ವಿಂಚೆಸ್ಟರ್ ಮ್ಯಾನ್‍ಶನ್ ಎಂಬ ನಿಗೂಡ ಮನೆ

– ಕೆ.ವಿ.ಶಶಿದರ.

ಅದೊಂದು ನಿಗೂಡ ಮನೆ. ಅತ್ಯಂತ ವಿಶಾಲವಾದ ಮನೆ. ಸಾವಿರಾರು ಬಾಗಿಲುಗಳು ಸಾವಿರಾರು ಕಿಟಕಿಗಳು ಇವೆ. ಯಾವ ಬಾಗಿಲಿನ ಮೂಲಕ ಹೋದರೆ ಎಲ್ಲಿಗೆ ತಲಪುತ್ತೇವೆ ಎಂಬುದೊಂದು ಯಕ್ಶಪ್ರಶ್ನೆ. ಅಂದು ಕೊಂಡ ಜಾಗಕ್ಕೆ ತಲಪುವುದಿಲ್ಲ. ಬೇರೆಲ್ಲಿಗೊ ಅದು ನಮ್ಮನ್ನು ಕರೆದೊಯ್ಯುವುದೇ ಇದರ ವೈಶಿಶ್ಟ್ಯ. ಎಲ್ಲೆಂದರಲ್ಲಿ ಮೆಟ್ಟಲುಗಳು, ಯಾವ ಮೆಟ್ಟಲು ಹತ್ತಿ ಹೋದರೆ ಎಲ್ಲಿಗೆ ತಲಪಬಹುದು ಎಂಬ ಲವಲೇಶ ಕಲ್ಪನೆಯೂ ಸಿಗುವುದಿಲ್ಲ. ಕೆಲವೊಮ್ಮೆ ನೇರ ಒಳ ಮಾಳಿಗೆಗೆ ಅದು ಕೊಂಡೊಯ್ಯುತ್ತದೆ. ಇಂತಹ ಗೋಜಲಿನ ಗೂಡಾದ ಸಿಕ್ಕುಸಿಕ್ಕಾದ ಮನೆಯನ್ನು ವಿಂಚೆಸ್ಟರ್ ಮ್ಯಾನ್‍ಶನ್ ಎನ್ನುತ್ತಾರೆ. ಅದರ ಒಡತಿ ಸಾರಾ ವಿಂಚೆಸ್ಟರ್.

ಯಾರೀ ಸಾರಾ ವಿಂಚೆಸ್ಟರ‍್?

SWinchester

ಸಾರಾ ವಿಂಚೆಸ್ಟರ್ ಎಂಬ ಒಬ್ಬ ವಿಲಕ್ಶಣ ಮಹಿಳೆ. ತನ್ನ ಗಂಡ, ವಿಂಚೆಸ್ಟರ್ ರೈಪಲ್ ಕಂಪೆನಿಯ ಒಡೆಯ ತೀರಿ ಕೊಂಡ ಬಳಿಕ ಹೊಸ ಜೀವನ ಕಟ್ಟಲು ಕನೆಕ್ಟಿಕಟ್‍ನ ನ್ಯೂ ಹೆವೆನ್‍ನಿಂದ ಕ್ಯಾಲಿಪೋರ‍್ನಿಯಾದ ಸ್ಯಾನ್ ಜೋಸ್‍ಗೆ 1886ರಲ್ಲಿ ವಲಸೆ ಬಂದಳು. ಅಲ್ಲಿ ಆಕೆ ಎಂಟು ರೂಮುಗಳಿರುವ ಒಂದು ಸಣ್ಣ ಪಾರ‍್ಮ್ ಹೌಸ್ ಅನ್ನು ಕರೀದಿಸಿದಳು. ಅದನ್ನು ತನಗೆ ಹೇಗೆ ಬೇಕೊ ಹಾಗೆ ಬದಲಾವಣೆ ಮಾಡಿಕೊಂಡು ನವೀಕರಿಸಲು ಪ್ರಾರಂಬಿಸಿದಳು. ನವೀಕರಣವನ್ನು ಪ್ರಾರಂಬಿಸಿದ ನಂತರ ನಿರಂತರವಾಗಿ ಬರೋಬ್ಬರಿ 36 ವರ‍್ಶಗಳ ಕಾಲ ನಿರ‍್ಮಾಣ ಕಾರ‍್ಯ ನಡೆಯುತ್ತಲೇ ಇತ್ತು. ಈ ನವೀಕರಣ ಕಾರ‍್ಯಕ್ಕೆ ಒಟ್ಟಾರೆ ವ್ಯಯವಾಗಿದ್ದು 5.5 ಮಿಲಿಯನ್ ಡಾಲರ್‍ನಶ್ಟು ಹಣ. ಆದರೂ ಅದು ಸಂಪೂರ‍್ಣ ಮುಗಿದಿರಲಿಲ್ಲ. ಬಹುಶಹ ಇನ್ನೂ ಕೆಲಕಾಲ ನವೀಕರಣ ಮುಂದುವರೆಯುತ್ತಿತ್ತೇನೋ ಅದರೆ ವಿದಿಯ ಆಟವೇ ಬೇರಿತ್ತು. 1922ರಲ್ಲಿ ಸಾರಾ ವಿಂಚೆಸ್ಟರ್ ಅಸುನೀಗಿದ ಕಾರಣ ಮೂರೂವರೆ ದಶಕಗಳಿಗೂ ಹೆಚ್ಚು ಕಾಲದ ನವೀಕರಣದ ಕಾರ‍್ಯ ಹಟಾತ್ ನಿಂತು ಹೋಯಿತು.

ಮೂವತ್ತಾರು ವರ‍್ಶಗಳಲ್ಲಿ ಏನು ಕಟ್ಟಿದರು?

ಆಕೆ ಅಸುನೀಗುವ ಹೊತ್ತಿಗೆ ವಿಂಚೆಸ್ಟರ್ ಮ್ಯಾನ್‍ಶನ್ ಬಹು ದೊಡ್ಡ ಆದುನಿಕ ವಿಸ್ಮಯಗಳಲ್ಲಿ ಒಂದಾಗಿ ಇತಿಹಾಸ ಸೇರಲು ಅರ‍್ಹವಾಗಿತ್ತು. ಇದರಲ್ಲಿ ಅನೇಕ ಅತ್ಯಾದುನಿಕ ಎಲಿವೇಟರ್‍ಗಳು, ಕೇಂದ್ರೀಕ್ರುತ ಹೀಟಿಂಗ್ ವ್ಯವಸ್ತೆ, ಬಿಸಿ ನೀರಿನ ಶವರ್‍ಗಳು ಅಡಕವಾಗಿದ್ದವು. 1886ರಲ್ಲಿ ಕೇವಲ ಎಂಟು ರೂಮುಗಳಿದ್ದ ಈ ಪುಟ್ಟ ಮನೆ 1922ರ ಹೊತ್ತಿಗೆ ಸರಿಸುಮಾರು 160 ರೂಮ್‍ಗಳ ಜೊತೆಗೆ 40 ಬೆಡ್ ರೂಮ್‍ಗಳು 10 ಸಾವಿರ ಕಿಟಕಿಗಳು, ಎರಡು ಬೇಸ್‍ಮೆಂಟ್‍ಗಳು ಸೇರಿ ದೊಡ್ಡ ಬಂಗಲೆಯಾಗಿ ಪರಿವರ‍್ತನೆಗೊಂಡಿತ್ತು. ಆಕೆ ಬದುಕಿದ್ದಿದ್ದರೆ ಇನ್ನೂ ಏನೆಲ್ಲಾ ಚಿತ್ರ ವಿಚಿತ್ರಗಳಿಗೆ ಇದು ಸಾಕ್ಶಿಯಾಗುತ್ತಿತ್ತೋ ಬಲ್ಲವರಾರು?

ಇದರ ವೈಶಿಶ್ಟ್ಯತೆ ಇಲ್ಲಿಗೆ ಮುಗಿಯಲಿಲ್ಲ. ಇವಲ್ಲದೆ 2000 ಬಾಗಿಲುಗಳು ಸಹ ಇದರಲ್ಲಿದೆ. ಇದರಲ್ಲೆಲ್ಲಾ ಓಡಾಡುವಂತಿಲ್ಲ. ಇವುಗಳನ್ನು ಏನಕ್ಕಾಗಿ ಇಟ್ಟಿದ್ದಾರೆ ಎಂದು ಯಾರಿಗೂ ಹೊಳೆಯುವುದಿಲ್ಲ. ಒಂದು ಬಾಗಿಲು ಕಿಚನ್ ಕಡೆಗಿದೆ. ಅದು ನೇರವಾಗಿ ಕಿಚನ್ ಸಿಂಕ್ ಮೇಲೆ ಎಂಟು ಅಡಿ ಎತ್ತರದಲ್ಲಿದೆ. ಹೊರ ಬರಲು ಪ್ರಯತ್ನಿಸಿದಲ್ಲಿ ನೇರವಾಗಿ ಕಿಚನ್ ಸಿಂಕ್‍ನಲ್ಲಿ ಬೀಳಬೇಕಾದೀತು. ಮತ್ತೊಂದು ಬಾಗಿಲು ಉದ್ಯಾನವನದ ಕಡೆಗೆ ಮುಕಮಾಡಿದೆ. ಇದರಿಂದ ಹೊರ ಬಂದಲ್ಲಿ ನೇರವಾಗಿ ಹದಿನೈದು ಅಡಿ ಕೆಳಗಿರುವ ಗಿಡಗಳ ಪೊದೆ ಸೇರಬೇಕಾದೀತು.

images

ಬಾಗಿಲುಗಳ ವಿಲಕ್ಶಣತೆ ಹೀಗಾದರೆ ಇನ್ನು ಮೆಟ್ಟಲುಗಳ ವಿಚಾರವೇ ಬೇರೆ. ಮೆಟ್ಟಲು ಹತ್ತಿ ಹೋದರೆ ನೇರ ಒಳ ಮಾಳಿಗೆಗೆ ತಲೆ ಹೊಡೆದೀತು ಎಚ್ಚರ!! ಒಂದೊಂದು ಕಡೆ ಹೆಚ್ಚು ಹೆಚ್ಚು ತಿರುವುಗಳಿರುವ ಮೆಟ್ಟಲುಗಳನ್ನು ಕಾಣಬಹುದು. ಹತ್ತಲು ಮೂರ‍್ನಾಲ್ಕು ಕಡೆ ಅವಕಾಶವಿರುವ ಮೆಟ್ಟಲುಗಳೂ ಸಾಕಶ್ಟಿವೆ, ಯಾವ ಮೆಟ್ಟಲು ಹತ್ತಿ ಹೋದರೆ ಎಲ್ಲಿಗೆ ತಲಪಬಹುದು ಎಂಬುದು ನಿಗೂಡ. ಬಹಳಶ್ಟು ಮೆಟ್ಟಲುಗಳು ಕೊನೆಯಾಗುವುದು ಒಳ ಮಾಳಿಗೆಯಲ್ಲೇ.

ಅತಿ ಹೆಚ್ಚು ಬೆಲೆಬಾಳುವ ಟಿಪಾನಿ ಗಾಜುಗಳನ್ನು ಸಾಮಾನ್ಯವಾಗಿ ಸೂರ‍್ಯನ ಬೆಳಕು ಬರುವೆಡೆ ಅತ್ಯದಿಕ ಬೆಳಕನ್ನು ತಡೆಯಲು ಹಾಕುವುದು ಸಹಜ ಕ್ರಿಯೆ. ಇದರಿಂದ ಸೂರ‍್ಯನ ಬೆಳಕಿನ ಪ್ರಕರತೆ ಕಡಿಮೆಯಾಗಿ ರೂಮು ಕೊಂಚಮಟ್ಟಿಗೆ ತಂಪಾಗಿರುತ್ತದೆ. ಆದರೆ ಈ ವಿಲಕ್ಶಣ ಮನೆಯಲ್ಲಿ ಎಲ್ಲಿ ಸೂರ‍್ಯನ ಬೆಳಕು ಬೀಳುವುದಿಲ್ಲವೋ ಅಲ್ಲೆಲ್ಲಾ ಇಂತಹ ಗಾಜಿನ ಕಿಟಕಿಗಳನ್ನು ಅಳವಡಿಸಿರುವುದು ವಿಶೇಶ. ಈ ಮನೆಯಲ್ಲಿರುವ ಆಲ್‍ಮೇರಾಗಳ ವಿಚಾರವೇ ತೀರಾ ವಿಬಿನ್ನ. ರೂಮುಗಳಲ್ಲಿನ ಆಲ್ ಮೇರಾಗಳನ್ನು ತುಟ್ಟಿಯ ಆಬರಣ, ಬಟ್ಟೆ ಬರೆ ಹಾಗೂ ದುಬಾರಿ ವಸ್ತುಗಳನ್ನು ಶೇಕರಿಸಿಡಲು ಬಳಸುವುದು ಸಾಮಾನ್ಯ. ಆದರೆ ಇಲ್ಲಿನ ಆಲ್‍ಮೇರಾದ ಬಾಗಿಲು ತೆರೆದರೆ ಕಾಣುವುದು ಮನೆಯ ಮೂವತ್ತು ನಲವತ್ತು ರೂಮುಗಳು. ಆದರೂ ಸಹ ರೂಮುಗಳಿಗೆ ಈ ಮೂಲಕ ಹೋಗಲಾಗುವುದಿಲ್ಲ. ಬೇರೆ ದಾರಿಯೇ ಬಳಸಬೇಕು.

ಆಕೆ ಈ ರೀತಿಯ ವಿಲಕ್ಶಣ ಮನೆ ಕಟ್ಟಲು ಕಾರಣವೇನು?

ಸಾಮಾನ್ಯವಾಗಿ ಇಂತಹ ಮನೆಯನ್ನು ಕಟ್ಟುವವರ ವ್ಯಕ್ತಿತ್ವ ಅಸಹಜವಾಗಿರುತ್ತದೆ. ಇಂತಹ ನಿಗೂಡ ವಿಲಕ್ಶಣ ಅಸಾಮಾನ್ಯ ಮನೆಯನ್ನು ಕಟ್ಟಿದ ಸಾರಾ ವಿಂಚೆಸ್ಟರ್ ಮನಸ್ಸಿನಲ್ಲಿದ್ದ ಪ್ರೇರೇಪಣಾ ಶಕ್ತಿಯಾದರು ಯಾವುದು ಎಂಬುದು ಕಲ್ಪನೆಗೆ ಮೀರಿದ್ದು. ಈ ವಿಲಕ್ಶಣ ಮನೆಯ ನಿರ‍್ಮಾಣ ಪೂರ‍್ಣವಾಗಿ ಮುಗಿಯುವ ಮುನ್ನವೇ ಆಕೆ ತೀರಿಕೊಂಡದ್ದು ಬಹುಶಹ ಇದಕ್ಕೆ ಮೂಲ ಕಾರಣವಿರಬೇಕು. ಯಾವುದೇ ವಿಚಾರವು ಆಕೆಯಿಂದ ಹೊರಬರದ ಹಿನ್ನಲೆಯಲ್ಲಿ ತಲೆಗೊಂದರಂತೆ ಹತ್ತಾರು ಕತೆಗಳು ಗಾಸಿಪ್‍ಗಳು ರಕ್ಕೆ ಪುಕ್ಕ ಕಟ್ಟಿಕೊಂಡು ಹುಟ್ಟುವುದು ಸಾಮಾನ್ಯ. ಅದರಂತೆ ಇಲ್ಲೂ ಸಹ ಹಲವಾರು ಅಂತೆ ಕಂತೆಗಳು ಹುಟ್ಟಿಕೊಂಡಿದೆ.

ಅತ್ಯಂತ ಪ್ರಚಲಿತ ಕತೆಯ ಅನುಸಾರ ಆಕೆಯ ಮನವನ್ನು ಬಯಬೀತಗೊಳಿಸಿದ್ದು ವಿಂಚೆಸ್ಟರ್ ರೈಪಲ್‍ನಿಂದ ಸತ್ತವರ ಪ್ರೇತಗಳು. ಈ ರೈಪಲ್‍ಗಳ ಜನಕನೇ ಆಕೆಯ ಗಂಡ. ಅವನ ಕಂಪೆನಿಯಲ್ಲೇ ಇದು ಅವಿಶ್ಕಾರಗೊಂಡಿದ್ದು. ಆಕೆಯ ಗಂಡ ತೀರಿಕೊಂಡ ನಂತರ ಅವನ ಕಂಪೆನಿಯ ರೈಪಲ್‍ಗಳಿಂದ ಸತ್ತವರ ಪ್ರೇತಾತ್ಮಗಳು ತನ್ನನ್ನು ಕಾಡುತ್ತವೆ ಎಂದು ಅವಳ ಅತೀಂದ್ರಿಯ ಜ್ನಾನ ಹೇಳಿತ್ತು. ಅವುಗಳಿಂದ ತಪ್ಪಿಸಿಕೊಳ್ಳುಲು ಇರುವ ಮಾರ‍್ಗವನ್ನೂ ಸಹ ಅದೇ ಸೂಚಿಸಿತ್ತು. ಆ ಮಾರ‍್ಗದಂತೆ ಆಕೆ ತಾನಿರುವೆಡೆಯಿಂದ ಪಶ್ಚಿಮ ದಿಕ್ಕಿಗೆ ಪ್ರಯಾಣಿಸಿ ಅಲ್ಲಿ ಮನೆಯನ್ನು ಕರೀದಿಸುವುದು. ಆ ಮನೆಯ ನವೀಕರಣ ಕಾರ‍್ಯ ನಿರಂತರವಾಗಿ ನಡೆಸುತ್ತಿರಬೇಕೆಂಬುದು. ನವೀಕರಣ ನಿಂತಲ್ಲಿ ತನ್ನ ಸಾವು ಕಚಿತ ಎನ್ನುವ ಬಾವನೆ ಅವಳಲ್ಲಿ ಮೂಡಿತ್ತು.

ಈ ರೀತಿಯಲ್ಲಿ ಮಾನಸಿಕವಾಗಿ ಅತಿರೇಕಕ್ಕೊಳಗಾಗಿದ್ದ ಸಾರಾ ವಿಂಚೆಸ್ಟರ್ ಜೀವ ಬಯದಿಂದ ಈ ರೀತಿಯ ವಿಲಕ್ಶಣ ಮನೆಯನ್ನು ಕಟ್ಟಿಸುತ್ತಿದ್ದಳು ಎಂಬ ಗುಮಾನಿ ಇದೆ. ಅವಳ ಮೂಲ ಉದ್ದೇಶ ಬಹುಶಹ ಮನೆಯಲ್ಲಿನ ಅನೇಕ ತಿರುವು ಮುರುವುಗಳಲ್ಲಿ ಪ್ರೇತಾತ್ಮವು ದಾರಿ ತಪ್ಪಿ ಕಳೆದು ಹೋಗಲಿ ಎಂಬುದಾಗಿರಬಹುದು. ತಾನೂ ಸಹ ಅವುಗಳಿಗೆ ಚಳ್ಳೇಹಣ್ಣು ತನ್ನಿಸಲು ದಿನಕ್ಕೊಂದು ರೂಮಿನಲ್ಲಿ ಮಲಗುವುದು, ಗೊಜಲುಗೊಜಲಿನ ಮಾರ‍್ಗಗಳಲ್ಲಿ ನಡೆದಾಡುವುದನ್ನು ಮಾಡುತ್ತಿದ್ದಳು. ಹೀಗೆ ಮಾಡುವುದರಿಂದ ತಾನು ಪ್ರೇತಾತ್ಮಗಳಿಂದ ನಿರಂತರವಾಗಿ ತಪ್ಪಿಸಿಕೊಳ್ಳುತ್ತಿದ್ದೇನೆ ಎನ್ನುವ ಕಲ್ಪನೆ ಅವಳದು.

1906ರಲ್ಲಾದ ಬಯಂಕರ ಬೂಕಂಪ ಈ ಮನೆಯ ಮೇಲಿನ ಮೂರು ಮಾಳಿಗೆಗಳನ್ನು ಕೆಡವಿ ಹಾಕಿತು. ಇದರೊಂದಿಗೆ ಕೆಳಗಿನ ನಾಲ್ಕು ಮಹಡಿಗಳು ಹಾನಿಗೊಳಗಾದವು. ಸಾರಾ ವಿಂಚೆಸ್ಟರ್ ಇದನ್ನು ಮನೆಯ ನಿರ‍್ಮಾಣದ ಕೊನೆಯ ಹಂತಕ್ಕೆ ಬಂದಿರುವುದರ ಕುರುಹು ಎಂದು ಬಾವಿಸಿ ಮನೆಯ ಮುಂದಿನ ಬಾಗದಲ್ಲಿನ ಕಿಟಕಿ ಬಾಗಿಲುಗಳನ್ನು ಮರದ ಹಲಗೆಗಳಿಂದ ಮುಚ್ಚಲು ಆದೇಶಿಸಿದಳು. ಮರದ ಹಲಗೆಗಳನ್ನು ತೆರೆದು ನೋಡಿದರೆ ಬೂಕಂಪದಿಂದ ಹಾಳಾಗಿ ಮುರಿದು ಬಿದ್ದ ಗೋಡೆ ಬಾಗಿಲು ಕಿಟಕಿ ಮುಂತಾದವುಗಳನ್ನು ಈಗಲೂ ಕಾಣಬಹುದು.

ಕೆಲವು ಇತಿಹಾಸಕಾರರು ಸಾರಾ ವಿಂಚೆಸ್ಟರ್ ಈ ಮನೆಯನ್ನು ಇಶ್ಟು ವಿಲಕ್ಶಣವಾಗಿ ನಿರ‍್ಮಿಸಲು ಆಕೆಗೆ ಕುಪಿತ ಪ್ರೇತಾತ್ಮಗಳಿಂದಿದ್ದ ಬಯವಲ್ಲ, ಬದಲಾಗಿ ಆಕೆ ಪ್ರತಿ ದಿನ ತನ್ನ ಮನೆಯ ವಿನ್ಯಾಸವನ್ನು ಬದಲಿಸುವ ಒಬ್ಬ ಅಸಾಮಾನ್ಯ ಅನನುಬವಿ ವಾಸ್ತು ಶಾಸ್ತ್ರಜ್ನೆ ಎಂಬ ಅಬಿಪ್ರಾಯವನ್ನು ಮಂಡಿಸುತ್ತಾರೆ. ಯಾವುದು ಸತ್ಯ? ಯಾವುದು ಮಿತ್ಯ? ಆ ದೇವರೇ ಬಲ್ಲ.

(ಚಿತ್ರ ಸೆಲೆ: wikipedia, fanshare.com, didyouknowfacts.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: