ಒಂದು ವಿಶಿಶ್ಟ ಬಗೆಯ ಹುಳಗಳಾಗಿದ್ದು, ಅವುಗಳ ಬಗ್ಗೆ ಹಲವಾರು ಕುತೂಹಲಕಾರಿ ಸಂಗತಿಗಳಿವೆ.

ಜಿರಳೆಗಳು ಡೈನೋಸಾರ್ ಗಳಿಗಿಂತ ಹಳೆಯವು!

ಬೆರಗಾಗುತ್ತಿದೆ ಅಲ್ವಾ? ಇದು ನಿಜ. ಇತ್ತೀಚೆಗೆ ನಡೆಸಿದ ಅರಕೆಯ ಪ್ರಕಾರ ಜಿರಳೆಗಳು ಡೈನೋಸಾರ್ ಗಳಿಗಿಂತ 359 ಮಿಲಿಯನ್ ವರ‍್ಶಗಳಶ್ಟು ಹಳೆಯವು ಎಂದು ತಿಳಿದುಬಂದಿದೆ. ಜಿರಳೆಗಳು ಈ ಬೂಮಿಯ ಮೇಲೆ ನಮಗಿಂತ ಮುಂಚೆಯೇ ಇವೆ ಎಂದು ಇದರಿಂದ ತಿಳಿದುಬರುತ್ತದೆ.

ಜಿರಳೆಯು ತನ್ನ ತಲೆ ಇಲ್ಲದೇ ಸುಮಾರು ಒಂದು ವಾರದವರೆಗೆ ಬದುಕಬಲ್ಲದು

ಅದು ಹೇಗೆ ? ಜಿರಳೆಗೆ ಮಿದುಳಿಲ್ಲವೇ ? ಮಿದುಳಿದ್ದರೆ ತನ್ನ ತಲೆ ಇಲ್ಲದೇ ಒಂದು ವಾರದವರೆಗೆ ಹೇಗೆ ಬದುಕುತ್ತದೆ? ಜಿರಳೆಗೆ ಮಿದುಳು ಇದೆ. ಆದರೆ ಅವುಗಳ ಮಿದುಳು ಮೈಯ ಎಲ್ಲಾ ಕೆಲಸಗಳನ್ನು ನಿಯಂತ್ರಿಸುವುದಿಲ್ಲ. ಬದಲಿಗೆ ಬಹುಪಾಲು ಕೆಲಸಗಳನ್ನು ಬಗ್ಗರಿಯಲ್ಲಿರುವ(Thorax ) ಒಂದು ಅಂಗವು ನಿಯಂತ್ರಿಸುತ್ತದೆ. ಆದ್ದರಿಂದ ಜಿರಳೆ ತಲೆ ಕಳೆದುಕೊಂಡರು ಒಂದು ವಾರದವರೆಗೆ ಬದುಕಬಲ್ಲದು. ಜಿರಳೆ ಕೊನೆಗೆ ಬಾಯಾರಿಕೆಯಿಂದ ಸಾಯುತ್ತದೆ.

ಜಿರಳೆಗಳು ಸುಮಾರು 40 ನಿಮಿಶಗಳವರೆಗೂ ತಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳುತ್ತವೆ!

ಜಿರಳೆಗಳು ನೀರಿಗೆ ಬಿದ್ದರೆ ಅವು ಸಾಯುತ್ತವೆ ಎಂದು ನಾವು ಅಂದುಕೊಂಡಿದ್ದರೆ ಅದು ದಿಟವಲ್ಲ. ಇವುಗಳಿಗೆ ಉಸಿರನ್ನು ಹಿಡಿದಿಟ್ಟುಕೊಳ್ಳುವ ಕಸುವು ಹುಟ್ಟಿನಿಂದಲೇ ಬಂದಿದೆ. ಜಿರಳೆಗಳು ತಮ್ಮ ಮೈ ಮೇಲಿರುವ ವಿಶಿಶ್ಟವಾದ ತೂತುಗಳ ಮೂಲಕ ಉಸಿರಾಡುತ್ತವೆ, ಈ ವಿಶಿಶ್ಟವಾದ ತೂತುಗಳನ್ನು ಸ್ಪಿರಾಕಲ್ಸ್(spiracles) ಎಂದು ಕರೆಯುತ್ತಾರೆ. ನೀರಿನಲ್ಲಿ ಮುಳುಗಿದಾಗ ಜಿರಳೆಗಳು ತಮ್ಮ ಮೈ ಮೇಲಿರುವ ತೂತುಗಳನ್ನು ಸುಮಾರು 40 ನಿಮಿಶಗಳವರೆಗೂ ಮುಚ್ಚಿ ಇಟ್ಟುಕೊಳ್ಳುತ್ತವೆ.

ಜಿರಳೆಗಳು ಊಟವಿಲ್ಲದೇ ಒಂದು ತಿಂಗಳವರೆಗೂ ಬದುಕಬಲ್ಲವು

ಜಿರಳೆಗಳು ಮನುಶ್ಯನ ಆಹಾರವನ್ನು ತಿನ್ನುವುದಲ್ಲದೇ ಸತ್ತ ಹುಳ, ಹಾಳೆ, ಬಟ್ಟೆ, ನೊರತೆ(soap), ಕಟ್ಟಿಗೆ, ಅಂಟು, ಕೂದಲು ಹೀಗೆ ಏನು ಬೇಕಾದರೂ ತಿನ್ನುತ್ತವೆ. ಜಿರಳೆಗಳು ಕೂಡ ಮೊಸಳೆ ಮತ್ತು ಹಾವಿನ ಹಾಗೆ ತಂಪುನೆತ್ತರಿನ(Cold Blooded) ಉಸಿರಿಗಳಾಗಿದ್ದು, ಅವುಗಳ ಊಟವು ನಿದಾನವಾಗಿ ಕರಗುತ್ತದೆ. ಹೀಗೆ ನಿದಾನವಾಗಿ ಕರಗುವುದರಿಂದ ಇವು ಒಂದು ಬಾರಿಗೆ ಮಾಡಿದ ಊಟವು ಹಲವಾರು ದಿನಗಳವರೆಗೆ ಇರುತ್ತದೆ. ಆದ್ದರಿಂದ ಜಿರಳೆಗಳು ಊಟವಿಲ್ಲದೇ ಒಂದು ತಿಂಗಳವರೆಗೂ ಬದುಕಬಹುದು. ಆದರೆ ನೀರಿಲ್ಲದೇ ಕೇವಲ ಒಂದು ವಾರ ಮಾತ್ರ ಬದುಕುತ್ತವೆ.

ಒಂದು ಬಗೆಯ ಜಿರಳೆ ಜಿಗಿಯಬಲ್ಲದು ಕೂಡ

ಜಿರಳೆ ನೆಲದ ಮೇಲೆ ಓಡಾಡಿದರೆನೇ ಎಶ್ಟು ತೊಂದರೆಗಳನ್ನು ಹುಟ್ಟುಹಾಕುತ್ತದೆ. ಇನ್ನು ಅದು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಜಿಗಿದರೆ ಹೇಗಾಗಬಹುದು? ಹೊಸದಾಗಿ ಕಂಡುಬಂದ ಒಂದು ಬಗೆಯ ಜಿರಳೆಯು ಜಿಗಿಯಬಲ್ಲದು, ಅದನ್ನು ಲೀಪ್ರೋಚ್(Leaproach ) ಜಿರಳೆ ಎಂದು ಕರೆಯುತ್ತಾರೆ. ಲೀಪ್ರೋಚ್ ಜಿರಳೆಯು 2009 ರಲ್ಲಿ ತೆಂಕಣ ಆಪ್ರಿಕಾದ ಟೇಬಲ್ ಮೌಂಟನ್‍ನಲ್ಲಿ ಕಂಡುಬಂದಿದೆ. ಇದು ಮಿಡಿತೆ ಹುಳವಿನ ಹಾಗೆ ಅರೆ ಇಂಚು ಉದ್ದವಾಗಿದ್ದು, ಹುಲ್ಲಿನಿಂದ ಹುಲ್ಲಿಗೆ ಜಿಗಿಯುತ್ತದೆ.

ಜಿರಳೆಗಳು ಪರಮಾಣು ಸಿಡಿತವಾದಾರೂ ಬದುಕುಳಿಯಬಹುದು

ಜಿರಳೆಗಳು ತುಂಬಾ ಹೆಚ್ಚಿನ ಬೀರಿಕೆ ಮಟ್ಟವನ್ನು(Radiation levels) ತಡೆದುಕೊಳ್ಳಬಹುದು ಎಂದು ಅರಕೆಗಳು ತೋರಿಸಿವೆ. ಅವುಗಳು ಮನುಶ್ಯನು ತಡೆದುಕೊಳ್ಳ ಬಹುದಾದ ಬೀರಿಕೆ ಮಟ್ಟವನ್ನು ಮೀರಿಸಬಹುದು. ಅಮೇರಿಕಾದವರು ಹಿರೋಶಿಮಾ ಹಾಗೂ ನಾಗಾಸಕಿಯ ಮೇಲೆ ನ್ಯೂಕ್ಲಿಯರ್ ಸಿಡಿಗುಂಡು ಹಾಕಿದಾಗ ಹಾಗೂ ಚೆರ‍್ನೊಬೈಲ್‍ನಲ್ಲಿ(Chernobyl) ನ್ಯೂಕ್ಲಿಯರ್ ಅಪಗಾತ ಸಂಬವಿಸಿದಾಗ ಜಿರಳೆಗಳು ಬದುಕುಳಿದಿದ್ದು ನಿಜ. ಆದರೆ ಅಂತಹ ಪರಿಸ್ತಿತಿಯಲ್ಲೂ ಜಿರಳೆಗಳು ಹೇಗೆ ಬದುಕುಳಿದವು ಎನ್ನುವದು ಇನ್ನೂ ತಿಳಿದು ಬಂದಿಲ್ಲ.

ಈ ನೆಲದಲ್ಲಿ ಸುಮಾರು 4000 ಕ್ಕಿಂತ ಹೆಚ್ಚಿನ ಜಾತಿಯ ಜಿರಳೆಗಳಿವೆ

ಇಶ್ಟು ವರ‍್ಶಗಳ ಹಿನ್ನೆಲೆಯಿರುವ ಜಿರಳೆಗಳಲ್ಲಿ ಸುಮಾರು 4000 ಕ್ಕಿಂತ ಹೆಚ್ಚಿನ ಬಗೆಯ ಜಾತಿಗಳಿದ್ದು, ಅವುಗಳ ಪೈಕಿ ಕೇವಲ 30 ಜಾತಿಯ ಜಿರಳೆಗಳು ಮಾತ್ರ ನಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಕಂಡು ಬರುತ್ತವೆ. ಉಳಿದ ಹೆಚ್ಚಿನ ಜಾತಿಯ ಜಿರಳೆಗಳು ಕಾಡುಗಳಲ್ಲಿ ಕಂಡು ಬಂದರೆ, ಕೆಲವು ಗುಹೆಗಳಲ್ಲಿ, ಹೊಲ, ಗದ್ದೆ ಹಾಗೂ ಬಯಲು ಪ್ರದೇಶಗಳಲ್ಲಿ ವಾಸಿಸುತ್ತವೆ. ಕೇವಲ ಒಂದು ಜಾತಿಯ ಜಿರಳೆ ಮಾತ್ರ ಬಾಯಿಯ ಮೂಲಕ ನೀರಿನ ಆವಿಯನ್ನು ಹೀರಿಕೊಂಡು ಮರಳುಗಾಡಿನಲ್ಲಿ ಬದುಕುತ್ತದೆ. ಜಿರಳೆಗಳು ಅಂಟಾರ‍್ಟಿಕಾ ಪೆರ‍್ನೆಲವನ್ನು(Continent) ಹೊರತುಪಡಿಸಿ, ವಿಶ್ವದಾದ್ಯಂತ ಎಲ್ಲಾ ಕಡೆಗೆ ಕಂಡು ಬರುತ್ತವೆ.

ಜಿರಳೆಗಳನ್ನು ಕೂಡ ಸಾಕುತ್ತಾರೆ!

ನಾಯಿ, ಬೆಕ್ಕು, ಮೊಲ, ಗಿಳಿ ಹೀಗೆ ಹಲವಾರು ಪ್ರಾಣಿ ಮತ್ತು ಹಕ್ಕಿಗಳನ್ನು ಸಾಕುವುದು ನಮಗೆ ತಿಳಿದಿತ್ತು. ಆದರೆ ಜಿರಳೆಗಳನ್ನು ಕೂಡ ಸಾಕುತ್ತಾರೆ ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಮಡಗಾಸ್ಕರ್ ಹಿಸ್ಸಿಂಗ್(Madagascar hissing ) ಹಾಗೂ ದಿ ಟ್ರೂ ಡೆತ್ಸ್ ಹೆಡ್(the true death’s head) ಎಂಬ ಹೆಸರಿನ ಎರಡು ಜಿರಳೆಗಳನ್ನು ಸಾಮಾನ್ಯವಾಗಿ ಸಾಕುತ್ತಾರೆ. ಇವುಗಳು ವಾಸನೆಯಿಲ್ಲದ ಹಾಗೂ ಎಲ್ಲಕ್ಕಿಂತ ಕಡಿಮೆ ಆರಯ್ಕೆ ಬೇಕಾಗುವ ಜಿರಳೆಗಳಾಗಿವೆ.

ಕೆಲವೊಂದು ಬಗೆಯ ಜಿರಳೆಗಳನ್ನು ತಿನ್ನುತ್ತಾರೆ!

ಚೀನಾದಲ್ಲಿ ಜಿರಳೆಗಳನ್ನು ಕರಿದು ತಿನ್ನುತ್ತಾರೆ. ಅಲ್ಲಿನ ಬೀದಿಗಳಲ್ಲಿ ಬಗೆ ಬಗೆಯ ಕರಿದ ಜಿರಳೆಗಳನ್ನು ಮಾರಾಟ ಮಾಡುತ್ತಾರೆ. ಇನ್ನು ಹಲವಾರು ಬುಡಕಟ್ಟು ಜನಾಂಗಗಳ ಮಂದಿ ಜೀವಂತ ಜಿರಳೆಗಳನ್ನೇ ತಿನ್ನುತ್ತಾರೆ.

ಜಿರಳೆಗಳು ತುಂಬಾ ಬಿರುಸಾಗಿ ಓಡಬಲ್ಲವು

ಇದುವರೆಗೆ ಯಾರು ಜಿರಳೆಗಳನ್ನು ಹಿಡಿಯಲು ಬೆನ್ನಟ್ಟಿ ಪ್ರಯತ್ನಿಸಿದ್ದಾರೆಯೋ ಅವರಿಗೆ ಇದರ ಅರಿವಾಗಿರುತ್ತದೆ. ಜಿರಳೆಗಳು ಪ್ರತಿ ಗಂಟೆಗೆ ಸುಮಾರು 3 ಮೈಲಿ ಓಡಬಹುದು. ಅವುಗಳ ಹಿಂಗಾಲುಗಳು ವಿಶೇಶವಾಗಿ ಬಿರುಸಾಗಿ ಓಡುವುದಕ್ಕಂತಲೇ ರೂಪಗೊಂಡಿವೆ. ಬಿರುಸಾಗಿ ಓಡುವಾಗ ಇದರ ಹಿಂಗಾಲುಗಳು ಪ್ರತಿ ಸೆಕೆಂಡಿಗೆ 27 ಬಾರಿ ಹೆಜ್ಜೆಯನ್ನು ಇಡುತ್ತವೆ.

(ಮಾಹಿತಿ ಮತ್ತು ಚಿತ್ರ ಸೆಲೆ: ipfactly.compestworld.org)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.