ಪುರಾಣದ ಕತೆ : ಹಸುವಿಗೇಕೆ ಆಹಾರವಾಗಿ ಕಲಗಚ್ಚು ನೀಡುತ್ತೇವೆ?
ರಾಮಾಯಣ ನಮಗೆ-ನಿಮಗೆಲ್ಲ ಗೊತ್ತಿರುವಂತೆ ಹಿಂದೂ ದರ್ಮದ ಎರಡು ಮಹಾಗ್ರಂತಗಳಲ್ಲಿ ಒಂದು. ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನ ಪಟ್ಟಾಬಿಶೇಕದ ತರುವಾಯದ ಕತೆಯನ್ನು ಹೇಳುವುದಿಲ್ಲ. ಲವ-ಕುಶರ ಜನನ, ಸೀತಾದೇವಿ ಮರಳಿ ಇಳೆಗೆ ತೆರಳಿದ್ದು ಇನ್ನಿತರ ವಿಶಯಗಳಿಗೆ ಶೇಶ ರಾಮಾಯಣದಲ್ಲಿ ಉಲ್ಲೇಕವಿದೆ. ದಶರತನ ಸಾವಿನ ಅನಂತರ ನಡೆದ ಒಂದು ಸಣ್ಣ ಕತೆ ಹಾಗು ಅದಕ್ಕೆ ಹೊಂದಿಕೆಯಾಗಿರುವ ಒಂದು ನಂಬಿಕೆ ಇಲ್ಲಿ ಬರೆಯಬಯಸುವೆ.
ದಶರತನ ಸಾವಿನಿಂದ ನೊಂದ ರಾಮ-ಲಕ್ಶ್ಮಣರು, ವನವಾಸದಲ್ಲಿಯೇ ತಂದೆಯ ಮರಣೋತ್ತರ ಕೆಲಸಗಳನ್ನು ಮುಗಿಸಲು ನಿರ್ದರಿಸುತ್ತಾರೆ. ‘ಪಿಂಡ ತರ್ಪಣ’ ನೀಡಬೇಕಲ್ಲ, ಹೊಳೆಯ ದಂಡೆಯಲ್ಲಿ ಎಲ್ಲಾ ತಯಾರಿ ಮುಗಿಸಿ ನದಿಯಲ್ಲಿ ಮೀಯಲೆಂದು ಅಣ್ಣತಮ್ಮಂದಿರಿಬ್ಬರು ಸೀತೆಯನ್ನು ನದಿದಂಡೆಯಲ್ಲೇ ಬಿಟ್ಟು ಹೋಗುತ್ತಾರೆ. ಮರಳಿನಲ್ಲಿ ಕಯ್ಯಾಡಿಸುತ್ತ ಕುಳಿತ ಸೀತೆಗೆ ಆಗೊಂದು ವಿಚಿತ್ರ ಅನುಬವವಾಗುತ್ತದೆ. ನದಿಯಿಂದ ದಶರತನೇ ಎದ್ದು ಬಂದು ಸೀತಾದೇವಿಯಲ್ಲಿ ‘ತಾಯಿ, ತುಂಬಾ ಹಸಿದಿರುವೆ. ತರ್ಪಣ ಕೊಡುವೆಯಾ’ ಎಂದು ಬೇಡುವಂತೆ!.
ಆಗ ಆ ದೇವಿಯು ಮಾವನಿಗೆ ನಮಸ್ಕರಿಸಿ ರಾಮ ಲಕ್ಶ್ಮಣರು ಮೀಯಲು ಹೋಗಿರುತ್ತಾರೆ, ಇದೀಗಲೇ ಬರುವುದಾಗಿ ಹೇಳುತ್ತಾಳೆ. ಕಾಯಲಸಾದ್ಯನಾದ ದಶರತನು ಸೀತಾದೇವಿಯನ್ನು ಬೇಡಿಕೊಂಡಾಗ ಬೇರೆ ಉಪಾಯವಿಲ್ಲದೆ ಸೀತೆಯೇ ತನ್ನ ಕಯ್ಯಾರೆ ಪಿಂಡ ತರ್ಪಣ ಕೆಲಸವನ್ನು ಮುಗಿಸುತ್ತಾಳೆ. ದಶರತನು ಸಂತ್ರುಪ್ತನಾಗಿ ನೀರಿನಲ್ಲೇ ನೀರಾಗಿ ಹೋಗುತ್ತಾನೆ.
ಅದೇ ಸಂದರ್ಬಕ್ಕೆ ರಾಮ ಲಕ್ಶ್ಮಣರು ಬರಲು, ಸೀತೆ ನಡೆದ ಸಂಗತಿಯನ್ನು ವಿವರಿಸುತ್ತಾಳೆ. ರಾಮ ಲಕ್ಶ್ಮಣರು ನಂಬುವುದೇ ಇಲ್ಲ! ಹೇಗೆ ತಾನೇ ನಂಬಿಯಾರು? ಆ ಸಂದರ್ಬದಲ್ಲಿ ಸಾಕ್ಶಿಯಾಗಿದ್ದ ಒಂದು ಹಸು, ಒಂದು ತುಳಸಿಯ ಗಿಡ, ಒಂದು ಅಶ್ವತ್ತ ಮರ, ಒಬ್ಬ ಬ್ರಾಹ್ಮಣ ಹಾಗೂ ಪಲ್ಗುಣಿ ನದಿ ಸೀತೆಯ ನೆನಪಿಗೆ ಬಂದು ಅವರುಗಳಲ್ಲಿ ದಿಟವನ್ನು ಹೇಳಲು ಕೇಳಿಕೊಳ್ಳುತ್ತಾಳೆ.
ಆ ಅಶ್ವತ್ತ ಮರವನ್ನು ಬಿಟ್ಟು ಮತ್ತೆಲ್ಲಾ ಸಾಕ್ಶಿಗಳು ರಾಮನ ಪರವಾಗಿ ತಾವೇನೂ ನೋಡಿಯೇ ಇಲ್ಲವೆಂದು ಹೇಳುತ್ತವೆ. ಆಕೆಯ ಪರವಾಗಿ ಬಂದು ಅಶ್ವತ್ತ ಮರವು ದಿಟವನ್ನು ಹೇಳಿ ಸೀತೆಯನ್ನು ಕಾಪಾಡುತ್ತದೆ. ಸಿಟ್ಟಿಗೆದ್ದ ಸೀತೆಯು ಉಳಿದ ನಾಲ್ಕು ಸಾಕ್ಶಿಗಳಿಗೆ ಶಾಪವಿಕ್ಕುತ್ತಾ, “ಪಲ್ಗುಣಿ ನದಿಯು ಮರಳಿನ ಕೊಂಪೆಯಾಗಿ ಹೋಗಲಿ, ತುಳಸಿ ಗಿಡವು ಗಯಾ ಪ್ರದೇಶದಲ್ಲಿ ನಶಿಸಿ ಹೋಗಿ ಬ್ರಾಹ್ಮಣರು ಕಾರ್ಯಗಳಿಗಾಗಿ ತುಳಸಿಯನ್ನು ಹುಡುಕಾಡಲು ಪರದಾಡಲಿ, ಹಸುವು ಮನುಜರು ತಿಂದು ಅಳಿದುಳಿದದ್ದನ್ನು ತಿನ್ನುವಂತಾಗಲಿ” ಎಂದು, ಹಾಗೆಯೇ “ಅಶ್ವತ್ತ ಮರಕ್ಕೆ ಮನುಜರು ಪೂಜೆ ಸಲ್ಲಿಸುವಂತಾಗಲಿ” ಎಂದು ಹರಸುತ್ತಾಳೆ.
ಹಾಗೆ ಪಲ್ಗುಣಿ ನದಿಯು ಈಗ ಗಯಾ ದಲ್ಲಿ ಕೇವಲ ಮರಳಾಗಿ ಉಳಿದಿದ್ದು, ತುಳಸಿಯು ಆ ಪ್ರದೇಶದಲ್ಲಿ ಸಿಗದೇ ಇಲ್ಲವಾಗಿ, ಗೋವು ಹಿಂದೂ ದರ್ಮದಲ್ಲಿ ಪೂಜನೀಯವಾದ್ದರಿರೂ, ಮೂರು ಕೋಟಿ ದೇವರುಗಳ ನಿಕೇತನವಾಗಿದ್ದರೂ, ಸೀತಾದೇವಿಯ ಶಾಪದಿಂದಾಗಿ ದನಗಳಿಗೆ ಈಗಲೂ ನಾವು ಮನುಶ್ಯರು ಆಕಳುಗಳಿಗೆ ಕಲಗಚ್ಚು ನೀಡುತ್ತೇವೆ ಎಂಬ ನಂಬಿಕೆಯಿದೆ.
( ಚಿತ್ರ ಸೆಲೆ: clipart-library.com )
ಇತ್ತೀಚಿನ ಅನಿಸಿಕೆಗಳು