ನಗೆಬರಹ: ಓ ದ್ಯಾವ್ರೆ..

– ಕೆ.ವಿ.ಶಶಿದರ.

ಆತ ಆಸ್ತಿಕ. ದೇವರ ಬಗ್ಗೆ ಯಾರು ಏನೇ ಹೇಳಿದರು ಕೊಂಚವೂ ಬದಲಾಗದ ವ್ಯಕ್ತಿ. ಕೊಂಚ ಹುಂಬ. ವಯಸ್ಸು ಸರಿ ಸುಮಾರು ನಲವತ್ತಿರಬೇಕು. ಅಶ್ಟೇನು ವಿದ್ಯಾವಂತನಲ್ಲ. ಅವನ ಹಳ್ಳಿಯಲ್ಲಿದ್ದ ಶಾಲೆಯ ಕೊನೆಯ ತರಗತಿಯವರೆಗೂ ಓದಿದ್ದ. ಕೊನೆ ತರಗತಿಯಲ್ಲಿ ಪೇಲಾದ. ಅಂದರೆ ಅಲ್ಲಿಯವರೆಗೂ ಎಲ್ಲಾ ತರಗತಿಯಲ್ಲೂ ಪಾಸಾಗಿದ್ದ ಅಂತಲ್ಲ. ಪಾಸು ಮಾಡಿಸಲಾಗಿತ್ತು. ಪೇಲಾದ ನಂತರ ಓದಿಗೆ ತಿಲಾಂಜಲಿ ಕೊಟ್ಟಿದ್ದ. ಲೋಕದ ಕಣ್ಣಿಗೆ ಅವ ಒಬ್ಬ ಅಕ್ಶರಸ್ತ. ಈತನೇ ನಮ್ಮ ಕತಾನಾಯಕ.

ಆಕೆ ಮಹಾ ಸಾದ್ವಿ. ಕತಾನಾಯಕನ ಪಕ್ಕದ ಹಳ್ಳಿಯ ಚೆಲುವೆ. ದೇವರಲ್ಲಿ ಅನನ್ಯ ಬಕ್ತಿ. ದೇವರ ಪೂಜೆಯಿಲ್ಲದೆ ಬಾಯಿಗೆ ನೀರನ್ನೂ ಬಿಟ್ಟುಕೊಳ್ಳುತ್ತಿರಲಿಲ್ಲ. ಅಶ್ಟು ಬಕ್ತೆ. ಸಹಿ ಮಾಡುವಶ್ಟು ಅಕ್ಶರಸ್ತೆ. ರುಣಾನುಬಂದ. ಈಕೆಯೇ ನಮ್ಮ ಕತಾನಾಯಕನ ದರ‍್ಮಪತ್ನಿ.

ಇವರಿಬ್ಬರ ವಿವಾಹವಾಗಿ ಹದಿನೆಂಟು ವರ‍್ಶವಾಗಿರಬೇಕು. ದೊಡ್ಡವನಿಗೆ ಹದಿನಾರುವರೆ ವರ‍್ಶ. ಅವನ ಹಿಂದೆ ಸಾಲು ಸಾಲು ಮಕ್ಕಳು. ಒಟ್ಟು ಎಂಟು ಜನರ ಸಂಸಾರ ಅವರದು. ಇದ್ದ ಚಿಕ್ಕ ಮನೆಯಲ್ಲೇ ಎಲ್ಲರೂ ವಾಸ್ತವ್ಯ. ಯಾರಿಗೂ ವಿದ್ಯೆ ಹತ್ತಲಿಲ್ಲ. ಅಲ್ಲಿ ಇಲ್ಲಿ ಕೂಲಿ ಮಾಡುತ್ತಿದ್ದರೂ ಸಹ ಕಿತ್ತು ತಿನ್ನುವ ಬಡತನ. ಇದ್ದ ಎರಡು ಎಕರೆ ಹೊಲದಲ್ಲಿ ಬೆಳೆದಿದ್ದೇ ಅವರ ಆಸ್ತಿ. ಕೊಂಚ ತಮ್ಮ ಉಪಯೋಗಕ್ಕೆ ಇಟ್ಟುಕೊಂಡು ಉಳಿದದ್ದನ್ನು ಮಾರಿ ಅವಶ್ಯಕ ವಸ್ತುಗಳನ್ನು ಕರೀದಿಸುತ್ತಿದ್ದರು.

ಆ ವರ‍್ಶ ಹಿಂದೆಂದಿಗಿಂತ ಪಸಲು ಚನ್ನಾಗಿತ್ತು. ಕತಾನಾಯಕ, ಅವನ ದರ‍್ಮಪತ್ನಿ ಹಾಗೂ ಮಕ್ಕಳು ಎಲ್ಲರೂ ತಮ್ಮ ತಮ್ಮ ವಯೋಮಾನಕ್ಕೆ ತಕ್ಕಂತೆ ಸಣ್ಣ ಸಣ್ಣ ಕನಸುಗಳನ್ನು ಕಟ್ಟಲಾರಂಬಿಸಿದರು. ಪಸಲಿನ ಕಟಾವಿನ ದಿನವನ್ನು ಕಾಯತೊಡಗಿದರು. ಮನಸ್ಸಿನಲ್ಲಿ ಮಂಡಿಗೆ ಸವಿದರು.

ಆ ದಿನ ಸಂಜೆ ಸೂರ‍್ಯ ಮುಳಗಲು ಇನ್ನೂ ಬಹಳ ಹೊತ್ತಿರುವಾಗಲೆ ಕಪ್ಪು ಮೋಡದಿಂದ ಕತ್ತಲೆ ಆವರಿಸಿತ್ತು. ಆಕಾಶ ನೋಡಿದರೆ ಯಾವುದೇ ಸಮಯದಲ್ಲಿ ಮಳೆ ದೋ ಎಂದು ಸುರಿಯುವ ಹಾಗಿತ್ತು. ಮೆಲ್ಲನೆ ಒಂದರೆಡು ಹನಿ ಮಳೆ ಹಾಕಲು ಪ್ರಾರಂಬಿಸಿದಾಗ ಕತಾನಾಯಕನಿಗೆ ಕುಶಿಯಾಯಿತು. ಬೆಳೆದು ನಿಂತ ಪಸಲಿನಲ್ಲಿ ಜೊಳ್ಳೆಲ್ಲಾ ಹೋಗಿ ಗಟ್ಟಿ ಕಾಳು ನಿಲ್ಲುತ್ತದೆ ಎಂದು ಅಂದುಕೊಂಡ. ಹನಿಯುತ್ತಿದ್ದ ಮಳೆಯ ಆರ‍್ಬಟ ಕ್ರಮೇಣ ಹೆಚ್ಚಾಯಿತು. ಜೊತೆಗೆ ಗಾಳಿಯೂ ಸಹ ಅದನ್ನು ಉತ್ತೇಜಿಸುತ್ತಿತ್ತು. ಸಮಯ ಕಳೆದಂತೆ ನೀರ ಹನಿ ಆಲಿಕಲ್ಲಾಗ ತೊಡಗಿತು. ದಪ್ಪ ದಪ್ಪ ಆಲಿಕಲ್ಲು ಮಳೆ ಪಟಪಟನೆ ಬೀಳಲು ಶುರುವಾಯಿತು.

ನಮ್ಮ ಕತಾನಾಯಕನಿಗೆ ಏನೋ ಒಂದು ರೀತಿಯ ಬಯ ಕಾಡಲಾರಂಬಿಸಿತು. ಬೆಳೆದಿದ್ದ ಪಸಲೆಲ್ಲಾ ಆಲೀಕಲ್ಲಿನ ಹೊಡೆತಕ್ಕೆ ನೆಲ ಕಚ್ಚಬಹುದೆಂಬ ಆತಂಕ ಹೆಚ್ಚಾಯಿತು. ಮಳೆಯ ಆರ‍್ಬಟ ಮತ್ತೂ ಬಿರುಸಾಯಿತು. ಮಾಳಿಗೆ ಹಾರಿ ಹೋಗುವಂತೆ ಗಾಳಿ ಬೀಸ ತೊಡಗಿತು. ದೋ ಎಂದು ಸುರಿಯುತ್ತಿರುವ ಮಳೆ ನಿಲ್ಲುವ ಲಕ್ಶಣಗಳೇ ಕಾಣಲಿಲ್ಲ. ಒಂದೇ ಸಮನೆ ಸುರಿಯುತ್ತಿತ್ತು. ಆಕಾಶವೇ ಬಿರಿದಂತೆ.

ಇಡೀ ರಾತ್ರಿ ಸುರಿದ ಮಳೆ ಬೆಳಗಿನ ಜಾವಕ್ಕೆ ನಿಂತಿತು. ಅಶ್ಟು ಹೊತ್ತಿಗಾಗಲೇ ನಮ್ಮ ಕತಾನಾಯಕ ಹಾಗೂ ಅವನ ಕುಟುಂಬದ ಕನಸಿನ ಗಾಳಿಗೋಪುರ ಹಾರಿ ಹೋಗಿತ್ತು. ಜೊಳ್ಳಿನ ಜೊತೆ ಪಸಲು ನೆಲ ಕಚ್ಚಿತ್ತು. ಆಕಾಶವೇ ಕಳಚಿ ಬಿದ್ದಂತಾಗಿತ್ತು ಕತಾನಾಯಕನ ಸ್ತಿತಿ.

ಒಳ್ಳೆಯ ಪಸಲು ಬಂದಿದ್ದಲ್ಲಿ ಮುಂದಿನ ಬೆಳೆಯವರೆಗೂ ತಾಪತ್ರಯವಿಲ್ಲದೆ ಜೀವನ ಸಾಗಿಸಬಹುದೆಂಬ ಅವನ ಕನಸು ಬಗ್ನವಾಗಿತ್ತು. ಮುಂದೇನು ಎಂಬ ದೊಡ್ಡ ಪ್ರಶ್ನೆ ಅವನನ್ನು ಕಾಡಲು ಪ್ರಾರಂಬಿಸಿತು. ತನ್ನ ಹೊಲವನ್ನು ಕಂಡ ನಮ್ಮ ಕತಾನಾಯಕ ಕೊಂಚ ಹೊತ್ತು ತಲೆಯ ಮೇಲೆ ಕೈಹೊತ್ತು ಕುಳಿತ. ದಾರಾಕಾರವಾಗಿ ಹರಿಯುತ್ತಿದ್ದ ಮಳೆ ನೀರಿನಲ್ಲಿ ಅವನ ಕಣ್ಣೀರು ಸೇರಿದ್ದನ್ನು ಯಾರೂ ಗಮನಿಸಲಿಲ್ಲ. ಎಲ್ಲರೂ ಅವರವರದೇ ಲೋಕದಲ್ಲಿ ಮುಳುಗಿದ್ದರು. ಬಗ್ನ ಕನುಸುಗಳನ್ನು ಮೆಲಕು ಹಾಕುತ್ತಿದ್ದರು.

ಕತಾನಾಯಕ ಎದ್ದು ಪಕ್ಕದೂರಿನತ್ತ ಹೊರಟ. ನೇರವಾಗಿ ಅಂಚೆ ಕಚೇರಿಗೆ ಹೋಗಿ ಕಾಗದ ಪೆನ್ನು ಪಡೆದು ಪತ್ರ ಬರೆಯ ತೊಡಗಿದ.

“ಓ ದ್ಯಾವ್ರೆ,
ಈಸು ದಿನ ನಂಗೆ ಬಡತನ ಕೊಟ್ಟೆ. ನಂಗೆ ಬೇಜಾರಿಲ್ಲ. ಆದ್ರೆ ಈಗ ಕೈಗೆ ಬಂದ ಪಸ್ಲನ್ನ ಕಿತ್ಕೊಂಡೆ. ಯಾಕೆ? ನನ್ನ ಬೆಳೆಯೆಲ್ಲಾ ನಿನ್ನಿಂದ ಹಾಳಾಯ್ತು. ಆ ಪಾಟಿ ಮಳೆ ನಾನೆಂದೂ ಜೀವನ್ದಾಗೆ ಕಂಡಿರಲಿಲ್ಲ. ಮುಂದಿನ ದಾರಿ ಏನು ನಂಗೆ? ಮಕ್ಳು ಮರಿಗೆ ಏನು ಉಣ್ಣಿಸಲಿ? ಹೇಳು ದ್ಯಾವ್ರೆ.

ಅಯ್ನೋರು ಹೇಳ್ತಿದ್ರು. ಬಕ್ತಿಯಿಂದ ನಿನ್ನ ಏನು ಕೇಳಿದ್ರೂ ಅದ್ನ ನೀನು ಕೊಡ್ತೀಯಂತೆ? ಹಾಗಾದ್ರೆ ಒಂದ್ಕೆಲ್ಸ ಮಾಡು. ನೀನು ಎಶ್ಟಾದ್ರು ದೇವ್ರು. ನಂಗೆ ಒಂದೈದು ಸಾವ್ರ ಕೊಡು. ಸಾಲ ಅಂತಾದ್ರೂ ಕೊಡು. ಮುಂದಿನ ಪಸ್ಲು ಬರೂವರ‍್ಗು ಹೆಂಗೋ ಬದುಕ್ಕೋತ್ತಿವಿ. ಮರೀಬ್ಯಾಡ. ಬೇಗ್ನೆ ಕಳ್ಸು”

ಪತ್ರ ಬರೆದು ಅಲ್ಲೇ ಇದ್ದ ಅಂಚೆ ಪೆಟ್ಟಿಗೆಯಲ್ಲಿ ಹಾಕಿ ದೇವರಿಂದ ವರ ಸಿಕ್ಕಶ್ಟೇ ಕುಶಿಯಿಂದ ವಾಪಸ್ಸಾದ ಮನೆಗೆ.

ಪೋಸ್ಟ್ ಮ್ಯಾನ್ ಸಾರ‍್ಟ್ ಮಾಡುವಾಗ ಈ ಪತ್ರವನ್ನು ನೋಡಿ ಹೊಟ್ಟೆ ತುಂಬಾ ನಕ್ಕ. ತನ್ನ ಸಹಚರರಿಗೆಲ್ಲಾ ತೋರಿಸಿ ಅವರ ನಗುವಿನಲ್ಲಿ ತಾನೂ ಸೇರಿದ. ಪೋಸ್ಟ್ ಮಾಸ್ಟರ್‍ಗೂ ತೋರಿಸಿ “ಸಾರ್ ಈ ಅಡ್ರೆಸ್ ಎಲ್ಲಿ ಬರುತೆ?್ತ” ಅಂತ ಕಿಚಾಯಿಸುವ ರೀತಿಯಲ್ಲಿ ಕೇಳಿದ. ನಮ್ಮ ಕತಾನಾಯಕನ ಹುಂಬತನಕ್ಕೆ ಎಲ್ಲರೂ ಕೂಡಿ ನಕ್ಕರು.

ಕೊಂಚ ಸಮಯದ ನಂತರ ಪೋಸ್ಟ್ ಮಾಸ್ಟರ್‍ನಲ್ಲಿದ್ದ ಮಾನವೀಯತೆ ಜಾಗ್ರತವಾಯಿತು. ಎಂತಹ ನಿಶ್ಕಲ್ಮಶ ಮನಸ್ಸಿನಿಂದ ದೇವರ ಮೊರೆಹೋಗಿದ್ದಾನೆ ಎಂದು ಮನಸ್ಸಿನಲ್ಲೇ ನಮ್ಮ ಕತಾನಾಯಕನನ್ನು ಅಬಿನಂದಿಸಿದರು. ಸಹದ್ಯೋಗಿಗಳನ್ನು ಕರೆದು ನಮ್ಮ ಕತಾನಾಯಕ ಮೊರೆಯನ್ನು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟು ಕೈಲಾದ ಸಹಾಯ ಮಾಡುವಂತೆ ಕೋರಿದರು. ಪೋಸ್ಟ್ ಆಪೀಸ್‍ನ ಗ್ರಾಹಕರಿಗೂ ಸಹಾಯ ಮಾಡಲು ಮನವಿ ಮಾಡಿದರು. ಏನೆಲ್ಲಾ ಪ್ರಯತ್ನ ಪಟ್ಟರೂ ನಮ್ಮ ಕತಾನಾಯಕನ ಬೇಡಿಕೆಯ ಅರ‍್ದದಶ್ಟು ಮೊತ್ತ ಸಂಗ್ರಹವಾಗಲಿಲ್ಲ. ಉಳಿದ ಹಣವನ್ನು ತಾವೇ ಹಾಕಿ ಮೊತ್ತವನ್ನು ಅರ‍್ದಕ್ಕೇರಿಸಿದರು ಪೋಸ್ಟ್ ಮಾಸ್ಟರ್.

ಈಗ ಅರ‍್ದದಶ್ಟು ಮೊತ್ತವನ್ನು ಕತಾನಾಯಕನಿಗೆ ದೇವರ ಹೆಸರಿನಲ್ಲಿ ತಲುಪಿಸುವ ತೀರ‍್ಮಾನ ಮಾಡಿಕೊಂಡರು. ನಾಲ್ಕಾರು ದಿನಗಳ ನಂತರ ನಮ್ಮ ಕತಾನಾಯಕ ಬಂದ. ಪೋಸ್ಟ್ ಮ್ಯಾನ್ ಬಳಿ ತನಗೇನಾದರೂ ಪತ್ರ ಬಂದಿದೆಯೇ? ಎಂದು ವಿಚಾರ ಮಾಡಲಿಕ್ಕೆ.

ಕೂಡಲೆ ಪೋಸ್ಟ್ ಮ್ಯಾನ್ ಅವನನ್ನು ಪೋಸ್ಟ್ ಮಾಸ್ಟರ್ ಬಳಿ ಕರೆದೊಯ್ದ. ಪೋಸ್ಟ್ ಮಾಸ್ಟರ್ ತಮ್ಮ ಟೇಬಲ್ ಡ್ರಾದಿಂದ ಒಂದು ಪತ್ರ ಹಾಗೂ ಹಣವನ್ನು ತಗೆದು ಅವನ ಕೈಯಲ್ಲಿಟ್ಟರು. ಹಣವನ್ನು ಲೆಕ್ಕಹಾಕಿದ ಕತಾನಾಯಕನಿಗೆ ಕುಶಿಯಾಗಲಿಲ್ಲ. ತಾನು ಕೇಳಿದ್ದು ಐದು ಸಾವ್ರ. ಆದ್ರೆ ದೇವ್ರು ಕೊಟ್ಟಿದ್ದು ಅದ್ರಲ್ಲಿ ಅರ‍್ದ ಮಾತ್ರ. ಕಂಡಿತವಾಗಿಯೂ ಕುಶಿಯಾಗಲಿಲ್ಲ. ಮುಂದಿನ ಜೀವನ ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಪ್ರಶ್ನೆ ಪ್ರಶ್ನೆಯಾಗೇ ಉಳಿದಿತ್ತು.

ಅದೇ ಅಂಚೆ ಕಚೇರಿಯಲ್ಲಿ ಮತ್ತೊಂದು ಕಾಗದ ಪೆನ್ನು ಪಡೆದು ದೇವರಿಗೆ ಪತ್ರ ಬರೆಯತೊಡಗಿದ.

“ಓ ದ್ಯಾವ್ರೆ,
ನೀನ್ಯಾಕೆ ಇಸ್ಟು ಕಂಜೂಸ್ ಆದೆ? ಈ ದುಡ್ನಲ್ಲಿ ಹೆಂಗೆ ಮುಂದಿನ ಪಸ್ಲು ಬರೋವರ‍್ಗೂ ಜೀವ್ನ ಸಾಗ್ಸೋದು? ಮಕ್ಳು ಮರಿ ಹೊಟ್ಟೆ ಹೊರ‍್ಯೋದು ಹೆಂಗೆ? ನೀನೆ ಹೇಳು ಮತ್ತೆ? ನಾನಿಂತಾವ ಬೇಡಿದ್ದು ಐದ್ಸಾವ್ರ. ಅಸ್ಟು ಸಿಕ್ಕಿದ್ರೆ ಹಂಗೂ ಹಿಂಗೂ ಕಾಲ ದೂಕ್ಬೋದಿತ್ತು.

ಅದಕ್ಕೆ ಇನ್ನುಳಿದ ಹಣವನ್ನ ಬೇಗ ಕಳ್ಸಿಕೊಡು ತಂದೆ. ಆದ್ರೆ ಒಂದು ವಿಚಾರ ನೆನೆಪಿಟ್ಕೊ. ಯಾವ್ದಾದ್ರೂ ಬೇರೆ ದಾರೀಲಿ ನಂಗೆ ತಲುಪೋ ಹಂಗೆ ಕಳ್ಸಿಕೊಡು. ಯಾಕೆಂದ್ರೆ ಈ ಪೋಸ್ಟ್ ಆಪೀಸ್ ಮಂದೀನ ನಂಬೊಂಗಿಲ್ಲಾ………..”

ಬರೆದ ಪತ್ರವನ್ನು ಅಂಚೆ ಪೆಟ್ಟಿಗೆಯಲ್ಲಿ ಹಾಕಿ ಅಂಚೆ ಪೆಟ್ಟಿಗೆಗೆ ಕೈ ಮುಗಿದ. ನಂತರ ನಮ್ಮ ಕತಾನಾಯಕ ನಿಶ್ಚಿಂತೆಯಿಂದ ಮನೆ ಕಡೆ ಹೆಜ್ಜೆ ಹಾಕಿದ.

( ಚಿತ್ರ ಸೆಲೆ:  clipartfest.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: