ಪೆರುವಿನ ಮರಳುಗಾಡಿನಲ್ಲೊಂದು ಕಣ್ಸೆಳೆಯುವ ಓಯಸಿಸ್
– ಕೆ.ವಿ.ಶಶಿದರ.
ಹುವಕಚಿನ ಎಂಬ ಒಂದು ಪುಟ್ಟ ಹಳ್ಳಿ ಪೆರು ದೇಶದ ನೈರುತ್ಯ ದಿಕ್ಕಿನಲ್ಲಿದೆ. ಪೆರು ಮಂದಿಯ ಪ್ರಾಚೀನ ಪವಿತ್ರ ವಸ್ತುವನ್ನು ಸ್ತಳೀಯ ಬಾಶೆಯಲ್ಲಿ ಹುವಕಚಿನ ಎನ್ನುತ್ತಾರೆ. ಪೆರುವಿನ ಐಕಾ ಪ್ರಾಂತದ ಐಕಾ ಜಿಲ್ಲೆಯ ಐಕಾ ನಗರದಿಂದ 5 ಕಿಲೋಮೀಟರ್ ದೂರದಲ್ಲಿರುವ ಈ ಪುಟ್ಟ ಹಳ್ಳಿಯ ಕಾಯಂ ಜನಸಂಕ್ಯೆ ಒಂದು ನೂರಕ್ಕೂ ಕಡಿಮೆ. ಎತ್ತರದಲ್ಲಿ ಒಂದೊಕ್ಕೊಂದು ಸವಾಲು ಹಾಕುವಂತಿರುವ ಮರಳು ದಿಬ್ಬಗಳ ನಡುವೆ ನೆಲೆಸಿರುವ ಪ್ರಾಕ್ರುತಿಕ ಸರೋವರದ ಸುತ್ತ ಹಬ್ಬಿರುವ ಹುವಕಚಿನವನ್ನು ಓಯಸಿಸ್ ಎಂದು ಬಣ್ಣಿಸಲಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಒಣ ಹವೆಯಿರುವ ಈ ಓಯಸಿಸ್‍ನಲ್ಲಿ ಬೆಳೆದಿರುವ ಪಾಮ್ ಮರಗಳು, ಬೂಮಿ ಮುಚ್ಚಿದಂತಿರುವ ತರಗಲೆಗಳು ಮದ್ಯದಲ್ಲಿ ಪ್ರಶಾಂತವಾಗಿರುವ ಸರೋವರ ಗಮನಸೆಳೆಯುವಂತದ್ದು.
ನೂರಾರು ಅಡಿ ಎತ್ತರದ ಮರಳಿನ ದಿಬ್ಬಗಳು ಈ ಸರೋವರಕ್ಕೆ ಅತಿ ಸುಂದರ ಹಾಗೂ ಕಣ್ಣಿಗೆ ಮುದ ನೀಡುವ ಅತ್ಯಂತ ಆಹ್ಲಾದಕರ ಪರಿಸರವನ್ನು ನೀಡಿದೆ. ಮರಳ ದಿಬ್ಬದ ತುತ್ತ ತುದಿಯಲ್ಲಿ ನಿಂತು ಈ ಹಳ್ಳಿಯನ್ನು ನೋಡಿದರೆ ನಯನ ಮನೋಹರವಾದ ದ್ರುಶ್ಯ ಅನಾವರಣಗೊಂಡಂತೆ ಕಾಣುತ್ತದೆ. ಇಂತಹ ಆಕರ‍್ಶಕವಾದ ಈ ಹುವಕಚಿನವನ್ನು, ಇದಕ್ಕೆ ಸಂಬಂದಿಸಿದ ಪ್ರಾದಿಕಾರದವರು ಪ್ರವಾಸೋದ್ಯಮ ಮತ್ತು ವಿನೋದಬರಿತ ಕ್ರೀಡೆಯ ತಾಣವಾಗಿ ಅಬಿವ್ರುದ್ದಿ ಪಡಿಸುವತ್ತ ಹೆಜ್ಜೆ ಹಾಕಿದ್ದಾರೆ.
‘ಓಯಸಿಸ್ ಆಪ್ ಅಮೇರಿಕಾ’ ಎಂತಲೂ ಕರೆಯಲ್ಪಡುವ ಈ ಪುಟ್ಟ ಹಳ್ಳಿ ಐಕಾ ನಗರದ ಶ್ರೀಮಂತ ವರ‍್ಗಕ್ಕೆ ರೆಸಾರ‍್ಟ್ ಸಹ ಆಗಿದೆ. ಎತ್ತರದ ಮರಳಿನ ದಿಬ್ಬಗಳು ಸ್ಯಾಂಡ್‍ಬೋರ‍್ಡಿಂಗ್‍ನಂತಹ ಸಾಹಸಮಯ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರಶಸ್ತ ಸ್ತಳ. ಇಂತಹ ಸಾಹಸ ಕ್ರೀಡೆಯಲ್ಲಿ ತೊಡಗಿಸಿಕೊಂಡು ಮೋಜು ಮಾಡುವ ಉದ್ದೇಶದಿಂದಲೇ ಪ್ರವಾಸಿಗರು ಇಲ್ಲಿಗೆ ಬರುವುದುಂಟು. ‘ಅರೆನೆರೊಸ್’ ಎಂದು ಸ್ತಳೀಯ ಬಾಶೆಯಲ್ಲಿ ಕರೆಯಲ್ಪಡುವ ಕುದುರೆ ಗಾಡಿಯಲ್ಲಿ ಮರಳಿನ ದಿಬ್ಬಗಳ ಮೇಲೆ ಸುತ್ತಾಡುವುದು ವಿನೋದಬರಿತ ಸವಾರಿ.
ಸ್ತಳೀಯ ಐತಿಹ್ಯದ ಪ್ರಕಾರ ಈ ಸರೋವರದ ನೀರು ಮತ್ತು ಮಣ್ಣು ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ಇಲ್ಲಿಯ ಜನರ ನಂಬಿಕೆ. ಸ್ತಳೀಯರು ಮತ್ತು ಪ್ರವಾಸಿಗರು ಸರೋವರದ ನೀರಿನಲ್ಲಿ ಸ್ನಾನ ಮಾಡುವುದು ಆಸ್ತಮ, ಸಂದಿವಾತ, ಬ್ರಾಂಕೈಟಿಸ್ ಮುಂತಾದ ಹಲವು ಕಾಯಿಲೆಗಳಿಂದ ಮುಕ್ತಿ ಸಾದ್ಯ ಎಂಬ ನಂಬಿಕೆಯಿಂದ. ಚರ‍್ಮ ರೋಗದಿಂದ ಬಳಲುತ್ತಿರುವ ಬಹಳ ಮಂದಿ ಅದರಿಂದ ಮುಕ್ತಿ ಪಡೆಯಲು ಸರೋವರದ ಮಣ್ಣನ್ನು ಮೈ ಪೂರ ಲೇಪಿಸಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನ ಮಾಡುತ್ತಾರೆ. ಮಣ್ಣಿನಲ್ಲಿ ಅಡಗಿರುವ ಶಕ್ತಿಯಿಂದ ಚರ‍್ಮ ರೋಗ ಗುಣವಾಗುತ್ತದೆಂಬ ಕಾರಣದಿಂದ. 1940ರ ದಶಕದಲ್ಲಿ ಪೆರು ದೇಶದ ಆಗರ‍್ಬ ಶ್ರೀಮಂತರೂ ಸಹ ಇಲ್ಲಿನ ನೀರಿನಲ್ಲಿ ಮೀಯುವುದಕ್ಕಾಗಿಯೇ ಬರುತ್ತಿದ್ದ ದಾಕಲೆಗಳಿವೆ.
ರಾಜಕುಮಾರಿಯ ಕನ್ನಡಿಯಿಂದ ಈ ಕೊಳ ಹುಟ್ಟಿತೆಂದು ಪುರಾಣದ ಕತೆ ಹೇಳುತ್ತದೆ!
ರಾಜಕುಮಾರಿಯೊಬ್ಬಳು ಸ್ನಾನಕ್ಕೆ ಮುನ್ನ ತನ್ನ ವಸ್ತ್ರಗಳನ್ನು ಕಳಚಿ ಕನ್ನಡಿಯಲ್ಲಿ ನೋಡಿದಾಗ, ಆಗಂತುಕ ಬೇಟೆಗಾರನೊಬ್ಬ ತನ್ನ ಸನಿಹಕ್ಕೆ ಬರುತ್ತಿರುವುದನ್ನು ಕಾಣುತ್ತಾಳೆ. ಇದರಿಂದ ಬಯಬೀತಳಾಗಿ ಅಲ್ಲಿಂದ ಓಡಿಹೋಗುತ್ತಾಳೆ. ಆಗ ಆಕೆ ಬಿಟ್ಟು ಹೋದ ಕನ್ನಡಿಯೇ ಕೊಳವಾಯಿತೆಂಬುದು ಒಂದು ಅವತರಣಿಕೆಯಾದರೆ, ತನ್ನ ಸ್ನಾನಕ್ಕೆಂದು ಇರಸಿಕೊಂಡಿದ್ದ ನೀರೇ ಕೊಳವಾಯಿತೆಂಬುದು ಮತ್ತೊಂದು. ಆಕೆ ಓಡುವಾಗ ನರಿಗೆಯುಕ್ತ ನಿಲುವಂಗಿ ಪ್ರವಾಹದಂತೆ ಅವಳ ಹಿಂದೆ ಹರಿದಾಗ ಸ್ರುಶ್ಟಿಯಾಗಿದ್ದೇ ಮರಳಿನ ದಿಬ್ಬ ಎಂದು ನಂಬುವರೂ ಇದ್ದಾರೆ. ಈ ಕೊಳದಲ್ಲಿ ಮತ್ಸ್ಯಕನ್ಯೆಯಾಗಿ ಆ ರಾಜಕುಮಾರಿ ಈಗಲೂ ಇದ್ದಾಳೆ ಎಂಬ ಉಹಾಪೋಹ ಕೂಡ ಇದೆ.
ಕೊಳ ಒಣಗುತ್ತಿದೆ. ಉಳಿಸುವ ಪ್ರಯತ್ನಗಳೂ ನಡೆಯುತ್ತಿವೆ
ನೇರ ಬಿಸಿಲಿನ ಜಳಕ್ಕೆ ಕೊಳದ ನೀರು ಕಾದು ಆವಿಯಾಗಿ ಹೋದ ಕಾರಣ ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗತೊಡಗಿತು. ಕೊಳದ ನೀರಿನ ಆದಾರದ ಮೇಲೆಯೇ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಅಲ್ಲಿನ ಜನರ ಮನದಲ್ಲಿ ಆತಂಕ ಮನೆಮಾಡಿತು. ಇದಕ್ಕೆ ಪುಟವಿಟ್ಟಂತೆ ಓಯಸಿಸ್ ಬಳಿಯಿರುವ ಕಾಸಗಿ ಬೂಮಾಲೀಕರು ಬೋರ್‍ವೆಲ್ ಹಾಕಿಸಿ, ಬಾವಿಗಳನ್ನು ತೋಡಿ ನೀರನ್ನು ಸೆಳೆಯ ತೊಡಗಿದ ಮೇಲಂತೂ ಕೊಳದ ನೀರಿನ ಮಟ್ಟ ಮತ್ತೂ ಕ್ಶೀಣಿಸತೊಡಗಿತು.
ಕೊಳದಲ್ಲಿ ಇಂಗುತ್ತಿರುವ ನೀರನ್ನು ಸರಿದೂಗಿಸಲು ಇದನ್ನು ಉಳಿಸುವ ಸಲುವಾಗಿ ಹತ್ತು ಹಲವು ವ್ಯಾಪಾರಸ್ತರು ಸೇರಿ, ಹತ್ತಿರದ ಐಕಾ ಬಳಿಯ ತೋಟದಿಂದ ಇಲ್ಲಿಗೆ ನೀರನ್ನು ಪೈಪುಗಳ ಮೂಲಕ ಪಂಪ್ ಮಾಡಿ ತುಂಬಿಸುವ ಕಾರ‍್ಯಯೋಜನೆಯನ್ನು ರೂಪಿಸಿದರು. ಅದರಂತೆ ಏಪ್ರಿಲ್ 2, 2015ರಂದು ಕ್ರುತಕವಾಗಿ ನೀರನ್ನು ತುಂಬಿಸುವ ಕೆಲಸವನ್ನು ವಿದ್ಯುಕ್ತವಾಗಿ ಪ್ರಾರಂಬಿಸಿಲಾಯಿತು. ಅಲ್ಲಿಂದ ಇಲ್ಲಿಯವರೆವಿಗೂ ಸರಿ ಸುಮಾರು 73000 ಕ್ಯುಬಿಕ್ ಮೀಟರ್‍ಗೂ ಹೆಚ್ಚು ನೀರನ್ನು ಕೊಳಕ್ಕೆ ಪೈಪುಗಳ ಮೂಲಕ ಹರಿಸಲಾಗಿದೆ. ಈ ಪ್ರಮಾಣದ ನೀರಿನ ಹರಿವಿನಿಂದ ಸರೋವರದ ನೀರಿನ ಮಟ್ಟ 3 ಮೀಟರ್‍ನಶ್ಟು ಮಾತ್ರ ಏರಿದೆ.
ಪ್ರವಾಸಿ ತಾಣವನ್ನು ಉಳಿಸುವ ಸಲುವಾಗಿ ಸಾರ‍್ವಜನಿಕರು ಕೈಗೊಂಡ ಈ ಕ್ರಮ ಪೆರುವಿನ ರಾಜ್ಯಪಾಲರ ಮೆಚ್ಚುಗೆಯನ್ನು ಗಳಿಸಿತು. ಇದರ ಪರಿಣಾಮವಾಗಿ ‘ನ್ಯಾನೋ ಬಬಲ್’ ತಂತ್ರಜ್ನಾನದ ಜನಕ ಪೆರುವಿನ ವಿಜಾನಿ ಮರಿನೋ ಮೊರಿಕಾವರ ಅವರಿಗೆ ಹುವಕಚಿನ ಸರೋವರದ ನೀರನ್ನು ಶುಚಿಗೊಳಿಸುವ ಯೋಜನೆಯನ್ನು ವಹಿಸುತ್ತಿರುವುದಾಗಿ 2016 ಗೋಶಿಸಲಾಯಿತು. ಈತ ‘ನ್ಯಾನೋ ಬಬಲ್’ ವ್ಯವಸ್ತೆಯನ್ನು ಹುಟ್ಟುಹಾಕಿ ಅದರ ಮುಕೇನ ಕಲುಶಿತಗೊಂಡಿದ್ದ ಪೆರೂವಿನ ‘ಎಲ್ ಕಸ್ಕಾಜೊ’ ಸರೋವರದ ನೀರನ್ನು ಶುದ್ದಗೊಳಿಸಿ ಮನೆಮಾತಾಗಿದ್ದಾನೆ.
ಬಹುತೇಕ ಮರಳುಗಾಡಿನಂತೆ ಇಲ್ಲಿಯೂ ಉಶ್ಣತೆ, ಬಿಸಿಲಿನ ಜಳ, ಒಣಹವೆಯ ವಾತಾವರಣವೇ ಹೆಚ್ಚು. ಮಳೆ ಕಾಣುವುದೇ ಅಪರೂಪ ಅತವಾ ಇಲ್ಲವೇ ಇಲ್ಲ ಎಂದರೂ ಸಮಂಜಸವೆ. ಅದ್ದರಿಂದ ಇಲ್ಲಿಗೆ ಪ್ರವಾಸಕ್ಕೆ ಹೋಗಬಹುದಾದ ಪ್ರಶಸ್ತ ದಿನಗಳು ಮೇನಿಂದ ಆಗಸ್ಟ್ ವರೆಗಿನ ಚಳಿಗಾಲದ ಸಮಯ.
ಸರೋವರದ ಮಂದಿಮೆಚ್ಚುಗೆ ಹಾಗೂ ಹೆಚ್ಚುಗಾರಿಕೆಯನ್ನು ಗುರುತಿಸಿದ ರಾಶ್ಟ್ರೀಯ ಸಾಂಸ್ಕ್ರುತಿಕ ಸಂಸ್ತೆ ಹುವಕಚಿನವನ್ನು ‘ರಾಶ್ಟ್ರೀಯ ಸಾಂಸ್ಕ್ರುತಿಕ ಪರಂಪರೆಯ ತಾಣ’ ಎಂದು ಗೋಶಿಸಿದೆ. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಏಳಿಗೆ ಹೊಂದಿ, ತನ್ನ ವೈಬೋಗವನ್ನು ಕಾಪಾಡಿಕೊಂಡು ಉಳಿಯುವುದರಲ್ಲಿ ಸಂದೇಹವಿಲ್ಲ.
ಈ ಚಿತ್ರಸದ್ರುಶ ಪ್ರವಾಸಿ ತಾಣ ಪೆರುವಿನ ಅದಿಕ್ರುತ ಕರೆನ್ಸಿಯ ಮೇಲೆ ಮುದ್ರಣಗೊಂಡಿರುವುದು ಪೆರುವಿಯನ್ನರಿಗೆ ಹುವಕಚಿನ ಮೇಲಿರುವ ಪ್ರೀತಿಯ ದ್ಯೋತಕ. ಕೇವಲ ನೂರು ಜನಸಂಕ್ಯೆಯುಳ್ಳ ಈ ಪ್ರದೇಶದಲ್ಲಿ ಅತಿ ಸಾಮಾನ್ಯ ಹೋಟೆಲ್‍ಗಳು, ಅಂಗಡಿ ಮುಂಗಟ್ಟುಗಳ ಜೊತೆಗೆ ಒಂದು ಓಯಸಿಸ್ ಲೈಬ್ರರಿ ಸಹ ಇದೆ. ಇಲ್ಲೇ ವಾಸಿಸುವ ಜನರಿಗೆ ಹಣ ಸಂಪಾದನೆಯ ಮಾರ‍್ಗ ಪ್ರವಾಸಿಗರಿಗೆ ಬೇಕಾದ ಸ್ಯಾಂಡ್ ಬೋರ‍್ಡ್ ಹಾಗೂ ಮರಳಿನ ಮೇಲೆ ಚಲಿಸುವ ಗಾಡಿಗಳನ್ನು ಬಾಡಿಗೆಗೆ ನೀಡುವುದರಿಂದ ಮಾತ್ರ. ಬೇರಾವುದೇ ಚಟುವಟಿಕೆ ಇಲ್ಲಿ ಇಲ್ಲ.
ಬಹಳಶ್ಟು ಪ್ರವಾಸಿಗರು ಸಂಜೆಯ ವೇಳೆ, ಗಾಳಿಯ ಮಾರುತದಿಂದ ಸ್ರುಶ್ಟಿಯಾದ, ಸುಂದರ ಕಲಾಕ್ರುತಿಯಂತಿರುವ ಮರಳಿನ ದಿಬ್ಬದ ತುತ್ತ ತುದಿಯಲ್ಲಿ ನಿಂತು ಸೂರ‍್ಯಾಸ್ತವನ್ನು ನೋಡಿ ಕಣ್ತುಂಬಿಸಿಕೊಳ್ಳಲು ಕಾದಿರುತ್ತಾರೆ. ಈ ಸಮಯದಲ್ಲಿ ಹೊರಹೊಮ್ಮುವ ಸೂರ‍್ಯನ ಹೊಂಗಿರಣ ಮರಳ ದಿಬ್ಬದ ಮೇಲೆ ಬಿದ್ದು, ಇಡೀ ದಿಬ್ಬಕ್ಕೆ ಚಿನ್ನದ ಲೇಪನ ಮಾಡಿದಂತೆ ಕಾಣುವ ಬೂದ್ರುಶ್ಯವನ್ನು ನೋಡಿ ಪುಳಕಿತಗೊಳ್ಳುತ್ತಾರೆ.
(ಚಿತ್ರ ಸೆಲೆ: 27vakantiedagen.nl, huacachina.com)
ಇತ್ತೀಚಿನ ಅನಿಸಿಕೆಗಳು