ಮಾಡಿ ನೋಡಿ ಮೆಣಸಿನಕಾಯಿ ಬಜ್ಜಿ
– ಕಲ್ಪನಾ ಹೆಗಡೆ.
ಮೆಣಸಿನ ಕಾಯಿಯ ಬಜ್ಜಿ ಅಂದ್ರೆ ಕಾರ ತಿನ್ನುವವರಿಗೆ ಬಾಯಲ್ಲಿ ನೀರು ಬರುತ್ತೆ. ಒಮ್ಮೆ ಮಾಡಿ ನೋಡಿ.
ಬೇಕಾಗುವ ಪದಾರ‍್ತಗಳು:
- ಮೆಣಸಿನಕಾಯಿ
- ಕಡ್ಲೆಹಿಟ್ಟು
- ಇಂಗು
- ಅರ‍್ದ ಚಮಚ ಓಂಕಾಳು
- ರುಚಿಗೆ ತಕ್ಕಶ್ಟು ಉಪ್ಪು
- ಎಣ್ಣೆ
ಮಾಡೋದು ಹೇಗೆ?
ಮೊದಲು ಹಸಿಮೆಣಸಿನಕಾಯಿಯನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆಯಲ್ಲಿ ನೀರು ಇರದಂತೆ ಒರೆಸಿಕೊಂಡು ಒಂದು ಕಡೆ ಮದ್ಯ ಸ್ವಲ್ಪ ಸೀಳಿಕೊಳ್ಳಿ. (ಸೀಳದೇ ಎಣ್ಣೆಯಲ್ಲಿ ಹಾಕಿದರೆ ಎಣ್ಣೆ ಸಿಡಿದು ಅನಾಹುತಕ್ಕೆ ಕಾರಣವಾಗುತ್ತೆ, ಹುಶಾರು!) ನಂತರ ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟಿಗೆ, ಇಂಗು, ಓಂಪುಡಿ, ಉಪ್ಪು ಸೇರಿಸಿ ಕಲಸಲಿಕ್ಕೆ ಬೇಕಾಗುವಶ್ಟು ನೀರು ಹಾಕಿ ಕಲಸಿಕೊಳ್ಳಿ. (ಸೋಡಾ ಹಾಕದೇ ಬಜ್ಜಿ ಚೆನ್ನಾಗಿ ಉಬ್ಬುತ್ತವೆ, ನಿಮಗೆ ಬೇಕಾದರೆ ಕಲಸುವಾಗ ಚಿಟಿಕೆ ಅಡಿಗೆ ಸೋಡಾ ಹಾಕಿಕೊಳ್ಳಿ). ಆನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಕಾದ ಬಳಿಕ ಹಸಿಮೆಣಸಿನಕಾಯಿಯನ್ನು ಕಡ್ಲೆಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಹಾಕಿ ಜಾಲಿ ಸೌಟಿನಿಂದ ತಿರುಗು ಮರಗು ಮಾಡಿ ಬೇಯಿಸಿಕೊಳ್ಳಿ. ಕರಿದ ಮೆಣಸಿನಕಾಯಿ ಬಜ್ಜಿಯನ್ನು ಕಾಯಿ ಚಟ್ನಿಯ ಜೊತೆಗೆ ಅತವಾ ಊಟದ ಜೊತೆಗೆ ತಿನ್ನಲು ನೀಡಿ.
(ಚಿತ್ರ ಸೆಲೆ: ಸವಿತಾ)
ಇತ್ತೀಚಿನ ಅನಿಸಿಕೆಗಳು